Tag: Microfinance

  • ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಹಿ – 3 ಮುಖ್ಯ ನಿಬಂಧನೆಯೊಂದಿಗೆ ಅನುಮೋದನೆ

    ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಹಿ – 3 ಮುಖ್ಯ ನಿಬಂಧನೆಯೊಂದಿಗೆ ಅನುಮೋದನೆ

    ಬೆಂಗಳೂರು: ಕೊನೆಗೂ ಮೈಕ್ರೋಫೈನಾನ್ಸ್ (Microfinance) ಕಿರುಕುಳ ತಡೆಯುವ ಸುಗ್ರೀವಾಜ್ಞೆಗೆ (Ordinance) ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಒಪ್ಪಿಗೆ ಕೊಟ್ಟಿದ್ದಾರೆ. ಮೊನ್ನೆಯಷ್ಟೇ ಸರ್ಕಾರವು ರಾಜ್ಯಪಾಲರು ಎತ್ತಿದ್ದ ಎಲ್ಲ ಆಕ್ಷೇಪಣೆಗಳಿಗೆ ಸವಿವರಗಳೊಂದಿಗೆ ಸ್ಪಷ್ಟೀಕರಣ ಕೊಟ್ಟು ಸುಗ್ರೀವಾಜ್ಞೆ ಕರಡನ್ನು ಮತ್ತೆ ರಾಜಭವನಕ್ಕೆ ಕಳಿಸಿತ್ತು. ಇಂದು ರಾಜ್ಯಪಾಲರು ಸರ್ಕಾರಕ್ಕೆ ಕೆಲ ಸಲಹೆ-ಸೂಚನೆ ನೀಡಿ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ.

    ಅಧಿವೇಶನದಲ್ಲಿ ಮಸೂದೆ ಮಂಡಿಸುವಾಗ ಕೆಲ ಅಂಶಗಳನ್ನು ಸೇರ್ಪಡೆ ಮಾಡುವಂತೆ ಮತ್ತು ಕೆಲ ಅಂಶ ತೆಗೆಯುವಂತೆ ರಾಜ್ಯಪಾಲರಿಂದ ಸೂಚನೆ ಬಂದಿದೆ. ಒಟ್ಟಾರೆಯಾಗಿ ಸರ್ಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಡವರಿಗೆ ದುಡಿಯುವ ವರ್ಗಕ್ಕೆ ಅನಧಿಕೃತ, ಕಾನೂನು ಬಾಹಿರ ಮೈಕ್ರೋಫೈನಾನ್ಸ್ ಕಿರುಕುಳ ತಪ್ಪಿಸಲು ಸರ್ಕಾರ ಮುಂದಾಗಿರುವ ಕ್ರಮ ಸ್ವಾಗತಾರ್ಹ ಅಂದಿದ್ದಾರೆ.

    ಇನ್ನು ಇಂದೇ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯನ್ನು ಸರ್ಕಾರದ ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಣೆ ಮಾಡಿದ ತತಕ್ಷಣದಿಂದ ಹೊಸ ಕಾನೂನು ಜಾರಿ ಆಗಲಿದೆ. ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸುಳಿವು ನೀಡಿದ ಖರ್ಗೆ

    ರಾಜ್ಯಪಾಲರು ನೀಡಿದ ಸೂಚನೆಗಳೇನು?
    ಸುಗ್ರೀವಾಜ್ಞೆಯನ್ನು ಜಾರಿಗೊಳಿಸುವ ಸಮಯದಲ್ಲಿ, ರಾಜ್ಯ ಸರ್ಕಾರವು ಕೆಲವು ಅಗತ್ಯ ಅಂಶಗಳನ್ನು ಖಚಿತಪಡಿಸಿಕೊಳ್ಳಬೇಕು.

    ಸುಗ್ರೀವಾಜ್ಞೆಯು ಉತ್ತಮ ಉದ್ದೇಶಗಳನ್ನು ಹೊಂದಿದ್ದರೂ ಸಹ, ಸುಗ್ರೀವಾಜ್ಞೆಯ ಕಾನೂನು ಮತ್ತು ಸಾಮಾಜಿಕ ಪರಿಣಾಮವನ್ನು ಎರಡೂ ಸದನಗಳಲ್ಲೂ ವಿವರವಾಗಿ ಚರ್ಚಿಸಬೇಕಾಗಿದೆ.

    ಕಾನೂನಾತ್ಮಕ, ಅಧಿಕೃತ, ನೊಂದಾಯಿತ, ನಿಯಂತ್ರಿತ ಸಂಸ್ಥೆಗಳು, ಬ್ಯಾಂಕುಗಳು (ಸಣ್ಣ ಹಣಕಾಸು ಬ್ಯಾಂಕುಗಳು, ಸ್ಥಳೀಯ ಪ್ರದೇಶ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಬ್ಯಾಂಕುಗಳ ವ್ಯವಹಾರ ಶಾಖೆಗಳು), ಆರ್‌ಬಿಐ ಅಡಿಯಲ್ಲಿ ನೋಂದಾಯಿಸಲಾದ ಎಲ್ಲಾ ಸಹಕಾರಿ ಬ್ಯಾಂಕುಗಳು ಮತ್ತು ಎಲ್ಲಾ ಬ್ಯಾಂಕೇತರ ಹಣಕಾಸು ಕಂಪನಿಗಳು ಮತ್ತು ವಸತಿ ಹಣಕಾಸು ನಿಗಮಗಳು ಈ ಕಾನೂನಿನ ತಪ್ಪು ವ್ಯಾಖ್ಯಾನ ಅಥವಾ ದುರುಪಯೋಗದಿಂದ ಕಿರುಕುಳಕ್ಕೊಳಗಾಗಬಾರದು.

     

    ಈಗಾಗಲೇ ಕಾನೂನು ಬದ್ಧ ಬಡ್ಡಿ ಸಾಲ ಕೊಟ್ಟಿರುವ ಅಧಿಕೃತ ಹಣಕಾಸು ಸಂಸ್ಥೆಗಳ ಸಾಲ‌ ವಸೂಲಾತಿಗೆ ತೊಂದರೆ ಆಗದಂತೆ ನಿಗಾ ವಹಿಸತಕ್ಕದ್ದು. ಕಾನೂನುಬದ್ಧ ಮತ್ತು ನಿಜವಾದ ಸಾಲದಾತರು ತೊಂದರೆಯನ್ನು ಎದುರಿಸದಂತೆ, ಅವರ ಸಾಲದ ಬಾಕಿ ಮೊತ್ತವನ್ನು ಮರುಪಡೆಯಲು ಅವಕಾಶ ಕೊಡಬೇಕು. ಈಗಾಗಲೇ ಸಾಲ‌ ಕೊಟ್ಟಿರುವ ನೊಂದಾಯಿತ ಸಂಸ್ಥೆಗಳ ಸಾಲ ಮರುಪಾವತಿಗೆ ಯಾವುದೇ ಪರಿಹಾರವಿಲ್ಲದಿದ್ದರೆ, ಇದು ಮುಂದೆ ಕಾನೂನು ವ್ಯಾಜ್ಯಗಳಿಗೆ ದಾರಿ ಮಾಡಿಕೊಡಲಿದೆ.

    ಯಾವುದೇ ವ್ಯಕ್ತಿ ತನ್ನ ಹಕ್ಕುಗಳು ಮತ್ತು ಕಾನೂನು ಪರಿಹಾರಗಳಿಗಾಗಿ ಹೋರಾಡುವುದನ್ನು ತಡೆಯುವುದು ಭಾರತದ ಸಂವಿಧಾನದ 19 ಮತ್ತು 32 ನೇ ವಿಧಿಯ ಅಡಿಯಲ್ಲಿ ಒದಗಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಬಹುದು. ಆದ್ದರಿಂದ, ರಾಜ್ಯ ಸರ್ಕಾರವು ಈ ಅಂಶದ ಬಗ್ಗೆ ಪುನರ್ವಿಮರ್ಶಿಸಬೇಕು ಮತ್ತು ಈ ನಿಟ್ಟಿನಲ್ಲಿ ಸರಿಪಡಿಸುವ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.

