Tag: Members

  • ಬಹುಮತವಿದ್ದರೂ ಗ್ರಾಪಂ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲು – ಕಾಂಗ್ರೆಸ್ ಬೆಂಬಲಿತ 9 ಸದಸ್ಯರಿಂದ ರಾಜೀನಾಮೆ

    ಬಹುಮತವಿದ್ದರೂ ಗ್ರಾಪಂ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲು – ಕಾಂಗ್ರೆಸ್ ಬೆಂಬಲಿತ 9 ಸದಸ್ಯರಿಂದ ರಾಜೀನಾಮೆ

    ಚಾಮರಾಜನಗರ: ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕಾಗಿ ರಾಜಕೀಯ ಪಕ್ಷಗಳ ನಡುವಿನ ಗುದ್ದಾಟ ತಾರಕಕ್ಕೇರಿದ್ದು, ಕಾಂಗ್ರೆಸ್ ಬೆಂಬಲಿತ 9 ಸದಸ್ಯರು ತಮ್ಮ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

    ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮುಕ್ಕಡಹಳ್ಳಿ ಗ್ರಾಮ ಪಂಚಾಯ್ತಿ ಗೊಂದಲದ ಗೂಡಾಗಿ ಮಾರ್ಪಟ್ಟಿದೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅಧ್ಯಕ್ಷ ಗಾದಿ ಬಿಜೆಪಿ ಪಾಲಾಗಿದೆ. 15 ಸದಸ್ಯ ಬಲದ ಗ್ರಾಪಂ ಇದಾಗಿದ್ದು, 9 ಕಾಂಗ್ರೆಸ್ ಬೆಂಬಲಿತ, 6 ಸದಸ್ಯರು ಬಿಜೆಪಿ ಬೆಂಬಲಿತರಿದ್ದಾರೆ. ಆದರೆ ಮೇ 19ರಂದು ನಡೆದ ಅಧ್ಯಕ್ಷ ಚುನಾವಣೆಯ ಗೌಪ್ಯ ಮತದಾನದಲ್ಲಿ ಬಿಜೆಪಿ ಬೆಂಬಲಿತ ಭಾಸ್ಕರ್‌ಗೆ ಎಂಟು ಮತ ದೊರೆತಿದ್ದು ಬಹುಮತ ಸಾಧಿಸಿದ್ದರೂ ಕಾಂಗ್ರೆಸ್ ನೆಲಕಚ್ಚಬೇಕಾಗಿದೆ. ಇದನ್ನೂ ಓದಿ: ಅಸ್ಸಾಂನಲ್ಲಿ ಭೀಕರ ಪ್ರವಾಹ – 14ಕ್ಕೇರಿದ ಸಾವಿನ ಸಂಖ್ಯೆ

    ಚುನಾವಣಾಧಿಕಾರಿ ಕುಮ್ಮಕ್ಕಿನಿಂದಲೇ ಈ ರೀತಿಯ ಅವ್ಯವಹಾರ ನಡೆದಿದೆ. ಕಾಂಗ್ರೆಸ್ ಬೆಂಬಲಿತ 9 ಸದಸ್ಯರಲ್ಲಿ ಒಬ್ಬರೂ ಅಡ್ಡ ಮತದಾನ ಮಾಡಿಲ್ಲ. ಶಾಸಕ ನಿರಂಜನಕುಮಾರ್ ಅವರ ಕುಮ್ಮಕ್ಕಿನಿಂದ ಚುನಾವಣಾಧಿಕಾರಿ ಬ್ಯಾಲೆಟ್ ಪೇಪರ್ ತಿರುಚಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕಾಗಿ ಶಾಸಕರನ್ನು ಖರೀದಿಸಿದಂತೆ ಬಿಜೆಪಿಯವರು ಗ್ರಾಪಂ ಆಡಳಿತವು ತಮಗೆ ಬೇಕೆಂದು ಈ ರೀತಿ ಅಡ್ಡದಾರಿ ಹಿಡಿದಿದ್ದಾರೆ. ಜಿಲ್ಲಾಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಮರುಚುನಾವಣೆ ನಡೆಸಿ ಪ್ರಜಾಪ್ರಭುತ್ವದ ಆಶಯಗಳನ್ನು ಕಾಪಾಡಬೇಕು ಎಂದು ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬಿಗಡಾಯಿಸಿತೇ ಬಿಡದಿ ನಿತ್ಯಾನಂದನ ಆರೋಗ್ಯ..?

    ಶಾಸಕರ ಕುಮ್ಮಕ್ಕಿನಿಂದ ಚುನಾವಣಾಧಿಕಾರಿ ಅಕ್ರಮ ಎಸಗಿದ್ದಾರೆ ಎಂಬ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ. ಕಾಂಗ್ರೆಸ್ ಬೆಂಬಲಿತ ಇಬ್ಬರು ಸದಸ್ಯರೇ ನಮಗೆ ವೋಟು ನೀಡಿದ್ದಾರೆ. ಆಪರೇಷನ್ ಕಮಲ ಮಾಡುವ ಯಾವ ಅವಶ್ಯಕತೆಯೂ ಇಲ್ಲ. ಅಧ್ಯಕ್ಷ ಸ್ಥಾನ ತಪ್ಪಿತಲ್ಲ ಎಂಬ ಹತಾಷೆಯಿಂದ ಕಾಂಗ್ರೆಸ್‍ನವರು ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಚುನಾವಣೆ ಪಾರದರ್ಶಕತೆಯಿಂದ ನಡೆದಿದ್ದು ತನಿಖೆ ನಡೆಸಲಿ. ಸುಖಾ ಸುಮ್ಮನೆ ಕ್ಷೇತ್ರ ಶಾಸಕರ ಮೇಲೆ ಗುರುತರ ಆರೋಪ ಮಾಡುವುದು ಸರಿಯಲ್ಲ ಎಂದು ಬಿಜೆಪಿ ಮುಖಂಡರೊಬ್ಬರು ಪ್ರತಿಕ್ರಿಯಿಸಿದ್ದಾರೆ.

    ಗ್ರಾಪಂನ 9 ಸದಸ್ಯರ ಸಾಮೂಹಿಕ ರಾಜೀನಾಮೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಧಿಕಾರಕ್ಕಾಗಿ ಬಿಜೆಪಿ ಅಡ್ಡ ದಾರಿ ಹಿಡಿದಿದೆಯೋ ಅಥವಾ ಕಾಂಗ್ರೆಸ್ ಬೆಂಬಲಿತ ಸದಸ್ಯರು ಸ್ವ-ಇಚ್ಛೆಯಿಂದ ಬಿಜೆಪಿ ಬೆಂಬಲಿತ ಸದಸ್ಯರಿಗೆ ಮತದಾನ ಮಾಡಿದ್ದಾರೋ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.

  • ಕೆಪಿಎಸ್‍ಸಿ ಸದಸ್ಯರಾಗಿ ಬಿ.ವಿ ಗೀತಾ ನೇಮಕ

    ಕೆಪಿಎಸ್‍ಸಿ ಸದಸ್ಯರಾಗಿ ಬಿ.ವಿ ಗೀತಾ ನೇಮಕ

    ಬೆಂಗಳೂರು: ಕೆಪಿಎಸ್‍ಸಿ ಗೆ ಸದಸ್ಯರ ನೇಮಕ ಬಿ.ವಿ.ಗೀತಾ ಅವರನ್ನು ಕೆಪಿಎಸ್‍ಸಿ ಸದಸ್ಯರಾಗಿ ನೇಮಿಸಿ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ.

    ಗೀತಾ ಅವರನ್ನು ವರ್ಷಗಳ ಹಿಂದೆ ಮಾಹಿತಿ ಆಯೋಗದ ಆಯುಕ್ತರಾಗಿ ಬೆಳಗಾವಿ ಪೀಠಕ್ಕೆ ನೇಮಕ ಮಾಡಲಾಗಿತ್ತು. ಅವರನ್ನೇ ಈಗ ಕೆಪಿಎಸ್‍ಸಿ ಸದಸ್ಯರಾಗಿ ನೇಮಕ ಮಾಡಲಾಗಿದೆ. ಈ ಹಿಂದೆ ಗೀತಾ ಅವರು ಹೈಕೋರ್ಟ್ ನ್ಯಾಯವಾದಿಯಾಗಿಯೂ ಕೂಡಾ ಕೆಲಸ ಮಾಡಿದ್ದರು. ಇದನ್ನೂ ಓದಿ: ಶೀಘ್ರವೇ ಸ್ವಯಂ ಚಾಲಿತ ಕಾರುಗಳನ್ನು ಬಿಡುಗಡೆ ಮಾಡಲಿದ್ದಾರೆ ಮಸ್ಕ್

  • ಕಾಂಗ್ರೆಸ್ ಸದಸ್ಯತ್ವ ಬೇಕಾದ್ರೆ ಷರತ್ತು ಅನ್ವಯ

    ಕಾಂಗ್ರೆಸ್ ಸದಸ್ಯತ್ವ ಬೇಕಾದ್ರೆ ಷರತ್ತು ಅನ್ವಯ

    ನವದೆಹಲಿ: ಕಾಂಗ್ರೆಸ್ ಸದಸ್ಯತ್ವ ಸ್ವೀಕರಿಸಲು ಇಚ್ಛಿಸುವವರು ಇನ್ಮುಂದೆ ಮದ್ಯ, ಮಾದಕ ದ್ರವ್ಯ ಸೇವನೆ ಮಾಡಲ್ಲ ಎಂದು ಘೋಷಣೆ ಮಾಡಿ ಕೊಳ್ಳಬೇಕು. ಪಕ್ಷದ ಕಾರ್ಯಕ್ರಮ, ನೀತಿಗಳನ್ನು ಸಾರ್ವಜನಿಕವಾಗಿ ಟೀಕಿಸುವುದಿಲ್ಲ ಎಂಬ ವಾಗ್ದಾನ ಮಾಡಬೇಕಾಗಿದೆ.

    ಕಾಂಗ್ರೆಸ್ ನ.1ರಿಂದ ಸದಸ್ಯತ್ವ ಅಭಿಯಾನವನ್ನು ಆರಂಭಿಸಲಿದ್ದು, ಅದರ ಫಾರಂನಲ್ಲಿ ಹೊಸದಾಗಿ ಪಕ್ಷದ ಸದಸ್ಯತ್ವ ಬಯಸುವವರು ದೇಶದ ಕಾನೂನು ಮೀರಿ ಯಾವುದೇ ಸ್ವತ್ತು ಹೊಂದಿಲ್ಲ ಮತ್ತು ಪಕ್ಷ ಸೂಚಿಸಿದ ಯಾವುದೇ ಕೆಲಸ, ಕಾರ್ಯಗಳಲ್ಲಿ ತೊಡಗಿಕೊಳ್ಳುವುದಾಗಿ ಒಪ್ಪಿಕೊಳ್ಳಬೇಕು ಎಂಬ ಅಂಶಗಳಿವೆ. ಇದನ್ನೂ ಓದಿ:  14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

    ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಅಧ್ಯಕ್ಷ ಮಧುಸೂಧನ್ ಮಿಸ್ತ್ರಿ ಮುಂದಿನ ವರ್ಷ ಆ.21 ರಿಂದ ಸೆ. 20ರವರೆಗೆ ನಡೆಯಲಿರುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ನ.1 ರಿಂದ ಮಾ.31ರವರೆಗೆ ಸದಸ್ಯತ್ವ ಅಭಿಯಾನವನ್ನು ಆರಂಭಿಸುತ್ತಿದೆ. ಹೀಗಾಗಿ ಕಾಂಗ್ರೆಸ್ ಸದಸ್ಯರೆಲ್ಲರೂ ಪಕ್ಷದ ಸಂವಿಧಾನವನ್ನು ಒಪ್ಪಿಕೊಳ್ಳಲೇಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮನ ದ್ರೋಹಿಗಳಿಂದ ಅಂತರ ಕಾಯ್ದುಕೊಳ್ಳಿ: ಯೋಗಿ ಆದಿತ್ಯನಾಥ್

    ಷರತ್ತುಗಳೇನು?
    * ನಾನು ಪ್ರಮಾಣೀಕರಿಸಿದ ಖಾದಿ ಬಟ್ಟೆಯನ್ನು ತೊಡುವ ಅಭ್ಯಾಸ ಇರುವವನು.
    * ನನಗೆ ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆಯ ಚಟಗಳಿಲ್ಲ.
    * ನಾನು ಸಾಮಾಜಿಕ ಅಸಮಾನತೆಯನ್ನೂ ನಂಬಲ್ಲ ಮತ್ತು ಪಾಲಿಸಲ್ಲ.
    * ಜಾತಿ, ಧರ್ಮ ಎಂಬ ಬೇಧವಿಲ್ಲದೆ ಸಾಮಾಜಿಕ ಏಕತೆಯಲ್ಲಿ ನಂಬಿಕೆ ಇದೆ.
    * ಕಾನೂನು ಮೀರಿ ನಾನು ಹೆಚ್ಚಿನ ಆಸ್ತಿಯನ್ನು ಹೊಂದಿಲ್ಲ.
    * ಕಾರ್ಯಕಾರಿ ಸಮಿತಿ ನಿರ್ಧರಿಸಿದ ಯಾವುದೇ ಕೆಲಸಕ್ಕೂ ನಾನು ಸಿದ್ಧ.

  • ಗನ್ ತೋರಿಸಿ ಯುವತಿ ಮೇಲೆ ಗ್ರಾ.ಪಂ. ಸದಸ್ಯನಿಂದಲೇ ರೇಪ್

    ಗನ್ ತೋರಿಸಿ ಯುವತಿ ಮೇಲೆ ಗ್ರಾ.ಪಂ. ಸದಸ್ಯನಿಂದಲೇ ರೇಪ್

    ಆನೇಕಲ್: ಮಾಡೆಲಿಂಗ್ ಕೆಲಸದ ಆಮಿಷವೊಡ್ಡಿ ಯುವತಿಯನ್ನು ತನ್ನ ಮನೆಗೆ ಕರೆಸಿಕೊಂಡ ಗ್ರಾಮ ಪಂಚಾಯತ್ ಸದಸ್ಯನೊಬ್ಬ ಆಕೆಗೆ ಗನ್ ತೋರಿಸಿ ಅತ್ಯಾಚಾರವೆಸಗಿದ್ದಾನೆ.

    ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಬಿಲ್ಲವಾರದಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಅಹಮದ್ ಪಾಷಾ ಅತ್ಯಾಚಾರ ಆರೋಪಿ. ಈತನಿಗೆ ಫೇಸ್‍ಬುಕ್ ನಲ್ಲಿ ಬೆಂಗಳೂರಿನ ಹೆಬ್ಬಾಳ ಮೂಲದ ಯವತಿಯೊಬ್ಬಳ ಪರಿಚಯವಾಗಿತ್ತು. ಇದನ್ನೂ ಓದಿ: ಸಂಚಾರಿ ವಿಜಯ್ ಹೆಸರಲ್ಲಿ ಗಿಣಿ ದತ್ತು ಪಡೆದ ಬಿಗ್‍ಬಾಸ್ ಸ್ಪರ್ಧಿ ಚಂದ್ರಚೂಡ್

    ಆಕೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಕೂಡಿಸುವುದಾಗಿ ನಂಬಿಸಿ ಮೊಬೈಲ್ ನಂಬರ್ ಪಡೆದಿದ್ದ. ಅಲ್ಲದೆ ತಾನು ಬನ್ನೇರುಘಟ್ಟ ಕಾರ್ಪೋರೇಟರ್ ಎಂದೂ ಹೇಳಿಕೊಂಡಿದ್ದ. ಲಾಕ್‍ಡೌನ್ ಹಿನ್ನೆಲೆ ಬಡವರಿಗೆ ಆಹಾರ್ ಕಿಟ್ ವಿತರಣೆ ಮಾಡುತ್ತಿರುವ ಫೋಟೋಗಳನ್ನೂ ಆಕೆಗೆ ವಾಟ್ಸಪ್ ಮೂಲಕ ಕಳುಹಿಸಿ ತಾನೊಬ್ಬ ಸಭ್ಯಸ್ಥ, ಪರೋಪಕಾರಿ ಎಂದು ಹೇಳಿ ವಿಶ್ವಾಸ ಗಿಟ್ಟಿಸಿಕೊಂಡಿದ್ದ.

    ಸೋಮವಾರ ಅಹಮದ್ ಪಾಷಾ ನಿನಗೆ ಕೆಲಸ ಕೊಡಿಸುತ್ತೇನೆ. ಮಾತನಾಡಬೇಕಿದೆ ನನ್ನ ಮನೆಗೆ ಬಾ ಎಂದು ತನ್ನ ಚಾಲಕನ ಮೂಲಕ ಓಲಾಕ್ಯಾಬ್ ಬುಕ್ ಮಾಡಿಸಿ ಶಾನಭೋಗನಹಳ್ಳಿಯ ತನ್ನ ಮನೆಗೆ ಯುವತಿಯನ್ನು ಕರೆಸಿಕೊಂಡಿದ್ದ. ಮನೆಗೆ ಬಂದ ಯುವತಿ ಮೇಲೆ ಅಹಮದ್ ಪಾಷಾ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಇದಕ್ಕೆ ವಿರೋಧಿಸಿದ ಯುವತಿಗೆ ಗನ್ ತೋರಿಸಿ ಬೆದರಿಸಿದ್ದಾನೆ. ಅಲ್ಲದೆ, ಆಕೆಯ ನಗ್ನ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿಯೂ ಹೆದರಿಸಿದ್ದಾನೆ ಎಂದು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಅಹಮದ್ ಪಾಷ, ಇದೇ ರೀತಿ ಸುಮಾರು 10 ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ತಲೆಮರೆಸಿಕೊಂಡಿರುವ ಅಹಮದ್ ಪಾಷಾ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

  • ನಗರಸಭೆ ಸಾಮಾನ್ಯ ಸಭೆಯಲ್ಲೂ ಜಟಾಪಟಿ- ಅಂಗಿ ಕಳಚಿ ಗದ್ದಲ ಸೃಷ್ಟಿಸಿದ ಸದಸ್ಯರು

    ನಗರಸಭೆ ಸಾಮಾನ್ಯ ಸಭೆಯಲ್ಲೂ ಜಟಾಪಟಿ- ಅಂಗಿ ಕಳಚಿ ಗದ್ದಲ ಸೃಷ್ಟಿಸಿದ ಸದಸ್ಯರು

    ಕೋಲಾರ: ವಿಧಾನಸಭೆಯಲ್ಲಿ ಭದ್ರಾವತಿ ಶಾಸಕ ಸಂಗಮೇಶ ಶರ್ಟ್ ಬಿಚ್ಚಿ ದುರ್ವರ್ತನೆ ತೋರಿದರೆ, ಇತ್ತ ಕೋಲಾರದ ನಗರಸಭೆ ಸದಸ್ಯರೊಬ್ಬರೂ ಅಂಗಿ ಕಳಚಿದ ಪ್ರಸಂಗ ನಡೆದಿದೆ.

    ಇಂದು ನಡೆದ ಕೋಲಾರ ನಗರಸಭೆಯ ವಿಶೇಷ ತುರ್ತು ಸಭೆಯಲ್ಲಿ ಘಟನೆ ನಡೆದಿದ್ದು, ನಗರ ವ್ಯಾಪ್ತಿಯಲ್ಲಿರುವ ಅಂಬೇಡ್ಕರ್ ಭವನಗಳ ನವೀಕರಣಕ್ಕೆ ಹಣ ಮೀಸಲಿಡುವ ಬಗ್ಗೆ ಚರ್ಚೆ ನಡೆಸುವ ಸಂದರ್ಭದಲ್ಲಿ ಘಟನೆ ನಡೆದಿದೆ. ಈಗಾಗಲೇ ನಿರ್ಮಾಣವಾಗಿರುವ ಭವನಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದ್ದು, ಇದಕ್ಕೆ ಹಣ ಮೀಸಲಿಡಬೇಕು ಎಂದು ಒಂದು ಬಣ ಒತ್ತಾಯಿಸಿದೆ.

    ಇನ್ನೊಂದು ಬಣ ಇದಕ್ಕೆ ವಿರೋಧ ವ್ಯಕ್ತಪಡಿಸಿ ಸಮಾಜಕಲ್ಯಾಣ ಇಲಾಖೆ ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಹ ಹಣ ಬಿಡುಗಡೆಯಾಗುತ್ತದೆ. ನಗರಸಭೆಯಿಂದಲೂ ಅದಕ್ಕೆ ಅನುದಾನ ಏಕೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಪರ ವಿರೋಧದ ಚರ್ಚೆ ತಾರಕಕ್ಕೆ ಹೋಗಿ ಸದಸ್ಯರು ಮತ್ತು ಸ್ಥಾಯಿ ಸಮೀತಿ ಅಧ್ಯಕ್ಷರು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು.

    ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ಸದಸ್ಯರು ದೊಂಬಿ ಸೃಷ್ಟಿಸಿ, ಗಲಾಟೆ ಮಾಡಿದರು. ಈ ವೇಳೆ ಕಾಂಗ್ರೆಸ್‍ನ ಅಂಬರೀಶ್ ಮತ್ತು ಸ್ಥಾಯಿ ಸಮೀತಿ ಅಧ್ಯಕ್ಷ ಮಂಜುನಾಥ್, ಮತ್ತೊರ್ವ ಸದಸ್ಯ ಮುಬಾರಕ್ ಸೇರಿದಂತೆ ಬಹುತೇಕರು ವಾಗ್ವಾದಕ್ಕೆ ಇಳಿದು ಪರಿಸ್ಥಿತಿ ಮಿತಿ ಮೀರಿತು. ಸದಸ್ಯ ಅಂಬರೀಶ್ ತಮ್ಮ ಅಂಗಿಯನ್ನ ಕಳಚಿ ಪ್ರತಿಭಟನೆಗೆ ಇಳಿದರು. ನಗರಸಭೆ ಕಮೀಷನರ್ ಶ್ರೀಕಾಂತ್ ಮತ್ತು ಅಧ್ಯಕ್ಷೆ ಶ್ವೇತ ಶಬರೀಶ್ ಏನೂ ಮಾಡಲಾಗದೆ ಅಸಹಾಯಕರಾಗಿ ಕುಳಿತಿದ್ದರು. ನಂತರ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದ್ದು, ಇದಕ್ಕೆ ಹಣ ಬಿಡುಗಡೆ ಮಾಡಬೇಕೆಂಬ ವಿಚಾರ ಇನ್ನೂ ಗೊಂದಲದಲ್ಲಿಯೇ ಮುಂದುವರೆಯಿತು.

  • ಜಿ.ಪ ಸದಸ್ಯರ ಹೆಸ್ರಲ್ಲಿ ನಕಲಿ ಸಹಿ ಮಾಡಿ ನನ್ನ ಹೆದರಿಸಲು ಬರ್ತಿದ್ದಾರೆ: ಅಧ್ಯಕ್ಷೆ ಶ್ವೇತಾ ದೇವರಾಜ್

    ಜಿ.ಪ ಸದಸ್ಯರ ಹೆಸ್ರಲ್ಲಿ ನಕಲಿ ಸಹಿ ಮಾಡಿ ನನ್ನ ಹೆದರಿಸಲು ಬರ್ತಿದ್ದಾರೆ: ಅಧ್ಯಕ್ಷೆ ಶ್ವೇತಾ ದೇವರಾಜ್

    ಹಾಸನ: ಹಾಸನ ಜಿಲ್ಲಾ ಪಂಚಾಯಿತಿಯಲ್ಲಿ ಈಗ ನಕಲಿ ಮತ್ತು ಮೋಸದ ಸಹಿಯ ಆರೋಪ ಸದ್ದು ಮಾಡುತ್ತಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ತಮ್ಮನ್ನು ಹೆದರಿಸಲು ಜಿಲ್ಲಾ ಪಂಚಾಯಿತಿ ಸದಸ್ಯರಲ್ಲದವರು ಕೂಡ ಸದಸ್ಯರೆಂದು ಹೇಳಿಕೊಂಡು ನಕಲಿ ಸಹಿಯ ಪತ್ರ ಕಳುಹಿಸಿ ಬೆದರಿಸಲು ಬರುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಹಾಸನದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಿನ ಜಟಾಪಟಿ ಇದು ಹೊಸದೇನಲ್ಲ. ಆದರೆ ಇದೆಲ್ಲದರ ನಡುವೆ ಹಾಸನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್, ಜೆಡಿಎಸ್ ಮುಖಂಡರ ವಿರುದ್ಧ ನಕಲಿ ಮತ್ತು ಮೋಸದ ಸಹಿಯ ಗಂಭೀರ ಆರೋಪ ಮಾಡಿದ್ದಾರೆ. ನಾನು ಸಾಮಾನ್ಯ ಸಭೆ ಕರೆದಿಲ್ಲ, ಹಲವು ವಿಷ್ಯಗಳ ಬಗ್ಗೆ ಚರ್ಚಿಸಬೇಕು ಎಂದು ಜೆಡಿಎಸ್ ಮುಖಂಡ, ಜಿಲ್ಲಾಪಂಚಾಯಿತಿ ಉಪಾಧ್ಯಕ್ಷ ಸ್ವರೂಪ್ ಅವರ ಕಚೇರಿಯಿಂದ ಸದಸ್ಯರ ಸಹಿಯಿರುವ ಪತ್ರ ಬಂದಿದೆ ಎಂದಿದ್ದಾರೆ.

    ಈ ಪತ್ರದಲ್ಲಿ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸದಸ್ಯರ ಹೆಸರಿನಲ್ಲಿ ಪೋರ್ಜರಿ ಸಹಿ ಹಾಕಿದ್ದಾರೆ. ಅದರಲ್ಲೂ ಪತ್ರದಲ್ಲಿ ಬಾಣವಾರ ಜಿಲ್ಲಾ ಪಂಚಾಯತ್ ಸದಸ್ಯ ಅಶೋಕ್ ಬಿ ಎಸ್ ಎಂಬುವವರ ಹೆಸರಲ್ಲಿ ಸಹಿ ಹಾಕಲಾಗಿದೆ. ಆದರೆ ಈ ಅಶೋಕ್ 2018ರಲ್ಲೇ ಹಾಸನ ಜಿಲ್ಲಾ ಪಂಚಾಯತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಅವರು ಇತ್ತೀಚೆಗೆ ನೀಡಿರುವ ದೂರಿನ ಪತ್ರಕ್ಕೆ ಸಹಿಹಾಕಲು ಹೇಗೆ ಸಾಧ್ಯ ಎಂಬ ಪ್ರೆಶ್ನೆ ಮಾಡಿದ್ದಾರೆ.

    ಅಷ್ಟೇ ಅಲ್ಲದೇ ಜಿಲ್ಲಾ ಪಂಚಾಯತ್ ಸದಸ್ಯೆ ಶ್ವೇತಾ ಆನಂದ್ ಎಂಬುವವರು ಕಾಂಗ್ರೆಸ್ ಪಕ್ಷದವರು. ಆದರೆ ತನ್ನ ವಿರುದ್ಧ ಬಂದಿರುವ ಪತ್ರದಲ್ಲಿ ಅವರ ಸಹಿಯೂ ಇದೆ. ಈಗ ಅವರನ್ನ ಕೇಳಿದರೆ ನಾನು ಸಹಿ ಹಾಕಿಲ್ಲ ಎಂದಿದ್ದಾರೆ. ಈ ಬಗ್ಗೆ ಸದಸ್ಯೆ ಶ್ವೇತಾ ಆನಂದ್ ಪ್ರತಿಕ್ರಿಯೆ ನೀಡಿದ್ದು, ನಾನು ಅಧ್ಯಕ್ಷೆ ವಿರುದ್ಧ ಯಾವುದೇ ದೂರಿನ ಪತ್ರಕ್ಕೆ ಸಹಿ ಹಾಕಿಲ್ಲ. ಬದಲಾಗಿ ಎರಡು ವರ್ಷದ ಹಿಂದೆ ನನ್ನನ್ನೂ ಸೇರಿದಂತೆ 23 ಸದಸ್ಯರಿಗೆ ಅಧಿಕಾರದ ಆಸೆ ತೋರಿಸಿ, ರೇವಣ್ಣ ಹಾಗೂ ಭವಾನಿ ರೇವಣ್ಣ ಹೊಳೆನರಸೀಪುರದ ಅವರ ಮನೆಯಲ್ಲಿ, ಖಾಲಿ ಹಾಳೆಗೆ ಸಹಿ ಹಾಕಿಸಿಕೊಂಡಿದ್ದರು. ಅದನ್ನು ಈಗ ಅಧ್ಯಕ್ಷೆ ವಿರುದ್ಧ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.

    ನಕಲಿ ಮತ್ತು ಮೋಸದ ಸಹಿ ಬಗ್ಗೆ ದೂರು ದಾಖಲಿಸುವುದಾಗಿ ಈಗಾಗಲೇ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಚ್ಚರಿಕೆ ನೀಡಿದ್ದಾರೆ. ಆದರೆ ಹಾಸನ ಜನ ಮಾತ್ರ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರಿಬ್ಬರ ವಿರುದ್ಧವೂ ಬೇಸರ ಹೊರಹಾಕುತ್ತಿದ್ದಾರೆ. ಇಬ್ಬರೂ ಒಟ್ಟಾಗಿ ಅಧಿಕಾರ ನಡೆಸುವುದು ಬಿಟ್ಟು ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತ ಅಭಿವೃದ್ಧಿ ಕೆಲಸವನ್ನೇ ಮರೆತುಬಿಟ್ಟಿದ್ದಾರೆ ಎಂದು ಕಿಡಿಕಾರುತ್ತಿದ್ದಾರೆ.

  • ಗ್ರೀನ್ ಝೋನ್ ಚಿತ್ರದುರ್ಗಕ್ಕೆ ಬಂದ ತಬ್ಲಿಘಿಗಳು

    ಗ್ರೀನ್ ಝೋನ್ ಚಿತ್ರದುರ್ಗಕ್ಕೆ ಬಂದ ತಬ್ಲಿಘಿಗಳು

    ಚಿತ್ರದುರ್ಗ: ಕೊರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳದೆ ಗ್ರೀನ್ ಝೋನ್‍ನಲ್ಲಿರು ಚಿತ್ರದುರ್ಗಕ್ಕೆ ತಬ್ಲಿಘಿಗಳು ವಾಪಸ್ ಆಗಿದ್ದಾರೆ.

    ಭಾರತದಲ್ಲಿ ಕೊರೊನಾ ಶುರುವಾದಾಗ ವಿದೇಶಕ್ಕೆ ತೆರಳಿದ್ದ ಚಿತ್ರದುರ್ಗ ಮೂಲದ ಓರ್ವ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದ್ದದಿಂದ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದರು. ಮಹಿಳೆ ಗುಣಮುಖರಾಗಿ ಮನೆ ಸೇರಿದ ಬಳಿಕ ನಿಟ್ಟುಸಿರು ಬಿಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಯಾರಿಗೂ ಸೋಂಕು ಕಾಣಿಸಿಕೊಳ್ಳದೆ ಗ್ರೀನ್ ಝೋನ್‍ನಲ್ಲಿದೆ. ಆದರೆ ಮಂಗಳವಾರ ಗುಜರಾತ್‍ನಿಂದ ಬಂದಿರುವ 33ಜನ ತಬ್ಲಿಘಿಗಳು ಬಂದಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದುರ್ಗ ಡಿಎಚ್‍ಓ ಡಾ.ಪಾಲಾಕ್ಷ ಅವರು, ಅದೃಷ್ಟವಶಾತ್ ಅವರೆಲ್ಲರೂ ಸಹ ಈಗಾಗಲೇ ಗುಜರಾತ್‍ನಲ್ಲಿ ತಪಾಸಣೆಗೊಳಪಟ್ಟಿದ್ದು, 30 ದಿನಗಳ ಕ್ವಾರಂಟೈನ್ ಸಹ ಮುಗಿಸಿದ್ದಾರೆ. ಆದರೂ ಅವರನ್ನು ಮುಂಜಾಗ್ರತಾಕ್ರಮವಾಗಿ ಚಿತ್ರದುರ್ಗದ ಸರ್ಕಾರಿ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಹಾಗೆಯೇ ಮತ್ತೊಮ್ಮೆ ಅವರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸುವುದರ ಜೊತೆಗೆ ಅವರ ಮೇಲೆ ಒಂದು ವಾರಗಳ ಕಾಲ ನಿಗಾ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

    ಚಿತ್ರದುರ್ಗಕ್ಕೆ ವಾಪಸ್ ಆಗಿರುವ ತಬ್ಲಿಘಿಗಳೆಲ್ಲರೂ ಚಿತ್ರದುರ್ಗ, ತುಮಕೂರು ಮೂಲದವರಾಗಿದ್ದು, ಅವರಲ್ಲಿ ಚಿತ್ರದುರ್ಗದ 15 ಜನ ಹಾಗೂ ತುಮಕೂರಿನ 18 ಜನ ತಬ್ಲಿಗಿಗಳು ಒಂದೇ ಬಸ್‍ನಲ್ಲಿ ವಾಪಸ್ ಆಗಿದ್ದಾರೆ. ಅವರು ಗುಜರಾತ್‍ನ ಅಹಮದಾಬಾದ್‍ನಲ್ಲಿ ಮಾರ್ಚ್ 8ರಂದು ನಡೆದ ತಬ್ಲಿಘಿ ಸಭೆಗೆ ತೆರಳಿದ್ದರು. ಲಾಕ್‍ಡೌನ್ ಸಡಿಲಿಕೆಯಿಂದಾಗಿ ಸೋಮವಾರ ಗುಜರಾತಿನಿಂದ ಪ್ರಯಾಣ ಬೆಳೆಸಿ ಇಂದು ಅವರ ಸ್ವಗ್ರಾಮಗಳಿಗೆ ತೆರಳಲು ಆಗಮಿಸಿದ್ದಾರೆ. ಆದರೆ ಎಚ್ಚೆತ್ತ ಜಿಲ್ಲೆಯ ಪೊಲೀಸರು ಚಿತ್ರದುರ್ಗ ತಾಲೂಕಿನ ಬೊಗಳೇರಹಟ್ಟಿ ಚೆಕ್ ಪೋಸ್ಟ್ ಬಳಿ ಅವರನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಹೀಗಾಗಿ ಕೋಟೆನಾಡಿನ ಮಂದಿ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯಾಧಿಕಾರಿ ಮನವಿ ಮಾಡಿದ್ದಾರೆ.

    ಜಿಲ್ಲಾ ಆರೋಗ್ಯಾಧಿಕಾರಿಗಳು ಕೂಡ ಚಿತ್ರದುರ್ಗದ 15 ಜನರನ್ನು ಮಾತ್ರ ಇಲ್ಲಿ ಕ್ವಾರಂಟೈನ್ ಮಾಡಿದ್ದು, 18 ಜನರನ್ನು ತುಮಕೂರಿಗೆ ಕಳಿಸಿದ್ದಾರೆ. ಆದರೆ ಈವರೆಗೆ ನಿರಾತಂಕವಾಗಿ ಯಾವುದೇ ಭಯವಿಲ್ಲದೇ ನಿರ್ಭಯವಾಗಿ ಓಡಾಡುತ್ತಿದ್ದ ಚಿತ್ರದುರ್ಗದ ಜನರು ತಬ್ಲಿಘಿಗಳ ಆಗಮನದಿಂದ ಮತ್ತೆ ಚಿಂತಾಕ್ರಾಂತರಾಗಿದ್ದಾರೆ.

  • ಸಿಎಂ ಅಧ್ಯಕ್ಷತೆಯಲ್ಲಿ ಅಂಬರೀಶ್ ಸ್ಮಾರಕ ಪ್ರತಿಷ್ಠಾನ ಸಮಿತಿ ರಚನೆ

    ಸಿಎಂ ಅಧ್ಯಕ್ಷತೆಯಲ್ಲಿ ಅಂಬರೀಶ್ ಸ್ಮಾರಕ ಪ್ರತಿಷ್ಠಾನ ಸಮಿತಿ ರಚನೆ

    ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಕನ್ನಡದ ಮೇರು ನಟರಾದ ಡಾ. ರಾಜ್‍ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಪ್ರತಿಷ್ಠಾನದಂತೆಯೇ ಅಂಬರೀಶ್ ಅವರ ಸ್ಮಾರಕ ನಿರ್ಮಾಣ ಪ್ರತಿಷ್ಠಾನ ನಿರ್ಮಿಸಲು ಸರ್ಕಾರ ಮುಂದಾಗಿದೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತಾತ್ಮಕ ನಿರ್ಣಯ, ರೂಪು ರೇಷೆ, ಅನುಷ್ಠಾನ ಹಾಗೂ ಕಾರ್ಯಕ್ರಮಗಳ ನಿರ್ವಹಣೆಗಳ ಪರಿಶೀಲನೆಗಾಗಿ ಸಿಎಂ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಎಂಟು ಸದಸ್ಯರ ಅಂಬರೀಶ್ ಸ್ಮಾರಕ ಪ್ರತಿಷ್ಠಾನ ಸಮಿತಿಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ, ಆಯುಕ್ತರು ಅಥವಾ ನಿರ್ದೇಶಕರು, ಅಂಬರೀಶ್ ಅವರ ಪತ್ನಿ ಸಂಸದೆ ಸುಮಲತಾ, ಅವರ ಪುತ್ರ ಅಭಿಷೇಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಅಥವಾ ಅವರ ಪ್ರತಿನಿಧಿ, ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರು ಅಥವಾ ಅವರ ಪ್ರತಿನಿಧಿ ಹಾಗೂ ಕಂಠೀರವ ಸ್ಟೂಡಿಯೋದ ವ್ಯವಸ್ಥಾಪಕ ನಿರ್ದೇಶಕರು ಈ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

  • ಮಹಾನಗರ ಪಾಲಿಕೆ ಉಗ್ರಾಣಕ್ಕೆ ಪಾಲಿಕೆ ಸದಸ್ಯರಿಗೆ ಎಂಟ್ರಿ ಇಲ್ಲ

    ಮಹಾನಗರ ಪಾಲಿಕೆ ಉಗ್ರಾಣಕ್ಕೆ ಪಾಲಿಕೆ ಸದಸ್ಯರಿಗೆ ಎಂಟ್ರಿ ಇಲ್ಲ

    ಮೈಸೂರು: ಜಿಲ್ಲೆಯ ಮಹಾನಗರ ಪಾಲಿಕೆಯ ಉಗ್ರಾಣದ ಪರಿಶೀಲನೆಗೆ ಹೋದ ನಗರಪಾಲಿಕೆ ಸದಸ್ಯರಿಗೆ ಸಿಬ್ಬಂದಿ ತಡೆ ಹಾಕಿದ್ದಾರೆ. ಏಕಾಏಕಿ ಉಗ್ರಾಣಕ್ಕೆ ಹೋದ ಪಾಲಿಕೆ ಸದಸ್ಯರುಗಳನ್ನು ಉಗ್ರಾಣ ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ.

    ಸದಸ್ಯರನ್ನು ತಡೆದ ಉಗ್ರಾಣದ ಸಿಬ್ಬಂದಿ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ನಗರಪಾಲಿಕೆ ಸದಸ್ಯರನ್ನು ಕಳ್ಳರ ರೀತಿ ನೋಡಿ ಅವಮಾನ ಮಾಡುತ್ತಿದ್ದಾರೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ. ಉಗ್ರಾಣದ ಸಿಬ್ಬಂದಿ ದೊಡ್ಡಯ್ಯ ಏರು ಧ್ವನಿಯಲ್ಲಿ ಪ್ರಶ್ನೆ ಮಾಡಿದ್ದನ್ನು ಖಂಡಿಸಿ ಉಗ್ರಾಣ ಸಿಬ್ಬಂದಿಯನ್ನು ಪಾಲಿಕೆ ಸದಸ್ಯರು ತರಾಟೆಗೆ ತೆಗೆದುಕೊಂಡರು.

    ಅವಧಿ ಮುಗಿದಿರುವ ಸೊಳ್ಳೆ ಔಷದಿ, ಪೌಡರ್ ಬಳಕೆ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಉಗ್ರಾಣಕ್ಕೆ ಇಬ್ಬರು ಮಹಿಳಾ ಪಾಲಿಕೆ ಸದಸ್ಯರು ಭೇಟಿ ನೀಡಿದ್ದರು. ನಗರ ಪಾಲಿಕೆ ಸದಸ್ಯರ ಪರಿಸ್ಥಿತಿಯೇ ಹೀಗಾದರೆ ಇನ್ನೂ ಸಾಮಾನ್ಯ ಜನರ ಕಥೆ ಏನು ಎಂದು ನಗರಪಾಲಿಕೆ ಸದಸ್ಯೆ ಡಾ. ಅಶ್ವಿನಿ ಶರತ್ ಹಾಗೂ ಬೇಗಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಲ್ಲದೆ ನಗರಪಾಲಿಕೆ ಸದಸ್ಯರನ್ನು ಅವಾಯ್ಡ್ ಮಾಡಲು ಕಾರಣ ಏನು? ಉಗ್ರಾಣದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಸಿಬ್ಬಂದಿಗೆ ಪ್ರಶ್ನಿಸಿದರೆ ನಗರಪಾಲಿಕೆ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳ ಗಮನಕ್ಕೆ ತರದೇ ಏಕಾಏಕಿ ಸದಸ್ಯರು ಉಗ್ರಾಣಕ್ಕೆ ಭೇಟಿ ನೀಡಲು ಅವಕಾಶವಿಲ್ಲ ಎಂದು ಉಗ್ರಾಣದ ಅಧಿಕಾರಿಗಳ ಸಮಜಾಯಿಷಿ ನೀಡಿದ್ದಾರೆ.

  • ಪಾಲಿಕೆಯ ಬಜೆಟ್ ಮಂಡನೆ ಸಭೆಯಲ್ಲಿ ಬಿಜೆಪಿ-ಕಾಂಗ್ರೆಸ್ ಸದಸ್ಯರ ಕಿತ್ತಾಟ

    ಪಾಲಿಕೆಯ ಬಜೆಟ್ ಮಂಡನೆ ಸಭೆಯಲ್ಲಿ ಬಿಜೆಪಿ-ಕಾಂಗ್ರೆಸ್ ಸದಸ್ಯರ ಕಿತ್ತಾಟ

    ದಾವಣಗೆರೆ: ಬಜೆಟ್ ಮಂಡನೆ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಇಂದು ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ನಡೆದಿದೆ.

    ಮಹಾನಗರ ಪಾಲಿಕೆ ಬಜೆಟ್ ಮಂಡನೆ ಸಭೆಗೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಹಾಗೂ ಅಧಿಕಾರಿಗಳು ಸೇರಿದ್ದರು. ಆದರೆ ಸದಸ್ಯರು ಬೇರೆ ಬೇರೆ ವಿಚಾರವಾಗಿ ಮಾತನಾಡುತ್ತಿದ್ದರು. ಇದರಿಂದ ಕಿರಿಕಿರಿಗೆ ಒಳಗಾದ ಮೇಯರ್ ಶೋಭಾ ಪಲ್ಲಾಗಟ್ಟೆ ಹಾಗೂ ಆಯುಕ್ತ ಮಂಜುನಾಥ್ ಬಳ್ಳಾರಿ, ಇದು ಬಜೆಟ್ ಸಭೆ. ಬಜೆಟ್ ವಿಚಾರ ಬಿಟ್ಟು ಬೇರೆ ಯಾವುದೇ ವಿಚಾರವಾಗಿ ಚರ್ಚೆ ಮಾಡುವಂತಿಲ್ಲ ಎಂದು ಕಿಡಿಕಾರಿದರು.

    ಆಯುಕ್ತರು ಹೇಳಿದ ಮಾತಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಪರಸ್ಪರ ವಾಗ್ದಾಳಿ ಆರಂಭಿಸಿದರು. ಈ ವೇಳೆ ಪಾಲಿಕೆಯ ಬಿಜೆಪಿ ಸದಸ್ಯ ಕುಮಾರ್, ನಗರದಲ್ಲಿ ಅಭಿವೃದ್ಧಿ ಕಾರ್ಯಗಳೇ ಆಗಿಲ್ಲ. ಹೆಸರಿಗೆ ಮಾತ್ರ ಅಧಿಕಾರ ನಡೆಸುತ್ತಿದ್ದಾರೆ ಎಂದು ಆಡಳಿತದಲ್ಲಿರುವ ಕಾಂಗ್ರೆಸ್ ವಿರುದ್ಧ ಆರೋಪಿಸಿದರು.

    ಪಾಲಿಕೆ ಸದಸ್ಯ ಕುಮಾರ್ ಆರೋಪದಿಂದ ಕೋಪಗೊಂಡ ಕಾಂಗ್ರೆಸ್ ಸದಸ್ಯ ಹಾಲೇಶ್, ಸುಮ್ಮನೆ ಕೂರಯ್ಯ ಎಂದು ಗದರಿದರು. ಇಬ್ಬರ ಮಧ್ಯ ಆರಂಭವಾದ ವಾಗ್ದಾಳಿ ವೇಳೆ ಪರಸ್ಪರ ಮೇಜು ಕುಟ್ಟಿ ಆಕ್ರೋಶ ಹೊರ ಹಾಕುವರೆಗೂ ನಡೆಯಿತು. ಕೆಲ ಸದಸ್ಯರು ಕುಮಾರ್ ಹಾಗೂ ಹಾಲೇಶ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು.

    ಸದಸ್ಯರ ವಾಗ್ದಾಳಿಯಿಂದಾಗಿ ಸುಮಾರು ಒಂದು ಗಂಟೆಗಳ ಕಾಲ ಪಾಲಿಕೆ ಸಭೆಯು ಗದ್ದಲದ ಮನೆಯಾಗಿತ್ತು. ಜನರ ದುಡ್ಡಿನಲ್ಲಿ ಪಾಲಿಕೆ ಬಜೆಟ್ ಸಭೆ ನಡೆಸಿ ಅಭಿವೃದ್ಧಿ ಮಾಡುವ ಬದಲು ಪರಸ್ಪರ ಜಗಳವಾಡುತ್ತಿದ್ದಾರೆ. ಹೀಗೆ ಮಾಡಿದರೆ ನಗರದ ಅಭಿವೃದ್ಧಿ ಸಾಧ್ಯವೇ ಎಂದು ಸಾರ್ವಜನಿಕರು ಪ್ರಶ್ನಿಸಿ ಸದಸ್ಯರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv