Tag: Men

  • ಎಣ್ಣೆ ಅಂಗಡಿ ಬೇಕು, ಬೇಡ- ಪುರುಷರು, ಮಹಿಳೆಯರಿಂದ ಹೋರಾಟ

    ಎಣ್ಣೆ ಅಂಗಡಿ ಬೇಕು, ಬೇಡ- ಪುರುಷರು, ಮಹಿಳೆಯರಿಂದ ಹೋರಾಟ

    ಹಾಸನ: ಕೊರೊನಾ ಎರಡನೇ ಅಲೆಯಿಂದ ಜನ ಆಘಾತಕ್ಕೊಳಗಾಗಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. ಜಿಲ್ಲೆಯಲ್ಲಿ ಸಹ ಪ್ರತಿ ದಿನ ಮುನ್ನೂರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಇದರ ಮಧ್ಯೆ ಎಣ್ಣೆ ಅಂಗಡಿಗಾಗಿ ಪುರುಷರು ಹೊರಾಟಕ್ಕಿಳಿದಿದ್ದು, ಇದನ್ನು ವಿರೋಧಿಸಿ ಮಹಿಳೆಯರು ಬೀದಿಗಿಳಿದಿದ್ದಾರೆ.

    ಎಣ್ಣೆ ಬೇಕು ಎಂಬ ಬ್ಯಾನರ್ ಹಿಡಿದು ಗಾಡೇನಹಳ್ಳಿ, ಹಲಸಿನಹಳ್ಳಿ ಸುತ್ತಮುತ್ತಲ ಪುರುಷರು ಡಿಸಿ ಕಚೇರಿ ಎದುರು ಹೋರಾಟಕ್ಕೆ ಕುಳಿತಿದ್ದಾರೆ. ಒಂದು ದಿನದ ಹಿಂದಷ್ಟೇ ಈ ಭಾಗದ ಒಂದಷ್ಟು ಜನ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಬಳಿ ಬಂದು ನಮ್ಮ ಗ್ರಾಮದ ಸಮೀಪ ಎಣ್ಣೆ ಅಂಗಡಿ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ. ಇದರಿಂದ ನಮ್ಮ ಮನೆಗಳಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ. ರಸ್ತೆಯಲ್ಲಿ ಹೆಣ್ಣುಮಕ್ಕಳು ನೆಮ್ಮದಿಯಾಗಿ ಓಡಾಡಲು ಆಗಲ್ಲ, ಹೀಗಾಗಿ ಎಣ್ಣೆ ಅಂಗಡಿ ಬೇಡವೇ ಬೇಡ ಎಂದು ಹೋರಾಟಕ್ಕಿಳಿದಿದ್ದರು. ಅಷ್ಟೇ ಅಲ್ಲದೆ ಈ ಬಗ್ಗೆ ಡಿಸಿಗೆ ಮನವಿ ಕೂಡ ಸಲ್ಲಿಸಿದ್ದರು. ಇತ್ತ ಮಹಿಳಾಮಣಿಯರ ಹೋರಾಟಕ್ಕೆ ಪುರುಷರು ತಿರುಗೇಟು ನೀಡಲು ಪ್ರತಿ ಹೋರಾಟ ರೂಪಿಸಿದ್ದಾರೆ.

    ಮಹಿಳೆಯರ ಹೋರಾಟಕ್ಕೆ ಪ್ರತಿಯಾಗಿ ಗಾಡೇನಹಳ್ಳಿ ಸಮೀಪದ ಗ್ರಾಮಗಳ ಪುರುಷರು ಎಣ್ಣೆಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಎಣ್ಣೆ ಬೇಕು ಅಂದ್ರೆ 12 ಕಿಲೋಮೀಟರ್ ದೂರವಿರುವ ದುದ್ದ ಅಥವಾ ಏಳು ಕಿಲೋಮೀಟರ್ ದೂರವಿರುವ ಶಾಂತಿಗ್ರಾಮಕ್ಕೆ ಹೋಗಬೇಕು. ಎಣ್ಣೆ ಕುಡಿಯಲು ದೂರ ಹೋಗಲು ಹೆಚ್ಚು ಹಣ ಖರ್ಚಾಗುತ್ತೆ. ಅಷ್ಟೇ ಅಲ್ಲದೆ ಹಲವು ದಿನಗಳಿಂದ ಈ ಭಾಗದಲ್ಲಿ ಅಕ್ರಮವಾಗಿ ಹೆಚ್ಚು ಬೆಲೆಗೆ ಮದ್ಯ ಮಾರುತ್ತಿದೆ. ಇಲ್ಲಿ ಒಂದು ಮದ್ಯದಂಗಡಿ ಆದರೆ ಇದಕ್ಕೆಲ್ಲ ಕಡಿವಾಣ ಬೀಳಲಿದೆ ಎಂದು ಪುರುಷರು ಹೋರಾಟಕ್ಕಿಳಿದಿದ್ದಾರೆ.

    ಎಲ್ಲ ಕಡೆ ಕೊರೊನಾ ಸದ್ದು ಮಾಡುತ್ತಿದ್ದರೆ, ಇಲ್ಲಿ ಮಾತ್ರ ಒಂದು ಎಣ್ಣೆ ಅಂಗಡಿ ತೆರೆಯುವ ವಿಚಾರಕ್ಕೆ ಒಂದೇ ಗ್ರಾಮದ ಮಹಿಳೆಯರು ಮತ್ತು ಪುರುಷರ ನಡುವೆ ಹೋರಾಟ ನಡೆಯುತ್ತಿದೆ.

  • ಟಾಸ್ಕ್ ಗೆದ್ದು ಪಿಜ್ಜಾ ಸವಿದ ಬಿಗ್‍ಬಾಸ್ ಮನೆಯ ಮಹಿಳೆಯರು

    ಟಾಸ್ಕ್ ಗೆದ್ದು ಪಿಜ್ಜಾ ಸವಿದ ಬಿಗ್‍ಬಾಸ್ ಮನೆಯ ಮಹಿಳೆಯರು

    ಸದಾ ಫಿಸಿಕಲ್ ಟಾಸ್ಕ್ ಕೊಡುತ್ತಿದ್ದ ಬಿಗ್‍ಬಾಸ್ ನಿನ್ನೆ ಮನೆ ಸದಸ್ಯರಿಗೆ ಹಾಸ್ಯಮಯ ಚಟುವಟಿಕೆಯೊಂದನ್ನು ನೀಡಿದರು. ಅದುವೇ ನಗುವುದೋ, ಅಳುವುದೋ ನೀವೇ ಹೇಳಿ. ಇದರ ಅನುಸಾರ ಮನೆಯ ಪುರುಷರೆಲ್ಲರೂ ಮನೆಯಲ್ಲಿರುವ ನಾಲ್ಕು ಮಹಿಳೆಯರ ಪ್ರತಿಕ್ರಿಯೆಯನ್ನು ಪಡೆಯಬೇಕಿತ್ತು. ಅಂದರೆ ಒಂದು ನಗಿಸಬೇಕು, ಇಲ್ಲ ಅಳಿಸಬೇಕು. ನೀಡುವ ನಿಗದಿತ ಅವಧಿಯೊಳಗೆ ನಾಲ್ಕು ಮಹಿಳಾ ಸದಸ್ಯರನ್ನು ನಗಿಸಿದರೆ ಅಥವಾ ಅಳಿಸಿದರೆ ಪುರುಷರು ವಿಜೇತರಾಗುತ್ತಾರೆ. ಒಂದು ವೇಳೆ ಮಹಿಳಾ ಸದಸ್ಯರ ತಂಡದಲ್ಲಿ ಒಬ್ಬ ಸದಸ್ಯ ನಗದೇ ಅಥವಾ ಅಳದೇ ಉಳಿದರು ಮಹಿಳೆಯರ ತಂಡ ಗೆಲ್ಲುತ್ತದೆ ಹಾಗೂ ಗೆಲ್ಲುವ ತಂಡಕ್ಕೆ ವಿಶೇಷವಾಗಿ ಪಿಜ್ಜಾ ನೀಡಲಾಗುತ್ತದೆ ಎಂದು ತಿಳಿಸಿದರು. ಇದನ್ನು ಕೇಳಿ ಮನೆ ಮಂದಿಯೆಲ್ಲಾ ಫುಲ್ ಖುಷ್ ಆಗುತ್ತಾರೆ.

    ಗೆಲ್ಲಲೇ ಬೇಕೆಂದು ನಿರ್ಧರಿಸಿದ ಪುರುಷರು ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಶುಭ ಪೂಂಜಾ, ನಿಧಿ ಸುಬ್ಬರನ್ನು ಟಾರ್ಗೆಟ್ ಮಾಡಿ ನಗಿಸಲು ಪ್ಲಾನ್ ಮಾಡುತ್ತಾರೆ. ನಂತರ ಮಹಿಳಾ ಸದಸ್ಯರು ಊಟ ಮಾಡಲು ಡೈನಿಂಗ್ ಹಾಲ್‍ನಲ್ಲಿ ಕುಳಿತಿರುವ ವೇಳೆ ಲ್ಯಾಗ್ ಮಂಜು ದಿವ್ಯಾ ಉರುಡುಗರನ್ನು ನಗಿಸಲು ಪ್ರಾರಂಭಿಸುತ್ತಾರೆ. ಈ ವೇಳೆ ದಿವ್ಯಾ ಉರುಡುಗ ಊಟದಿಂದ ಎದ್ದು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುತ್ತಾರೆ. ಆದರೂ ಹಠ ಬಿಡದ ಮಂಜು ವಾಶ್ ರೂಮ್‍ಗೆ ತಲುಪಿದ ದಿವ್ಯಾ ಉರುಡುಗರನ್ನು ಬೆನ್ನು ಬೇಡದೇ ಕಾಡುತ್ತಾರೆ. ಈ ವೇಳೆ ದಿವ್ಯಾ ಉರುಡುಗ ಒಬ್ಬೊಬ್ಬರೇ ಮಾತನಾಡಿಕೊಳ್ಳುತ್ತಾ, ಮಂಜು ಬಟ್ಟೆ ಒಗೆಯಲು ಏಕೆ ಬಿಡುತ್ತಿಲ್ಲ ನೀನು ಎಂದು ಪ್ರಶ್ನಿಸುತ್ತಾರೆ. ದಿವ್ಯಾ ಕೈ ಹಿಡಿದು ಎಳೆದು ನಗಿಸಲು ಪ್ರಯತ್ನಿಸುತ್ತಾರೆ. ಆದರೂ ದಿವ್ಯಾ ದೃತಿಗೆಡದೇ ಆಟದ ಮೇಲೆ ಗಮನ ಹರಿಸಲೇಬೇಕೆಂದು ನಗುವನ್ನು ಕಂಟ್ರೋಲ್ ಮಾಡಿಕೊಳ್ಳುತ್ತಾರೆ.

    ನಂತರ ಬಾತ್ ರೂಮ್‍ನಿಂದ ಹೊರ ಬರುತ್ತಿದ್ದ ದಿವ್ಯಾ ಸುರೇಶ್ ಬೆನ್ನತ್ತಿದ ಲ್ಯಾಗ್ ಮಂಜು, ಆಕೆಯನ್ನು ನಗಿಸಲು ಪ್ರಯತ್ನಿಸುತ್ತಾರೆ. ಈ ವೇಳೆ ದಿವ್ಯಾ ನನ್ನ ಬಾಯಲ್ಲಿ ನೀರಿದೆ ನಾನು ಉಗುಳಿ ಬಿಡುತ್ತೇನೆ, ನನ್ನ ಕೈ ಬಿಡು ಎಂದು ಸನ್ನೆ ಮಾಡುವ ಮೂಲಕ ತಿಳಿಸುತ್ತಾರೆ. ಆಗ ಮಂಜು ಆಗಿದ್ದೆಲ್ಲಾ ಆಗಿಲಿ ನೀನು ಉಗುಳಿದರು ಪರವಾಗಿಲ್ಲ ಎಂದು ಹೇಳುವ ಮೂಲಕ ನಗಿಸಲು ಮುಂದಾಗುತ್ತಾರೆ. ಆದರೂ ನಗಬಾರದೆಂದು ದಿವ್ಯಾ ಬಾಯಿಯಲ್ಲಿದ್ದ ನೀರನ್ನು ಉಗುಳದೇ ಹಾಗೇಯೇ ಮೈನ್‍ಟೈನ್ ಮಾಡುತ್ತಾರೆ. ನಗಿಸಲೇ ಬೇಕೆಂದು ಹಠ ಬಿಡದ ಮಂಜು ದಿವ್ಯಾರ ಕೈ ಹಿಡಿದು ಎಳೆದಾಡುತ್ತಾರೆ. ಈ ವೇಳೆ ಕೊನೆಗೂ ದಿವ್ಯಾ ಕೊಂಚ ನಗೆ ಬೀರಿಬಿಡುತ್ತಾರೆ. ಇದನ್ನು ಗಮನಿಸಿದ ಬಿಗ್‍ಬಾಸ್ ದಿವ್ಯಾ ಸುರೇಶ್ ಔಟ್ ಎಂದು ಘೋಷಿಸುತ್ತಾರೆ.

    ಬಳಿಕ ಉಳಿದ ಮಹಿಳೆಯರ ಬೆನ್ನಟ್ಟಿದ ಪುರುಷ ಸದಸ್ಯರು ಎಷ್ಟೇ ಪ್ರಯತ್ನಿಸಿದರು ಮಹಿಳೆಯರು ನಗದೇ ಟಾಸ್ಕ್ ಕಂಪ್ಲೀಟ್ ಮಾಡಿ ವಿಜಯ ಶಾಲಿಯಾಗುತ್ತಾರೆ. ಹೀಗಾಗಿ ಬಿಗ್‍ಬಾಸ್ ಮನೆಯ ಮಹಿಳಾ ಸದಸ್ಯರಿಗೆ ಸವಿಯಲು ಪಿಜ್ಜಾ ಕಳುಹಿಸಿಕೊಡುತ್ತಾರೆ. ಎಷ್ಟೋ ದಿನಗಳಿಂದ ಪಿಜ್ಜಾ ನೋಡದ ಮಹಿಳೆಯರು ನಿನ್ನೆ ಪಿಜ್ಜಾ ತಿಂದು ಸಖತ್ ಎಂಜಾಯ್ ಮಾಡುತ್ತಾರೆ.

  • ಇಬ್ಬರನ್ನು ವಿವಾಹವಾಗಿ 1.5 ಕೋಟಿ ವಂಚನೆ, ಮೂರನೇ ಮದುವೆಯಾಗುವಾಗ ಸಿಕ್ಕಿಬಿದ್ದಳು

    ಇಬ್ಬರನ್ನು ವಿವಾಹವಾಗಿ 1.5 ಕೋಟಿ ವಂಚನೆ, ಮೂರನೇ ಮದುವೆಯಾಗುವಾಗ ಸಿಕ್ಕಿಬಿದ್ದಳು

    – ಬಡತನದ ನಾಟಕವಾಡಿ ಮೋಸ
    – ಶಾದಿ.ಕಾಮ್ ಮೂಲಕ ಹುಡುಗರ ಪರಿಚಯ
    – ಮೊಬೈಲ್‍ನಲ್ಲಿ ಮಾಜಿ ಪತಿ ಫೋಟೋ ನೋಡಿ ವರನ ತಾಯಿ ಪ್ರಶ್ನೆ

    ರಾಂಚಿ: ಪುರುಷರು ಮಹಿಳೆಯರಿಗೆ ಮೋಸ ಮಾಡುವ ಸುದ್ದಿಯನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಖತರ್ನಾಕ್ ಮಹಿಳೆ ಪುರುಷರಿಂದಲೇ ಕೋಟಿಗಟ್ಟಲೇ ಹಣ ಕಿತ್ತುಕೊಂಡು ಮೋಸ ಮಾಡಿ, ಮೂರನೇ ವಿವಾಹಕ್ಕೆ ತಯಾರಾಗಿದ್ದಾಗ ಸಿಕ್ಕಿಬಿದ್ದಿದ್ದಾಳೆ.

    ಮಹಿಳೆ ಜಾರ್ಖಂಡ್ ಮೂಲದವಳಾಗಿದ್ದು, ಇಬ್ಬರು ಪುರುಷರನ್ನು ವಿವಾಹವಾಗಿ ಅವರ ಕುಟುಂಬದಿಂದ ಕೋಟ್ಯಂತರ ಹಣ ಪಡೆದು ಮೋಸ ಮಾಡುವುದರಲ್ಲಿ ಯಶಸ್ವಿಯಾಗಿದ್ದು, ಇಬ್ಬರು ಪುರುಷರಿಗೆ ಸುಮಾರು 1.5 ಕೋಟಿ ರೂ. ವಂಚಿಸಿದ್ದಾಳೆ. ಮೂರನೇ ವಿವಾಹವಾಗುವ ವೇಳೆ ಖತರ್ನಾಕ್ ಮಹಿಳೆ ತನ್ನ ಇಬ್ಬರು ಗಂಡಂದಿರೊಂದಿಗೆ ಇರುವ ಫೋಟೋಗಳನ್ನು ವರನ ತಾಯಿ ನೋಡಿದ್ದು, ಈ ವೇಳೆ ಸಿಕ್ಕಿಬಿದ್ದಿದ್ದಾಳೆ.

    ಶಾದಿ.ಕಾಮ್ ಮೂಲಕ ಪರಿಚಯ ಮಾಡಿಕೊಂಡು, ನಂತರ ವಿವಾಹಕ್ಕೆ ಒಪ್ಪಿಸಿ, ಇಬ್ಬರು ಪುರುಷರಿಗೆ ಮೋಸ ಮಾಡಿದ್ದಾಳೆ. ಮಹಿಳೆ ಎರಡು ವರ್ಷಗಳ ಹಿಂದೆ ನಿಲಯ್ ಕುಮಾರ್ ಜೊತೆ ಮೊದಲ ವಿವಾಹವಾಗಿದ್ದು, ಇವರು ಜಾರ್ಖಂಡ್‍ನ ಗಿರಿದಿಹ್‍ನ ರಾಜ್‍ಧನ್ವರ್‍ನವರಾಗಿದ್ದಾರೆ. ಇವರ ಬಳಿ ಬರೋಬ್ಬರಿ 1 ಕೋಟಿ ರೂ. ಪಡೆದು ಪರಾರಿಯಾಗಿದ್ದಾಳೆ.

    ಇದಾದ ಬಳಿಕ ಖತರ್ನಾಕ್ ಮಹಿಳೆ ಮತ್ತೆ ಶಾದಿ.ಕಾಮ್‍ನಲ್ಲಿ ತನ್ನ ಪ್ರೊಫೈಲ್ ಅಪ್‍ಲೋಡ್ ಮಾಡಿದ್ದು, ಇದರಲ್ಲಿ ಇತ್ತೀಚೆಗೆ ತಾನು ವಿವಾಹವಾಗಿರುವುದನ್ನು ಮುಚ್ಚಿಟ್ಟಿದ್ದಾಳೆ. ಈ ಬಾರಿ ಗುಜರಾತ್ ಮೂಲದ ಅಮಿತ್ ಮೋದಿಯವರನ್ನು ಬುಟ್ಟಿಗೆ ಬೀಳಿಸಿಕೊಂಡಿದ್ದು, ವಿವಾಹವೂ ಆಗಿದ್ದಾಳೆ. ನಂತರ ಆತನನ್ನು ಭಾವನಾತ್ಮಕವಾಗಿ ಸೆಳೆದಿದ್ದು, ನನ್ನ ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಹೀಗಾಗಿ ಹಣ ಬೇಕು ಎಂದು ಸುಳ್ಳು ಹೇಳಿ 40-45 ಲಕ್ಷ ರೂ. ಎಗರಿಸಿದ್ದಾಳೆ.

    ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಇಬ್ಬರು ದಂಪತಿ ಬೇರೆಯಾಗಿದ್ದರು. ಇವರ ವಿಚ್ಛೇದನ ಅರ್ಜಿಯನ್ನು ಸಹ ಕೋರ್ಟ್ ತಿರಸ್ಕರಿಸಿದೆ. ನಂತರ ಮಹಿಳೆ ನನ್ನ ತಂಗಿ ದೆಹಲಿಗೆ ಶಿಫ್ಟ್ ಆಗುತ್ತಿದ್ದಾಳೆ. ಅವಳಿಗೆ ಸಹಾಯ ಮಾಡಲು ಹೊರಟಿದ್ದೇನೆ. ಇನ್ನೆಂದಿಗೂ ಬರುವುದಿಲ್ಲ ಕ್ಷಮಿಸಿ ಎಂದು ಹೇಳಿ ಹೋಗಿದ್ದಾಳೆ ಎಂದಿದ್ದಾರೆ.

    ಮೂರನೇ ಬಾರಿಗೆ ಪೂಣೆ ಮೂಲದ ಪುರುಷನನ್ನು ವಿವಾಹವಾಗಲು ಮುಂದಾಗಿದ್ದಾಳೆ. ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಪುಣೆ ಮೂಲದ ಸುಮಿತ್ ದಶರಥ್ ಪವಾರ್‍ನನ್ನು ಬುಟ್ಟಿಗೆ ಬೀಳಿಸಿಕೊಂಡಿದ್ದಾಳೆ. ಚತ್ರಾ ಜಿಲ್ಲೆಯ ಇಟ್ಖೋರಿಯವಳಾದ ಮಹಿಳೆಗೆ ಪಾಸ್‍ಪೋರ್ಟ್ ನ ಅವಶ್ಯ ಎದುರಾಗಿದ್ದು, ಈ ವೇಳೆ ಬೇರೆ ದಾರಿ ಇಲ್ಲದೆ, ಜಾರ್ಖಂಡ್‍ನಿಂದ ಅರ್ಜಿ ಸಲ್ಲಿಸಿದ್ದಾಳೆ.

    ಇದೆಲ್ಲ ನಡೆದ ಬಳಿಕ ಸುಮಿತ್ ತಾಯಿ ಖತರ್ನಾಕ್ ಮಹಿಳೆಯ ಮೊಬೈಲ್ ನೋಡಿದ್ದು, ಆಗ ಮಹಿಳೆ ತನ್ನ ಮಾಜಿ ಪತಿ ಅಮಿತ್ ಜೊತೆಗಿರುವ ಫೋಟೋಗಳು ಸಿಕ್ಕಿವೆ. ಸುಮಿತ್ ತಾಯಿಗೆ ಅನುಮಾನ ಬಂದಿದ್ದು, ಮಹಿಳೆಯನ್ನು ವಿಚಾರಣೆ ನಡೆಸಲು ಪ್ರಾರಂಭಿಸಿದ್ದಾರೆ. ಈ ವೇಳೆ ಆಕೆಯ ವಿವಾಹದ ಸರಣಿ ಕುರಿತ ಸತ್ಯ ಬಯಲಾಗಿದೆ.

    ಇದೀಗ ಪುಣೆ ಪೊಲೀಸರು ಚತ್ರಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣದ ತನಿಖೆ ನಡೆಸುವಂತೆ ಕೇಳಿಕೊಂಡಿದ್ದಾರೆ. ಪಾಸ್‍ಪೋರ್ಟ್ ಕಚೇರಿಗೂ ಅವಿವಾಹಿತೆ ಎಂದು ಮಹಿಳೆ ತಪ್ಪು ಮಾಹಿತಿ ನೀಡಿದ್ದಾಳೆ.

  • ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ- ಕತ್ತು, ಹೊಟ್ಟೆಗೆ ಚಾಕು ಇರಿದು ನಾಲ್ವರ ಕೊಲೆ

    ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ- ಕತ್ತು, ಹೊಟ್ಟೆಗೆ ಚಾಕು ಇರಿದು ನಾಲ್ವರ ಕೊಲೆ

    ಚಾಮರಾಜನಗರ: ವೈಯಕ್ತಿಕ ದ್ವೇಷಕ್ಕೆ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಜಾಕೀರ್ ಹುಸೇನ್ ನಗರದಲ್ಲಿ ಕೊಲೆ ನಡೆದಿದೆ.

    ಜಾಕೀರ್ ಹುಸೇನ್ ನಿವಾಸಿಗಳಾದ ಜಕಾವುಲ್ಲಾ, ಇದ್ರೀಶ್, ಪೈಜಲ್ ಹಾಗೂ ಮತ್ತೋರ್ವ ಕೊಲೆಯಾದ ದುರ್ದೈವಿಗಳು. ಮೃತರು ಪಟ್ಟಣದ ಪುರಸಭೆ ಸದಸ್ಯ ನೂರುಲ್ಲಾ ಗುಂಪಿನವರಾಗಿದ್ದರು. ಎರಡು ಕುಟುಂಬಗಳ ನಡುವಿನ ಕಲಹದಿಂದಾಗಿ ಕೊಲೆ ನಡೆದಿದೆ ಎನ್ನಲಾಗಿದೆ.

    ರಂಜಾನ್ ಮುಗಿದ ಬಳಿಕ ಮಂಗಳವಾರ ರಾತ್ರಿ 10 ಗಂಟೆ ವೇಳೆಗೆ ನಡೆದ ಗಲಾಟೆಯಲ್ಲಿ ಅಸ್ಲಾಂ, ಜಮೀರ್ ಸಂಗಡಿಗರು ಜಕಾವುಲ್ಲಾ, ಇದ್ರೀಶ್, ಪೈಜಲ್ ಮೇಲೆ ದಾಳಿ ಮಾಡಿ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮೂವರು ಸ್ಥಳದಲ್ಲಿ ಮೃತಪಟ್ಟರೆ, ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮತ್ತೋರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಈ ಸಂಬಂಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೈದ ದುಷ್ಕರ್ಮಿಗಳು ತಲೆ ಮರೆಸಿಕೊಂಡಿದ್ದಾರೆ. ಕೊಲೆ ನಡೆದಿದ್ದು ಯಾಕೆ? ಯಾರೆಲ್ಲ ಭಾಗಿಯಾಗಿದ್ದರು ಎನ್ನುವ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ರಾತ್ರಿ ಸ್ಥಳದಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು.

    ಮೂಲಗಳ ಪ್ರಕಾರ ಪಟ್ಟಣದ ಪುರಸಭೆ ಸದಸ್ಯ ನೂರುಲ್ಲಾ ಗುಂಪಿನ ಮತ್ತು ಮತ್ತೊಂದು ಗುಂಪಿನ ನಡುವೆ ಹಿಂದೆಯೂ ಘರ್ಷಣೆ ನಡೆದಿತ್ತು. ಆಗ ಕೆಲ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಎರಡು ಗುಂಪುಗಳ ನಡುವೆ ವೈಷಮ್ಯ ಜೋರಾಗಿಯೇ ವಿತ್ತು. ಇದೇ ವಿಚಾರವಾಗಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡು ಮತ್ತೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.

  • ಕರ್ನಾಟಕದಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗ್ – ಕೊರೊನಾ ಸೋಂಕಿತರಲ್ಲಿ ಪುರುಷರೆಷ್ಟು ಗೊತ್ತಾ?

    ಕರ್ನಾಟಕದಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗ್ – ಕೊರೊನಾ ಸೋಂಕಿತರಲ್ಲಿ ಪುರುಷರೆಷ್ಟು ಗೊತ್ತಾ?

    ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ ತುತ್ತಾದವರ ಪೈಕಿ ಪುರಷರ ಸಂಖ್ಯೆಯೇ ಹೆಚ್ಚಾಗಿ ಇರುವುದು ಕಂಡು ಬಂದಿದೆ.

    ಕರ್ನಾಟಕದಲ್ಲಿ ಈವೆರಗೂ ಕಂಡ ಬಂದ 858 ಮಂದಿ ಕೊರೊನಾ ಸೋಂಕಿತರ ಪೈಕಿ, ಪುರಷರಿಗೆ ಹೆಚ್ಚು ಕೊರೊನಾ ಸೋಂಕು ಕಡಿಮೆ ಬಂದಿದೆ. ಆದರೆ ರಾಜ್ಯದಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗ್ ಗುರು ಎಂಬದನ್ನು ಮಹಿಳೆಯರು ಮತ್ತೊಮ್ಮೆ ಸಾಬೀತು ಪಡಿಸಿದ್ದು, ಮಹಿಳಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಕಡಿಮೆ ಇದೆ.

    ಈ ಅಂಕಿ ಅಂಶಗಳನ್ನು ನೋಡುವುದಾದರೆ. ಇಂದು ಬಿಡುಗಡೆಯಾದ ಹೆಲ್ತ್ ಬುಲೆಟಿನ್ ಅಲ್ಲಿ ಬರೋಬ್ಬರಿ 858 ಜನರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಒಟ್ಟು 550 ಜನ ಪುರುಷರು ಸೋಂಕಿತರಾಗಿದರೇ 308 ಜನ ಮಹಿಳೆಯರು ಇದ್ದಾರೆ. ಈ ಮೂಲಕ ಕೊರೊನಾ ಮಹಾಮಾರಿಗೆ ಅತೀ ಹೆಚ್ಚು ಪರುಷರೇ ತುತ್ತಾಗಿದ್ದಾರೆ. ಮನೆಯಲ್ಲಿಯೇ ಇರುವ ಮಹಿಳೆಯರು ಸೇಫ್ ಆಗಿದ್ದಾರೆ.

    ಇಂದು ರಾಜ್ಯದಲ್ಲಿ 10 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 858ಕ್ಕೆ ಏರಿಕೆಯಾಗಿದೆ. ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ, ದಾವಣಗೆರೆ 3, ಬೀದರ್ 2, ಬಾಗಲಕೋಟೆ 2, ಕಲಬುರಗಿ 1, ಹಾವೇರಿ 1 ಮತ್ತು ವಿಜಯಪುರದಲ್ಲಿ 1 ಹೊಸ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದೆ.

  • ಕೊರೊನಾದಿಂದ ಗುಣಮುಖರಾದ 38 ಪುರುಷರ ಪೈಕಿ 6 ಜನರ ವೀರ್ಯದಲ್ಲಿ ಸೋಂಕು

    ಕೊರೊನಾದಿಂದ ಗುಣಮುಖರಾದ 38 ಪುರುಷರ ಪೈಕಿ 6 ಜನರ ವೀರ್ಯದಲ್ಲಿ ಸೋಂಕು

    ಬೀಜಿಂಗ್: ಕೋವಿಡ್-19 ದಿಂದ ಗುಣಮುಖರಾದ 38 ಪುರುಷರ ಪೈಕಿ 6 ಜನರ ವೀರ್ಯದಲ್ಲಿ ಕೊರೊನಾ ಸೋಂಕು ಇರುತ್ತೆ ಎಂಬ ವಿಷಯವನ್ನು ಚೀನಾದ ಅಧ್ಯಯನವೊಂದು ಬಹಿರಂಗಗೊಳಿಸಿದೆ.

    ಲೈಂಗಿಕ ಸಂಪರ್ಕದಿಂದ ಕೊರೊನಾ ಸೋಂಕು ಹರಡುತ್ತಾ ಅನ್ನೋ ಪ್ರಶ್ನೆಗೆ ಚೀನಾ ವಿಜ್ಞಾನಿಗಳು ಉತ್ತರ ನೀಡಿದ್ದಾರೆ. ಕೊರೊನಾದಿಂದ ಗುಣಮುಖರಾದವರಿಗೆ ಮತ್ತೆ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಕುರಿತು ಅಧ್ಯಯನ ನಡೆಸಿದ ಚೀನಾ ವಿಜ್ಞಾನಿಗಳ ತಂಡ ಮಹತ್ವದ ವಿಷಯಗಳನ್ನು ಹಂಚಿಕೊಂಡಿದೆ.

    ಜೆಎಎಂಎ ನೆಟ್‍ವರ್ಕ್ ಓಪನ್ ಅಧ್ಯಯನ ತಂಡದ ಪ್ರಕಾರ, ಗುಣಮುಖರಾದ ಶೇ.16ರಷ್ಟು ಪುರುಷರ ವೀರ್ಯದಲ್ಲಿ ಕೊರೊನಾ ಸೋಂಕು ಇರುತ್ತದೆ. ಅಂದರೆ ಗುಣಮುಖರಾದ 38 ಪುರುಷರಲ್ಲಿ 6 ಜನರಿಗೆ ಈ ಲಕ್ಷಣಗಳು ಕಂಡು ಬರಲಿವೆ ಎಂದು ತಿಳಿಸಿದೆ. ಇನ್ನು ಅಧ್ಯಯನ ತಂಡ 15 ರಿಂದ 59 ವರ್ಷದೊಳಗಿನವರನ್ನು ಗಣನೆಗೆ ತೆಗೆದುಕೊಂಡಿತ್ತು.

    ಅಧ್ಯಯನ ತಂಡ ಲೈಂಗಿಕ ಕ್ರಿಯೆ ನಡೆಸುವ ಮೂಲಕ ಸೋಂಕು ಹರಡುತ್ತೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ವೀರ್ಯದಲ್ಲಿ ಸೋಂಕಿರುತ್ತೆ ಎಂಬುದನ್ನ ಮಾತ್ರ ಹೇಳಿದೆ ಎಂದು ಕೊರೊನಾ ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಆಶಾ ಕಾರ್ಯಕರ್ತೆ ಮೇಲೆ ಹಲ್ಲೆಗೈದಿದ್ದ ಇಬ್ಬರು ಎಸ್‍ಡಿಪಿಐ ಕಾರ್ಯಕರ್ತರ ಬಂಧನ

    ಆಶಾ ಕಾರ್ಯಕರ್ತೆ ಮೇಲೆ ಹಲ್ಲೆಗೈದಿದ್ದ ಇಬ್ಬರು ಎಸ್‍ಡಿಪಿಐ ಕಾರ್ಯಕರ್ತರ ಬಂಧನ

    ಮಂಗಳೂರು: ಆಶಾ ಕಾರ್ಯಕರ್ತೆ ಮೇಲೆ ಹಲ್ಲೆಗೈದಿದ್ದ ಇಬ್ಬರು ಎಸ್‍ಡಿಪಿಐ ಕಾರ್ಯಕರ್ತರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಮಲ್ಲೂರು ಬದ್ರಿಯಾ ನಗರ ನಿವಾಸಿಗಳಾದ ಇಸ್ಮಾಯಿಲ್ ಮತ್ತು ಅಶ್ರಫ್ ಬಂಧಿತರು. ಆರೋಪಿಗಳು ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮನೆ ಮನೆ ಭೇಟಿಯಲ್ಲಿದ್ದ ಆಶಾ ಕಾರ್ಯಕರ್ತೆಯೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆ ಹಾಕಿದ್ದರು.

    ವಸಂತಿ ಎಂಬ ಆಶಾ ಕಾರ್ಯಕರ್ತೆ ಮನೆ ಭೇಟಿಗೆ ತೆರಳಿದ್ದ ವೇಳೆ ಇಬ್ಬರೂ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಕರ್ತವ್ಯ ನಿರ್ವಹಿಸದಂತೆ ತಡೆದಿದ್ದ ಆರೋಪಿಗಳು, ಆಶಾ ಕಾರ್ಯಕರ್ತೆಗೆ ಬೆದರಿಕೆಯನ್ನೂ ಹಾಕಿದ್ದರು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

    ವಸಂತಿ ಅವರು ನೀಡಿದ್ದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಸರ್ಕಾರಿ ಇಲಾಖೆಯ ನಿಯೋಜಿತ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಗೆ ಅಡ್ಡಿ ಮತ್ತು ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.

  • ಮದ್ಯ ಸಿಗುತ್ತಿಲ್ಲವೆಂದು ಬಾವಿಗೆ ಹಾರಿ ಪ್ರಾಣ ಬಿಟ್ಟ

    ಮದ್ಯ ಸಿಗುತ್ತಿಲ್ಲವೆಂದು ಬಾವಿಗೆ ಹಾರಿ ಪ್ರಾಣ ಬಿಟ್ಟ

    ಚಿಕ್ಕೋಡಿ (ಬೆಳಗಾವಿ): ಲಾಕ್‍ಡೌನ್ ಹಿನ್ನೆಲೆ ರಾಜ್ಯದಲ್ಲಿ ಮದ್ಯದ ಅಂಗಡಿ ಬಂದ್ ಆಗಿವೆ. ಪರಿಣಾಮ ಕುಡಿಯುವುದಕ್ಕೆ ಎಣ್ಣೆ ಸಿಗಲಿಲ್ಲವೆಂದು ಬಾವಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕೋಡಿ ತಾಲೂಕಿನ ಕೋಥಳಿ ಗ್ರಾಮದಲ್ಲಿ ನಡೆದಿದೆ.

    ಕೋಥಳಿ ಗ್ರಾಮದ ಪೋಪಟ್ ಈರಪ್ಪ ಬಡಿಗೇರಿ (44) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮದ್ಯದ ಅಂಗಡಿ ಬಂದ್ ಆಗಿದ್ದರಿಂದ ಪೋಪಟ್ ಸೋಮವಾರ ಕುಡಿಯುವುದಕ್ಕೆ ಎಣ್ಣೆ ಸಿಗಲಿಲ್ಲವೆಂದು ಕೋಥಳಿ ಗ್ರಾಮದ ಗಲ್ಲಿ ಗಲ್ಲಿ ಸುತ್ತಿ ನಾಪತ್ತೆಯಾಗಿದ್ದ. ಆದರೆ ಇಂದು ಗ್ರಾಮದ ಹೊರವಲಯದಲ್ಲಿರುವ ಬಾವಿಯಲ್ಲಿ ಶವ ಪತ್ತೆಯಾಗಿದೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಖಡಕಲಾಟ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಖಡಕಲಾಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಏಪ್ರಿಲ್ 14ರವರೆಗೂ ಮದ್ಯ ಇಲ್ಲ:
    ಕುಡುಕರ ಮೇಲೆ ಕೊರೊನಾ ಸೈಡ್ ಎಫೆಕ್ಟ್ ಜಾಸ್ತಿ ಆಗಿದೆ. ಖಿನ್ನತೆಗೆ ಒಳಗಾಗಿ ಇದುವರೆಗೂ 10ಕ್ಕೂ ಹೆಚ್ಚು ವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಕೇರಳ ಮಾದಿಯನ್ನು ಅನುಷ್ಠಾನಕ್ಕೆ ತರಬಹುದು ಎಂಬ ಊಹೆ ಸುಳ್ಳಾಗಿದೆ.

    ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಏಪ್ರಿಲ್ 14ರವರೆಗೂ ಮದ್ಯದಂಗಡಿ ತೆರಯುವ ಪ್ರಶ್ನೆಯೇ ಇಲ್ಲ. ಮದ್ಯ ಬೇಕು ಎನ್ನುವವರು ಇನ್ನೂ ಎರಡು ವಾರ ಕಾಯಲೇ ಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

    ಬಸವರಾಜು ಬೊಮ್ಮಾಯಿ ಮಾತನಾಡಿ, ಈಗಲೇ ರಾಜ್ಯದಲ್ಲಿ ಪರಿಸ್ಥಿತಿ ಸಾಕಷ್ಟು ಬಿಗಡಾಯಿಸಿದೆ. ಈಗ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ ಅವರ ಮೇಲೆ ಅವರಿಗೇ ನಿಯಂತ್ರಣ ಇರಲ್ಲ ಎಂದಿದ್ದಾರೆ. ಅಲ್ಲದೆ ಮದ್ಯ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಹೆಚ್ಚುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದಿದ್ದಾರೆ. ಈ ಮಧ್ಯೆ, ಕೇರಳದಲ್ಲಿ 45 ಮಂದಿ ಕುಡುಕರು, ವೈದ್ಯರಿಂದ ಚೀಟಿ ಬರೆಯಿಸಿಕೊಂಡು ಮದ್ಯ ಪಡೆದುಕೊಂಡಿದ್ದಾರೆ.

  • ಮೈಸೂರು ಎಸಿಪಿ ಸಹೋದರಿ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ನಾಲ್ವರ ಬಂಧನ

    ಮೈಸೂರು ಎಸಿಪಿ ಸಹೋದರಿ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ನಾಲ್ವರ ಬಂಧನ

    – ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪಿ
    – ಕೊಲೆಗೆ ಸುಪಾರಿ ಪಡೆದಿದ್ದ ಗ್ಯಾಂಗ್

    ರಾಮನಗರ: ಚನ್ನಪಟ್ಟಣದಲ್ಲಿ ಹಾಡಹಗಲೇ ನಡೆದಿದ್ದ ಮೈಸೂರು ಎಸಿಪಿ ಸಹೋದರಿ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

    ಹಾಸನದ ರಮೇಶ್ ಅಲಿಯಾಸ್ ಜಾಕಿ, ಬೆಂಗಳೂರಿನ ಕೂಡ್ಲುಗೇಟ್‍ಯ ನೆಲ್ಸನ್, ಪ್ರಜ್ವಲ್ ಹಾಗೂ ಮಧು ಬಂಧಿತ ಆರೋಪಿಗಳು. ಚನ್ನಪಟ್ಟಣದ ಕೆ.ಎಚ್.ಬಿ. ಕಾಲೋನಿಯ ಉತ್ತೇಶ್ ಎಂಬವರ ಮನೆಗೆ ಮಾರ್ಚ್ 8ರಂದು ನುಗ್ಗಿದ್ದ ಆರೋಪಿಗಳು ಉತ್ತೇಶ್ ಅವರ ಪತ್ನಿ, ಮೈಸೂರು ಎಸಿಪಿ ಗೋಪಾಲ್ ಸೋದರಿ ಸುವರ್ಣ ಹಾಗೂ ಮಗಳನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಇದನ್ನೂ ಓದಿ: ತಾಯಿ-ಮಗಳ ಕುತ್ತಿಗೆ ಲಾಂಗ್ ಇಟ್ಟು ದರೋಡೆ, ಎಸಿಪಿ ಫೋಟೋ ನೋಡಿ ಪರಾರಿ

    ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಒಂದು ಮಾರುತಿ ಸ್ವಿಫ್ಟ್ ಡಿಸೈರ್ ಕಾರು, ಮಾರಕಾಸ್ತ್ರಗಳು, 4.10 ಲಕ್ಷ ರೂ. ಮೌಲ್ಯದ 120 ಗ್ರಾಂ ಚಿನ್ನಾಭರಣ ಹಾಗೂ 10 ಸಾವಿರ ರೂ.ವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳ ವಿಚಾರಣೆ ವೇಳೆ ಚನ್ನಪಟ್ಟಣದ ಎರಡು, ಬೆಂಗಳೂರಿನ ಪರಪ್ಪನ ಅಗ್ರಹಾರದ ಒಂದು ಪ್ರಕರಣ ಬೆಳಕಿಗೆ ಬಂದಿವೆ.

    ಆರೋಪಿಗಳು ದರೋಡೆ ಮಾಡುವುದಕ್ಕೆ ಬಂದವರೇ ಅಲ್ಲ. ಬದಲಿಗೆ ಸುಪಾರಿ ಪಡೆದು ಬೆಂಗಳೂರಿನಲ್ಲಿ ನಡೆದ ರೌಡಿ ಶೀಟರ್ ಲಕ್ಷ್ಮಣನ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಬಂದಿದ್ದರು. ಇವರ ಟಾರ್ಗೆಟ್ ಸಿಗದಿದ್ದ ಹಿನ್ನೆಲೆಯಲ್ಲಿ ಅಮಾಯಕರ ಮನೆಗೆ ನುಗ್ಗಿದ್ದರು.

    ರೌಡಿ ಲಕ್ಷ್ಮಣನ ಮರ್ಡರ್ ವೇಳೆ ಆರೋಪಿ ಕ್ಯಾಟ್‍ಗೆ ಚನ್ನಪಟ್ಟಣದ ರೌಡಿ ಶೀಟರ್ ಧ್ರುವ ಫೈನಾನ್ಸ್ ಮಾಡಿದ್ದ. ಇದು ಲಕ್ಷ್ಮಣನ ಕೊಲೆಯ ಬಳಿಕ ವಿಚಾರ ಬೆಳಕಿಗೆ ಬಂದಿತ್ತು. ಈ ವಿಚಾರವಾಗಿ ಪರಪ್ಪನ ಅಗ್ರಹಾರದಿಂದಲೇ ಆರೋಪಿಗಳಿಗೆ ಲಕ್ಷ್ಮಣನ ಶಿಷ್ಯ ಸುಪಾರಿ ನೀಡಿದ್ದ ಎಂಬುದು ಪೊಲೀಸ್ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

    ಪ್ರಕರಣದ ಪ್ರಮುಖ ಆರೋಪಿ ರಮೇಶ್ ಅಲಿಯಾಸ್ ಜಾಕಿ ಅಲಿಯಾಸ್ ಬ್ಲಾಕಿನನ್ನು ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಚಿಕ್ಕಮಳೂರು ಸಮೀಪ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಆಗ ಆತ್ಮ ರಕ್ಷಣೆಗಾಗಿ ಚನ್ನಪಟ್ಟಣ ಗ್ರಾಮಾಂತರ ವೃತ್ತ ನಿರೀಕ್ಷಕ ವಸಂತ್ ಕಾಲಿಗೆ ಗುಂಡಿ ಹಾರಿಸಿದ್ದರು. ಸದ್ಯಕ್ಕೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರಮೇಶ್ ಚಿಕಿತ್ಸೆ ಪಡೆಯುತ್ತಿದ್ದಾನೆ.

  • ಫುಟ್ ಪಾತ್ ಮೇಲೆ ನಿಂತಿದ್ದವರ ಮೇಲೆ ಹರಿದ ಲಾರಿ- ಮೂವರು ಸಾವು

    ಫುಟ್ ಪಾತ್ ಮೇಲೆ ನಿಂತಿದ್ದವರ ಮೇಲೆ ಹರಿದ ಲಾರಿ- ಮೂವರು ಸಾವು

    – ಇಬ್ಬರ ಸ್ಥಿತಿ ಚಿಂತಾಜನಕ, ಪಾನ್ ಶಾಪ್ ನಜ್ಜುಗುಜ್ಜು

    ಬಾಗಲಕೋಟೆ: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಫುಟ್ ಪಾತ್ ಮೇಲೆ ನಿಂತಿದ್ದವರ ಮೇಲೆ ಹರಿದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ನಡೆದಿದೆ.

    ಕೆರೂರು ಪಟ್ಟಣದ ಲಕ್ಷ್ಮಣ ಹಾದಿಮನಿ (32), ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದ ಮಾನಂದಪ್ಪ ಕರಿ (17) ಹಾಗೂ ಹುಬ್ಬಳ್ಳಿಯ ಪೂಜಾ ಹಳಪೇಟೆ (22) ಮೃತ ದುರ್ದೈವಿಗಳು. ಗದಗ ಜಿಲ್ಲೆ ನರಗುಂದದ ನಿವಾಸಿ ಮಂಜುಳಾ ಜವಳಿ (16) ಹಾಗೂ ಪ್ರಜ್ವಲ್ ಕೋಟಿ (16) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಮತ್ತೋರ್ವ ಗಾಯಾಳು ರಾಜೇಸಾಬ್ ಅಗಸಿಮನಿ ಅವರನ್ನು ಕೆರೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಲಾರಿ ಚಾಲಕ ಹುಬ್ಬಳ್ಳಿಯಿಂದ ಬಾಗಲಕೋಟೆಗೆ ವೇಗವಾಗಿ ಹೊರಟಿದ್ದ. ಆದರೆ ಕೆರೂರು ಪಟ್ಟಣದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಫುಟ್ ಪಾತ್‍ಗೆ ನುಗ್ಗಿದೆ. ಪರಿಣಾಮ ಲಾರಿ ಗುದ್ದಿದ ರಭಸಕ್ಕೆ ಕೆಪಿಟಿಸಿಎಲ್ ವಿದ್ಯುತ್ ಪ್ರಸರಣ ಕೇಂದ್ರದ ಕಂಪೌಂಡ್ ಒಡೆದು ಹೋಗಿದೆ. ಅಷ್ಟೇ ಅಲ್ಲದೆ ಪಾನ್‍ಶಾಪ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

    ಫುಟ್ ಪಾತ್ ಮೇಲೆ ಹಾಗೂ ಪಾನ್‍ಶಾಪ್ ಮುಂದೆ ನಿಂತಿದ್ದ ಕೆಲವರು ತಕ್ಷಣವೇ ಪರಾರಿಯಾಗಿದ್ದಾರೆ. ಆದರೆ ಲಾರಿ ಹರಿದು ಮೂರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ರಾಜೇಸಾಬ್ ಅಗಸಿಮನಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಕೊಡಲಾಗುತ್ತಿದೆ.

    ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಕೆರೂರು ಪೊಲೀಸರು ಪರಿಶೀಲನೆ ನಡೆಸಿದರು. ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಆತನಿಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಘಟನೆಗೆ ಚಾಲಕನ ಅಜಾಗರೂಕತೆಯೇ ಕಾರಣ ಎನ್ನಲಾಗಿದೆ.