Tag: mental illness

  • ಕರ್ನಾಟಕದಲ್ಲಿ ನಾಪತ್ತೆಯಾದ ವೃದ್ಧೆ ದೂರದ ಮನಾಲಿಯಲ್ಲಿ ಪತ್ತೆ

    ಕರ್ನಾಟಕದಲ್ಲಿ ನಾಪತ್ತೆಯಾದ ವೃದ್ಧೆ ದೂರದ ಮನಾಲಿಯಲ್ಲಿ ಪತ್ತೆ

    ದಾವಣಗೆರೆ: ಮಾನಸಿಕ ಅಸ್ವಸ್ಥತೆಯುಳ್ಳ ಕರ್ನಾಟಕದ ವೃದ್ಧೆಯೊಬ್ಬರು ನಾಪತ್ತೆಯಾಗಿದ್ದು, ಇದೀಗ ದೂರದ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಪತ್ತೆಯಾಗಿದ್ದಾರೆ.

    ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಮೂಲದ ಸುಶೀಲಮ್ಮ (50) ಮಾನಸಿಕ ಅಸ್ವಸ್ಥೆಯಾಗಿದ್ದು, ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ ಕರ್ನಾಟಕ ಬಿಟ್ಟು 2014ರಲ್ಲಿ ಹಿಮಾಚಲಪ್ರದೇಶಕ್ಕೆ ಹೋಗಿದ್ದರು.

    ಸುಶೀಲಮ್ಮನಿಗೆ ಮಕ್ಕಳಾಗದ ಕಾರಣ ಆಕೆಯ ಪತಿ ಮೂರನೇ ಮದುವೆ ಮಾಡಿಕೊಂಡು ಈಕೆಯನ್ನು ಹೊರ ಹಾಕಿದ್ದರು. ನಂತರ ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡು ರೈಲಿನ ಮೂಲಕ ಹಿಮಾಚಲ ಪ್ರದೇಶ ಸೇರಿ ಕೆಲಕಾಲ ಗಾರೆ ಕೆಲಸ ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಮಾನಸಿಕ ಅಸ್ವಸ್ಥೆಯಾಗಿದ್ದರು.ಸ್ಥಳೀಯ ಪೊಲೀಸರು ಹಿಮಾಚಲ ಪ್ರದೇಶದ ಮಾನಸಿಕ ಅಸ್ವಸ್ಥರ ಪುನರ್ ಚೇತರಿಕಾ ಕೇಂದ್ರಕ್ಕೆ ಸೇರಿಸಿದ್ದರು.

    ಹಿಮಾಚಲ ಪ್ರದೇಶದ ಪ್ರಯಾಸ್ ಎನ್ನುವ ಎನ್‍ಜಿಒ ಮಾನಸಿಕ ಅಸ್ವಸ್ಥರ ಪುನರ್ ಚೇತರಿಕಾ ಕೇಂದ್ರದಲ್ಲಿ 21 ದಿನಗಳ ಕಾಲ ಶಿಬಿರವನ್ನು ಹಮ್ಮಿಕೊಂಡಾಗ ಸುಶೀಲಮ್ಮನ ಬಗ್ಗೆ ಮಾಹಿತಿ ಗೊತ್ತಾಯಿತು. ಕೂಡಲೇ ಎನ್‍ಜಿಒದಲ್ಲಿರುವ ವೈದ್ಯರು ವೃದ್ಧೆಗೆ ಚಿಕಿತ್ಸೆ ನೀಡಿ ತವರೂರಿಗೆ ಕರೆದೊಯ್ಯಲು ಸ್ಥಳೀಯ ಆಡಳಿತದ ಜೊತೆ ಮಾತನಾಡಲು ಮುಂದಾಗಿದ್ದಾರೆ.

    ದಾವಣಗೆರೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬೆಂಗಳೂರಿನ ಮಾನಸಿಕ ಅಸ್ವಸ್ಥ ಕೇಂದ್ರದ ಸಿಬ್ಬಂದಿ ಜೊತೆ ಮಾತನಾಡಿದ್ದು ಕೂಡಲೇ ಸುಶೀಲಮ್ಮನವರನ್ನು ಕರೆತರುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ತವರೂರಿಗೆ ಬರಲು ಮಾನಸಿಕ ಅಸ್ವಸ್ಥೆ ಸುಶೀಲಮ್ಮ ರೆಡಿಯಾಗಿದ್ದು, ಸ್ಥಳೀಯ ಅಡಳಿತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ಕೂಡಲೇ ಅವರನ್ನು ತವರೂರಿಗೆ ಕರೆತಂದು ಸೂಕ್ತ ಚಿಕಿತ್ಸೆ ಕೊಡಿಸಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ತಿಪ್ಪೆಗುಂಡಿಯಲ್ಲಿ ಹುಲ್ಲು, ಪೇಪರ್, ಕಸ-ಕಡ್ಡಿಗಳನ್ನ ತಿನ್ತಿದ್ದ ಮಾನಸಿಕ ಅಸ್ವಸ್ಥನ ರಕ್ಷಣೆ

    ತಿಪ್ಪೆಗುಂಡಿಯಲ್ಲಿ ಹುಲ್ಲು, ಪೇಪರ್, ಕಸ-ಕಡ್ಡಿಗಳನ್ನ ತಿನ್ತಿದ್ದ ಮಾನಸಿಕ ಅಸ್ವಸ್ಥನ ರಕ್ಷಣೆ

    ತುಮಕೂರು: ಅನ್ನ ಆಹಾರ ಇಲ್ಲದೆ ತಿಪ್ಪೆಗುಂಡಿಯಲ್ಲಿ ಬಿದ್ದು ಹುಲ್ಲು, ಪೇಪರ್, ಕಸ-ಕಡ್ಡಿಗಳನ್ನ ತಿನ್ನುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಆಟೋ ಚಾಲಕರೊಬ್ಬರು ರಕ್ಷಣೆ ಮಾಡಿದ್ದಾರೆ.

    ತುಮಕೂರು ನಗರದ ಪ್ರವಾಸಿ ಮಂದಿರದ ಬಳಿ ರಸ್ತೆ ಪಕ್ಕದಲ್ಲಿರುವ ಕಸದ ಗುಂಡಿಯಲ್ಲಿ ಮಾನಸಿಕ ಅಸ್ವಸ್ಥ ಬಿದ್ದು ವಿಲವಿಲ ಒದ್ದಾಡುತ್ತಿದ್ದನು. ಹೊಟ್ಟೆಗೆ ಆಹಾರ ಇಲ್ಲದೆ ದೇಹ ಕೃಶವಾದ ಆತ ಹುಲ್ಲು, ಮಣ್ಣು, ಕಸ ಕಡ್ಡಿಗಳನ್ನು ತಿನ್ನುವ ದೃಶ್ಯ ನಿಜಕ್ಕೂ ಕರುಳು ಚುರ್ರ್ ಅನ್ನಿಸುತ್ತಿತ್ತು. ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೂ ತಿಪ್ಪೆಗುಂಡಿಯಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಯಾರೊಬ್ಬರೂ ಅವನನ್ನು ರಕ್ಷಿಸುವ ಅಥವಾ ಆಹಾರ ನೀಡುವ ಔದಾರ್ಯ ತೋರಿಲ್ಲ.

    ಸಂಜೆ ವೇಳೆಗೆ ಆಟೋ ಚಾಲಕ ನವೀನ್, ಮಾನಸಿಕ ಅಸ್ವಸ್ಥನಿಗೆ ಆಹಾರ ನೀಡಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಅಸ್ವಸ್ಥನ ಹೆಸರು ಮೋಹನ್ ಎಂದು ತಿಳಿದು ಬಂದಿದ್ದು, ವಿಳಾಸ ತಿಳಿದುಬಂದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಿಚ್ಚನ ಅಭಿಮಾನಿಗಳಿಂದ ಅಸ್ವಸ್ಥನ ಬದುಕಲ್ಲಿ ಮೂಡಿತು ಬೆಳಕು

    ಕಿಚ್ಚನ ಅಭಿಮಾನಿಗಳಿಂದ ಅಸ್ವಸ್ಥನ ಬದುಕಲ್ಲಿ ಮೂಡಿತು ಬೆಳಕು

    ಬೆಂಗಳೂರು: ನಟರ ಅಭಿಮಾನಿಗಳು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಈಗ ಅಂತಹದ್ದೆ ಕೆಲಸವನ್ನು ನಟ ಸುದೀಪ್ ಅವರ ಅಭಿಮಾನಿಗಳು ಮಾಡಿದ್ದಾರೆ.

    ಸುದೀಪ್ ಅಭಿಮಾನಿಗಳು ಮಾನಸಿಕ ಅಸ್ವಸ್ಥನಿಗೆ ಸಹಾಯ ಮಾಡುವ ಮೂಲಕ ಆತನ ಬದುಕಿನಲ್ಲಿ ಬೆಳಕು ಮೂಡಿಸಿದ್ದಾರೆ. ಅಪರಿಚಿತನಾದ ಗಣೇಶ್ ಗೆ ಕಿಚ್ಚನ ಅಭಿಮಾನಿಗಳು ಸಹಾಯ ಮಾಡಿದ್ದಾರೆ. ಗಣೇಶ್ ಮೂಲತಃ ಹಾಸನದವನಾಗಿದ್ದು, ಬಾಲ್ಯದಲ್ಲಿಯೇ ತನ್ನ ತಂದೆ-ತಾಯಿಯನ್ನು ಕಳೆದುಕೊಂಡಿದ್ದನು. ಬಳಿಕ ಪೋಷಕರನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದರಿಂದ ಖಿನ್ನತೆಗೆ ಒಳಗಾಗಿದ್ದನು.

    ಸುಮಾರು 10 ವರ್ಷದಿಂದ ಗಣೇಶ್ ಅನಾಥನಾಗಿ ಭಿಕ್ಷೆ ಬೇಡುತ್ತಾ ಹಾಸನ ನಗರದಲ್ಲಿ ಸುತ್ತಾಡಿಕೊಂಡಿದ್ದನು. ಒಂದು ದಿನ ಈ ಯುವಕನನ್ನು ಸುದೀಪ್ ಅಭಿಮಾನಿಗಳ ಸಂಘದವರು ನೋಡಿದ್ದಾರೆ. ಬಳಿಕ ಅವರು ಅಸ್ವಸ್ಥ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ಪಡೆದ ನಂತರ ಯುವಕ ಗುಣಮುಖನಾಗಿದ್ದಾನೆ.

    ಯುವಕನ ಜೀವನಕ್ಕಾಗಿ ಒಂದು ಕೆಲಸ ಕೊಡಿಸಬೇಕು ಎಂದು ಅಭಿಮಾನಿಗಳು ನಿರ್ಧರಿಸಿದ್ದಾರೆ. ಅದರಂತೆಯೇ ಸಂಘದಲ್ಲಿದ್ದ ಒಬ್ಬ ಅಭಿಮಾನಿಯ ಬಾವ ಮಂಗಳೂರಿನಲ್ಲಿ ಬೇಕರಿ ಇಟ್ಟುಕೊಂಡಿದ್ದರು. ಅಲ್ಲಿಯೇ ಗಣೇಶ್ ಗೆ ಕೆಲಸವನ್ನು ಕೊಡಿಸಿದ್ದಾರೆ. ತಮ್ಮ ಅಭಿಮಾನಿಗಳ ಕಾರ್ಯವನ್ನು ಸುದೀಪ್ ಅವರು ಟ್ವೀಟ್ ಮಾಡಿ ಶ್ಲಾಫಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮಾನಸಿಕ ಖಿನ್ನತೆಗೊಳಗಾಗಿರೋ ಮಗಳನ್ನು 12 ವರ್ಷದಿಂದ ಸರಪಳಿಯಿಂದ ಬಂಧಿಸಿದ ಮಹಿಳೆ!

    ಮಾನಸಿಕ ಖಿನ್ನತೆಗೊಳಗಾಗಿರೋ ಮಗಳನ್ನು 12 ವರ್ಷದಿಂದ ಸರಪಳಿಯಿಂದ ಬಂಧಿಸಿದ ಮಹಿಳೆ!

    ಚಿತ್ರದುರ್ಗ: ಮಾನಸಿಕವಾಗಿ ಖಿನ್ನತೆಗೊಳಗಾಗಿರೋ ಮಹಿಳೆಗೆ ಚಿಕಿತ್ಸೆ ಕೊಡಿಸಲಾಗದೇ ಸರಪಳಿಯಿಂದ ಬಂಧಿಸಿರೋ ಅಮಾನವೀಯ ಕೃತ್ಯ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಕೋನಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಅಪ್ರಾಪ್ತ ವಯಸ್ಸಿಗೆ ಸರಸ್ವತಿಯ ವಿವಾಹವಾಗಿದ್ದು, ಕೌಟಂಬಿಕ ಕಲಹದಿಂದ ಈಕೆಯ ಪತಿ ಬೊಮ್ಮಣ್ಣ ದೂರವಾಗಿ ಮತ್ತೊಂದು ವಿವಾಹವಾಗಿದ್ದನು. ಹೀಗಾಗಿ ಅಂದಿನಿಂದ ಮಾನಸಿಕ ಖಿನ್ನತೆಗೊಳಗಾಗಿ ಗ್ರಾಮದ ಜನರೊಂದಿಗೆ ಜಗಳಕ್ಕಿಯುವ ವಿಚಿತ್ರ ಮನೋಸ್ಥಿತಿಯನ್ನು ರೂಢಿಸಿಕೊಂಡಿದ್ದ.

    21 ವರ್ಷದ ಸರಸ್ವತಿಗೆ ಆಕೆಯ ತಾಯಿ ಚಿಕಿತ್ಸೆ ಕೊಡಿಸಲಾಗದೇ, ಮನನೊಂದು ಕಳೆದ 12 ವರ್ಷಗಳಿಂದ ಈಕೆಯ ಕಾಲಿಗೆ ಸರಪಳಿ ಮೂಲಕ ಮರದ ತುಂಡೊಂದನ್ನು ಬಿಗಿದು ಎಲ್ಲೂ ಓಡಾಡದಂತೆ ಶಿಕ್ಷೆ ವಿಧಿಸಿದ್ದಾರೆ. ಆದ್ರೆ ಈವರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇವರ ಸಂಕಷ್ಟ ಅರಿತು ಚಿಕಿತ್ಸೆಗೆ ಸಹಕರಿಸದಿರೋದು ದುರದೃಷ್ಟಕರ.

  • ಕಳೆದ ಬಾರಿ ಶಾಸಕನಾಗಿದ್ದೆ, ಈ ಬಾರಿ ಜನ ಬೆಂಬಲವಿಲ್ಲ: ಆತ್ಮಹತ್ಯೆಗೆ ಯತ್ನಿಸಿದ ಮಾನಸಿಕ ಅಸ್ವಸ್ಥ

    ಕಳೆದ ಬಾರಿ ಶಾಸಕನಾಗಿದ್ದೆ, ಈ ಬಾರಿ ಜನ ಬೆಂಬಲವಿಲ್ಲ: ಆತ್ಮಹತ್ಯೆಗೆ ಯತ್ನಿಸಿದ ಮಾನಸಿಕ ಅಸ್ವಸ್ಥ

    ರಾಯಚೂರು: ಈ ಬಾರಿ ಶಾಸಕನಾಗಲಿಲ್ಲ ಎಂದು ಮಾನಸಿಕ ಅಸ್ವಸ್ಥರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

    ವೆಂಕಟೇಶ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಇವರು ದೇವದುರ್ಗದ ಹಿರೇಬೂದೂರು ಗ್ರಾಮದವರಾಗಿದ್ದು, ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣ ಬಳಿ ಮುಖ್ಯ ರಸ್ತೆ ಬದಿಯ ಮರಕ್ಕೆ ನೇಣು ಹಾಕಿಕೊಳ್ಳಲು ವಿಫಲ ಯತ್ನ ನಡೆಸಿದ್ದಾರೆ. ಕೇಬಲ್ ವಯರ್ ನಿಂದ ನೇಣು ಬಿಗಿದುಕೊಳ್ಳುವುದನ್ನು ನೋಡಿ ಸಾರ್ವಜನಿಕರು ಮಾನಸಿಕ ಅಸ್ವಸ್ಥನ ಪ್ರಾಣ ಉಳಿಸಿದ್ದಾರೆ.

    ಕಳೆದ ಬಾರಿ ಶಾಸಕನಾಗಿದ್ದೆ, ಈ ಬಾರಿ ಜನ ಬೆಂಬಲವಿಲ್ಲ. ಶಾಸಕನಾಗದೇ ಬದುಕಿದ್ದರೂ ಸತ್ತಂತೆ ಅದಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ ಎಂದು ಹೇಳಿದ್ದಾರೆ. ಕೂಡಲೇ ವೆಂಕಟೇಶ್ ಅವರನ್ನು ಪಶ್ಚಿಮ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಚಿಕಿತ್ಸೆಗಾಗಿ ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

  • ಪೈಪ್‍ನಲ್ಲಿ ಸಿಲುಕಿ ನರಳಾಡುತ್ತಿದ್ದ ಮಾನಸಿಕ ಅಸ್ವಸ್ಥೆಯ ರಕ್ಷಣೆ!

    ಪೈಪ್‍ನಲ್ಲಿ ಸಿಲುಕಿ ನರಳಾಡುತ್ತಿದ್ದ ಮಾನಸಿಕ ಅಸ್ವಸ್ಥೆಯ ರಕ್ಷಣೆ!

    ಹಾವೇರಿ: ಪೈಪ್‍ನಲ್ಲಿ ಸಿಲುಕಿ ನರಳಾಡುತ್ತಿದ್ದ ಮಾನಸಿಕ ಅಸ್ವಸ್ಥೆಯನ್ನು ರಕ್ಷಣೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಸವಣೂರು ಪಟ್ಟಣದಲ್ಲಿ ನಡೆದಿದೆ.

    ಗೌರಮ್ಮ ಮನೆಸಿನಕಾಯಿ(36) ಪೈಪ್‍ನಲ್ಲಿ ಸಿಲುಕಿದ್ದ ಮಾನಸಿಕ ಅಸ್ವಸ್ಥೆ. ಇವರು ಕಳೆದ ನಾಲ್ಕೈದು ದಿನಗಳ ಹಿಂದೆ ಮನೆಯಿಂದ ನಾಪತ್ತೆ ಆಗಿದ್ದರು ಎನ್ನಲಾಗಿದೆ. ಪೈಪ್ ನಲ್ಲಿ ನರಳಾಟ ಸದ್ದು ಕೇಳಿದ ಸ್ಥಳೀಯರು, ಅಗ್ನಿಶಾಮಕ ದಳಕ್ಕೆ ಸಿಬ್ಬಂದಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿದ್ದಾರೆ.

    ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಪೈಪ್ ಕೊರೆದು ಮಾನಸಿಕ ಅಸ್ವಸ್ಥೆಯನ್ನು ರಕ್ಷಿಸಿದ್ದಾರೆ. ನಂತರ ಅವರನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

    ಈ ಘಟನೆ ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ತನ್ನ ಕತ್ತನ್ನು ಕೊಯ್ದುಕೊಂಡು ರಸ್ತೆಯಲ್ಲಾ ಓಡಾಡಿದ- ಕಾಪಾಡಲು ಹೆದರಿದ ಜನ

    ತನ್ನ ಕತ್ತನ್ನು ಕೊಯ್ದುಕೊಂಡು ರಸ್ತೆಯಲ್ಲಾ ಓಡಾಡಿದ- ಕಾಪಾಡಲು ಹೆದರಿದ ಜನ

    ರಾಯಚೂರು: ಮಾನಸಿಕ ಅಸ್ವಸ್ಥನೊರ್ವ ತನ್ನ ಕತ್ತು ತಾನೇ ಕೊಯ್ದುಕೊಂಡು ರಸ್ತೆಯಲ್ಲಿ ಓಡಾಡಿದ ವಿಚಿತ್ರ ಘಟನೆಯೊಂಡು ನಗರದ ಜಲನಗರದಲ್ಲಿ ನಡೆದಿದೆ.

    ಉರುಕುಂದಪ್ಪ ಎಂಬಾತನೇ ಕತ್ತು ಕೊಯ್ದುಕೊಂಡ ಮಾನಸಿಕ ಅಸ್ವಸ್ಥ. ಸಾರ್ವಜನಿಕರ ಎದುರೇ ಈ ಘಟನೆ ನಡೆದರೂ ಯಾರೂ ನಿರೀಕ್ಷಿಸದ ರೀತಿಯಲ್ಲಿ ಕತ್ತು ಕೊಯ್ದುಕೊಂಡು ರಸ್ತೆಯಲ್ಲಿ ಓಡಾಡಿದ್ದಾನೆ. ಕೈಯಲ್ಲಿ ಚಾಕು ಇದ್ದಿದ್ದರಿಂದ ಸ್ಥಳದಲ್ಲಿದ್ದವರು ಸಹ ಕೂಡಲೇ ಸಹಾಯಕ್ಕೆ ಮುಂದಾಗಿಲ್ಲ.

    ಉರುಕಂದಪ್ಪ ಅಸ್ವಸ್ಥನಾಗಿ ನೆಲಕ್ಕೆ ಬಿದ್ದಮೇಲೆ 108 ಗೆ ಮಾಹಿತಿ ನೀಡಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಒಂದು ತಿಂಗಳ ಹಿಂದೆಯೂ ಇಂತಹ ಪ್ರಯತ್ನ ಮಾಡಿದ್ದ ಉರುಕುಂದಪ್ಪ ಎರಡನೇ ಬಾರಿ ಕತ್ತು ಕೊಯ್ದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಘಟನೆ ಹಿನ್ನೆಲೆ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉರುಕುಂದಪ್ಪ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    https://www.youtube.com/watch?v=9GPirxP79OE

  • 16 ವರ್ಷಗಳಿಂದ ಗೃಹ ಬಂಧನದಲ್ಲಿ ವ್ಯಕ್ತಿ- ಸ್ಟೋರಿ ಕೇಳಿದರೆ ಕಲ್ಲು ಮನಸು ಕೂಡ ಕರಗುತ್ತೆ

    16 ವರ್ಷಗಳಿಂದ ಗೃಹ ಬಂಧನದಲ್ಲಿ ವ್ಯಕ್ತಿ- ಸ್ಟೋರಿ ಕೇಳಿದರೆ ಕಲ್ಲು ಮನಸು ಕೂಡ ಕರಗುತ್ತೆ

    ಗದಗ: ಮಾನಸಿಕ ಅಸ್ವಸ್ಥನಾದ ವ್ಯಕ್ತಿಯೊಬ್ಬರು ಸುಮಾರು 16 ವರ್ಷಗಳಿಂದ ಕೈ ಕಾಲುಗಳಿಗೆ ಕಬ್ಬಿಣ ಬೇಡಿಗಳಿಂದ ಗೃಹ ಬಂಧನವನ್ನು ಅನುಭವಿಸುತ್ತಿದ್ದಾರೆ. ಇದೆಲ್ಲವನ್ನು ಕಣ್ಣಾರೆ ಕಂಡರೂ ಜನರು ಏನು ಮಾಡದ ಸ್ಥಿತಿಯಲ್ಲಿದ್ದಾರೆ.

    ರೋಣ ತಾಲೂಕಿನ ಹಿರೇಹಾಳ ಗ್ರಾಮದ ಶರಣಪ್ಪ ಕಳೆದ 16 ವರ್ಷಗಳಿಂದ ಬಂಧನದಲ್ಲಿದ್ದಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮಾನಸಿಕ ಅಸ್ವಸ್ಥನಾಗಿದ್ದಾರೆ.ಅಂದಿನಿಂದ ಕೈ ಕಾಲು ಗಳಿಗೆ ಕಬ್ಬಿಣದ ಬೇಡಿ ಹಾಕಿ ಹೊರಗಿನ ಪ್ರಪಂಚವನ್ನೇ ನೋಡದ ಹಾಗೆ ಕೂಡಿಹಾಕಿದ್ದಾರೆ. ಬೇಡಿ ಹಾಕಿದ ಕೈಗಳಿಂದಲೇ ಊಟ, ಮೆತ್ತನೆಯ ನಡಿಗೆ, ಸ್ವಾತಂತ್ರ್ಯ, ಸ್ವ ಇಚ್ಛೆಯೂ ಇಲ್ಲದ ನರಕದ ಜೀವನ ಅನುಭವಿಸುತ್ತಿದ್ದಾರೆ.

    2002ರಲ್ಲಿ ಜರುಗಿದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಫೇಲ್ ಆದ ಹಿನ್ನೆಲೆ ಮಾನಸಿಕ ಅಸ್ವಸ್ಥನಂತೆ ವರ್ತಿಸಲು ಪ್ರಾರಂಭಿಸಿದ್ದಾರೆ. ಅಂದಿನಿಂದ ಕುಟುಂಬಸ್ಥರು ಇವನನ್ನ ಮನೆಯಲ್ಲಿಯೇ ಕೂಡಿ ಹಾಕಿದ್ದಾರೆ. ಮಗನ ಸ್ಥಿತಿಯನ್ನು ಕಂಡು ಹೆತ್ತ ತಾಯಿ ಹನಮವ್ವ ಕೂಡ ಹಾಸಿಗೆ ಹಿಡಿದು ಕುಳಿತು ಬಿಟ್ಟಿದ್ದಾರೆ. ನಂತರ ಈ ಬಡ ಕುಟುಂಬದ ಜವಾಬ್ದಾರಿ ಹೊತ್ತಿದ್ದು, ಶರಣಪ್ಪನ ಸಹೋದರಿ ಯಮನವ್ವ. ಆದರೆ ಮನೆ ನಿರ್ವಹಣೆಗೆ ಈಕೆ ದೇವದಾಸಿಯಾಗಿದ್ದಾರೆ.

    ಈ ಬಗ್ಗೆ ಶರಣಪ್ಪನನ್ನು ಕೇಳಿದರೆ ತನಗೆ ತಿಳಿದಂತೆ ಮಾತನಾಡುತ್ತಾರೆ. ಇಡೀ ಕುಟುಂಬ ಪ್ರತಿದಿನ ಕಣ್ಣಿರಲ್ಲಿ ಕೈ ತೊಳೆಯುತ್ತಿದೆ. ಕಳೆದ 16 ವರ್ಷಗಳಿಂದ ಹೊರಗಿನ ಪ್ರಪಂಚವೇ ನೋಡದಿರುವ ಯುವಕ ನಿತ್ಯ ನರಕದ ಜೀವನ ನಡೆಸುತ್ತಿದ್ದಾರೆ. ಕೆಲವೊಮ್ಮೆ ಇವನು ವಿಚಿತ್ರವಾಗಿ ವರ್ತಿಸುತ್ತಾರೆ. ಸಿಕ್ಕ ಸಿಕ್ಕವರಿಗೆ ಹೊಡೆಯುವುದು, ಬಡಿಯುವುದು ಹೀಗೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಾರೆ. ತೊಂದರೆ ನೀಡುತ್ತಿರುವ ಹಿನ್ನೆಲೆಯಲ್ಲಿ ಕಬ್ಬಿಣದ ಬೇಡಿಗಳನ್ನು ಹಾಕಲಾಗಿದೆ.

    ಈ ಕುಟುಂಬದ ಸ್ಥಿತಿಯನ್ನು ನೋಡಿದರೆ ಕಲ್ಲಿನ ಮನಸು ಕೂಡ ಕರುಗುತ್ತದೆ. ಒಂದು ಕಡೆ ಊಟಕ್ಕೆ ಗತಿ ಇಲ್ಲ. ಇನ್ನೊಂದೆಡೆ ಚಿಕಿತ್ಸೆಗೆ ಹಣವಿಲ್ಲ. ಮತ್ತೊಂದೆಡೆ ದಿನಗೂಲಿ ಮಾಡದೆ ಜೀವನ ಸಾಗೋದಿಲ್ಲ. ಈ ರೀತಿಯ ಸ್ಥಿತಿಯಲ್ಲಿ ದಿನ ದೂಡುತ್ತಿರುವ ಈ ಕುಟುಂಬಕ್ಕೆ ಸಂಘ ಸಂಸ್ಥೆಯಿಂದ ನೆರವು ಸಿಗಲಿ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

  • 4 ವರ್ಷಗಳಿಂದ ರೂಮಿನಲ್ಲೇ ಬಂಧಿಯಾಗಿದ್ದ ಅಮ್ಮ ಮಗಳನ್ನ ರಕ್ಷಿಸಿದ ಪೊಲೀಸರು!

    4 ವರ್ಷಗಳಿಂದ ರೂಮಿನಲ್ಲೇ ಬಂಧಿಯಾಗಿದ್ದ ಅಮ್ಮ ಮಗಳನ್ನ ರಕ್ಷಿಸಿದ ಪೊಲೀಸರು!

    ನವದೆಹಲಿ: 4 ವರ್ಷಗಳಿಂದ ಕೋಣೆಯೊಂದರಲ್ಲಿ ತಮ್ಮಷ್ಟಕ್ಕೆ ತಾವೇ ಬಂಧಿಯಾಗಿದ್ದರು ಎನ್ನಲಾದ ತಾಯಿ ಮಗಳನ್ನು ದೆಹಲಿ ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.

    ಈ ಇಬ್ಬರು ಇಲ್ಲಿನ ಮಹಾವೀರ್ ಎನ್‍ಕ್ಲೇವ್ ನಿವಾಸಿಗಳಾಗಿದ್ದು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. 42 ವರ್ಷದ ಕಲಾವತಿ ಮತ್ತು ಅವರ ಮಗಳಾದ 20 ವರ್ಷದ ದೀಪಾ ಮದಲನೇ ಮಹಡಿಯ ರೂಮಿನಲ್ಲಿ ಬಂಧಿಯಾಗಿದ್ದಾರೆ ಎಂದು ಪಕ್ಕದ ಮನೆಯವರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಅಮ್ಮ ಮಗಳನ್ನ ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.

    ಮಹಿಳೆಯ ಮಾವ ಕೂಡ ಇದೇ ಮನೆಯಲ್ಲಿ ವಾಸವಾಗಿದ್ದು ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮಹಿಳೆಯರಿದ್ದ ರೂಮಿನ ಬಾಗಿಲು ತೆರೆದೇ ಇತ್ತು. ಇಬ್ಬರೂ ಅಪೌಷ್ಟಿಕತೆಗೆ ಒಳಗಾಗಿದ್ದರು. ಅನಾರೋಗ್ಯಕರ ಸ್ಥಿಯಲ್ಲಿ ವಾಸಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮೊದಲಿಗೆ ಪೊಲೀಸರೊಂದಿಗೆ ಆಸ್ಪತ್ರೆಗೆ ಹೋಗಲು ತಾಯಿ ಹಾಗೂ ಮಗಳು ನಿರಾಕರಿಸಿದ್ದರು. ಇಬ್ಬರೂ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಕಲಾವತಿ ಅವರ ಮಾವ ಮಹಾವೀರ್ ಮಿಶ್ರಾ ಪಕ್ಕದ ರೂಮಿನಲ್ಲೇ ವಾಸವಿದ್ದು, ಮಹಿಳೆಯರು ಕೇಳಿದಾಗ ದಿನಕ್ಕೆ ಒಂದು ಬಾರಿ ಊಟ ಕೊಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    2000ದಲ್ಲಿ ಹಂಡತಿ ತೀರಿಕೊಂಡಿದ್ದು, 4 ವರ್ಷಗಳ ಹಿಂದೆ ಇಬ್ಬರು ಗಂಡು ಮಕ್ಕಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ರು. ಅಂದಿನಿಂದ ಕಲಾವತಿ ಹಾಗೂ ದೀಪಾ ರೂಮಿನೊಳಗೆ ಬಂಧಿಯಾಗಿದ್ದಾರೆ. ನನ್ನ ಮಕ್ಕಳೊಂದಿಗೆ ಮಾತನಾಡಿದೆ ಎಂದು ಇಬ್ಬರೂ ಆಗಾಗ ಹೇಳುತ್ತಿದ್ದರು. ಎಷ್ಟೋ ದಿನ ಊಟ ಕೂಡ ಮಾಡುತ್ತಿರಲಿಲ್ಲ. ಸ್ಥಳೀಯ ವೈದ್ಯರೊಬ್ಬರು ಇವರಿಗೆ ಚಿಕಿತ್ಸೆ ನೀಡುತ್ತಿದ್ದರು. ನನ್ನ ಬಳಿ ಹೆಚ್ಚಿನ ಹಣ ಇರಲಿಲ್ಲವಾದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಿರಲಿಲ್ಲ ಎಂದು ಮಹಾವೀರ್ ಮಿಶ್ರಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.