  • 10 ಸಾವಿರ ಸಾಲ.. ಒಂದೂವರೆ ಲಕ್ಷ ಬಡ್ಡಿ – ಮೈಕ್ರೋ ಫೈನಾನ್ಸ್‌ ಬೆನ್ನಲ್ಲೇ ಮೀಟರ್ ಬಡ್ಡಿ ಹಾವಳಿ

    10 ಸಾವಿರ ಸಾಲ.. ಒಂದೂವರೆ ಲಕ್ಷ ಬಡ್ಡಿ – ಮೈಕ್ರೋ ಫೈನಾನ್ಸ್‌ ಬೆನ್ನಲ್ಲೇ ಮೀಟರ್ ಬಡ್ಡಿ ಹಾವಳಿ

    ಚಿಕ್ಕಬಳ್ಳಾಪುರ: ಮೈಕ್ರೋ ಫೈನಾನ್ಸ್ (Microfinance) ಕಿರುಕುಳಕ್ಕೆ ಜನ ವಿಲವಿಲ ಒದ್ದಾಡಿ ಸಾವು ನೋವು ಆಗಿರುವ ಸಂದರ್ಭದಲ್ಲೇ ಮೀಟರ್ ಬಡ್ಡಿ ಹಾವಳಿಯೂ ಹೆಚ್ಚಾಗಿದೆ. ನೂರು ರೂಪಾಯಿ ಸಾಲಕ್ಕೆ ಪ್ರತಿ ತಿಂಗಳು 10-15 ಪರ್ಸೆಂಟ್ ವಸೂಲಿ ಮಾಡಿದ್ದಲ್ಲದೇ ಬಡ್ಡಿ, ಚಕ್ರಬಡ್ಡಿ, ಅಸಲು ಸಮೇತ ಸಾಲ ತೀರಿಸಿದ್ರೂ ಶ್ಯೂರಿಟಿ ಇಟ್ಟುಕೊಂಡಿದ್ದ ಚೆಕ್‌ಗಳನ್ನು ನೀಡದೇ ಕಿರುಕುಳ ನೀಡುತ್ತಿರುವ ಆರೋಪ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯಲ್ಲಿ ಕೇಳಿಬಂದಿದೆ.

    ಬಡ್ಡಿ, ಚಕ್ರಬಡ್ಡಿ, ಅಸಲು ಸಮೇತ ಸಾಲ ಮೀಟರ್ ಬಡ್ಡಿ ಸಾಲ ತೀರಿಸಿದ್ರೂ.. ಶ್ಯೂರಿಟಿ ಇಟ್ಟುಕೊಂಡಿದ್ದ ಚೆಕ್‌ಗಳನ್ನು ನೀಡದೆ ಕಿರುಕುಳ ನೀಡುತ್ತಿದ್ದಾನೆ ಅಂತ ಆರೋಪಿಸಿ ಆತನ ಫೋಟೋಗಳನ್ನು ಪ್ರದರ್ಶನ ಮಾಡಿ ಚಿಕ್ಕಬಳ್ಳಾಪುರ ತಾಲೂಕಿನ ಎಲೆಹಳ್ಳಿ, ಕಂಡಕನಹಳ್ಳಿ ಹಾಗೂ ಆವಲಹಳ್ಳಿ ಗ್ರಾಮದ ಸಂತ್ರಸ್ತರು ನ್ಯಾಯ ಕೇಳ್ತಿದ್ದಾರೆ. ಇದನ್ನೂ ಓದಿ: ಸ್ವಾಮೀಜಿಗಳು ಆಶೀರ್ವಾದ ಮಾಡಿದ್ರೆ, ಯೋಗ್ಯ ಅಂದ್ರೆ ಜನರ ವೋಟು ಗ್ಯಾರಂಟಿ: ಮುಖ್ಯಮಂತ್ರಿ ಚಂದ್ರು

    ಮದುವೆ ಸೇರಿದಂತೆ ಕೃಷಿ ಕಾಯಕಕ್ಕೆ ಕೈ ಸಾಲ ಅಂತ 10 ಸಾವಿರ 20 ಸಾವಿರ ರೂಪಾಯಿಯನ್ನ ಎಲೆಹಳ್ಳಿ ಗ್ರಾಮದ ವೆಂಕಟೇಶ್ ಬಳಿ ಪಡೆದುಕೊಂಡಿದ್ರಂತೆ. ಸಾಲ ಕೊಡುವಾಗ ಖಾಲಿ ಚೆಕ್ ಪಡೆದಿದ್ದ ವೆಂಕಟೇಶ್. 100 ರೂ.ಗೆ 10 ರಿಂದ 15 ಪರ್ಸೆಂಟ್ ಬಡ್ಡಿ ಹಾಕ್ತಿದ್ದನಂತೆ. ಆದ್ರೂ ಕಷ್ಟ ಅಂತ ತಗೊಂಡು ವರ್ಷಾನುಗಟ್ಟಲೇ ಬಡ್ಡಿ ಕಟ್ಟಿ ಸಾಕಾಗಿ ಕೊನೆಗೆ ಅಸಲು ಹಣ ಕೊಟ್ಟು ಕೈ ತೊಳೆದುಕೊಂಡಿದ್ದಾರಂತೆ. ಆದ್ರೆ ಸಾಲ ಪಡೆಯುವಾಗ ಶ್ಯೂರಿಟಿಯಾಗಿ ಕೊಟ್ಟಿದ್ದ ಖಾಲಿ ಚೆಕ್ ವಾಪಾಸ್ ಕೊಡದ ವೆಂಕಟೇಶ್, 10 ಸಾವಿರಕ್ಕೆ 1.20 ಲಕ್ಷ ಸೇರಿ 2 ಲಕ್ಷ ಹಣ ಕೊಡಬೇಕು ಅಂತ ಖಾಲಿ ಚೆಕ್‌ನಲ್ಲಿ ಬರೆದುಕೊಂಡು ಚೆಕ್ ಬೌನ್ಸ್ ಕೇಸ್ ಹಾಕಿ ಕೋರ್ಟ್‌ಗೆ ಅಲೆದಾಡಿಸುತ್ತಿದ್ದಾನಂತೆ ಅಂತ ಆರೋಪಿಸುತ್ತಿದ್ದಾರೆ.

    ಅಲ್ಲದೇ ಕಂಡಕನಹಳ್ಳಿ ನಿವಾಸಿ ಶಿವಶಂಕರ ಬಾಬು, ಆವಲಹಳ್ಳಿ ಮುನಿರಾಜು, ಕಂಡಕನಹಳ್ಳಿ ನಿವಾಸಿ ಭಾಗ್ಯಮ್ಮ, ಕಂಡಕನಹಳ್ಳಿ ನಿವಾಸಿ ನಾರಾಯಣಸ್ವಾಮಿ, ಅಂಗರೇಖನಹಳ್ಳಿ ಲಕ್ಷ್ಮಿದೇವಮ್ಮ, ಕಾಡದಿಬ್ಬೂರು ಮುನಿರಾಜು, ಕಾಡದಿಬ್ಬೂರು ಮುರಳಿ, ವರಮಲ್ಲೇನಹಳ್ಳಿ ಎಂ. ಮುನಿರಾಜು ಸೇರಿದಂತೆ ಹಲವರು ಈಗಾಗಲೇ ವೆಂಕಟೇಶ್ ಮೀಟರ್ ಬಡ್ಡಿ ದಂಧೆ ಮೂಲಕ ನಮಗೆ ಕೊಡಬಾರದ ಕಾಟ ಕೊಟ್ಟಿದ್ದಾನೆ. ನಮ್ಮ ಖಾಲಿ ಚೆಕ್ ನಮಗೆ ವಾಪಸ್ ಕೊಡದೆ ವಂಚನೆ ನಮ್ಮ ಮೇಲೆಯೇ ಕೇಸ್ ಹಾಕಿ ಬೆದರಿಸ್ತಿದ್ದಾನೆ ಅಂತ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿಗೆ ದೂರು ನೀಡಿದ್ದಾರೆ.

    ಈ ಬಗ್ಗೆ ವೆಂಕಟೇಶ್ ದೂರವಾಣಿ ಮೂಲಕ ಸ್ಪಷ್ಟನೆ ನೀಡಿದ್ದು, ನಾನು ಸಾಲ ಕೊಟ್ಟಿರೊದು ನಿಜ. ಆದ್ರೆ ಬಡ್ಡಿ ಪಡೆದಿಲ್ಲ ಮೀಟರ್ ಬಡ್ಡಿ ದಂಧೆ ನಡೆಸಿಲ್ಲ. ಸಾಲ ಪಡೆವದರೆಲ್ಲ ನಮ್ಮ ಸಂಬಂಧಿಕರು ಹಣ ಪಡೆದು ಸಾಲ ವಾಪಸ್ ಕೊಡ್ತೀವಿ ಅಂತ ಒಪ್ಕೊಂಡು ಈಗ ಹೀಗೆ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪರ ಸ್ತ್ರೀ ಜೊತೆ ಸಲುಗೆ – ಪತಿಯ ಕಾಲು ಮುರಿಯಲು ಪತ್ನಿಯಿಂದಲೇ 5 ಲಕ್ಷಕ್ಕೆ ಸುಪಾರಿ

  • ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಬಲಿಯಾದವರಿಗೆ ನ್ಯಾಯ ಕೊಡಿ: ಆರ್‌.ಅಶೋಕ್‌ 

    ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಬಲಿಯಾದವರಿಗೆ ನ್ಯಾಯ ಕೊಡಿ: ಆರ್‌.ಅಶೋಕ್‌ 

    – ನ್ಯಾಯಾಂಗ ತನಿಖೆಗೆ ಆಗ್ರಹ

    ಬೆಂಗಳೂರು: ಮೈಕ್ರೋ ಫೈನಾನ್ಸ್‌ಗಳ (Microfinance) ಕಿರುಕುಳದಿಂದಾಗಿ ಬಡಜನರು ಸಾಯುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಣ್ಣು ತೆರೆದಿಲ್ಲ. ಮೈಕ್ರೋ ಫೈನಾನ್ಸ್‌ನಿಂದ ಸತ್ತವರಿಗೆ ನ್ಯಾಯ ನೀಡಲು ನ್ಯಾಯಾಂಗ ತನಿಖೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ (R.Ashok) ಆಗ್ರಹಿಸಿದ್ದಾರೆ.

    ಮಂಡ್ಯದ (Mandya) ಕೊನ್ನಾಪುರ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್‌ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದ ತಾಯಿ ಮತ್ತು ಮಗನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸುಗ್ರೀವಾಜ್ಞೆ ತರುತ್ತೇವೆಂದು ಹೇಳಿ ಒಂದು ತಿಂಗಳು ಕಳೆದಿದೆ. ಮಂಡ್ಯ ಜಿಲ್ಲೆಯಲ್ಲಿ ದಲಿತರ ಪ್ರದೇಶದಲ್ಲಿ 6 ಮಂದಿ ಊರು ಬಿಟ್ಟು ಹೋಗಿದ್ದಾರೆ. ರಾಜ್ಯದಲ್ಲಿ ಲಕ್ಷಾಂತರ ಜನರು ಓಡಿಹೋಗಿರಬಹುದು. ಸರ್ಕಾರ ಸುಗ್ರೀವಾಜ್ಞೆ ತರಲಿಲ್ಲ, ಸಾವುಗಳು ನಿಲ್ಲಲಿಲ್ಲ ಎಂದು ದೂರಿದ್ದಾರೆ.

    ಕೊನ್ನಾಪುರದಲ್ಲಿ ತಾಯಿ ಪ್ರೇಮಾ ಮತ್ತು ಮಗ ರಂಜಿತ್‌ ಮೈಕ್ರೋ ಫೈನಾನ್ಸ್‌ನ ಸಾಲ ತೀರಿಸಲಾಗದೆ ಕೊನ್ನಾಪುರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡವರ ಪರ ಎಂದು ಹೇಳುವ ಸಿಎಂ ಸಿದ್ದರಾಮಯ್ಯನವರಿಗೆ ಕಣ್ಣಿಲ್ಲ. ಕೊನ್ನಾಪುರ ಗ್ರಾಮದಲ್ಲಿ ಚಾಮುಂಡೇಶ್ವರಿ, ನವಚೇತನ, ಸೂರ್ಯೋದಯ, ಯುನಿಟಿ, ಪ್ರಗತಿ ಸೇರಿದಂತೆ 24 ಮೈಕ್ರೋ ಫೈನಾನ್ಸ್‌ಗಳು ಈ ಹಳ್ಳಿಗೆ ಬಂದು ವರ್ಷಕ್ಕೆ 12% ರಂತೆ ಸಾಲ ನೀಡಿವೆ. ಒಬ್ಬರಿಗೆ ಒಂಬತ್ತು ಜನರು ಶೂರಿಟಿ ನೀಡಿದ್ದಾರೆ. ಒಬ್ಬರು ಸಾಲ ಮರುಪಾವತಿ ಮಾಡಿಲ್ಲವೆಂದರೆ ಉಳಿದವರು ಹೊಣೆಯಾಗುತ್ತಾರೆ. ಸಾಲ ಕಟ್ಟದೆ ಮಾನ ಹೋದಾಗ ನೊಂದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಪೊಲೀಸರು ಕೂಡ ಇಲ್ಲಿ ಮೈಕ್ರೋ ಫೈನಾನ್ಸ್‌ಗೆ ಬೆಂಬಲ ನೀಡಿದ್ದಾರೆ. ಮನೆ ವಶಕ್ಕೆ ಪಡೆಯುವ ಸಮಯದಲ್ಲಿ ಪೊಲೀಸರು ಕುಟುಂಬದ ಸದಸ್ಯರನ್ನು ಎಳೆದು ಹೊರಗೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಂಡ್ಯದಲ್ಲಿ 60 ಮೈಕ್ರೋ ಫೈನಾನ್ಸ್‌ಗಳಿದ್ದು, ಕೇವಲ 18 ಮಾತ್ರ ಅಧಿಕೃತವಾಗಿವೆ. ಉಳಿದವುಗಳಲ್ಲಿ ರೌಡಿಗಳಿದ್ದಾರೆ. ತಹಶೀಲ್ದಾರ್‌ ಹಾಗೂ ಪೊಲೀಸರು ಎಲ್ಲಾ ಹಳ್ಳಿಗೂ ಹೋಗಿ ಕ್ರಮ ಕೈಗೊಳ್ಳಬೇಕಿತ್ತು. ಈ ಸಾವುಗಳಿಗೆ ನ್ಯಾಯ ನೀಡಲು ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಮಾಡಬೇಕು. ಅನಧಿಕೃತ ಮೈಕ್ರೋ ಫೈನಾನ್ಸ್‌ಗಳನ್ನು ಪತ್ತೆ ಮಾಡಿ ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

  • ಮೈಕ್ರೋ ಫೈನಾನ್ಸ್ ದೌರ್ಜನ್ಯಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್: ವಿಜಯೇಂದ್ರ

    ಮೈಕ್ರೋ ಫೈನಾನ್ಸ್ ದೌರ್ಜನ್ಯಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್: ವಿಜಯೇಂದ್ರ

    – ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ

    ಬೆಂಗಳೂರು: ಜನರ ರಕ್ಷಣೆಗೆ ಬರಬೇಕಾದ ರಾಜ್ಯ ಸರ್ಕಾರ ದೌರ್ಜನ್ಯ ಎಸಗುವ ಮೈಕ್ರೋ ಫೈನಾನ್ಸ್ (Microfinance) ಸಂಸ್ಥೆಗಳಿಗೆ ಸಂಜೆ 5 ಗಂಟೆ ತನಕ ವಸೂಲಿಗೆ ಹೋಗಲು ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y Vijayendra) ಕಿಡಿಕಾರಿದ್ದಾರೆ.

    ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು. ಈ ವೇಳೆ ಬೆಳಿಗ್ಗೆ 10 ರಿಂದ 5ಗಂಟೆ ವರೆಗೆ ಮೈಕ್ರೋ ಫೈನಾನ್ಸ್‌ ಸಿಬ್ಬಂದಿಗೆ ಹೋಗಿ ಎಂಬ ಮಾತನ್ನು ರಾಜ್ಯ ಸರ್ಕಾರ ಹೇಳುತ್ತಿರುವುದು ದುರ್ದೈವದ ಸಂಗತಿ. ಒಂದು ಕಡೆ ತಮ್ಮ ಗ್ಯಾರಂಟಿಗಳಿಂದ ರಾಜ್ಯದಲ್ಲಿ ಜನರು ಸಮೃದ್ಧರಾಗಿದ್ದಾರೆ. ಆಲ್ ಈಸ್ ವೆಲ್ ಎಂದು ಹೇಳಿಕೊಳ್ಳುತ್ತಾರೆ. ಮತ್ತೊಂದು ಕಡೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದೌರ್ಜನ್ಯ ಮತ್ತು ಭರಾಟೆಯಿಂದ ರಾಜ್ಯದಲ್ಲಿ ಬಡವರು, ಮಹಿಳೆಯರು, ಕೂಲಿ ಕಾರ್ಮಿಕರು ತತ್ತರಿಸಿ ಹೋಗಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ದೌರ್ಜನ್ಯಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್: ವಿಜಯೇಂದ್ರ

    ಮೈಕ್ರೋ ಫೈನಾನ್ಸ್ ಹಾವಳಿಯ ಕುರಿತು ಬಹಳಷ್ಟು ಚರ್ಚೆ ಆಗುತ್ತಿದೆ. ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಕ್ರೋ ಫೈನಾನ್ಸ್ ವಸೂಲಾತಿ ದೌರ್ಜನ್ಯದಿಂದ ಭಯಭೀತರಾಗಿ ಹಣ ಮರುಪಾವತಿ ಮಾಡಲು ಸಾಧ್ಯವಾಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವ್ಯೂಹಕ್ಕೆ ಬಡವರು ಸಿಲುಕಿದ್ದಾರೆ. ರಾಜ್ಯ ಸರ್ಕಾರದ ದೌರ್ಜನ್ಯಕ್ಕೆ ಅವಕಾಶ ಕೊಡುವುದನ್ನು ಬದಿಗಿಟ್ಟು ಮುಗ್ಧ ಬಡಜನರ, ರೈತರ ರಕ್ಷಣೆಗೆ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ.

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅನುದಾನ ಇಲ್ಲದೇ ಶಾಸಕರು ಅಭಿವೃದ್ಧಿ ರಹಿತ ಕ್ಷೇತ್ರದೊಂದಿಗೆ ಕೈಕಟ್ಟಿ ಕುಳಿತಿರುವ ದಾರುಣ ಪರಿಸ್ಥಿತಿ ಇದೆ. ರೈತರ ಗೋಳನ್ನು ಸರ್ಕಾರ ಕೇಳುತ್ತಿಲ್ಲ. ಹಗಲು ದರೋಡೆ, ಕೊಲೆ, ಅತ್ಯಾಚಾರ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿವೆ. ಇದಲ್ಲದೇ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ರಾಜ್ಯದಲ್ಲಿ ಚುನಾಯಿತ ಸರ್ಕಾರ, ಮುಖ್ಯಮಂತ್ರಿಗಳು ಇದ್ದಾರಾ? ಸರ್ಕಾರ ರಾಜ್ಯದ ಅಭಿವೃದ್ಧಿ ಸೇರಿ ಎಲ್ಲವನ್ನೂ ಮರೆತಿದೆ. ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದೆ ಎಂದಿದ್ದಾರೆ.

    ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ: ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಏರುವ ವಿಶ್ವಾಸವಿದೆ. 9-10 ಸಮೀಕ್ಷೆಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದಂತೆ 27 ವರ್ಷಗಳ ನಂತರ ದೆಹಲಿ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಗ್ಯಾರಂಟಿಗಳ ಭ್ರಮೆಯಲ್ಲಿದ್ದ ಆಮ್ ಆದ್ಮಿ ಪಾರ್ಟಿಗೆ ತಕ್ಕ ಪಾಠವನ್ನು ಆ ರಾಜ್ಯದ ಜನರು ಕಲಿಸುತ್ತಾರೆ. ಭ್ರಷ್ಟಾಚಾರದ ವಿರುದ್ಧ ಆಂದೋಲನ ಮಾಡಿ, ರಾಜ್ಯದ ಚುಕ್ಕಾಣಿ ಹಿಡಿದ ಆಮ್ ಆದ್ಮಿ ಪಾರ್ಟಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ. ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸ ನಮಗಿದೆ ಎಂದಿದ್ದಾರೆ.

    ಕೇಂದ್ರದ ಅತ್ಯುತ್ತಮ ಬಜೆಟ್: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅತ್ಯುತ್ತಮ ಬಜೆಟ್ ಮಂಡನೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತದ ಕನಸು ನನಸಾಗುವ ನಿಟ್ಟಿನಲ್ಲಿ ಅಭಿವೃದ್ಧಿಗೆ ಪೂರಕವಾದ, ಬಡವರು, ರೈತರು, ಯುವಕರು, ಮಹಿಳೆಯರ ಪರವಾಗಿ ಒಂದು ಅತ್ಯುತ್ತಮ ಬಜೆಟ್ ಇದಾಗಿದೆ ಎಂದಿದ್ದಾರೆ.

    12 ಲಕ್ಷದವರೆಗೆ ಆದಾಯ ತೆರಿಗೆ ಕಟ್ಟುವಂತಿಲ್ಲ ಎಂಬ ನಿರ್ಧಾರದಿಂದ ಮಧ್ಯಮ ವರ್ಗದವರಿಗೆ ಬಹಳಷ್ಟು ಅನುಕೂಲವಾಗಿದೆ. ಜನರ ಬಹುವರ್ಷಗಳ ನಿರೀಕ್ಷೆಗೆ ತಕ್ಕಂತೆ ಬಜೆಟ್ ಮಂಡಿಸಿದ್ದು, ಇದು ಪ್ರತಿಯೊಬ್ಬರೂ ಸಂತಸ ಪಡುವ ವಿಚಾರವಾಗಿದೆ. ಸಿದ್ದರಾಮಯ್ಯನವರಿಂದ ಕೇಂದ್ರದ ಬಜೆಟ್ ಬಗ್ಗೆ ಒಳ್ಳೆಯ ಮಾತು ಕೇಳಲು ಸಾಧ್ಯವಿಲ್ಲ. ಸಹಜವಾಗಿ ಅವರು ಟೀಕೆಗಳನ್ನು ಮಾಡಿದ್ದಾರೆ. ಕರ್ನಾಟಕವೂ ಸೇರಿದಂತೆ ದೇಶದ ಪ್ರತಿಯೊಂದು ರಾಜ್ಯದಲ್ಲೂ ಸಹ ಈ ಬಜೆಟ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯಸಭೆಯಲ್ಲಿ ಕಾಂಗ್ರೆಸ್ ಕುರಿತ ದೇವೇಗೌಡರ ಹೇಳಿಕೆ ಸರಿಯಾಗಿದೆ: ಛಲವಾದಿ ನಾರಾಯಣಸ್ವಾಮಿ

  • ಮೈಕ್ರೋ ಫೈನಾನ್ಸ್‌ನವರು ರೌಡಿಗಳನ್ನಿಟ್ಟುಕೊಂಡು ಹಣ ವಸೂಲಿ ಮಾಡ್ತಿದ್ದಾರೆ: ಡಿಕೆಶಿ

    ಮೈಕ್ರೋ ಫೈನಾನ್ಸ್‌ನವರು ರೌಡಿಗಳನ್ನಿಟ್ಟುಕೊಂಡು ಹಣ ವಸೂಲಿ ಮಾಡ್ತಿದ್ದಾರೆ: ಡಿಕೆಶಿ

    ಬೆಂಗಳೂರು: ಮೈಕ್ರೋ ಫೈನಾನ್ಸ್‌ (Microfinance) ಕಂಪನಿಗಳು ಕುರುಕುಳ ನೀಡದಂತೆ ಸಿಎಂ ಹಾಗೂ ಸಹಕಾರ ಸಚಿವರು ಈಗಾಗಲೇ ಆದೇಶ ಮಾಡಿದ್ದಾರೆ. ಆದ್ರೆ ಕೆಲವು ಕಡೆ ರೌಡಿಗಳನ್ನ ಬಿಟ್ಟು ಹೆದರಿಸ್ತಾರೆ, ಹಣ ವಸೂಲಿ ಮಾಡ್ತಿದ್ದಾರೆ. ಹಾಗಾಗಿ ಆದಷ್ಟು ಬೇಗ ಜಾರಿಯಾಗುತ್ತೆ ಸುಗ್ರೀವಾಜ್ಞೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಹೇಳಿದರು.

    ಮೈಕ್ರೋ ಫೈನಾನ್ಸ್‌ ಮಸೂದೆ ಜಾರಿ ಬಗ್ಗೆ ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಡಿಸಿಎಂ, ನಾವು ಬಿಲ್ ತರ್ತಿದ್ದೇವೆ. ಮುಖ್ಯಮಂತ್ರಿಗಳಿಗೆ ಆರೋಗ್ಯ ಸರಿಯಿಲ್ಲ. ಒಂದೆರಡು ದಿನ ವಿರಾಮದ ನಂತರ ಬರ್ತಾರೆ. ಆಮೇಲೆ‌ ಸುಗ್ರೀವಾಜ್ಞೆ ಬಗ್ಗೆ ಕ್ರಮ ಜರುಗಿಸ್ತಾರೆ ಎಂದರು.

    ಮೈಸೂರು, ಬೆಂಗಳೂರು, ರಾಮನಗರ ಸೇರಿದಂತೆ ಎಲ್ಲೆಡೆ ಮೈಕ್ರೋ ಫೈನಾನ್ಸ್‌ ಕಿರುಕುಳ ಪ್ರಕರಣಗಳು ಬೆಳಕಿಗೆ ಬರ್ತಿದೆ. ಈಗಾಗಲೇ ಸಿಎಂ, ಸಹಕಾರ ಸಚಿವರು ಕಿರುಕುಳ ನೀಡದಂತೆ ಆದೇಶ ಮಾಡಿದ್ದಾರೆ. ಬಡವರನ್ನ ನಾವು ರಕ್ಷಣೆ ಮಾಡಬೇಕು. ಆದ್ರೆ ಕೆಲವು ಕಡೆ ರೌಡಿಗಳನ್ನ ಬಿಟ್ಟು ಹೆದರಿಸ್ತಾರೆ. ಎಲ್ಲ ಪಕ್ಷದ ಕಾರ್ಯಕರ್ತರಿಗೆ ಹೇಳ್ತೇನೆ. ಕಿರುಕುಳ ಗಮನಕ್ಕೆ ತರುವಂತೆ ಮನವಿ ಮಾಡುತ್ತೇನೆ. ಪ್ರತಿ ಜಿಲ್ಲಾ ಕಚೇರಿಗಳಿಗೂ ಈ ಬಗ್ಗೆ ಹೇಳಿದ್ದೇವೆ. ಎಸ್ಪಿಗಳೊಂದಿಗೂ ಸಭೆ ಮಾಡ್ತೇವೆ. ಸುಗ್ರೀವಾಜ್ಞೆ ಆದಷ್ಟು ಬೇಗ ಜಾರಿಯಾಗುತ್ತೆ ಎಂದು ನುಡಿದರು.

    ಇನ್ನೂ ಜೆಡಿಎಸ್ ಶಾಸಕರ ಸಂಪರ್ಕ‌ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಯಾರ ಜೊತೆಯೂ ಮಾತನಾಡಿಲ್ಲ. ಜೆಡಿಎಸ್ ಶಾಸಕರ ಜೊತೆ ಮಾತನಾಡಿಲ್ಲ. ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರಿಗೆ ನೋವಿದೆ. ಅವರು ಎಷ್ಟು ದಿನ ಅಂತ ಕಾಯ್ತಾರೆ. ನಾನು ಯಾರ ಹೆಸರನ್ನೂ ಹೇಳಲ್ಲ. ಅವರಿಗೆ ನ್ಯಾಷನಲ್ ಪಾರ್ಟಿ ಸೇರಬೇಕೆಂಬ ಆಸೆ ಇದೆ. ಅದಕ್ಕೆ ಬನ್ನಿ ಸೇರಿಕೊಳ್ಳಿ ಅಂದಿದ್ದೇನೆ. ನನ್ನ ಜೊತೆ ಯಾರು ಸಂಪರ್ಕ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

    ನವೆಂಬರ್ 15-16ರಂದು ಸಿಎಂ ಬದಲಾವಣೆ ಬಗ್ಗೆ ಅಶೋಕ್ ‌ಭವಿಷ್ಯ ನುಡಿದ ಹೇಳಿಕೆಗೆ ಪ್ರತಿಕ್ರಿಯಿಸಿ, ನನಗೂ ಶಾಸ್ತ್ರದ ಬಗ್ಗೆ ಗೊತ್ತಿದೆ. ಅವರು ಬೋರ್ಡ್ ಯಾವಾಗ ಹಾಕಿಕೊಂಡ್ರೋ ಗೊತ್ತಿಲ್ಲ. ನಾನು ಶೀಘ್ರದಲ್ಲೇ ಅವರಿಂದ ಜ್ಯೋತಿಷ್ಯ ಕೇಳ್ತೇನೆ ಎಂದು ವ್ಯಂಗ್ಯವಾಡಿದರು.

    ಇನ್ನೂ ರಾಜ್ಯ ಸರ್ಕಾರ ದಿವಾಳಿ ಆಗಿದೆ ಎಂಬ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ತಿರುಗೇಟು ನೀಡಿದ ಡಿಸಿಎಂ, ಪ್ರಧಾನಿಯವರು ಗ್ಯಾರೆಂಟಿ ಬಗ್ಗೆ ಏನು ಹೇಳಿದ್ರು…? 5 ಗ್ಯಾರಂಟಿ ಕೊಟ್ಟಾಗ ದಿವಾಳಿ ಅಂದಿದ್ರು. ಬೆಲೆ ಏರಿಕೆಯಿಂದ ಹೆಣ್ಣುಮಕ್ಕಳು ತತ್ತರಿಸಿದ್ದಾರೆ. ಬೆಲೆ ಹೆಚ್ಚಾಗಿದೆ ಬದುಕೋಕೆ ಆಗಲ್ಲ ಅಂತಿದ್ದರು. ಅದಕ್ಕೆ ನಾವು ಗ್ಯಾರೆಂಟಿ ತಂದಿದ್ದು. ಈಗ ಅವರೇ ಎಲ್ಲಾ ಕಡೆ ಶುರು ಮಾಡಿದ್ದಾರೆ. ನಮ್ಮದು ದಿವಾಳಿ ಆಗಿದ್ಯಾ ಅನ್ನೋದನ್ನ ಅವರೇ ಹೇಳಲಿ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಘೋಷಣೆ ಮಾಡಿದ್ದರು. ಈವರೆಗೆ ಒಂದು ರೂಪಾಯಿ ಕೂಡ ಬಂದಿಲ್ಲ. ಅವರು ಮೊದಲು ಕೊಟ್ಟ ಮಾತು ಉಳಿಸಿಕೊಳ್ಳಲಿ ಎಂದು ಕುಟುಕಿದರು.

  • ಮೈಕ್ರೋ ಫೈನಾನ್ಸ್ ಸೇರಿ ಕೈ ಸಾಲಭಾದೆ – ವ್ಯಕ್ತಿ ಮನೆಯಲ್ಲೇ ನೇಣಿಗೆ ಶರಣು

    ಮೈಕ್ರೋ ಫೈನಾನ್ಸ್ ಸೇರಿ ಕೈ ಸಾಲಭಾದೆ – ವ್ಯಕ್ತಿ ಮನೆಯಲ್ಲೇ ನೇಣಿಗೆ ಶರಣು

    ಚಿಕ್ಕಬಳ್ಳಾಪುರ: ಮೈಕ್ರೋ ಫೈನಾನ್ಸ್ (Microfinance) ಸೇರಿದಂತೆ ವಿವಿಧ ಕಡೆ ಟ್ರ್ಯಾಕ್ಟರ್, ಬೈಕ್ ಹಾಗೂ ಮೊಬೈಲ್‌ಗೆ ಸಾಲ ಮಾಡಿಕೊಂಡಿದ್ದ ವ್ಯಕ್ತಿಯೊರ್ವ ಸಾಲಭಾದೆಯಿಂದ ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ 26 ವರ್ಷದ ಗಿರೀಶ್‌ ಎಂಬಾತ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ತಡರಾತ್ರಿ ಮನೆಯಿಂದ ತೋಟದ ಕಡೆ ಹೋಗಿದ್ದವ ಮಧ್ಯರಾತ್ರಿ ಮನೆಗೆ ಬಂದು ನೇಣಿಗೆ ಶರಣಾಗಿದ್ದಾನೆ. ಬೆಳಗ್ಗೆ ಎದ್ದು ಮನೆಯವರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ರಿಲಯನ್ಸ್ ಬ್ರ‍್ಯಾಂಡ್ಸ್ ಸಹಯೋಗದೊಂದಿಗೆ ಮಾಝ್‌ನಿಂದ ಭಾರತದಲ್ಲಿ ಮೊದಲ ಮಳಿಗೆ ಶುರು

    ಕಳೆದ 1 ವರ್ಷದ ಹಿಂದೆ ಸಹ ಕೃಷಿಕಾಯಕಕ್ಕೆ ಲೋನ್ ಮಾಡಿ ತಗೊಂಡಿದ್ದ ಟ್ರಾಕ್ಟರನ್ನ ಸಹ ಜಫ್ತಿ ಮಾಡಲಾಗಿತ್ತಂತೆ, ಇನ್ನೂ ಲೋನ್ ಮೇಲೆ ತಗೊಂಡಿದ್ದ ಬೈಕ್ ಕಂತು ಸಹ ಕಟ್ಟಲು ಕಷ್ಟವಾಗಿದ್ದು, ಹೆಂಡತಿ ಹಾಗೂ ತಾಯಿಯ ಹೆಸರಲ್ಲಿ ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಮಾಡಿಕೊಂಡಿದ್ದ ಅಂತ ತಿಳಿದುಬಂದಿದೆ. ಇದನ್ನೂ ಓದಿ: ಸಿಎಂ ಸಲಹೆಗಾರ ಬಿ.ಆರ್ ಪಾಟೀಲ್ ರಾಜೀನಾಮೆ ಬಗ್ಗೆ ನನಗೆ ಗೊತ್ತಿಲ್ಲ- ಪರಮೇಶ್ವರ್

    ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಯುಪಿಎಗೆ ಹೋಲಿಸಿದ್ರೆ ಕರ್ನಾಟಕಕ್ಕೆ 9 ಪಟ್ಟು ಅಧಿಕ ಅನುದಾನ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

  • ಮೈಕ್ರೋ ಫೈನಾನ್ಸ್ ಕಿರುಕುಳ – ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಸಾವು

    ಮೈಕ್ರೋ ಫೈನಾನ್ಸ್ ಕಿರುಕುಳ – ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಸಾವು

    – ಮಿಮ್ಸ್ ಶವಗಾರಕ್ಕೆ ಡಿಸಿ ಡಾ.ಕುಮಾರ್ ಭೇಟಿ

    ಮಂಡ್ಯ: ಮೈಕ್ರೋ ಫೈನಾನ್ಸ್ (Microfinance) ಕಿರುಕುಳ ಹಿನ್ನೆಲೆ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ಕೊನ್ನಾಪುರ ಗ್ರಾಮದ ಪ್ರೇಮಾ (59) ಮೃತ ಮಹಿಳೆ.

    ಉಜ್ಜೀವನ್ ಬ್ಯಾಂಕ್‍ನಿಂದ (Ujjivan Small Finance Bank) ಪ್ರೇಮ 6 ಲಕ್ಷ ರೂ. ಸಾಲ ಪಡೆದಿದ್ದರು. ಈಗಾಗಲೇ 6 ಲಕ್ಷ ರೂ. ಹಣವನ್ನು ಕಟ್ಟಿದ್ದರು. ಇನ್ನೂ 6 ಲಕ್ಷ ರೂ. ಹಣ ಕಟ್ಟಬೇಕೆಂದು ಪೀಡಿಸುತ್ತಿದ್ದ ಉಜ್ಜೀವನ್ ಸಿಬ್ಬಂದಿ, ಪ್ರೇಮಾ ಮನೆ ಸೀಜ್ ಮಾಡಿದ್ದರು. ಇದರಿಂದ ಮನನೊಂದು ನಿನ್ನೆ (ಮಂಗಳವಾರ) ಕ್ರಿಮಿನಾಶಕ ಸೇವನೆ ಮಾಡಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದರು.

    ಪ್ರೇಮಾರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು (ಬುಧವಾರ) ಚಿಕಿತ್ಸೆ ಫಲಕಾರಿಯಾಗದೇ ಪ್ರೇಮಾ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಪ್ರೇಮ ಮೃತದೇಹವನ್ನು ಮಿಮ್ಸ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.

    ಮೃತ ಪ್ರೇಮ ಮಗಳು ಮಾಣಿಕ್ಯ ಮಾಧ್ಯಮಗಳೊಂದಿಗೆ ಮಾತನಾಡಿ, ನಮ್ಮ ತಾಯಿ ಸಾವಿಗೆ ಉಜ್ಜೀವನ್ ಬ್ಯಾಂಕ್ ಸಿಬ್ಬಂದಿಯೇ ಕಾರಣ. 2018ರಲ್ಲಿ ನಮ್ಮ ತಾಯಿ 6 ಲಕ್ಷ ರೂ. ಸಾಲ ತೆಗೆದುಕೊಂಡಿದ್ದರು. ಇಲ್ಲಿಯವರೆಗೆ 6 ಲಕ್ಷ ರೂ. ಹಣವನ್ನು ನಮ್ಮ ತಾಯಿ ಕಟ್ಟಿದ್ದಾರೆ. ಕಟ್ಟಿರುವ ಹಣವನ್ನು ಬಡ್ಡಿಗೆ ಜಮೆ ಮಾಡಿಕೊಂಡಿದ್ದಾರೆ. ಇನ್ನೂ 6 ಲಕ್ಷ ಕಟ್ಟಿ ಅಂತಾ ಹಿಂಸೆ ಕೊಡುತ್ತಿದ್ದರು. ಮನೆ ಹತ್ತಿರ ಬಂದು ಗಲಾಟೆ ಮಾಡಿ ಮನೆ ಸೀಜ್ ಮಾಡಿದ್ದಾರೆ. ಇದಕ್ಕೆ ಮನನೊಂದು ಕ್ರಿಮಿನಾಶಕ ಮಾತ್ರೆ ಸೇವಿಸಿದ್ದಾರೆ. ಈಗ ನಮ್ಮ ತಾಯಿಯನ್ನು ಕಳೆದುಕೊಂಡಿದ್ದೇವೆ. ನಮಗೆ ಯಾರು ದಿಕ್ಕು ಎಂದು ಅಳಲು ತೋಡಿಕೊಂಡರು.

    ಈ ಹಿನ್ನೆಲೆ ಮಿಮ್ಸ್ ಶವಗಾರಕ್ಕೆ ಡಿಸಿ ಡಾ.ಕುಮಾರ್ ಭೇಟಿ ನೀಡಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಮೃತ ಪ್ರೇಮಾ ಉಜ್ಜೀವನ್ ಬ್ಯಾಂಕ್‍ನಿಂದ 6 ಲಕ್ಷ ರೂ.ಸಾಲ ತೆಗೆದುಕೊಂಡಿದ್ದಾರೆ. ಮಗಳ ಮದುವೆಗೆ ಪ್ರೇಮ ಸಾಲ ಮಾಡಿದ್ದರು. ಸಾಲ ತೆಗೆದುಕೊಂಡು ಕಂತು ಕಟ್ಟಿಕೊಂಡು ಬಂದಿದ್ದರು. ಕಳೆದ ಮೂರು ತಿಂಗಳು ಅವರು ಕಂತು ಕಟ್ಟಿಲ್ಲ. ಹೀಗಾಗಿ ಉಜ್ಜೀವನ್ ಬ್ಯಾಂಕ್ ಅವರು ಕೋರ್ಟ್‍ನಿಂದ ಮನೆ ಜಪ್ತಿ ಮಾಡಲು ಆರ್ಡರ್ ತಂದಿದ್ದಾರೆ. ನಂತರ ಬ್ಯಾಂಕ್ ಅವರು ಮನೆಯನ್ನು ಜಪ್ತಿ ಮಾಡಿದ್ದಾರೆ. ಇದಕ್ಕೆ ಮನನೊಂದು ಪ್ರೇಮ ಆತ್ಮಹತ್ಯೆ ಮಾಡಿಕೊಂಡಿರೋದು ದುರ್ದೈವ ಎಂದು ವಿಷಾದ ವ್ಯಕ್ತಪಡಿಸಿದರು.

    ಕೋರ್ಟ್ ಆರ್ಡರ್ ಇರೋದ್ರಿಂದ ನಾವು ಇತಿಮಿತಿಯಲ್ಲಿ ಕೆಲಸ ಮಾಡಬೇಕು. ಜಪ್ತಿ ಮಾಡಿರುವ ಮನೆಯನ್ನು ವಾಪಸ್ ನೀಡಲು ಬ್ಯಾಂಕ್‍ನವರಿಗೆ ಹೇಳಿದ್ದೇನೆ. ಜೊತೆಗೆ ಜಿಲ್ಲಾಡಳಿತದಿಂದ ಪರಿಹಾರದ ಬಗ್ಗೆಯೂ ಚಿಂತಿಸಿದ್ದೇವೆ. ಈಗ ಇವರ ಸಾಲ ಎಷ್ಟಿದೆ ಎಂದು ಬ್ಯಾಂಕ್‍ನವರಿಂದ ಮಾಹಿತಿ ಕೇಳಿದ್ದೇವೆ. ಅವರು ಬಂದು ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

  • Microfinance |  ಮನೆ, ಶಾಲೆಗೆ ಬಂದು ಟಾರ್ಚರ್‌ – ಶಿಕ್ಷಕಿಯ ಶವ ಎರಡು ದಿನದ ನಂತರ ಪತ್ತೆ

    Microfinance | ಮನೆ, ಶಾಲೆಗೆ ಬಂದು ಟಾರ್ಚರ್‌ – ಶಿಕ್ಷಕಿಯ ಶವ ಎರಡು ದಿನದ ನಂತರ ಪತ್ತೆ

    ದಾವಣಗೆರೆ: ಮೈಕ್ರೋ ಫೈನಾನ್ಸ್ (Microfinance) ಕಿರುಕುಳ ತಾಳಲಾರದೇ ತುಂಗಭದ್ರಾ ನದಿಗೆ (Tungabhadra River) ಹಾರಿ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿಯ ಶವ ಎರಡು ದಿನದ ನಂತರ ಪತ್ತೆಯಾಗಿದೆ.

    ಫೈನಾನ್ಸ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಸರ್ಕಾರಿ ಶಾಲೆಯ ಶಿಕ್ಷಕಿ (Teacher) ಪುಷ್ಪಲತಾ ಮೃತದೇಹ ಇಂದು ಬೆಳಗ್ಗೆ ತುಂಗಭದ್ರಾ ನದಿಯಲ್ಲಿ ಪತ್ತೆಯಾಗಿದೆ.

    ಹೊನ್ನಾಳಿ ಪಟ್ಟಣದ ನಿವಾಸಿ ಪುಷ್ಪಲತಾ ಹಾಗೂ ಆಕೆಯ ಪತಿ ಶಿಕ್ಷಕ ಹಾಲೇಶ್ ಇಬ್ಬರು ಮನೆ ಕಟ್ಟಲು ಶಿವಮೊಗ್ಗ ಮೂಲದ ಖಾಸಗಿ ಫೈನಾನ್ಸ್‌ನಲ್ಲಿ ಸಾಲ ಪಡೆದಿದ್ದರು.‌ ಒಂದು ಕಂತು ಬಾಕಿ ಇಟ್ಟುಕೊಂಡಿದ್ದಕ್ಕೆ ಫೈನಾನ್ಸ್‌ನವರ ಟಾರ್ಚರ್ ಹೆಚ್ಚಾಗಿತ್ತು.

     

    ಫೈನಾನ್ಸ್ ಸಿಬ್ಬಂದಿ ಮನೆ ಬಾಗಿಲಿಗೆ ಬರುತ್ತಿದ್ದರು. ಅಷ್ಟೇ ಅಲ್ಲದೇ ಶಾಲೆಯ ಬಳಿಗೂ ಬಂದು ಪೀಡಿಸುತ್ತಿದ್ದರು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಫೈನಾನ್ಸ್‌ನವರು ಪೊಲೀಸ್ ಸ್ಟೇಷನ್‌ನಲ್ಲಿ ಶಿಕ್ಷಕ ದಂಪತಿ ವಿರುದ್ದ ಕೇಸ್ ಕೂಡ ಹಾಕಿ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆಸಿದ್ದರು.

    ಪೊಲೀಸ್‌ ಠಾಣೆಗೆ ಕರೆಸಿದ್ದಕ್ಕೆ ಪುಷ್ಪಲತಾ ಮನ ನೊಂದಿದ್ದರು. ಡಿ. 26 ರಂದು ಗಣರಾಜ್ಯೋತ್ಸವ ದಿನದಂದು ಶಾಲೆಯ ಕಾರ್ಯಕ್ರಮ ಮುಗಿಸಿ ನದಿಗೆ ಹಾರಿದ್ದರು. ತುಂಗಭದ್ರಾ ನದಿಯ ಬಳಿಯ ರಾಘವೇಂದ್ರ ಮಠದ ಬಳಿ ಅವರ ಬ್ಯಾಗ್ ಹಾಗೂ ಮೊಬೈಲ್ ಪತ್ತೆ ಆಗಿತ್ತು. ಘಟನೆ ನಡೆದು ಮೂರನೇ ದಿನಕ್ಕೆ ಶವ ಪತ್ತೆಯಾಗಿದೆ.

    ಸೋಮವಾರದಿಂದ ಈಜು ಪರಿಣಿತರು ಹಾಗೂ ಅಗ್ನಿ ಶಾಮಕದಳದ ಸಿಬ್ಬಂದಿ ಶವಕ್ಕಾಗಿ ಶೋಧ ನಡೆಸುತ್ತಿದ್ದರು. ರಾಘವೇಂದ್ರ ಮಠದಿಂದ 1 ಕಿಲೋ ಮೀಟರ್ ದೂರದಲ್ಲಿ ಜಾಕ್‌ವೆಲ್ ಬಳಿ ತೆಲುತ್ತಿದ್ದ ಶವ‌ವನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ‌ ನೀಡಿದ್ದರು. ಇದನ್ನೂ ಓದಿ: Tumakuru| 4.66 ಲಕ್ಷಕ್ಕೆ 7.20 ಲಕ್ಷ ಬಡ್ಡಿ – ಹೃದಯಾಘಾತದಿಂದ ವ್ಯಕ್ತಿ ಸಾವು

    ತುಂಗಭದ್ರಾ ನದಿಗೆ ಪುಷ್ಪಲತಾ ಹಾರಲು ಹೊರಟಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿತ್ತು. ನದಿ ದಂಡೆಯ ಬಳಿ ಕುಳಿತು ಆಳವಾಗಿ ಯೋಚಿಸಿ ನದಿಗೆ ದುಮುಕಿದ್ದಾರೆ. ಈ ದೃಶ್ಯ ರಾಘವೇಂದ್ರಸ್ವಾಮಿ ಮಠದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

  • ಮೈಕ್ರೋ ಫೈನಾನ್ಸ್ ಮಟ್ಟ ಹಾಕಲು ಡಿಸಿಗೆ ಅಧಿಕಾರ: ಪರಮೇಶ್ವರ್

    ಮೈಕ್ರೋ ಫೈನಾನ್ಸ್ ಮಟ್ಟ ಹಾಕಲು ಡಿಸಿಗೆ ಅಧಿಕಾರ: ಪರಮೇಶ್ವರ್

    ತುಮಕೂರು: ಮೈಕ್ರೋ ಫೈನಾನ್ಸ್ (Microfinance) ಸಮಸ್ಯೆ ಕುರಿತು ಸಿಎಂ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ ನಡೆಸಲಾಗಿದೆ. ಮೈಕ್ರೋ ಫೈನಾನ್ಸ್‌ಗಳಿಗೆ ಸಬಂಧಿಸಿದಂತೆ ಈಗಿರುವ ಕಾನೂನು ಬಲಪಡಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್‌ (G.Parameshwar) ಹೇಳಿದ್ದಾರೆ.

    ತುಮಕೂರಿನಲ್ಲಿ (Tumakur ) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲದ ಹಣ ವಸೂಲಿ ಮಾಡಲು ಬಡವರಿಗೆ ತೊಂದರೆ ನೀಡುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹಾವಳಿ ನಿಯಂತ್ರಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೆ ತರಲಾಗುವುದು. ಸುಮೋಟೊ ಕೇಸ್ ತೆಗೆದುಕೊಳ್ಳಲು ಪೊಲೀಸರಿಗೆ ಅವಕಾಶವಿಲ್ಲ. ಇದಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

    ಅನಧಿಕೃತ ಫೈನಾನ್ಸ್ ಹಾವಳಿಯನ್ನು ಮಟ್ಟ ಹಾಕಲಾಗುವುದು. ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು. ಈ ವರ್ಷ ಏಳು ಜನರು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟು 14 ಪ್ರಕರಣ ದಾಖಲಾಗಿವೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಕಾನೂನು ಕ್ರಮ ತೆಗೆದುಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

  • ಸರ್ಕಾರದಿಂದಲೇ ಜನಸಾಮಾನ್ಯರಿಗೆ ಸಾಲ ನೀಡುವ ಕೆಲಸಗಳಾಗಬೇಕು: ಜಗದೀಶ್ ಶೆಟ್ಟರ್

    ಸರ್ಕಾರದಿಂದಲೇ ಜನಸಾಮಾನ್ಯರಿಗೆ ಸಾಲ ನೀಡುವ ಕೆಲಸಗಳಾಗಬೇಕು: ಜಗದೀಶ್ ಶೆಟ್ಟರ್

    ಹುಬ್ಬಳ್ಳಿ: ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಿರುವ ಮೈಕ್ರೋ ಫೈನಾನ್ಸ್ (Microfinance) ಕಂಪನಿ ಸಿಬ್ಬಂದಿ ಕಿರುಕುಳದಿಂದ ಜನರು ಬೇಸತ್ತಿದ್ದಾರೆ. ಹೀಗಾಗಿ, ಸರ್ಕಾರದಿಂದಲೇ ಜನಸಾಮಾನ್ಯರಿಗೆ ಸಾಲ ನೀಡುವ ಕೆಲಸಗಳಾಗಬೇಕು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಹೇಳಿದರು.

    ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ವಿಚಾರವಾಗಿ ಬಡ ಮತ್ತು ಮಧ್ಯಮವರ್ಗದ ಜನರು ತುರ್ತು ಸಂದರ್ಭದಲ್ಲಿ ಸಾಲ ತೆಗೆದುಕೊಂಡಿರುತ್ತಾರೆ. ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿ ಜನಸಾಮಾನ್ಯರಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ.

    ಈ ಬಗ್ಗೆ ನಿನ್ನೆ ಸಿಎಂ ಸಿದ್ದರಾಮಯ್ಯ (Siddaramaiah) ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದ್ದ ಕಾನೂನಿನಲ್ಲೇ ಕ್ರಮಕೈಗೊಳ್ಳಬಹುದಿತ್ತು. ಹೊಸ ಕಾನೂನು ತರುವ ಅವಶ್ಯಕತೆ ಇರಲಿಲ್ಲ. ಸಿಎಂ ಸುಮ್ಮನೇ ತೋರಿಕೆಗೆ ಸಭೆ ನಡೆಸಿದ್ದಾರೆ. ಈ ರೀತಿ ತೋರಿಕೆಗೆ ಸಭೆ ನಡೆಸಿ ಕ್ರಮಕೈಗೊಳ್ಳುವ ಭರವಸೆ ನೀಡುವುದು ಸಮಂಜಸವಲ್ಲ. ಈಗಾಗಲೇ ಇರುವಂತಹ ಕಾನೂನಿನಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದರು.

    ಆಮ್ ಆದ್ಮಿ ಪಕ್ಷದವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅವರ ಸಿಎಂ, ಡಿಸಿಎಂ ಎಲ್ಲರೂ ಜೈಲಿಗೆ ಹೋಗಿ ಬಂದವರು. ಅಲ್ಲದೇ ಆಪ್ ಪಕ್ಷದ ಎಂಟತ್ತು ಜನ ಸಚಿವರು ಸಹ ಜೈಲಿಗೆ ಹೋಗಿ ಬಂದಿದ್ದಾರೆ. ಈಗಲೂ ಸಹ ಕೆಲವೊಬ್ಬರು ಜೈಲಿನಲ್ಲಿದ್ದಾರೆ. ಬೇರೆಯವರ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಆಮ್ ಆದ್ಮಿಯವರಿಗೆ ಯಾವುದೇ ನೈತಿಕತೆ ಇಲ್ಲ. ರಾಹುಲ್ ಗಾಂಧಿ ಭ್ರಷ್ಟ ಅಂತಾ ಹೇಳ್ತಾರೆ. ಇಲ್ಲಿಯವರೆಗೂ ಇಂಡಿ ಜೊತೆ ಯಾಕೆ ಮೈತ್ರಿ ಮಾಡಿಕೊಂಡಿದ್ದರು? ಭ್ರಷ್ಟಾಚಾರದ ಬಗ್ಗೆ ಮಾತನಾಡುವವರು ಇಂಡಿ ಮೈತ್ರಿಕೂಟಕ್ಕೆ ಹೋಗಬಾರದಿತ್ತು. ಈಗ ಚುನಾವಣೆ ಹಿನ್ನೆಲೆ ಈ ರೀತಿ ಮಾತನಾಡುತ್ತಿದ್ದಾರೆ. ಇಡೀ ದೇಶವನ್ನು ಲೂಟಿ ಮಾಡಿದ ನಂಬರ್ ಒನ್ ಪಕ್ಷವೇ ಕಾಂಗ್ರೆಸ್. ರಾಹುಲ್ ಗಾಂಧಿ ಕುಟುಂಬ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಹುಲ್ ಗಾಂಧಿ ಬಗ್ಗೆ ಈಗ ಕೇಜ್ರಿವಾಲ್ ಅವರಿಗೆ ಜ್ಞಾನೋದಯವಾಗಿದೆ ಎಂದು ವ್ಯಂಗ್ಯ ಮಾಡಿದರು.

    ಬಿಜೆಪಿಯ ಆಂತರಿಕ ಒಳಜಗಳ ವಿಚಾರವಾಗಿ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್, ಪಕ್ಷದಲ್ಲಿ ಎಲ್ಲವೂ ಒಂದು ಹಂತಕ್ಕೆ ಬಂದಿದೆ. ವರಿಷ್ಠರು ಎಲ್ಲವನ್ನೂ ಸರಿಪಡಿಸಲಿದ್ದಾರೆ. ಪಕ್ಷ ಬಹುದೊಡ್ಡದಾಗಿ ಬೆಳದಾಗ ಆಂತರಿಕ ವೈಮನಸ್ಸು ಏರ್ಪಡುವುದು ಸಹಜ. ಶೀಘ್ರವೇ ಎಲ್ಲವೂ ಸರಿಹೋಗುತ್ತೆ. ಬಣ ರಾಜಕೀಯಕ್ಕೆ ಪಕ್ಷದ ವರಿಷ್ಠರು ಶೀಘ್ರದಲ್ಲೇ ತಿಲಾಂಜಲಿ ಹಾಡಲಿದ್ದಾರೆ ಎಂದರು.

    ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿ, ಈ ವಿಚಾರವಾಗಿ ಕಾಂಗ್ರೆಸ್‍ಗೆ ಹೋಗಲ್ಲ ಎಂದು ಶ್ರೀರಾಮುಲು ಈಗಾಗಲೇ ಹೇಳಿದ್ದಾರೆ. ಆದರೂ ಸಹ ಪಕ್ಷಕ್ಕೆ ಸ್ವಾಗತಿಸುತ್ತೇವೆ ಎನ್ನುವುದು ಕಾಂಗ್ರೆಸ್‍ನವರ ಬೆಂಕಿ ಹಚ್ಚುವ ಕೆಲಸವಾಗಿದೆ. ಕಾಂಗ್ರೆಸ್ ಕೇವಲ ಬೆಂಕಿ ಹಚ್ಚುವ ಕೆಲಸ ಮಾಡುತ್ತದೆ ಎಂದು ಕಿಡಿಕಾರಿದರು.