Tag: Micro Finance Company

  • ಮೈಕ್ರೊ ಫೈನಾನ್ಸ್ ಕಿರುಕುಳ ಆರೋಪ; ಗ್ರಾಮಗಳಿಗೆ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

    ಮೈಕ್ರೊ ಫೈನಾನ್ಸ್ ಕಿರುಕುಳ ಆರೋಪ; ಗ್ರಾಮಗಳಿಗೆ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

    ಚಾಮರಾಜನಗರ: ಚಾಮರಾಜನಗರ ತಾಲೂಕಿನ ಹೆಗ್ಗವಾಡಿಪುರ ಮತ್ತು ದೇಶವಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಹಲವು ಕುಟುಂಬಗಳು ಊರು ತೊರೆದಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್‌ ನೇತೃತ್ವದ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

    ಹೆಗ್ಗವಾಡಿಪುರ ಗ್ರಾಮದ ವಿದ್ಯಾರ್ಥಿಯೊಬ್ಬ, ಮೈಕ್ರೋ ಫೈನಾನ್ಸ್ ಕಿರುಕುಳ ಕುರಿತು ನೋವು ತೋಡಿಕೊಂಡಿರುವ ಬಗ್ಗೆ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ನಿರ್ದೇಶನದ ಮೇರೆಗೆ ತಹಸೀಲ್ದಾರ್ ಗಿರಿಜಾ ನೇತೃತ್ವದ ಅಧಿಕಾರಿಗಳ ತಂಡ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ವಿವರ ಪಡೆದರು.

    ತಹಸೀಲ್ದಾರ್ ಗಿರಿಜಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ಶಿರಸ್ತೇದಾರ್ ವಿನು, ರಾಜಸ್ವ ನಿರೀಕ್ಷಕ ಸತೀಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತ ಮತ್ತು ಗ್ರಾಮ ಆಡಳಿತ ಅಧಿಕಾರಿ ದಿಲೀಪ್, ಲೀಡ್ ಬ್ಯಾಂಕ್ ಪ್ರತಿನಿಧಿ ಮಧುಸೂಧನ್ ಅವರನ್ನೊಳಗೊಂಡ ಅಧಿಕಾರಿಗಳ ತಂಡ ದೇಶವಳ್ಳಿ, ಹೆಗ್ಗವಾಡಿಪುರ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿತು. ಹೆಗ್ಗವಾಡಿಪುರ ಗ್ರಾಮದ ವಿದ್ಯಾರ್ಥಿ ಮನೆಗೆ ತೆರಳಿ ಅವರ ತಾಯಿ ದಿವ್ಯಮಣಿ ಬಳಿ ಮೈಕ್ರೋ ಫೈನಾನ್ಸ್‌ಗಳಲ್ಲಿ ಪಡೆದಿರುವ ಸಾಲದ ಬಗ್ಗೆ ವಿಚಾರಿಸಿ ವಿವರ ಪಡೆದುಕೊಂಡರು.

    ಸಾಲ ನೀಡಿರುವ ಫೈನಾನ್ಸ್ ಸಂಸ್ಥೆಗಳು, ಪಡೆದಿರುವ ಮೊತ್ತ ಮತ್ತು ಇನ್ನಿತರ ವಿವರಗಳನ್ನು‌ ಅಧಿಕಾರಿಗಳ ತಂಡ ವಿವರವಾಗಿ ಕಲೆ ಹಾಕಿತು. ಸಾಲ ನೀಡಿರುವ ಬ್ಯಾಂಕುಗಳು, ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳು ಪ್ರತಿದಿನ ಮನೆ ಬಳಿ ಬಂದು ಸಾಲ ಕಟ್ಟುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಮಗೆ ಕಿರುಕಳ ನೀಡಿದ್ದಾರೆ. ಇದರಿಂದ ನಮ್ಮ ಮಗನ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ ಎಂದು ದಿವ್ಯಮಣಿ ಅವರು ಅಧಿಕಾರಿಗಳ ತಂಡದ ಬಳಿ ಅಳಲು ತೋಡಿಕೊಂಡರು.

    ಸದರಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಗಿರಿಜಾ ಅವರು ಹೇಳಿದರು. ಯಾವುದೇ ಮೈಕ್ರೋ ಫೈನಾನ್ಸ್ ಪ್ರತಿನಿಧಿ ಇನ್ಮುಂದೆ ಕಿರುಕುಳ ನೀಡಿದ್ದಲ್ಲಿ ಜಿಲ್ಲಾಡಳಿತ, ಪೊಲೀಸ್ ಅಥವಾ ಸ್ಥಳೀಯ ಅಧಿಕಾರಿಗಳಿಗೆ ದೂರು ಸಲ್ಲಿಸುವಂತೆ ತಹಸೀಲ್ದಾರ್ ಗಿರಿಜಾ ಅವರು ತಿಳಿಸಿದರು. ಪರಿಶೀಲನೆ ವೇಳೆ ದೇಶವಳ್ಳಿ ಗ್ರಾಮದ ಶೋಭ, ಸುಮ ಹಾಗೂ ಶಾರದ ಮತ್ತು ಹೆಗ್ಗವಾಡಿಪುರ ಗ್ರಾಮದ ನಾಗಮ್ಮ, ಪುಟ್ಟತಾಯಮ್ಮ ಎಂಬವರು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಹೆದರಿ ಊರು ಬಿಟ್ಟಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿರುವುದಾಗಿ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

    ಸದರಿ ಗ್ರಾಮಗಳ ಗ್ರಾಮಸ್ಥರಿಗೆ ಮೈಕ್ರೋ ಫೈನಾನ್ಸ್ ಸಂಬಂಧ ಜಾಗೃತಿ ನೀಡಲು ಸಂಕ್ರಾಂತಿ ಹಬ್ಬದ ಬಳಿಕ ಒಂದು ದಿನ ಗ್ರಾಮಸಭೆ ನಡೆಸಲು ಗ್ರಾಮಸ್ಥರು ಒಪ್ಪಿಗೆ ನೀಡಿದ್ದಾರೆ. ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿ ಭಯ ಪಡಬಾರದು. ಯಾರಾದರೂ ಕಿರುಕುಳ ನೀಡಿದ್ದಲ್ಲಿ ಜಿಲ್ಲಾಡಳಿತ, ಪೊಲೀಸ್ ಅಥವಾ ಸ್ಥಳೀಯ ಅಧಿಕಾರಿಗಳಿಗೆ ಕೂಡಲೇ ದೂರು ನೀಡಿ ಎಂದು ಗ್ರಾಮಸ್ಥರಿಗೆ ತಹಸೀಲ್ದಾರ್‌ ತಿಳಿಸಿ, ಧೈರ್ಯ ತುಂಬಿದರು.

  • ಕಿಡ್ನಿ ಮಾರಿ ಅಪ್ಪ-ಅಮ್ಮನ ಸಾಲ ತೀರಿಸ್ತೀನಿ, ಪರ್ಮಿಷನ್ ಕೊಡ್ಸಿ ಸರ್: ಸರ್ಕಾರಕ್ಕೆ ಬಾಲಕನ ಮನವಿ

    ಕಿಡ್ನಿ ಮಾರಿ ಅಪ್ಪ-ಅಮ್ಮನ ಸಾಲ ತೀರಿಸ್ತೀನಿ, ಪರ್ಮಿಷನ್ ಕೊಡ್ಸಿ ಸರ್: ಸರ್ಕಾರಕ್ಕೆ ಬಾಲಕನ ಮನವಿ

    – ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲದ ಕಿರುಕುಳಕ್ಕೆ ಬೇಸತ್ತು ಬಾಲಕ ಕಣ್ಣೀರು

    ಚಾಮರಾಜನಗರ: ಮೈಕ್ರೋ ಫೈನಾನ್ಸ್ ಕಂಪನಿಗಳ (Micro Finance Company) ಸಾಲದ ಕಿರುಕುಳ ಜಾಸ್ತಿಯಾಗಿದೆ. ನಮ್ಮ ಕಿಡ್ನಿ ಮಾರಿಯಾದರೂ ಅಪ್ಪ-ಅಮ್ಮನ ಸಾಲ ತೀರಿಸುತ್ತೇವೆ, ಅನುಮತಿ ಕೊಡಿಸಿ ಎಂದು ಸರ್ಕಾರಕ್ಕೆ ಬಾಲಕನೋರ್ವ ಮನವಿ ಮಾಡಿರುವ ಕರುಣಾಜನಕ ದೃಶ್ಯ ಮನಕಲಕುವಂತಿದೆ.

    ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತು ಚಾಮರಾಜನಗರ ಜಿಲ್ಲೆಯ ಹಲವೆಡೆ ಗ್ರಾಮ ತೊರೆದ 100 ಕ್ಕೂ ಹೆಚ್ಚು ಕುಟುಂಬಗಳು ಸಾಲ ತೀರಿಸಲಾಗದೆ ಮನೆಗೆ ಬೀಗ ಹಾಕಿ ಊರು ಖಾಲಿ ಮಾಡಿವೆ. ಹಲವೆಡೆ ಮಕ್ಕಳನ್ನು ಶಾಲೆ ಬಿಡಿಸಿ ಪೋಷಕರು ತಮ್ಮ ಜೊತೆ ಕರೆದೊಯ್ದಿದ್ದಾರೆ. ಸಾಲದ ಹೊಡೆತಕ್ಕೆ ಮಕ್ಕಳ ವಿದ್ಯಾಭ್ಯಾಸವೇ ಮೊಟಕುಗೊಳ್ಳುತ್ತಿದೆ. ಎಲ್ಲಿ ಹೋದರು ಎಂಬುದೇ ಗೊತ್ತಿಲ್ಲ. ಇದನ್ನೂ ಓದಿ: ಡಿಕೆಶಿ ಎರಡೂವರೆ ವರ್ಷ ಯಾಕೆ, ಮುಂದೆ ಐದು ವರ್ಷ ಸಿಎಂ ಆಗಲಿ: ಕೆ.ಎನ್.ರಾಜಣ್ಣ

    ಸಾಲದ ಜಾಲಕ್ಕೆ ಸಿಲುಕಿ ಕುಟುಂಬಗಳು ಊರನ್ನೇ ತೊರೆದು ಹೋಗಿವೆ. ಗೃಹಕೃತ್ಯದ ಖರ್ಚು ವೆಚ್ಚಗಳಿಗೆ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾಲ ಮಾಡಿಕೊಂಡಿದ್ದರು. ಸಾಲದ ಕಂತು ಕಟ್ಟುವುದು ಒಂದು ದಿನ ತಡವಾದರೂ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.

    ನಮ್ಮಮ್ಮ ಚಾಪೆ ಹಾಸಿ ಸಾಲ ಕಟ್ಟು ಅಂತಾರೆ ಸಾರ್. ಕೈ ಮುಗಿದು ಕೇಳಿಕೊಳ್ತೀನಿ. ನನ್ನ ಒಂದು ಕಿಡ್ನಿ ಮಾರೋಕೆ ಪರ್ಮಿಷನ್ ಕೊಡ್ಸಿ ಸರ್. ಕಿಡ್ನಿ ಮಾರಿ ಅಪ್ಪ-ಅಮ್ಮನ ಸಾಲ ತೀರಿಸಿ ಹೆಂಗೋ ಬದುಕೊಂಡು ಹೋಗ್ತೀವಿ. ಸರ್ಕಾರ ಪರ್ಮಿಷನ್ ಕೊಟ್ರೆ ನನ್ನ ಕಿಡ್ನಿ ಮಾರಿ ಸಾಲ ತೀರಿಸ್ತೀನಿ ಎಂದು ಬಾಲಕನೊಬ್ಬ ಮನವಿ ಮಾಡಿಕೊಂಡಿದ್ದಾನೆ.

    ಬಾಯಿಗೆ ಬಂದಂತೆ ಬಯ್ತಾರೆ, ರಾತ್ರಿ ವೇಳೆ ಹೊತ್ತಲ್ಲದ ಹೊತ್ತಿನಲ್ಲಿ ಬಂದು ಕೆಟ್ಟದಾಗಿ ಬಯ್ತಾರೆ, ಕಿರುಕುಳ ಕೊಡ್ತಾರೆ. ನಾವು ಸತ್ತೋಗ್ತೀವಿ ಬದುಕಲ್ಲ. ನಿಮ್ಮ ಎಜುಕೇಷನ್ ನೀವು ನೋಡ್ಕೊಂಡು ಹೋಗಿ ಅಂತ ಅಪ್ಪ-ಅಮ್ಮ ಹೇಳ್ತಿದ್ದಾರೆ. ನಮ್ಮ ಅಪ್ಪ-ಅಮ್ಮನನ್ನು ಬಿಟ್ಟು ನಾನು, ನನ್ನ ತಂಗಿ ಬದ್ಕೋಕ್ಕೆ ಆಗುತ್ತಾ ಸರ್. ನಾವೆಲ್ಲರು ಸಾಯ್ಬೇಕು ಅನ್ನೋ ಪರಿಸ್ಥಿತಿ ಬಂದಿದೆ. ದಯವಿಟ್ಟು ಕಿಡ್ನಿ ಮಾರೋಕೆ ಪರ್ಮಿಷನ್ ಕೊಡ್ಸಿ ಸರ್ ಎಂದು ಚಾಮರಾಜನಗರ ತಾಲೂಕು ಹೆಗ್ಗವಾಡಿಪುರದ ಬಾಲಕ ಅಳಲು ತೋಡಿಕೊಂಡಿದ್ದಾನೆ. ಇದನ್ನೂ ಓದಿ: ಅಧಿಕಾರಕ್ಕಾಗಿಯೇ ಶತ್ರು ಸಂಹಾರ ಪೂಜೆ: ಕುಮಾರಸ್ವಾಮಿ