Tag: Merchants

  • ಚಿಕ್ಕಬಳ್ಳಾಪುರ ನಗರದಲ್ಲಿ ದಿನಸಿ ವರ್ತಕರಿಂದ ಸೆಲ್ಫ್ ಲಾಕ್‍ಡೌನ್

    ಚಿಕ್ಕಬಳ್ಳಾಪುರ ನಗರದಲ್ಲಿ ದಿನಸಿ ವರ್ತಕರಿಂದ ಸೆಲ್ಫ್ ಲಾಕ್‍ಡೌನ್

    ಚಿಕ್ಕಬಳ್ಳಾಪುರ: ಕೊರೊನಾ ಆತಂಕದಿಂದ ನಗರದ ದಿನಸಿ ವರ್ತಕರು ಸ್ವಯಂ ಲಾಕ್‍ಡೌನ್‍ಗೆ ಮೊರೆ ಹೋಗಿದ್ದಾರೆ.

    ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಇಂದಿನಿಂದ(ಜುಲೈ 1) ಪ್ರತಿದಿನ ಎರಡು ಗಂಟೆಗೆ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ವ್ಯಾಪಾರ ವಹಿವಾಟನ್ನ ಬಂದ್ ಮಾಡಿ ದಿನಸಿ ವರ್ತಕರೇ ಸೆಲ್ಫ್ ಲಾಕ್‍ಡೌನ್ ಮಾಡುತ್ತಿದ್ದಾರೆ. ಅದರಲ್ಲೂ ಚಿಕ್ಕಬಳ್ಳಾಪುರ ನಗರದಲ್ಲೇ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ವರ್ತಕರಿಗೂ ಆತಂಕ ಶುರುವಾಗಿದೆ.

    ಖಾಸಗಿ ಫೈನಾನ್ಸ್ ಸಂಸ್ಥೆಯ ಪಿಗ್ಮಿ ಕಲೆಕ್ಟರ್ ಗೂ ಸೋಂಕು ದೃಢವಾಗಿದೆ. ತದನಂತರ ಅದೇ ಬ್ಯಾಂಕಿನವರಾಗಿದ್ದ ಜ್ಯುವೆಲ್ಲರಿ ಶಾಪ್ ನವರಿಗೂ ಹಾಗೂ ಹಾಲಿನ ಮಳಿಗೆ ಕಾಂಡಿಮೆಂಟ್ಸ್ ನವರಿಗೂ ಸೋಂಕು ದೃಢವಾಗಿತ್ತು. ವ್ಯಾಪಾರಸ್ಥರಿಗೂ ಸೋಂಕು ಹರಡುವ ಸಾಧ್ಯತೆ ದಟ್ಟವಾಗಿರೋದ್ರಿಂದ ದಿನಸಿ ವರ್ತಕರ ಸಂಘದಿಂದ ಈ ತೀರ್ಮಾನ ಮಾಡಲಾಗಿದೆ. ಹೀಗಾಗಿ ಪ್ರತಿದಿನ 2 ಗಂಟೆಗೆ ವ್ಯಾಪಾರ ವಹಿವಾಟು ಬಂದ್ ಆಗಲಿದೆ.

    ಇನ್ನೂ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವರ್ತಕರೊಬ್ಬರು, ಬರೀ 2 ಗಂಟೆ ಅಲ್ಲ 15-20 ದಿನಗಳೇ ಅಂಗಡಿ ಬಂದ್ ಮಾಡಲು ತೀರ್ಮಾನಿಸಿದ್ದೀನಿ ಎಂದರು. ಕಾರಣ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕ ಜಾಸ್ತಿ ಆಗುತ್ತಿದೆ. ಎಷ್ಟೇ ಮುಂಜಾಗ್ರತೆ ಕೈಗೊಂಡರೂ ಕೊರೊನಾ ಯಾವುದೇ ರೂಪದಲ್ಲಿ ಬಂದು ವಕ್ಕರಿಸಿಕೊಳ್ಳೋ ಸಾಧ್ಯತೆ ಎಂದು ಆತಂಕ ವ್ಯಕ್ತಪಡಿಸಿದರು.

  • ಪ್ರವಾಸಿಗರೇ ಇಲ್ಲದ ದಕ್ಷಿಣ ಕಾಶ್ಮೀರದ ಕೊಡಗು

    ಪ್ರವಾಸಿಗರೇ ಇಲ್ಲದ ದಕ್ಷಿಣ ಕಾಶ್ಮೀರದ ಕೊಡಗು

    ಮಡಿಕೇರಿ: ಜೂನ್, ಜುಲೈ ತಿಂಗಳು ಅಂದರೆ ಕರ್ನಾಟಕದ ಕಾಶ್ಮೀರ ತುಂಬಿ ತುಳುಕುತಿತ್ತು. ಆದರೆ ಕೊರೊನಾ ಮಹಾಮಾರಿಯ ಭಯ ವೀಕ್ ಎಂಡ್ ನಲ್ಲೂ ಮಂಜಿನನಗರಿಯಲ್ಲಿ ಎಲ್ಲವೂ ಖಾಲಿ ಖಾಲಿ ಎನ್ನುವಂತೆ ಮಾಡಿದೆ.

    ಲಾಕ್‍ಡೌನ್ ಸಡಿಲಿಕೆ ಮಾಡಿದ್ರೆ ಸಾಕು ಎನ್ನುತ್ತಿದ್ದ ವ್ಯಾಪಾರಿಗಳು ಗ್ರಾಹಕರಿಲ್ಲದೆ ಪರದಾಡುತ್ತಿದ್ದಾರೆ. ಅಪಾರ ಸಂಪತ್ತಿನಿಂದಲೇ ದೇಶ, ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಕೊಡಗು ಪ್ರವಾಸಿ ತಾಣಗಳ ಜಿಲ್ಲೆಯೆಂದೇ ಖ್ಯಾತಿ. ಇಲ್ಲಿನ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಿರುವುದೇ ಪ್ರವಾಸೋದ್ಯಮ. ಇದನ್ನು ನಂಬಿಕೊಂಡೇ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ ಕೊರೊನಾ ಮಹಾಮಾರಿಯಿಂದ ದೇಶವೇ ಲಾಕ್ ಡೌನ್ ಆದ ಬಳಿಕ ಎಲ್ಲವೂ ಸ್ಥಗಿತವಾಗಿ ಹೋಗಿತ್ತು.

    ಈಗ ಲಾಕ್‍ಡೌನ್ ಬಹುತೇಕ ಸಡಿಲಿಕೆ ಆಗಿದ್ದರೂ, ಮಂಜಿನ ನಗರಿ ಮಾತ್ರ ಖಾಲಿ ಖಾಲಿ ಹೊಡೆಯುತ್ತಿದೆ. ಜೂನ್, ಜುಲೈ ತಿಂಗಳೆಂದರೆ ಕೊಡಗು ಜಿಲ್ಲೆ ಪ್ರವಾಸಿಗರಿಂದ ತುಂಬಿ ತುಳುಕುತಿತ್ತು. ಅದರಲ್ಲೂ ವೀಕ್‍ಎಂಡ್ ಬಂತೆಂದರೆ ಹೋಮ್ ಸ್ಟೇ, ರೆಸಾರ್ಟ್ ಮತ್ತು ಹೊಟೇಲ್‍ಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದವು. ಆದರೆ ಇದೀಗ ಲಾಕ್‍ಡೌನ್ ಸಡಿಲಿಕೆ ಮಾಡಿದ್ದರೂ ಪ್ರವಾಸಿಗರು ಕೊಡಗಿನತ್ತ ಮುಖ ಮಾಡಿಲ್ಲ. ರೆಸಾರ್ಟ್, ಹೋಮ್ ಸ್ಟೇ ಮತ್ತು ಹೊಟೇಲ್ ಗಳ ಮಾಲೀಕರು ಸರ್ಕಾರದ ಎಲ್ಲ ಮಾರ್ಗಸೂಚಿಗಳನ್ನು ಪಾಲನೆ ಮಾಡಿಕೊಂಡು ಪ್ರವಾಸಿಗರಿಗಾಗಿ ಕಾಯುತ್ತಿದ್ದಾರೆ. ಆದರೆ ಪ್ರವಾಸಿಗರು ಕೊಡಗಿನತ್ತ ಮುಖ ಮಾಡುವುದಿರಲಿ ಕನಿಷ್ಠ ಪಕ್ಷ ಹೊಮ್ ಸ್ಟೇ, ರೆಸಾರ್ಟ್‍ಗಳಿಗೆ ಕರೆ ಮಾಡಿ ವಿಚಾರಣೆ ಕೂಡ ಮಾಡುತ್ತಿಲ್ಲ ಎನ್ನುವುದು ಕೊಡಗಿನ ಹೋಮ್ ಸ್ಟೇ, ರೆಸಾರ್ಟ್‍ಗಳ ಮಾಲೀಕರನ್ನು ಆತಂಕಕ್ಕೆ ದೂಡಿದೆ.

    ಪ್ರವಾಸೋದ್ಯಮದಿಂದ ಕೇವಲ ಹೋಮ್ ಸ್ಟೇ, ಹೊಟೇಲ್ ಮತ್ತು ರೆಸಾರ್ಟ್‍ಗಳು ಅಷ್ಟೇ ಅಲ್ಲ ಸ್ಪೈಸಿಸ್ ಅಂಗಡಿಗಳು, ಕೊಡಗಿನ ವೈನ್ ಎಲ್ಲವೂ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದವು. ಆದರೆ ಪ್ರವಾಸಿಗರಿಲ್ಲದೇ ಇರುವುದರಿಂದ ಇದೀಗ ಈ ಸ್ಪೈಸೀಸ್ ಅಂಗಡಿಗಳು ಗ್ರಾಹಕರಿಲ್ಲದೆ ಬಣಗುಡುತ್ತಿವೆ. ಅಷ್ಟೇ ಅಲ್ಲ ಮಂಜಿನ ನಗರಿ ಮಡಿಕೇರಿಯಲ್ಲೇ ವಾರದ ಕೊನೆ ದಿನಗಳಲ್ಲೂ ಜನರು, ವಾಹನಗಳ ಓಡಾಟವಿಲ್ಲದೆ ರಸ್ತೆಗಳು ಖಾಲಿ ಹೊಡೆಯುತ್ತಿವೆ. ಲಾಕ್‍ಡೌನ್ ಸಡಿಲವಾದರೆ ಸಾಕು ಪ್ರವಾಸಿಗರು ಕೊಡಗಿನತ್ತ ಮುಖ ಮಾಡುತ್ತಾರೆ. ಎಂದಿನಂತೆ ವ್ಯಾಪಾರ ವಹಿವಾಟು ನಡೆಸಬಹುದು ಎಂದುಕೊಂಡಿದ್ದ ಕೊಡಗಿನ ವ್ಯಾಪಾರಸ್ಥರಿಗೆ ತೀವ್ರ ನಿರಾಸೆ ಮೂಡಿಸಿದೆ.

    ಮತ್ತೊಂದೆಡೆ ಇಂದಿಗೂ ಕೊಡಗಿನ ಹಲವು ಪ್ರವಾಸಿತಾಣಗಳು ಬಂದ್ ಆಗಿದ್ದು, ನೋಡುಗರಿಗೆ ಮುಕ್ತವಾಗಿಲ್ಲ. ಹೀಗಾಗಿ ಪ್ರವಾಸೋದ್ಯಮವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಸಾವಿರಾರು ಕುಟುಂಬಗಳು ಕಂಗಾಲಾಗುವಂತೆ ಮಾಡಿದೆ ಎನ್ನುವುದು ವ್ಯಾಪಾರಸ್ಥರ ಅಳಲು.

  • ಮಾರುಕಟ್ಟೆಯಲ್ಲಿ ಜನವೋ ಜನ- ನಿಯಮ ಗಾಳಿಗೆ ತೂರಿದ ಗ್ರಾಹಕರು, ವ್ಯಾಪಾರಿಗಳು

    ಮಾರುಕಟ್ಟೆಯಲ್ಲಿ ಜನವೋ ಜನ- ನಿಯಮ ಗಾಳಿಗೆ ತೂರಿದ ಗ್ರಾಹಕರು, ವ್ಯಾಪಾರಿಗಳು

    ಉಡುಪಿ: ನಗರದ ಆದಿ ಉಡುಪಿ ತರಕಾರಿ ಮಾರುಕಟ್ಟೆಯಲ್ಲಿ ಸರ್ಕಾರದ ನಿಯಮವನ್ನು ಗಾಳಿಗೆ ತೂರಲಾಗಿದೆ. ಮೂರು ಗಂಟೆಗಳ ಕಾಲ ಜನ ಮುಗಿಬಿದ್ದು ತರಕಾರಿ ಖರೀದಿ ಮಾಡಿದ್ದಾರೆ.

    ಕೊರೊನಾ ವೈರಸ್ ಹರಡುವ ಭೀತಿ ಇರುವುದರಿಂದ ಜನ ಒಂದೆಡೆ ಸೇರಬಾರದು ಎಂದು ಸರ್ಕಾರ ನಿಯಮಗಳನ್ನು ರೂಪಿಸಿದೆ. ಮಾರುಕಟ್ಟೆಯನ್ನು ತೆರೆಯಲೇ ಬಾರದು ಎಂದು ಉಡುಪಿ ಜಿಲ್ಲಾಡಳಿತ ಖಡಕ್ ಆದೇಶವನ್ನು ಕೊಟ್ಟಿತ್ತು. ಆದರೂ ಜಿಲ್ಲಾಡಳಿತ ಆದೇಶಕ್ಕೆ ಉಡುಪಿ ಜನ ಮತ್ತು ವ್ಯಾಪಾರಿಗಳು ಕ್ಯಾರೇ ಎನ್ನಲ್ಲಿಲ್ಲ. ಬೆಳಗ್ಗೆ ಸುಮಾರು 8 ರಿಂದ 11 ಗಂಟೆಯ ತನಕ ಜನ ಮುಗಿಬಿದ್ದು ತರಕಾರಿಗಳನ್ನು ಖರೀದಿ ಮಾಡಿದರು.

    ಬುಧವಾರ ಸಂತೆಯಲ್ಲಿ ಚಿಕ್ಕಮಗಳೂರು, ಹಾಸನ, ಶಿವಮೊಗ್ಗದ ವ್ಯಾಪಾರಿಗಳು ಅಲ್ಲಿಂದ ತರಕಾರಿಗಳನ್ನು ತಂದು ಉಡುಪಿಯಲ್ಲಿ ಹೋಲ್ಸೇಲ್ ದರಕ್ಕೆ ಮಾರುತ್ತಾರೆ. ಹಾಗಾಗಿ ಕಡಿಮೆ ದರದ ತರಕಾರಿಯನ್ನು ಖರೀದಿಸಲು ಹೊರಟ ಜನ ಸಾಮಾಜಿಕ ಅಂತರವನ್ನು ಕಾಪಾಡಲಿಲ್ಲ. ಪೊಲೀಸರು ಆರಂಭದಲ್ಲಿ ವ್ಯಾಪಾರಕ್ಕೆ ಅವಕಾಶ ಕೊಟ್ಟರೂ ನಂತರ ಜನ ಇದನ್ನು ದುರುಪಯೋಗ ಪಡಿಸಲು ಮುಂದಾಗಿದ್ದರು. ಈ ಹಂತದಲ್ಲಿ ಪೊಲೀಸರು ಲಾಠಿ ಬೀಸಿ ವ್ಯಾಪಾರಿಗಳನ್ನು ಮತ್ತು ಗ್ರಾಹಕರನ್ನು ಚದುರಿಸಿದರು.

  • ಹೆಚ್ಚಾಯ್ತು ಮೀನು, ಕುರಿ ಮಾಂಸಕ್ಕೆ ಡಿಮ್ಯಾಂಡ್ – ಭಾರೀ ಏರಿತು ಮಟನ್ ಬೆಲೆ

    ಹೆಚ್ಚಾಯ್ತು ಮೀನು, ಕುರಿ ಮಾಂಸಕ್ಕೆ ಡಿಮ್ಯಾಂಡ್ – ಭಾರೀ ಏರಿತು ಮಟನ್ ಬೆಲೆ

    ಮೈಸೂರು: ಹಕ್ಕಿ ಜ್ವರದ ಎಫೆಕ್ಟ್ ನಿಂದ ಮೈಸೂರು ನಗರದಾದ್ಯಂತ ಕೋಳಿಗಳ ಮಾರಾಟ ಬಂದ್ ಆಗಿದೆ. ಹೀಗಾಗಿ ಕುರಿ, ಮೇಕೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ.

    ಹಕ್ಕಿ ಜ್ವರದ ಹಿನ್ನೆಲೆ ಚಿಕನ್ ಮಾರಾಟ ಸ್ಥಗಿತಗೊಂಡಿರು ಪರಿಣಾಮ ಮೀನು, ಕುರಿ, ಮೇಕೆ ಮಾಂಸದ ಮಾರಾಟದಲ್ಲಿ ಹೆಚ್ಚಳ ಕಂಡಿದೆ. ಅತ್ತ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಇತ್ತ ಕುರಿ, ಮೇಕೆ ಮಾಂಸದ ಬೆಲೆಯಲ್ಲಿ ಏರಿಕೆಯಾಗಿದ್ದು, ಮಂಗಳವಾರ ಒಂದು ಕೆ.ಜಿಗೆ 550 ರೂಪಾಯಿ ಇದ್ದ ದರ ಇಂದು 600 ರೂಪಾಯಿಗೆ ಏರಿಕೆಯಾಗಿದೆ. ಮೀನಿನ ದರ ಮಾತ್ರ ಯಥಾಸ್ಥಿತಿಯಲ್ಲಿ ಇದೆ. ಕೋಳಿ ಮಾರಾಟ ನಿಷೇಧ ಹೀಗೆ ಮುಂದುವರಿದರೆ ಮಟನ್ ಬೆಲೆ ಕೆಜಿಗೆ 800 ರೂಪಾಯಿ ಆಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

    ಮೈಸೂರಿನ ಕುಂಬಾರಕೊಪ್ಪಲು ಮನೆಯೊಂದರಲ್ಲಿ ಇತ್ತೀಚೆಗೆ ಸತ್ತಿದ್ದ ಕೋಳಿ ಹಾಗೂ ಸ್ಮಶಾನದಲ್ಲಿ ಮೃತಪಟ್ಟಿದ್ದ ಪಕ್ಷಿಯ ಮೃತದೇಹದ ಮಾದರಿಗಳನ್ನು ಭೂಪಾಲ್‍ನ ನ್ಯಾಷನಲ್ ಇನ್ಸ್ ಟಿಟ್ಯೂಟ್ ಹೈಸೆಕ್ಯೂರಿಟಿ ಅನಿಮಲ್ ಡೀಸಿಸ್‍ಗೆ ಕಳುಹಿಸಲಾಗಿತ್ತು. ಮೈಸೂರಿನಿಂದ ಕಳುಹಿಸಿದ್ದ ಏಳು ಮಾದರಿಗಳಲ್ಲಿ ಎರಡು ಮಾದರಿಗಳು ಪಾಸಿಟಿವ್ ಬಂದಿದೆ.

    ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ತಕ್ಷಣವೇ ಸಾಕು ಪಕ್ಷಿಗಳ ಸರ್ವೆ ನಡೆಸಿ, ಮೂರ್ನಾಲ್ಕು ದಿನಗಳಲ್ಲಿ 6,436 ಪಕ್ಷಿಗಳನ್ನು ಕೊಲ್ಲಲು ರ್ನಿಧರಿಸಿದೆ. ಜೊತೆಗೆ ಹಕ್ಕಿಜ್ವರ ಪತ್ತೆಯಾದ ಮೈಸೂರಿನ ಕುಂಬಾರಕೊಪ್ಪಲಿನ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ನಡೆಸಲಾಗಿದೆ. ಈವರೆಗೆ ಒಟ್ಟು 6,436 ಪಕ್ಷಿಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಹೀಗಾಗಿ ಕುಂಬಾರಕೊಪ್ಪಲಿನ 10 ಕಿ.ಮೀ. ವ್ಯಾಪ್ತಿಯನ್ನು ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಲಾಗಿದೆ.

    ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಒಟ್ಟು 17,820 ಮನೆಗಳಿವೆ. ಅದರಲ್ಲಿ 144 ಮನೆಗಳಲ್ಲಿ ಪಕ್ಷಿಗಳಿವೆ. ಈ ಪೈಕಿ ನೈಸರ್ಗಿಕ ಪಕ್ಷಿಗಳು 1,252, ಔದ್ಯಮಿಕ ಪಕ್ಷಿಗಳು 5,100 ಹಾಗೂ ಸಾಕು ಪಕ್ಷಿಗಳು 254 ಎಂದು ಗುರುತಿಸಲಾಗಿದೆ. ಇದರಲ್ಲಿ ಕ್ವೈಲ್ಸ್ 12 ಹಾಗೂ ಟರ್ಕಿ 18 ಸೇರಿ ಒಟ್ಟು 6,436 ಪಕ್ಷಿಗಳಿದ್ದು, ಎಲ್ಲವನ್ನೂ ನಾಶಪಡಿಸಲು ನಿರ್ಧರಿಸಲಾಗಿದೆ.

  • ಜಿಲ್ಲಾಧಿಕಾರಿಗಳ ಆದೇಶಕ್ಕೆ ಕಿಮ್ಮತ್ತಿಲ್ಲ- ಮಾಂಸದಂಗಡಿ ತೆರೆದ ವ್ಯಾಪಾರಸ್ಥರು

    ಜಿಲ್ಲಾಧಿಕಾರಿಗಳ ಆದೇಶಕ್ಕೆ ಕಿಮ್ಮತ್ತಿಲ್ಲ- ಮಾಂಸದಂಗಡಿ ತೆರೆದ ವ್ಯಾಪಾರಸ್ಥರು

    ನೆಲಮಂಗಲ: ಕೊರೊನ ವೈರಸ್ ಭೀತಿಯಿಂದಾಗಿ ರಾಜ್ಯದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ ಹಲವೆಡೆ ಚಿಕನ್ ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಕೋಳಿಗಳನ್ನು ಜೀವಂತ ಸಮಾಧಿ ಮಾಡುತ್ತಿದ್ದಾರೆ. ಆದರೆ ನೆಲಮಂಗಲದಲ್ಲಿ ವ್ಯಾಪಾರಿಗಳು ಇದಾವುದರ ಅರಿವಿಲ್ಲದೆ, ವ್ಯಾಪಾರ ಮುಂದುವರಿಸಿದ್ದಾರೆ.

    ಸರ್ಕಾರ ಒಂದು ವಾರಗಳ ವರೆಗೆ ಹೆಚ್ಚು ಜನಸಂದಣಿ ಇರುವ ಅಂಗಡಿ ಮುಂಗಟ್ಟುಗಳು, ಚಿತ್ರಮಂದಿರಗಳು, ಮಾಲ್‍ಗಳು, ಮಾಂಸದ ಅಂಗಡಿಗಳು ಜಾತ್ರೆ, ಶಾಲಾ ಕಾಲೇಜುಗಳು, ಸೇರಿದಂತೆ ಇನ್ನಿತರ ಕಡೆಗಳಲ್ಲಿ ಜನ ಸೇರದಂತೆ ತಿಳಿಸಿದೆ. ಆದರೆ ನೆಲಮಂಗಲ ನಗರಸಭೆ ವ್ಯಾಪ್ತಿಯ ಹಲವಾರು ಮಾಂಸದ ಅಂಗಡಿಗಳು ಹಾಗೂ ಚಿಕನ್ ಸೆಂಟರ್ ಗಳು ಎಗ್ಗಿಲ್ಲದೆ ವ್ಯಾಪಾರ ಮಾಡುತ್ತಿದ್ದು, ಈ ಮೂಲಕ ಸರ್ಕಾರದ ಆದೇಶವನ್ನು ಗಾಳಿಗೆ ತೂರಿವೆ. ಜಿಲ್ಲಾಧಿಕಾರಿ ಈ ಕುರಿತು ಸೂಚನೆ ನೀಡಿದ್ದರೂ ಪಾಲನೆಮಾಡಿಲ್ಲ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯವರ ಆದೇಶದಂತೆ ನೆಲಮಂಗಲ ನಗರಸಭೆ ಅಧಿಕಾರಿಗಳು ಸಹ ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದರು. ನೋಟಿಸ್‍ಗೂ ಬಗ್ಗದೆ ವ್ಯಾಪಾರಸ್ಥರು ಅಂಗಡಿಗಳನ್ನು ತೆರೆದಿದ್ದಾರೆ.

  • ಪಾತಾಳಕ್ಕೆ ಕುಸಿದ ಟೊಮೆಟೋ ಬೆಲೆ – ಕ್ವಿಂಟಾಲ್ ಗಟ್ಟಲೆ ಬೆಳೆ ತಿಪ್ಪೆಗೆ ಸುರಿದ ರೈತರು

    ಪಾತಾಳಕ್ಕೆ ಕುಸಿದ ಟೊಮೆಟೋ ಬೆಲೆ – ಕ್ವಿಂಟಾಲ್ ಗಟ್ಟಲೆ ಬೆಳೆ ತಿಪ್ಪೆಗೆ ಸುರಿದ ರೈತರು

    ರಾಯಚೂರು: ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಟೊಮೆಟೋ ಬೆಳೆಗೆ ಸೂಕ್ತ ಬೆಲೆ ಸಿಗದೆ ರೋಸಿಹೋದ ರೈತರು ನಗರದ ಮಾರುಕಟ್ಟೆ ಬಳಿ ತಿಪ್ಪೆಗೆ ಸುರಿದು ಹೋಗಿರುವ ಘಟನೆ ನಡೆದಿದೆ. ಬೆಲೆ ಕುಸಿತ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ತಂದ ಟೊಮೆಟೋಗಳನ್ನು ಬೀದಿಗೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದ ಹತ್ತಿ ಮಾರುಕಟ್ಟೆ ಪ್ರಾಂಗಣದಲ್ಲಿ ಬೆಳಗ್ಗೆ ತರಕಾರಿ ಖರೀದಿ ನಡೆಯುತ್ತದೆ. ಕೆಜಿ ಟೊಮೆಟೋಗೆ 2ರೂ. ನಂತೆ ವರ್ತಕರು ದರ ನಿಗದಿ ಮಾಡಿದ್ದಾರೆ. ಆದರೆ ಕನಿಷ್ಠ 3 ರೂಪಾಯಿ ಕೊಡುವಂತೆ ಮನವಿ ಮಾಡಿದರೂ ವರ್ತಕರು ಮಣೆ ಹಾಕಿಲ್ಲ. ಇದರಿಂದ ಸಿಟ್ಟಿಗೆದ್ದ ರೈತರು ಮಾರಾಟ ಮಾಡದೇ ತಿಪ್ಪೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೆಲ ರೈತರು ತಿಪ್ಪೆಗೆ ಸುರಿದರೆ ಇನ್ನೂ ಕೆಲ ರೈತರು ಅಕ್ಕಪಕ್ಕದ ಜನರಿಗೆ, ಕೂಲಿಕಾರ್ಮಿಕರಿಗೆ, ಹೋಟೆಲ್ ಮಾಲೀಕರಿಗೆ ಉಚಿತವಾಗಿ ಟೊಮೆಟೋ ಹಂಚಿದ್ದಾರೆ. ಬಳಿಕ ಸುಮಾರು ಮೂರ್ನಾಲ್ಕು ಕ್ವಿಂಟಲ್ ಉಳಿದಿದ್ದು ಮಾರುಕಟ್ಟೆ ಎದುರೇ ರಸ್ತೆಗೆ ಎಸೆದಿದ್ದಾರೆ. ಒಂದು ಎಕರೆ ಟೊಮೆಟೋ ಬೆಳೆಯಲು ರೈತರು ಕನಿಷ್ಠ 30 ರಿಂದ 40 ಸಾವಿರ ರೂ. ಖರ್ಚು ಮಾಡಿದ್ದಾರೆ.

    ಹಗಲಿರುಳೆನ್ನದೆ ನೀರು ಕಟ್ಟಿದ್ದಾರೆ. ಮುದುರು, ಬೂದುರೋಗದ ಕಾಟವಿದ್ದು ಕಾಲಕಾಲಕ್ಕೆ ರಾಸಾಯನಿಕ ಸಿಂಪಡಿಸಬೇಕಿದೆ. ಇಲ್ಲವಾದರೆ ಬೆಳೆಯೆ ಕೈಗೆಟುಕುವುದಿಲ್ಲ. ಇಷ್ಟೆಲ್ಲಾ ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆಯೇ ಇಲ್ಲವಾಗಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ. ತರಕಾರಿ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಟೊಮೆಟೋ 10 ರಿಂದ 15 ರೂಪಾಯಿ ಕೆ.ಜಿ ಇದೆ. ಮಾರ್ಚ್ ತಿಂಗಳವರೆಗೂ ಟೊಮೆಟೋ ಬೆಳೆಯ ಸ್ಥಳೀಯ ಸೀಜನ್ ಇದ್ದು ಸದ್ಯಕ್ಕೆ ಬೆಲೆ ಏರಿಕೆ ಸಾಧ್ಯತೆಗಳಿಲ್ಲ.

  • ಮೊಬೈಲ್ ಆ್ಯಪ್ ಮೂಲಕ 7ನೇ ಆರ್ಥಿಕ ಗಣತಿ

    ಮೊಬೈಲ್ ಆ್ಯಪ್ ಮೂಲಕ 7ನೇ ಆರ್ಥಿಕ ಗಣತಿ

    ಬಳ್ಳಾರಿ: ಸರ್ಕಾರದ ಆದೇಶದ ಮೇರೆಗೆ 7ನೇ ಆರ್ಥಿಕ ಗಣತಿ ಡಿ. 24ರಿಂದ ಪ್ರಾರಂಭವಾಗಿದ್ದು, ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗಣತಿಯ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಯಿತು.

    ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್, ಗಣತಿಯಲ್ಲಿ ಮನೆ ಹಾಗೂ ವಾಣಿಜ್ಯ ಕಟ್ಟಡ, ಸಂಕೀರ್ಣಗಳಲ್ಲಿ ನಡೆಯುತ್ತಿರುವ ವ್ಯಾಪಾರ, ಉದ್ಯಮದ ಬಗ್ಗೆ ಮಾಹಿತಿಯನ್ನು ಗಣತಿದಾರರು ಕೇಳಲಿದ್ದಾರೆ ಎಂದು ತಿಳಿಸಿದರು. ಸದರಿ ಗಣತಿದಾರರಿಗೆ ಎಲ್ಲಾ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದರು.

    ಮನೆಗಳಲ್ಲಿ ನಡೆಯುವ ಹೈನುಗಾರಿಕೆ, ಹೊಲಿಗೆ, ಅಂಗಡಿ ಇತರೆ ಸಣ್ಣಪುಟ್ಟ ವ್ಯಾಪಾರ ಗಣತಿಯೊಂದಿಗೆ ವಾಣಿಜ್ಯ ಕಟ್ಟಡಗಳಲ್ಲಿನ ಉದ್ಯಮಗಳ ಬಗ್ಗೆ ಮಾಹಿತಿ ಕಲೆಹಾಕಲಿದ್ದು, ಸದರಿ ಮಾಹಿತಿ ಆಧರಿಸಿ ಮುಂದಿನ ದಿನಗಳಲ್ಲಿ ಸಂಬಂಧಿಸಿದ ಇಲಾಖೆಗಳ ಮೂಲಕ ನಿರ್ಧಿಷ್ಟ ಉದ್ಯಮಗಳಿಗೆ ನೀಡಬೇಕಾದ ಸೌಲಭ್ಯ, ಸಹಕಾರಗಳ ಬಗ್ಗೆ ಯೋಜನೆ ರೂಪಿಸಲು ಸಹಕಾರಿಯಾಗಲಿದೆ ಎಂದರು.

    ಸಾರ್ವಜನಿಕರು ಉದ್ಯಮಗಳ ಮಾಹಿತಿಯನ್ನು ನಿಖರವಾಗಿ ನೀಡಬೇಕು. ಸದರಿ ಗಣತಿಯನ್ನು ಮೊಬೈಲ್ ಆ್ಯಪ್ ಮೂಲಕ ನಡೆಸಲಾಗುವುದು ಹಾಗೂ ಎಲ್ಲಾ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದರು. ಹೀಗಾಗಿ ಯಾರು ಆತಂಕ ಪಡದೆ ಸರಿಯಾದ ಮಾಹಿತಿ ನೀಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.

  • 10 ಲಕ್ಷ ರೂ. ಬೆಲೆಬಾಳುವ 281 ಪಿಒಪಿ ಗಣೇಶನ ಮೂರ್ತಿ ಜಪ್ತಿ

    10 ಲಕ್ಷ ರೂ. ಬೆಲೆಬಾಳುವ 281 ಪಿಒಪಿ ಗಣೇಶನ ಮೂರ್ತಿ ಜಪ್ತಿ

    ಬೆಂಗಳೂರು: ಬಿಬಿಎಂಪಿ ಆರೋಗ್ಯಾಧಿಕಾರಿಗಳು ಪಿಒಪಿ ಗಣೇಶ ಮಾರಾಟ ಮಳಿಗೆಗಳ ಮೇಲೆ ಇಂದು ದಾಳಿ ಮಾಡಿದ್ದಾರೆ.

    ಇಂದು ದಕ್ಷಿಣ ವಲಯದ ಆರೋಗ್ಯಾಧಿಕಾರಿಗಳಿಂದ ಪಿಒಪಿ ಗಣೇಶ ಮೂರ್ತಿಗಳ ಮುಟ್ಟುಗೋಲು ಕಾರ್ಯಾಚರಣೆ ಮಾಡಿದರು. ನಗರದ ಮಿನರ್ವ ಸರ್ಕಲ್ ನಲ್ಲಿರೋ ಮಳಿಗೆಗಳು ಮತ್ತು ಲಾಲ್ ಬಾಗ್ ಪಶ್ಚಿಮ ದ್ವಾರದ ಆರ್ ವಿ ರಸ್ತೆಯ ಮಾವಳ್ಳಿ ಸುತ್ತ ಮುತ್ತ ಪಿಒಪಿ ಮೂರ್ತಿಗಳ ತಯಾರಿಕ ಮತ್ತು ಮಾರಾಟ ಕೇಂದ್ರಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದರು.

    ಈ ವೇಳೆ 10 ಲಕ್ಷ ರೂ. ಬೆಲೆಬಾಳುವ 281 ಗಣೇಶನ ಮೂರ್ತಿಗಳನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಅಲ್ಲದೆ ಪ್ಯಾಸ್ಟರ್ ಪ್ಯಾರಿಸ್ ಗಣೇಶ ಪರಿಸರಕ್ಕೆ ಹಾನಿ ಹೀಗಾಗಿ 2016 ರಲ್ಲೇ ಗಣೇಶ ಮೂರ್ತಿ ಮಾರಾಟಕ್ಕೆ ನಿಷೇಧ ಹೇರಿರೊ ವಿಚಾರವನ್ನು ಮನವರಿಕೆ ಮಾಡಿದರು.

    ಆದರೆ ವ್ಯಾಪಾರಿಗಳು ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆಯಲು ಒಪ್ಪಲಿಲ್ಲ. ಪರಿಣಾಮ ಸ್ಥಳದಲ್ಲಿ ಅಧಿಕಾರಿ ಮತ್ತು ವ್ಯಾಪಾರಿಗಳ ನಡುವೆ ಗಂಟೆಗಟ್ಟಲೆ ವಾಗ್ವಾದ ನಡೆಯಿತು. ಕಡೆಯದಾಗಿ ಪಾಲಿಕೆ ಅಧಿಕಾರಿಗಳು ಪೊಲೀಸರ ಸಹಾಯ ಪಡೆದು ಗಣೇಶ ಮೂರ್ತಿ ಸೀಜ್ ಗೆ ಮುಂದಾಗಿದ್ದು, ಹಂತ ಹಂತವಾಗಿ ಗಣೇಶ ಮೂರ್ತಿಗಳನ್ನ ವಶಕ್ಕೆ ಪಡೆಯುವುದಾಗಿ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

  • ಗೋವಾ ಸರ್ಕಾರದಿಂದ ಕರ್ನಾಟಕ ಮೀನು ವ್ಯಾಪಾರಿಗಳಿಗೆ ಬಿಗ್ ರಿಲೀಫ್

    ಗೋವಾ ಸರ್ಕಾರದಿಂದ ಕರ್ನಾಟಕ ಮೀನು ವ್ಯಾಪಾರಿಗಳಿಗೆ ಬಿಗ್ ರಿಲೀಫ್

    ಪಣಜಿ: ಕರ್ನಾಟಕದ ಮೀನು ವ್ಯಾಪಾರಿಗಳಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಆಹಾರ ಸುರಕ್ಷತಾ ನಿಯಮ ಪಾಲಿಸುವ ವ್ಯಾಪಾರಿಗಳಿಂದ ಮೀನು ಖರೀದಿಸಬಹುದು ಎಂದು ಹೇಳುವ ಮೂಲಕ ಗೋವಾ ಸರ್ಕಾರ ಹಿಂದಿನ ಆದೇಶವನ್ನು ಸಡಿಲಗೊಳಿಸಿದೆ.

    ಲೈಸನ್ಸ್ ಹೊಂದಿರುವ ಹಾಗೂ ಆಹಾರ ಸುರಕ್ಷತಾ ನಿಯಮ ಪಾಲಿಸುವ ಹೊರರಾಜ್ಯದ ವ್ಯಾಪಾರಿಗಳಿಂದ ಮೀನು ಖರೀದಿಸಬಹುದು ಎಂದು ಗೋವಾ ಸರ್ಕಾರ ತಿಳಿಸಿದೆ. ಈ ಮೂಲಕ ಹೊರರಾಜ್ಯಗಳಿಂದ ಮೀನು ತರಿಸಿಕೊಳ್ಳುವ ಅವಕಾಶ ಗೋವಾ ವ್ಯಾಪಾರಿಗಳಿಗೆ ಸಿಗಲಿದೆ.

    ತಾವು ಪೂರೈಸುವ ಮೀನು ಫಾರ್ಮಲಿನ್ ಅಂಶ ಹೊಂದಿಲ್ಲ ಎಂದು ಕರ್ನಾಟಕ ಮೀನು ರಫ್ತುಗಾರರು ಸ್ಪಷ್ಟನೆ ನೀಡಿದ್ದಾರೆ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಗೋವಾ ಸರ್ಕಾರವು, ಫಾರ್ಮಲಿನ್ ಪರೀಕ್ಷೆ ನಡೆಸಿ ಮೀನನ್ನು ತರಿಸಿಕೊಳ್ಳಲು ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ವರದಿಯಾಗಿದೆ.  ಇದನ್ನು ಓದಿ: 50ಕ್ಕೂ ಹೆಚ್ಚು ಮೀನಿನ ಲಾರಿಗೆ ಪೊಲೀಸರಿಂದ ತಡೆ

    ಏನಿದು ಪ್ರಕರಣ?:
    ಫಾರ್ಮಲಿನ್ ರಾಸಾಯಲಿಕ ಪತ್ತೆಯಾಗಿದ್ದರಿಂದ ಹೊರರಾಜ್ಯಗಳಿಂದ ಮೀನು ಆಮದನ್ನು ಗೋವಾ ಸರ್ಕಾರವು ಜುಲೈ ತಿಂಗಳಿನಿಂದ ನಿರ್ಬಂಧಿಸಿತ್ತು. ಅಷ್ಟೇ ಅಲ್ಲದೇ ಮಂಗಳವಾರ ಅಧಿಕೃತ ಆದೇಶವನ್ನು ಹೊರಡಿಸಿತ್ತು. ನಿರ್ಬಂಧದಿಂದಾಗಿ ಕರ್ನಾಟಕದ ಮೀನುಗಾರರಿಗೆ ಹಾಗೂ ವ್ಯಾಪಾರಿಗಳಿಗೆ ಬಿಸಿ ಮುಟ್ಟಿತ್ತು. ಇದರಿಂದಾಗಿ ಕರ್ನಾಟಕದ ಮೀನುಗಾರರನ್ನು ಗುರಿಯಾಗಿಸಿಕೊಂಡು ಮೀನು ಲಾರಿಗಳನ್ನು ಗೋವಾ-ಕಾರವಾರದ ಗಡಿಭಾಗದಲ್ಲಿ ತಡೆದು ನಿಲ್ಲಿಸಲಾಗಿತ್ತು. ಗೋವಾಕ್ಕೆ ಆಮದು ಆಗುತ್ತಿದ್ದ ಮೀನಿನ ಮೇಲೆ ಸಂಪೂರ್ಣ ನಿರ್ಬಂಧ ಹೊರಡಿಸಿದ್ದರಿಂದ ರಾಜ್ಯದ ಮೀನು ಬೆಳೆಗಾರರು ಭಾರೀ ನಷ್ಟ ಎದುರಿಸಿದ್ದರು. ಇದನ್ನು ಓದಿ: ಮೀನು ತಿನ್ನೋರಿಗೆ ಗುಡ್ ನ್ಯೂಸ್ – ಲ್ಯಾಬ್ ಟೆಸ್ಟ್ ನಲ್ಲಿ ಪಾಸಾದ ಸಾಗರ ರಾಣಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • 1 ಲಕ್ಷ ರೂ. ಕೊಡಿ, 5 ಲಕ್ಷ ನಕಲಿ ನೋಟು ಕೊಡ್ತೀವಿ: ವಂಚಕರಿಬ್ಬರ ಬಂಧನ

    1 ಲಕ್ಷ ರೂ. ಕೊಡಿ, 5 ಲಕ್ಷ ನಕಲಿ ನೋಟು ಕೊಡ್ತೀವಿ: ವಂಚಕರಿಬ್ಬರ ಬಂಧನ

    – ಬಂಧಿತರಿಂದ 25 ಲಕ್ಷ ಮೌಲ್ಯದ ಒಟ್ಟು 6 ಬಂಡಲ್‍ಗಳು ವಶ

    ಬಳ್ಳಾರಿ: ಅಸಲಿ 1 ಲಕ್ಷ ರೂಪಾಯಿ ಕೊಟ್ಟರೆ, ನಕಲಿ 5 ಲಕ್ಷ ರೂಪಾಯಿ ಕೊಡುವುದಾಗಿ ವಂಚಿಸುತ್ತಿದ್ದ ಆರೋಪಿಗಳನ್ನು ಹಗರಿಬೊಮ್ಮನಹಳ್ಳಿಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮಾನ್ವಿಯ ರಾಜೇಂದ್ರ ಹಾಗೂ ಯಲಬುರ್ಗಾದ ಅಂದಾನಿಗೌಡ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಹಗರಿಬೊಮ್ಮನಹಳ್ಳಿಯ ಹಲವು ವರ್ತಕರಿಗೆ ಕರೆ ಮಾಡಿ ನೀವು 1 ಲಕ್ಷ ರೂಪಾಯಿ ಅಸಲಿ ನೋಟುಗಳನ್ನು ಕೊಡಿ, ನಾವು ನಿಮಗೆ 5 ಲಕ್ಷ ರೂಪಾಯಿ ನಕಲಿ ನೀಡುತ್ತೇವೆ ಎಂದು ವಂಚಿಸುತ್ತಿದ್ದರು. ಈ ಕುರಿತು ಮಾಹಿತಿ ಸಂಗ್ರಹಿಸಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸುವಲ್ಲಿ ಸಫಲರಾಗಿದ್ದಾರೆ.

    ಬಂಧಿತರಿಂದ 25 ಲಕ್ಷ ಮೌಲ್ಯದ ಒಟ್ಟು 6 ಬಂಡಲ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಮೌಲ್ಯ ಒಟ್ಟು 1.5 ಕೋಟಿ ರೂಪಾಯಿ ಆಗಿದ್ದು, ಇದಲ್ಲದೇ ಒಂದು ಬೈಕ್ ಸೇರಿದಂತೆ 3 ಮೊಬೈಲ್‍ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಖೋಟಾ ನೋಟು ಚಲಾವಣೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ವ್ಯಾಪಕ ವಿಚಾರಣೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv