Tag: Meter interest

  • 80 ವರ್ಷದ ಬಾಬುಲಾಲ್ ಮೀಟರ್ ಬಡ್ಡಿ ದಂಧೆಯ ಮಾಸ್ಟರ್ ಮೈಂಡ್

    80 ವರ್ಷದ ಬಾಬುಲಾಲ್ ಮೀಟರ್ ಬಡ್ಡಿ ದಂಧೆಯ ಮಾಸ್ಟರ್ ಮೈಂಡ್

    – ಕೊರೊನಾ ನಡುವೆಯೂ ಮೀಟರ್ ಬಡ್ಡಿಯಿಂದ ಬಡವರ ಜೀವ ಹಿಂಡ್ತಿದ್ದ

    ಬೆಂಗಳೂರು: ಕೊರೊನಾ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದು, ಇಷ್ಟಾದರೂ ಮೀಟರ್ ಬಡ್ಡಿ ದಂಧೆ ಮಾತ್ರ ಯಗ್ಗಿಲ್ಲದೆ ನಡೆಯುತ್ತಿದೆ. ದಂಧೆ ನಡೆಸುತ್ತಿದ್ದ ಮನೆ ಕಚೇರಿ ಮೇಲೆ ಸಿಸಿಬಿ ದಾಳಿ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟು ಸತ್ಯ ಹೊರ ಬೀಳುತ್ತಿದೆ.

    ಈ ಕುರಿತು ಸಿಸಿಬಿಯ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದು, ನಗರದ ವಿ.ವಿ.ಪುರದಲ್ಲಿ ಅಕ್ರಮವಾಗಿ ತಂದೆ, ಮಗ ಮತ್ತು ಸಹೋದರ ಬಡ್ಡಿ ವ್ಯವಹಾರ ನಡೆಸುತ್ತಿದ್ದರು. 80 ವರ್ಷದ ಬಾಬುಲಾಲ್, ಮಗ ಚೇತನ್ ಮತ್ತು ಸಹೋದರ ಅನೇಕ ವರ್ಷಗಳಿಂದ ಬಡ್ಡಿ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.

    ವಿವಿಪುರದಲ್ಲಿರುವ ಬಾಬುಲಾಲ್ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ. ದಾಳಿ ವೇಳೆ ವಿವಿಧ ಬ್ಯಾಂಕ್ ಚಕ್ ಗಳು, ಆಸ್ತಿ ಪ್ರಮಾಣ ಪತ್ರ ಸೇರಿ ಮಹತ್ವದ ದಾಖಲೆ ಪತ್ತೆಯಾಗಿವೆ. ಅಕ್ರಮ ಬಡ್ಡಿ ವ್ಯವಹಾರ ಸಂಬಂಧ ಇನ್ಯಾರ್ಯಾರು ಭಾಗಿಯಾಗಿದ್ದಾರೆ, ಅಕ್ರಮ ವ್ಯವಹಾರದ ವ್ಯಾಪ್ತಿ ಇನ್ನೂ ಎಷ್ಟು ದೊಡ್ಡದಿದೆ ಎಂಬುದರ ಬಗ್ಗೆ ಸಮಗ್ರ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

    ಮೀಟರ್ ಬಡ್ಡಿ ಅವ್ಯವಹಾರ ಸಂಬಂಧ ಕಾಟನ್ ಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನನ್ವಯ ತನಿಖೆ ನಡೆಸಿದಾಗ ಅನೇಕ ಮಾಹಿತಿ ಬೆಳಕಿಗೆ ಬಂದಿದೆ ಎಂದು ಅವರು ವಿವರಿಸಿದ್ದಾರೆ.

  • ಮೀಟರ್ ಬಡ್ಡಿಕೋರರ ಕಿರುಕುಳ – ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ

    ಮೀಟರ್ ಬಡ್ಡಿಕೋರರ ಕಿರುಕುಳ – ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ

    ಕೋಲಾರ: ಮೀಟರ್ ಬಡ್ಡಿ, ಸಾಲಬಾಧೆ ಹಿನ್ನೆಲೆ ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಪುರಹಳ್ಳಿ ಗ್ರಾಮದ 40 ವರ್ಷದ ನಾಗೇಂದ್ರ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದು, ಒಂದು ವರ್ಷದ ಹಿಂದೆ ಮನೆ ಕಟ್ಟುವ ಸಮಯದಲ್ಲಿ ಮೀಟರ್ ಬಡ್ಡಿಗೆ ಸಾಲವನ್ನು ಪಡೆದಿದ್ದರು ಎನ್ನಲಾಗಿದೆ.

    ಆತ್ಮಹತ್ಯೆಗೂ ಮುನ್ನ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿರುವ ನಾಗೇಂದ್ರ ಬಾಬು, ತಮ್ಮ ಸಾವಿಗೆ ಕಾರಣಗಳನ್ನು ತಿಳಿಸಿ ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆ ಕಟ್ಟುವ ಸಮಯದಲ್ಲಿ ಗ್ರಾಮದ ವೆಂಕಟೇಶ್(ಜಗ್ಗ), ಶ್ರೀರಾಮಪ್ಪ ಹಾಗೂ ಕೋಲಾರದ ನವೀನ್ ಕುಮಾರ್ ಬಳಿ ಸಾಲ ಪಡೆದಿದ್ದರು.

    ಸಾಲದ ಬಡ್ಡಿ ಹಣ ನೀಡಲು ಎರಡು ದಿನ ತಡವಾದ ಹಿನ್ನೆಲೆ ಅವಾಚ್ಯ ಶಬ್ದಗಳಿಂದ ಬೈದು ಕಿರುಕುಳ ನೀಡಿ ಪ್ರಾಣ ಬೆದರಿಕೆ ಹಾಕುತ್ತಿದ್ದರು ಎಂದು ನಾಗೇಂದ್ರ ಬಾಬು ವಿಡಿಯೋದಲ್ಲಿ ಹೇಳಿದ್ದಾರೆ. ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಿಡಿಯೋ ಅಲ್ಲದೇ ಡೆತ್‍ನೋಟ್ ಕೂಡ ಬರೆದಿಟ್ಟಿದ್ದಾರೆ. ಮಂಗಳವಾರ ಮನೆಯ ಪಕ್ಕದ ತೋಟದಲ್ಲಿ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸದ್ಯ ಮೀಟರ್ ಬಡ್ಡಿ ನೀಡಿದವರ ವಿರುದ್ಧ ವೇಮಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೇಮಗಲ್ ಹೋಬಳಿಯಲ್ಲಿ ಮೀಟರ್ ಬಡ್ಡಿ ನೀಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಕೂಲಿ ಕಾರ್ಮಿಕರು, ಬಡವರು ಜೀವ ಕಳೆದುಕೊಳ್ಳುವ ಸ್ಥಿತಿ ಬಂದಿದ್ದು, ಮೀಟರ್ ಬಡ್ಡಿಗೆ ಸಾಲ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

  • ಮೀಟರ್ ಬಡ್ಡಿ ಕಿರುಕುಳ-ಆತ್ಮಹತ್ಯೆಗೆ ಶರಣಾದ ಮಹಿಳೆ

    ಮೀಟರ್ ಬಡ್ಡಿ ಕಿರುಕುಳ-ಆತ್ಮಹತ್ಯೆಗೆ ಶರಣಾದ ಮಹಿಳೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮೀಟರ್ ಬಡ್ಡಿ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ನೇತ್ರಾವತಿ ಅಂಬಿಗ ಆತ್ಮಹತ್ಯೆ ಮಾಡಿಕೊಂಡ ಅಂಗನವಾಡಿ ಕಾರ್ಯಕರ್ತೆ. ಹೊನ್ನಾವರದ ಗ್ರಾ.ಪಂ ಸದಸ್ಯೆ ವಿಮಲಾ ನಾಯ್ಕ ಎಂಬುವರ ಬಳಿ ಮೀಟರ್ ಬಡ್ಡಿಗೆ ಒಂದು ಲಕ್ಷ ರೂ. ಸಾಲ ಪಡೆದಿದ್ದರು. ಮೀಟರ್ ಬಡ್ಡಿಯಾಗಿದ್ದರಿಂದ ನೇತ್ರಾವತಿ ಬಡ್ಡಿ ಹಣ ನೀಡುವುದರಲ್ಲೇ ಸುಸ್ತಾಗಿದ್ದು, ಅಸಲು ಪಾವತಿಸಿರಲಿಲ್ಲ. ಹೀಗಾಗಿ ಮೀಟರ್ ಬಡ್ಡಿಯ ಕಿರಿ ಕಿರಿ ತಾಳಲಾರದೇ ಅಂಗನವಾಡಿ ಕಾರ್ಯಕರ್ತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

    ಬಡ್ಡಿ ಕೊಡುವುದು ತಡವಾಗಿದ್ದಕ್ಕೆ ಶುಕ್ರವಾರ ನೇತ್ರಾವತಿ ಕೆಲಸ ಮಾಡುತ್ತಿದ್ದ ಅಂಗನವಾಡಿಗೆ ವಿಮಲ ಆಗಮಿಸಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ನೇತ್ರಾವತಿಯವರ ಮೇಲೆ ಹಲ್ಲೆ ಮಾಡಿ ಹಣ ಕೊಡುವಂತೆ ಜೀವ ಬೆದರಿಕೆ ಹಾಕಿದ್ದರಿಂದ ಮನನೊಂದು ಶರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ನೇತ್ರಾವತಿ ಅವರ ಶವ ಇಂದು ಪತ್ತೆಯಾಗಿದ್ದು, ಆತ್ಮಹತ್ಯೆಗೆ ಕಾರಣರಾದ ವಿಮಲಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ. ಹಣಕ್ಕಾಗಿ ಪೀಡಿಸುತಿದ್ದ ವಿಮಲಾ ನಾಯ್ಕಳನ್ನು ಬಂಧಿಸುವಂತೆ ಅಂಗನವಾಡಿ ಕಾರ್ಯಕರ್ತೆಯರಿಂದ ಹೊನ್ನಾವರ ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದಾರೆ. ಇದರಿಂದ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ತಂದೆಯಿಂದಲೇ ಮಗನಿಗೆ ನೇಣು – ದೃಶ್ಯ ನೋಡಿ ರೂಮಲ್ಲಿ ಓಡಾಡಿ ಕಣ್ಣೀರಿಟ್ಟ ತಾಯಿ

    ತಂದೆಯಿಂದಲೇ ಮಗನಿಗೆ ನೇಣು – ದೃಶ್ಯ ನೋಡಿ ರೂಮಲ್ಲಿ ಓಡಾಡಿ ಕಣ್ಣೀರಿಟ್ಟ ತಾಯಿ

    – ಮೀಟರ್ ದಂಧೆಗೆ ತಾಯಿ, ಮಗ ಬಲಿ ಪ್ರಕರಣಕ್ಕೆ ಟ್ವಿಸ್ಟ್
    – ಪತ್ನಿ, ಮಗಳ ಕಣ್ಮುಂದೆ ಮಗನಿಗೆ ನೇಣು ಬಿಗಿದ ತಂದೆ
    – ತಂದೆಯೇ ಮಗನಿಗೆ ನೇಣು ಹಾಕುತ್ತಿರುವ ದೃಶ್ಯ ಸೆರೆ

    ಬೆಂಗಳೂರು: ಮೀಟರ್ ದಂಧೆಗೆ ತಾಯಿ ಹಾಗೂ ಮಗ ಬಲಿಯಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತಂದೆಯೇ ಮಗನನ್ನು ನೇಣು ಹಾಕುತ್ತಿರುವ ವಿಡಿಯೋ ಪೊಲೀಸರಿಗೆ ಲಭ್ಯವಾಗಿದೆ.

    ಹೆಚ್‍ಎಎಲ್ ವಿಭೂತಿಪುರ ನಿವಾಸಿ ಗೀತಾಬಾಯಿ (34) ಹಾಗೂ ಮಗ ವರುಣ್ ರಾವ್ (12) ಮೃತರು. ಗೀತಾಬಾಯಿ ಅವರ ಪತಿ ಸುರೇಶ್ ಸ್ವಂತ ಮಗನಿಗೆ ನೇಣು ಹಾಕಿದ್ದಾರೆ. ಈ ಮೂಲಕ ಪ್ರಕರಣ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಂಡಿದೆ.

    ಆಗಿದ್ದೇನು?:
    ಸುರೇಶ್ ಹಾಗೂ ಗೀತಾಬಾಯಿ ದಂಪತಿ ಪುತ್ರ ವರುಣ್ ರಾವ್, ಪುತ್ರಿಯ ಜೊತೆಗೆ ಹೆಚ್‍ಎಎಲ್ ವಿಭೂತಿಪುರದಲ್ಲಿ ವಾಸವಿದ್ದರು. ಸುರೇಶ್ ಸ್ವಿಗಿ ಡೆಲಿವರಿ ನೌಕರನಾಗಿ ಕೆಲಸ ಮಾಡುತ್ತಿದ್ದರೆ, ಗೀತಾಬಾಯಿ ಅವರು ಖಾಸಗಿ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು.

    ಕುಟುಂಬದ ಜೊತೆಗೆ ಶನಿವಾರ ಮನೆಯಲ್ಲಿದ್ದ ಸುರೇಶ್ ಫ್ಯಾನಿಗೆ ಸೀರೆ ಕಟ್ಟಿ ಪುತ್ರ ವರುಣ್ ರಾವ್‍ಗೆ ನೇಣು ಹಾಕಿದ್ದಾನೆ. ಇದನ್ನು ನೋಡಿದ ಪತ್ನಿ ಗೀತಾಬಾಯಿ ಹಾಗೂ ಪುತ್ರಿ ಬಿದ್ದು ಬಿದ್ದು ಕಣ್ಣೀರಿಟ್ಟಿದ್ದಾರೆ. ಆದರೆ ಸುರೇಶ್ ಮಾತ್ರ ಮಗನ ಸಾವನ್ನಪ್ಪಿದ ಬಳಿಕವೇ ದೇಹವನ್ನು ಮಂಚದ ಮೇಲೆ ತಂದು ಹಾಕಿದ್ದಾನೆ. ಈ ದೃಶ್ಯವು ಆರೋಪಿ ಸುರೇಶ್ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಪೊಲೀಸರ ಕೈಗೆ ಸಿಕ್ಕಿದೆ.

    ಗೀತಾಬಾಯಿ ಕಣ್ಣೀರು ಹಾಕುತ್ತಿದ್ದ ಧ್ವನಿ ಕೇಳಿ ನೆರೆಹೊರೆಯವರು ಮನೆಗೆ ಬಂದಿದ್ದರು. ಈ ವೇಳೆ ಏನು ನಡೆದಿಲ್ಲ ಎಂಬಂತೆ ಸುರೇಶ್ ನಟಿಸಿದ್ದ. ಬಳಿಕ ಮಗನ ಸಾವಿನಿಂದ ಆಘಾತಕ್ಕೆ ಒಳಗಾಗಿದ್ದ ಗೀತಾಬಾಯಿ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದಾರೆ. ಆದರೆ ಈ ಸಂಬಂಧ ಸುರೇಶ್‍ನನ್ನು ವಿಚಾರಣೆ ಮಾಡಿದಾಗ, ವಿಭೂತಿಪುರದ ಫೈನ್ಸಾನಿಯರ್ ಸುಧಾ ಎಂಬವರ ಬಳಿ ಎರಡು ವರ್ಷಗಳ ಹಿಂದೆ 40 ಸಾವಿರ ರೂ. ಸಾಲ ಪಡೆದಿದ್ದೆವು. ಕೆಲವು ದಿನಗಳನಲ್ಲಿ ಬಡ್ಡಿ ಸಮೇತ ಸಾಲವನ್ನು ತೀರಿಸಿದ್ದೇವು. ಆದರೂ ಪ್ರತಿ ಬಾರಿ ಸುಧಾ ಕಡೆಯವರು ಹಣ ಕೇಳಿ ಪೀಡಿಸುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಸಹ ಸುಧಾ ಕಡೆಯವರು ಮನೆ ಬಳಿ ಬಂದು ಪತ್ನಿ ಹಾಗೂ ಮಗನಿಗೆ ಸಾರ್ವಜನಿಕವಾಗಿ ಹಲ್ಲೆ ಮಾಡಿ ಹೋಗಿದ್ದರು. ಇದರಿಂದಾಗಿ ಮನನೊಂದ ಪತ್ನಿ ನಾನು ಮನೆಯಲ್ಲಿ ಇಲ್ಲದಿದ್ದಾಗ ಡೆತ್‍ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಸುರೇಶ್ ಹೇಳಿಕೆ ನೀಡಿದ್ದರು ಎಂದು ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

    ಕುಟುಂಬದ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರೋ? ಕೇವಲ ಫೈನ್ಸಾನಿಯರ್ ಗಳಿಗೆ ಹೆದರಿಸಲು ಹೀಗೆ ಮಾಡಿದ್ದರೋ ಎನ್ನುವುದು ಸ್ಪಷ್ಟವಾಗಿಲ್ಲ. ಈ ವಿಡಿಯೋದಿಂದ ಪ್ರಕರಣ ತಿರುವು ಪಡೆದುಕೊಂಡಿದೆ. ಆರೋಪಿ ಸುರೇಶ್‍ನನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬೆಳಕಿಗೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.

  • ಮೀಟರ್ ಬಡ್ಡಿಗೆ ತಾಯಿ, ಮಗ ಆತ್ಮಹತ್ಯೆ

    ಮೀಟರ್ ಬಡ್ಡಿಗೆ ತಾಯಿ, ಮಗ ಆತ್ಮಹತ್ಯೆ

    – ಖಾಸಗಿ ಫೈನಾನ್ಸಿಯರ್ ಕಿರುಕುಳ ಆರೋಪ

    ಬೆಂಗಳೂರು: ಸಿಸಿಬಿ ಪೊಲೀಸರು ಇತ್ತೀಚೆಗಷ್ಟೇ ಮೀಟರ್ ಬಡ್ಡಿ ದಂಧೆಕೋರರ ಮೇಲೆ ದಾಳಿ ನಡೆಸಿದ್ದರು. ದಾಳಿ ನಂತರವೂ ಎಚ್ಚೆತುಕೊಳ್ಳದ ದಂಧೆಕೋರರು ಬಡವರ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಬಡ್ಡಿಕೋರರ ಹಾವಳಿಗೆ ಬೇಸತ್ತು ತಾಯಿ ಹಾಗೂ ಮಗ ಪ್ರಾಣ ಬಿಟ್ಟಿದ್ದಾರೆ.

