Tag: Michael Vaughan

  • ರೋಹಿತ್‌, ಗಿಲ್‌ ಅಲ್ಲ; ಟೀಂ ಇಂಡಿಯಾದ ಈ ಆಟಗಾರ ಇಂಗ್ಲೆಂಡ್‌ಗೆ ಸಮಸ್ಯೆ – ಮೈಕೆಲ್‌ ವಾನ್‌

    ರೋಹಿತ್‌, ಗಿಲ್‌ ಅಲ್ಲ; ಟೀಂ ಇಂಡಿಯಾದ ಈ ಆಟಗಾರ ಇಂಗ್ಲೆಂಡ್‌ಗೆ ಸಮಸ್ಯೆ – ಮೈಕೆಲ್‌ ವಾನ್‌

    ವಿಶಾಖಪಟ್ಟಣಂ: ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲೇ ದ್ವಿಶತಕ ಸಿಡಿಸಿದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್‌ (England) ತಂಡಕ್ಕೆ ಮುಳುವಾಗಿದ್ದಾರೆ. ಈ ಬಗ್ಗೆ ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಮೈಕೆಲ್‌ ವಾನ್‌ (Michael Vaughan) ಅವರೇ ಖುದ್ದಾಗಿ ಹೇಳಿಕೊಂಡಿದ್ದಾರೆ.

    ಪಾಡ್‌ಕಾಸ್ಟ್‌ ಸಂದರ್ಶನವೊಂದರಲ್ಲಿ ಮಾತನಾಡಿರುವ ಮೈಕೆಲ್‌ ವಾನ್‌, ಶುಭಮನ್‌ ಗಿಲ್‌, ರೋಹಿತ್‌ ಶರ್ಮಾ ಅಲ್ಲ, ಯಶಸ್ವಿ ಜೈಸ್ವಾಲ್‌ (Yashasvi Jaiswal) ಇಂಗ್ಲೆಂಡ್‌ ತಂಡಕ್ಕೆ ದೊಡ್ಡ ಸಮಸ್ಯೆಯಾಗಿದ್ದಾರೆ. ನಂಬಲಸಾಧ್ಯವಾದ ಆಟಗಾರ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ 106 ರನ್‌ಗಳ ಭರ್ಜರಿ ಜಯ – WTC ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿತ

    2023ರ ಐಪಿಎಲ್‌ (IPL) ಟೂರ್ನಿಯಲ್ಲಿ ಯಶಸ್ವಿ ಜೈಸ್ವಾಲ್‌ ಅವರನ್ನು ನಾನು ಭೇಟಿಯಾಗಿದ್ದೆ. ಮರುದಿನವೇ ಅವರು ಮುಂಬೈ ಇಂಡಿಯನ್ಸ್‌ ವಿರುದ್ಧ ಚೊಚ್ಚಲ ಐಪಿಎಲ್‌ ಶತಕ (62 ಎಸೆತಗಳಲ್ಲಿ 124 ರನ್‌) ಸಿಡಿಸಿದ್ದರು. ಇದೀಗ ವಿಶ್ವದ ಅತ್ಯುತ್ತಮ ತಂಡದ ವಿರುದ್ಧ ದ್ವಿಶತಕ ಸಿಡಿಸಿದ್ದಾರೆ. ಈತ ಇಂಗ್ಲೆಂಡ್‌ ತಂಡಕ್ಕೆ ಸಮಸ್ಯೆ ಎಂದು ನಾನು ಖುದ್ದಾಗಿ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

    ದ್ವಿಶತಕ ಸಿಡಿಸಿದ್ದ 3ನೇ ಕಿರಿಯ ಆಟಗಾರ:
    ಈವರೆಗೆ ರಣಜಿ ಟ್ರೋಫಿ, ದುಲೀಪ್‌ ಟ್ರೋಫಿ, ಇರಾನಿ ಕಪ್‌ ಟೂರ್ನಿಗಳಲ್ಲಿ ದ್ವಿಶತಕ ಸಿಡಿಸಿದ್ದ 22 ವರ್ಷ ವಯಸ್ಸಿನ ಯಶಸ್ವಿ ಜೈಸ್ವಾಲ್‌ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ಚೊಚ್ಚಲ ದ್ವಿಶತಕದ ಖಾತೆ ತೆರೆದರು. 277 ಎಸೆತಗಳಲ್ಲಿ 200 ರನ್‌ (18 ಬೌಂಡರಿ, 7 ಸಿಕ್ಸರ್) ಬಾರಿಸುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ಈ ಸಾಧನೆ ಮಾಡಿದ ಭಾರತದ 3ನೇ ಕ್ರಿಕೆಟಿಗ ಎನಿಸಿಕೊಂಡರು.

    ವಿಶೇಷ ಸಾಧನೆ ಮಾಡಿದ ಕಿರಿಯ ಆಟಗಾರ:
    2ನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆಂಗ್ಲರ ವಿರುದ್ಧ ಬ್ಯಾಟಿಂಗ್‌ ಪ್ರಾಬಲ್ಯ ಮೆರೆದ ಜೈಸ್ವಾಲ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ (Test Cricket) ದ್ವಿಶತಕ ಸಿಡಿಸಿದ 3ನೇ ಕಿರಿಯ ಭಾರತೀಯ ಕ್ರಿಕೆಟಿಗ ಎಂಬ ವಿಶೇಷ ಸಾಧನೆಗೆ ಪಾತ್ರರಾದರು. 1993ರಲ್ಲಿ ವಾಂಖೆಡೆ ಮೈದಾನದಲ್ಲಿ ವಿನೋಂದ್‌ ಕಾಂಬ್ಳಿ (21 ವರ್ಷ, 32 ದಿನಗಳು), ನಂತರ ಸುನೀಲ್‌ ಗವಾಸ್ಕರ್‌ 21 ವರ್ಷ 277 ದಿನಗಳಿದ್ದಾಗ ಈ ಸಾಧನೆ ಮಾಡಿದ್ದರು. ಆದ್ರೆ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲೇ ದ್ವಿಶತಕ ಬಾರಿಸಿದ ಸಾಧನೆ ಜಾವೇದ್ ಮಿಯಾಂದಾದ್ ಹೆಸರಿನಲ್ಲಿದೆ. ಜಾವೇದ್‌ 19 ವರ್ಷ, 140 ದಿನಗಳ ವಯಸ್ಸಿನಲ್ಲಿ ತಮ್ಮ ಸಾಧನೆ ಮಾಡಿದ್ದರು. ಇದನ್ನೂ ಓದಿ: ಆಂಗ್ಲರ ವಿರುದ್ಧ ಯಶಸ್ವಿ ಜೈಸ್ವಾಲ್‌ ಬೊಂಬಾಟ್‌ ಶತಕ – ಬೃಹತ್‌ ಮೊತ್ತದತ್ತ ಭಾರತ

    ಅಲ್ಲದೇ ಜೈಸ್ವಾಲ್‌ ಅವರು ಸೌರವ್‌ ಗಂಗೂಲಿ, ಗೌತಮ್ ಗಂಭೀರ್ ಮತ್ತು ವಿನೋದ್‌ ಕಾಂಬ್ಳಿ ಅವರನ್ನು ಹೊರತುಪಡಿಸಿ ಟೆಸ್ಟ್‌ ದ್ವಿಶತಕ ಸಿಡಿಸಿದ ಭಾರತದ 4ನೇ ಎಡಗೈ ಆಟಗಾರನಾಗಿದ್ದಾರೆ.

    ಫೆ.15ರಂದು 3ನೇ ಟಸ್ಟ್‌:
    ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್‌ ಸರಣಿ ಪೈಕಿ ಈಗಾಗಲೇ 2 ಪಂದ್ಯಗಳು ಮುಕ್ತಾಯಗೊಂಡಿದ್ದು 1-1 ರಲ್ಲಿ ಸಮಬಲಗೊಂಡಿದೆ. ಫೆ.15ರಂದು ರಾಜ್‌ಕೋಟ್‌ ಮೈದಾನದಲ್ಲಿ 3ನೇ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಮೊದಲ ದಿನವೇ ʻಯಶಸ್ವಿʼ ಶತಕದ ಹೋರಾಟ – ಭರ್ಜರಿ ಮೊತ್ತದತ್ತ ಭಾರತ

  • ಕೊಹ್ಲಿ ಇಲ್ಲದ ಟೆಸ್ಟ್ ಟೂರ್ನಿಯಲ್ಲಿ ಆಸೀಸ್ ಸುಲಭ ಜಯ ಪಡೆಯಲಿದೆ- ಮೈಕಲ್ ವಾನ್ ಭವಿಷ್ಯ

    ಕೊಹ್ಲಿ ಇಲ್ಲದ ಟೆಸ್ಟ್ ಟೂರ್ನಿಯಲ್ಲಿ ಆಸೀಸ್ ಸುಲಭ ಜಯ ಪಡೆಯಲಿದೆ- ಮೈಕಲ್ ವಾನ್ ಭವಿಷ್ಯ

    ಮುಂಬೈ: ಐಪಿಎಲ್ 2020ರ ಟೂರ್ನಿ ಮುಕ್ತಾಯದೊಂದಿಗೆ ಟೀಂ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಗೆ ಪ್ರವಾಸ ಕೈಗೊಂಡಿದ್ದಾರೆ. ಕೊರೊನಾ ಬಳಿಕ ಟೀಂ ಇಂಡಿಯಾ, ಆಸೀಸ್ ವಿರುದ್ಧ ತನ್ನ ಮೊದಲ ಅಂತಾರಾಷ್ಟ್ರೀಯ ಟೂರ್ನಿಯನ್ನು ಆಡುತ್ತಿದೆ.

    ಆಸ್ಟ್ರೇಲಿಯಾ ನೆಲದಲ್ಲಿ ಮೂರು ತಿಂಗಳ ಕಾಲ ಟೀಂ ಇಂಡಿಯಾ ಏಕದಿನ, ಟಿ20, ಟೆಸ್ಟ್ ಟೂರ್ನಿಗಳನ್ನು ಆಡಲಿದ್ದು, ಇದರಲ್ಲಿ ಒಂದು ಡೇ ಅಂಡ್ ನೈಟ್ ಪಂದ್ಯವೂ ಸೇರಿದೆ. ಆದರೆ ಟೆಸ್ಟ್ ಟೂರ್ನಿಯ ಅಂತಿಮ ಮೂರು ಪಂದ್ಯಗಳಿಂದ ಕೊಹ್ಲಿ ದೂರವಾಗಿದ್ದು, ಕೌಟುಂಬಿಕ ಕಾರಣದಿಂದ ಕೊಹ್ಲಿ ಭಾರತಕ್ಕೆ ವಾಪಸ್ ಆಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್ ಮಾಜಿ ಆಟಗಾರ ಮೈಕಲ್ ವಾನ್, ಕೊಹ್ಲಿ ಇಲ್ಲದ ಭಾರತದ ತಂಡದ ವಿರುದ್ಧ ಆಸ್ಟ್ರೇಲಿಯಾ ಟೆಸ್ಟ್ ಟೂರ್ನಿಯಲ್ಲಿ ಸುಲಭ ಜಯ ಪಡೆಯಲಿದೆ ಎಂದು ಹೇಳಿದ್ದಾರೆ.

    ವಿರಾಟ್ ಕೊಹ್ಲಿ ಇಲ್ಲದ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಗೆಲ್ಲುವುದು ಕಷ್ಟ. ಕೊಹ್ಲಿ ತನ್ನ ಮೊದಲ ಮಗುವಿಗಾಗಿ ತೆಗೆದುಕೊಂಡ ನಿರ್ಣಯ ಉತ್ತಮವಾಗಿದೆ. ಆದರೆ ಇದು ಆಸೀಸ್ ತಂಡಕ್ಕೆ ವರದಾನವಾಗುವ ಸಾಧ್ಯತೆ ಇದೆ. ನನ್ನ ಪ್ರಕಾರ ಆಸೀಸ್ ಟೆಸ್ಟ್ ಟೂರ್ನಿಯಲ್ಲಿ ಸುಲಭ ಜಯ ಪಡೆಯಲಿದೆ ಎಂದು ವಾನ್ ಟ್ವೀಟ್ ಮಾಡಿದ್ದಾರೆ. ಉಳಿದಂತೆ ಬಿಸಿಸಿಐ ಸದ್ಯ ರೋಹಿತ್ ಶರ್ಮಾ ಅವರಿಗೆ ಸೀಮಿತ ಓವರ್ ಗಳ ಕ್ರಿಕೆಟ್ ಟೂರ್ನಿಯಿಂದ ಸಂಪೂರ್ಣವಾಗಿ ವಿಶ್ರಾಂತಿ ನೀಡಿದ್ದು, ಟೆಸ್ಟ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದ ಬಳಿಕ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

    ಇತ್ತ ಐಪಿಎಲ್ ಪ್ರಶಸ್ತಿ ಗೆದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಶುಭಕೋರಿದ್ದ ಮೈಕಲ್ ವಾನ್, ರೋಹಿತ್ ಶರ್ಮಾರನ್ನು ಹಾಡಿಹೊಗಳಿದ್ದರು. ಅಲ್ಲದೇ ಟೀಂ ಇಂಡಿಯಾ ಟಿ20 ನಾಯಕನನ್ನಾಗಿ ರೋಹಿತ್ ಶರ್ಮಾರನ್ನು ಆಯ್ಕೆ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದರು.

  • ಈ ಬಾರಿ ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲುತ್ತದೆಯೆಂದು ಭಾವಿಸಬೇಡಿ: ಮೈಕಲ್ ವಾನ್

    ಈ ಬಾರಿ ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲುತ್ತದೆಯೆಂದು ಭಾವಿಸಬೇಡಿ: ಮೈಕಲ್ ವಾನ್

    – ಕೊಹ್ಲಿ ಎಡಗೈಯಲ್ಲಿ ಬ್ಯಾಟ್ ಮಾಡಿ ತಂಡವನ್ನು ಗೆಲ್ಲಿಸಬಹುದು

    ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಐಪಿಎಲ್ ಗೆಲ್ಲುತ್ತದೆ ಎಂದು ಭಾವಿಸಬೇಡಿ ಎಂದು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕಲ್ ವಾನ್ ಹೇಳಿದ್ದಾರೆ.

    ಸೋಮವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡ ಹೀನಾಯವಾಗಿ ಸೋತಿದೆ. ಸತತ ನಾಲ್ಕು ಸೋಲಿನ ನಂತರವೂ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಪ್ಲೇ ಆಫ್‍ಗೆ ಆಯ್ಕೆಯಾಗಿದೆ. ಈ ಮೂಲಕ ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಮೈಕಲ್ ವಾನ್ ಮಾತ್ರ ಈ ಬಾರಿ ಆರ್‌ಸಿಬಿ ಕಪ್ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.

    ಕಾರ್ಯಕ್ರಮದಲ್ಲಿ ಮಾತನಾಡಿರುವ ವಾನ್, ನಾನು ಆರಂಭದಿಂದಲೂ ಹೇಳುತ್ತಿದ್ದೇನೆ ಬೆಂಗಳೂರು ತಂಡ ಈ ಬಾರಿ ಕಪ್ ಗೆಲ್ಲುವುದು ಅನುಮಾನ. ಏಕೆಂದರೆ ಟೂರ್ನಿಯುದ್ದಕ್ಕೂ ಆರ್‌ಸಿಬಿ ಕಪ್ ಗೆಲ್ಲುವ ರೀತಿಯ ಪದರ್ಶನ ತೋರಿಲ್ಲ ಎಂದು ವಾನ್ ಹೇಳಿದ್ದಾರೆ. ಇದರ ಜೊತೆಗೆ ಇದು 2020 ಈ ವರ್ಷ ಏನೂ ಬೇಕಾದರೂ ಆಹಬಹುದು. ವಿರಾಟ್ ಕೊಹ್ಲಿಯವರು ಎಡಗೈನಲ್ಲಿ ಬ್ಯಾಟ್ ಮಾಡಿ ತಂಡವನ್ನು ಗೆಲ್ಲಿಸಬಹುದು ಆದರೆ ಅದು ಕಷ್ಟ ಎಂದು ವ್ಯಂಗ್ಯವಾಡಿದ್ದಾರೆ.

    ಬೆಂಗಳೂರು ತಂಡದಲ್ಲಿ ಮೂರು ನಾಕೌಟ್ ಪಂದ್ಯಗಳಲ್ಲಿ ಒತ್ತಡದ ನಡುವೆಯೂ ಉತ್ತಮವಾಗಿ ಆಡುವ ಆಟಗಾರರು ಇದ್ದಾರೆ. ಆರ್‌ಸಿಬಿ ಬ್ಯಾಟಿಂಗ್ ಲೈನಪ್ ಬಲಿಷ್ಠವಾಗಿದೆ. ಇದರ ಜೊತೆಗೆ ಒತ್ತಡದ ಜೊತೆಗೆ ಆಟವಾಡುವ ಅನುಭವಿ ಆಟಗಾರರು ಇದ್ದಾರೆ. ಬೆಂಗಳೂರು ಪರವಾಗಿ ಮಾತನಾಡಬೇಕು ಎಂದರೆ, ಅವರು ತಾಳ್ಮೆಯ ಜೊತೆಗೆ ಅಕ್ರಮಣಕಾರಿ ಆಟವನ್ನು ಆಡಬೇಕು ಎಂದು ಹೇಳಬಹುದು ಎಂದು ವಾನ್ ತಿಳಿಸಿದ್ದಾರೆ.

    ಐಪಿಎಲ್ ಆರಂಭದಲ್ಲಿ ವಿರಾಟ್ ಕೊಹ್ಲಿ ಪಡೆ ಉತ್ತಮ ಪ್ರದರ್ಶನ ನೀಡಿತ್ತು. ಆದರೆ ಕೊನೆಯಲ್ಲಿ ಎಡವಿ ನಾಲ್ಕು ಪಂದ್ಯಗಳನ್ನು ಸತತವಾಗಿ ಕೈಚೆಲ್ಲಿತ್ತು. ಆದರೂ ಆಡಿದ 14 ಪಂದ್ಯದಲ್ಲಿ 7 ಪಂದ್ಯಗಳನ್ನು ಗೆದ್ದು ನೆಟ್ ರನ್ ರೇಟ್ ಆಧಾರದ ಮೇಲೆ ಪ್ಲೇ ಆಫ್‍ಗೆ ಆಯ್ಕೆಯಾಗಿದೆ. ಜೊತೆಗೆ ಆರಂಭಿಕ ದೇವದತ್ ಪಡಿಕ್ಕಲ್, ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ನೆಚ್ಚಿನ ತಂಡ ಕಪ್ ಗೆಲ್ಲುತ್ತದೆ ಎಂದು ಆರ್‌ಸಿಬಿ ಅಭಿಮಾನಿಗಳು ಕಾಯುತ್ತಿದ್ದಾರೆ.

  • ಪುಟ್ಟ ಪೋರಿಯ ಫುಟ್‍ವರ್ಕ್‍ಗೆ ಅಂತಾರಾಷ್ಟ್ರೀಯ ಆಟಗಾರರು ಫಿದಾ

    ಪುಟ್ಟ ಪೋರಿಯ ಫುಟ್‍ವರ್ಕ್‍ಗೆ ಅಂತಾರಾಷ್ಟ್ರೀಯ ಆಟಗಾರರು ಫಿದಾ

    ನವದೆಹಲಿ: 7 ವರ್ಷದ ಪುಟ್ಟ ಪೋರಿಯೊಬ್ಬಳು ಸೂಪರ್ ಆಗಿ ಬ್ಯಾಟಿಂಗ್ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    7 ವರ್ಷದ ಪರಿ ಶರ್ಮಾ ಬ್ಯಾಟಿಂಗ್ ಸ್ಕಿಲ್‍ಗೆ ಭಾರತದ ಆಟಗಾರರ ಜೊತೆಗೆ ವಿದೇಶಿ ಆಟಗಾರರು ಫಿದಾ ಆಗಿದ್ದಾರೆ. ಪರಿ ಶರ್ಮಾರ ಬ್ಯಾಟಿಂಗ್ ನೋಡಿದ ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್ ಮತ್ತು ವೆಸ್ಟ್ ಇಂಡೀಸ್‍ನ ಆಟಗಾರ ಶೈ ಹೋಪ್ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಮೈಕೆಲ್ ವಾನ್ ಪರಿ ಶರ್ಮಾರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿ. 7 ವರ್ಷದ ಪರಿ ಶರ್ಮಾ ಬ್ಯಾಟಿಂಗ್ ನೋಡಿ. ಜೊತೆಗೆ ಅವಳ ಲೆಗ್ ಮೂಮೆಂಟ್ ನೋಡಿ. ಈ ರೀತಿಯ ಕೌಶಲ್ಯವನ್ನು ರೂಡಿಸಿಕೊಳ್ಳುವುದು ಒಳ್ಳೆಯದು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಶೈ ಹೋಪ್ ಅವರು ಕೂಡ ನಾನು ದೊಡ್ಡವನಾದಾಗ ಪರಿ ಶರ್ಮಾಳಂತೆ ಇರಬೇಕು ಎಂದು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಇದರ ಜೊತೆಗೆ ಟ್ವಿಟ್ಟರ್ ಬಳಕೆದಾರ ರೈಸ್ ಮೋರ್ಗಾಸ್ ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿ ಭಾರತದ ಮಹಿಳಾ ಆಲ್‍ರೌಂಡರ್ ಶಿಖಾ ಪಾಂಡೆಯವರಿಗೆ ಟ್ಯಾಗ್ ಮಾಡಿದ್ದು, ನೀವು ಈ ಆಟಗಾರರನ್ನು ಕಂಡು ಹಿಡಿಯಬೇಕು ಎಂದು ಬರೆದಿದ್ದಾರೆ. ಇದಕ್ಕೆ ಉತ್ತರಿಸಿರುವ ಶಿಖಾ ಪಾಂಡೆ ಅವರಿಂದ ತರಬೇತಿಯನ್ನು ತೆಗೆದುಕೊಳ್ಳಿ ಬಹಳ ಒಳ್ಳೆಯದು ಎಂದು ಬರೆದುಕೊಂಡಿದ್ದಾರೆ.

    56 ಸೆಕೆಂಡ್ ಇರುವ ಪರಿ ಶರ್ಮಾ ವಿಡಿಯೋವನ್ನು ಮೊದಲಿಗೆ ಇಎಸ್‍ಪಿಎನ್ ಕ್ರಿಕ್‍ಇನ್ಫೋ ಅವರು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಪರಿ ಡಿಫೆನ್ಸ್, ಕವರ್ ಶಾಟ್, ಪುಲ್ ಶಾಟ್ ನಂತಹ ಕಷ್ಟಕರವಾದ ಹೊಡೆತಗಳನ್ನು ಸರಿಯಾದ ಫುಟ್‍ವರ್ಕ್ ಮತ್ತು ಟೈಮಿಂಗ್ ಸಮೇತ ಹೊಡೆದ್ದಾಳೆ. ಪರಿ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಸೆಟ್ ಮಾಡುತ್ತಿದೆ.

  • ಐಸಿಸಿ ವಿರುದ್ಧ ಮೈಕಲ್ ವಾನ್ ಗರಂ- ‘ಇದು ನಿಮ್ಮ ಕರ್ಮ’ ಎಂದ ನೆಟ್ಟಿಗರು

    ಐಸಿಸಿ ವಿರುದ್ಧ ಮೈಕಲ್ ವಾನ್ ಗರಂ- ‘ಇದು ನಿಮ್ಮ ಕರ್ಮ’ ಎಂದ ನೆಟ್ಟಿಗರು

    ಸಿಡ್ನಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಆಯೋಜಿಸುವ ಟೂರ್ನಿಗಳ ವೇಳಾಪಟ್ಟಿಯನ್ನು ಬಹು ಎಚ್ಚರಿಕೆಯಿಂದ ಪ್ಲಾನ್ ಮಾಡಲಾಗುತ್ತದೆ. ಆದರೆ ಈ ಬಾರಿಯ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಮಾತ್ರ ಭಿನ್ನವಾಗಿದೆ. ‘ಮಾಡು ಇಲ್ಲವೇ ಮಡಿ’ ಎಂಬತ್ತಿರುವ ಟೂರ್ನಿಯ ನಾಕೌಟ್ ಪಂದ್ಯಗಳಿಗೆ ರಿಸರ್ವ್ ಡೇ ಶೆಡ್ಯೂಲ್ ಮಾಡದಿರುವುದು ಸದ್ಯ ವಿಮರ್ಶೆಗೆ ಕಾರಣವಾಗಿದೆ.

    ಈ ಬಾರಿಯ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದ 2 ಪಂದ್ಯಗಳು ಹಾಗೂ ನಾಕೌಟ್ ಹಂತದ ಪಂದ್ಯ ಆರಂಭವಾಗದೆ ರದ್ದಾಗಿವೆ. ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವೆ ನಡೆಯ ಬೇಕಿದ್ದ ಪಂದ್ಯ ಮಳೆಯ ಕಾರಣ ರದ್ದಾಗಿದ್ದು, ಟೀಂ ಇಂಡಿಯಾ ಗ್ರೂಪ್ ಹಂತದಲ್ಲಿ ಮೊದಲ ಸ್ಥಾನದಲ್ಲಿದ್ದ ಕಾರಣ ನೇರ ಫೈನಲ್ ಪ್ರವೇಶದ ಅವಕಾಶ ಪಡೆಯಿತು. ಇಂಗ್ಲೆಂಡ್ ತಂಡದ ರಿಸರ್ವ್ ಡೇ ಇಲ್ಲದ ಕಾರಣ ಟೂರ್ನಿಯಿಂದ ನಿರ್ಗಮಿಸಿತು.

    ಕಳೆದ ವಿಶ್ವಕಪ್‍ನಲ್ಲಿ ರನ್ನರ್ ಅಪ್ ಆಗಿದ್ದ ಇಂಗ್ಲೆಂಡ್ ಈ ಬಾರಿ ಸೆಮಿಸ್‍ಗೆ ತನ್ನ ಜರ್ನಿಯನ್ನು ಅಂತ್ಯಗೊಳಿಸಿದೆ. ಇದರಿಂದ ಇಂಗ್ಲೆಂಡ್ ತಂಡದ ಕ್ರಿಕೆಟ್ ಪ್ರೇಮಿಗಳು ನಿರಾಸೆ ಅನುಭವಿಸಿದ್ದಾರೆ. ಇದೇ ವಿಚಾರವನ್ನು ಪ್ರಸ್ತಾಪ ಮಾಡಿರುವ ಇಂಗ್ಲೆಂಡ್ ಮಾಜಿ ಆಟಗಾರ ಮೈಕಲ್ ವಾನ್ ಐಸಿಸಿ ವಿರುದ್ಧ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಹಲವರಿಗೆ ವಿಶ್ವಕಪ್ ಕ್ರಿಕೆಟ್ ಟೂರ್ನಿ ಆಡುವುದು ಜೀವನದ ಕನಸಾಗಿರುತ್ತದೆ. ಇಂತಹ ಸಂದರ್ಭದಲ್ಲಿ ನಾಕೌಟ್ ಪಂದ್ಯದಲ್ಲಿ ಆಡುವುದು ಆಟಗಾರರಿಗೆ ಹೆಮ್ಮೆಯ ಸಂಗತಿ. ಇಂತಹ ಪಂದ್ಯಗಳಿಗೆ ರಿಸರ್ವ್ ಡೇ ಇಲ್ಲ ಎಂದರೇ ಅರ್ಥವಿರುವುದಿಲ್ಲ ಎಂದು ಐಸಿಸಿ ವಿರುದ್ಧ ಕಿಡಿಕಾರಿದ್ದರು.

    ಮೈಕಲ್ ವಾನ್ ಅವರ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಕೆಲ ನೆಟ್ಟಿಗರು ವಾನ್‍ರನ್ನು ಟ್ರೋಲ್ ಮಾಡಿದ್ದಾರೆ. ಕಳೆದ ವರ್ಷ ನಡೆದಿದ್ದ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡ ಬೌಂಡರಿ ನಿಯಮದ ಅನ್ವಯ ಗೆಲುವು ಪಡೆದು ಚಾಂಪಿಯನ್ ಆಗಿತ್ತು. ಅಂದು ಬೌಂಡರಿ ನಿಯಮದೊಂದಿಗೆ ಗೆಲುವು ಪಡೆದಿದ್ದ ನಿಮಗೆ ಇಂದು ತಕ್ಕ ಶಾಸ್ತಿ ಆಗಿದೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು.

    ನೆಟ್ಟಿಗರ ಟ್ರೋಲ್‍ಗೆ ಪ್ರತಿಕ್ರಿಯೆ ನೀಡಿರುವ ವಾನ್, ನೀವು ಇದನ್ನು ಕರ್ಮ ಎಂದು ಪರಿಗಣಿಸುವುದಾದರೆ, ಇಂಗ್ಲೆಂಡ್ ತಂಡ ಅಂದು ಪಂದ್ಯದಲ್ಲಿ ತನ್ನ ಕೌಶಲ್ಯಗಳನ್ನು ಪ್ರದರ್ಶನ ಮಾಡಿತ್ತು. ಆದರೆ ಈ ಪಂದ್ಯದಲ್ಲಿ ಯಾವ ಆಟಗಾರ್ತಿಯೂ ತಮ್ಮ ಕೌಶಲ್ಯಗಳನ್ನು ಪ್ರದರ್ಶನ ಮಾಡಲು ಅವಕಾಶವೇ ಲಭಿಸಿಲ್ಲ. ಏನೇ ಆಗಲಿ ಎಲ್ಲರಿಗೂ ಗುಡ್ ಮಾರ್ನಿಂಗ್ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಡೈಪರ್ ಧರಿಸಿದ ಬಾಲಕನ ಭರ್ಜರಿ ಬ್ಯಾಟಿಂಗ್ – ವಿಡಿಯೋ ನೋಡಿ ನೆಟ್ಟಿಗರು ಫಿದಾ

    ಡೈಪರ್ ಧರಿಸಿದ ಬಾಲಕನ ಭರ್ಜರಿ ಬ್ಯಾಟಿಂಗ್ – ವಿಡಿಯೋ ನೋಡಿ ನೆಟ್ಟಿಗರು ಫಿದಾ

    ನವದೆಹಲಿ: ಡೈಪರ್ ನಲ್ಲೇ ಚಿಕ್ಕ ಬಾಲಕನೋರ್ವ ಸೂಪರ್ ಆಗಿ ಕ್ರಿಕೆಟ್ ಶಾಟ್ಸ್ ಹೊಡೆದಿದ್ದು, ಇದನ್ನು ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.

    ಚಿಕ್ಕ ಬಾಲಕ ತನ್ನ ಮನೆಯಲ್ಲೇ ಡೈಪರ್ ತೊಟ್ಟು ಪ್ಲಾಸ್ಟಿಕ್ ಬ್ಯಾಟ್ ಹಿಡಿದು ವೃತ್ತಿಪರ ಆಟಗಾರರ ರೀತಿಯಲ್ಲೇ ಬ್ಯಾಟ್ ಬೀಸಿದ್ದಾನೆ. ಅದರಲ್ಲೂ ಆ ಬಾಲಕ ಹೊಡೆದಿರುವ ಕವರ್ ಡ್ರೈವ್ ಹೊಡೆತಗಳನ್ನು ನೋಡಿದ ನೆಟ್ಟಿಗರು ಈತ ಲಿಟಲ್ ಸಚಿನ್ ತೆಂಡೂಲ್ಕರ್ ಎಂದು ಹೊಗಳಿದ್ದಾರೆ.

    ಈ ಪುಟ್ಟ ಪೋರ ಬ್ಯಾಟ್ ಬೀಸಿರುವ ವಿಡಿಯೋ ನೋಡಿ ನೆಟ್ಟಿಗರು ಫಿದಾ ಆಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋ ನೋಡಿ ಮಾಜಿ ಇಂಗ್ಲೆಂಡ್ ತಂಡದ ನಾಯಕ ಮೈಕಲ್ ವಾನ್ ಅವರು ಕೂಡ ಪುಟ್ಟ ಬಾಲಕನಿಗೆ ಅಭಿಮಾನಿಯಾಗಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಾಲಕ ವಿಡಿಯೋ ಶೇರ್ ಮಾಡಿ ಖಂಡಿತವಾಗಿಯೂ ಈತ ಇಂಗ್ಲಿಷ್ ಡಾಗ್ ಅಥವಾ ಕ್ಯಾಟ್ ಎಂದು ಬರೆದುಕೊಂಡಿದ್ದಾರೆ.

    40 ಸೆಕೆಂಡ್ ಈ ವಿಡಿಯೋದಲ್ಲಿ ಬಾಲಕ ಕವರ್ ಡ್ರೈವ್, ಸ್ಟ್ರೈಟ್ ಡ್ರೈವ್ ಹೊಡೆತಗಳನ್ನು ಹೊಡೆದಿದ್ದು, ಈ ವಿಡಿಯೋವನ್ನು ಫಾಕ್ಸ್ ಕ್ರಿಕೆಟ್ ಕೂಡ ಶೇರ್ ಮಾಡಿದೆ. ಈ ಬಾಲಕ ಇನ್ನೂ ಡೈಪರ್ ನಲ್ಲಿಯೇ ಕ್ಲಬ್ ಕ್ರಿಕೆಟಿಗರಿಗಿಂತ ಹೆಚ್ಚಿನ ಉತ್ತಮ ಬ್ಯಾಟಿಂಗ್ ತಂತ್ರ ಹೊಂದಿದ್ದಾನೆ ಎಂದು ಬರೆದುಕೊಂಡಿದೆ. ಸದ್ಯ ವೈರಲ್ ಆಗಿರುವ ಈ ವಿಡಿಯೋವನ್ನು 3 ಲಕ್ಷ ಜನ ನೋಡಿದ್ದು, 3 ಸಾವಿರ ಜನ ರೀಟ್ವೀಟ್ ಮಾಡಿದ್ದಾರೆ.

    ಬಾಲಕನ ವಿಡಿಯೋ ನೋಡಿ ಮೆಚ್ಚಿರುವ ನೆಟ್ಟಿಗರು, ಈ ಬಾಲಕನ ಫುಟ್‍ವರ್ಕ್ ಮಾಜಿ ಆರಂಭಿಕ ಬ್ಯಾಟ್ಸ್ ಮ್ಯಾನ್ ವೀರೇಂದ್ರ ಸೆಹ್ವಾಗ್ ರೀತಿಯಂತಿದೆ. ಈತ ಮುಂದಿನ ಸಚಿನ್ ತೆಂಡೂಲ್ಕರ್ ರೀತಿಯಲ್ಲಿ ಕಾಣುತ್ತಿದ್ದಾನೆ. ಭಾರತಕ್ಕೆ ಉತ್ತಮ ಬಲಗೈ ಆಟಗಾರ ಸಿಕ್ಕಿದ್ದಾನೆ ಎಂದು ಕಮೆಂಟ್ ಮಾಡಿದ್ದಾರೆ.

    ಇನ್ನೂ ಕೆಲ ನೆಟ್ಟಿಗರು ಈ ವಿಡಿಯೋ ಇಟ್ಟುಕೊಂಡು ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ರಿಷಬ್ ಪಂತ್ ಅವರನ್ನು ಕಾಲೆಳೆದಿದ್ದು, ಅಂಡರ್ ಫೈರ್ ಇಂಡಿಯಾದ ಬ್ಯಾಟ್ಸ್ ಮ್ಯಾನ್ ರಿಷಬ್ ಪಂತ್ ಅವರು ಈ ಪುಟ್ಟ ಬಾಲಕನನ್ನು ಭೇಟಿಯಾಗಿ ಬ್ಯಾಟಿಂಗ್ ಮಾಡುವುದನ್ನು ಕಲಿತುಕೊಳ್ಳಬೇಕು ಎಂದು ಕಮೆಂಟ್ ಮಾಡಿದ್ದಾರೆ.

  • ಸ್ಟೇಡಿಯಂನಲ್ಲಿ ಆಸೀಸ್ ಅಭಿಮಾನಿಗಳನ್ನ ಹುಡುಕಾಡಿದ ಮೈಕಲ್ ವಾನ್

    ಸ್ಟೇಡಿಯಂನಲ್ಲಿ ಆಸೀಸ್ ಅಭಿಮಾನಿಗಳನ್ನ ಹುಡುಕಾಡಿದ ಮೈಕಲ್ ವಾನ್

    ಓವೆಲ್: ಆಸ್ಟ್ರೇಲಿಯಾ ಕ್ರಿಕೆಟ್ ಟೀಂ ಅಭಿಮಾನಿಗಳ ಸಂಖ್ಯೆಯ ಕುರಿತು ಟ್ವೀಟ್ ಮಾಡುವ ಮೂಲಕ ಇಂಗ್ಲೆಂಡ್‍ನ ಮಾಜಿ ಕ್ರಿಕೆಟರ್ ಮೈಕಲ್ ವಾನ್ ಟ್ರೋಲ್ ಆಗಿದ್ದಾರೆ.

    ಓವಲ್‍ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಲ್ಲಿಯವರೆಗೂ ನಾನು ಆಸ್ಟ್ರೇಲಿಯಾ ತಂಡದ ಆಟಗಾರರು, ಸಿಬ್ಬಂದಿ ಸೇರಿದಂತೆ ಕೇವಲ 33 ಅಭಿಮಾನಿಗಳನ್ನು ನೋಡಿದ್ದೇನೆ ಎಂದು ಮೈಕಲ್ ವಾನ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಧವನ್ ಶತಕ, ರೋಹಿತ್ – ಕೊಹ್ಲಿ ಫಿಫ್ಟಿ – ಆಸೀಸ್‍ಗೆ ಗೆಲ್ಲಲು 353 ರನ್ ಟಾರ್ಗೆಟ್

    ಲಂಡನ್‍ನ ಕೆನ್ನಿಂಗ್ಟನ್ ಓವಲ್‍ನಲ್ಲಿ ಇಂದು ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಪಂದ್ಯ ನಡೆಯುತ್ತಿದೆ. ಕ್ರೀಡಾಂಗಣದ ಎಲ್ಲ ಕಡೆಯೂ ಭಾರತ ತಂಡದ ಅಭಿಮಾನಿಗಳೆ ಇದ್ದಾರೆ. ಹೀಗಾಗಿ ಸ್ಟೇಡಿಯಂನಲ್ಲಿ ನೀಲಿ ಟೀ ಶರ್ಟ್ ಗಳೇ ಕಾಣುತ್ತಿವೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಮೈಕಲ್ ವಾನ್ ಟ್ರೋಲ್ ಆಗಿದ್ದಾರೆ.

    ಇದು ನಮ್ಮ ತಂಡದ ಮೇಲಿನ ಪ್ರೀತಿ ಎಂದು ನೆಟ್ಟಿಗರು ರೀ ಟ್ವೀಟ್ ಮಾಡಿದ್ದಾರೆ. ನಿಮ್ಮನ್ನು ಸೇರಿಸಿ ಏಣಿಕೆ ಮಾಡಿದರೆ 34 ಆಗಬಹುದು ಎಂದು ಅಂಕಿತ್ ಧಾಮಾ ಎಂಬವರು ವ್ಯಂಗ್ಯವಾಡಿದ್ದಾರೆ.

    https://twitter.com/DeveshUTD/status/1137657698428678146

    ಇಂಗ್ಲೆಂಡ್ ಹಾಗೂ ಭಾರತ ಕ್ರಿಕೆಟ್ ಟೀಂ ಪಂದ್ಯದಲ್ಲಿ ನೀವು ಕೇವಲ 17 ಜನರು ಮಾತ್ರ ಇರುತ್ತೀರಿ ಎಂದು ಡೆವೆಸ್ ಲೇವಡಿ ಮಾಡಿದ್ದಾರೆ.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೊಹ್ಲಿ ಪಡೆಗೆ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿ ಬೃಹತ್ ರನ್ ಗುರಿಯನ್ನೇ ಆಸೀಸ್ ಪಡೆಗೆ ನೀಡಿದ್ದಾರೆ. ನಿಗದಿತ 50 ಓವರ್ ಗಳಲ್ಲಿ ಟೀಂ ಇಂಡಿಯಾ 05 ವಿಕೆಟ್ ನಷ್ಟಕ್ಕೆ 352 ರನ್ ರನ್ ಗಳಿಸಿದೆ.

  • ‘ಕಿಂಗ್ ಕೊಹ್ಲಿ’ – ಮೈಕಲ್ ವಾನ್ ಟ್ವೀಟ್‍ಗೆ ಐಸಿಸಿ ಖಡಕ್ ಉತ್ತರ

    ‘ಕಿಂಗ್ ಕೊಹ್ಲಿ’ – ಮೈಕಲ್ ವಾನ್ ಟ್ವೀಟ್‍ಗೆ ಐಸಿಸಿ ಖಡಕ್ ಉತ್ತರ

    ಲಂಡನ್: 2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಮುನ್ನವೇ ಐಸಿಸಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರಾಜನಂತೆ ಕುಳಿತಿರುವ ಚಿತ್ರವನ್ನು ಟ್ವೀಟ್ ಮಾಡಿತ್ತು. ಈ ಟ್ವೀಟ್‍ಗೆ ಐಸಿಸಿ ಕಾಲೆಳೆದಿದ್ದ ಇಂಗ್ಲೆಂಡಿನ ಮಾಜಿ ಕ್ರಿಕೆಟ್ ಆಟಗಾರ ಮೈಕಲ್ ವಾನ್‍ಗೆ ಐಸಿಸಿ ಖಡಕ್ ಉತ್ತರ ನೀಡಿದೆ.

    ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಐಸಿಸಿ ಕೆಲ ವಿಶೇಷ ಟ್ವೀಟ್ ಗಳನ್ನು ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತದೆ. ಕೊಹ್ಲಿ ಅವರ ಪೈಂಟಿಂಗ್ ಟ್ವೀಟ್‍ಗೆ ಹಲವರು ತಮ್ಮದೇ ಪ್ರತಿಕ್ರಿಯೆ ನೀಡದ್ದು, ಕೆಲವರು ಐಸಿಸಿ ವಿರುದ್ಧ ಟೀಕೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತು ಕೆಲವರು ಪೈಂಟಿಂಗ್ ನಲ್ಲಿ ಇರುವುದು ಕೊಹ್ಲಿನ ಅಥವಾ ಕೆಎಲ್ ರಾಹುಲ್ ಅವರ ಎಂದು ಪ್ರಶ್ನೆ ಮಾಡಿದ್ದಾರೆ.

    ಇತ್ತ ಮೈಕಲ್ ವಾನ್ ಅವರು ಕೂಡ ಐಸಿಸಿ ಟ್ವೀಟ್‍ಗೆ ಪರೋಕ್ಷವಾಗಿ ಕಿಡಿಕಾರಿದ್ದು, ಟ್ವೀಟ್ ನಿಷ್ಪಕ್ಷಪಾತ ಮಾಡಿದಂತೆ ಕಾಣುತ್ತದೆ ಎಂದು ಬರೆದುಕೊಂಡಿದ್ದರು. ಮೈಕಲ್ ವಾನ್ ರ ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಐಸಿಸಿ ಮೂರು ಸ್ಕ್ರೀನ್ ಶಾಟ್ ಫೋಟೋಗಳನ್ನು ಟ್ವೀಟ್ ಮಾಡಿದೆ. ಮೊದಲ ಫೋಟೋದಲ್ಲಿ ಐಸಿಸಿ ಏಕದಿನ ಮಾದರಿಯ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನ, 2ನೇ ಫೋಟೋದಲ್ಲಿ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಹಾಗೂ ಐಸಿಸಿ ವಾರ್ಷಿಕ ಕ್ರಿಕೆಟಿಗ ಪ್ರಶಸ್ತಿಯ ಹ್ಯಾಟ್ರಿಕ್ ಸಾಧನೆ ಮಾಡಿರುವ ಕೊಹ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿದೆ.

    ಐಸಿಸಿ ಪ್ರತಿಕ್ರಿಯೆಗೆ ಅಭಿಮಾನಿಗಳು ಫಿದಾ ಆಗಿದ್ದು, ಮೈಕಲ್ ವಾನ್ ಅವರಿಗೆ ತಕ್ಕ ಉತ್ತರ ಎಂದು ಪ್ರತಿಕ್ರಿಯೆ ನೀಡಿದ್ದರೆ. ಉಳಿದಂತೆ ಫೋಟೋದಲ್ಲಿ ಕೊಹ್ಲಿ ಕೈಯಲ್ಲಿ ಬ್ಯಾಟ್ ಹಾಗೂ ಬಾಲ್ ಹಿಡಿದು ತಾನೇ ನಂ.1 ಎಂಬಂತೆ ಇರುವ ಪೈಂಟಿಂಗ್ ಇದಾಗಿದೆ.

  • ಬ್ರಾಡ್ಮನ್, ಸಚಿನ್, ಲಾರಾಕ್ಕಿಂತ ಕೊಹ್ಲಿಯೇ ಶ್ರೇಷ್ಠ: ಇಂಗ್ಲೆಂಡ್ ಮಾಜಿ ನಾಯಕ

    ಬ್ರಾಡ್ಮನ್, ಸಚಿನ್, ಲಾರಾಕ್ಕಿಂತ ಕೊಹ್ಲಿಯೇ ಶ್ರೇಷ್ಠ: ಇಂಗ್ಲೆಂಡ್ ಮಾಜಿ ನಾಯಕ

    ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಶತಕದ ಕುರಿತು ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ವಿಶ್ವ ಕ್ರಿಕೆಟ್‍ನಲ್ಲಿ ಬ್ರಾಡ್ಮನ್, ಗವಾಸ್ಕರ್ ಲಾರಾ ಅವರಗಿಂತ ಕೊಹ್ಲಿ ಶ್ರೇಷ್ಠ ಆಟಗಾರ ಎಂದಿದ್ದಾರೆ.

    ವಿಶ್ವ ಕ್ರಿಕೆಟ್ ಆಟದಲ್ಲಿ ಕೊಹ್ಲಿ, ದಿ ಗೋಟ್ (ಗ್ರೇಟೆಸ್ಟ್ ಅಫ್ ಅಲ್ ಟೈಮ್) ಅಟ್ ಅಗೈನ್ ಎಂದು ವಾನ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದ ಅಭಿಮಾನಿಯೊಬ್ಬರು ಬ್ರಾಡ್‍ಮನ್, ಸಚಿನ್, ಲಾರಾ ಅವರಿಗಿಂತ ಕೊಹ್ಲಿ ಶ್ರೇಷ್ಠರೇ ಎಂದು ಪ್ರಶ್ನಿಸಿದ್ದಾರೆ. ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ವಾನ್ ಏಕದಿನ ಕ್ರಿಕೆಟಿನಲ್ಲಿ ಹೌದು ಎಂದಿದ್ದಾರೆ.

    ಆಸೀಸ್ ಏಕದಿನ ಸರಣಿಯಲ್ಲಿ ಕೊಹ್ಲಿ ಸತತವಾಗಿ 2 ಶತಕ ಗಳಿಸಿ ಮಿಂಚಿದ್ದಾರೆ. ಆದರೆ 3ನೇ ಏಕದಿನ ಪಂದ್ಯದಲ್ಲಿ ತಂಡ ಸೋಲುಂಡಿತ್ತು. ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ್ದರು. ಆದರೆ ಕೊಹ್ಲಿ ನಿರ್ಧಾರ ತಪ್ಪು ಎಂದು ಆಸೀಸ್ ಆಟಗಾರರು ಸಾಬೀತು ಪಡಿಸಿದ್ದರು. ಕೊಹ್ಲಿಗೆ ಟೀಂ ಇಂಡಿಯಾ ಯಾವೊಬ್ಬ ಆಟಗಾರರು ಸಾಥ್ ನೀಡದ್ದು ಸೋಲಿಗೆ ಪ್ರಮುಖವಾಗಿತ್ತು.

    ಕೇವಲ 85 ಎಸೆತಗಳಲ್ಲಿ ಕೊಹ್ಲಿ ಶತಕ ಸಿಡಿಸಿ ಏಕದಿನ ಕ್ರಿಕೆಟ್‍ನಲ್ಲಿ 41ನೇ ಶತಕ ಸಿಡಿಸಿದ್ದರು. ಅಲ್ಲದೇ ನಾಯಕರಾಗಿ 4 ಸಾವಿರ ರನ್ ಗಳನ್ನು ವೇಗವಾಗಿ ಪೂರೈಸಿದ ಸಾಧನೆಯನ್ನು ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv