Tag: MGNREGA

  • ನರೇಗಾದಲ್ಲಿ ಭಾರೀ ಗೋಲ್ಮಾಲ್‌ – ಬಿಲ್ ಪಡೆಯಲು ಸೀರೆಯುಟ್ಟ ಯುವಕ!

    ನರೇಗಾದಲ್ಲಿ ಭಾರೀ ಗೋಲ್ಮಾಲ್‌ – ಬಿಲ್ ಪಡೆಯಲು ಸೀರೆಯುಟ್ಟ ಯುವಕ!

    ಬಾಗಲಕೋಟೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA)ಬಿಲ್ ಪಡೆಯಲು ಯುವಕನೊಬ್ಬ ಸೀರೆಯುಟ್ಟು ಫೋಟೋಗೆ ಪೋಸ್ ನೀಡಿ ಅಕ್ರಮ ಎಸಗಿರುವ ಘಟನೆ ಹುನಗುಂದ (Hungunda) ಹಾಗೂ ಇಳಕಲ್ (Ilkal) ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ.

    ಯುವಕನೋರ್ವ MGNREGA ಬಿಲ್ ಪಡೆಯಲು ಸೀರೆ ಉಟ್ಟು ಫೋಟೋಗೆ ಫೋಸ್‌ ನೀಡಿ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡಿಸಿದ್ದಾನೆ. ಇಳಕಲ್ ತಾಲ್ಲೂಕಿನ ಚಿಕನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ‌ ಸಿದ್ದನಕೊಳ್ಳ ಗ್ರಾಮದಲ್ಲಿ ಬ್ಲಾಕ್ ಪ್ಲಾಂಟೇಷನ್ ಕಾಮಗಾರಿಗೆ ಮಂಗಳಮ್ಮ ಆರಿ ಹೆಸರಲ್ಲಿ ಯುವಕ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾನೆ.

    ಪಂಚಾಯತ್ ರಾಜ್ ಹಾಗೂ ಗ್ರಾಮ ಪಂಚಾಯತ್‌ಗಳಿಂದ (Village Panchayat) ನಿಯಮ ಮೀರಿದ ಕಾಮಗಾರಿ ಮಾಡಲಾಗಿದ್ದು, ಬಿಲ್‌ಪಾಸ್ ಮಾಡಿಕೊಳ್ಳಲು ಈ ರೀತಿಯ ವಿನೂತನ ರೀತಿಯಲ್ಲಿ ಭ್ರಷ್ಟಾಚಾರ ಮಾಡಿ ಯುವಕ ಈಗ ಸುದ್ದಿಯಾಗಿದ್ದಾನೆ. ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಬುಕ್‌ ಮಾಡಿ – ಪಾರ್ಸೆಲ್ ಪಡೆಯಲು ಮನೆಗೆ ಬರ್ತಾರೆ ಪೋಸ್ಟ್‌ಮ್ಯಾನ್‌!

    ಅಧಿಕಾರಿಗಳು ಅಂಗನವಾಡಿ ಕಟ್ಟಡಕ್ಕೆ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರನ್ನು ಬಳಕೆ‌ ಮಾಡಿದ್ದಾರೆ. ಹುನಗುಂದ ಪಂಚಾಯತ್ ರಾಜ್‌ ಇಲಾಖೆ ವತಿಯಿಂದ ನಡೆದಿರುವ ಅಕ್ರಮ ಇದಾಗಿದ್ದು ಇದರಲ್ಲಿ ಅಧಿಕಾರಿಗಳು ಭಾಗಿಯಾಗಿರುವ ಗಂಭೀರ ಆರೋಪ ಬಂದಿದೆ. ಇದನ್ನೂ ಓದಿ: ಬಿಜೆಪಿ ಕಚೇರಿಗೆ ದಿಢೀರ್ ಭೇಟಿ – ಅಸಮಾಧಾನಿತರ ಜೊತೆ ಮಾತುಕತೆಗೆ ಸಿದ್ಧ ಎಂದ ಬಿಎಸ್‌ವೈ

    ಕೂಲಿಕಾರ್ಮಿಕರ ಒಂದೇ ಫೋಟೋ ಎರಡೆರಡು ಗ್ರಾಮ ಪಂಚಾಯತ್‌ಗಳಲ್ಲಿ ಬಳಕೆ ಮಾಡಿಕೊಂಡಿರುವದು ಬೆಳಕಿಗೆ ಬಂದಿದೆ. ಗಂಜಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿ ಅಂಗನವಾಡಿ ಕಟ್ಟಡ ಮತ್ತು ಬಿಂಜವಾಡಗಿ ಗ್ರಾಪಂ ವ್ಯಾಪ್ತಿಯ ಅಂಗನವಾಡಿ ಕಟ್ಟಡಕ್ಕೆ ಕೂಲಿ ಕಾರ್ಮಿಕರ ಒಂದೇ ಫೋಟೋ ಅಪ್ಲೋಡ್ ಮಾಡಲಾಗಿದ್ದು, ಹೆಸರು ಮಾತ್ರ ಬೇರೆ ಬೇರೆ ಮಾಡಲಾಗಿದೆ.

    ಇದೇ ರೀತಿ ಹುನಗುಂದ ಹಾಗೂ ಇಳಕಲ್ ತಾಲೂಕಿನ ರಾಮವಾಡಗಿ, ಚಿನ್ನಾಪುರ ಎಸ್ ಟಿ ಅಂಗನವಾಡಿ ಕಟ್ಟಡಕ್ಕೆ ಒಂದೇ ರೀತಿಯ ಫೋಟೋ ಅಪ್ಲೋಡ್ ಮಾಡಲಾಗಿದೆ. ಇವುಗಳನ್ನು ನೋಡಿದಾಗ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

  • ಬೆಳಗಾವಿ, ಕಲಬುರಗಿಯಲ್ಲಿ ತಾಪಮಾನ ಹೆಚ್ಚಳ; ನರೇಗಾ ಕಾರ್ಮಿಕರಿಗೆ 30% ಕೆಲಸದ ಪ್ರಮಾಣ ಕಡಿತ: ಪ್ರಿಯಾಂಕ್ ಖರ್ಗೆ

    ಬೆಳಗಾವಿ, ಕಲಬುರಗಿಯಲ್ಲಿ ತಾಪಮಾನ ಹೆಚ್ಚಳ; ನರೇಗಾ ಕಾರ್ಮಿಕರಿಗೆ 30% ಕೆಲಸದ ಪ್ರಮಾಣ ಕಡಿತ: ಪ್ರಿಯಾಂಕ್ ಖರ್ಗೆ

    ಬೆಂಗಳೂರು: ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ಏರಿಕೆಯಾಗಿದ್ದು, ಹೆಚ್ಚಿನ ಬಿಸಿಲು ಇರುವ ಕಾರಣ, ಗ್ರಾಮೀಣ ಭಾಗದ ಜೀವನೋಪಾಯದ ಪ್ರಮುಖ ಭಾಗವಾದ ನರೇಗಾ ಯೋಜನೆಯಡಿ(MGNREGA Project) ಕೂಲಿ ಕೆಲಸ ಮಾಡುವ ಬೆಳಗಾವಿ(Belagavi) ಮತ್ತು ಕಲಬುರಗಿ(Kalaburagi) ಕಂದಾಯ ವಿಭಾಗದ ಕಾರ್ಮಿಕರಿಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 30% ರಷ್ಟು ಹಾಗೂ ಜೂನ್‌ನಲ್ಲಿ 20% ರಷ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ಘೋಷಿಸಿರುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ತಿಳಿಸಿದ್ದಾರೆ.

    ಬೇಸಿಗೆ ದಿನಗಳಲ್ಲಿ ಕೂಲಿ ಕಾರ್ಮಿಕರು ಶಾಖಾಘಾತದಿಂದ, ತಮ್ಮ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಪ್ಪಿಸಲು ಬಿಳಿಯ ಬಣ್ಣದ ಸಡಿಲವಾದ ಖಾದಿ ಬಟ್ಟೆಗಳನ್ನು ಹಾಗೂ ತಲೆಯ ಮೇಲೆ ಬಿಳಿ ಬಣ್ಣದ ರುಮಾಲು ಧರಿಸಿ ಕೆಲಸ ಮಾಡಬೇಕು. ಚಹಾ, ಕಾಫಿ, ತಂಪಾದ ಪಾನೀಯಗಳು, ಮಸಾಲೆ ಮತ್ತು ಎಣ್ಣೆಭರಿತ ಆಹಾರದ ಬದಲಾಗಿ ಹೆಚ್ಚು ತೇವಾಂಶವುಳ್ಳ ತರಕಾರಿ, ಅಂಬಲಿ, ಮಜ್ಜಿಗೆ, ಎಳೆನೀರು ಸೇವನೆ ಮಾಡಬೇಕು. ನೀರನ್ನು ಯಥೇಚ್ಛವಾಗಿ ಕುಡಿಯಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಮಗು ಇದ್ದಂತೆ ಚಾಕ್ಲೇಟ್ ಕೊಟ್ಟವರ ಕಡೆ ಹೋಗ್ತಾರೆ: ಪ್ರದೀಪ್ ಈಶ್ವರ್ ಲೇವಡಿ

    ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ಸ್ಥಳಗಳಲ್ಲಿ ಯೋಜನೆಯ ಮಾರ್ಗಸೂಚಿಯಂತೆ ಕಡ್ಡಾಯವಾಗಿ ನೆರಳು, ಶುದ್ಧ ಕುಡಿಯುವ ನೀರು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮವಹಿಸಲು ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ: ʻವಕ್ಫ್‌ ವಾರ್‌ʼ – ಸೋನಿಯಾ ಗಾಂಧಿ ಕ್ಷಮೆ ಯಾಚಿಸಲಿ: ಬಿಜೆಪಿ ಪಟ್ಟು

  • ಈ ಬಾರಿ 7.43 ಲಕ್ಷ ನಕಲಿ MGNREGA ಜಾಬ್ ಕಾರ್ಡ್ ಡಿಲೀಟ್ – ಯುಪಿಯಲ್ಲೇ ಅತಿ ಹೆಚ್ಚು

    ಈ ಬಾರಿ 7.43 ಲಕ್ಷ ನಕಲಿ MGNREGA ಜಾಬ್ ಕಾರ್ಡ್ ಡಿಲೀಟ್ – ಯುಪಿಯಲ್ಲೇ ಅತಿ ಹೆಚ್ಚು

    ನವದೆಹಲಿ: 2022-23ರ ಆರ್ಥಿಕ ವರ್ಷದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಅಡಿಯಲ್ಲಿ 7.43 ಲಕ್ಷಕ್ಕೂ ಹೆಚ್ಚು ನಕಲಿ ಉದ್ಯೋಗ ಕಾರ್ಡ್‌ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.

    ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿ ಈ ವಿವರಗಳನ್ನು ಹಂಚಿಕೊಂಡಿದ್ದಾರೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಬಾರಿ ನಕಲಿ ಜಾಬ್ ಕಾರ್ಡ್‌ಗಳನ್ನು ತೆಗೆದುಹಾಕುವಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. 2021-22 ರಲ್ಲಿ 3,06,944 ನಕಲಿ ಜಾಬ್ ಕಾರ್ಡ್‌ಗಳನ್ನು ಅಳಿಸಲಾಗಿತ್ತು. ಆದರೆ ಈ ಬಾರಿ ಅದರ ಸಂಖ್ಯೆ 7,43,457 ಕ್ಕೆ ಏರಿಕೆಯಾಗಿದೆ.

    ಈ ಪ್ರಕ್ರಿಯೆಯಲ್ಲಿ ಉತ್ತರ ಪ್ರದೇಶದಲ್ಲಿ 2.96 ಲಕ್ಷಕ್ಕೂ ಹೆಚ್ಚು ನಕಲಿ ಜಾಬ್ ಕಾರ್ಡ್‌ಗಳನ್ನು ಅಳಿಸಲಾಗಿದೆ. ಇದು ದೇಶದಲ್ಲೇ ಅತಿ ಹೆಚ್ಚು ಎಂದು ವರದಿಯಾಗಿದೆ. ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಒದಗಿಸಿರುವ ವಿವರದಲ್ಲಿ, ಉತ್ತರ ಪ್ರದೇಶದಲ್ಲಿ 2,96,464 ನಕಲಿ ಜಾಬ್ ಕಾರ್ಡ್‌ಗಳನ್ನು ಅಳಿಸುವ ಮೂಲಕ ದೇಶದಲ್ಲೆ ಅಗ್ರ ಸ್ಥಾನದಲ್ಲಿದೆ. ಒಡಿಶಾದಲ್ಲಿ 1,14,333 ನಕಲಿ ಜಾಬ್ ಕಾರ್ಡ್ ಅಳಿಸುವ ಮೂಲಕ ನಂತರದ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಡಲಾಮೆಗಳಿಗಾಗಿ 3 ತಿಂಗಳು ಕ್ಷಿಪಣಿ ಪರೀಕ್ಷೆ ಬಂದ್

    ಜಾಬ್ ಕಾರ್ಡ್‌ಗಳನ್ನು ಅಳಿಸುವ ಮತ್ತು ಅಪ್ಡೇಟ್ ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. MGNREGA ಕಾಯಿದೆಯ ಸೆಕ್ಷನ್ 25ರ ಪ್ರಕಾರ ಇದನ್ನು ಉಲ್ಲಂಘಿಸುವವರು 1,000 ರೂ.ವರೆಗೆ ದಂಡವನ್ನು ಕಟ್ಟಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ ಪ್ರಕರಣ – ಇಬ್ಬರು ಶೂಟರ್ ಸೇರಿ ಮೂವರು ಅರೆಸ್ಟ್

  • ನಗರದಿಂದ ಗ್ರಾಮಕ್ಕೆ ಮರಳಿದವರಿಗೆ ಉದ್ಯೋಗ ಖಾತ್ರಿ

    ನಗರದಿಂದ ಗ್ರಾಮಕ್ಕೆ ಮರಳಿದವರಿಗೆ ಉದ್ಯೋಗ ಖಾತ್ರಿ

    ರಾಯಚೂರು: ಲಾಕ್‍ಡೌನ್ ಹಿನ್ನೆಲೆ ನಗರ ಪ್ರದೇಶದಲ್ಲಿದ್ದ ಕೂಲಿ ಕಾರ್ಮಿಕರಿಗೆ ಉದ್ಯೋಗವಿಲ್ಲದಂತಾಗಿದೆ. ಕೂಲಿಕಾರ್ಮಿಕರಿಗೆ ಉದ್ಯೋಗ ನೀಡುವ ಉದ್ದೇಶದಿಂದ ನರೇಗಾ ಕಾಮಗಾರಿ ಆರಂಭಿಸಲಾಗಿದೆ. ಆದರೆ ರಾಯಚೂರಿನಲ್ಲಿ ನಿಗಿಧಿತ ಪ್ರಮಾಣದಲ್ಲಿ ಕೂಲಿಕಾರರಿಗೆ ಕೆಲಸ ಸಿಗುತ್ತಿಲ್ಲ, ಕಾರಣ ಕೆಲಸ ಮಾಡುವ ಸ್ಥಳದಲ್ಲಿ ಕನಿಷ್ಠ ಸೌಲಭ್ಯಗಳೇ ಇಲ್ಲ ಎಂಬುದು ಕೂಲಿ ಕಾರ್ಮಿಕರ ಅಳಲು.

    ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರನ್ನು ರಾಯಚೂರು ಜಿಲ್ಲೆ ಹೊಂದಿದ್ದು, ಇಲ್ಲಿ ಸರಿಯಾದ ಉದ್ಯೋಗ, ಕೆಲಸಕ್ಕೆ ತಕ್ಕಂತೆ ಕೂಲಿ ಸಿಗದ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು ಉದ್ಯೋಗ ಅರಸಿಕೊಂಡು ದೂರದ ಬೆಂಗಳೂರು, ಮುಂಬೈ, ಪೂನಾ ಸೇರಿದಂತೆ ವಿವಿಧ ನಗರಗಳಿಗೆ ತೆರಳಿದ್ದಾರೆ.

    ಸದ್ಯ ನಗರ ಪ್ರದೇಶದಲ್ಲಿ ಉದ್ಯೋಗವಿಲ್ಲದೆ ಕೂಲಿಕಾರರು ತಮ್ಮ ಗ್ರಾಮದತ್ತ ಬಂದಿದ್ದಾರೆ. ರಾಯಚೂರು ಜಿಲ್ಲೆಯೊಂದರಲ್ಲಿಯೇ ಸುಮಾರು 60 ಸಾವಿರ ಕೂಲಿಕಾರ್ಮಿಕರು ವಾಪಾಸ್ಸಾಗಿದ್ದಾರೆ. ಉದ್ಯೋಗವಿಲ್ಲದೆ ಪರದಾಡುತ್ತಿರುವವರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ನೀಡಲಾಗುತ್ತಿದೆ. ಆದರೆ ಗುಳೆ ಹೋಗಿ ಬಂದವರಿಗೆ ಸದ್ಯ ಉದ್ಯೋಗ ಕಾರ್ಡ್ ಇಲ್ಲದೆ ಹಲವರಿಗೆ ಉದ್ಯೋಗ ಸಿಗುತ್ತಿಲ್ಲ. ಇತ್ತ ವಲಸೆ ಬಂದ ತಕ್ಷಣ ಅವರನ್ನು ಹೋಂ ಕ್ವಾರೆಂಟೈನ್ ಮಾಡುತ್ತಿರುವದರಿಂದ ಅವರು ಹೊರಬರಲು ಸಹ ಆಗುತ್ತಿಲ್ಲ.

    ಕೆಲಸ ಸಮಯದಲ್ಲಿ ಕಾರ್ಮಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಆದರೆ ಕಾರ್ಮಿಕರು ಗುಂಪು ಕೂಡಿ ಟ್ರ್ಯಾಕ್ಟರಿನಲ್ಲಿ ಕೆಲಸಕ್ಕೆ ಆಗಮಿಸುತ್ತಿದ್ದಾರೆ. ಇಲ್ಲಿ ಕಾರ್ಮಿಕರಿಗೆ ಮಾಸ್ಕ್ ವಿತರಿಸಿಲ್ಲ. ಜಿಲ್ಲೆಯಲ್ಲಿ ಒಟ್ಟು 2.53 ಲಕ್ಷ ಕೂಲಿಕಾರರು ಉದ್ಯೋಗ ಕಾರ್ಡ್ ಹೊಂದಿದ್ದು, ವಲಸೆ ಬಂದವರಲ್ಲಿ ಶೇ.10ಕ್ಕಿಂತ ಅಧಿಕ ಕೂಲಿಕಾರರಿಗೆ ಉದ್ಯೋಗ ಕಾರ್ಡ್ ಇಲ್ಲ.

    ಈ ಕುರಿತು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರ ಬಳಿ ಪ್ರಶ್ನಿಸಿದರೆ, ಈಗ 60 ಸಾವಿರ ಜನ ವಿವಿಧ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಉದ್ಯೋಗ ಕಾರ್ಡ್ ಇಲ್ಲದವರು ಅರ್ಜಿ ಹಾಕಿದರೆ ಅವರಿಗೆ ಕಾರ್ಡ್ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇತ್ತ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿದವರಿಗೆ ಸಕಾಲದಲ್ಲಿ ಕೂಲಿ ಹಣ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ ಸಿಇಓ ಲಕ್ಷ್ಮಿಕಾಂತರೆಡ್ಡಿ ಹೇಳಿದ್ದಾರೆ. ಸರ್ಕಾರ ಗುಳೆ ಹೋಗಿ ವಾಪಸ್ ಬಂದವರಿಗೂ ಕೆಲಸ ಕೊಡಲು ಮುಂದಾಗಿದ್ದು, ಇಲ್ಲಿರುವ ಲೋಪದೋಷಗಳನ್ನು ಸ್ಥಳೀಯ ಮಟ್ಟದಲ್ಲಿ ಬಗೆಹರಿಸಬೇಕಾಗಿದೆ.