Tag: Metro Station

  • ಒಮಿಕ್ರಾನ್ ಆತಂಕ – ಮಾಸ್ಕ್ ಇಲ್ಲದವರಿಗೆ ಮೆಟ್ರೋಗೆ ನೋ ಎಂಟ್ರಿ

    ಒಮಿಕ್ರಾನ್ ಆತಂಕ – ಮಾಸ್ಕ್ ಇಲ್ಲದವರಿಗೆ ಮೆಟ್ರೋಗೆ ನೋ ಎಂಟ್ರಿ

    ಬೆಂಗಳೂರು: ಒಮಿಕ್ರಾನ್ ಆತಂಕ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೆಟ್ರೋ ಪ್ರಯಾಣಕ್ಕೆ ಮಾಸ್ಕ್ ಕಡ್ಡಾಯವಾಗಿದ್ದು, ಮಾಸ್ಕ್ ಇಲ್ಲದೇ ಪ್ರಯಾಣಿಸುವವರಿಗೆ ನಿರ್ಬಂಧ ವಿಧಿಸಲಾಗಿದೆ.

    ಕೋವಿಡ್ ಮಾರ್ಗಸೂಚಿ ಪಾಲನೆಗೆ ಒತ್ತು ನೀಡಿರುವ ಬೆಂಗಳೂರು ಮೆಟ್ರೋ ನಿಗಮ ಮೆಟ್ರೋ ಸ್ಟೇಷನ್, ಮೆಟ್ರೋ ಬೋಗಿ ಒಳಗೆ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಓಮಿಕ್ರಾನ್ ಇರೋ ದೇಶದ ಪ್ರಜೆಗಳ ಪ್ರವೇಶಕ್ಕೆ ನಿರ್ಬಂಧ ಹೇರಲು ಕೇಂದ್ರಕ್ಕೆ ಮನವಿ ಮಾಡಿದ್ದೇವೆ: ಸಿಎಂ

    ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಕೇಸ್ ಇಳಿಕೆಯಾಗುತ್ತಿದ್ದಂತೆ ಜನ ಮಾಸ್ಕ್, ಸಾಮಾಜಿಕ ಅಂತರ ಪಾಲನೆಯನ್ನು ಮರೆತಿದ್ದರು. ಆದರೆ ಇದೀಗ ರೂಪಾಂತರಿ ಒಮಿಕ್ರಾನ್ ಆತಂಕದಿಂದ ಮತ್ತೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಬೆಂಗಳೂರು ನಗರದಲ್ಲಿ ಮಾಸ್ಕ್, ಸಾಮಾಜಿಕ ಅಂತರದ ಮೇಲೆ ಬಿಬಿಎಂಪಿ ಮಾರ್ಷಲ್‍ಗಳು ನಿಗಾ ವಹಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಋಣ ತೀರಿಸಲು ಮುಂದಾದ್ರಾ ಸುಮಲತಾ?

  • ಬೈಯಪ್ಪನಹಳ್ಳಿ ನೂತನ ರೈಲ್ವೆ ಟರ್ಮಿನಲ್‍ಗೆ ಕೆಂದ್ರ ಸಚಿವ ಅಶ್ವಿನಿ ವೈಷ್ಣವ್ ಭೇಟಿ, ಪರಿಶೀಲನೆ

    ಬೈಯಪ್ಪನಹಳ್ಳಿ ನೂತನ ರೈಲ್ವೆ ಟರ್ಮಿನಲ್‍ಗೆ ಕೆಂದ್ರ ಸಚಿವ ಅಶ್ವಿನಿ ವೈಷ್ಣವ್ ಭೇಟಿ, ಪರಿಶೀಲನೆ

    ಆನೇಕಲ್: ದೇಶದಲ್ಲೆ ಮೊಟ್ಟಮೊದಲ ಹವಾನಿಯಂತ್ರಿತ ರೈಲ್ವೆ ನಿಲ್ದಾಣ ಎಂಬ ಹೆಗ್ಗಳಿಕೆ ಪಡೆದಿರುವ ವಿಮಾನ ನಿಲ್ದಾಣ ಮಾದರಿಯಲ್ಲಿ ನಿರ್ಮಿಸಲಾದ ಮತ್ತು ಉದ್ಘಾಟನೆಗೆ ಸಿದ್ಧವಾಗಿರುವ ಬೈಯಪ್ಪನಹಳ್ಳಿ ನೂತನ ರೈಲ್ವೆ ನಿಲ್ದಾಣದ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಗೆ ಇಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ರೈಲ್ವೆ ಯಾರ್ಡ್ ನ ಕಾರ್ಯಕಾರಿ ಅಂಶಗಳು, ಸೌಲಭ್ಯಗಳು ಮತ್ತು ನಿಲ್ದಾಣದಲ್ಲಿ ಒದಗಿಸಲಾದ ನವೀನ ವೈಶಿಷ್ಟ್ಯಗಳನ್ನು ಪರಿಶೀಲಿಸಿದರು. ಪರಿಶೀಲನೆಗೂ ಮುನ್ನ ಸಚಿವರಿಗೆ ರೈಲ್ವೆ ಪೊಲೀಸರಿಂದ ಗೌರವ ಗೌರವ ವಂದನೆ ಅರ್ಪಿಸಲಾಯಿತು.

    ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ನೇತೃತ್ವದ ಎಸ್‍ಡಬ್ಲ್ಯೂಆರ್‍ನ ಹಿರಿಯ ಅಧಿಕಾರಿಗಳೊಂದಿಗೆ ಅವರು ಈ ಟರ್ಮಿನಲ್ ನಿಂದ ಪಾರ್ಸೆಲ್ ಸಾಗಿಸುವ ಸಾಮರ್ಥ್ಯದ ಕುರಿತು ಚರ್ಚಿಸಿದರು. ನಿಲ್ದಾಣ ನಿರ್ಮಾಣವನ್ನು ನೋಡಿ ತುಂಬಾನೆ ಸಂತೋಷ ವ್ಯಕ್ತಪಡಿಸಿದ ಸಚಿವರು ಟರ್ಮಿನಲ್ ನ ಇಂಚಿಂಚೂ ಮಾಹಿತಿಯನ್ನ ಅಧಿಕಾರಿಗಳಿಂದ ಪಡೆದರು. ನಂತರ ಮಾತನಾಡಿದ ಸಚಿವರು, ಈ ಪ್ರದೇಶದಲ್ಲಿ ತಯಾರಿಸಿದ ಬಿಳಿ ಸರಕುಗಳು, ಕೈಗಾರಿಕಾ ಉಪಕರಣಗಳು, ಜವಳಿ ಮತ್ತು ಇತರ ಉತ್ಪನ್ನಗಳನ್ನು ಸಾಗಿಸಲು ಪಾರ್ಸೆಲ್ ವಿಶೇಷ ರೈಲುಗಳ ಓಡಾಟದಿಂದ ಆದಾಯವನ್ನು ಗಳಿಸಲು ಪ್ರಸ್ತಾಪಗಳನ್ನು ರೂಪಿಸಲು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಟೋಕಿಯೋ ಪ್ಯಾರಾಲಂಪಿಕ್ಸ್ ಭಾರತೀಯ ಕ್ರೀಡಾ ಇತಿಹಾಸದಲ್ಲಿ ವಿಶೇಷ: ಮೋದಿ

    ಈ ವಿಮಾನ ನಿಲ್ದಾಣ ರೀತಿಯಲ್ಲಿ ರೂಪಿಸಿದ ಮತ್ತು ಕಾರ್ಯಗತಗೊಳಿಸಿದ ಎಂಜಿನಿಯರ್‍ಗಳ ತಂಡವನ್ನು ವೈಷ್ಣವ್ ಶ್ಲಾಘಿಸಿದರು. ಸರ್ ಎಂವಿ ಟರ್ಮಿನಲ್‍ನಲ್ಲಿ ಪ್ರಯಾಣಿಕರ ಸೌಕರ್ಯ ಮತ್ತು ಸೌಕರ್ಯವನ್ನು ಹೆಚ್ಚಿಸಲು ಒದಗಿಸಲಾದ ಸೌಲಭ್ಯಗಳು ಮತ್ತು ಸೌಕರ್ಯಗಳು ಭವಿಷ್ಯದಲ್ಲಿ ದೇಶದಾದ್ಯಂತ ನಿರ್ಮಾಣಗೊಳ್ಳುವ ನಿಲ್ದಾಣಗಳಿಗೆ ಮಾನದಂಡವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಅವರು ನಿರ್ಧರಿಸಿದ್ದ ಗುರಿಯನ್ನು ತಲುಪಿದ್ದಾರೆ- ಸುಹಾಸ್ ಸಾಧನೆಗೆ ಪತ್ನಿಯ ಮೆಚ್ಚುಗೆ

    ಇಡೀ ದೇಶಕ್ಕೆ ಮಾದರಿಯಾದ ನಿಲ್ದಾಣ:
    ಈ ನಿಲ್ದಾಣವು 7 ಪ್ಲಾಟ್‍ಫಾರ್ಮ್‍ಗಳನ್ನು ಹೊಂದಿದ್ದು, ದಿನಕ್ಕೆ 1 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುವ ಸಾಮಥ್ರ್ಯವನ್ನು ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಎಸ್ಕಲೇಟರ್‍ಗಳು ಮತ್ತು ಲಿಫ್ಟ್‍ಗಳನ್ನು ಹೊರತುಪಡಿಸಿ ಸಬ್‍ವೇಗೆ ಪ್ರವೇಶಿಸಲು ಬ್ರೈಲ್ ಚಿಹ್ನೆಗಳು, ಅಂಡರ್ ಪಾಸ್ ಗಳ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ದಿವ್ಯಾಂಗ(ಅಂಗವಿಕಲರ) ಸ್ನೇಹಿ ನಿಲ್ದಾಣವಾಗಿದೆ. ನಿಲ್ದಾಣದಲ್ಲಿ ಪರಿಸರ ಸ್ನೇಹಿ ನೀರಿನ ಮರುಬಳಕೆ ಘಟಕವೂ ಇದೆ. ಬಿಬಿಎಂಪಿಯೊಂದಿಗೆ ಸಮಾಲೋಚಿಸಿ ಟರ್ಮಿನಲ್‍ಗೆ ಪ್ರವೇಶಕ್ಕೆ ಕಿರಿದಾದ ರಸ್ತೆಗಳ ಪ್ರವೇಶದ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸಿ ಶೀಘ್ರದಲ್ಲೇ ನಿಲ್ದಾಣ ಉದ್ಘಾಟನೆ ಆಗಲಿದೆ ಎಂದು ಸಚಿವರು ಹೇಳಿದರು.

    ಇದೇ ಸಂದರ್ಭದಲ್ಲಿ ರೈಲ್ವೆ ನಿಲ್ದಾಣ ಪರಿಶೀಲನೆಗೆ ಸಚಿವ ಜೊತೆಗೆ ಸಂಸದ ಪಿ.ಸಿ.ಮೋಹನ್, ಜನರಲ್ ಮ್ಯಾನೇಜರ್ ಎಸ್ ಡಬ್ಲ್ಯುಆರ್ ಸಂಜೀವ್ ಕಿಶೋರ್, ಪ್ರಿನ್ಸಿಪಾಲ್ ಚೀಫ್ ಆಪರೇಷನ್ ಮ್ಯಾನೇಜರ್ ಹರಿ ಶಂಕರ್ ವರ್ಮಾ, ಡಿ ಆರ್ ಎಂ ಬೆಂಗಳೂರು ಶ್ಯಾಮ್ ಸಿಂಗ್, ಮುಖ್ಯ ಆಡಳಿತಾಧಿಕಾರಿ, ನಿರ್ಮಾಣ ದೇಶ್ ರತನ್ ಗುಪ್ತಾ, ಮತ್ತು ರೈಲ್ವೇಸ್ ನ ಹಿರಿಯ ಅಧಿಕಾರಿಗಳು ಭಾಸ್ಕರ್ ರಾವ್, ಮುಖ್ಯ ಆಯುಕ್ತ ಬಿಬಿಎಂಪಿ ಗೌರವ್ ಗುಪ್ತಾ ಭಾಗವಹಿಸಿದ್ದರು.

  • ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಬಳಿ ದರೋಡೆ ಪ್ರಕರಣ- ಓರ್ವ ಆರೋಪಿಯ ಬಂಧನ

    ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಬಳಿ ದರೋಡೆ ಪ್ರಕರಣ- ಓರ್ವ ಆರೋಪಿಯ ಬಂಧನ

    – ಒಂಟಿಯಾಗಿ ಓಡಾಡುವವರೇ ಇವರ ಟಾರ್ಗೆಟ್

    ಬೆಂಗಳೂರು: ಲಾಕ್‍ಡೌನ್ ಸಂದರ್ಭದಲ್ಲಿ ಜನರಿಗೆ ಬೆದರಿಸಿ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ನಗರ ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ.

    22 ವರ್ಷದ ಜಾನಿ ಬಂಧಿತ ಆರೋಪಿಯಾಗಿದ್ದು, ಈತ ಆಜಾದ್ ನಗರ ನಿವಾಸಿ ಎಂಬ ಮಾಹಿತಿ ಲಭಿಸಿದೆ. ಈ ಹಿಂದೆಯೇ ಆರೋಪಿ ದರೋಡೆ ಪ್ರಕರಣದಲ್ಲಿ ಜೈಲು ಸೇರಿ ಕಳೆದ ಮಾರ್ಚ್‍ನಲ್ಲಿ ಬಿಡುಗಡೆಯಾಗಿದ್ದ. ಆ ಬಳಿಕ ಮತ್ತೆ ತನ್ನ ಹಳೆ ಚಾಳಿ ಮುಂದುವರಿಸಿದ್ದ ಆರೋಪಿ, ಡ್ರ್ಯಾಗರ್ ಹಿಡಿದು ಬೆದರಿಸಿ ಹಣ, ಚಿನ್ನ ದರೋಡೆ ಮಾಡ್ತಿದ್ದ.

    ಹಾಡಹಗಲೇ ನಗರದ ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಬಳಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಆತನ ಮೇಲೆ ಹಲ್ಲೆ ಮಾಡಿ, ಬೆದರಿಸಿ ದರೋಡೆ ಮಾಡಲು ಮುಂದಾಗಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ವಿಡಿಯೋವನ್ನು ಹಂಚಿಕೊಂಡಿದ್ದ ಐಪಿಎಸ್ ಅಧಿಕಾರಿ ರೂಪ ಅವರು, ಬೆಂಗಳೂರು ಪೊಲೀಸರಿಗೆ ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡಿ ಕ್ರಮಕೈಗೊಳ್ಳಲು ಮನವಿ ಮಾಡಿದ್ದರು. ಬೆಂಗಳೂರು ಪೊಲೀಸರು ಕೂಡ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

    ದರೋಡೆ ಪ್ರಕರಣದ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಆದರೆ ವಿಡಿಯೋ ವೈರಲ್ ಆದ ಬಳಿಕ ಪಶ್ಚಿಮ ವಿಭಾಗದ ಡಾ.ಸಂಜೀವ್. ಎಂ.ಪಾಟೀಲ್ ಅವರ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದರು. ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದ ಸಿಟಿ ಮಾರ್ಕೆಟ್ ಪೊಲೀಸರು ಸದ್ಯ ವಿಡಿಯೋದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಜಾನಿ ಬಂಧಿಸಿದ್ದಾರೆ. ಇದೀಗ ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

  • ಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳಾ ಎಸ್‍ಐಯನ್ನು ಗುಂಡಿಕ್ಕಿ ಕೊಂದ ಪಿಎಸ್‍ಐ

    ಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳಾ ಎಸ್‍ಐಯನ್ನು ಗುಂಡಿಕ್ಕಿ ಕೊಂದ ಪಿಎಸ್‍ಐ

    – ಕೊಲೆ ಮಾಡಿದ ಪಿಸ್ತೂಲ್‍ನಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
    – ಮೂರು ಬಾರಿ ಗುಂಡು ಹಾರಿಸಿದ ಪಾಗಲ್ ಪ್ರೇಮಿ

    ನವದೆಹಲಿ: ರಾತ್ರೋರಾತ್ರಿ ಮಹಿಳಾ ಎಸ್‍ಐ ಪ್ರೀತಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಕೊಲೆ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ದೀಪಾಂಶು ರತಿ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಆರೋಪಿ. 2018ರಲ್ಲಿ ಪ್ರೀತಿ ಹಾಗೂ ದೀಪಾಂಶು ದೆಹಲಿ ಪೊಲೀಸ್ ಸೇರಿದ್ದು, ಇಬ್ಬರು ಬ್ಯಾಚ್‍ಮೇಟ್ ಆಗಿದ್ದರು. ಶುಕ್ರವಾರ ರಾತ್ರಿ ಪ್ರೀತಿ ಅವರನ್ನು ಕೊಲೆ ಮಾಡಿದ ಬಳಿಕ ದೀಪಾಂಶು ಹರ್ಯಾಣದ ಸೋನಿಪತ್ ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೀತಿಯನ್ನು ಕೊಲೆ ಮಾಡಿದ ಪಿಸ್ತೂಲಿನಲ್ಲಿಯೇ ದೀಪಾಂಶು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ರಾತ್ರೋರಾತ್ರಿ ಗುಂಡಿಟ್ಟು ಮಹಿಳಾ ಎಸ್‍ಐ ಹತ್ಯೆ

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ದೀಪಾಂಶು ಪಿಎಸ್‍ಐ ಆಗಿದ್ದು, ಪ್ರೀತಿ ಜೊತೆ ತನ್ನ ಪ್ರೇಮ ನಿವೇದನೆಯನ್ನು ಹೇಳಿಕೊಂಡಿದ್ದ. ಆದರೆ ಪ್ರೀತಿ ಆತನನ್ನು ಪ್ರೇಮ ನಿವೇದನೆಯನ್ನು ತಿರಸ್ಕರಿಸಿ ಮದುವೆಯಾಗುವುದಿಲ್ಲ ಎಂದು ಹೇಳಿದ್ದಳು. ಇದರಿಂದ ಕೋಪಗೊಂಡ ದೀಪಾಂಶು ಗುಂಡಿಕ್ಕಿ ಆಕೆಯನ್ನು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಅಲ್ಲಿಂದ ಪರಾರಿ ಆಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದಾರೆ.

    ನಡೆದಿದ್ದೇನು?
    ದೆಹಲಿಯ ರೋಹಿಣಿ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಸುಮಾರು 9.30ಕ್ಕೆ ಮಹಿಳಾ ಎಸ್‍ಐ ಪ್ರೀತಿ ಅಲ್ಲಾವತ್ ಮೇಲೆ ದೀಪಾಂಶು ಗುಂಡಿಕ್ಕಿ ಹತ್ಯೆ ಮಾಡಿದ್ದ. ನಗರದ ಪಾಟ್‍ಪರ್ಗಂಜ್ ಕೈಗಾರಿಕಾ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಪ್ರೀತಿ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ರಾತ್ರಿ ಪ್ರೀತಿ ತನ್ನ ಡ್ಯೂಟಿ ಮುಗಿಸಿಕೊಂಡು ಮೆಟ್ರೋದಲ್ಲಿ ರೋಹಿಣಿ ಮೆಟ್ರೋ ಸ್ಟೇಷನ್‍ಗೆ ಹೋಗಿದ್ದರು. ನಿಲ್ದಾಣದಿಂದ ಇಳಿದು ಮನೆಗೆ ನಡೆದುಕೊಂಡು 50 ಮೀ. ದೂರ ಹೋಗುತ್ತಿದ್ದಂತೆ ದೀಪಾಂಶು ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ದೀಪಾಂಶು ಮೂರು ಬಾರಿ ಗುಂಡು ಹಾರಿಸಿದ್ದು, ಎರಡು ಬಾರಿ ಪ್ರೀತಿಗೆ ತಗುಲಿದೆ. ಮೂರನೇ ಬಾರಿ ಬುಲೆಟ್ ಪ್ರೀತಿ ಪಕ್ಕದಲ್ಲಿ ಹೋಗುತ್ತಿದ್ದ ಕಾರಿನ ಹಿಂದಿನ ಗ್ಲಾಸ್‍ಗೆ ತಗುಲಿದೆ. ಬುಲೆಟ್ ಪ್ರೀತಿ ತಲೆಗೆ ತಗುಲಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಪ್ರೀತಿಯನ್ನು ಕೊಲೆ ಮಾಡಿದ ನಂತರ ದೀಪಾಂಶು ಅಲ್ಲಿಂದ ಪರಾರಿಯಾಗಿದ್ದ. ಘಟನೆಯನ್ನು ನೋಡಿದ್ದ ಸ್ಥಳೀಯರು ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಕೊಲೆ ಆಗಿರುವುದನ್ನು ಖಚಿತ ಪಡಿಸಿದ್ದಾರೆ. ಕೂಡಲೇ ವಿಧಿವಿಜ್ಞಾನ ಪ್ರಯೋಗಾಲಯ ತಂಡವನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಲು ಸೂಚನೆ ನೀಡಿದ್ದರು.

    ಕೊಲೆಯಾದ ಸ್ಥಳದಿಂದ ಪ್ರೀತಿಯ ಮನೆ ಸ್ವಲ್ಪ ದೂರದಲ್ಲೇ ಇತ್ತು. ಸೋನಿಪತ್‍ನ ನಿವಾಸಿಯಾಗಿರುವ ಪ್ರೀತಿ ರೋಹಿಣಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲಿಸಿದ್ದು, ಈ ವೇಳೆ ಆರೋಪಿ ಒಬ್ಬನೇ ಇರುವುದು ಗೊತ್ತಾಗಿತ್ತು. ಸಿಸಿಟಿವಿ ನೋಡಿ ಪೊಲೀಸರು ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಹೇಳಿದ್ದರು. ಆದರೆ ಅಷ್ಟರಲ್ಲೇ ದೀಪಾಂಶು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ರಾತ್ರೋರಾತ್ರಿ ಗುಂಡಿಟ್ಟು ಮಹಿಳಾ ಎಸ್‍ಐ ಹತ್ಯೆ

    ರಾತ್ರೋರಾತ್ರಿ ಗುಂಡಿಟ್ಟು ಮಹಿಳಾ ಎಸ್‍ಐ ಹತ್ಯೆ

    – ಚುನಾವಣೆಯ ಹೊತ್ತಲ್ಲೇ ಬರ್ಬರ ಹತ್ಯೆ
    – ಬೆಚ್ಚಿಬಿದ್ದ ರಾಷ್ಟ್ರ ರಾಜಧಾನಿ

    ನವದೆಹಲಿ: ರಾತ್ರೋರಾತ್ರಿ ಮಹಿಳಾ ಎಸ್‍ಐಯನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ರಾಷ್ಟ್ರ ರಾಜಧಾನಿ ನವದೆಹಲಿಯ ರೋಹಿಣಿ ಮೆಟ್ರೋ ಸ್ಟೇಷನ್‍ನಲ್ಲಿ ನಡೆದಿದೆ.

    ಪ್ರೀತಿ ಅಹ್ಲಾವತ್ ಕೊಲೆಯಾದ ಎಸ್‍ಐ. ನಗರದ ಪಾಟ್‍ಪರ್ಗಂಜ್ ಕೈಗಾರಿಕಾ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಪ್ರೀತಿ ಅವರನ್ನು ಪೋಸ್ಟ್ ಮಾಡಲಾಗಿತ್ತು. ರಾತ್ರಿ ಸುಮಾರು 9.30ಕ್ಕೆ ಈ ಘಟನೆ ಬಗ್ಗೆ ನಮಗೆ ಕರೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ನಮಗೆ ಕರೆ ಬರುತ್ತಿದ್ದಂತೆ ನಾವು ಸ್ಥಳಕ್ಕೆ ಭೇಟಿ ನೀಡಿದ್ದೆವು. ಈ ವೇಳೆ ಪ್ರೀತಿ ಅವರ ತಲೆಗೆ ಗುಂಡೇಟು ಗಾಯಗಳಾಗಿದೆ. ನಾವು ಶಂಕಿತರನ್ನು ಗುರುತಿಸಿದ್ದು, ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಡಿ ಮಿಶ್ರಾ ಹೇಳಿದ್ದಾರೆ.

    ಘಟನೆ ನಡೆದ ಸ್ಥಳದಲ್ಲಿ ಮೂರು ಖಾಲಿ ಕಾರ್ಟ್ರಿಡ್ಜ್ ಗಳು ಪತ್ತೆಯಾಗಿದೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ. ವೈಯಕ್ತಿಕ ದ್ವೇಷದಿಂದ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಇತ್ತ ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು, ಇದೇ ಹೊತ್ತಲ್ಲಿ ದುಷ್ಕರ್ಮಿಗಳು ಮಹಿಳಾ ಎಸ್‍ಐನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿ ಆಗಿದ್ದು, ಇಡೀ ರಾಜಧಾನಿಯೇ ಬೆಚ್ಚಿಬಿದ್ದಿದೆ.

  • ಮೆಟ್ರೋ ನಿಲ್ದಾಣದ ಬಳಿ ದಿಢೀರ್ ಬಾಂಬ್ ತಪಾಸಣೆ

    ಮೆಟ್ರೋ ನಿಲ್ದಾಣದ ಬಳಿ ದಿಢೀರ್ ಬಾಂಬ್ ತಪಾಸಣೆ

    ಬೆಂಗಳೂರು: ಮಂಗಳೂರಿನ ಏರ್‌ಪೋರ್ಟ್‌ನಲ್ಲಿ ಬಾಂಬ್ ಪತ್ತೆಯಾದ ಪ್ರಕರಣದ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲೂ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ.

    ಬೆಂಗಳೂರಿನ ದೀಪಾಂಜಲಿ ನಗರದ ಮೆಟ್ರೋ ನಿಲ್ದಾಣದ ಬಳಿ ದಿಢೀರನೆ ಬಾಂಬ್ ತಪಾಸಣೆ ನಡೆಸಲಾಯಿತು. ಮೆಟ್ರೋ ನಿಲ್ದಾಣ ಹಾಗೂ ಬೈಕ್ ಪಾರ್ಕಿಂಗ್ ಸ್ಥಳದಲ್ಲಿ ಐದು ಜನರ ಬಾಂಬ್ ತಂಡ ತಪಾಸಣೆ ನಡೆಸಿದೆ. ಶ್ವಾನದಳ ಮೂಲಕ ಅನುಮಾನವಿರುವ ಸ್ಥಳಗಳನ್ನು ಪರಿಶೀಲಿಸಿದ್ದಾರೆ. ಇದರಿಂದ ಕೆಲ ಕಾಲ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು.

    ಮಂಗಳೂರು ಬಾಂಬ್ ಪ್ರಕರಣದ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತೆ ಪರಿಶೀಲನೆ ತಪಾಸಣೆ ನಡೆಸುತ್ತಿದ್ದೇವೆ ಎಂದು ತಪಾಸಣಾ ತಂಡದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ದಿಢೀರನೆ ಬಾಂಬ್ ತಪಾಸಣಾ ತಂಡ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದಕ್ಕೆ ಮೆಟ್ರೋ ಅಧಿಕಾರಿಗಳು ಕೂಡ ಗಲಿಬಿಲಿಗೊಂಡಿದ್ದರು.

  • 50 ಸಾವಿರ ರೂ.ಗಳಿದ್ದ ಬ್ಯಾಗ್ ಮಾಲೀಕರಿಗೆ ಮರಳಿಸಿದ ಮೆಟ್ರೋ ಸಿಬ್ಬಂದಿ

    50 ಸಾವಿರ ರೂ.ಗಳಿದ್ದ ಬ್ಯಾಗ್ ಮಾಲೀಕರಿಗೆ ಮರಳಿಸಿದ ಮೆಟ್ರೋ ಸಿಬ್ಬಂದಿ

    – ಸಿಐಎಸ್‍ಎಫ್ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ ವೃದ್ಧೆ

    ನವದೆಹಲಿ: 50 ಸಾವಿರ ರೂ. ಇರುವ ಬ್ಯಾಗ್ ಕಳೆದುಕೊಂಡ ಮಾಲೀಕರಿಗೆ ಮರಳಿ ತಲುಪಿಸುವ ಮೂಲಕ ಸಿಐಎಸ್‍ಎಫ್ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.

    ನವದೆಹಲಿಯ ಗ್ರೀನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಭದ್ರತೆ ಪರಿಶೀಲನೆ ವೇಳೆ ಹಿರಿಯ ನಾಗರಿಕರಾದ ಕಮಲ ಅವರು ಅಲ್ಲಿಯೇ ಬ್ಯಾಗ್ ಬಿಟ್ಟು ತೆರಳಿದ್ದರು. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಬ್ಯಾಗ್‍ನ್ನು ಸುರಕ್ಷಿತ ಸ್ಥಳದಲ್ಲಿಟ್ಟು ನಂತರ ಮರಳಿ ನೀಡಿದ್ದಾರೆ. ಬ್ಯಾಗನ್ನು ಸುರಕ್ಷಿತವಾಗಿಟ್ಟು ಮರಳಿ ನೀಡಿದ್ದಕ್ಕೆ ಕಮಲ ಅವರು ಭದ್ರತಾ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

    ಭದ್ರತೆಗಾಗಿ ಬ್ಯಾಗ್ ಪರಿಶೀಲಿಸಿದ ನಂತರ ಸಿಬ್ಬಂದಿ ಬ್ಯಾಗನ್ನು ನೀಡಿದ್ದರು. ಆದರೆ ಮಾಲೀಕರು ಇದನ್ನು ಅಲ್ಲಿಯೇ ಬಿಟ್ಟು ತೆರಳಿದ್ದರು. ರಾತ್ರಿ 10.25ರ ಹೊತ್ತಿಗೆ ಮಾಲೀಕರು ಬ್ಯಾಗ್ ಬಿಟ್ಟು ಹೋಗಿರುವ ಕುರಿತು ತಿಳಿದಿದ್ದು, ಹಿಂದಿನ ದಿನ ಸಿಐಎಸ್‍ಎಫ್ ಸಿಬ್ಬಂದಿ ಬ್ಯಾಗ್ ನ್ನು ಸುರಕ್ಷಿತವಾಗಿ ಇಟ್ಟಿದ್ದರು. ಸಿಬ್ಬಂದಿ ಠಾಣೆ ನಿಯಂತ್ರಕರಿಗೆ ಬ್ಯಾಗ್ ನ್ನು ಹಸ್ತಾಂತರಿಸಿದ್ದಾರೆ. ಆಗ ಬ್ಯಾಗ್ ತೆರೆದು ನೋಡಿದ್ದು, 58,820 ರೂ. ಇರುವುದು ಪತ್ತೆಯಾಗಿತ್ತು. ಅಲ್ಲದೆ ಬ್ಯಾಗಿನಲ್ಲಿ ಹಲವು ದಾಖಲೆಗಳು ಸಹ ಇದ್ದವು. ಬ್ಯಾಗಿನಲ್ಲಿ ಸಂಪರ್ಕ ಸಂಖ್ಯೆ ಇದ್ದಿದ್ದರಿಂದ ಸಿಬ್ಬಂದಿ ಕಮಲ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ನಂತರ ಕಮಲ ಅವರು ಗ್ರೀನ್ ಪಾರ್ಕ್ ಮೆಟ್ರೋಗೆ ಆಗಮಿಸಿ, ಸಿಬ್ಬಂದಿಯಿಂದ ಬ್ಯಾಗ್ ಪಡೆದಿದ್ದಾರೆ. ಸಿಐಎಸ್‍ಎಫ್ ಸಿಬ್ಬಂದಿಯ ಪ್ರಾಮಾಣಿಕತೆಗೆ ಕಮಲಾ ಅವರು ಧನ್ಯವಾದ ಅರ್ಪಿಸಿದ್ದಾರೆ.

  • ಮೆಟ್ರೋ ನಿಲ್ದಾಣದಲ್ಲಿ 4.64 ಲಕ್ಷ ರೂ. ನಕಲಿ ನೋಟು ಪತ್ತೆ

    ಮೆಟ್ರೋ ನಿಲ್ದಾಣದಲ್ಲಿ 4.64 ಲಕ್ಷ ರೂ. ನಕಲಿ ನೋಟು ಪತ್ತೆ

    ನವದೆಹಲಿ: ಸಿಐಎಸ್‍ಎಫ್ (Central Industrial Security Force) ಅಧಿಕಾರಿಗಳು ದೆಹಲಿಯ ಕಾಶ್ಮೇರ್ ಮೆಟ್ರೋ ನಿಲ್ದಾಣದ ಗೇಟ್ ಬಳಿ 500 ರೂ. ಮುಖಬೆಲೆಯ 4,64,000 ರೂ. ಮೊತ್ತದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

    ಶನಿವಾರ ಸಂಜೆ 5.30ಕ್ಕೆ ಕಾಶ್ಮೇರ್ ಮೆಟ್ರೋ ನಿಲ್ದಾಣದ ಗೇಟ್ ನಂಬರ್ 8ರಲ್ಲಿ ಅನುಮಾನಸ್ಪಾದ ಬ್ಯಾಗ್ ಪತ್ತೆಯಾಗಿತ್ತು. ಕೂಡಲೇ ನಿಲ್ದಾಣದ ಭದ್ರತಾ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿಯ ಸಬ್ ಇನ್‍ಸ್ಪೆಕ್ಟರ್ ಬೀರೇಂದ್ರ ಕುಮಾರ್ ಸ್ಥಳೀಯ ಪೊಲೀಸರಿಗೆ ಮತ್ತು ಬಾಂಬ್ ನಿಷ್ಕಿಯ ತಂಡಕ್ಕೆ ಮಾಹಿತಿ ರವಾನಿಸಿದ್ದಾರೆ.

    ಬ್ಯಾಗ್ ಪತ್ತೆಯಾದ ಕೂಡಲೇ ಗೇಟ್ ನಂಬರ್ 8 ರಲ್ಲಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬ್ಯಾಗ್ ಪರಿಶೀಲನೆ ನಡೆಸಿದಾಗ ನಕಲಿ ನೋಟುಗಳ ಕಂತೆ ಪತ್ತೆಯಾಗಿದೆ. ನಕಲಿ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಮೆಟ್ರೋ ನಿಲ್ದಾಣದ ಮತ್ತು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

    ಇಂದು ಸಿಐಎಸ್‍ಎಫ್ ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿದ್ದು, ಬ್ಯಾಗಿನಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತುಗಳು ದೊರೆತಿಲ್ಲ. ಬ್ಯಾಗಿನಲ್ಲಿ 500 ರೂ. ಮುಖಬೆಲೆಯ 4.64 ಲಕ್ಷ ರೂ. ನಕಲಿ ನೋಟು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದೆ.

  • ಮೆಟ್ರೋ ಸ್ಟೇಷನ್‍ನಲ್ಲಿ ಜೋಡಿಯ ಸೆಕ್ಸ್ ವಿಡಿಯೋ ಪೋರ್ನ್ ಸೈಟ್‍ನಲ್ಲಿ ಅಪ್ಲೋಡ್

    ಮೆಟ್ರೋ ಸ್ಟೇಷನ್‍ನಲ್ಲಿ ಜೋಡಿಯ ಸೆಕ್ಸ್ ವಿಡಿಯೋ ಪೋರ್ನ್ ಸೈಟ್‍ನಲ್ಲಿ ಅಪ್ಲೋಡ್

    ನವದೆಹಲಿ: ಮೆಟ್ರೋ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಜೋಡಿಯ ಸೆಕ್ಸ್ ವಿಡಿಯೋ ಇದೀಗ ಪೋರ್ನ್ ವೆಬ್‍ಸೈಟ್‍ನಲ್ಲಿ ಅಪ್ಲೋಡ್ ಆದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

    ಪೋರ್ನ್ ವೆಬ್‍ಸೈಟ್‍ನಲ್ಲಿ ನೋಡುತ್ತಿದ್ದಂತೆ ಈ ವಿಡಿಯೋ ಜುಲೈ 18ರಂದು ಮಧ್ಯಾಹ್ನ 2.22ರ ಸುಮಾರಿಗೆ ದೆಹಲಿಯ ಮೆಟ್ರೋ ಸಿಸಿಟಿವಿ ನಿಯಂತ್ರಣ ಕೊಠಡಿಯೊಳಗಿನ ಲೈವ್ ಫೀಡ್‍ನಿಂದ ಸ್ಮಾರ್ಟ್ ಫೋನಿನಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

    ಜೋಡಿಯ ಈ ವಿಡಿಯೋವನ್ನು ಪೋರ್ನ್ ವೆಬ್‍ಸೈಟ್‍ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋಗೆ ಇದುವರೆಗೂ 1 ಲಕ್ಷ ವ್ಯೂ ಬಂದಿದೆ. ಅಪರಿಚಿತ ಜೋಡಿ ವಿರುದ್ಧ ಅಜಾದ್‍ಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಖಚಿತಪಡಿಸಿದೆ.

    ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ನಡೆದುಕೊಂಡಿದ್ದಕ್ಕೆ ಡಿಎಂಆರ್‌ಸಿ ದೆಹಲಿ ಪೊಲೀಸರ ಜೊತೆ ಸೇರಿ ಎಫ್‍ಐಆರ್ ದಾಖಲಿಸಿಕೊಂಡಿದೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಈ ಘಟನೆಗೆ ಸಂಬಂಧಿಸಿದ ಮಾಹಿತಿ, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದೇವೆ ಹಾಗೂ ಅವರಿಗೆ ವಿಚಾರಣೆಗೆ ಸಹಾಯ ಮಾಡುತ್ತಿದ್ದೇವೆ ಎಂದು ಡಿಎಂಆರ್‌ಸಿ ಸಿಬ್ಬಂದಿ ಅನುಜ್ ದಯಾಲ್ ತಿಳಿಸಿದ್ದಾರೆ.

    ಅಲ್ಲದೆ ಪ್ರಯಾಣಿಕರು ಸಾರ್ವಜನಿಕರ ಸ್ಥಳದಲ್ಲಿ ಈ ರೀತಿಯ ಅನೈತಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಾರದು ಎಂದು ಅನುಜ್ ಮನವಿ ಮಾಡಿಕೊಂಡಿದ್ದಾರೆ.

  • ಮೆಟ್ರೋ ಎಸ್ಕಲೇಟರ್ ನಲ್ಲೇ ಮಹಿಳೆಯ ಮುಂದೆ ಹಸ್ತಮೈಥುನ ಮಾಡ್ದ

    ಮೆಟ್ರೋ ಎಸ್ಕಲೇಟರ್ ನಲ್ಲೇ ಮಹಿಳೆಯ ಮುಂದೆ ಹಸ್ತಮೈಥುನ ಮಾಡ್ದ

    ಚಂಡೀಗಢ್: ವ್ಯಕ್ತಿಯೊಬ್ಬ ಮೆಟ್ರೋ ನಿಲ್ದಾಣದ ಎಸ್ಕಲೇಟರ್ ನಲ್ಲಿ ಬರುತ್ತಿದ್ದ 29 ವರ್ಷದ ಮಹಿಳೆಯ ಮುಂದೆ ಹಸ್ತಮೈಥುನ ಮಾಡಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಹರಿಯಾಣದ ಗುರುಗ್ರಾವ್‍ನಲ್ಲಿ ನಡೆದಿದೆ.

    ಈ ಘಟನೆ ಹುಡಾ ಸಿಟಿ ಸೆಂಟರ್ ಮೆಟ್ರೋ ನಿಲ್ದಾಣದ ಎಸ್ಕಲೇಟರ್ ನಲ್ಲಿ ನಡೆದಿದೆ. ಈ ಕುರಿತು ಗುರುಗಾಂವ್ ಮೆಟ್ರೋ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ. ಈ ಘಟನೆ ಜೂನ್ 14 ಸುಮಾರು ರಾತ್ರಿ 9.25ಕ್ಕೆ ನಡೆದಿದೆ. ಈ ಬಗ್ಗೆ ಮಹಿಳೆ ತನ್ನ ಟ್ವಿಟ್ಟರ್‌ನಲ್ಲಿ ಬರೆದುಕೊಂಡ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ದೆಹಲಿ ಮೂಲದ ಮಹಿಳೆ ಗುರುಗ್ರಾಮ್‍ನಲ್ಲಿ ತನ್ನ ಸ್ನೇಹಿತೆಯನ್ನು ಭೇಟಿಯಾಗಲು ಬಂದಿದ್ದರು. ಮಹಿಳೆ ಇಂಟೀರಿಯರ್ ಡಿಸೈನರ್ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಜೂನ್ 14 ರಂದು ಮೆಟ್ರೋ ನಿಲ್ದಾಣದ ಮಾಲ್‍ನಲ್ಲಿ ಶಾಪಿಂಗ್ ಮುಗಿಸಿ ಎಸ್ಕಲೇಟರ್ ಮೂಲಕ ಕೆಳಗೆ ಬರುತ್ತಿದ್ದರು. ಆಗ ಆಕೆಯ ಹಿಂದೆ ವ್ಯಕ್ತಿಯೊಬ್ಬ ಬರುತ್ತಿದ್ದನು. ಇದನ್ನು ಗಮನಿಸಿದ ಮಹಿಳೆ ಹಿಂದೆ ತಿರುಗಿ ನೋಡಿದ್ದಾರೆ. ಆಗ ಆತ ಮಹಿಳೆಯ ಮುಂದೆ ಹಸ್ತಮೈಥುನ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಇದನ್ನು ಕಂಡು ದಂಗಾದ ಮಹಿಳೆ ಆತನ ಕಪಾಳಕ್ಕೆ ಹೊಡೆದು ಬೈದಿದ್ದಾರೆ. ಅಷ್ಟೇ ಅಲ್ಲದೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಮಹಿಳೆ ಕಿರುಚಾಟದಿಂದ ಭಯಗೊಂಡ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಹಿಳೆಯ ಘಟನೆಯ ಬಗ್ಗೆ ವಿವರಿಸಿದ್ದಾರೆ.

    ನಾನು ಮನೆಗೆ ಬಂದು ಗುರುಗ್ರಾಮ್ ಪೊಲೀಸರಿಗೆ ಫೇಸ್‍ಬುಕ್ ಖಾತೆ ಮೂಲಕ ಮೆಸೇಜ್ ಮಾಡಿದೆ. ಆದರೆ ಪೊಲೀಸರು ಯಾವುದೇ ರೀತಿಯ ಉತ್ತರವನ್ನು ನೀಡಲಿಲ್ಲ. ನಂತರ ದೆಹಲಿ ಮೆಟ್ರೋ ರೈಲು ನಿಗಮಕ್ಕೆ (ಡಿಎಂಆರ್​ಸಿ)ಗೆ ಮೆಸೇಜ್ ಮಾಡಿದ್ದೆ. ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ವ್ಯಕ್ತಿ ಹಸ್ತಮೈಥುನ ಮಾಡುತ್ತಿರುವುದು ಸೆರೆಯಾಗಿದೆ ಎಂದು ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾರೆ.

    ಸದ್ಯಕ್ಕೆ ಈ ಕುರಿತು ಮಹಿಳೆ ಸಾಮಾಜಿಕ ಜಾಲತಾಣದ ಮೂಲಕ ದೂರು ನೀಡಿದ್ದಾರೆ. ಅದರ ಆಧಾರದ ಮೇರೆಗೆ ಐಪಿಸಿ ಸೆಕ್ಷನ್‍ಗೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಿಸಲಾಗಿದೆ. ನಂತರ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಸಾಕ್ಷ್ಯಗಳಿಗಾಗಿ ಡಿಎಂಆರ್​ಸಿಯೊಂದಿಗೆ ಚರ್ಚೆ ಮಾಡಲಾಗಿದೆ. ಆದರೆ ಆರೋಪಿಯನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿ ಸುಭಾಷ್ ಬೊಕೆನ್ ಹೇಳಿದ್ದಾರೆ.