Tag: Mico Layout

  • ಕ್ಯಾಂಪಸ್‌ ಸೆಲೆಕ್ಷನ್‌ ಆಗದೆ ಇದ್ದಿದ್ದಕ್ಕೆ ಖಿನ್ನತೆ – ಮಾಲ್‌ನಿಂದ ಹಾರಿ ಪದವೀಧರ ಆತ್ಮಹತ್ಯೆ!

    ಕ್ಯಾಂಪಸ್‌ ಸೆಲೆಕ್ಷನ್‌ ಆಗದೆ ಇದ್ದಿದ್ದಕ್ಕೆ ಖಿನ್ನತೆ – ಮಾಲ್‌ನಿಂದ ಹಾರಿ ಪದವೀಧರ ಆತ್ಮಹತ್ಯೆ!

    ಬೆಂಗಳೂರು: ಬಿಕಾಂ ಪದವೀಧರನೊಬ್ಬ ಮೈಕೋ ಲೇಔಟ್‌ನಲ್ಲಿರುವ (Mico Layout) ವೆಗಾಸಿಟಿ ಮಾಲ್‌ನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.

    ಮೃತ ಪದವೀಧರನನ್ನ ಸುಹಾಸ್‌ ಅಡಿಗ (21) ಎಂದು ಗುರುತಿಸಲಾಗಿದೆ. ಮಧ್ಯಾಹ್ನ 2.30ರ ಸುಮಾರಿಗೆ ವೆಗಾಸಿಟಿ ಮಾಲ್‌ಗೆ (Vega City Mall) ಪ್ರವೇಶಿಸಿ 4ನೇ ಮಹಡಿಗೆ ಹೋಗಿ ಜನರು ನೋಡನೋಡುತ್ತಿದ್ದಂತೆಯೇ ಕೆಳಗೆ ಹಾರಿದ್ದಾರೆ. ಸುಹಾಸ್‌ ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಾಗ್ಪುರದಲ್ಲಿ ದಾಖಲೆಯ 56 ಡಿಗ್ರಿ ಉಷ್ಣಾಂಶ- ಉತ್ತರಭಾರತದಲ್ಲಿ ಶಾಖಾಘಾತಕ್ಕೆ 210 ಸಾವು

    ಕೆಲಸ ಸಿಕ್ಕಿಲ್ಲವೆಂದು ಖಿನ್ನತೆ:
    ಮೃತ ಸುಹಾಸ್‌ ಬಳಿ ಯಾವುದೇ ಡೆತ್‌ನೋಟ್‌ ಪತ್ತೆಯಾಗಿಲ್ಲ. ಮೂರು ತಿಂಗಳ ಹಿಂದೆ ಕಾಲೇಜಿನಲ್ಲಿ ವಿವಿಧ ಕಂಪನಿಗಳು ಕ್ಯಾಂಪಸ್‌ ಸೆಲೆಕ್ಷನ್‌ ನಡೆಸಿದ್ದವು. ಸುಹಾಸ್‌ಗೆ ಕೆಲಸ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಅವರ ಪೋಷಕರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಘಟನೆ ಸಂಬಂಧ ಸುಹಾಸ್‌ ತಂದೆ ವಾಸುದೇವ ಅಡಿಗ ನೀಡಿರುವ ದೂರು ಆಧರಿಸಿ ಮೈಕೋ ಲೇಔಟ್‌ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಶನಿವಾರ 57 ಸ್ಥಾನಗಳಿಗೆ ಕೊನೇ ಹಂತದ ಚುನಾವಣೆ – ಕಣದಲ್ಲಿರುವ ಘಟಾನುಘಟಿಗಳು ಯಾರು? 

  • ಬೀಗ ಬೀಳುವ ಭೀತಿಯಲ್ಲಿದೆ ಬೆಂಗಳೂರಿನ ಅತಿ ದೊಡ್ಡ ಖಾಸಗಿ ಆಸ್ಪತ್ರೆ

    ಬೀಗ ಬೀಳುವ ಭೀತಿಯಲ್ಲಿದೆ ಬೆಂಗಳೂರಿನ ಅತಿ ದೊಡ್ಡ ಖಾಸಗಿ ಆಸ್ಪತ್ರೆ

    ಬೆಂಗಳೂರು: ನಗರದ ಅತಿ ದೊಡ್ಡ ಖಾಸಗಿ ಆಸ್ಪತ್ರೆಗೆ ಬೀಗ ಬೀಳುವ ಭೀತಿ ನಿರ್ಮಾಣವಾಗಿದೆ. ಕೊರೊನಾ ಸೋಂಕಿತೆ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ಕೊಟ್ಟಿದ್ದು, ಈ ಮಾಹಿತಿ ಜಿಲ್ಲಾಡಳಿತಕ್ಕೆ ಸಿಕ್ಕ ಹಿನ್ನೆಲೆಯಲ್ಲಿ ಸದ್ಯ ಆಸ್ಪತ್ರೆಗೆ ನೋಟಿಸ್ ನೀಡಲಾಗಿದೆ.

    ನಗರದ ಬಿಳೆಕಲ್ಲಹಳ್ಳಿ ವಾರ್ಡಿನ ಕೋಡಿಚಿಕ್ಕನಹಳ್ಳಿಯ ನಿವಾಸಿಯಾಗಿದ್ದ ವೃದ್ಧೆಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಕಳೆದ 10 ದಿನಗಳಿಂದ ಶೀತ, ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡ ಕಾರಣ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ನಡೆಸಲಾಗಿತ್ತು. ಆದರೆ ಇದಕ್ಕೂ ಮುನ್ನ ಮಹಿಳೆ ನಗರದ ಮೂರು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು.

    ನಗರದ ಬನ್ನೇರುಘಟ್ಟ, ಜಯನಗರ ಮತ್ತು ಮೈಕೋ ಲೇ ಔಟ್‍ನ ಪ್ರಮುಖ ಮೂರು ಖಾಸಗಿ ಆಸ್ಪತ್ರೆಗೆಗಳಿಗೆ ಕೊರೊನಾ ಸೋಂಕಿತೆ ಭೇಟಿ ನೀಡಿದ್ದರು. ಸದ್ಯ ಕೊರೊನಾ ಪಾಸಿಟಿವ್ ಖಚಿತವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ನೋಟಿಸ್ ನೀಡಿ ಬೀಗ ಜಡಿಯುವುದಕ್ಕೆ ಅಧಿಕಾರಿಗಳು ಸಜ್ಜಾಗುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ನಗರದ ಕೇಸ್ ನಂ.565ರ ಈಕೆ ಮೂರು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ. ಆ ಬಳಿಕ ಜಯನಗರ ಖಾಸಗಿ ಆಸ್ಪತ್ರೆ ಸೋಂಕಿತೆಯ ಸ್ವಾಬ್ ಟೆಸ್ಟ್ ನಡೆಸಿತ್ತು. ಆದರೆ ಸೋಂಕು ಇರುವುದು ಖಚಿತವಾಗಿದ್ದರೂ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ಅಲ್ಲದೇ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ನಮ್ಮ ಮನೆ ಡಾಕ್ಟರ್ ಇದ್ದು, ಅವರ ಬಳಿಯೇ ಚಿಕಿತ್ಸೆ ತೆಗೆದುಕೊಳ್ಳುತ್ತೇನೆ ಎಂದು ಅಲ್ಲಿಂದ ತೆರಳಿದ್ದಾರೆ.

    ಇತ್ತ ಜಯನಗರದ ಖಾಸಗಿ ಆಸ್ಪತ್ರೆ ಸಿಬ್ಬಂದಿ ಕೂಡ ಈಕೆಗೆ ಕೊರೊನಾ ಲಕ್ಷಣಗಳು ಕಂಡು ಬಂದರು ಸ್ಯಾಂಪಲ್ ತೆಗೆದುಕೊಂಡು ಮನೆಗೆ ಕಳಿಸಿದ್ದಾರೆ. ಈ ವೇಳೆ ಆಕೆಯನ್ನು ಖಾಸಗಿ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆ ವೇಳೆ ವಿಕ್ಟೋರಿಯಾದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದಾಗ ಸೋಂಕು ಇರುವುದು ಖಚಿತವಾಗಿತ್ತು. ಕೊರೊನಾ ಪಾಸಿಟಿವ್ ವರದಿ ಖಚಿತವಾದ ಹಿನ್ನೆಲೆಯಲ್ಲಿ ವೃದ್ಧೆಯ ಎಲ್ಲಿ ಹೋಗಿದ್ರು? ಹೇಗೆ ಬಂತು? ಇತ್ಯಾದಿ ಮಾಹಿತಿಗಳನ್ನು ಆರೋಗ್ಯ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.

  • ಫುಡ್ ಆರ್ಡರ್ ಪಡೆಯುವ ವಿಚಾರಕ್ಕೆ ಜಗಳ- ಸ್ನೇಹಿತನನ್ನೇ ಕೊಲೆಗೈದಿದ್ದವರು ಅಂದರ್

    ಫುಡ್ ಆರ್ಡರ್ ಪಡೆಯುವ ವಿಚಾರಕ್ಕೆ ಜಗಳ- ಸ್ನೇಹಿತನನ್ನೇ ಕೊಲೆಗೈದಿದ್ದವರು ಅಂದರ್

    ಬೆಂಗಳೂರು: ಸ್ನೇಹಿತನನ್ನೇ ಕೊಲೆ ಮಾಡಿ ಪರಾರಿಯಾಗಿದ್ದ, ಆರೋಪಿಗಳನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ಪ್ರವೀಣ್ ಹಾಗೂ ತೇಜಸ್ ಬಂಧಿತ ಆರೋಪಿಗಳು. ಬಿಟಿಎಂ ಲೇಔಟ್ 2ನೇ ಹಂತದ 16 ಮೇನ್ ಮನೆಯೊಂದರಲ್ಲಿ ಫೆಬ್ರವರಿ 28ರ ಬೆಳಗ್ಗೆ ಸುನಿಲ್‍ನನ್ನು (28) ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು.

    ಸುನಿಲ್, ಆರೋಪಿಗಳಾದ ಪ್ರವೀಣ್ ಮತ್ತು ತೇಜಸ್ ಖಾಸಗಿ ಫುಡ್ ಡೆಲಿವರಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಫುಡ್ ಆರ್ಡರ್ ಪಡೆದುಕೊಳ್ಳುವ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದರು. ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತ ಎನ್ನುವುದನ್ನೂ ನೋಡದೆ ಆರೋಪಿಗಳು  ಮಾರಣಾಂತಿಕ ಹಲ್ಲೆ ಮಾಡಿದ್ದರು.

    ಗಂಭೀರವಾಗಿ ಗಾಯಗೊಂಡಿದ್ದ ಸುನಿಲ್‍ನನ್ನ ಸ್ಥಳೀಯರು ಗಾಯಾಳು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುನಿಲ್ ಮಾರ್ಚ್ 4ರಂದು ಮೃತಪಟ್ಟಿದ್ದ. ಇತ್ತ ಆರೋಪಿಗಳು ಕೃತ್ಯದ ಬಳಿಕ ತುಮಕೂರಿನಲ್ಲಿ ತಲೆಮರೆಸಿಕೊಂಡಿದ್ದರು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮೈಕೋ ಲೇಔಟ್ ಪೊಲೀಸರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದರು. ಪ್ರವೀಣ್ ಮತ್ತು ತೇಜಸ್ ತುಮಕೂರಿನಲ್ಲಿ ಇರುವ ಮಾಹಿತಿ ಪಡೆದ ಪೊಲೀಸರು ತಂಡವನ್ನು ರಚಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

  • ‘ನನ್ನ ಲವ್ ಫೈಲುರ್ ಆಗಿದ್ದು ನಿನ್ನಿಂದಲೇ’- ಸ್ನೇಹಿತನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ

    ‘ನನ್ನ ಲವ್ ಫೈಲುರ್ ಆಗಿದ್ದು ನಿನ್ನಿಂದಲೇ’- ಸ್ನೇಹಿತನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ

    ಬೆಂಗಳೂರು: ನಮ್ಮಿಬ್ಬರ ಲವ್ ಬ್ರೇಕ್ ಅಪ್ ಆಗಲು ನೀನೇ ಕಾರಣ ಎಂದು ಕೋಪಗೊಂಡ ಯುವಕನೊಬ್ಬ ಸ್ನೇಹಿತನಿಗೆ ಲಾಂಗ್‍ನಿಂದ ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ನಗರದ ಮೈಕೋಲೇಔಟ್ ಪೊಲೀಸ್ ಠಾಣಾ ವ್ಯಾಪಿಯಲ್ಲಿ ನಡೆದಿದೆ.

    ಪ್ರಶಾಂತ್ ಸ್ನೇಹಿತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಆರೋಪಿ. ಮೈಕೋಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ಪ್ರಶಾಂತ್, ಕಳೆದ ಒಂದು ವರ್ಷಗಳಿಂದ ಪರಿಚಯದ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಯುವತಿಯೂ ಪ್ರಶಾಂತ್‍ನನ್ನು ಪ್ರೀತಿ ಮಾಡುತ್ತಿದ್ದ ಕಾರಣ ಇಬ್ಬರೂ ಪಾರ್ಕ್, ಸಿನಿಮಾ, ಮದುವೆ ಕನಸ ಕಂಡಿದ್ದರು.

    ಈ ನಡುವೆ ಇಬ್ಬರ ನಡುವೆ ಪ್ರಶಾಂತ್ ಸ್ನೇಹಿತ ಲೋಕೇಶ್ ಎಂಟ್ರಿಯಾಗಿದ್ದ. ಅಲ್ಲದೇ ಪ್ರಶಾಂತ್ ರೌಡಿಸಂ, ಪುಂಡಾಟಗಳ ಬಗ್ಗೆ ಯುವತಿಯ ಬಳಿ ಹೇಳಿದ್ದ. ಲೋಕೇಶ್ ಮಾತು ಕೇಳಿದ ಯುವತಿ ಪ್ರಶಾಂತ್‍ನನ್ನು ಬಿಟ್ಟು ದೂರವಾಗಿದ್ದಳು. ಇದರಿಂದ ನೊಂದ ಪ್ರಶಾಂತ್, ನನ್ನ ಲವ್ ಫೈಲ್ಯೂರ್ ಆಗಲು ಸ್ನೇಹಿತ ಲೋಕೇಶ್ ಕಾರಣ ಎಂದು ಧ್ವೇಷ ಬೆಳೆಸಿಕೊಂಡಿದ್ದ. ಇದೇ ಕೋಪದಲ್ಲಿ ಲೋಕೇಶ್ ಕುಡಿದ ಮತ್ತಿನಲ್ಲಿ ಮಲಗಿದ್ದ ಸ್ನೇಹಿತನ ಮೇಲೆ ಲಾಂಗ್ ನಿಂದ ಹಲ್ಲೆ ಮಾಡಿದ್ದ.

    ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಲೋಕೇಶ್ ಪ್ರಜ್ಞೆ ಕಳೆದುಕೊಂಡಿದ್ದ. ಇದನ್ನ ಕಂಡ ಪ್ರಶಾಂತ್, ಲೋಕೇಶ್ ಸಾವನ್ನಪ್ಪಿದ್ದಾನೆ ಎಂದು ಸ್ಥಳದಿಂದ ಪರಾರಿಯಾಗಿದ್ದ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮೈಕೋ ಲೇಔಟ್ ಪೊಲೀಸರು ಆರೋಪಿ ಪ್ರಶಾಂತ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.