Tag: Middlesex

  • T20 ಕ್ರಿಕೆಟ್‌ನಲ್ಲಿ ಸಿಕ್ಸರ್‌ ಬ್ಲಾಸ್ಟ್‌ – ಒಂದೇ ಓವರ್‌ನಲ್ಲಿ 6,6,6,6,6 ಚಚ್ಚಿದ RCB ಸ್ಟಾರ್‌

    T20 ಕ್ರಿಕೆಟ್‌ನಲ್ಲಿ ಸಿಕ್ಸರ್‌ ಬ್ಲಾಸ್ಟ್‌ – ಒಂದೇ ಓವರ್‌ನಲ್ಲಿ 6,6,6,6,6 ಚಚ್ಚಿದ RCB ಸ್ಟಾರ್‌

    ಲಂಡನ್‌: RCB ತಂಡದ ಸ್ಟಾರ್‌ ಆಟಗಾರ ಹಾಗೂ ಇಂಗ್ಲೆಂಡ್‌ (England) ತಂಡದ ಆಲ್‌ರೌಂಡರ್‌ ಆಗಿರುವ ವಿಲ್ ಜ್ಯಾಕ್ಸ್ (Will Jacks) ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್‌ ಟೂರ್ನಿಯಲ್ಲಿ ಒಂದೇ ಓವರ್‌ನಲ್ಲಿ 5 ಭರ್ಜರಿ ಸಿಕ್ಸರ್‌ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.

    2023ರ 16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ (IPL 2023) ಆರ್‌ಸಿಬಿ ತಂಡದಲ್ಲಿ ಕಣಕ್ಕಿಳಿಯಬೇಕಿದ್ದ ವೀಲ್‌ ಜ್ಯಾಕ್ಸ್‌ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದಲೇ ಹೊರಗುಳಿದರು. ಬಳಿಕ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಟಿ20 ಬ್ಲಾಸ್ಟ್‌ ಟೂರ್ನಿಯಲ್ಲಿ ಸರ್ರೆ (Surrey) ತಂಡ ಪ್ರತಿನಿಧಿಸಿರುವ ಜ್ಯಾಕ್ಸ್‌ ಎದುರಾಳಿ ಮಿಡ್ಲ್‌ಎಸೆಕ್ಸ್‌ (Middlesex) ತಂಡದ ವಿರುದ್ಧ ಒಂದೇ ಓವರ್‌ನಲ್ಲಿ ಭರ್ಜರಿ 5 ಸಿಕ್ಸರ್‌ ಚಚ್ಚಿದರು.

    ಮಿಡ್ಲ್‌ಎಸೆಕ್ಸ್‌ ವಿರುದ್ಧದ ಪಂದ್ಯದಲ್ಲಿ 11ನೇ ಓವರ್‌ನಲ್ಲಿ ಲೂಕ್ ಹೋಲ್‌ಮನ್ ಬೌಲಿಂಗ್‌ಗೆ ಜ್ಯಾಕ್ಸ್ ಸತತ 5 ಸಿಕ್ಸರ್ ಸಿಡಿಸಿದರು. 6ನೇ ಎಸೆತವನ್ನ ಹೈ ಫುಲ್‌ ಟಾಸ್ ಹಾಕಿದ್ದರಿಂದ ಆ ಎಸೆತವನ್ನು ಎದುರಿಸುವಲ್ಲಿ ಜ್ಯಾಕ್ಸ್‌ ವಿಫಲರಾಗಿ, 6 ಎಸೆತಗಳಲ್ಲಿ 6 ಸಿಕ್ಸರ್‌ ಚಚ್ಚುವ ಅವಕಾಶದಿಂದ ವಂಚಿತರಾದರು. ಈ ಪಂದ್ಯದಲ್ಲಿ ಒಟ್ಟು 45 ಎಸೆತಗಳನ್ನ ಎದುರಿಸಿದ ಜ್ಯಾಕ್ಸ್‌ ಸ್ಫೋಟಕ 96 ರನ್‌ ಚಚ್ಚಿದರು. ಈಗಾಗಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷಲ್ ಗಿಬ್ಸ್, ವೆಸ್ಟ್‌ ಇಂಡೀಸ್ ತಂಡದ ಮಾಜಿ ನಾಯಕ ಕೀರನ್ ಪೊಲ್ಲಾರ್ಡ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. 2023ರ ಐಪಿಎಲ್‌ ಆವೃತ್ತಿಯಲ್ಲಿ ಕೆಕೆಆರ್‌ ತಂಡದ ಆಟಗಾರ ರಿಂಕು ಸಿಂಗ್‌ ಒಂದೇ ಓವರ್‌ನಲ್ಲಿ 5 ಸಿಕ್ಸರ್‌ ಸಿಡಿಸಿ ಮಿಂಚಿದ್ದರು.

    16ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಟಗಾರರ ಹರಾಜಿನ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 3.2 ಕೋಟಿ ರೂ.ಗೆ ವಿಲ್‌ ಜ್ಯಾಕ್ಸ್‌ನನ್ನ ಖರೀದಿಸಿತ್ತು. ಆದ್ರೆ ಟೂರ್ನಿ ಆರಂಭಕ್ಕೂ ಮುನ್ನವೇ ವಿಲ್‌ ಜ್ಯಾಕ್ಸ್‌ ಸ್ನಾಯು ಸೆಳೆತ ಸಮಸ್ಯೆಗೆ ಒಳಗಾಗಿದ್ದರಿಂದ ಐಪಿಎಲ್ ಟೂರ್ನಿಯಿಂದಲೇ ಹೊರಗುಳಿದರು.

    ಚೇಸಿಂಗ್‌ ದಾಖಲೆ ಬರೆದ ಮಿಡ್ಲ್‌ಎಸೆಕ್ಸ್‌:
    ಟಿ20 ಬ್ಲಾಸ್ಟ್‌ ಕ್ರಿಕೆಟ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸರ್ರೆ ತಂಡ 20 ಓವರ್‌ಗಳಲ್ಲಿ 252 ರನ್‌ ಪೇರಿಸಿತ್ತು. ಈ ಗುರಿ ಬೆನ್ನತ್ತಿದ ಮಿಡ್ಲ್‌ಎಸೆಕ್ಸ್‌ ತಂಡ 19.2 ಓವರ್‌ಗಳಲ್ಲೇ 254 ರನ್‌ ಪೇರಿಸಿ ಗೆಲುವು ದಾಖಲಿಸಿತು. ಸಿಕ್ಸರ್‌, ಬೌಂಡರಿಗಳ ಆಟದಲ್ಲಿ 236 ಎಸೆತಗಳಲ್ಲಿ ಬರೋಬ್ಬರಿ 506 ರನ್‌ ಗಳು ದಾಖಲಾಯಿತು. ಅಲ್ಲದೇ ಟಿ20 ಕ್ರಿಕೆಟ್‌ ನಲ್ಲಿ ಚೇಸಿಂಗ್‌ನಲ್ಲಿ ಅತಿಹೆಚ್ಚು ರನ್‌ ಸಿಡಿಸಿದ ದಾಖಲೆಯನ್ನೂ ಮಿಡ್ಲ್‌ಎಸೆಕ್ಸ್‌ ತಂಡ ಬರೆಯಿತು.