Tag: melkote

  • ಮೇಲುಕೋಟೆಯ ಪ್ರಥಮ ಸ್ಥಾನಿಕ ನಿಧನ- ಮಧ್ಯಾಹ್ನ 12 ಗಂಟೆಯವರೆಗೆ ದೇವರ ದರ್ಶನಕ್ಕೆ ನಿರ್ಬಂಧ

    ಮೇಲುಕೋಟೆಯ ಪ್ರಥಮ ಸ್ಥಾನಿಕ ನಿಧನ- ಮಧ್ಯಾಹ್ನ 12 ಗಂಟೆಯವರೆಗೆ ದೇವರ ದರ್ಶನಕ್ಕೆ ನಿರ್ಬಂಧ

    ಮಂಡ್ಯ: ಮೇಲುಕೋಟೆಯ (Melkote) ಚೆಲುವನಾರಾಯಣಸ್ವಾಮಿ ದೇವಾಲಯದ (Cheluvanarayana Swamy Temple) ಪ್ರಥಮ ಸ್ಥಾನಿಕ ಕರಗಂ ನಾರಾಯಣ ಅಯ್ಯಂಗಾರ್ (82) ನಿಧನರಾಗಿದ್ದಾರೆ. ಈ ಹಿನ್ನೆಲೆ ಇಂದು ಮಧ್ಯಾಹ್ನ 12 ಗಂಟೆಯವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.

    ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತಿ ಬಳಿಕ ದೇವಾಲಯದಲ್ಲಿ ಸ್ಥಾನಿಕರಾಗಿದ್ದ ಕರಗಂ ನಾರಾಯಣ ಅಯ್ಯಂಗಾರ್ (Karagam Narayana Iyengar) ರಾಜ್ಯಪ್ರಶಸ್ತಿಗೂ ಭಾಜನರಾಗಿದ್ದರು. ನಿವೃತ್ತಿ ಬಳಿಕ ಚೆಲುವನಾರಾಯಣನ ಸೇವೆಗಾಗಿಯೇ ಇಡೀ ಜೀವನ ಮುಡಿಪಾಗಿಟ್ಟು, ಶಿಕ್ಷಣ ಕ್ಷೇತ್ರದಲ್ಲೂ ದೀರ್ಘ ಅನುಪಮ ಸೇವೆ ಸಲ್ಲಿಸಿದ್ದರು. ಇಂದು ವಯೋಸಹಜ ಕಾಯಿಲೆಯಿಂದ ಮೇಲುಕೋಟೆಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ – ತನಿಖಾಧಿಕಾರಿ ತಂಡಕ್ಕೆ ಮತ್ತೆ ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ್ ಸೇರ್ಪಡೆ

    ಇಂದು ಬೆಳಗ್ಗೆ 11:30ಕ್ಕೆ ದೇವಾಲಯದ ಸಾಂಪ್ರದಾಯಿಕ ಮರ್ಯಾದೆಯೊಡನೆ ಮೇಲುಕೋಟೆಯಲ್ಲಿ ಕರಗಂ ನಾರಾಯಣ ಅಯ್ಯಂಗಾರ್ ಅಂತ್ಯಕ್ರಿಯೆ ನಡೆಯಲಿದೆ. ಹೀಗಾಗಿ ಇಂದು ಮಧ್ಯಾಹ್ನ 12 ಗಂಟೆಯವರೆಗೆ ದೇವಸ್ಥಾನದ ಬಾಗಿಲು ಮುಚ್ಚಿದ್ದು, ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಇದನ್ನೂ ಓದಿ: ಮೈಸೂರಿನಲ್ಲಿ `ದಾಸ’ ತಂಗಿದ್ದ ಹೊಟೇಲ್, ಇತರೆಡೆ ಮಹಜರ್- ಡಿಫೆಂಡರ್ ಕಾರಿಗೆ ಬರುತ್ತಾ ಕಂಟಕ?

  • ಮಾ.9 ರಿಂದ ಮೇಲುಕೋಟೆ ವೈರಮುಡಿ ಉತ್ಸವ

    ಮಾ.9 ರಿಂದ ಮೇಲುಕೋಟೆ ವೈರಮುಡಿ ಉತ್ಸವ

    ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಮೇಲುಕೋಟೆಯ ಶ್ರೀ ಚೆಲುವರಾಯಸ್ವಾಮಿ ವೈರಮುಡಿ ಉತ್ಸವವನ್ನು ಮಾ.9 ರಿಂದ 21ರವರೆಗೆ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ.

    ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರ ಅಧ್ಯಕ್ಷತೆಯಲ್ಲಿಂದು ಉತ್ಸವ ಆಚರಣೆ ಕುರಿತು ಮೇಲುಕೋಟೆಯ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯ ನಂತರ ಮಾತನಾಡಿದ ಗೋಪಾಲಯ್ಯನವರು, ಮಾ.9 ರಿಂದ 21ರವರೆಗೆ ನಡೆಯುವ ವೈರಮುಡಿ ಮಹೋತ್ಸವಕ್ಕೆ ಬರುವ ಎಲ್ಲಾ ಭಕ್ತರಿಗೆ ಅನುಕೂಲವಾಗುವಂತೆ ಸಾರಿಗೆ ಸೌಲಭ್ಯ, ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ವೈದ್ಯಕೀಯ ಹಾಗೂ ದೇವರ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವಂತೆ ಹೇಳಿದರು. ಇದನ್ನೂ ಓದಿ: ಮುಸ್ಲಿಂ ಎಂಬ ಕಾರಣಕ್ಕೆ ಈ ಸರ್ಕಾರ ಒಂದು ನಯಾ ಪೈಸೆ ಕೊಟ್ಟಿಲ್ಲ: ಸಿಎಂ ಇಬ್ರಾಹಿಂ

    ಎಲ್ಲಾ ಇಲಾಖೆಗಳು ಬಹಳ ಜಾಗೃತಿವಹಿಸಬೇಕು ಯಾವುದೇ ಕುಂದು ಕೊರತೆಯಾಗದೇ ವೈರಮುಡಿ ಉತ್ಸವ ಅರ್ಥಪೂರ್ಣವಾಗಿ ನಡೆಯಲು ಎಲ್ಲರೂ ಸಹಕರಿಸಬೇಕು. ಉತ್ಸವದಲ್ಲಿ ಸುಮಾರು 8 ರಿಂದ 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಜಾತ್ರಾ ಅವಧಿಯಲ್ಲಿ ಸ್ವಚ್ಛತೆ ಕಾಪಾಡಲು ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಅಗತ್ಯಕ್ರಮವನ್ನು ವಹಿಸಬೇಕು. ಜಾತ್ರಾ ಮಹೋತ್ಸವ ಹೆಚ್ಚುವರಿ ಸಿಬ್ಬಂದಿ ಮತ್ತು ಪೌರಕಾರ್ಮಿಕರನ್ನು ನೇಮಿಸಿ ನಿರಂತರ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.

    ದೇವಾಲಯದ ಸಮೀಪ ಆಂಬುಲೆನ್ಸ್ ಮತ್ತು ವೈದ್ಯಕೀಯ ತಂಡವನ್ನು ನಿಯೋಜಿಸಬೇಕು. ವಾಹನ ಪಾರ್ಕಿಂಗ್, ಬ್ಯಾರಿಕೇಡ್, ರಸ್ತೆ ದುರಸ್ತಿ, ಉತ್ಸವಗಳ ನಿರ್ವಹಣೆ, ದೀಪಾಲಂಕಾರ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ಸೂಚನೆ ನೀಡಿದರು. ಇದನ್ನೂ ಓದಿ: ನಾನು ಕೀವ್‍ನಲ್ಲಿದ್ದೇನೆ, ತಪ್ಪಿಸಿಕೊಂಡು ಹೋಗಿಲ್ಲ: ಉಕ್ರೇನ್ ಅಧ್ಯಕ್ಷ

    ಸಭೆಯಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು, ಜಿಲ್ಲಾಧಿಕಾರಿ ಎಸ್. ಅಶ್ವತಿ,ಜಿ.ಪಂ.ಮುಖ್ಯಕಾರ್ಯ ನಿರ್ವಹಣಾಧಿಕಾರಿ ದಿವ್ಯಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದ ಮೂರ್ತಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ತಮಿಳು ಚಿತ್ರ ತಂಡದ ಯಡವಟ್ಟು – ಮೇಲುಕೋಟೆ ತಂಗಿ ಕೊಳದ ನೀರು ಕಲುಷಿತ

    ತಮಿಳು ಚಿತ್ರ ತಂಡದ ಯಡವಟ್ಟು – ಮೇಲುಕೋಟೆ ತಂಗಿ ಕೊಳದ ನೀರು ಕಲುಷಿತ

    ಮಂಡ್ಯ: ಐತಿಹಾಸಿಕ, ಪುರಾಣ ಪ್ರಸಿದ್ಧ ಮೇಲುಕೋಟೆಯಲ್ಲಿರುವ ತಂಗಿಯ ಕೊಳದ ನೀರು ಇದೀಗ ತಮಿಳು ಸಿನಿಮಾ ತಂಡ ಮಾಡಿರುವ ಒಂದು ಯಡವಟ್ಟಿನಿಂದ ಕಲುಷಿತಗೊಂಡಿದೆ. ಪವಿತ್ರ ಹಾಗೂ ಶುದ್ಧತೆಗೆ ಹೆಸರುವಾಸಿಯಾಗಿದ್ದ ತಂಗಿ ಕೊಳದ ನೀರು ಕಲುಷಿತಗೊಳ್ಳಲು ತಮಿಳು ಸಿನಿಮಾ ತಂಡ ಕೊಳದ ನೀರಿಗೆ ಬಣ್ಣ ಹಾಗೂ ಹೂ ಹಾಕಿರುವುದೇ ಕಾರಣವಾಗಿದೆ.

    ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಮೇಲುಕೋಟೆ ಹಲವು ಐತಿಹಾಸಿಕ ಕತೆಗಳಿಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿರುವ ಅಕ್ಕ-ತಂಗಿಯ ಕೊಳಗಳಿಗೂ ಇತಿಹಾಸ ಇದೆ. ಇಲ್ಲಿನ ಅಕ್ಕನ ಕೊಳದ ನೀರು ಗಡುಸಾಗಿರುವ ಕಾರಣ ಕುಡಿಯಲು ಯೋಗ್ಯವಲ್ಲ. ಹೀಗಾಗಿ ಈ ನೀರನ್ನು ಯಾರು ಉಪಯೋಗಿಸುವುದಿಲ್ಲ. ಅಕ್ಕನ ಕೊಳದ ಪಕ್ಕದಲ್ಲಿರುವ ತಂಗಿ ಕೊಳದ ನೀರು ಪಾವಿತ್ರತೆ ಹಾಗೂ ಶುದ್ಧೀಕರಣಕ್ಕೆ ಹೆಸರುವಾಸಿ ಪಡೆದುಕೊಂಡಿದೆ. ಹೀಗಾಗಿ ತಂಗಿ ಕೊಳದ ನೀರನ್ನು ಚೆಲುವನಾರಾಯಣಸ್ವಾಮಿಯ ಅಭಿಷೇಕಕ್ಕೆ, ಭಕ್ತರಿಗೆ ತೀರ್ಥ ನೀಡಲು ಬಳಸಲಾಗುತ್ತದೆ. ಅಲ್ಲದೇ ಈ ನೀರನ್ನು ಜನರು ಕುಡಿಯಲು ಸಹ ಬಳಸುತ್ತಾರೆ. ಇದನ್ನೂ ಓದಿ: ಮುಂದಿನ 2 ವರ್ಷದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬೆಲೆ ಪೆಟ್ರೋಲ್‌ ವಾಹನದಷ್ಟೇ ಆಗಲಿದೆ: ಗಡ್ಕರಿ

    ಇದೀಗ ಕಳೆದ ಒಂದು ತಿಂಗಳ ಹಿಂದೆ ತಮಿಳು ಚಿತ್ರ ತಂಡವೊಂದು ಚಿತ್ರೀಕರಣದ ವೇಳೆ ತಂಗಿ ಕೊಳಕ್ಕೆ ಬಣ್ಣ ಹಾಗೂ ಹೂವನ್ನು ಹಾಕಿದ ಕಾರಣ ತಂಗಿ ಕೊಳದ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ. ಶುದ್ಧವಾಗಿದ್ದ ನೀರು ಇದೀಗ ಕಂದು ಬಣ್ಣಕ್ಕೆ ತಿರುಗಿದೆ. ಹೀಗಾಗಿ ಭಕ್ತರಿಗೆ ತೀರ್ಥದ ರೂಪದಲ್ಲಿ ನೀಡುತ್ತಿದ್ದ ಈ ನೀರನ್ನು ಈಗ ಕೊಡುತ್ತಿಲ್ಲ. ಸಿನಿಮಾ ತಂಡ ಮಾಡಿರುವ ಯಡವಟ್ಟಿನಿಂದ ತಂಗಿ ಕೊಳದ ನೀರಿನ ಪಾವಿತ್ರತೆ ಹಾಗೂ ಶುದ್ಧತೆ ಹಾಳಾಗಿದೆ. ಇದರಿಂದ ಇಲ್ಲಿನ ಜನರ ಹಾಗೂ ಭಕ್ತರ ನಂಬಿಕೆಗೆ ಪೆಟ್ಟುಬಿದ್ದಂತೆ ಆಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಇಲ್ಲಿ ತಮಿಳು ಸಿನಿಮಾಗೆ ಅವಕಾಶ ನೀಡಿಲ್ಲ. ಮಳೆಯ ನೀರಿನಿಂದ ಹೀಗೆ ಆಗಿದೆ ಎಂದು ಸಬೂಬು ನೀಡುತ್ತಾರೆ. ಮಳೆಯ ನೀರು ಆಗಿದ್ದ ಇಷ್ಟೋತ್ತಿಗೆ ತಿಳಿಗೊಳ್ಳುತ್ತಿತ್ತು. ಇಲ್ಲಿ ಚಿತ್ರೀಕರಣವಾಗಿರುವುದು ಸತ್ಯ, ಅವರು ಆ ವೇಳೆ ಬಣ್ಣ ಹಾಗೂ ಹೂವನ್ನು ನೀರಿಗೆ ಹಾಕಿದ್ದರು ಹೀಗಾಗಿ ನೀರು ಹೀಗೆ ಆಗಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಇದನ್ನೂ ಓದಿ: ಅನ್ನ ಸಂತರ್ಪಣೆ ವೇಳೆ ಪುನೀತ್ ನೆನೆದು ಕಣ್ಣೀರಿಟ್ಟ ಅಶ್ವಿನಿ

    ತಮಿಳು ಚಿತ್ರತಂಡ ಮಾಡಿರುವ ಯಡವಟ್ಟಿನಿಂದ ತಂಗಿ ಕೊಳದ ನೀರು ಕಲುಷಿತಗೊಂಡಿರುವುದು ವಿಪರ್ಯಾಸದ ಸಂಗತಿ. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ತಂಗಿ ಕೊಳದ ಪವಿತ್ರತೆಯನ್ನು ಕಾಪಡಬೇಕಿದೆ.

  • ಸೂರ್ಯ ಗ್ರಹಣ ಹಿನ್ನೆಲೆ ಮಂಡ್ಯದ ಐತಿಹಾಸಿಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

    ಸೂರ್ಯ ಗ್ರಹಣ ಹಿನ್ನೆಲೆ ಮಂಡ್ಯದ ಐತಿಹಾಸಿಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

    ಮಂಡ್ಯ:  ಡಿಸೆಂಬರ್ 26 ರಂದು ಜಿಲ್ಲೆಯಲ್ಲಿ ಸೂರ್ಯ ಗ್ರಹಣ ಬೆಳಗ್ಗೆ 8.5ಕ್ಕೆ ಕಾಣಿಸಿಕೊಳ್ಳಲಿದ್ದು, ಬೆಳಗ್ಗೆ 9.37ಕ್ಕೆ ಗ್ರಹಣದ ಮಧ್ಯಕಾಲ ಇದ್ದು, ಗ್ರಹಣದ ಮೋಕ್ಷ ಕಾಲ 11.8ಕ್ಕೆ ಆಗಲಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆಯ ಚಲುವರಾಯಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನ ಹಾಗೂ ನಿಮಿಷಾಂಬ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

    ಮೇಲುಕೋಟೆಯ ಚಲುವರಾಯಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ 4 ಗಂಟೆಯಿಂದ 6 ಗಂಟೆವರೆಗೆ ಸುಪ್ರಭಾತ ಸೇವೆ ಹಾಗೂ ಧನುರ್ಮಾಸದ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಬಳಿಕ ಬೆಳಗ್ಗೆ 7 ಗಂಟೆಗೆ ದೇವಸ್ಥಾನದ ಬಾಗಿಲನ್ನು ಮುಚ್ಚಿ ಗ್ರಹಣ ಮುಗಿದ ಬಳಿಕ ಮಧ್ಯಾಹ್ನ 12 ಗಂಟೆಗೆ ದೇವಸ್ಥಾನದ ಬಾಗಿಲನ್ನು ತೆರೆದು ಶುಚಿತ್ವಗೊಳಿಸಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ.

    ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಬಾಗಿಲು ಬೆಳಗ್ಗೆ 4.30 ತೆರೆದು 6 ಗಂಟೆಯ ವಿಶೇಷ ಪೂಜೆಯನ್ನು ಸಲ್ಲಿಸಿದ ಬಳಿಕ ದೇವಸ್ಥಾನದ ಬಾಗಿಲು ಹಾಕಲಾಗುತ್ತದೆ. ಗ್ರಹಣ ಮುಗಿದ ಬಳಿಕ 12.30ಕ್ಕೆ ದೇವಸ್ಥಾನದ ಬಾಗಿಲು ತೆರೆದು, ದೇವಸ್ಥಾನವನ್ನು ಶುದ್ಧಿಗೊಳಿಸಿ ರಂಗನಾಥಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

    ಇನ್ನೂ ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದಲ್ಲೂ ಕೂಡ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬೆಳಗ್ಗೆ 4 ಗಂಟೆಯಿಂದ ಧನುರ್ಮಾಸದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕ ಮಾಡಲಾಗುತ್ತದೆ. ಬಳಿಕ ಬೆಳಗ್ಗೆ 8 ಗಂಟೆಗೆ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುತ್ತದೆ. ಗ್ರಹಣ ಮುಗಿದ ಬಳಿಕ 12 ಗಂಟೆಗೆ ದೇವಸ್ಥಾನದ ಬಾಗಿಲು ತೆರೆದು ದೇವಸ್ಥಾನದ ಶುದ್ಧಿಕರಣಗೊಳಿಸಿ ವಿಶೇಷ ಅಭಿಷೇಕ ಹಾಗೂ ಪೂಜೆ ಮಾಡಲಾಗುತ್ತದೆ.

  • ಸಿನಿಮಾ ಶೂಟಿಂಗ್‍ನಿಂದ ಮೇಲುಕೋಟೆಯಲ್ಲಿ ದೇವರ ಪೂಜೆಗೆ ತೊಂದರೆ, ಸ್ಥಳ ಮಹಿಮೆಗೆ ಅಪಚಾರ!

    ಸಿನಿಮಾ ಶೂಟಿಂಗ್‍ನಿಂದ ಮೇಲುಕೋಟೆಯಲ್ಲಿ ದೇವರ ಪೂಜೆಗೆ ತೊಂದರೆ, ಸ್ಥಳ ಮಹಿಮೆಗೆ ಅಪಚಾರ!

    – ಭರಾಟೆ ಚಿತ್ರಕ್ಕಾಗಿ ತಾತ್ಕಾಲಿಕವಾಗಿ ಚೌಡೇಶ್ವರಿ ದೇವಿ ಪ್ರತಿಷ್ಠಾಪನೆ
    – ಒಂದು ಶಕ್ತಿಕೇಂದ್ರದಲ್ಲಿ ಮತ್ತೊಂದು ದೇವರನ್ನು ಸ್ಥಾಪಿಸುವುದು ಎಷ್ಟು ಸರಿ?

    ಮಂಡ್ಯ: ಪುರಾಣ ಪ್ರಸಿದ್ಧ ಮೇಲುಕೋಟೆಗೂ ಸಿನಿಮಾಗಳಿಗೂ ಅವಿನಾಭಾವ ಸಂಬಂಧ. ಇಲ್ಲಿರುವ ದೇವಾಲಯಗಳು, ಆಕರ್ಷಕವಾದ ಲೊಕೇಷನ್ ಗಳು ಸಿನಿಮಾ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿದೆ. ಹೀಗಾಗಿ ಕನ್ನಡ ಸೇರಿದಂತೆ ಹಲವು ಭಾಷೆಯ ಚಿತ್ರಗಳು ಮೇಲುಕೋಟೆಯಲ್ಲಿ ಚಿತ್ರೀಕರಣಗೊಂಡು ಭರ್ಜರಿ ಯಶಸ್ಸು ಸಾಧಿಸಿವೆ. ಆದರೆ ಇದೀಗ ಸಿನಿಮಾ ಚಿತ್ರೀಕರಣದಿಂದಾಗಿ ಮೇಲುಕೋಟೆಯಲ್ಲಿ ನಡೆಯುವ ಪೂಜೆಗಳಿಗೆ ತೊಂದರೆಯಾಗುತ್ತಿದ್ದು, ಸ್ಥಳ ಮಹಿಮೆಗೆ ಅಪಚಾರವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

    ಪಾಂಡವಪುರ ತಾಲೂಕಿನಲ್ಲಿರುವ ಮೇಲುಕೋಟೆ ಧಾರ್ಮಿಕವಾಗಿ, ಐತಿಹಾಸಿಕವಾಗಿ ಬಹಳ ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರ ಸಿನಿಮಾ ನಿರ್ಮಾಣ ಮಾಡುವವರಿಗೂ ಅಚ್ಚುಮೆಚ್ಚಾಗಿದ್ದು ಇಲ್ಲಿ ಸಾಕಷ್ಟು ಚಿತ್ರಗಳು ಶೂಟಿಂಗ್ ನಡೆಯುತ್ತಿರುತ್ತವೆ. ಆಗೆಲ್ಲಾ ಇರದ ಪಾವಿತ್ರ್ಯತೆಯ ಪ್ರಶ್ನೆ ಈಗ ಕಾಡಲಾರಂಭಿಸಿದೆ.

    ಕಳೆದ ಕೆಲವು ದಿನಗಳಿಂದ ನಟ ಶ್ರೀ ಮುರುಳಿ ನಟಿಸುತ್ತಿರುವ `ಭರಾಟೆ’ ಚಿತ್ರ ಶೂಟಿಂಗ್ ಮೇಲುಕೋಟೆಯ ಕಲ್ಯಾಣಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಯುತ್ತಿದೆ. ಇದಕ್ಕಾಗಿ ಚಿತ್ರತಂಡ ಸರ್ಕಾರದಿಂದ ಅನುಮತಿಯನ್ನು ಪಡೆದುಕೊಂಡಿದ್ದು ನವೆಂಬರ್ 11 ರಿಂದ 14ರವರೆಗೆ ಶೂಟಿಂಗ್ ಮಾಡಲು ಸರ್ಕಾರಕ್ಕೆ 96 ಸಾವಿರ ರೂ. ಬಿಲ್ ಪಾವತಿಸಲಾಗಿದೆ.

    ಅನುಮತಿ ಪಡೆದುಕೊಂಡಿರುವ ಚಿತ್ರತಂಡಕ್ಕೆ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಚಿತ್ರೀಕರಣ ಮಾಡಿ ಎಂದೂ ಹೇಳಲಾಗಿದ್ದರೂ ಚಿತ್ರತಂಡ ಕಲ್ಯಾಣಿಯ ತುಂಬಾ ಕೇಸರಿ ಬಣ್ಣದ ಬಟ್ಟೆಗಳನ್ನ ಕಟ್ಟಿ ಕೇಸರಿಕರಣ ಮಾಡಿದೆ. ಜೊತೆಗೆ ಕಲ್ಯಾಣಿಯಲ್ಲೇ ವಿಶೇಷವಾದ ಸೆಟ್ ಹಾಕಿದ್ದು ಚೌಡೇಶ್ವರಿ ದೇವಿ ವಿಗ್ರಹವನ್ನು ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಲಾಗಿದೆ. ಇದು ಈಗ ವಿವಾದಕ್ಕೆ ಕಾರಣವಾಗಿದ್ದು, ಒಂದು ಶಕ್ತಿ ಕೇಂದ್ರವಾಗಿರುವ ಮೇಲುಕೋಟೆಯಲ್ಲಿ, ತಾತ್ಕಾಲಿಕವಾಗಿಯಾದರೂ ಬೇರೊಂದು ಶಕ್ತಿ ದೇವರನ್ನ ಪ್ರತಿಷ್ಠಾಪಿಸಿದರೆ ಮೂಲ ದೇವರ ಶಕ್ತಿ ಕುಂದುಂಟಾಗುತ್ತದೆ. ಅದು ತಕ್ಷಣ ಪರಿಣಾಮ ಬೀರದೇ ಇದ್ದರೂ ಭವಿಷ್ಯದಲ್ಲಿ ಪರಿಣಾಮ ಬೀರುತ್ತದೆ ಎಂದು ದೇವಾಲಯದ ಅರ್ಚಕ ಸಂಪತ್ ಕುಮಾರ್ ಹೇಳಿದ್ದಾರೆ.

    ಮೇಲುಕೋಟೆಯ ಶ್ರೀ ಚಲುವನಾರಾಯಣಸ್ವಾಮಿ ದೇವಾಲಯದಲ್ಲಿ ವರ್ಷದ ಪ್ರತೀ ದಿನವೂ ಒಂದಲ್ಲಾ ಒಂದು ವಿಶೇಷವಾದ ಪೂಜೆಗಳು ನಡೆಯುತ್ತಿರುತ್ತವೆ. ಹೀಗೆ ನಡೆಯುವ ಪೂಜೆಗಳಿಗೆ ಪವಿತ್ರ ಕಲ್ಯಾಣಿಯಿಂದಲೇ ನೀರನ್ನು ತೆಗೆದುಕೊಂಡು ಹೋಗಿ ಅಭಿಷೇಕ ಮಾಡಲಾಗುತ್ತದೆ. ದೇವಾಲಯ ಮಾತ್ರವಲ್ಲದೆ ಕಲ್ಯಾಣಿಯಲ್ಲೂ ಹಲವು ದೇವರುಗಳಿದ್ದು ಎಲ್ಲಾ ದೇವರಿಗೂ ಪೂಜೆ ಅಭಿಷೇಕ ಮಾಡಬೇಕಾಗುತ್ತದೆ. ಹಾಗೆಯೇ ಕಳೆದ ಭಾನುವಾರ ಮೇಲುಕೋಟೆ ದೇವಾಲಯಕ್ಕೆ ಸಂಬಂಧ ಪಟ್ಟಂತಹ, ಮಹಾಮುನಿ ಜೀಯರ್ ಸ್ವಾಮೀಜಿ ಅವರ ಜಯಂತಿ ಅಂಗವಾಗಿ ಅಭಿಷೇಕ ನಡೆಯಬೇಕಾಗಿತ್ತು. ಕಲ್ಯಾಣಿಯಿಂದ ನೀರನ್ನು ತಂದು ಅಭಿಷೇಕ ನೆರವೇರಿಸಬೇಕಿತ್ತು. ಆದರೆ ಕಲ್ಯಾಣಿಯ ಬಳಿ ಚಿತ್ರ ತಂಡ ಸೆಟ್ ಹಾಕಿದ್ದರಿಂದ, ಕಳೆದ 600 ವರ್ಷಗಳಿಂದಲೂ ನಡೆದುಕೊಂಡು ಬಂದಿದ್ದ ಅಭಿಷೇಕಕ್ಕೆ ತೊಂದರೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    ಮೇಲುಕೋಟೆಯಲ್ಲಿ ವರ್ಷದ ಹಲವು ದಿನ ಬೇರೆ ಬೇರೆ ಸಿನಿಮಾಗಳ ಶೂಟಿಂಗ್ ನಡೆಯುತ್ತಿರುತ್ತದೆ. ಈ ವೇಳೆ ದೇವಾಲಯದ ಮೂಲ ಸ್ವರೂಪಕ್ಕೆ ಹಾನಿಯುಂಟಾಗುತ್ತದೆ ಎಂದು ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಹಣ ಸಿಗುತ್ತದೆ ಎನ್ನುವ ಕಾರಣಕ್ಕೆ ಚಿತ್ರದ ಶೂಟಿಂಗ್ ಮಾಡುವುದಕ್ಕೆ ಅನುಮತಿ ನೀಡುವ ಅಧಿಕಾರಿಗಳು, ದೇವಾಲಯದ ಉತ್ಸವಗಳಿಗೆ, ಪೂಜಾ ಕೈಂಕರ್ಯಗಳಿಗೆ ಮತ್ತು ಸ್ಥಳ ಮಹಿಮೆಗೆ ತೊಂದರೆಯಾಗದಂತೆ ಚಿತ್ರೀಕರಣ ನಡೆಯುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು ಎಂದು ಧಾರ್ಮಿಕ ಚಿಂತಕ ಆನಂದ್ ಆಳ್ವರ್ ಅಭಿಪ್ರಾಯಪಟ್ಟಿದ್ದಾರೆ.

    ಯಾವಾಗಲೂ ಒಂದಲ್ಲ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ವಿವಾದಕ್ಕೆ ಸಿಲುಕಿ ಸುದ್ದಿಯಾಗುತ್ತಿರುವ ಮೇಲುಕೋಟೆಯ ಶ್ರೀ ಚಲುವ ನಾರಾಯಣಸ್ವಾಮಿ ದೇವಾಲಯ ಇದೀಗ ಸಿನಿಮಾ ಚಿತ್ರೀಕರಣದಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಗಮನಹರಿಸಿ ಇನ್ನು ಮುಂದೆ ಚಿತ್ರೀಕರಣದಿಂದ ದೇವಾಲಯದ ಆಚರಣೆಗಳಿಗೆ ಮತ್ತು ಭಕ್ತರಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ವೈರಮುಡಿ ಉತ್ಸವಕ್ಕೆ ವಿಶೇಷ ಸಾರಿಗೆ ಸೌಲಭ್ಯ

    ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ವೈರಮುಡಿ ಉತ್ಸವಕ್ಕೆ ವಿಶೇಷ ಸಾರಿಗೆ ಸೌಲಭ್ಯ

    ಬೆಂಗಳೂರು: ಮೇಲುಕೋಟೆಯಲ್ಲಿ ನಡೆಯುವ ವೈರಮುಡಿ ಉತ್ಸವಕ್ಕೆ ಆಗಮಿಸುವ ಭಕ್ತರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ.

    ಮಾರ್ಚ್ 26 ರಿಂದ ಆರಂಭವಾಲಿರುವ ಉತ್ಸವಕ್ಕೆ ಬೇರೆ ಬೇರೆ ಪ್ರದೇಶಗಳಿಂದ ಭಕ್ತರು, ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ  ಬೆಂಗಳೂರಿನಿಂದ ಮೇಲುಕೋಟೆಗೆ ಪ್ರಯಾಣಿಸಲು ನಿಗಮದಿಂದ ಎಸಿ ಡಿಲಕ್ಸ್ ವಾಹನ ಸೌಲಭ್ಯದೊಂದಿಗೆ, ಒಂದು ದಿನದ ವ್ಯವಸ್ಥಿತ ಪ್ರವಾಸವನ್ನ ಏರ್ಪಡಿಸಿದೆ.

    ಈ ಕುರಿತು ನಿಗಮ ಪತ್ರಿಕಾ ಪ್ರಕಟಣೆಯನ್ನು ನೀಡಿದ್ದು, ಪ್ರವಾಸ ಕೈಗೊಳ್ಳಲು ಇಚ್ಚಿಸುವವರಿಗೆ ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ನಿಗಮದ ಪ್ರಧಾನ ಕಚೇರಿ ಯಶವಂತಪುರ ಹಾಗೂ ಕೆಂಪೇಗೌಡ ಬಸ್ ನಿಲ್ದಾಣದ ಕೌಂಟರ್ ಸಂಪರ್ಕಿಸಲು ಕೋರಿದೆ.

    ಟಿಕೆಟ್ ಮುಂಗಡವಾಗಿ ಕಾಯ್ದಿರಿಸಲು ನಿಗಮದ ಏಜೆಂಟ್ ಅವರ ಸಂಪರ್ಕಿಸಿ ಸಹಕಾರ ಪಡೆಯಬಹುದು. ಅಲ್ಲದೇ ನಿಗಮದ ಆನ್ ಲೈನ್ ತಾಣದಲ್ಲೂ ಮುಂಗಡ ಬುಕಿಂಗ್ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದೆ. ಪ್ರತಿ ಪ್ರಯಾಣಿಕರಿಗೆ 765 ರೂ. ದರ ನಿಗದಿ ಪಡಿಸಿದೆ. ಆನ್‍ಲೈನ್ ನಲ್ಲಿ  kstdc.co  ವೆಬ್‍ಸೈಟಿಗೆ ತೆರಳಿ ಟಿಕೆಟ್ ಬುಕ್ ಮಾಡಬಹುದು.