Tag: Michelle Marsh

  • ಸನ್ ರೈಸರ್ಸ್‍ಗೆ ಆರಂಭಿಕ ಆಘಾತ – ಐಪಿಎಲ್‍ನಿಂದ ಮಿಚೆಲ್ ಮಾರ್ಷ್ ಔಟ್

    ಸನ್ ರೈಸರ್ಸ್‍ಗೆ ಆರಂಭಿಕ ಆಘಾತ – ಐಪಿಎಲ್‍ನಿಂದ ಮಿಚೆಲ್ ಮಾರ್ಷ್ ಔಟ್

    ಅಬುಧಾಬಿ: ಐಪಿಎಲ್ ಆರಂಭದಲ್ಲೇ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಘಾತ ಎದುರಾಗಿದ್ದು, ತಂಡದ ಸ್ಟಾರ್ ಆಲ್‍ರೌಂಡರ್ ಮಿಚೆಲ್ ಮಾರ್ಷ್ ಟೂರ್ನಿಯಿಂದ ಹೊರಬಂದಿದ್ದಾರೆ.

    ಕಳೆದ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಮಾರ್ಷ್ ಗಾಯಗೊಂಡಿದ್ದರು. ಬೌಲಿಂಗ್ ಮಾಡುವ ವೇಳೆ ಹೊಸ ಶೂ ಧರಿಸಿದ್ದ ಕಾರಣ ಅವರ ಪಾದಕ್ಕೆ ಗಾಯವಾಗಿತ್ತು. ಈಗ ಇದೇ ಸಮಸ್ಯೆಯಿಂದ ಮಾರ್ಷ್ ಟೂರ್ನಿಯಿಂದ ಹೊರಬಂದಿದ್ದು, ಹೈದರಾಬಾದ್ ತಂಡಕ್ಕೆ ಆರಂಭಿಕ ಹಿನ್ನೆಡೆಯಾಗಿದೆ.

    ಈ ವಿಚಾರವಾಗಿ ತನ್ನ ಅಧಿಕೃತ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ, ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಮಿಚೆಲ್ ಮಾರ್ಷ್ ಅವರು ಟೂರ್ನಿಯಿಂದ ಹೊರಬಂದಿದ್ದಾರೆ. ಅವರು ಬೇಗ ಗಾಯದಿಂದ ಗುಣಮುಖರಾಗಲಿ ಎಂದು ನಾವು ಹಾರೈಸುತ್ತೇವೆ. ವೆಸ್ಟ್ ಇಂಡೀಸ್ ತಂಡದ ಆಲ್‍ರೌಂಡರ್ ಜೇಸನ್ ಹೋಲ್ಡರ್ ಅವರು ಅವರ ಜಾಗಕ್ಕೆ ಬಂದಿದ್ದಾರೆ ಎಂದು ಮಾಹಿತಿ ನೀಡಿದೆ.

    ಸೋಮವಾರ ನಡೆದ ಆರ್‍ಸಿಬಿ ವಿರುದ್ಧ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಅವರು ಐದನೇ ಓವರ್ ಬೌಲಿಂಗ್ ಮಾಡಿದ್ದರು. ಈ ಓವರಿನ ಎರಡನೇ ಬಾಲ್ ಎಸೆದಾಗ ಫಿಂಚ್ ಅವರು ಅದನ್ನು ನೇರವಾಗಿ ಹೊಡೆದರು, ಈ ವೇಳೆ ಇದನ್ನು ತಡೆಯಲು ಹೋಗಿ ಮಾರ್ಷ್ ಅವರು ತಮ್ಮ ಪಾದಕ್ಕೆ ಗಾಯ ಮಾಡಿಕೊಂಡಿದ್ದರು. ಇದಾದ ನಂತರವೂ ಕೂಡ ಎರಡು ಬಾಲ್ ಬೌಲ್ ಮಾಡಿದ ಮಾರ್ಷ್ ನಂತರ, ಪಾದದ ನೋವಿನಿಂದ ಮೈದಾನದಿಂದ ಹೊರಬಂದಿದ್ದರು.

    ಕೇವಲ ನಾಲ್ಕು ಬಾಲ್ ಬೌಲ್ ಮಾಡಿ ಮಾರ್ಷ್ ಹೊರಬಂದರು, ಇದಾದ ನಂತರ ವಿಜಯ್ ಶಂಕರ್ ಅವರು ಉಳಿದ ಎರಡು ಬಾಲನ್ನು ಹಾಕಿದ್ದರು. ನಂತರ ಹೈದರಾಬಾದ್ ಬ್ಯಾಟಿಂಗ್ ವೇಳೆ ಕೂಡ ಗಾಯವಾಗಿದ್ದರೂ ಮಿಚೆಲ್ ಮಾರ್ಷ್ ತಂಡಕ್ಕಾಗಿ ಬ್ಯಾಟಿಂಗ್ ಬೀಸಲು ಬಂದಿದ್ದರು. ಆದರೆ ಮೊದಲ ಬಾಲಿನಲ್ಲೇ ಕ್ಯಾಚ್ ಕೊಟ್ಟು ಔಟ್ ಆದರು. ಆದರೆ ನಿಲ್ಲಲೂ ಆಗದ ಸ್ಥಿತಿಯಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿದೆ ಎಂದು ಬ್ಯಾಟಿಂಗ್ ಮಾಡಲು ಬಂದ ಮಾರ್ಷ್‍ಗೆ ಅಪಾರ ಪ್ರಮಾಣದ ಮೆಚ್ಚುಗೆ ವ್ಯಕ್ತವಾಗಿತ್ತು.