Tag: Micheal Klinger

  • ಓವರಿನ 7ನೇ ಎಸೆತಕ್ಕೆ ಔಟ್- ಬಿಗ್ ಬ್ಯಾಶ್ ಲೀಗ್‍ನಲ್ಲಿ ವಿವಾದಕ್ಕೆ ಕಾರಣವಾಯ್ತು ತೀರ್ಪು

    ಓವರಿನ 7ನೇ ಎಸೆತಕ್ಕೆ ಔಟ್- ಬಿಗ್ ಬ್ಯಾಶ್ ಲೀಗ್‍ನಲ್ಲಿ ವಿವಾದಕ್ಕೆ ಕಾರಣವಾಯ್ತು ತೀರ್ಪು

    ಪರ್ತ್: ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅಂಪೈರ್ ಧೋನಿ ಎಲ್‍ಬಿ ಔಟ್ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈಗ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಶ್ ಲೀಗ್(ಬಿಬಿಎಲ್) ನಲ್ಲಿ ಬ್ಯಾಟ್ಸ್ ಮನ್ ಔಟ್ ಆಗಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.

    ಭಾನುವಾರ ಪರ್ತ್ ಸ್ಕೋಚರ್ಸ್ ಮತ್ತು ಸಿಡ್ನಿ ಸಿಕ್ಸರ್ ತಂಡಗಳ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಡ್ನಿ ಸಿಕ್ಸರ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತ್ತು. ಭಾರೀ ಮೊತ್ತವನ್ನು ಬೆನ್ನಟ್ಟಲು ಕ್ರೀಸ್ ಗೆ ಇಳಿದ ಆರಂಭಿಕ ಆಟಗಾರ ಮೈಕಲ್ ಕ್ಲಿಂಗರ್ ಔಟ್ ಆಗಿರುವ ವಿಷಯ ಈಗ ದೊಡ್ಡ ವಿವಾದವಾಗಿ ಹೊರಹೊಮ್ಮಿದೆ.

    ಪಂದ್ಯದಲ್ಲಿ ಪರ್ಥ್ ಸ್ಕಾರ್ಚರ್ಸ್ ತಂಡದ ಮೈಕಲ್ ಕ್ಲಿಂಗರ್ ಎರಡನೇ ಓವರಿನ 7ನೇ ಎಸೆತದಲ್ಲಿ ಔಟ್ ಆಗಿದ್ದಾರೆ. 2 ರನ್ ಗಳಿಸಿದ ಮೈಕಲ್ ನೇರವಾಗಿ ಸ್ವೀವ್ ಓ ಕೀಫಿ ಅವರಿಗೆ ಕ್ಯಾಚ್ ನೀಡಿದ್ದಾರೆ. ಆದರೆ ಅದು ಎರಡನೇ ಓವರ್ ನ ಏಳನೇ ಎಸೆತ ಎನ್ನುವುದನ್ನು ಅಂಪೈರ್ ಸೇರಿದಂತೆ ಎಲ್ಲರು ಮರೆತಿದ್ದರು. ಇತ್ತ ಕ್ಯಾಚ್ ಪಡೆದ ಸ್ವೀವ್ ಸಂಭ್ರಮದಲ್ಲಿದ್ರೆ, ಮೈಕಲ್ ಸೇರಿದಂತೆ ಎಲ್ಲರು ಗೊಂದಲದಲ್ಲಿದ್ದರು.

    ಬೌಲರ್ ಬೆನ್ ಆ ಓವರ್ ನಲ್ಲಿ ಯಾವುದೇ ವೈಡ್ ಅಥವಾ ನೋ ಬಾಲ್ ಹಾಕಿರಲಿಲ್ಲ. ಆದರೂ ಅಂಪೈರ್ ಏಳನೇ ಎಸೆತಕ್ಕೆ ಅವಕಾಶ ನೀಡಿದ್ದು ದೊಡ್ಡ ಚರ್ಚೆಗೆ ನಾಂದಿಯಾಗಿದೆ. ಔಟ್ ಬಳಿಕ ತೀರ್ಪನ್ನು ಮರು ಪರಿಶೀಲನೆ ನಡೆಸಿದಾಗ ಬೌಲರ್ ಒಂದು ಓವರ್ ನಲ್ಲಿ ಆರರ ಬದಲಾಗಿ ಏಳು ಎಸೆತ ಹಾಕಿರುವುದು ಖಚಿತವಾಗಿದೆ. ಬೌಲ್ ಸಂಖ್ಯೆಯನ್ನು ಅಂಪೈರ್ ಅಥವಾ ಕಮೆಂಟರಿ ನೀಡುವವರು ಅಥವಾ ಪಂದ್ಯದ ಯಾವ ಅಧಿಕಾರಿಗಳು ಗಮನಿಸದೇ ಇದ್ದಿದ್ದರಿಂದ ಈ ಎಡವಟ್ಟು ಸಂಭವಿಸಿದೆ.

    ಲೈವ್ ಪ್ರಸಾರದ ಜೊತೆಗೆ ಈಗ ಕ್ರಿಕೆಟ್ ನಲ್ಲಿ ಸಾಕಷ್ಟು ತಂತ್ರಜ್ಞಾನಗಳು ಬಂದಿದ್ದರೂ ಈ ರೀತಿ ಎಡವಟ್ಟು ನಡೆದಿದ್ದು ಹೇಗೆ? ಈ ತೀರ್ಪನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಂಪೈರ್ ಈ ಎಸೆತವನ್ನು ಡೆಡ್ ಬಾಲ್ ಎಂದು ಪರಿಗಣಿಸಬೇಕಿತ್ತು ಎಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    178 ರನ್ ಗಳ ಗುರಿ ಬೆನ್ನಟ್ಟಿದ ಪರ್ತ್ ಸ್ಕೋಚರ್ಸ್ 18.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿತು. ಕೆಮರೂನ್ ಬೆನ್‍ಕ್ರಾಫ್ಟ್ 87 ರನ್(61 ಎಸೆತ, 8 ಬೌಂಡರಿ, 1 ಸಿಕ್ಸರ್) ಅಸ್ಟಿನ್ ಟರ್ನರ್ 60 ರನ್(30 ಎಸೆತ, 4 ಬೌಂಡರಿ, 3 ಸಿಕ್ಸರ್) ಸಿಡಿಸಿ ತಂಡಕ್ಕೆ ಗೆಲುವನ್ನು ತಂದುಕೊಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv