Tag: MI vs DC

  • WPL 2025 | ಜಿದ್ದಾ-ಜಿದ್ದಿ ಕಣದಲ್ಲಿ ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್‌ – ಮುಂಬೈಗೆ ವಿರೋಚಿತ ಸೋಲು

    WPL 2025 | ಜಿದ್ದಾ-ಜಿದ್ದಿ ಕಣದಲ್ಲಿ ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್‌ – ಮುಂಬೈಗೆ ವಿರೋಚಿತ ಸೋಲು

    ವಡೋದರ: ಕೊನೆಯವರೆಗೂ ರೋಚಕತೆಯಿಂದ ಕೂಡಿದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಮುಂಬೈ ಇಂಡಿಯನ್ಸ್‌ ವಿರುದ್ಧ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 3ನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ.

    ವಡೋದರದ ಕೊಟಂಬಿ ಕ್ರೀಡಾಂಗಣದಲ್ಲಿ ನಡೆದ 2ನೇ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆಲುವಿಗೆ 165 ರನ್ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯವರೆಗೂ ಹೋರಾಟ ನಡೆಸಿ ಗೆದ್ದು ಬೀಗಿದೆ.

    ಕೊನೆಯ ಓವರ್ ರೋಚಕ:
    ಕೊನೆಯ 7 ಎಸೆತಗಳಲ್ಲಿ 16 ರನ್ ಬೇಕಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ರಾಧಾ ಯಾದವ್ 19ನೇ ಓವರ್‌ನ 6ನೇ ಎಸೆತವನ್ನು ಸಿಕ್ಸರ್ ಬಾರಿಸಿದರು. ಇನ್ನೂ 6 ಎಸೆತಗಳಲ್ಲಿ 10 ರನ್ ಬೇಕಿತ್ತು. ಸಜೀವನ್ ಸಜನಾ ಬೌಲಿಂಗ್‌ನಲ್ಲಿದ್ದರೆ, ನಿಕಿ ಪ್ರಸಾದ್ ಕ್ರೀಸ್‌ನಲ್ಲಿದ್ದರು. ರೋಚಕ ಗಟ್ಟಕ್ಕೆ ಪಂದ್ಯ ತಿರುಗಿತ್ತು, ಅಭಿಮಾನಿಗಳಲ್ಲಿ ಹೃದಯ ಬಡಿತ ಹೆಚ್ಚಿಸಿತ್ತು. ಈ ವೇಳೆ ಡೆಲ್ಲಿ ಪರ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ ನಿಕ್ಕಿ ಮೊದಲ ಮೂರು ಎಸೆತಗಳಲ್ಲೇ 7 ರನ್ ಬಾರಿಸಿದ್ರು. 4ನೇ ಎಸೆತದಲ್ಲಿ ರಾಧಾ 1 ರನ್ ಕದಿಯುವಲ್ಲಿ ಯಶಸ್ವಿಯಾದರು. ಇನ್ನೂ 2 ಬಾಲ್‌ಗೆ 2 ರನ್ ಬೇಕಿದ್ದಾಗಲೇ ಶಿಖಾ ಪಾಂಡೆ ರನೌಟ್‌ಗೆ ತುತ್ತಾದರು. ಕೊನೇ 1 ಎಸೆತದಲ್ಲಿ 2 ರನ್ ಬೇಕಿದ್ದಾಗ ಅರುಂದತಿ ರೆಡ್ಡಿ ರನ್ ಕದಿಯುವಲ್ಲಿ ಯಶಸ್ವಿಯಾದರು. ಇದರಿಂದ ಗೆಲುವು ಡೆಲ್ಲಿ ಪಾಲಾಯಿತು.

    ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಮೆಗ್ ಲ್ಯಾನಿಂಗ್, ಶಫಾಲಿ ವರ್ಮ ಪವರ್ ಪ್ಲೇನಲ್ಲಿ ಸ್ಫೋಟಕ ಆರಂಭ ನೀಡಿದ್ದರು. ಮೊದಲ ವಿಕೆಟ್‌ಗೆ 36 ಎಸೆತಗಳಲ್ಲಿ ಬರೋಬ್ಬರಿ 60 ರನ್ ಡೆಲ್ಲಿ ತಂಡ ಕಲೆಹಾಕಿತ್ತು. ಆದ್ರೆ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಶಫಾಲಿ ವರ್ಮ ಸಿಕ್ಸರ್ ಸಿಡಿಸುವ ಭರದಲ್ಲಿ ಕ್ಯಾಚ್ ನೀಡಿ ಔಟಾದರು. ಈ ಬೆನ್ನಲ್ಲೇ ಸ್ಫೋಟಕ ಆಟಗಾರ್ತಿ ಜೆಮಿಮಾ ರೊಡ್ರಿಗ್ಸ್, ಮೆಗ್ ಲ್ಯಾನಿಂಗ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರು.

    ಮಧ್ಯಮ ಕ್ರಮಾಂಕದಲ್ಲಿ ಅಲಿಸ್ ಕ್ಯಾಪ್ಸಿ, ಸಾರಾ ಬ್ರೈಸ್ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ತಂಡದಲ್ಲಿ ಮತ್ತೆ ಗೆಲುವಿನ ಕನಸು ಚಿಗುರಿತ್ತು. ಅಷ್ಟರಲ್ಲೇ ಸಾರಾ ಬ್ರೈಸ್ ಆಟಗಕ್ಕೆ ಹೀಲಿ ಮ್ಯಾಥ್ಯೂಸ್ ಬ್ರೇಕ್ ಹಾಕಿ ಪೆವಿಲಿಯನ್ ದಾರಿ ತೋರಿದರು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದ ನಿಕ್ಕಿ ಪ್ರಸಾದ್ (35 ರನ್), ಸಾರಾ (10 ಎಸೆತಗಳಲ್ಲಿ 21 ರನ್) ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

    ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಮುಂಬೈ ಮಹಿಳಾ ತಂಡ ಮೊದಲ ಓವರ್‌ನಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. 4 ಓವರ್‌ಗಳಲ್ಲಿ 32 ರನ್‌ಗಳಿಗೆ ಆರಂಭಿಕ 2 ವಿಕೆಟ್‌ಗಳನ್ನ ಕಳೆದುಕೊಂಡಿತ್ತು.

    ನಟಾಲಿ-ಕೌರ್ ಜೊತೆಯಾಟ:
    ಸಂಕಷ್ಟದಲ್ಲಿದ್ದ ಮುಂಬೈ ತಂಡಕ್ಕೆ ಆಲ್‌ರೌಂಡರ್ ನಟಾಲಿ ಸ್ಕಿವರ್ ಬ್ರಂಟ್, ನಾಯಕಿ ಹರ್ಮನ್ ಪ್ರೀತ್ ಕೌರ್ ಆಸರೆಯಾದರು. 3ನೇ ವಿಕೆಟಿಗೆ ಈ ಜೋಡಿ 40 ಎಸೆತಗಳಲ್ಲಿ 73 ರನ್ ಜೊತೆಯಾಟ ನೀಡಿತು. ಸ್ಫೋಟಕ ಬ್ಯಾಟಿಂಗ್ ಮಾಡಿದ ಕೌರ್ 22 ಎಸೆತಗಳಲ್ಲಿ 42 ರನ್ (4 ಬೌಂಡರಿ, 3 ಸಿಕ್ಸರ್) ಚಚ್ಚಿ ಔಟಾದರು. ಇನ್ನೂ ಕೊನೆಯವರೆಗೂ ಹೋರಾಡಿದ ನಟಾಲಿ 59 ಎಸೆತಗಲ್ಲಿ 13 ಬೌಂಡರಿಯೊಂದಿಗೆ 80 ರನ್ ಗಳಿಸಿದರು. ಆರಂಭಿಕ ಆಟಗಾರ್ತಿ ಯಸ್ತಿಕಾ ಭಾಟಿಯಾ 11 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರ್ತಿಯರು ಒಂದಂಕಿ ಮೊತ್ತಕ್ಕೆ ಔಟಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ 19.1 ಓವರ್‌ಗಳಲ್ಲೇ ಮುಂಬೈ 164 ರನ್‌ಗಳಿಗೆ ಆಲೌಟ್ ಆಯಿತು.

    ಡೆಲ್ಲಿ ಪರ ಅನ್ನಾಬೆಲ್ ಸದರ್ಲ್ಯಾಂಡ್ 3 ವಿಕೆಟ್ ಕಿತ್ತರೆ, ಶಿಖಾ ಪಾಂಡೆ 2 ವಿಕೆಟ್, ಅಲಿಸ್ ಕ್ಯಾಪ್ಸಿ, ಮಿನ್ನು ಮಣಿ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.

  • IPL 2024: ಕೊನೆಗೂ ಗೆಲುವಿನ ಖಾತೆ ತೆರೆದ ಮುಂಬೈ – ಜಿದ್ದಾಜಿದ್ದಿ ಕಣದಲ್ಲಿ ಹೋರಾಡಿ ಸೋತ ಡೆಲ್ಲಿ

    IPL 2024: ಕೊನೆಗೂ ಗೆಲುವಿನ ಖಾತೆ ತೆರೆದ ಮುಂಬೈ – ಜಿದ್ದಾಜಿದ್ದಿ ಕಣದಲ್ಲಿ ಹೋರಾಡಿ ಸೋತ ಡೆಲ್ಲಿ

    – ಪಾಂಡ್ಯ ಫುಲ್‌ ಖುಷ್‌, ಟ್ರಿಸ್ಟಾನ್‌ ಸ್ಟಬ್ಸ್‌ ಸ್ಫೋಟಕ ಅರ್ಧಶತಕ ವ್ಯರ್ಥ

    ಮುಂಬೈ: ಕೊನೇ ಓವರ್‌ವರೆಗೂ ಜಿದ್ದಾಜಿದ್ದಿಯಿಂದ ಕೂಡಿದ್ದ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ (Hardik Pandya) ನಾಯಕತ್ವದ ಮುಂಬೈ ಇಂಡಿಯನ್ಸ್‌ (Mumbai Indians) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 29 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಮುಂಬೈ ಗೆಲುವಿನ ಖಾತೆ ತೆರೆದಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 234 ರನ್‌ ಗಳಿಸಿತ್ತು. 235 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಚೇಸಿಂಗ್‌ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 3.4 ಓವರ್‌ಗಳಲ್ಲೇ ಡೇವಿಡ್‌ ವಾರ್ನರ್‌ (10 ರನ್‌) ಅವರ ವಿಕೆಟ್‌ ಕಳೆದುಕೊಂಡಿತು. ಈ ವೇಳೆ ತಂಡದ ಮೊತ್ತ 22 ಆಗಿತ್ತು. ಬಳಿಕ ಜೊತೆಗೂಡಿದ ಅಭಿಷೇಕ್‌ ಪೋರೆಲ್‌ ಹಾಗೂ ಪೃಥ್ವಿ ಶಾ ಜೋಡಿ ತಂಡಕ್ಕೆ ಚೇತರಿಕೆ ನೀಡಿತ್ತು. ಅಲ್ಲದೇ ಟ್ರಿಸ್ಟಾನ್ಸ್‌ ಸಬ್ಟ್‌ ಅವರ ಸ್ಫೋಟಕ ಪ್ರದರ್ಶನ ತಂಡದಲ್ಲಿ ಗೆಲುವಿನ ಕನಸು ಚಿಗುರಿಸಿತ್ತು. ಆದ್ರೆ ಇತರೆ ಬ್ಯಾಟರ್‌ಗಳ ಸಾಥ್‌ ನೀಡದೇ ತಂಡ ಸೋಲನುಭವಿಸಿತು.

    ಡೆಲ್ಲಿ ಪರ ಕೊನೇವರೆಗೂ ಹೋರಾಡಿದ ಸ್ಟಬ್ಸ್‌ 71 ರನ್‌ (25 ಎಸೆತ, 7 ಸಿಕ್ಸರ್‌, 3 ಬೌಂಡರಿ), ಪೃಥ್ವಿ ಶಾ 40 ಎಸೆತಗಳಲ್ಲಿ 66 ರನ್‌ (3 ಸಿಕ್ಸರ್‌, 8 ಬೌಂಡರಿ), ಅಭಿಷೇಕ್‌ 31 ಎಸೆತಗಳಲ್ಲಿ 41 ರನ್‌, ಡೇವಿಡ್‌ ವಾರ್ನರ್‌ 10 ರನ್‌, ರಿಷಭ್‌ ಪಂತ್‌ 1 ರನ್‌, ಅಕ್ಷರ್‌ ಪಟೇಲ್‌ 8 ರನ್‌, ಲಲಿತ್‌ ಯಾದವ್‌ 3 ರನ್‌, ಜೇ ರಿಚ್ಚರ್ಡ್‌ಸನ್‌ 2 ರನ್‌ ಗಳಿಸಿದರು. ಮುಂಬೈ ಪರ ಜೆರಾಲ್ಡ್ ಕೋಟ್ಜಿ 4 ವಿಕೆಟ್‌ ಕಿತ್ತರೆ, ಜಸ್ಪ್ರೀತ್‌ ಬುಮ್ರಾ 2 ವಿಕೆಟ್‌ ಹಾಗೂ ಶೆಫರ್ಡ್‌ 1 ವಿಕೆಟ್‌ ಪಡೆದು ಮಿಂಚಿದರು.

    ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಮುಂಬೈ ಇಂಡಿಯನ್ಸ್‌ ಪರ ಬ್ಯಾಟರ್‌ಗಳು ಸಂಘಟಿತ ಪ್ರದರ್ಶನ ನೀಡಿದರು. ಯಾರೊಬ್ಬರೂ ಅರ್ಧಶತಕ ಗಳಿಸದಿದ್ದರೂ 200 ರನ್‌ಗಳ ಗಡಿ ದಾಟುವಲ್ಲಿ ಮುಂಬೈ ಯಶಸ್ವಿಯಾಯಿತು.

    ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ ಹಾಗೂ ಇಶಾನ್‌ ಕಿಶನ್‌ ಜೋಡಿ ಮೊದಲ 7 ಓವರ್‌ಗಳಲ್ಲಿ 80 ರನ್‌ ಬಾರಿಸಿತ್ತು. ನಂತರ ಕ್ರೀಸ್‌ಗಿಳಿದವರಲ್ಲಿ ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ ಹೊರತುಪಡಿಸಿದ್ರೆ ಉಳಿದ ಆಟಗಾರರು ಸಾಮರ್ಥ್ಯ ಪ್ರದರ್ಶಿಸುವಲ್ಲಿ ಯಶಸ್ವಿಯಾದರು.

    ಮುಂಬೈ ಪರ ರೋಹಿತ್‌ ಶರ್ಮಾ 49 ರನ್‌ (27 ಎಸೆತ, 3 ಸಿಕ್ಸರ್‌, 6 ಬೌಂಡರಿ), ಇಶಾನ್‌ ಕಿಶನ್‌ 42 ರನ್‌ (23 ಎಸೆತ, 4 ಬೌಂಡರಿ, 2 ಸಿಕ್ಸರ್‌), ಟಿಮ್‌ ಡೇವಿಡ್‌ 45 ರನ್‌ (21 ಎಸೆತ, 4 ಸಿಕ್ಸರ್‌, 2 ಬೌಂಡರಿ), ರೊಮಾರಿಯೋ ಶೆಫರ್ಡ್ ಸ್ಫೋಟಕ 39 ರನ್‌ (10 ಎಸೆತ, 4 ಸಿಕ್ಸರ್‌, 3 ಬೌಂಡರಿ), ಹಾರ್ದಿಕ್‌ ಪಾಂಡ್ಯ 39 ರನ್‌ ಚಚ್ಚಿದರೆ, ತಿಲಕ್‌ ವರ್ಮಾ 6 ರನ್‌, ಸೂರ್ಯಕುಮಾರ್‌ ಯಾದವ್‌ ಶೂನ್ಯ ಸುತ್ತಿದರು. ಹೆಚ್ಚುವರಿ 14 ರನ್‌ ತಂಡಕ್ಕೆ ಸೇರ್ಪಡೆಯಾಯಿತು.

    ಡೆಲ್ಲಿ ಕ್ಯಾಪಿಟಲ್ಸ್‌ ಪರ ಅಕ್ಷರ್‌ ಪಟೇಲ್‌ ಮತ್ತು ಅನ್ರಿಚ್ ನಾರ್ಟ್ಜೆ ತಲಾ ಎರಡು ವಿಕೆಟ್‌ ಕಿತ್ತರು, ಖಲೀಲ್‌ ಅಹ್ಮದ್‌ ಒಂದು ವಿಕೆಟ್‌ ಪಡೆದರು.

  • ಡೆಲ್ಲಿಗೆ ಆಧಾರವಾದ ಅಯ್ಯರ್- ಮುಂಬೈ ವಿರುದ್ಧ 4 ವಿಕೆಟ್‍ಗಳ ಜಯ

    ಡೆಲ್ಲಿಗೆ ಆಧಾರವಾದ ಅಯ್ಯರ್- ಮುಂಬೈ ವಿರುದ್ಧ 4 ವಿಕೆಟ್‍ಗಳ ಜಯ

    ದುಬೈ: ಮುಂಬೈ ದಾಳಿಗೆ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿದ ಡೆಲ್ಲಿ ತಂಡಕ್ಕೆ ಆಧಾರವಾದ ಶ್ರೇಯಸ್ ಅಯ್ಯರ್ ಕಡೆಯವರೆಗೆ ಹೋರಾಡಿ 4 ವಿಕೆಟ್‍ಗಳ ಜಯ ತಂದುಕೊಟ್ಟರು.

    130ರನ್‍ಗಳ ಟಾರ್ಗೆಟ್ ಬೆನ್ನುಹತ್ತಿದ ಡೆಲ್ಲಿ ಕೂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಟಾಪ್ ಆಡರ್ ಬ್ಯಾಟ್ಸ್‌ಮ್ಯಾನ್‌ಗಳಾದ ಪೃಥ್ವಿ ಶಾ, ಧವನ್, ಸ್ಮಿತ್ ಒಂದಕ್ಕಿ ಮೊತ್ತಕ್ಕೆ ಔಟ್ ಆದರು ಡೆಲ್ಲಿ ನಾಯಕ ರಿಷಬ್ ಪಂತ್ ತಂಡಕ್ಕೆ ಆಸರೆಯಾಗುವ ಸೂಚನೆ ನೀಡಿದರು ಸಹ 26ರನ್(22 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ನಂತರ ಅಯ್ಯರ್ ಜೊತೆ ಸೇರಿದ ರವಿಚಂದ್ರನ್ ಅಶ್ವಿನ್ ಕಡೆಯ 6 ಬಾಲ್‍ಗೆ 4 ರನ್ ಅವಶ್ಯಕತೆ ಇದ್ದಾಗ 19 ಓವರ್‍ ನ ಮೊದಲ ಎಸೆತವನ್ನೇ ಸಿಕ್ಸರ್‌ಗಟ್ಟಿ ಡೆಲ್ಲಿಗೆ ಜಯ ತಂದುಕೊಟ್ಟರು. ಅಯ್ಯರ್ 33ರನ್(33 ಎಸೆತ, 2 ಬೌಂಡರಿ) ಮತ್ತು ಅಶ್ವಿನ್ 20ರನ್ (21 ಎಸೆತ, 1 ಸಿಕ್ಸ್) ಸಿಡಿಸಿ ಅಜೇಯರಾಗಿ ಉಳಿದರು. ಇದನ್ನೂ ಓದಿ: 14ನೇ ಐಪಿಎಲ್‍ಗೆ ಗುಡ್‍ಬೈ ಹೇಳಿದ ಗೇಲ್

    ಅವೇಶ್, ಪಟೇಲ್ ಮಾರಕ ದಾಳಿ
    ಟಾಸ್ ಸೋತು ಮೊದಲು ಬ್ಯಾಟಿಂಗ್‍ಗೆ ಬಂದ ಮುಂಬೈ ತಂಡಕ್ಕೆ ಎದುರಾಳಿ ತಂಡದ ಬೌಲರ್‍ ಗಳಾದ ಅವೇಶ್ ಖಾನ್ ಮತ್ತು ಅಕ್ಷರ್ ಪಟೇಲ್ ಮಾರಕ ದಾಳಿ ಸಂಘಟಿಸಿದರು. ಆರಂಭದಲ್ಲೇ ರೋಹಿತ್ ಶರ್ಮಾ 7ರನ್(10 ಎಸೆತ, 1 ಬೌಂಡರಿ) ಬಾರಿಸಿ ಅವೇಶ್ ಖಾನ್‍ಗೆ ವಿಕೆಟ್ ಒಪ್ಪಿಸಿದರೆ, ಡಿ ಕಾಕ್ 19ರನ್(18 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಅಕ್ಷರ್ ಪಟೇಲ್‍ಗೆ ವಿಕೆಟ್ ನೀಡಿ ಔಟ್ ಆದರು, ಆ ಬಳಿಕ ಬಂದ ಸೂರ್ಯಕುಮಾರ್ ಯಾದವ್ 33ರನ್(26 ಎಸೆತ, 2 ಸಿಕ್ಸ್, 2 ಬೌಂಡರಿ)ಚಚ್ಚಿ ಸಿಡಿಯುವ ಸೂಚನೆ ನೀಡಿದರು ಕೂಡ ಪಟೇಲ್ ಅವಕಾಶ ನೀಡದೆ ವಿಕೆಟ್ ಕಿತ್ತು ಪೇವಿಲಿಯನ್ ಕಳುಹಿಸಿದರು.

    ಕುಸಿದ ಮುಂಬೈ
    ವಿಕೆಟ್ ಕಳೆದುಕೊಂಡು ಸಾಗಿದ ಮುಂಬೈ ತಂಡಕ್ಕೆ ಕಡೆಯಲ್ಲಿ ಹಾರ್ದಿಕ್ ಪಾಂಡ್ಯಾ 17ರನ್(18 ಎಸೆತ, 2 ಬೌಂಡರಿ) ಮತ್ತು ಕೃನಾಲ್ ಪಾಂಡ್ಯಾ 13ರನ್(15 ಎಸೆತ 1 ಬೌಂಡರಿ, 1 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 120ರ ಗಡಿ ದಾಟಿಸಿದರು. ಅಂತಿಮವಾಗಿ ಮುಂಬೈ ತಂಡ ನಿಗದಿತ ಓವರ್‍ ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿತು. ಇದನ್ನೂ ಓದಿ: ರೋಚಕ ಘಟ್ಟ ತಲುಪಿದ ಐಪಿಎಲ್ – ಪ್ಲೇ ಆಫ್‍ಗೆ ಏರಲು ಯಾವ ತಂಡ ಏನು ಮಾಡಬೇಕು?

    ಡೆಲ್ಲಿ ಪರ ಅವೇಶ್ ಖಾನ್ ಮತ್ತು ಅಕ್ಷರ್ ಪಟೇಲ್ 3 ವಿಕೆಟ್ ಕಿತ್ತು ಮಿಂಚಿದರೆ, ಅನ್ರಿಚ್ ನಾಟ್ರ್ಜೆ ಮತ್ತು ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು.