Tag: Members

  • ಶಿವಗಂಗೆ ಬೆಟ್ಟದ ಸ್ವಚ್ಛತೆಯಲ್ಲಿ ತೊಡಗಿದ ಸರ್ಕಾರಿ ನೌಕರರು

    ಶಿವಗಂಗೆ ಬೆಟ್ಟದ ಸ್ವಚ್ಛತೆಯಲ್ಲಿ ತೊಡಗಿದ ಸರ್ಕಾರಿ ನೌಕರರು

    ಬೆಂಗಳೂರು: ಎತ್ತರದ ಶಿಖರ ಪರ್ವತಗಳ ತಾಣವಾಗಿ ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿರುವ, ರಾಜಧಾನಿಯ ಹೊರವಲಯದ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದಲ್ಲಿ ಇಂದು ಮುಂಜಾನೆ, 300 ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳು ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾಗಿದ್ದರು.

    ಪ್ರವಾಸಿ ತಾಣವಾದ ಶಿವಗಂಗೆ ಬೆಟ್ಟಕ್ಕೆ ದಿನನಿತ್ಯ ಸಾವಿರಾರು ಪ್ರವಾಸಿಗರು ಬಂದು ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾರೆ. ಜೊತೆಗೆ ಬಂದವರು ಹಾಗೆ ಹೋಗದೇ ಅಲ್ಲಲ್ಲಿ ಕಸಗಳನ್ನು ಹಾಕಿ ಹೋಗುತ್ತಾರೆ. ಇದರಿಂದ ಗಿರಿಯ ಸುತ್ತಮುತ್ತ ಸಾಕಷ್ಟು ಪ್ಲಾಸ್ಟಿಕ್ ಹಾಗೂ ಇತರೇ ಕಸಗಳೇ ತುಂಬಿ ಹೋಗಿದೆ. ಶಿವಗಂಗೆ ಬೆಟ್ಟವನ್ನು ಸ್ವಚ್ಛಗೊಳಿಸಿ ಪ್ಲಾಸ್ಟಿಕ್ ಮುಕ್ತ ಗಿರಿಯನ್ನಾಗಿಸಲು ನೆಲಮಂಗಲ ತಾಲೂಕು ಆಡಳಿತ ಮುಂದಾಗಿದ್ದು, ಜೊತೆಗೆ ವಿವಿಧ ತಾಲೂಕಿನ ಅಧಿಕಾರಿಗಳು ಹಾಗೂ ಕೆಲ ಸರ್ಕಾರೇತರ ಸಂಸ್ಥೆಗಳು ಕೈ ಜೊಡಿಸಿ ಗಿರಿಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.

    ಕೊರೆಯುವ ಚಳಿಯಲ್ಲೇ ಮುಂಜಾನೆಯಿಂದಲೇ 300ಕ್ಕೂ ಹೆಚ್ಚು ಸರ್ಕಾರಿ ನೌಕಕರು ಹಾಗೂ ಕ್ಲೀನ್ ಮೌಂಟೇನ್ ಅಸೋಸಿಯೇಷನ್ ಸದಸ್ಯರು ಜೊತೆಗೂಡಿ ಶಿವಗಂಗೆ ಬೆಟ್ಟದ ಸ್ವಚ್ಛತೆಯಲ್ಲಿ ತೊಡಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು, ಶಿವಗಂಗೆ ಬೆಟ್ಟದಿಂದ ನಾವು ಸ್ವಚ್ಛತಾ ಆಂದೋಲನವನ್ನು ಆರಂಭಿಸಿದ್ದೇವೆ. ಮುಂಬರುವ ದಿನಗಳಲ್ಲಿ ತಾಲೂಕಿನ ಎಲ್ಲಾ ಹೋಬಳಿ ಮಟ್ಟದಲ್ಲೂ ಸ್ವಚ್ಛತಾ ಕೆಲಸವನ್ನು ಮಾಡಿ ಪ್ಲಾಸ್ಟಿಕ್ ಮುಕ್ತ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ನಟಿ ರಾಗಿಣಿಗಾಗಿ ಸಭೆಯಲ್ಲಿ ಕಿತ್ತಾಡಿಕೊಂಡ ಪಾಲಿಕೆ ಸದಸ್ಯರು

    ನಟಿ ರಾಗಿಣಿಗಾಗಿ ಸಭೆಯಲ್ಲಿ ಕಿತ್ತಾಡಿಕೊಂಡ ಪಾಲಿಕೆ ಸದಸ್ಯರು

    ಹುಬ್ಬಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮಂಗಳವಾರ ಗದ್ದಲವೋ ಗದ್ದಲ. ನಟಿ ರಾಗಿಣಿಗಾಗಿ ಪಾಲಿಕೆ ಸದಸ್ಯರು ಕಿತ್ತಾಡಿಕೊಂಡು ಸಭೆಯನ್ನು ಅಲ್ಲೋಲ ಕಲ್ಲೋಲ ಮಾಡಿದ್ದಾರೆ. ಮತ್ತೊಂದೆಡೆ ಕುಡಿಯುವ ನೀರಿಗಾಗಿ ಸಭೆ ರಣಾಂಗಣವಾಗಿತ್ತು.

    ಮಂಗಳವಾರ ಹುಬ್ಬಳ್ಳಿಯಲ್ಲಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆಯಿತು. ಪಾಲಿಕೆ ಸಭೆ ಆರಂಭವಾದಾಗಿನಿಂದ ಶುರುವಾದ ಗದ್ದಲ, ಸಭೆ ಮುಗಿಯುವವರೆಗು ಗದ್ದಲವೋ ಗದ್ದಲ. ಅವಳಿ ನಗರದ ಅಭಿವೃದ್ಧಿ ವಿಚಾರವಾಗಿ ಸಭೆಯಲ್ಲಿ ಚರ್ಚೆಯಾಗಬೇಕಿತ್ತು. ಆದರೆ ಪಾಲಿಕೆ ಸದಸ್ಯರು ಚಿತ್ರನಟಿ ರಾಗಿಣಿ ವಿಷಯಕ್ಕೆ ಕಿತ್ತಾಡಿಕೊಂಡಿದ್ದಾರೆ.

    ಅಕ್ಟೋಬರ್ ತಿಂಗಳಿನಲ್ಲಿ ಸ್ವಚ್ಚತೆಯ ಅರಿವು ಮೂಡಿಸಲು, ನಟಿ ರಾಗಿಣಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಾಯಭಾರಿಯಾಗಿ ಆಗಮಿಸಿದ್ದರು. ಇದರ ವೆಚ್ಚ 1 ಲಕ್ಷ 80 ಸಾವಿರ ಹಣವನ್ನು ಪಾಲಿಕೆ ಭರಿಸಬೇಕೆಂದು ಸದಸ್ಯ ಶಿವಾನಂದ್ ಮುತ್ತಣ್ಣ ಸಭೆಯಲ್ಲಿ ಪ್ರಸ್ತಾಪ ಮಾಡುತ್ತಿದ್ದಂತೆ ಉಳಿದ ಸದಸ್ಯರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಗಿಣಿ ಬಂದಾಗಿನ ವೆಚ್ಚವನ್ನು ಪಾಲಿಕೆ ಭರಿಸಬಾರದೆಂದು ಕೆಲ ಸದಸ್ಯರು ಹೇಳುತ್ತಿದ್ದಂತೆ ಸಭೆಯಲ್ಲಿ ಗದ್ದಲ ಶುರುವಾಗಿದೆ. ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸಭೆಯನ್ನೆ ಮೊಟಕುಗೊಳಿಸಲಾಯಿತು.

    ಮುಂಜಾನೆ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ರೊಚ್ಚಿಗೆದ್ದಿದ್ದ ಪಾಲಿಕೆ ಸದಸ್ಯರು ಕುಡಿಯುವ ನೀರಿನ್ನು ಸಮರ್ಪಕವಾಗಿ ನೀಡುತ್ತಿಲ್ಲವೆಂದು ಗಲಾಟೆ ಮಾಡಿದ್ದಾರೆ. ನವನಗರ ಹಾಗೂ ಧಾರವಾಡ ಭಾಗದಲ್ಲಿ 10 ರಿಂದ 15 ದಿನವಾದರು ಸರಿಯಾಗಿ ನೀರು ಸಿಗುತ್ತಿಲ್ಲ. ಕಳೆದ ಮೂರು ತಿಂಗಳಿನಿಂದ ಸಮಸ್ಯೆ ಬಗ್ಗೆ ಹೇಳುತ್ತಿದ್ದರೂ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲವೆಂದು ಜಲಮಂಡಳಿ ಅಧಿಕಾರಿಗಳನ್ನು ಸದಸ್ಯರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಭೆಯ ಬಾವಿಗಿಳಿದು ಆಕ್ರೋಶ ಹೊರಹಾಕಿದ್ದಾರೆ. ಸದಸ್ಯರ ಗಲಾಟೆಯಿಂದಾಗಿ ಸಭೆ ಅಕ್ಷರಶಃ ರಣರಂಗಣವಾಗಿತ್ತು. ಕುಡಿಯುವ ನೀರನ್ನು ಕೊಡಲಾಗದ ಅಧಿಕಾರಿಗಳನ್ನು ಕಿತ್ತೊಗೆಯಿರಿ ಎಂದು ಗಲಾಟೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭ್ರಷ್ಟಾಚಾರ ಬಯಲು ಮಾಡಿದಕ್ಕೆ ಮಾರಣಾಂತಿಕ ಹಲ್ಲೆ!

    ಭ್ರಷ್ಟಾಚಾರ ಬಯಲು ಮಾಡಿದಕ್ಕೆ ಮಾರಣಾಂತಿಕ ಹಲ್ಲೆ!

    ದಾವಣಗೆರೆ: ಗ್ರಾಮ ಪಂಚಾಯ್ತಿಯಲ್ಲಿನ ಭ್ರಷ್ಟಾಚಾರ ಬಯಲಿಗೆಳೆದ ಹಿನ್ನೆಲೆ, ಭ್ರಷ್ಟಾಚಾರ ವಿರೋಧಿ ವೇದಿಕೆ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.

    ಕುಂದೂರು ಗ್ರಾಮ ಪಂಚಾಯ್ತಿಯಲ್ಲಿ ನಡೆದ ಭ್ರಷ್ಟಾಚಾರವನ್ನು ಬಯಲು ಮಾಡಿದಕ್ಕೆ ಹಲ್ಲೆ ಮಾಡಲಾಗಿದೆ. ಭ್ರಷ್ಟಾಚಾರ ವಿರೋಧಿ ವೇದಿಕೆ ಮುಖಂಡ ಪ್ರಸನ್ನ ಕುಮಾರ್ ಮೇಲೆ ಪಂಚಾಯ್ತಿಯ ಕೆಲ ಸದಸ್ಯರು ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಪ್ರಸನ್ನ ಅವರನ್ನು ಹೊನ್ನಾಳಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಪ್ರಸನ್ನ ಕುಮಾರ್ ಅವರು ಕುಂದೂರು ಗ್ರಾಮ ಪಂಚಾಯ್ತಿಯಲ್ಲಿ ನಡೆಯುತ್ತಿದ್ದ ಲಕ್ಷಾಂತರ ರೂಪಾಯಿ ಹಗರಣ ಬಯಲಿಗೆಳೆದಿದ್ದರು. ಅಲ್ಲದೆ ಭ್ರಷ್ಟಾಚಾರ ಬಯಲಿಗೆಳೆದು ಗ್ರಾಮ ಪಂಚಾಯತಿ ಉಪಾಧ್ಯಕ್ಷನ ಸ್ಥಾನವನ್ನು ವಜಾಗೊಳಿಸಿದ್ದರು. ಇದರಿಂದಾಗಿ ಪ್ರಸನ್ನ ಅವರ ಮೇಲೇ ಪಂಚಾಯ್ತಿಯ ಕೆಲ ಸದಸ್ಯರಿಗೆ ದ್ವೇಷ ಹುಟ್ಟಿಕೊಂಡಿತ್ತು. ಆದರಿಂದ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜಮ್ಮ ಹಾಗೂ ಅವರ ಪತಿ, ಮಾಜಿ ಅಧ್ಯಕ್ಷೆ ಗೌರಮ್ಮ ಹಾಗೂ ಅವರ ಮಗ ಮತ್ತು ಕೊಮ್ರಿ ಮಂಜುನಾಥ ಹಾಗೂ ಆಂಜನೇಯ ಎಂಬವರು ಪ್ರಸನ್ನ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಘಟನೆ ಕುರಿತು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಬಿಎಂಪಿ ಸಭಾಂಗಣದ ಒಳಗೆಯೇ ಕಿತ್ತಾಡಿಕೊಂಡ ಕಾಂಗ್ರೆಸ್, ಬಿಜೆಪಿ ಸದಸ್ಯರು! ವಿಡಿಯೋ ನೋಡಿ

    ಬಿಬಿಎಂಪಿ ಸಭಾಂಗಣದ ಒಳಗೆಯೇ ಕಿತ್ತಾಡಿಕೊಂಡ ಕಾಂಗ್ರೆಸ್, ಬಿಜೆಪಿ ಸದಸ್ಯರು! ವಿಡಿಯೋ ನೋಡಿ

    ಬೆಂಗಳೂರು: ಬಿಬಿಎಂಪಿ ಮೇಯರ್ ಸ್ಥಾನಕ್ಕೆ ಭಾರೀ ಪೈಪೋಟಿ ನಡೆದಿದ್ದು, ಬಿಬಿಎಂಪಿ ಪದ್ಮನಾಭ ರೆಡ್ಡಿ ಕಚೇರಿ ಮುಂದೆ ಹಾಗೂ ಸಭಾಂಗಣದ ಒಳಗೆ ಸದಸ್ಯರು ಕಿತ್ತಾಡಿದ್ದರು.

    ಕಚೇರಿ ಒಳಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಪರಸ್ಪರ ಕಿತ್ತಾಡಿಕೊಳ್ಳುವ ಮೂಲಕ ರೌಡಿಗಳಂತೆ ವರ್ತಿಸಿದ್ದರು. ಸತೀಶ್ ರೆಡ್ಡಿ ಹಾಗೂ ವಿಶ್ವನಾಥ್ ನಡುವೆ ತಳ್ಳಾಟ ಜೋರಾಗಿ ನಡೆದಿದ್ದು, ಬಿಜೆಪಿ ಸದಸ್ಯರನ್ನು ಹೈಜಾಕ್ ಮಾಡಿದ್ದಾರೆ ಎಂದು ಗಂಭೀರವಾದ ಆರೋಪ ಕೇಳಿಬಂದಿದೆ. ಈ ವೇಳೆ ಭೈರತಿ ಸುರೇಶ್ ಹಾಗೂ ಸತೀಶ್ ರೆಡ್ಡಿ ನಡುವೆ ನೂಕಾಟ ಏರ್ಪಟ್ಟಿತ್ತು.

    ಬೈರಸಂದ್ರ ವಾರ್ಡ್ ಕಾರ್ಪೋರೇಟರ್ ನಾಗರಾಜನನ್ನು ಬಲವಂತವಾಗಿ ಬಿಜೆಪಿ ಸದಸ್ಯರು ಎಳೆದುಕೊಂಡು ಹೋಗಿದ್ದರು. ಈ ವೇಳೆ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರ ನಡುವೆ ಭಾರೀ ಗದ್ದಲ ಏರ್ಪಟ್ಟಿತ್ತು. ಅಲ್ಲದೇ ಸತೀಶ್ ರೆಡ್ಡಿ ಬೆಂಬಲಿಗನ್ನು ಕಾಂಗ್ರೆಸ್ ನಾಯಕರು ಹೈಜಾಕ್ ಮಾಡಿಕೊಂಡಿದ್ದಾರೆ ಅಂತ ತಮ್ಮ ಬೆಂಬಲಿಗನನ್ನು ಹೊರ ತರಲು ಮುಂದಾದ ಸತೀಶ್ ರೆಡ್ಡಿ ವಿರುದ್ಧ ಕಾಂಗ್ರೆಸ್ ಸದಸ್ಯರು ಅಡ್ಡಹಾಕಿ ಗೊಂದಲ ಸೃಷ್ಟಿಸಿದ್ದರು.

    ಈ ಮೊದಲು ಬಿಜೆಪಿ ಜೊತೆ ಇದ್ದ ಪಕ್ಷೇತರ ಶಾಸಕ ಆನಂದ್, ಸಭಾಂಗಣದಲ್ಲಾದ ರಾಜಕೀಯ ಬೆಳವಣಿಗೆಗಳಿಂದ ಕಾಂಗ್ರೆಸ್ ಪಾಲಾಗಿದ್ದರು. ಅಲ್ಲದೇ ತಮ್ಮ ಬೆಂಬಲಿಗನ್ನು ಪಡೆಯಲು ಮುಂದಾದ ಸತೀಶ್ ರೆಡ್ಡಿಯನ್ನು ಶಾಸಕ ಮುನಿರತ್ನ ಹಾಗೂ ಭೈರತಿ ಸುರೇಶ್ ತಡೆದಿದ್ದರು. ಶಾಸಕರು ಹಾಗೂ ಸದಸ್ಯರ ಕಿತ್ತಾಟವನ್ನು ಕಂಡ ಕೇಂದ್ರ ಸಚಿವ ಸದಾನಂದಗೌಡ ಮೂಕ ಪ್ರೇಕ್ಷಕರಂತೆ ನಿಂತಿದ್ದರು.

    ಇವರ ಗಲಾಟೆಯ ನಡುವೆ ಸಭೆಯ ಪ್ರಾರಂಭಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಹಾಕಲಾಗಿತ್ತು. ಆದರೆ ರಾಷ್ಟ್ರಗೀತೆಯ ನಡುವೆಯೇ ಸದಸ್ಯರು ತಮ್ಮ ಕಿತ್ತಾಟ ಮುಂದುವರಿದಿತ್ತು. ಬಿಬಿಎಂಪಿಯ ಎಲ್ಲಾ ವಿದ್ಯಮಾನಗಳನ್ನು ಸಚಿವ ಶಾಸಕ ರಾಮಲಿಂಗಾರೆಡ್ಡಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕರೆ ಮಾಡಿ ಮಾಹಿತಿ ನೀಡುತ್ತಿದ್ದರು.

    ಸದಸ್ಯರ ಕಿತ್ತಾಟದ ನಡುವೆಯೆ ಚುನಾವಣಾ ಅಧಿಕಾರಿ ಚುನಾವಣೆಯನ್ನು ಘೋಷಣೆ ಮಾಡಿದ್ದಾರೆ. ಅಲ್ಲದೇ ಎಲ್ಲಾ ಸದಸ್ಯರಗೂ ನಿಗಧಿತ ಸ್ಥಳಗಳಲ್ಲಿ ಕುಳಿತುಕೊಳ್ಳಲು ಸೂಚನೆ ನೀಡಿದ್ದರು. ಸದಸ್ಯರ ಹಾಜರಾತಿಯನ್ನು ಪಡೆಯಲು ಅಧಿಕಾರಿಗಳು ಸೂಚಿಸಿದ್ದ ಮೇರೆಗೆ, ಸದಸ್ಯರ ಹಾಜರಾತಿಯನ್ನು ಸಿಬ್ಬಂದಿಗಳು ಪಡೆದುಕೊಳ್ಳುತ್ತಿದ್ದರು. ಸದ್ಯ ಬಿಬಿಎಂಪಿ ಚುನಾವಣೆ ಮುಗಿದಿದ್ದು, ಮೇಯರ್ ಆಗಿ ಗಂಗಾಂಭಿಕೆ ಹಾಗೂ ಉಪ ಮೇಯರ್ ಆಗಿ ರಮೀಳಾ ಉಮಾಶಂಕರ್ ಆಯ್ಕೆಯಾಗಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಈಗಲ್ ಟನ್ ರೆಸಾರ್ಟ್ ನಿಂದ ನೇರವಾಗಿ ಬೆಂಗ್ಳೂರಿನತ್ತ ಬಿಬಿಎಂಪಿ ಪಕ್ಷೇತರ ಸದಸ್ಯರು!

    ಈಗಲ್ ಟನ್ ರೆಸಾರ್ಟ್ ನಿಂದ ನೇರವಾಗಿ ಬೆಂಗ್ಳೂರಿನತ್ತ ಬಿಬಿಎಂಪಿ ಪಕ್ಷೇತರ ಸದಸ್ಯರು!

    ರಾಮನಗರ: ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಪಕ್ಷೇತರ ಸದಸ್ಯರು ಬಿಡದಿಯ ಈಗಲ್ ಟನ್ ರೆಸಾರ್ಟ್ ನಿಂದ ನೇರವಾಗಿ ಚುನಾವಣೆಯಲ್ಲಿ ಭಾಗವಹಿಸಲು ತೆರಳಲಿದ್ದಾರೆ.

    ಬಿಜೆಪಿಯಿಂದ ಹೈಜಾಕ್ ಮಾಡುವ ಭೀತಿಯಿಂದ ಕಾಂಗ್ರೆಸ್‍ನ ಶಾಸಕರು ಐವರು ಬಿಬಿಎಂಪಿ ಪಕ್ಷೇತರ ಸದಸ್ಯರನ್ನ ಈಗಲ್‍ಟನ್‍ಗೆ ರೆಸಾರ್ಟ್ ಗೆ ಗುರುವಾರ ಕರೆತಂದಿದ್ದರು. ಐವರು ಪಕ್ಷೇತರ ಸದಸ್ಯರ ಹೊಣೆ ಹೊತ್ತಿರುವ ಶಾಸಕರಾದ ಮುನಿರತ್ನ, ಎಸ್.ಟಿ ಸೋಮಶೇಖರ್ ಹಾಗೂ ಭೈರತಿ ಬಸವರಾಜ್ ಕೂಡಾ ಈಗಲ್ ಟನ್ ರೆಸಾರ್ಟ್ ನಲ್ಲೇ ಉಳಿದಿದ್ದಾರೆ.

    ಇದೇ ವೇಳೆ ಮಾತನಾಡಿದ ಶಾಸಕ ಭೈರತಿ ಬಸವರಾಜ್ ಪಕ್ಷೇತರ ಸದಸ್ಯರನ್ನು ಬಿಜೆಪಿ ಹಲವು ಆಮಿಷಗಳನ್ನು ಒಡ್ಡುವ ಮೂಲಕ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಈಗಲ್ ಟನ್ ರೆಸಾರ್ಟ್ ಗೆ ಕರೆ ತಂದಿದ್ದೇವೆ. ಇಲ್ಲಿಂದಲೇ ನೇರವಾಗಿ ಚುನಾವಣೆಯಲ್ಲಿ ಭಾಗವಹಿಸುತ್ತೇವೆ. ಬಿಜೆಪಿ ಜೊತೆಗೆ ಹೋಗಿರುವ ಇನ್ನಿಬ್ಬರು ಪಕ್ಷೇತರ ಸದಸ್ಯರಾದ ಆನಂದ್ ಹಾಗೂ ರಮೇಶ್‍ರನ್ನ ಸಂಪರ್ಕಿಸಿ ಮಾತನಾಡಿದ್ದೇವೆ. ಅವರು ಕೂಡಾ ನಮ್ಮ ಜೊತೆ ಬರುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೇ ನಾವು ಕೂಡಾ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದರು.

    ಪಕ್ಷೇತರ ಬಿಬಿಎಂಪಿ ಸದಸ್ಯ ಲಕ್ಷ್ಮಿನಾರಾಯಣ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾದಂತೆ, ಬಿಬಿಎಂಪಿಯಲ್ಲೂ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತೆ. ರಮೇಶ್ ಹಾಗೂ ಆನಂದ್ ಗೆ ಏನಾಗಿದೆ ಎಂಬುದು ಗೊತ್ತಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿದೆ, ಮೊನ್ನೆ ಜೊತೆಗಿದ್ದವರು ಇಂದು ಸಂಪರ್ಕಕ್ಕೆ ಸಿಕ್ಕಿಲ್ಲ. ನಮಗೆ ಸಹಕಾರ ನೀಡಿದಂತೆ ಅವರಿಗೂ ನೀಡಿದ್ದರು. ನಾವು ಮೂರು ವರ್ಷಗಳಿಂದ ಜೊತೆಯಲ್ಲಿದ್ದೇವೆ ಮುಂದೆಯೂ ಇರುತ್ತೇವೆ. ಕಾಂಗ್ರೆಸ್-ಜೆಡಿಎಸ್ ಪಕ್ಷೇತರ ಸದಸ್ಯರೆಲ್ಲಾ ಸೇರಿ ಬಿಬಿಎಂಪಿ ಅಧಿಕಾರ ಚುಕ್ಕಾಣಿ ಹಿಡಿಯುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗ್ಳೂರು ಮೂಲದ ಉತ್ತಿಷ್ಠ ಭಾರತ ಸಂಘಟನೆ ಕಾರ್ಯಕರ್ತರಿಂದ ಅಂಜನಾದ್ರಿ ಪರ್ವತದಲ್ಲಿ ಸ್ವಚ್ಛತಾ ಕಾರ್ಯ!

    ಬೆಂಗ್ಳೂರು ಮೂಲದ ಉತ್ತಿಷ್ಠ ಭಾರತ ಸಂಘಟನೆ ಕಾರ್ಯಕರ್ತರಿಂದ ಅಂಜನಾದ್ರಿ ಪರ್ವತದಲ್ಲಿ ಸ್ವಚ್ಛತಾ ಕಾರ್ಯ!

    ಕೊಪ್ಪಳ: ಬೆಂಗಳೂರು ಮೂಲದ ಉತ್ತಿಷ್ಠ ಭಾರತ ಸಂಘಟನೆ ಕಾರ್ಯಕರ್ತರು ಭಾನುವಾರ ಅಂಜನಾದ್ರಿ ಪರ್ವತದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದರು.

    ಐಟಿ ಬಿಟಿಯಲ್ಲಿ ಕೆಲಸ ಮಾಡುವ 50 ಜನರ ತಂಡ ಆಂಜನೇಯನ ಜನ್ಮ ಸ್ಥಳ ಅಂಜನಾದ್ರಿ ಪರ್ವತಕ್ಕೆ ಶನಿವಾರ ಆಗಮಿಸಿತ್ತು. ಆಂಜನೇಯನ ದರ್ಶನ ಪಡೆದು ನಂತರ ನೂರಾರು ಭಕ್ತರ ಜೊತೆ ಸಾಮೂಹಿಕ ಹನುಮಾನ್ ಚಾಲಿಸ್ ಪಾರಾಯಣ ಮಾಡಿದ್ದರು.

    ದರ್ಶನದ ಬಳಿಕ ಉತಿಷ್ಠ ಭಾರತ ತಂಡ ಮತ್ತು ಗಂಗಾವತಿಯ ಭಾರತ್ ಸೇವಾ ಟ್ರಸ್ಟ್ ಸದಸ್ಯರು ಅಂಜನಾದ್ರಿ ಪರ್ವತದಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಿದ್ದರು. ಮಧ್ಯಾಹ್ನದವರೆಗೂ ಶ್ರಮದಾನ ಮಾಡಿದ ಕಾರ್ಯಕರ್ತರು ನಂತರ ಪಂಪಾ ಸರೋವರವನ್ನು ಸ್ವಚ್ಛಗೊಳಿಸಿದರು. ಕಳೆದ 2014ರ ಜುಲೈ 27ರಂದು ಲೋಕಾರ್ಪಣೆಗೊಂಡಿರೋ ಸಂಘಟನೆ, ಯುವಕರಲ್ಲಿ ದೇಶಭಕ್ತಿ ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ.

  • ಕಲಬುರಗಿ ಸಿಇಓ ವಿರುದ್ಧ ಗುಡುಗಿದ ಜಿಲ್ಲಾ ಪಂಚಾಯತ್ ಸದಸ್ಯರು

    ಕಲಬುರಗಿ ಸಿಇಓ ವಿರುದ್ಧ ಗುಡುಗಿದ ಜಿಲ್ಲಾ ಪಂಚಾಯತ್ ಸದಸ್ಯರು

    ಕಲಬುರಗಿ: ಜಿಲ್ಲೆಯ ಜಿಲ್ಲಾ ಪಂಚಾಯತ್ ನಲ್ಲಿ ಪಕ್ಷಭೇದ ಮರೆತು ಎಲ್ಲಾ ಸದಸ್ಯರು ಸಿಇಓ ವಿರುದ್ಧ ಒಟ್ಟಾಗಿ ಆಕ್ರೊಶ ವ್ಯಕ್ತಪಡಿಸಿದ್ದಾರೆ.

    ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಸಿಇಓ ಹೆಬ್ಸಿಬಾರಾಣಿ ಕೋರ್ಲಪಾಟಿ ಮಧ್ಯೆ ಮುಸುಕಿನ ಗುದ್ದಾಟ ಮುಗಿಯೋ ಲಕ್ಷಣ ಗೋಚರಿಸುತ್ತಿಲ್ಲ. ಕಳೆದ ಬಾರಿ 11 ನೇ ಜಿಲ್ಲಾ ಪಂಚಾಯತ್ ಸಭೆಯನ್ನ ಖುದ್ದು ಸಿಇಓ ಅವರೇ ಕರೆದು, ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತಾರದೇ ಸಭೆಗೆ ಗೈರಾಗಿ ವಿದೇಶ ಪ್ರವಾಸ ಕೈಗೊಂಡಿದ್ದರು. ಆದರೆ ಇಂದು 12 ನೇ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಪಕ್ಷಬೇಧ ಮರೆತು ಸದಸ್ಯರೆಲ್ಲರು ಸಿಇಓ ವಿರುದ್ಧ ಮುಗಿಬಿದ್ದಿದ್ದಾರೆ.

    ಅರಳಗುಂಡಗಿ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ರೇವಣಸಿದ್ದಪ್ಪ ಸಂಕಾಲೆ ತಾಳ್ಮೆ ಕಳೆದುಕೊಂಡು ಸಿಇಓ ಹೆಬ್ಸಿಬಾರಾಣಿ ಕೋರ್ಲಪಾಟಿರನ್ನ ಏಕವಚನದಲ್ಲಿ ಕ್ಲಾಸ್ ತೆಗೆದುಕೊಂಡರು. ಸದಸ್ಯರಿಗೆ ಹಾಗೂ ಸಭೆಗೆ ಗೌರವ ಕೊಡಬೇಕು ಅನ್ನೊದು ನಿನಗೆ ಗೊತ್ತಿಲ್ವ, ಇಷ್ಟು ದಿನ ಏನಾಗಿತ್ತು, ಭ್ರಷ್ಟ ಅಧಿಕಾರಿಗಳ ವಿರುದ್ಧ ಯಾಕೆ ನೀನು ಕ್ರಮ ತೆಗೆದುಕೊಳ್ಳುತ್ತಿಲ್ಲ, ಮಾನ್ಯ ಅಧ್ಯಕ್ಷರೆ ನೀವು ಸಿಇಓ ಮಾತಿಗೆ ಮರಳಾಗಬೇಡಿ ಎಂದು ಗುಡುಗಿದರು.

    ಅಲ್ಲದೇ ಇತರ ಸದಸ್ಯರು ಕೂಡ ಸಿಇಓ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ನಿಮ್ಮ ಸೇವೆ ನಮಗೆ ಅವಶ್ಯಕತೆಯಿಲ್ಲ, ನೀವು ಇಲ್ಲಿಂದ ಹೊರಟುಹೋಗಿ ಅಂತಾ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

    ಸಭೆಗೂ ಮುನ್ನ ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ಒಟ್ಟಿಗೆ ಸಭೆ ನಡೆಸಿದ್ದರು. ಸಭೆಯ ಬಗ್ಗೆ ಹಾಗೂ ಸಿಇಓ ವಿರುದ್ಧ ಕೈಗೊಳ್ಳಬೇಕಾದ ನಿರ್ಣಯಗಳ ಬಗ್ಗೆ ಚರ್ಚಿಸಿದ್ದರು ಎನ್ನಲಾಗಿದೆ. ಒಟ್ಟಾರೆಯಾಗಿ ಕಲಬುರಗಿ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಅಭಿವೃದ್ದಿ ವಿಷಯಗಳ ಬಗ್ಗೆ ಚರ್ಚಿಸದೇ, ಕೇವಲ ಸಿಇಓ ವಿರುದ್ದ ತಮ್ಮ ಆಕ್ರೋಶವನ್ನ ಹೊರಹಾಕಿದ್ದು, ಅಂತಿಮವಾಗಿ ಯಾರ ಕೈ ಮೇಲಾಗುತ್ತೆ ಅನ್ನೊದು ತೀವ್ರ ಕೂತುಹಲಕ್ಕೆ ಎಡೆ ಮಾಡಿಕೊಟ್ಟಿದೆ.

  • ಸಾಲಮನ್ನಾಗೆ 1 ತಿಂಗಳ ವೇತನ ನೀಡಿದ ಬಿಬಿಎಂಪಿ ಸದಸ್ಯರು

    ಸಾಲಮನ್ನಾಗೆ 1 ತಿಂಗಳ ವೇತನ ನೀಡಿದ ಬಿಬಿಎಂಪಿ ಸದಸ್ಯರು

    ಬೆಂಗಳೂರು: ರೈತರ ಸಾಲ ಮನ್ನಕ್ಕೆ ಮುಂದಾಗಿರುವ ಎಚ್‍ಡಿ ಕುಮಾರಸ್ವಾಮಿಯವರಿಗೆ ಅಭಿನಂದನೆ ತಿಳಿಸಿದ ಬಿಬಿಎಂಪಿ ಸದಸ್ಯರು, ಎಲ್ಲಾ ಸದಸ್ಯರ ಒಂದು ತಿಂಗಳ ವೇತನವನ್ನು ಸಾಲಮನ್ನಾಕ್ಕಾಗಿ ಸಹಾಯ ಧನವನ್ನಾಗಿ ನೀಡಲು ನಿರ್ಧರಿಸಿದ್ದಾರೆ.

    ಶುಕ್ರವಾರ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಎಲ್ಲಾ ಸದಸ್ಯರು ಒಮ್ಮತದ ಒಪ್ಪಿಗೆ ಸೂಚಿಸಿದ್ದು, ಪ್ರತಿ ಸದಸ್ಯರ ಮಾಸಿಕ ತಲಾ 7,500 ರೂ. ಹಾಗೂ ಹೆಚ್ಚುವರಿ ಭತ್ಯೆಯಾಗಿ ದೊರೆಯುವ 1ಸಾವಿರ ರೂ. ಅಲ್ಲದೇ ಮೇಯರ್ ರ 20 ಸಾವಿರ ರೂ., ಉಪ ಮೇಯರ್ 16 ಸಾವಿರ ರೂ. ವೇತನವನ್ನು ನೀಡುವುದಾಗಿ ತೀರ್ಮಾನಿಸಿದ್ದಾರೆ. ಅದರಂತೆ, ಒಟ್ಟಾರೆಯಾಗಿ ಬಿಬಿಎಂಪಿಯಿಂದ 17.18 ಲಕ್ಷ ರೂ.ಗಳನ್ನು ಸಾಲಮನ್ನಕ್ಕಾಗಿ ನೀಡಲಾಗುತ್ತಿದೆ.

    ಇನ್ನು ಸಭೆ ಆರಮಭವಾಗುತ್ತಿದಂತೆ ರಾಜ್ಯ ಬಜೆಟ್ ಸ್ವಾಗತಿಸಿದ ಕಾಂಗ್ರೆಸ್ ಪಕ್ಷದ ನಾಯಕ ಶಿವರಾಜ್ ಅವರು, ಬಜೆಟ್‍ನಲ್ಲಿ ಬೆಂಗಳೂರಿಗೆ ಅನೇಕ ಕೊಡುಗೆ ನೀಡಲಾಗಿದೆ. ಮೆಟ್ರೋ, ರಸ್ತೆ, ಮೂಲಭೂತ ಸೌಕರ್ಯ ನೀಡಿರುವುದು ಸ್ವಾಗತ. ರೈತರ ಸಾಲ ಮನ್ನಾ ಮಾಡಿರುವುದು ಉತ್ತಮ ಬೆಳವಣಿಗೆ. ಬೆಂಗಳೂರು ನಗರ ಜನ ರೈತರನ್ನೇ ನಂಬಿಕೊಂಡಿದ್ದಾರೆ. ಅದ್ದರಿಂದ ಸಾಲಮನ್ನಾ ನೇರವಾಗಲು ಒಂದು ತಿಂಗಳ ಸದಸ್ಯರ ವೇತನ ನೀಡುವಂತೆ ಮನವಿ ಮಾಡಿದದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಸಂಪತ್ ರಾಜ್, ನನ್ನ ಎರಡು ತಿಂಗಳ ಕೊಡುತ್ತೇನೆಂದರು. ಅಲ್ಲದೇ ವಿರೋಧ ಪಕ್ಷದ ಸದಸ್ಯರು ಸಹ ಒಪ್ಪಿಗೆ ಸೂಚಿಸಿದರು.

  • ಶೌಚಾಲಯ ಕಟ್ಟಿಸಿಕೊಳ್ಳದ ಮನೆ ಮುಂದೆ ಪುರಸಭೆ ಅಧಿಕಾರಿಗಳ ಧರಣಿ

    ಶೌಚಾಲಯ ಕಟ್ಟಿಸಿಕೊಳ್ಳದ ಮನೆ ಮುಂದೆ ಪುರಸಭೆ ಅಧಿಕಾರಿಗಳ ಧರಣಿ

    ದಾವಣಗೆರೆ: ಶೌಚಾಲಯ ಕಟ್ಟಿಸಿಕೊಳ್ಳದ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದಲ್ಲಿ ಮನೆ ಮುಂದೆ ಪುರಸಭೆ ಅಧಿಕಾರಿಗಳು ಕುಳಿತು ವಿನೂತನವಾಗಿ ಪ್ರತಿಭಟಿಸಿದ್ದಾರೆ.

    ಮಲೆಬೆನ್ನೂರು ಗ್ರಾಮದ ಪುರಸಭೆ ವ್ಯಾಪ್ತಿಯ 4ನೇ ವಾರ್ಡ್ ನ ಕಾಲಭೈರವ ರಸ್ತೆಯಲ್ಲಿರುವ ರುದ್ರಗೌಡರ ಮನೆ ಮುಂದೆ ಅಧಿಕಾರಿಗಳು ಧರಣಿ ನಡೆಸಿದರು. ರುದ್ರಗೌಡರಿಗೆ ಈಗಾಗಲೇ ಮೂರು ತಿಂಗಳ ಹಿಂದೆಯೇ ಶೌಚಾಲಯ ನಿರ್ಮಾಣಕ್ಕೆ ಸಹಾಯ ಧನ ಮಂಜೂರಾಗಿತ್ತು. ಆದರೆ ಮನೆಯಲ್ಲಿ ಮೂರು ತಿಂಗಳ ಬಾಣಂತಿ ಇರುವುದರಿಂದ ಶೌಚಾಲಯ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ.

    ಮನೆಯಲ್ಲಿ ಬಾಣಂತಿ ಇದ್ದರೆ ಗುಂಡಿ ಅಗೆಯಬಾರದು ಎನ್ನುವ ಮೌಢ್ಯಕ್ಕೆ ಜೋತು ಬಿದ್ದ ರುದ್ರಗೋಡ ಶೌಚಾಲಯ ನಿರ್ಮಾಣ ಮಾಡಿಸಿಲ್ಲ. ಹೀಗಾಗಿ ಪುರಸಭೆ ಮುಖ್ಯಾಧಿಕಾರಿ ಎಸ್.ಎನ್. ನಾಗರತ್ನ, ಕಂದಾಯ ಅಧಿಕಾರಿ ರಾಜು ಬಣಕಾರ್, ಆರೋಗ್ಯ ಅಧಿಕಾರಿ ಗುರುಪ್ರಸಾದ್ ಮತ್ತು ಪುರಸಭೆ ಸದಸ್ಯರು ರುದ್ರಗೌಡ ಮನೆ ಮುಂದೆ ಕುಳಿತು ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು.

    ಅಧಿಕಾರಿಗಳು ಮತ್ತು ಸದಸ್ಯರು ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‍ಗಳಿದ್ದು, ವಾರ್ಡ್‍ವಾರು ಬಯಲು ಮುಕ್ತ ಶೌಚಾಲಯ ಮಾಡಲು ಸಂಕಲ್ಪ ಮಾಡಿದ್ದಾರೆ. ಈಗಾಗಲೇ 14ನೇ ವಾರ್ಡ್ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಣೆಯಾಗಿದೆ. ಆದರೆ 4ನೇ ವಾರ್ಡ್ ನಲ್ಲಿ ರುದ್ರಗೌಡ ಮನೆಯಲ್ಲಿ ಶೌಚಾಲಯ ನಿರ್ಮಿಸಿದರೆ ಇಡೀ ವಾರ್ಡ್ ಬಯಲು ಮುಕ್ತ ಶೌಚಾಲವಾಗಲಿದೆ. ( ಇದನ್ನೂ ಓದಿ: ಎಳೇ ವಯಸ್ಸಿನಲ್ಲೇ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸ್ತಿದ್ದಾಳೆ ಬಸವನಬಾಗೇವಾಡಿಯ ಪೃಥ್ವಿ )

    ಕಳೆದ ಮೂರು ತಿಂಗಳಿನಿಂದ ರುದ್ರಗೌಡರ ಮನವೊಲಿಸಲು ಅಧಿಕಾರಿಗಳು ಮತ್ತು ಸದಸ್ಯರು ಯತ್ನಿಸಿ ವಿಫಲರಾಗಿದ್ದರು. ಆದ್ದರಿಂದ ಸತತ ಮೂರು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದ್ದಾರೆ. ಪರಿಣಾಮ ರುದ್ರಗೌಡ ಮುಜುಗರಕ್ಕೆ ಒಳಗಾಗಿದ್ದಾರೆ. ಸಂಜೆ ವೇಳೆಗೆ ಮನೆಯಿಂದ ಹೊರಬಂದ ರುದ್ರಗೌಡ ಶೌಚಗೃಹ ನಿರ್ಮಾಣ ಕಾರ್ಯ ಆರಂಭಿಸುವ ಭರವಸೆ ನೀಡಿದ್ದಾರೆ. ಭರವಸೆ ದೊರೆತ ಬಳಿಕ ಅಧಿಕಾರಿಗಳು ಸಂಜೆ ಧರಣಿ ವಾಪಸ್ ಪಡೆದಿದ್ದಾರೆ. ( ಇದನ್ನೂ ಓದಿ: ಮನೆಯಲ್ಲಿ ಶೌಚಾಲಯ ಇಲ್ಲದ್ದಕ್ಕೆ ಮಾವ, ಮೈದುನನ ವಿರುದ್ಧ ದೂರು ನೀಡಿದ ಸೊಸೆ )