    ಹೆಚ್‍ಎಎಲ್ ವಿಭೂತಿಪುರ ನಿವಾಸಿ ಗೀತಾಬಾಯಿ (34) ಹಾಗೂ ಮಗ ವರುಣ್ ರಾವ್ (12) ಆತ್ಮಹತ್ಯೆಗೆ ಶರಣಾದವರು. ಮನೆಯಲ್ಲಿ ಶನಿವಾರ ರಾತ್ರಿ ತಾಯಿ, ಮಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮೀಟರ್ ಬಡ್ಡಿ ದಂಧೆಕೋರರು ನನಗೆ ಕಿರುಕುಳ ನೀಡಿದ್ದಾರೆ. ಹೀಗಾಗಿ ಮನನೊಂದು ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದೇವೆ ಎಂದು ಗೀತಾಬಾಯಿ ಡೆತ್ ನೋಟ್ ಬರೆದಿಟ್ಟಿದ್ದಾರೆ.

    ಸಿಲಿಕಾನ್ ಸಿಟಿಯಲ್ಲಿ ಒಂದು ಕಡೆ ಸಿಸಿಬಿ ಪೊಲೀಸರು ಬಡ್ಡಿ ದಂಧೆ ಮಟ್ಟಹಾಕಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಫೈನಾನ್ಸರ್ ಗಳು ಮಾತ್ರ ಪೊಲೀಸರ ಕಣ್ಣಿಗೆ ಮಣ್ಣು ಎರಚಿ ತಮ್ಮ ವ್ಯವಹಾರ ಮುಂದುವರಿಸಿ ಜನರ ಪ್ರಾಣ ಹೀರುತ್ತಿದ್ದಾರೆ.

    ಗೀತಾಬಾಯಿ ಹಾಗೂ ಸುರೇಶ್ ದಂಪತಿ ಮಗನ ಜೊತೆ ವಾಸವಿದ್ದು, ಕೆಲಸ ಮಾಡುತ್ತಿದ್ದರು. ಸುರೇಶ್ ಸ್ವಿಗಿ ಡೆಲಿವರಿ ನೌಕರನಾಗಿ ಕೆಲಸ ಮಾಡುತ್ತಿದ್ದರೆ, ಗೀತಾಬಾಯಿ ಅವರು ಖಾಸಗಿ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಆದರೆ ವಿಭೂತಿಪುರದ ಫೈನ್ಸಾನಿಯರ್ ಸುಧಾ ಎಂಬವರ ಬಳಿ ಎರಡು ವರ್ಷಗಳ ಹಿಂದೆ 40 ಸಾವಿರ ರೂ. ಸಾಲ ಪಡೆದಿದ್ದರು. ಕೆಲವು ದಿನಗಳನಲ್ಲಿ ಬಡ್ಡಿ ಸಮೇತ ಸಾಲವನ್ನು ತೀರಿಸಿದ್ದರು. ಆದರೂ ಪ್ರತಿ ಬಾರಿ ಸುಧಾ ಕಡೆಯವರು ಹಣ ಕೇಳಿ ಪೀಡಿಸುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಸಹ ಸುಧಾ ಕಡೆಯವರು ಮನೆ ಬಳಿ ಬಂದು ಗೀತಾ ಬಾಯಿ ಹಾಗೂ ಮಗನಿಗೆ ಸಾರ್ವಜನಿಕವಾಗಿ ಹಲ್ಲೆ ಮಾಡಿ ಹೋಗಿದ್ದರು. ಇದರಿಂದಾಗಿ ಪತಿ ಸುರೇಶ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಗೀತಾಬಾಯಿ ಫೈನಾನ್ಸಿಯರ್ ಸುಧಾ ವಿರುದ್ಧ ಡೆತ್‍ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಹೆಚ್‍ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡೆತ್‍ನೋಟ್ ನಲ್ಲಿ ಉಲ್ಲೇಖಿಸಿರುವ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ರಣಜಿ ಪಂದ್ಯಕ್ಕೂ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ನಾಲ್ವರ ಬಂಧನ

    ರಣಜಿ ಪಂದ್ಯಕ್ಕೂ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ನಾಲ್ವರ ಬಂಧನ

    -ಮೀಟರ್ ಬಡ್ಡಿಗೆ ಹಣ ಕೊಟ್ಟು ಆಸ್ತಿ ಕಬಳಿಸುತ್ತಿದ್ದ ಓರ್ವ ಅರೆಸ್ಟ್

    ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆ ಹಾಗೂ ಮೀಟರ್ ಬಡ್ಡಿ ಪ್ರತ್ಯೇಕ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಐದು ಜನ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂದಿದ್ದಾರೆ.

    ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಗುಡ್ಡೆ ಮಂಜ, ಗಣೇಶ್, ಗೋಪಾಲನ್ ಹಾಗೂ ವಿಧ್ಯಾದರ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ದೇಶ, ವಿದೇಶದಲ್ಲಿ ನಡೆಯುವ ಅಂತಾರಾಷ್ಟ್ರೀಯ ಪಂದ್ಯಗಳಿಂದ ಹಿಡಿದು ರಣಜಿ ಪಂದ್ಯಗಳು ನಡೆಯುವಾಗಲೂ ಬೆಟ್ಟಿಂಗ್ ದಂಧೆಯನ್ನು ನಡೆಸುತ್ತಿದ್ದರು. ಅಷ್ಟೇ ಅಲ್ಲದೆ ಬೆಟ್ ಪ್ಲೇ, ಲೈನ್ ಸೇರಿದಂತೆ ಹಲವು ಆಪ್ ಗಳ ಮೂಲಕ ಬಾಲ್ ಟೂ ಬಾಲ್ ಬೆಟ್ಟಿಂಗ್ ಆಡುತ್ತಿದ್ದರು.

    ಆರೋಪಿಗಳ ಮೇಲೆ ಕಳೆದ ಮೂರು ತಿಂಗಳಿಂದ ನೀಗಾ ಇಡಲಾಗಿತ್ತು. ಬಳಿಕ ಅವರನ್ನು ಬಂಧಿಸಲಾಗಿದೆ. ಆರೋಪಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಹೊಂದಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

    ಮೀಟರ್ ಬಡ್ಡಿ ಆರೋಪಿ ಅರೆಸ್ಟ್:
    ಮೀಟರ್ ಬಡ್ಡಿ ಹೆಸರಲ್ಲಿ ಅಮಾಯಕರ ಜಮೀನುಗಳನ್ನ ಕಬಳಿಸುತ್ತಿದ್ದ ಆನೇಕಲ್ ಕೃಷ್ಣ ಎಂಬವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕಳೆದ ಹತ್ತು ವರ್ಷದಿಂದ ಪ್ರಜಾ ವಿಮೋಚನೆ ಎಂಬ ಚಳುವಳಿಯ ಅಧ್ಯಕ್ಷನಾಗಿ ಕೆಲಸ ಮಾಡಿಕೊಂಡಿದ್ದ. ಮೀಟರ್ ಬಡ್ಡಿಯನ್ನು ದಂಧೆಯಾಗಿಸಿಕೊಂಡು ಸಾಲ ಪಡೆದವರಿಂದ ಖಾಲಿ ಬಾಂಡ್‍ಗಳ ಮೇಲೆ ಸಹಿ ಹಾಕಿಸಿಕೊಳ್ಳುತ್ತಿದ್ದ.

    ಆರು ತಿಂಗಳಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಸಾಲ ಪಡೆದವರ ಆಸ್ತಿಯನ್ನು ಕೃಷ್ಣ ಕಬಳಿಸುತ್ತಿದ್ದ. ಈತನಿಂದ ಅನೇಕರು ಶೋಷಣೆಗೆ ಹಾಗೂ ವಂಚನೆಗೆ ಒಳಗಾಗಿದ್ದಾರೆ. ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿರುವ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಲ ಮರುಪಾವತಿ ಮಾಡದ್ದಕ್ಕೆ ದಂಧೆಕೋರನಿಂದ ಮಗು ಕಿಡ್ನಾಪ್!

    ಸಾಲ ಮರುಪಾವತಿ ಮಾಡದ್ದಕ್ಕೆ ದಂಧೆಕೋರನಿಂದ ಮಗು ಕಿಡ್ನಾಪ್!

    ಬೆಂಗಳೂರು: ಒಂದು ಕಡೆ ಮೀಟರ್ ಬಡ್ಡಿ ದಂಧೆಗೆ ಬ್ರೇಕ್ ಹಾಕಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಸ್ ನಡೆಸುತ್ತಿದ್ದರೆ ಬಡ್ಡಿ ದಂಧೆಕೋರರ ದರ್ಬಾರ್ ಮುಂದುವರಿದಿದೆ. ಸಾಲದ ಹಣಕ್ಕಾಗಿ ಕಂದಮ್ಮನನ್ನೇ ಅಪಹರಣ ಮಾಡಿದ ಅಮಾನವೀಯ ಕೃತ್ಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಕಂದಮ್ಮನ ಚಿಕಿತ್ಸೆಗೆಂದು ಪಡೆದ 30 ಸಾವಿರ ರೂ. ಸಾಲವನ್ನು ಹಿಂತಿರುಗಿಸಲಿ ಅಂತಾ ಲೇವಾದೇವಿಯೊಬ್ಬ ಮಗುವನ್ನೇ ಅಪಹರಣ ಮಾಡಿದ್ದಾನೆ. ಅಷ್ಟೇ ಅಲ್ಲದೇ ಆನೇಕಲ್ ತಾಲೂಕಿನ ಕಿತ್ತಾಗನಹಳ್ಳಿಯಲ್ಲಿ ವಾಸವಾಗಿದ್ದ ಬಾಡಿಗೆ ಮನೆಗೂ ಬೀಗ ಜಡಿದು ದಂಪತಿಯನ್ನು ಬೀದಿ ಪಾಲು ಮಾಡಿದ್ದಾನೆ.

    ಭದ್ರಾವತಿಯ ಚಂದ್ರ ಮೂರ್ತಿ ಮಗುವನ್ನು ಕಿತ್ತುಕೊಂಡು ಹೋದ ಲೇವಾದೇವಿ. ವಿನಾಯಕ್ ದಂಪತಿ ಮಗು ಈಗ ಭದ್ರಾವತಿಯಲ್ಲಿದ್ದು, ಸಾಲ ಮರುಪಾವತಿ ಮಾಡಿ ಮಗುವನ್ನು ತಗೆದುಕೊಂಡು ಹೋಗಿ ಅಂತಾ ಚಂದ್ರ ಮೂರ್ತಿ ಪಟ್ಟು ಹಿಡಿದಿದ್ದಾನೆ ಎಂದು ದಂಪತಿ ಆರೋಪಿಸಿದ್ದಾರೆ.

    ಏನಿದು ಪ್ರಕರಣ?:
    ಹಾಸನ ಮೂಲದ ವಿನಾಯಕ್ ದಂಪತಿ ಐದು ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಆನೇಕಲ್ ಸಮೀಪದ ಕಿತ್ತಾಗನಹಳ್ಳಿಗೆ ಬಂದಿದ್ದರು. ಅಲ್ಲಿಯೇ ಒಂದು ಬಾಡಿಗೆ ಮನೆ ಮಾಡಿಕೊಂಡು ಗಾರೆ ಕೆಲಸ ಮಾಡುತ್ತ ಜೀವನ ನಡೆಸುತ್ತಿದ್ದರು. ಒಂದು ವರ್ಷದ ಹಿಂದೆ ಮಗುವಿನ ಜನನವಾಗಿದ್ದು, ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಮಗುವಿಗೆ ಚಿಕಿತ್ಸೆ ಕೊಡಿಸಲು ಭದ್ರಾವತಿಯ ಚಂದ್ರ ಮೂರ್ತಿ ಬಳಿ ವಿನಾಯಕ್ ದಂಪತಿ 30 ಸಾವಿರ ರೂ. ಸಾಲ ಪಡೆದಿದ್ದರು.

    ಆರ್ಥಿಕವಾಗಿ ಕುಗ್ಗಿದ್ದ ವಿನಾಯಕ್ ಸಾಲ ಮರುಪಾವತಿ ಮಾಡಲು ಆಗಿರಲಿಲ್ಲ. ಇದಿಂದಾಗಿ ಚಂದ್ರ ಮೂರ್ತಿ ವಿನಾಯಕ್ ದಂಪತಿಯನ್ನು ಭದ್ರಾವತಿಗೆ ಕರೆಸಿಕೊಂಡಿದ್ದರು. ಮಗುವನ್ನು ಅಪಹರಣ ಮಾಡಿ, ಮಗು ಬೇಕಾದರೆ ಸಾಲ ಮರು ಪಾವತಿ ಮಾಡಿ ಅಂತಾ ಬೆದರಿಕೆ ಹಾಕಿದ್ದಾರಂತೆ. ಒಂಬತ್ತು ತಿಂಗಳ ಹೆತ್ತು ಹೊತ್ತು ಸಾಕಿದ ಮಗುವನ್ನು ಕಳೆದುಕೊಂಡ ತಂದೆ-ತಾಯಿ ದಿಕ್ಕು ತೋಚದೆ ಪಬ್ಲಿಕ್ ಟಿವಿ ಬಳಿ ಬಂದು ಮಗುವನ್ನು ಕೊಡಿಸುವಂತೆ ಬೇಡಿಕೊಳ್ಳುತ್ತಿದ್ದಾರೆ.

    ಕಿತ್ತಾಗನ ಹಳ್ಳಿಯಲ್ಲಿ ಬಾಡಿಗೆಗೆ ಇದ್ದ ಮನೆಗೂ ಸಹ ಚಂದ್ರ ಮೂರ್ತಿ ಬೀಗ ಜಡಿದಿದ್ದು, ಇರುವುದಕ್ಕೂ ಮನೆಯಿಲ್ಲದಾಗಿದೆ. ಕೈಯಲ್ಲಿ ಬಿಡಿಗಾಸು ಇಲ್ಲದೇ ಐದು ದಿನಗಳಿಂದ ದೇವಸ್ಥಾನ, ಬಸ್‍ಸ್ಟ್ಯಾಂಡ್, ಆಸ್ಪತ್ರೆಗಳ ಬಳಿ ಮಲಗಿಯೇ ಕಾಲ ಕಳೆಯುತ್ತಿದ್ದಾರೆ. ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/eOPS66BnUYM

  • ಸಿಎಂ ಹೇಳೋದೊಂದು, ಡಿಸಿಎಂ ಆದೇಶ ಮಾಡೋದೆ ಇನ್ನೊಂದು!

    ಸಿಎಂ ಹೇಳೋದೊಂದು, ಡಿಸಿಎಂ ಆದೇಶ ಮಾಡೋದೆ ಇನ್ನೊಂದು!

    – ಮೀಟರ್ ಬಡ್ಡಿದಂಧೆಕೋರರ ಮೇಲೆ ಸ್ವಯಂ ಕೇಸ್‍ಗೆ ಡಿಸಿಎಂ ತಡೆ?

    ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ರೈತರು, ಮಹಿಳೆಯರು, ಬಡವರ ಶೋಷಣೆ ಮಾಡುತ್ತಿರುವ ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸಿಎಂ ಕುಮಾರಸ್ವಾಮಿ ಅವರು ಪೊಲೀಸರಿಗೆ ಅಧಿಕಾರ ನೀಡಿದ ಬೆನ್ನಲ್ಲೇ, ಈ ಆದೇಶಕ್ಕೆ ಕತ್ತರಿ ಬಿದ್ದಿದೆ.

    ಹೌದು. ಮೀಟರ್ ಬಡ್ಡಿದಂಧೆ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಎಚ್‍ಡಿಕೆ ಖಡಕ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿದ್ದರು. ಅಧಿಕಾರವನ್ನು ವಹಿಸಿದ ಬೆನ್ನಲ್ಲೇ ಅಲೋಕ್ ಕುಮಾರ್ ಮೀಟರ್ ದಂಧೆ ನಡೆಸುತ್ತಿದ್ದವರ ನಿವಾಸದ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದರು. ದಂಧೆಕೋರರ ನಿಯಂತ್ರಿಸಲು ಪೊಲೀಸರು ಫೀಲ್ಡ್‍ಗೆ ಇಳಿಯುತ್ತಿದ್ದಂತೆ ಅವರ ಅಧಿಕಾರಕ್ಕೆ ಈಗ ಕತ್ತರಿ ಬಿದ್ದಿದೆ.

    ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರು ಪೊಲೀಸ್ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲು ಮಾಡಬಾರದು ಎಂದು ಸುತ್ತೋಲೆ ಹೊರಡಿಸಿದ್ದಾರೆ.

    ಹೊಸ ಸುತ್ತೋಲೆಯಲ್ಲಿ ಏನಿದೆ?
    ಸ್ವಯಂ ಪ್ರೇರಿತವಾಗಿ ದೂರು ದಾಖಲಿಸುವ ಅಂಶವನ್ನು ಹಿಂಪಡೆಯಲಾಗಿದೆ. ಹೆಚ್ಚು ಪ್ರಮಾಣದಲ್ಲಿ ಬಡ್ಡಿ ವಸೂಲಿ ಮಾಡುವ ಮತ್ತು ಸಾಲ ಮರುಪಾವತಿಗಾಗಿ ಸಾರ್ವಜನಿಕರನ್ನು ಹಾಗೂ ರೈತರನ್ನು ಶೋಷಿಸುತ್ತಿರುವವರ ವಿರುದ್ಧ ಸಹಕಾರ ಇಲಾಖೆ ಅಧಿಕಾರಿಗಳು ಹಾಗೂ ಶೋಷಿತರಿಂದ ದೂರು ಬಂದಲ್ಲಿ ಮಾತ್ರ ಪ್ರಕರಣ ದಾಖಲಿಸಬೇಕು ಎನ್ನುವ ಅಂಶ ಸುತ್ತೋಲೆಯಲ್ಲಿದೆ.

    ಮೀಟರ್ ಬಡ್ಡಿ ದಂಧೆ ನಡೆಸುವರಿಂದ ಶೋಷಣೆಗೆ ಒಳಗಾಗುತ್ತಿದ್ದ ಮಹಿಳೆಯೊಬ್ಬರ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಆ ಕೂಡಲೇ ಎಚ್ಚೆತ್ತ ಸಿಎಂ ಮಹಿಳೆಯ ನೆರವಿಗೆ ಆಗಮಿಸಿ ಸಮಸ್ಯೆ ಬಗೆಹರಿಸುವ ಕುರಿತು ಆಶ್ವಾಸನೆ ನೀಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ ಇಂತಹ ದಂಧೆಕೋರರ ವಿರುದ್ಧ ಸ್ವಯಂ ದೂರು ದಾಖಲಿಸುವ ಅಧಿಕಾರ ಪೊಲೀಸರಿಗೆ ನೀಡುವುದಾಗಿ ತಿಳಿಸಿದ್ದರು. ಸಿಎಂ ಈ ಭರವಸೆ ನೀಡಿದ ಒಂದೇ ದಿನದಲ್ಲಿ ಡಿಸಿಎಂ ಪರಮೇಶ್ವರ್ ಅವರು ತಮ್ಮ ಬಳಿ ಇರುವ ಗೃಹ ಇಲಾಖೆಯ ಮೂಲಕ ಈ ಸುತ್ತೋಲೆ ಹೊರಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಈ ಹಿಂದೆಯೂ ಬಿಜೆಪಿ ಆಪರೇಷನ್ ಕಮಲ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿಎಂ ಎಚ್‍ಡಿಕೆ ದಂಧೆಯಲ್ಲಿ ಅಕ್ರಮವಾಗಿ ಗಳಿಸಿದ ಹಣದಿಂದ ಸರ್ಕಾರವನ್ನು ಕೆಡವಲು ಪ್ರಯತ್ನ ನಡೆಸಲಾಗುತ್ತಿದೆ. ಈ ಕುರಿತು ಕಠಿಣ ಕ್ರಮಕೈಗೊಂಡು ಶೀಘ್ರವೇ ಅಂತಹ ದಂಧೆಕೋರರ ಮುಖ ಬಯಲು ಮಾಡುವುದಾಗಿ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗಳೂರು ಕಿಂಗ್‍ಪಿನ್‍ಗಳ ಕ್ಲೀನ್‍ಗೆ ‘ತ್ರೀ ಮಂಥ್ ಮಿಷನ್’

    ಬೆಂಗಳೂರು ಕಿಂಗ್‍ಪಿನ್‍ಗಳ ಕ್ಲೀನ್‍ಗೆ ‘ತ್ರೀ ಮಂಥ್ ಮಿಷನ್’

    -ಸಿಸಿಬಿ ಅಧಿಕಾರಿಗಳ ಚಳಿ ಬಿಡಿಸಿದ ಅಲೋಕ್ ಕುಮಾರ್

    ಬೆಂಗಳೂರು: ರೌಡಿಗಳಿಗೆ ಸಿಂಹ ಸ್ವಪ್ನರಾಗಿದ್ದ ದಕ್ಷ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಸಿಸಿಬಿ ಎಡಿಜಿಪಿ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ‘ತ್ರೀ ಮಂಥ್ ಮಿಷನ್’ ಹೆಸರಿನಲ್ಲಿ ಬೆಂಗಳೂರು ಕಿಂಗ್‍ಪಿಂನ್‍ಗಳ ಕ್ಲೀನ್‍ಗೆ ಮುಂದಾಗಿದ್ದಾರೆ.

    ಇಂದು ಕಮೀಷನರ್ ಕಚೇರಿಯಲ್ಲಿ ಸಿಸಿಬಿಯ ಎಲ್ಲ ಎಸಿಪಿ, ಇನ್ಸ್‍ಪೆಕ್ಟರ್ ಹಾಗೂ ಸಿಬ್ಬಂದಿ ಜೊತೆಗೆ ಅಲೋಕ್ ಕುಮಾರ ಸಭೆ ನಡೆಸಿದ್ದು, ಈ ವೇಳೆ ಕಿಂಗ್‍ಪಿನ್‍ಗಳ ಮಟ್ಟಹಾಕುವ ಕಾರ್ಯಾಚರಣೆ ಕುರಿತು ಮಾಹಿತಿ ಹಾಗೂ ಸೂಚನೆ ನೀಡಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

    ಸಭೆಯಲ್ಲಿ ಚರ್ಚೆ ಆಗಿದ್ದೇನು?
    ಸಂಘಟಿತ ಅಪರಾಧ ತಡೆ ಸೇರಿದಂತೆ ಮೀಟರ್ ಬಡ್ಡಿ ವ್ಯವಹಾರ, ಲ್ಯಾಂಡ್ ಗ್ರ್ಯಾಬಿಂಗ್, ಮಟ್ಕಾ ದಂಧೆ, ಇಸ್ಪೀಟ್ ಅಡ್ಡೆಗಳಿಗೆ ಬ್ರೇಕ್ ಹಾಕಲು ಮೊದಲ ಆದ್ಯತೆ ನೀಡಬೇಕು. ರಿಯಲ್ ಎಸ್ಟೇಟ್ ಮಾಫಿಯಾ, ಸಿವಿಲ್ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಬಾರದು. ಸದಾ ಜಾಗೃತರಾಗಿದ್ದು, ರೌಡಿಗಳ ಪತ್ತೆ ಹಾಗೂ ಅವರ ಮೇಲೆ ನಿಗಾ ಇಡಬೇಕು. ಸಿಸಿಬಿ ಅಂದ್ರೆ ವಾರ್ ರೂಮ್, ಹಗಲು-ರಾತ್ರಿ ಕೆಲಸ ನಡೆಯುತ್ತಿರಬೇಕು. ದಿನಾಂಕ ಗುರುತಿಸಿ ಕೆಲಸ ಮಾಡುವುದನ್ನು ಬಿಟ್ಟು, 24*7 ವಾರ್ ರೀತಿ ಕೆಲಸ ಮಾಡಬೇಕು. ಕೂಡಲೇ ಎಲ್ಲರೂ ಕಾರ್ಯ ಪ್ರವೃತ್ತರಾಗಿ, ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ನಮ್ಮ ಬಗ್ಗೆ ಇಲಾಖೆ ಹಿರಿಯ ಅಧಿಕಾರಿಗಳು, ಸಾರ್ವಜನಿಕರು ಮತ್ತು ರಾಜಕಾರಣಿಗಳಿಗೆ ನಂಬಿಕೆ ಬರುವಂತಿರುವಂತೆ ಕೆಲಸ ನಿರ್ವಹಿಸಬೇಕು. ಈ ಮೂಲಕ ಸಿಸಿಬಿಗೆ ಮತ್ತೆ ಹಳೇ ಚಾರ್ಮ್ ತಂದುಕೊಡಲು ಶ್ರಮಿಸಿ ಎಂದು ಸೂಚಿಸಿರುವ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ಮೇಲೆ ನಂಬಿಕೆ ಇಟ್ಟು ಇಲ್ಲಿಗೆ ಕಳುಹಿಸಿದ್ದಾರೆ. ನಂಬಿಕೆ ಉಳಿಸಿಕೊಳ್ಳುವ ರೀತಿ ಕೆಲಸ ಆಗಬೇಕು ಎಂದು ಎಚ್ಚರಿಕೆ ನೀಡಿದ್ದಾರಂತೆ.

    ನಾರ್ವೆ ಸೋಮಶೇಖರ್ ಹೆಸರು ಎತ್ತಿದ ಅಲೋಕ್ ಕುಮಾರ್, ಸೋಮಶೇಖರ್ ಈಗ ಏನು ಮಾಡುತ್ತಿದ್ದಾನೆ ಅಂತ ನಿಮಗೆ ಗೊತ್ತಿದೆಯಾ? ಏನು ಕೆಲಸವಿಲ್ಲದೆ ಅವನಿಗೆ ಅಷ್ಟೊಂದು ದುಡ್ಡು ಎಲ್ಲಿಂದ ಬಂತು? ಈ ಬಗ್ಗೆ ನನಗೆ ಮಾಹಿತಿ ಇದೆ. ಯಾರ ಹಿಂದೆ ಯಾರು ಇದ್ದಾರೆ ಎನ್ನವ ಲಿಸ್ಟ್ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಅಧಿಕಾರಿಗಳಿ ಕ್ಲಾಸ್:
    ಒಂದು ವರ್ಷದಿಂದ ಎಷ್ಟು ಕೆಲಸ ಮಾಡಿರುವಿರಿ, ಎಷ್ಟು ಪ್ರಕರಣ ದಾಖಲಿಸಿರುವಿರಿ, ಗೀತಾ ವಿಷ್ಣು ಪ್ರಕರಣದ ಕುರಿತು ಚಾರ್ಜ್ ಶೀಟ್ ಏಕೆ ಹಾಕಿಲ್ಲ? ಆರು ತಿಂಗಳನಿಂದ ಬಾಕಿಯಿರುವ ಪ್ರಕರಣಗಳು ಎಷ್ಟು? ಎಂದು ಪ್ರಶ್ನಿಸಿರುವ ಅವರು, ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡಿದ್ದಾರೆ. ನಮ್ಮ ಕೆಲಸ ನಮಗೆ ತೃಪ್ತಿ ತರುವಂತಿರಬೇಕು. ಕೆಲಸ ಮಾಡಲು ಆಗದವರು ಜಾಗ ಖಾಲಿ ಮಾಡಿ. ನಾನು ನಿಮ್ಮ ಹತ್ತಿರ ಬೇರೆ ಏನೂ ಕೇಳುವುದಿಲ್ಲ, ಕೆಲಸ ಮಾತ್ರ ಕೇಳುತ್ತೇನೆ ಎಂದು ತಿಳಿಸಿದ್ದಾರಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಲೇಡಿ ರೌಡಿಶೀಟರ್ ಮೀಟರ್ ಬಡ್ಡಿ ದಂಧೆಗೆ ವಿಡಿಯೋ ಮಾಡ್ಕೊಂಡು ಗೃಹಿಣಿ ಆತ್ಮಹತ್ಯೆ

    ಲೇಡಿ ರೌಡಿಶೀಟರ್ ಮೀಟರ್ ಬಡ್ಡಿ ದಂಧೆಗೆ ವಿಡಿಯೋ ಮಾಡ್ಕೊಂಡು ಗೃಹಿಣಿ ಆತ್ಮಹತ್ಯೆ

    ಬೆಂಗಳೂರು: ಮೀಟರ್ ಬಡ್ಡಿ ದಂಧೆಯ ಹಿಂಸೆಗೆ ಗೃಹಿಣಿಯೊಬ್ಬಳು, ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದಿದೆ.

    ಉತ್ತರಹಳ್ಳಿಯ ಪೂರ್ಣಪ್ರಜ್ಞ ಲೇಔಟ್ ನಿವಾಸಿ ಉಮಾ.ಎಸ್ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆತ್ಮಹತ್ಯೆಗೂ ಮುನ್ನ ಉಮಾ ತನ್ನ ಮೊಬೈಲ್‍ನಲ್ಲಿ ತನಗೆ ಆಗಿರುವ ಅನ್ಯಾಯದ ಕುರಿತು ಹೇಳಿದ್ದಾಳೆ.

    ಮೃತ ಉಮಾ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯ ಲೇಡಿ ರೌಡಿಶೀಟರ್ ಯಶಸ್ವಿನಿ ಬಳಿ ಶೇ.25 ರಷ್ಟು ಬಡ್ಡಿ ದರದಂತೆ 1.5 ಲಕ್ಷ ರೂ. ಪಡೆದಿದ್ದಳು. ಕಳೆದ ಎರಡು ವರ್ಷಗಳಿಂದಲೂ ಉಮಾ ಪಡೆದ ಹಣಕ್ಕೆ ಬಡ್ಡಿ ಕಟ್ಟುತ್ತಾ ಬಂದಿದ್ದಳಂತೆ. ಆದರೆ ಈ ತಿಂಗಳು ಬಡ್ಡಿ ಕಟ್ಟುವಲ್ಲಿ ಉಮಾ ವಿಳಂಬ ಮಾಡಿದ್ದರಿಂದ ಯಶಸ್ವಿನಿ ವಿಪರೀತ ತೊಂದರೆ ಕೊಡಲು ಪ್ರಾರಂಭಿಸಿದ್ದಳು. ಇದರಿಂದ ಮನನೊಂದ ಉಮಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಈ ಕುರಿತು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆಯೂ ಬಡ್ಡಿ ನೀಡುವಲ್ಲಿ ವಿಳಂಬ ಮಾಡಿದವರಿಗೆ ರೌಡಿಶೀಟರ್ ಯಶಸ್ವಿನಿ ತೊಂದರೆ ಕೊಟ್ಟಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.