Tag: MGM College

  • ಉಡುಪಿಯ ವಿದ್ಯಾರ್ಥಿಗಳ ವನ್ ಡೇ ಹೋಟೆಲ್ – ಆಟದ ದಿನ ಜೀವನ ಪಾಠದ ಪ್ಲ್ಯಾನ್

    ಉಡುಪಿಯ ವಿದ್ಯಾರ್ಥಿಗಳ ವನ್ ಡೇ ಹೋಟೆಲ್ – ಆಟದ ದಿನ ಜೀವನ ಪಾಠದ ಪ್ಲ್ಯಾನ್

    ಉಡುಪಿ: ಜಿಲ್ಲೆಯ ಪ್ರತಿಷ್ಠಿತ ಎಂಜಿಎಂ ಕಾಲೇಜಿನ ಸ್ಟೂಡೆಂಟ್ಸ್ ವೆಲ್ಫೇರ್ ಕೌನ್ಸಿಲ್‍ನ ವಿದ್ಯಾರ್ಥಿಗಳು ನಾಳೆ ಒಂದು ದಿನದ ಮಟ್ಟಿಗೆ ಹೋಟೆಲ್ ಬಿಸಿನೆಸ್ ಮಾಡಲಿದ್ದಾರೆ. ಉಡುಪಿಯ ಹೋಟೆಲ್‍ಗಳಲ್ಲಿ ಸಿಗುವ ಎಲ್ಲಾ ಸ್ಪೆಷಲ್ ತಿಂಡಿಗಳನ್ನು ಒಂದೇ ಸೂರಿನಡಿ ಮಾರಾಟ ಮಾಡಲಿದ್ದಾರೆ.

    ಉಡುಪಿಯ ಮಹಾತ್ಮಾಗಾಂಧಿ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಫೆಬ್ರವರಿ 1 ಕ್ಕೆ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ. ಸ್ಪೋರ್ಟ್ ಡೇ ದಿನ ಮಧ್ಯಾಹ್ನ ಊಟ, ಬೆಳಗ್ಗೆ ತಿಂಡಿ, ಸಂಜೆ ಟೀಗೆ ವಿದ್ಯಾರ್ಥಿಗಳು ರಸ್ತೆ ಪಕ್ಕದ ಹೋಟೆಲ್-ಬೇಕರಿಗಳನ್ನು ಅವಲಂಬಿಸುತ್ತಾರೆ. ಆದರೆ ಈ ಬಾರಿ ಡಿಫರೆಂಟ್ ಕಾನ್ಸೆಪ್ಟ್ ಅನ್ನು ಕಾಲೇಜು ವಿದ್ಯಾರ್ಥಿಗಳೇ ಮಾಡಲು ಹೊರಟಿದ್ದಾರೆ.

    13 ವಿದ್ಯಾರ್ಥಿಗಳ ತಂಡ ಮೈದಾನದಲ್ಲಿ ಹೋಟೆಲ್ ತೆರೆಯಲಿದೆ. ಕೂಲ್ ಡ್ರಿಂಕ್ಸ್ ನಿಂದ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ವಿದ್ಯಾರ್ಥಿಗಳು ಮಾಡಲಿದ್ದಾರೆ. ಉಡುಪಿ ನಗರದ ಹೋಟೆಲ್ ಗಳಲ್ಲಿ ಸಿಗುವ 10 ಡಿಫರೆಂಟ್ ಡಿಫರೆಂಟ್ ತಿಂಡಿ ತಿನಿಸುಗಳನ್ನು ತಂದು ಒಂದು ಕಡೆ ಮಾರಾಟ ಮಾಡಲಿದ್ದಾರೆ. ಬಿಸಿ ಚಕ್ಕುಲಿ ತೋವೆ, ತಂಪು ಎಳನೀರು ಶರಬತ್ತು, ಸಿಪ್ಪೆ ಲೋಟದ ಕಲ್ಲಂಗಡಿ ಜ್ಯೂಸ್, ಫ್ರೈಡ್ ರೈಸ್, ಬೆಲ್ಲ ಕ್ಯಾಂಡಿ, ದೂದ್ ಕ್ಯಾಂಡಿ, ವಡಪಾವ್, ಉಡುಪಿ ಪಾನಿಪುರಿ, ಬೆಂಕಿ ಬೀಡ, ಹೋಳಿಗೆ ತುಪ್ಪ, ಐಸ್ ಕ್ರೀಂ ಹೀಗೆ ತರಹೇವಾರಿ ಐಟಂಗಳು ಹೋಟೆಲ್ ಅಲ್ಲಿ ಸಿಗಲಿದೆ. ಚಹಾ, ಕಾಫಿ, ಮಾಲ್ಟ್, ಹಾರ್ಲಿಕ್ಸ್, ಕೂಲ್ ಡ್ರಿಂಕ್ ಕೂಡಾ ವಿದ್ಯಾರ್ಥಿಗಳ ಹೋಟೆಲಿನಲ್ಲಿ ಲಭ್ಯವಿರುತ್ತದೆ.

    ಸ್ಟೂಡೆಂಟ್ಸ್ ವೆಲ್ಫೇರ್ ಕೌನ್ಸಿಲ್ ಗೆ ಸ್ಪೋರ್ಟ್ಸ್ ಡೇ ದಿನ ಹೋಟೆಲ್ ಓಪನ್ ಮಾಡಿ ಲಾಭ ಮಾಡಬೇಕೆಂಬ ಉದ್ದೇಶ ಇಲ್ಲ. ನಮಗೆ ಸಿಗುವ ಬೆಲೆಯಲ್ಲೇ ನಮ್ಮ ಹೋಟೆಲ್ ನಲ್ಲಿ ನಾವು ವ್ಯಾಪಾರ ಮಾಡುತ್ತೇವೆ. ಸ್ಥಳ ಬಾಡಿಗೆ ಇಲ್ಲ. ಲಾಭ ಮಾಡಿ ಯಾರಿಗೂ ಸಹಾಯ ಮಾಡುವ ಉದ್ದೇಶವೂ ಇಲ್ಲ ಎಂದು ವಿದ್ಯಾರ್ಥಿ ನಾಯಕ ಶ್ರೇಯಸ್ ಕೋಟ್ಯಾನ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

    ಕಾಲೇಜಿನ ವಾಟ್ಸಾಪ್ ಗ್ರೂಪ್, ಫೇಸ್ ಬುಕ್ ಪೇಜ್, ವೆಬ್ ಸೈಟ್ ಗಳಲ್ಲಿ ವಿದ್ಯಾರ್ಥಿ ಹೋಟೆಲ್ ನ ಬಗ್ಗೆ ಪ್ರಚಾರ ಶುರುವಾಗಿದೆ. ವಿಭಿನ್ನ ಕಾರ್ಯಕ್ರಮದ ಬಗ್ಗೆ ವಿಭಿನ್ನ ಆಮಂತ್ರಣ ಪತ್ರಿಕೆ ಮಾಡಿ ಶೇರ್ ಮಾಡುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳಲ್ಲಿ ಸದ್ಯ ಸ್ಟೂಡೆಂಟ್ಸ್ ಹೋಟೆಲ್ ನ ಬಗ್ಗೆ ಚರ್ಚೆ ನಡೆಯುತ್ತಿದೆ.

    ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಎಂ.ಜಿ ವಿಜಯ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಈಗಿನ ಮಕ್ಕಳಿಗೆ ಜೀವನ ಪಾಠದ ಅಗತ್ಯವಿದೆ. ಪುಸ್ತಕ ಮತ್ತು ಮೊಬೈಲ್ ನಿಂದ ಮಾತ್ರ ಜೀವನ ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ರಮೇಶ್ ಕಾರ್ಲ ಮತ್ತು ಶಿಕ್ಷಕರ ತಂಡ ವಿದ್ಯಾರ್ಥಿಗಳ ಹೊಸ ತರದ ಆಲೋಚನೆಗೆ ಬೆಂಬಲ ನೀಡಿದೆ.

  • ಉಡುಪಿ ಎಂಜಿಎಂ ಕಾಲೇಜಿನಲ್ಲಿ ಮಾಲ್ಗುಡಿ ಡೇಸ್ ಚಿತ್ರತಂಡದ ಕಟ್ಟೆ ಪಂಚಾತಿಕೆ

    ಉಡುಪಿ ಎಂಜಿಎಂ ಕಾಲೇಜಿನಲ್ಲಿ ಮಾಲ್ಗುಡಿ ಡೇಸ್ ಚಿತ್ರತಂಡದ ಕಟ್ಟೆ ಪಂಚಾತಿಕೆ

    ಉಡುಪಿ: ಮಾಲ್ಗುಡಿ ಡೇಸ್ ಚಿತ್ರದಲ್ಲಿ ಬ್ಯುಸಿ ಇರುವ ವಿಜಯ್ ರಾಘವೇಂದ್ರ ತಮ್ಮ ತಂಡದ ಜೊತೆ ಕಟ್ಟೆ ಪಂಚಾತಿಕೆ ಮಾಡಿದ್ದಾರೆ.

    ಉಡುಪಿ ನಗರದ ಎಂ.ಜಿ.ಎಂ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿಯು ಆಯೋಜಿಸಿದ್ದ ಕಟ್ಟೆ ಪಂಚಾತಿಕೆ ಮಾತುಕತೆ ಸರಣಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ.

    ಭಾಷೆ, ಬಟ್ಟೆ, ಅನುಕೂಲತೆಗಳನ್ನು ಹೆಚ್ಚಿಸಿಕೊಂಡ ಕೂಡಲೇ ನಾವು ಆಧುನಿಕರಾಗುವುದಿಲ್ಲ. ಹಳೆಯದನ್ನೂ ಅನುಸರಿಸುತ್ತ ಇವತ್ತಿಗೂ ಬೇಕಾಗುವಂತೆ ಬದುಕುವುದೇ ಆದರ್ಶ ಜೀವನ. ಆಧುನಿಕತೆಯ ಬೇರು ಹಳತರಲ್ಲಿದೆ ಎಂದು ವಿಜಯ ರಾಘವೇಂದ್ರ ಹೇಳಿದರು. ದುಡ್ಡು ಮತ್ತು ಅಭಿರುಚಿಯ ಕುರಿತು ಅನೇಕರಲ್ಲಿ ಗೊಂದಲಗಳಿವೆ. ಹಣದ ಹಿಂದೆ ಹೋದಾಗ ಬುದ್ಧಿ ಕೆಲಸ ಮಾಡುತ್ತದೆಯೇ ವಿನಃ ಮನಸ್ಸು ಜೊತೆಗಿರುವುದಿಲ್ಲ. ನಮ್ಮ ಆಸಕ್ತಿಯ ಹಿಂದೆಯೇ ಬಿದ್ದಾಗ ಕಷ್ಟಗಳೂ ಕೇವಲವಾಗಿ ಬಿಡುತ್ತವೆ. ಎತ್ತರದ ಸಾಧನೆ ಸಾಧ್ಯ. ಸೋಲು ಬದುಕಿನ ಒಂದು ಭಾಗವಷ್ಟೇ ಎಂದು ವಿಜಯ ರಾಘವೇಂದ್ರ ಹೇಳಿದರು.

    ವಿದ್ಯಾರ್ಥಿಗಳ ಜೊತೆ ಚಿತ್ರದ ಬಗ್ಗೆ, ತಮ್ಮ ಬಾಲ್ಯ, ಕಾಲೇಜು ದಿನಗಳನ್ನು ಮೆಲುಕು ಹಾಕಿಕೊಂಡರು. ಕಾರ್ಯಕ್ರಮ ಮುಗಿದ ಮೇಲೆ ರಾಘು ಜೊತೆ ವಿದ್ಯಾರ್ಥಿಗಳು ಸೆಲ್ಫಿ ಕ್ಲಿಕ್ ಮಾಡಿ, ಎರಡು ಸ್ಟೆಪ್ ಹಾಕಿದರು.

    ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ. ವಿಜಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಲ್ಗುಡಿ ಡೇಸ್ ಚಿತ್ರದ ನಿರ್ದೇಶಕ ಕಿಶೋರ್ ಮೂಡಬಿದ್ರೆ, ನಿರ್ಮಾಪಕ ರವಿಶಂಕರ್, ನಾಯಕಿ ಗ್ರೀಷ್ಮ ಜೊತೆಗಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಅಧ್ಯಕ್ಷ ಶ್ರೇಯಸ್ ಕೋಟ್ಯಾನ್ ಪಂಚಾತಿಕೆಯ ನಿರೂಪಣೆ ಮಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಮಹಿಮಾ ಶೆಣೈ ವಂದಿಸಿದರು.