Tag: MESCOM

  • ಭಾರೀ ಗಾಳಿಗೆ ಮನೆ ಮೇಲೆ ಬಿದ್ದ ವಿದ್ಯುತ್ ಕಂಬ – ಸ್ಥಳದ ಅಕ್ಕಪಕ್ಕದಲ್ಲಿ ಗ್ರೌಂಡಿಂಗ್

    ಭಾರೀ ಗಾಳಿಗೆ ಮನೆ ಮೇಲೆ ಬಿದ್ದ ವಿದ್ಯುತ್ ಕಂಬ – ಸ್ಥಳದ ಅಕ್ಕಪಕ್ಕದಲ್ಲಿ ಗ್ರೌಂಡಿಂಗ್

    ಚಿಕ್ಕಮಗಳೂರು: ವಿದ್ಯುತ್ ಕಂಬವೊಂದು ಭಾರೀ ಗಾಳಿಗೆ ಮನೆ ಮೇಲೆ ಮುರಿದು ಬಿದ್ದು, ಕಂಬ ಬಿದ್ದ ಸ್ಥಳದ ಅಕ್ಕಪಕ್ಕದಲ್ಲಿ ಗ್ರೌಂಡಿಂಗ್ ಆಗುತ್ತಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಕಮಕ್ಕಿ ಗ್ರಾಮದಲ್ಲಿ ನಡೆದಿದೆ.

    ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಮಲೆನಾಡಿಗರ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆ ಬೀಸುತ್ತಿರುವ ರಣ ಗಾಳಿಯಿಂದ ಮುರಿದು ಬಿದ್ದ ಮರ, ವಿದ್ಯುತ್ ಕಂಬಗಳು ಲೆಕ್ಕವೇ ಇಲ್ಲ. ಈ ಮಧ್ಯೆ ಮನೆ ಮೇಲೆ ಬಿದ್ದ ವಿದ್ಯುತ್ ಕಂಬದ ಸುತ್ತಮುತ್ತ ಗ್ರೌಂಡಿಂಗ್ ಆಗಿದೆ. ಇದನ್ನೂ ಓದಿ: ಮಲೆನಾಡಲ್ಲಿ ಮಳೆ ಅಬ್ಬರ – ಅಜ್ಜಿ ಪಾರು, ಹೆದ್ದಾರಿ ಬಂದ್, ಮನೆ-ಕಟ್ಟಡಗಳ ಕುಸಿತ

    ಹೀಗಾಗಿ ಕೂಡಲೇ ಸ್ಥಳಿಯರು ವಿಷಯವನ್ನು ಮೆಸ್ಕಾಂ ಸಿಬ್ಬಂದಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮಳೆ ಸುರಿಯುತ್ತಿದೆ, ಸ್ಥಳದಲ್ಲಿ ಗ್ರೌಂಡಿಂಗ್ ಮತ್ತೊಂದು ಅನಾಹುತವಾಗುವುದು ಬೇಡವೆಂದು ಸ್ಥಳೀಯರೇ ಮುಂದಾಗಿ ರಸ್ತೆಗೆ ಮರದ ದಿಮ್ಮೆಗಳನ್ನು ಅಡ್ಡವಿಟ್ಟು ಸಂಚಾರವನ್ನೇ ಬಂದ್ ಮಾಡಿದ್ದಾರೆ.

    ನಂತರ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದ ವಿಷಯ ತಿಳಿದ ಬಣಕಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುವ ವೇಳೆ ಸ್ಥಳೀಯರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಫೋನ್ ಮಾಡಿದ ಬಳಿಕವೂ ತಡವಾಗಿ ಬಂದ ಮೆಸ್ಕಾಂ ಸಿಬ್ಬಂದಿಗೆ ಕೂಡ ಸ್ಥಳೀಯರೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಕೊಡಗಿನ ವಿವಿಧೆಡೆ ಮುಂದುವರಿದ ಮಳೆ- ಹೆಗ್ಗಳ ಗ್ರಾಮದಿಂದ ಕುಟುಂಬಗಳ ಸ್ಥಳಾಂತರ

  • ಮದ್ವೆಗೆ ಎರಡು ತಿಂಗಳು ಬಾಕಿ ಇತ್ತು- ವಿದ್ಯುತ್ ಕಂಬದಲ್ಲೇ ಪವರ್ ಮ್ಯಾನ್ ಸಾವು

    ಮದ್ವೆಗೆ ಎರಡು ತಿಂಗಳು ಬಾಕಿ ಇತ್ತು- ವಿದ್ಯುತ್ ಕಂಬದಲ್ಲೇ ಪವರ್ ಮ್ಯಾನ್ ಸಾವು

    ಚಿಕ್ಕಮಗಳೂರು: ಟ್ರಾನ್ಸ್ ಫರ್ಮರ್ ದುರಸ್ಥಿ ಮಾಡುವಾಗ ವಿದ್ಯುತ್ ಶಾಕ್‍ನಿಂದ ಪವರ್ ಮ್ಯಾನ್ ಕಂಬದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ನಡೆದಿದೆ.

    27 ವರ್ಷದ ಕಲ್ಲೇಶ್ ಮೃತ ಯುವಕ. ಕಲ್ಲೇಶ್ ಮೂಲತಃ ಹೊಸದುರ್ಗ ತಾಲೂಕಿನ ಸಾಣೆಹಳ್ಳಿ ನಿವಾಸಿಯಾಗಿದ್ದು, ಕಡೂರು ತಾಲೂಕಿನ ಮೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಟಿಸಿಯಿಂದ ಪವರ್ ಸಪ್ಲೈ ಆಗುತ್ತಿಲ್ಲ ಎಂದು ವಿದ್ಯುತ್ ಕಂಬ ಏರಿದ್ದರು. ಕೆಲಸ ಮಾಡುವಾಗ ವಿದ್ಯುತ್ ಶಾಕ್‍ನಿಂದ ಕಂಬದಲ್ಲೇ ಸಾವನ್ನಪ್ಪಿದ್ದಾರೆ.

    ಮೃತ ಕಲ್ಲೇಶ್ ಮದುವೆಗೆ ನಿಶ್ಚಿತಾರ್ಥ ಕೂಡ ಮುಗಿದಿದ್ದು, ಮದುವೆಗೆ ಇನ್ನೆರಡು ತಿಂಗಳು ಬಾಕಿ ಇತ್ತು. ಎದೆಮಟ್ಟದ ಮಗನನ್ನ ಕಳೆದುಕೊಂಡ ಕುಟುಂಬಸ್ಥರ ನೋವು ಮುಗಿಲುಮುಟ್ಟಿದೆ. ಯಗಟಿ ಪೊಲೀಸರು ಸ್ಥಳಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಅಪಘಾತ: ಇನ್ನೂ ಚಿಕ್ಕಮಗಳೂರು ತಾಲೂಕಿನ ಮತ್ತಾವರ ಗೆಸ್ಟ್ ಹೌಸ್ ಬಳಿ ಬೊಲೇರೋ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನ ಹಳಿಯೂರು ಗ್ರಾಮದ 55 ವರ್ಷದ ನಾಗಪ್ಪಗೌಡ ಎಂದು ಗುರುತಿಸಲಾಗಿದೆ. ಬೈಕ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಗಪ್ಪಗೌಡ ತೀವ್ರ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಲು ಮುಂದಾದರು ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕರೆಂಟ್ ಬಿಲ್ ಕೇಳಲು ಬಂದ ಲೈನ್‍ಮ್ಯಾನ್ ಮೇಲೆ ಖಾದರ್ ಆಪ್ತನ ಗೂಂಡಾಗಿರಿ

    ಕರೆಂಟ್ ಬಿಲ್ ಕೇಳಲು ಬಂದ ಲೈನ್‍ಮ್ಯಾನ್ ಮೇಲೆ ಖಾದರ್ ಆಪ್ತನ ಗೂಂಡಾಗಿರಿ

    -ಸಿಎಎ, ಎನ್‌ಆರ್‌ಸಿ ದಾಖಲೆ ಕೇಳಲು ಬಂದಿದ್ದೀರಾ ಎಂದು ಹಲ್ಲೆ

    ಮಂಗಳೂರು: ಮಾಜಿ ಸಚಿವ ಯು.ಟಿ ಖಾದರ್ ಆಪ್ತ ವಿದ್ಯುತ್ ಬಿಲ್ ಪಾವತಿಸದೇ, ಮೀಟರ್‍ನಲ್ಲೂ ಗೋಲ್ ಮಾಲ್ ಮಾಡಿದ್ದಾನೆಂದು ಮಾಹಿತಿ ತಿಳಿದಿದ್ದ ಮೆಸ್ಕಾಂ ಸಿಬ್ಬಂದಿ ಪರಿಶೀಲಿಸಲು ಮನೆಗೆ ಹೋದಾಗ ಲೈನ್‍ಮ್ಯಾನ್ ಮೇಲೆಯೇ ಆತ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ದೇರಳಕಟ್ಟೆಯಲ್ಲಿ ನಡೆದಿದೆ.

    ಯು.ಟಿ ಖಾದರ್ ಆಪ್ತ, ಕಾಂಗ್ರೆಸ್ ಮುಖಂಡ ಅಮೀರ್ ಹಸನ್ ತುಂಬೆ ಲೈನ್‍ಮ್ಯಾನ್ ಮೇಲೆ ಹಲ್ಲೆ ನಡೆಸಿದ್ದಾನೆ. ಮಂಗಳೂರು ಹೊರವಲಯದ ದೇರಳಕಟ್ಟೆ ಬಳಿ ಅಮೀರ್ ತುಂಬೆ ಮನೆಯಿದ್ದು, ಬಿಲ್ ಪಾವತಿ ಬಾಕಿ ಉಳಿಸಿಕೊಂಡಿದ್ದಕ್ಕೆ ಹಾಗೂ ಮೀಟರ್ ನಲ್ಲೂ ಗೋಲ್ ಮಾಲ್ ನಡೆಸಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಮೀಟರ್ ಪರಿಶೀಲಿಸಲು ಮೆಸ್ಕಾಂ ಲೈನ್ ಮ್ಯಾನ್ ಅಮೀರ್ ಮನೆಗೆ ಬಂದಿದ್ದರು. ಅಲ್ಲದೆ ಬಿಲ್ ಬಾಕಿ ಉಳಿಸಿಕೊಂಡಿದ್ದ ಕಾರಣಕ್ಕೆ ಫ್ಯೂಸ್ ತೆಗೆಯಲು ಮುಂದಾಗಿದ್ದರು. ಇದರಿಂದ ರೊಚ್ಚಿಗೆದ್ದ ಅಮೀರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಮೆಸ್ಕಾಂ ಸಿಬ್ಬಂದಿ ರಂಗನಾಥ್ ಮುಖಕ್ಕೆ ಉಗುಳಿದ್ದು, ಸಂದೇಶ್ ಕುಮಾರ್ ಹಾಗೂ ಮಧುನಾಯ್ಕ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ.

    ಮನೆಗೆ ಬಂದಿದ್ದ ಮೂರು ಸಿಬ್ಬಂದಿಗೂ ಕುತ್ತಿಗೆ ಹಿಡಿದು ಹೊರಕ್ಕೆ ದೂಡಿದ್ದಾನೆ. ಕಾಂಗ್ರೆಸ್ ಮುಖಂಡನ ರೌಡಿಸಂ ಬಗ್ಗೆ ಹಲ್ಲೆಗೊಳಗಾದ ಸಿಬ್ಬಂದಿ ಮಧು ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಜಾಮೀನು ರಹಿತ ಎಫ್‍ಐಆರ್ ದಾಖಲಾಗಿದೆ. ಸಚಿವರ ಆಪ್ತನೆಂಬ ಕಾರಣಕ್ಕೆ ಅಮೀರ್ ರೌಡಿಸಂ ತೋರಿದ್ದಾನೆ ಎನ್ನಲಾಗುತ್ತಿದ್ದು, ಅಮೀರ್ ತುಂಬೆ ಹಲ್ಲೆ ಮಾಡಿದ ದೃಶ್ಯವನ್ನು ಹಲ್ಲೆಗೊಳಗಾದ ಮೆಸ್ಕಾಂ ಸಿಬ್ಬಂದಿ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.

    ಇತ್ತೀಚೆಗೆ ಮಂಗಳೂರಿನ ಅಡ್ಯಾರ್ ನಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ಆಯೋಜಿಸಿದ್ದ ಸಿಎಎ ವಿರೋಧಿಸಿ ನಡೆದ ಪ್ರತಿಭಟನಾ ಗುಂಪಿನಲ್ಲಿ ಮುಂಚೂಣಿಯಲ್ಲಿದ್ದ ಅಮೀರ್, ಇನ್ನೂ ಅದೇ ಗುಂಗಿನಲ್ಲಿದ್ದು ಮುಸ್ಲಿಂ ಅನ್ನುವ ಕಾರಣಕ್ಕೆ ಮೆಸ್ಕಾಂ ಲೈನ್‍ಮ್ಯಾನ್ ತನ್ನನ್ನು ಟಾರ್ಗೆಟ್ ಮಾಡಿದ್ದಾರೆಂದು ಹೇಳಿಕೊಂಡು ಹಲ್ಲೆ ನಡೆಸಿದ್ದಾನೆ. ಸಿಎಎ ಹಾಗೂ ಎನ್‌ಆರ್‌ಸಿಯ ದಾಖಲೀಕರಣಕ್ಕೆ ಬಂದು ಮುಸ್ಲಿಂಮರನ್ನು ಟಾರ್ಗೆಟ್ ಮಾಡುತ್ತಿದ್ದೀರಾ ಎಂದು ಹೇಳಿಕೊಂಡು ಹಲ್ಲೆ ನಡೆಸಿದ್ದಾನೆ.

    ಇದೀಗ ಈತ ಹಲ್ಲೆ ನಡೆಸಿದ ವೀಡಿಯೋ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಮೀರ್ ತುಂಬೆ ಬಂಧನಕ್ಕೆ ಬಲೆ ಬೀಸಿದ್ದು, ಆತ ತಲೆ ಮರೆಸಿಕೊಂಡಿದ್ದಾನೆ.

  • ವಿದ್ಯುತ್ ತಂತಿ ಬಿದ್ದು ಮನೆ ಸುಟ್ಟು ಕರಕಲು

    ವಿದ್ಯುತ್ ತಂತಿ ಬಿದ್ದು ಮನೆ ಸುಟ್ಟು ಕರಕಲು

    ಉಡುಪಿ: ಮನೆ ಮೇಲೆ ವಿದ್ಯುತ್ ತಂತಿ ಬಿದ್ದು ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆ ಬ್ರಹ್ಮಾವರದ ಹೇರಾಡಿಯಲ್ಲಿ ಬೆಂಕಿ ಅವಘಡ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ನಡೆದಿಲ್ಲ.

    ವಿದ್ಯುತ್ ಹರಿಯುತ್ತಿದ್ದ ತಂತಿ ಬಿದ್ದೊಡನೆ ಭಾಗಶಃ ಮನೆ ಸುಟ್ಟು ಭಸ್ಮವಾಗಿದೆ. ಮಹಮ್ಮದ್ ಎಂಬವರ ಮನೆ ಇದಾಗಿದ್ದು, ಅವಘಡ ನಡೆದು ಗಂಟೆಗಳು ಕಳೆದರೂ ಅಗ್ನಿಶಾಮಕ ದಳ ಸ್ಥಳಕ್ಕೆ ಬರಲು ವಿಳಂಬವಾಗಿದೆ. ಸ್ಥಳೀಯರೇ ಬೆಂಕಿ ಹತೋಟಿಗೆ ತಂದಿದ್ದಾರೆ. ಘಟನೆಯಲ್ಲಿ ಸುಮಾರು ಆರು ಲಕ್ಷ ರುಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

    ಕೊಠಡಿಗಳು, ಮನೆಯೊಳಗಿದ್ದ ಸೊತ್ತು ಸುಟ್ಟು ಕರಕಲಾಗಿದೆ. ವಿದ್ಯುತ್ ಶಾಕ್ ಗೆ ಗೋಡೆಗಳು ಬಿರುಕುಬಿಟ್ಟದೆ. ಫ್ರಿಡ್ಜ್- ವಾಷಿಂಗ್ ಮಷಿನ್ ಸುಟ್ಟು ಕರಕಲಾಗಿದೆ. ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆಯ ಒಟ್ಟು ನಷ್ಟ ಮತ್ತು ಅವಘಡಕ್ಕೆ ಕಾರಣ ಏನು ಅಂತ ಮೆಸ್ಕಾಂ ಮತ್ತು ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

  • ಮೆಸ್ಕಾಂಗೆ ಸವಾಲಾಗಿರುವ ಮಲೆನಾಡ ಮಳೆ- ಸಿಬ್ಬಂದಿ ಮೇಲೆ ಬಿದ್ದ ಮರ

    ಮೆಸ್ಕಾಂಗೆ ಸವಾಲಾಗಿರುವ ಮಲೆನಾಡ ಮಳೆ- ಸಿಬ್ಬಂದಿ ಮೇಲೆ ಬಿದ್ದ ಮರ

    ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಲವು ಕಡೆ ಅವಾಂತರ ಸೃಷ್ಟಿಸಿದೆ. ಮೆಳೆಯ ಅಬ್ಬರಕ್ಕೆ ಆಗುತ್ತಿರುವ ಅನಾಹುತಗಳು ಮೆಸ್ಕಾಂಗೆ ತಲೆನೋವಾಗಿದೆ.

    ಹೌದು. ಮಲೆನಾಡಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ಥಗೊಂಡಿದ್ದು, ರಸ್ತೆಗಳ ಮೇಲೆ ಬೃಹತ್ ಮರಗಳು ಉರುಳಿ ಬಿದ್ದು ಭಾರೀ ಅವಾಂತರ ಸೃಷ್ಟಿಯಾಗಿದೆ. ಅಲ್ಲದೆ ಧರೆಗುರುಳಿರುವ ಮರಗಳ ಜೊತೆಗೆ ಹಲವು ಕಡೆ ವಿದ್ಯುತ್ ಕಂಬಗಳು ಕೂಡ ನೆಲಕ್ಕುರುಳಿದೆ. ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಬಂಡೀಗಡಿ ಬಳಿ ರಸ್ತೆಗೆ ಬೃಹತ್ ಮರ ಉರುಳಿ ಬಿದ್ದಿದೆ.

    ಈ ಹಿನ್ನೆಲೆ ಮಳೆಯಲ್ಲೇ ಮರ ತೆರವು ಕಾರ್ಯಾಚರಣೆ ಮಾಡಿ, ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಲೈನ್ ರಿಪೇರಿ ಕೆಲಸವನ್ನು ಮಾಡುತ್ತಿದ್ದಾರೆ. ಹೀಗೆ ಲೈನ್ ರಿಪೇರಿ ಮಾಡುತ್ತಿದ್ದ ಮೆಸ್ಕಾಂ ಸಿಬ್ಬಂದಿ ಮೇಲೆ ಮರವೊಂದು ಬಿದ್ದಿದ್ದು, ತಕ್ಷಣ ಸ್ಥಳದಲ್ಲಿದ್ದವರು ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಸಿಬ್ಬಂದಿ ಪಾರಾಗಿದ್ದಾರೆ.

    ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಳೆದ ಬಾರಿ 17 ಬಾರಿ ಮುಳುಗಿದ್ದ ಹೆಬ್ಬಾಳೆ ಸೇತುವೆ ಈ ವರ್ಷ ಮೊದಲ ಬಾರಿ ಮುಳುಗಡೆಯಾಗಿದ್ದು, ಮಹಾಮಳೆಗೆ ಜನ ಮನೆಯಿಂದ ಹೊರಬರದಂತ ಸ್ಥಿತಿ ನಿರ್ಮಾಣವಾಗಿದೆ.

    ರಾಜ್ಯದ ಹಲವೆಡೆ ಮಳೆರಾಯನ ರೌದ್ರನರ್ತನಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಅಲ್ಲದೆ ಭಾರೀ ಮಳೆಯ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಸುರಿಯುತ್ತಿದ್ದು, ಉತ್ತರ ಕರ್ನಾಟಕದ ಭಾಗದಲ್ಲಿ ಪ್ರವಾಹ ಸೃಷ್ಟಿಸಿದೆ. ಮಳೆಯ ಅಬ್ಬರಕ್ಕೆ ರಾಜ್ಯದ ನದಿಗಳು ಭೋರ್ಗರೆದು ಹರಿಯುತ್ತಿದ್ದು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಸೇತುವೆಗಳು ಮುಳುಗಡೆಯಾಗಿದೆ, ರಸ್ತೆಗಳ ಮೇಲೆ ಮರಗಳು, ಗುಡ್ಡಗಳು ಕುಸಿದು ಸಂಚಾರ ಸ್ಥಗಿತಗೊಂಡಿದೆ.

  • ಮೆಸ್ಕಾಂ ತೋಡಿದ್ದ ಹಳ್ಳಕ್ಕೆ ಬಿದ್ದು ನರಳಾಡಿದ ದನಕರು

    ಮೆಸ್ಕಾಂ ತೋಡಿದ್ದ ಹಳ್ಳಕ್ಕೆ ಬಿದ್ದು ನರಳಾಡಿದ ದನಕರು

    ಚಿಕ್ಕಮಗಳೂರು: ವಿದ್ಯುತ್ ಇಲಾಖೆ ತೋಡಿದ್ದ ಗುಂಡಿಗೆ ಐದಾರು ದನಕರುಗಳು ಬಿದ್ದು ಇಡೀ ರಾತ್ರಿ ನರಳಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್‍ನಲ್ಲಿ ನಡೆದಿದೆ.

    ಚಿಕ್ಕಮಗಳೂರಿನ ಸುಭಾಷ್ ನಗರದಲ್ಲಿ ಮೆಸ್ಕಾಂ ಸಿಬ್ಬಂದಿ ಸುಮಾರು 10-15 ಅಡಿ ಆಳದ 20 ಗುಂಡಿಗಳನ್ನ ತೋಡಿದ್ದರು. ಆದರೆ ಅದರ ಸುತ್ತಲೂ ಯಾವುದೇ ಬೇಲಿಯನ್ನೂ ಹಾಕಿರಲಿಲ್ಲ. ಸೋಮವಾರ ಸಂಜೆ ಮೇವು ಮೇಯ್ದುಕೊಂಡು ಬಂದ ಆರು ದನಕರುಗಳು ಆ ಗುಂಡಿಯಲ್ಲಿ ಬಿದ್ದಿದೆ. ಇಡೀ ರಾತ್ರಿ ಅಲ್ಲೇ ಗೋಳಿಟ್ಟಿವೆ. ಬೆಳಗ್ಗೆ ಗುಂಡಿಯಿಂದ ದನಕರುಗಳು ಕೂಗುತ್ತಿದ್ದ ಸದ್ದನ್ನು ಕೇಳಿ ಸ್ಥಳೀಯರು ಹಗ್ಗದ ಸಹಾಯದಿಂದ ಹಸುಗಳನ್ನ ಮೇಲೆತ್ತಿದ್ದಾರೆ.

    ಘಟನೆ ನಡೆದ ಸ್ಥಳದ ಪಕ್ಕದಲ್ಲೇ ಅಂಗನವಾಡಿಯೂ ಇದೆ. ಆದರೆ ಗುಂಡಿಯನ್ನು ತೋಡಿಟ್ಟು ಮೆಸ್ಕಾಂ ಅಧಿಕಾರಿ ಸುಮ್ಮನಿದ್ದಾರೆ. ಅಪಾಯವನ್ನ ಬಾಯ್ತೆರೆದು ಕುಳಿತುರುವ ಗುಂಡಿಗಳ ಸುತ್ತಲೂ ಇಲಾಖೆ ಯಾವುದೇ ಬಂದೋಬಸ್ತ್ ಕೂಡ ಮಾಡಿಲ್ಲ. ಇಂದು ದನಕರುಗಳು ಬಿದ್ದಿವೆ. ನಾಳೆ ಪುಟ್ಟ ಪುಟ್ಟ ಮಕ್ಕಳು ಬಿದ್ದು ಹೆಚ್ಚುಕಮ್ಮಿಯಾದರೆ ಏನು ಗತಿ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಇಲಾಖೆ ಗುಂಡಿಯ ಸುತ್ತಲೂ ಬೇಲಿ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗೆ 4 ಹಸುಗಳು ಬಲಿ

    ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗೆ 4 ಹಸುಗಳು ಬಲಿ

    ಚಿಕ್ಕಮಗಳೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಸ್ಥಳದಲ್ಲೇ ನಾಲ್ಕು ಹಸುಗಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಂಗನಮಕ್ಕಿ ಗ್ರಾಮದಲ್ಲಿ ನಡೆದಿದೆ.

    ಸೋಮವಾರ ಸಂಜೆ 4.30ರ ಸಮಯಕ್ಕೆ ಮೇವಿಗೆಂದು ಬಂದ ಹಸುಗಳು ವಿದ್ಯುತ್ ತಂತಿಯನ್ನು ತುಳಿದು ಸ್ಥಳದಲ್ಲೇ ಸಾವನ್ನಪ್ಪಿವೆ. ಈ 4 ಹಸುಗಳು ಕೂಡ ಗಂಗಮನಕ್ಕಿಯ ಸೀತಮ್ಮ ಎಂಬವರಿಗೆ ಸೇರಿದ್ದಾಗಿದ್ದು, ಹಾಲು ಕೊಡುತ್ತಿದ್ದವು.

    ಸೀತಮ್ಮ ಕುಟುಂಬ ಹೈನುಗಾರಿಕೆಯನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ ಏಕಾಏಕಿ ನಿಂತ ಜಾಗದಲ್ಲೇ ನಾಲ್ಕು ಜಾನುವಾರುಗಳು ಸಾವನ್ನಪ್ಪಿರೋದ್ರಿಂದ, ಸೀತಮ್ಮ ಕುಟುಂಬ ಭವಿಷ್ಯದ ಚಿಂತೆಯಿಂದ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

    ಹಸುಗಳು ಮೇವಿಗೆ ಹೋದ ಪ್ರದೇಶ ಸಾರ್ವಜನಿಕರು ಹಾಗೂ ಮಕ್ಕಳು ಓಡಾಡುವ ಜಾಗವಾಗಿದೆ. ಹೀಗಾಗಿ ಸ್ಥಳೀಯರು ಈ ಅನಾಹುತಕ್ಕೆ ಅಧಿಕಾರಿಗಳ ನಿರ್ಲಕ್ಯವೇ ಕಾರಣ ಎಂದು ಮೆಸ್ಕಾಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ವಿದ್ಯುತ್ ಕಂಬ ದುರಸ್ತಿ ವೇಳೆ ಶಾಕ್: ಮೆಸ್ಕಾಂ ಕಾರ್ಮಿಕ ಸಾವು

    ವಿದ್ಯುತ್ ಕಂಬ ದುರಸ್ತಿ ವೇಳೆ ಶಾಕ್: ಮೆಸ್ಕಾಂ ಕಾರ್ಮಿಕ ಸಾವು

    ಮಂಗಳೂರು: ಕಂಬ ಹತ್ತಿ ದುರಸ್ತಿ ಮಾಡುವ ವೇಳೆಯಲ್ಲಿ ವಿದ್ಯುತ್ ತಂತಿ ತಗುಲಿ ಮೆಸ್ಕಾಂ ಕಾರ್ಮಿಕ ಮೃತಪಟ್ಟಿರುವ ಘಟನೆ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಸೊರಕೆ ಪರಂಟೋಲು ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.

    ಶ್ರೀಶೈಲ್ (28) ಸಾವನ್ನಪ್ಪಿದ ಕಾರ್ಮಿಕ. ಮೂಲತಃ ಬಾಗಲಕೋಟೆ ಜಿಲ್ಲೆಯ ನಿವಾಸಿಯಾದ ಶ್ರೀಶೈಲ್ ಕಳೆದ ಒಂದು ವರ್ಷಗಳಿಂದ ಪುತ್ತೂರು ಮೆಸ್ಕಾಂ ವಿಭಾಗದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

    ವಿದ್ಯುತ್ ಕಂಬದ ಮೇಲೆ ಹತ್ತಿ ದುರಸ್ತಿ ಮಾಡುವ ವೇಳೆಯಲ್ಲಿ ಪಕ್ಕದಲ್ಲಿ ಹಾದು-ಹೋಗಿದ್ದ ಎಚ್‍ಟಿ ಲೈನ್ ತಂತಿ ಸ್ಪರ್ಶಿಸಿ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಳಿಸದೇ ದುರಸ್ಥಿ ಕಾರ್ಯ ಮಾಡಿದ್ದರಿಂದಲೇ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಹೇಳುತ್ತಾರೆ.

    ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಹಾಗೂ ಪುತ್ತೂರು ಗ್ರಾಮಾಂತರ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.