Tag: mekedatu padayatre

  • ಮೇಕೆದಾಟು ಪಾದಯಾತ್ರೆಯಲ್ಲಿ ನಿಯಮ ಉಲ್ಲಂಘನೆ ಆರೋಪ – ಸಿದ್ದರಾಮಯ್ಯಗೆ ಸಮನ್ಸ್

    ಮೇಕೆದಾಟು ಪಾದಯಾತ್ರೆಯಲ್ಲಿ ನಿಯಮ ಉಲ್ಲಂಘನೆ ಆರೋಪ – ಸಿದ್ದರಾಮಯ್ಯಗೆ ಸಮನ್ಸ್

    ಬೆಂಗಳೂರು: ಕೊರೊನಾ ನಿಯಮ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಿಗೆ ಸಮನ್ಸ್ ಜಾರಿ ಮಾಡಲಾಗಿದೆ.

    ಮೇ 24 ರಂದು ಅಂದರೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ನಾಯಕ ಹಾಗೂ ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಇದನ್ನೂ ಓದಿ: KPCC ಸಭೆಗೆ ಶಾಸಕಿ ಹೆಬ್ಬಾಳ್ಕರ್, ನಿಂಬಾಳ್ಕರ್ ಗೈರು

    ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಜನವರಿ 9 ರಂದು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ‘ಮೇಕೆದಾಟು ಪಾದಯಾತ್ರೆ’ ನಡೆಸಿದ್ದರು. ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದ ಸಂದರ್ಭದಲ್ಲೂ ಪಾದಯಾತ್ರೆ ಹಮ್ಮಿಕೊಂಡಿದ್ದ ವಿಚಾರ ಹೈಕೋರ್ಟ್ವರೆಗೂ ತಲುಪಿತ್ತು. ಹೈಕೋರ್ಟ್ ನಿರ್ದೇಶನ ಆಧರಿಸಿ ಜ.13ಕ್ಕೆ ರಾಮನಗರದಲ್ಲಿ ಪಾದಯಾತ್ರೆ ಕೊನೆಗೊಳಿಸಲಾಗಿತ್ತು.

    ಫೆ.27ಕ್ಕೆ ರಾಮನಗರದಿಂದ ಮತ್ತೆ ಪಾದಯಾತ್ರೆ ಆರಂಭವಾಗಿತ್ತು. 5 ದಿನಗಳ ಯಾತ್ರೆ ಬಳಿಕ ಬೆಂಗಳೂರಿನಲ್ಲಿ ಮಾರ್ಚ್ 3ರಂದು ಸಮಾರೋಪಗೊಂಡಿತ್ತು. ಇದನ್ನೂ ಓದಿ: ನಮ್ಮಲ್ಲಿ ಯಾವುದೇ ಬಣ ಇಲ್ಲ, ಹೈಕಮಾಂಡ್‌ ಹೇಳಿದ್ದೇ ಅಂತಿಮ: ಪರಿಷತ್‌ ಟಿಕೆಟ್‌ ಬಗ್ಗೆ ಡಿಕೆಶಿ ಮಾತು

  • ಮೋಜು, ಮಸ್ತಿಗಾಗಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಯತ್ನಾಳ್

    ಮೋಜು, ಮಸ್ತಿಗಾಗಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಯತ್ನಾಳ್

    ವಿಜಯಪುರ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಚುನಾವಣಾ ಸ್ಟಂಟ್ ಆಗಿದೆ. ಕಾಂಗ್ರೆಸ್ಸಿಗರ ಆರೋಗ್ಯಕ್ಕಾಗಿ ಹಾಗೂ ಅವರ ಮೋಜು, ಮಸ್ತಿಗಾಗಿ ಪಾದಯಾತ್ರೆಯಾಗಿದೆ ಎಂದು ಶಾಸಕ ಬಸನಗೌಡ ಯತ್ನಾಳ್ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಪಾದಯಾತ್ರೆಯಲ್ಲಿ ಅಸಹ್ಯಕರ ವರ್ತನೆ ಮಾಡುತ್ತಿದ್ದಾರೆ. ಕುಣಿದು ಕುಪ್ಪಳಿಸಿ ಪಾದಯಾತ್ರೆ ಪಾವಿತ್ರ್ಯತೆ ಹಾಳು ಮಾಡಿದ್ದಾರೆ. ಪಾದಯಾತ್ರೆಯಲ್ಲಿ ಗಂಭೀರತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

    ಪಾದಯಾತ್ರೆಯಲ್ಲಿ ನಡೆಯುವುದರಿಂದ ಕಾಂಗ್ರೆಸ್ ನಾಯಕರ ತೂಕ ಕಡಿಮೆಯಾಗಬಹುದಷ್ಟೇ. ತೂಕ ಕಡಿಮೆ ಮಾಡಿಕೊಳ್ಳಲು ಸಿದ್ದರಾಮಯ್ಯ, ಡಿಕೆಶಿ, ಎಂ ಬಿ ಪಾಟೀಲ್ ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಆರೋಗ್ಯಕ್ಕಾಗಿ ಪಾದಯಾತ್ರೆಯಾಗಿದೆ. ರಾಜ್ಯದ ಆರೋಗ್ಯಕ್ಕಾಗಿ ಅಲ್ಲ ಎಂದು ವ್ಯಂಗ್ಯವಾಡಿದರು.

    ದೇಶ, ರಾಜ್ಯದ ಆರೋಗ್ಯಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡಿಯೇ ಇಲ್ಲ. ಶರೀರದ ಆರೋಗ್ಯ ಕಾಪಾಡಲು ಪಾದಯಾತ್ರೆ ಮಾಡುತ್ತಿದೆ. ಮುಂದಿನ ಚುನಾವಣೆಯ ತಯಾರಿಗೆ ಮೇಕೆದಾಟು ಪಾದಯಾತ್ರೆಯಾಗಿದೆ. ಚುನಾವಣೆ ಘೋಷಣೆಯಾದರೆ ದಿಢೀರ್ ಎಂದು ಇವರಿಗೆ ನಡೆಯೋಕು ಆಗಲ್ಲ. ಹೀಗಾಗಿ ಪಾದಯಾತ್ರೆ ಮೂಲಕ ತಯಾರಿಯಾಗಿದೆ. ಪಾದಯಾತ್ರೆ ಚುನಾವಣೆಯ ಪ್ರಾಕ್ಟಿಸ್ ಎಂದರು.

    ಇದೇ ಸಂದರ್ಭದಲ್ಲಿ ಉಕ್ರೇನ್ ಯುದ್ಧದ ಬಗ್ಗೆ ಮಾತನಾಡಿದ ಅವರು, ನಿನ್ನೆ ಪ್ರಧಾನಿಗಳು ಕ್ಯಾಬಿನೆಟ್ ಸಭೆ ಮಾಡಿ ನಾಲ್ಕು ಕೇಂದ್ರ ಮಂತ್ರಿಗಳನ್ನು ಅಲ್ಲಿ ಡೆಪ್ಯೂಟ್ ಮಾಡಿದ್ದಾರೆ. ಸಂತೋಷದ ವಿಷಯ ಅಂದರೆ ಭಾರತೀಯರು, ಇಂಡಿಯನ್ಸ್ ಎಂದರೆ ಯಾವುದೇ ತೊಂದರೆ ಆಗುತ್ತಿಲ್ಲ. ಭಾರತೀಯರು ಎಂದರೆ ನಮ್ಮ ಮಕ್ಕಳಿಗೆ ಎಲ್ಲಾ ದೇಶಗಳು ಗೌರವ ಕೊಡುತ್ತವೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಪವಾಡ ಎಂದು ಹೇಳಿದರು. ಇದನ್ನೂ ಓದಿ: ಜಾರ್ಖಂಡ್ ದೋಣಿ ದುರಂತದಲ್ಲಿ 14 ಮಂದಿ ಸಾವು – ಸಿಎಂನಿಂದ 4 ಲಕ್ಷ ಪರಿಹಾರ ಘೋಷಣೆ

    ಪಾಕಿಸ್ತಾನ ಹೆಸರು ಹೇಳಿದರೆ ಅವರನ್ನು ಹೊರಗೆ ಬಿಡುತ್ತಿಲ್ಲ. ಪಾಕಿಸ್ತಾನದವರು ಭಾರತದ ಹೆಸರು ಹೇಳಿ ಜೀವ ಉಳಿಸಿಕೊಳ್ಳುತ್ತಿದ್ದಾರೆ. ಇಲ್ಲಿಯ ಅನ್ನ ತಿಂದು ಪಾಕಿಸ್ತಾನದ ಪರ ಮಾತನಾರುವವರಿಗೆ ಇದು ಒಳ್ಳೆ ಬುದ್ಧಿವಾದವಾಗಿದೆ. ಪಾಕ್ ಪರ ಮಾತನಾಡೋರು ಇನ್ನಾದರೂ ಬುದ್ಧಿ ಕಲಿಯಲಿ ಎಂದ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಖಾರ್ಕಿವ್‍ನ ಆಡಳಿತ ಕಚೇರಿ ಮೇಲೆ ಬಾಂಬ್ ದಾಳಿ- ಕಟ್ಟಡ ಸಂಪೂರ್ಣ ಧ್ವಂಸ

  • 3 ದಿನ ಟ್ರಾಫಿಕ್ ಸಮಸ್ಯೆ ತಡ್ಕೊಳ್ಳಿ, 50 ವರ್ಷ ಕುಡಿಯುವ ನೀರಿನ ಸಮಸ್ಯೆ ಇರಲ್ಲ: ಡಿಕೆಶಿ

    3 ದಿನ ಟ್ರಾಫಿಕ್ ಸಮಸ್ಯೆ ತಡ್ಕೊಳ್ಳಿ, 50 ವರ್ಷ ಕುಡಿಯುವ ನೀರಿನ ಸಮಸ್ಯೆ ಇರಲ್ಲ: ಡಿಕೆಶಿ

    ಬೆಂಗಳೂರು: 3 ದಿನ ಟ್ರಾಫಿಕ್ ಸಮಸ್ಯೆ ಸಹಿಸಿಕೊಂಡರೆ ಮುಂದಿನ 50 ವರ್ಷ ಕುಡಿಯುವ ನೀರಿಗೆ ಸಮಸ್ಯೆ ಆಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೆಂಗಳೂರು ನಗರದ ಜನತೆಯ ಕ್ಷಮಾಪಣೆ ಕೇಳುತ್ತೇನೆ. 3ದಿನ ಬೆಂಗಳೂರಿನಲ್ಲಿ ಸ್ವಲ್ಪ ಟ್ರಾಫಿಕ್ ಸಮಸ್ಯೆ ಆಗುತ್ತದೆ. ಆದರೆ ಮುಂದಿನ 50ವರ್ಷಗಳ ಕಾಲ ಕುಡಿಯುವ ನೀರಿಗೆ ಸಮಸ್ಯೆ ಆಗಲ್ಲ. ಬನ್ನಿ ಎಲ್ಲರೂ ಪಾದಯಾತ್ರೆಯಲ್ಲಿ ಭಾಗವಹಿಸಿ ಹೆಜ್ಜೆ ಹಾಕಿ ಎಂದು ಒತ್ತಾಯಿಸಿದರು.

    ಪಾದಯಾತ್ರೆ ಬೆಂಗಳೂರಿಗೆ ಕಾಲಿಟ್ಟಿದೆ. ಪೊಲೀಸರು ನಮಗೆ ಬೆಂಗಾವಲಾಗಿ ನಿಂತಿದ್ದಾರೆ. ಬಿಬಿಎಂಪಿ ಕಮೀಷನರ್ ನಮ್ಮ ಬ್ಯಾನರ್ ಸ್ವಲ್ಪ ಕೀಳಿಸಿದ್ದಾರೆ. ಆದರೆ ಅಷ್ಟರಲ್ಲಿ ನಮ್ಮ ನಾಯಕರು ಗಲಾಟೆ ಮಾಡಿ ಉಳಿಸಿದ್ದಾರೆ. ನಮ್ಮ ಬ್ಯಾನರ್ ಕಿತ್ತರೆ ರಾತ್ರಿ ಬಿಜೆಪಿ ನಾಯಕರ ಬ್ಯಾನರ್ ಎಲ್ಲೆಲ್ಲಿ ಹಾಕಿದ್ದಾರೆ, ಅಲ್ಲೆಲ್ಲ ಕಿತ್ತು ಹಾಕಲು ಕಾರ್ಯಕರ್ತರಿಗೆ ಹೇಳಿದ್ದೆ. ಆ ಮೇಲೆ ಬಿಬಿಎಂಪಿಯವರು ಸುಮ್ಮನಾಗಿದ್ದಾರೆ. ಗೌರವ್ ಗುಪ್ತ ಬಿಬಿಎಂಪಿ ಬೋರ್ಡ್ ತಗೆದು ಬಿಜೆಪಿ ಕಚೇರಿ ಎಂದು ಬೋರ್ಡ್ ಹಾಕಿಕೊಳ್ಳಲಿ ಕಿಡಿಕಾರಿದರು.

    ಬೆಂಗಳೂರಿನಲ್ಲಿ ನಮ್ಮದು 5 ದಿನದ ಪಾದಯಾತ್ರೆ ಇತ್ತು. ಆದರೆ ಸಿಎಂ ಶುಭ ಶುಕ್ರವಾರ ಬಜೆಟ್ ಮಂಡನೆ ಮಾಡಬೇಕು ಎಂದರು. ಅದಕ್ಕೆ 2 ದಿನ ಪಾದಯಾತ್ರೆ ಮೊಟಕು ಮಾಡಿದೆವು ಎಂದ ಅವರು, ನಮ್ಮ ಪಾದಯಾತ್ರೆಗೆ ಮುರುಗ ಮಠದ ಶ್ರೀಗಳು ಆಶೀರ್ವದಿಸಿದ್ದಾರೆ. ಅವರಿಗೂ ವಿಶೇಷ ಧನ್ಯವಾದ. ನ್ಯಾಷನಲ್ ಕಾಲೇಜು ಮೈದಾನದ ಬೃಹತ್ ಸಮಾವೇಶಕ್ಕೆ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಪಾದಯಾತ್ರೆ- ಇಂದು, ನಾಳೆ ಬೆಂಗಳೂರು ಲಾಕ್ ಪಕ್ಕಾ

    ಸೂರ್ಯ ಹುಟ್ತಾನೆ ಸೂರ್ಯ ಮುಳುಗ್ತಾನೆ. ಯಾವ್ಯಾವ ಪೊಲೀಸ್ ಅಧಿಕಾರಿಗಳು ನಮ್ಮ ಮೇಲೆ ಕೇಸು ಹಾಕ್ತಿದ್ದಾರೆ ಎಲ್ಲಾ ಪಟ್ಟಿ ಇದೆ. ಮುಂದೆ ನಮಗೆ ಟೈಮ್ ಬರುತ್ತದೆ. ಆಗ ನೋಡಿಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಬಹುಮಾನದ ಮೊತ್ತವನ್ನು ದೇಶಕ್ಕೆ ದೇಣಿಗೆ ಕೊಟ್ಟ ಉಕ್ರೇನ್ ಟೆನ್ನಿಸ್ ತಾರೆ- ದೇಣಿಗೆ ಸಂಗ್ರಹಕ್ಕೆ ಅಭಿಯಾನ ಶುರು

    ನಮ್ಮ ಹೋರಾಟ ಎಲ್ಲಾ ಮುಗಿದ ಮೇಲೆ ನಾನು ಹರ್ಷ ಮನೆಗೆ ಹೋಗುತ್ತಿದ್ದೇನೆ. ಪಾಪ ಹುಡುಗ ಒಳ್ಳೆ ಯುವಕ. ಆದರೆ ಯಾರು ಯಾರನ್ನ ಕೊಲ್ಲಬಾರದು. ಕಾರ್ಯಕರ್ತರು ಬರುವವರನ್ನು ತಡೆಯುತ್ತಿದ್ದಾರೆ ಎಲ್ಲಾ ಗೊತ್ತಿದೆ. ತಡೆದರೆ ಮೂರೆ ಜನ ನಡೆಯುತ್ತೇವೆ ಎಂದು ಹೇಳಿದರು.

  • ಕಾಂಗ್ರೆಸ್‍ನವರಿಗೆ ಕೆಲಸದ ಕೊರತೆ ಇದೆ, ಹಾಗಾಗಿ ಈ ಪಾದಯಾತ್ರೆ: ಲಕ್ಷ್ಮಣ ಸವದಿ

    ಕಾಂಗ್ರೆಸ್‍ನವರಿಗೆ ಕೆಲಸದ ಕೊರತೆ ಇದೆ, ಹಾಗಾಗಿ ಈ ಪಾದಯಾತ್ರೆ: ಲಕ್ಷ್ಮಣ ಸವದಿ

    ಕೊಪ್ಪಳ: ಕಾಂಗ್ರೆಸ್‍ನವರಿಗೆ ಕೆಲಸದ ಕೊರತೆ ಇದೆ, ಹಾಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ವ್ಯಂಗ್ಯವಾಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಅವರು ನೀರಾವರಿ ಮಂತ್ರಿಯಾಗಿದ್ದಾಗ ಕೆಲಸ ಮಾಡಲಿಲ್ಲ. ಈಗ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ ಅವರು, ಮಹಾದಾಯಿ ವಿಚಾರದ ಬಗ್ಗೆ ಕಾಂಗ್ರೆಸ್‍ನವರು ನಮಗೆ ಹೇಳುವ ಅವಶ್ಯಕತೆಯಿಲ್ಲ. ಮಹಾದಾಯಿ ನಮ್ಮ ಬದ್ಧತೆಯಾಗಿದೆ. ಅದಕ್ಕಾಗಿ ನಾವು ಮಹಾದಾಯಿ ಕೆಲಸ ಮಾಡೇ ಮಾಡುತ್ತೇವೆ ಎಂದರು.

    ಕಾಂಗ್ರೆಸ್‍ನವರಿಗೆ ಸ್ವಲ್ಪ ಬಿಪಿ, ಶುಗರ್ ಜಾಸ್ತಿಯಾಗಿದೆ. ನಾಲ್ಕು ವರ್ಷದಿಂದ ಕೂತಲ್ಲೇ ಕೂತಿದ್ದಾರೆ. ಹೀಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಶುಭ ಭಾನುವಾರ, ಶುಭ ಗಳಿಗೆಯಲ್ಲಿ ಇಂದು ಪಾದಯಾತ್ರೆಗೆ ಚಾಲನೆ: ಡಿಕೆಶಿ

    ಇದೇ ವೇಳೆ ಶಿವಮೊಗ್ಗದಲ್ಲಿ ನಡೆದ ಕೊಲೆಗೆ ಪ್ರತಿಕ್ರಿಯಿಸಿ, ಹರ್ಷ ಕೊಲೆ ಹಿಂದೆ ಇರುವ ಕಾಣದ ಕೈಗಳು ಶೀಘ್ರದಲ್ಲಿ ಬಯಲಾಗಲಿದೆ. ಈಗಾಗಲೇ ಆರೋಪಿಗಳ ಬಂಧನ ಮಾಡಲಾಗಿದೆ. ಕೊಲೆಗೆ ಸಂಚು ರೂಪಿಸಿದವರ ಕುರಿತು ಮಾಹಿತಿ ಹೊರಬರಲಿದೆ. ಹರ್ಷನ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಚಕ್ಕಲಿ, ನಿಪ್ಪಟ್ಟು ಮಾರಾಟದಿಂದ ಬಂದ ಹಣ ಸಾಲುತ್ತಿಲ್ಲವೆಂದು ಗಾಂಜಾ ಮಾರಿ ಸಿಕ್ಕಿಬಿದ್ರು

    ಕಾಂಗ್ರೆಸ್ ಸೇರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಶಾಸಕನಾಗಬೇಕು, ವಿಧಾನಪರಿಷತ್ ಸದಸ್ಯನಾಗಿರೋದು ಎನ್ನುವುದು ನನ್ನ ವೈಯಕ್ತಿಕ ಅಲ್ಲ. ಅದು ಪಕ್ಷದ ಸೂಚನೆಯಾಗಿದೆ. ನಾನು ಮಾತ್ರ ಕೊಪ್ಪಳ ಜಿಲ್ಲೆಯಿಂದ ಸ್ಪರ್ಧೆ ಮಾಡಲ್ಲ. ಬೆಳಗಾವಿ ಜಿಲ್ಲೆಯಿಂದಾನೇ ಸ್ಪರ್ಧೆ ಮಾಡುತ್ತೇನೆ. ನಾನು ನನ್ನ ಜೀವದ ಕೊನೆ ಉಸಿರು ಇರುವವರೆಗೂ ಬಿಜೆಪಿಯಲ್ಲಿ ಇರುತ್ತೇನೆ ಎಂದು ಹೇಳಿದರು.

  • ಡಬಲ್ ಇಂಜಿನ್ ಸರ್ಕಾರವಿದ್ದರೂ, ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ: ಸಿದ್ದು ವ್ಯಂಗ್ಯ

    ಡಬಲ್ ಇಂಜಿನ್ ಸರ್ಕಾರವಿದ್ದರೂ, ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ: ಸಿದ್ದು ವ್ಯಂಗ್ಯ

    ರಾಮನಗರ: ಬಿಜೆಪಿ ಅವರು ನಮ್ಮದು ಡಬಲ್ ಇಂಜಿನ್ ಸರ್ಕಾರ ಅಂತಾರೆ. ಆದರೂ ಕೂಡ ಯೋಜನೆ ಮಾಡಲೂ ಸಾಧ್ಯವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

    ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್‍ನಿಂದ ಮೂರನೇ ಅಲೆ ಪಾದಯಾತ್ರೆ ಸ್ಥಗಿತವಾಗಿತ್ತು. ರಾಜ್ಯದ ಹಿತ, ಆರೋಗ್ಯದ ದೃಷ್ಟಿಯಿಂದ ಪಾದಯಾತ್ರೆ ಮೊಟಕುಗೊಳಿಸಲು ತೀರ್ಮಾನಿಸಲಾಗಿತ್ತು. ಮತ್ತೇ ಕೋವಿಡ್ ಕಡಿಮೆಯಾದ ಹಿನ್ನೆಲೆ ಪಾದಯಾತ್ರೆ ಮುಂದುವರಿಸುತ್ತಿದ್ದೇವೆ. ಇಂದಿನಿಂದ ಐದು ದಿನಗಳ ಕಾಲ ಪಾದಯಾತ್ರೆ ನಡೆಯುತ್ತದೆ. ಪಾದಯಾತ್ರೆಗೆ ಚಾಲನೆ ಕೊಟ್ಟ ಸುರ್ಜೇವಾಲಾ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.

    ನಮ್ಮ ಅಧಿಕಾರ ಅವಧಿಯಲ್ಲಿ ಡಿಪಿಆರ್ ತಯಾರಿಸಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಐದು ವರ್ಷ ಏನೂ ಮಾಡಿಲ್ಲ, ಕಾಲಹರಣ ಮಾಡಿದರೂ ಅಂತಾ ಸುಳ್ಳು ಜಾಹೀರಾತು ಕೊಡ್ತಿದ್ದಾರೆ. ಇದೆಲ್ಲ ನೂರಕ್ಕೆ ನೂರು ಸುಳ್ಳು ಎಂದು ಕಿಡಿಕಾರಿದರು.

    9 ಸಾವಿರ ಕೋಟಿ ರೂ. ಡಿಪಿಆರ್ ತಯಾರಿಸಿ ಕೊಟ್ಟಿದ್ದೇವೆ. ಕರ್ನಾಟಕದ ಎಲ್ಲಾ ಸಂಸದರನ್ನು ಭೇಟಿ ಮಾಡಿದ್ದರು. ಕೇಂದ್ರದಿಂದ ಅರಣ್ಯ, ಪರಿಸರ ಇಲಾಖೆಯ ಕ್ಲಿಯರೇನ್ಸ್ ಬೇಕಿದೆ. ಅಲ್ಲಿ ಕುಳಿತು, ಗಲಾಟೆ ಮಾಡಿ ಕರ್ನಾಟಕ ರಾಜ್ಯಕ್ಕೆ ಅಗತ್ಯ ಯೋಜನೆಯಿದಾಗಿದೆ. ಕಾನೂನು ವಿರೋಧವಿಲ್ಲ. ತಮಿಳುನಾಡು ರಾಜಕೀಯ ಕಾರಣದಿಂದ ತಕರಾರು ಮಾಡ್ತಿದ್ದಾರೆ. ಕಾನೂನಿನ ಮೂಲಕ ತಕರಾರಿಲ್ಲ. ನಮ್ಮ ಸರ್ಕಾರ ಅವಧಿ ಮುಗಿದು ಮೂರುವರೆ ವರ್ಷ ಆಯ್ತು. ಇಲ್ಲಿಯವರೆಗೂ ಕೂಡ ಕ್ಲಿಯರೆನ್ಸ್ ಪಡೆಯಲು ಸಾಧ್ಯವಾಗಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ

    ಮೇಕೆದಾಟು ಡ್ಯಾಂ ಆದರೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲ್ಲ. ಬೆಂಗಳೂರಷ್ಟೆ ಅಲ್ಲ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರಕ್ಕೂ ಕೂಡ ನೀರು ಕೊಡಬಹುದು. ಕೇಂದ್ರ ಕೂಡ ಯೋಜನೆಗೆ ಬೇಕಾದ ಕ್ಲಿಯರೇನ್ಸ್ ಕೊಡಲಿ. ನೀವೂ ಯೋಜನೆ ಮಾಡದಿದ್ದರೇ ಕರ್ನಾಟಕದ ಜನರಿಗೆ ಮಾಡಿದ ದ್ರೋಹವಾಗುತ್ತದೆ. ಈ ಪಾದಯಾತ್ರೆಗೆ ನಮ್ಮ ಹೋರಾಟ ನಿಲ್ಲಲ್ಲ. ನಮ್ಮ ಹೋರಾಟ ಮತ್ತೇ ಮುಂದುವರಿಯುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಶುಭ ಭಾನುವಾರ, ಶುಭ ಗಳಿಗೆಯಲ್ಲಿ ಇಂದು ಪಾದಯಾತ್ರೆಗೆ ಚಾಲನೆ: ಡಿಕೆಶಿ

  • ಮೇಕೆದಾಟು ಪಾದಯಾತ್ರೆಯಂತೆ ಮಹದಾಯಿ ಪಾದಯಾತ್ರೆ ಮಾಡುತ್ತೇವೆ: ಎಂ.ಬಿ.ಪಾಟೀಲ್

    ಮೇಕೆದಾಟು ಪಾದಯಾತ್ರೆಯಂತೆ ಮಹದಾಯಿ ಪಾದಯಾತ್ರೆ ಮಾಡುತ್ತೇವೆ: ಎಂ.ಬಿ.ಪಾಟೀಲ್

    ಬೆಳಗಾವಿ: ಮೇಕೆದಾಟು ಪಾದಯಾತ್ರೆಯಂತೆಯೇ ಮಹದಾಯಿ ಪಾದಯಾತ್ರೆ ಮಾಡುತ್ತೇವೆ. ಈಗಾಗಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಈ ಸಂಬಂಧ ನಿಲುವು ತೆಗೆದುಕೊಂಡು ಅಧಿಕೃತ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

    ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಹದಾಯಿ ಯೋಜನೆಯು ಹುಬ್ಬಳ್ಳಿ, ಧಾರವಾಡ ಸೇರಿ ನಾಲ್ಕಾರು ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಇರುವ ಯೋಜನೆಯಾಗಿದೆ. ಮಹದಾಯಿ ಕಣಿವೆಯಲ್ಲಿ ಸುಮಾರು 200 ಟಿಎಂಸಿ ನೀರು ಸಿಗುತ್ತದೆ. ನಮ್ಮ ಸರಹದ್ದಿನಲ್ಲಿ 50 ರಿಂದ 60 ಟಿಎಂಸಿ ನೀರು ಬರುತ್ತದೆ ಎಂದರು. ಇದನ್ನೂ ಓದಿ: ಬಿಜೆಪಿಯಲ್ಲಿ ಸಂಪುಟ ಸರ್ಜರಿಗೆ ಡೆಡ್‍ಲೈನ್ – ಮಾರ್ಚಲ್ಲ ಈಗ್ಲೇ ವಿಸ್ತರಿಸಿ ಅಂತ ಬಿಗಿಪಟ್ಟು

    ಮಲಪ್ರಭಾ ಡ್ಯಾಮನಲ್ಲಿ ನೀರಿನ ಕೊರತೆ ಇರುವುದರಿಂದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಬೇಡಿಕೆ ಇದೆ. ಒಟ್ಟಾರೆ ನಾವು 36 ಟಿಎಂಸಿ ನೀರಿಗಾಗಿ ಬೇಡಿಕೆ ಸಲ್ಲಿಸಿದ್ದೆವು. ಅದರಲ್ಲಿ 7.5 ಟಿಎಂಸಿ ಕುಡಿಯುವ ನೀರಿಗಾಗಿ ಕೇಳಿದ್ದೆವು. ಆದರೆ, ಟ್ರಿಬ್ಯುನಲ್ ನಮಗೆ 3.9 ಟಿಎಂಸಿ ನೀರು ನೀಡಿದೆ. ಅದು ನಮಗೆ ಯಾವುದಕ್ಕೂ ಸಾಲುವುದಿಲ್ಲ ಎಂದು ತಿಳಿಸಿದರು.

    ಖಾನಾಪುರ ಇನ್ ಬೇಸ್ ಬರುತ್ತೆ. ಅಲ್ಲಿ ಒಂದೂವರೆ ಟಿಎಂಸಿ ನೀರು ಸಿಕ್ಕಿದ್ದು, ಇನ್ನೂ ಜಾಸ್ತಿ ಸಿಗಬಹುದು. ಖಾನಾಪುರ ತಾಲೂಕಿಗೆ ಯಾವುದೇ ಕಾನೂನು ಅಡೆತಡೆ ಬರಲ್ಲ. ವಿದ್ಯುತ್ ಉತ್ಪಾದನೆಯಿಂದ ಗೋವಾಗೆ ಏನೂ ಹಾನಿಯಾಗಲ್ಲ. ಕರ್ನಾಟಕಕ್ಕೆ ಕೇವಲ ರಾಜಕೀಯವಾಗಿ ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಾದಯಾತ್ರೆಗೆ ಸಂಬಂಧಿಸಿದಂತೆ ಅಧಿಕೃತವಾಗಿ ನಮ್ಮ ಕೆಪಿಸಿಸಿ ಕಾರ್ಯಾಧ್ಯಕ್ಷರು, ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ಸೇರಿ ನಿರ್ಧಾರ ಮಾಡುತ್ತಾರೆ ಎಂದರು. ಇದನ್ನೂ ಓದಿ: ಆಣೆ ಪ್ರಮಾಣ ಎಷ್ಟರ ಮಟ್ಟಿಗೆ ಸರಿ ಆ ಬಗ್ಗೆ ಗೊತ್ತಿಲ್ಲ : ಸತೀಶ್ ಜಾರಕಿಹೊಳಿ

    ಮಹದಾಯಿ ಯೋಜನೆಗೆ ಗೋವಾ ವಿರೋಧ ವಿಚಾರವಾಗಿ ಮಾತನಾಡಿ, ಗೋವಾದವರು ಕೇವಲ ರಾಜಕೀಯ ಕಾರಣಕ್ಕಾಗಿ ಮಾತ್ರ ವಿರೋಧ ಮಾಡುತ್ತಿದ್ದಾರೆ. ಗೋವಾದವರಿಗೂ ಗೊತ್ತಾಗಿದೆ. ವಿರೋಧ ಮಾಡುವುದರಿಂದ ಯಾವುದೇ ಹುರುಳಿಲ್ಲ ಎಂದು ಮಾತನಾಡಿದರು.

    ಗೋವಾ ವಿಧಾನಸಭೆ ಚುನಾವಣೆ ವೇಳೆ ಮಹದಾಯಿ ಯೋಜನೆ ಪ್ರಸ್ತಾಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ರಾಜ್ಯ, ಅವರ ರಾಜ್ಯದ ನಿಲುವುಗಳು ಬೇರೆ ಬೇರೆ ಇರುತ್ತವೆ. ಅದೇ ರೀತಿ ಪಕ್ಷದ ನಿಲುವುಗಳು ಕೂಡ ಬೇರೆ ಇರುತ್ತವೆ. ನೀರಿನ ವಿಚಾರ ಬಂದಾಗ ನಾವು ರಾಜಿಯಾಗುವ ಪ್ರಶ್ನೆಯೇ ಇಲ್ಲ. ಇದಕ್ಕೂ ಚುನಾವಣೆಗೂ ಸಂಬಂಧವಿಲ್ಲ. ಅಲ್ಲಿಯ ಸರ್ಕಾರಗಳು ಅವರ ರಾಜ್ಯದ ನಿಲುವು ಹೇಳುತ್ತವೆ. ಹಾಗೇ ನಮ್ಮ ರಾಜ್ಯದ ನಿಲುವು ತೆಗೆದುಕೊಳ್ಳಲು ನಮಗೆ ಹಕ್ಕು ಇರುತ್ತದೆ. ಆ ದಿಸೆಯಲ್ಲಿ ನಾವು ಯಾವುದೇ ರೀತಿ ರಾಜಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪ್ರೀತಿ ಇದ್ದಲ್ಲಿಗೆ ಹೋಗುತ್ತೇನೆ: ರಮೇಶ್ ಜಾರಕಿಹೊಳಿ

  • ಪಾದಯಾತ್ರೆ ಮೊಟಕುಗೊಳಿಸಲು ಸರ್ಕಾರದಿಂದ ವೀಕೆಂಡ್ ಕರ್ಫ್ಯೂ ಜಾರಿ: ಈಶ್ವರ್ ಖಂಡ್ರೆ

    ಪಾದಯಾತ್ರೆ ಮೊಟಕುಗೊಳಿಸಲು ಸರ್ಕಾರದಿಂದ ವೀಕೆಂಡ್ ಕರ್ಫ್ಯೂ ಜಾರಿ: ಈಶ್ವರ್ ಖಂಡ್ರೆ

    ಬೀದರ್: ಕಾಂಗ್ರೆಸ್ ನಾಯಕರ ಮೇಕೆದಾಟು ಪಾದಯಾತ್ರೆ ಮೊಟಕುಗೊಳಿಸಿಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕಿಡಿಕಾರಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆ ಮೊಟಕುಗೊಳಿಸಿಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿತ್ತು. ಇದನ್ನು ನಿನ್ನೆ ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯುವ ಮೂಲಕ ಬಿಜೆಪಿ ಸರ್ಕಾರವೇ ಸಾಬೀತು ಮಾಡಿದೆ ಎಂದು ಆರೋಪಿಸಿದರು.

    ನಾವು ರಾಜಕೀಯ ಉದ್ದೇಶದಿಂದಲೇ ವೀಕೆಂಡ್ ಕರ್ಫ್ಯೂ ಹಾಕಿದ್ದು ಎಂದು ಜನರ ಮುಂದೆ ಸರ್ಕಾರವೇ ಸಾಬೀತು ಮಾಡಿದ್ದಾರೆ. ಬಿಜೆಪಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ಕಿಡಿಕಾರಿದ ಅವರು, ಸಾವಿರಾರು ಜನರನ್ನು ಸೇರಿಸಿ ಕೇಂದ್ರ ಸಚಿವ ಭಗವಂತ್ ಖೂಬಾ ಜನಾಶೀರ್ವಾದ ಯಾತ್ರೆಯಲ್ಲಿ ಮಾಡಿದ್ದರು. ಅಲ್ಲಿ ಅವರನ್ನು ಅಕ್ರಮ ಬಂದೂಕಿನಿಂದ ಸ್ವಾಗತ ಮಾಡಿದರು. ಈವರೆಗೂ ಪೊಲೀಸರು ಖೂಬಾ ಮೇಲೆ ಎಫ್‌ಐಆರ್ ದಾಖಲೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ ಯಾತ್ರೆ: ಎಸ್.ಆರ್.ಹಿರೇಮಠ

    Bhagwanth khuba Bidar MP

    ಮೇಕೆದಾಟು ಪಾದಯಾತ್ರೆ ವಿಚಾರಕ್ಕೆ ನನ್ನ ಮೇಲೆ ಹಾಗೂ ನಮ್ಮ ನಾಯಕರಾದ ಡಿಕೆಶಿ, ಸಿದ್ದರಾಮಯ್ಯ ಮೇಲೆ ಮೂರು ಕೇಸ್‌ಗಳನ್ನು ದಾಖಲಿಸಿದ್ದಾರೆ ಎಂದ ಅವರು, ಕೊರೊನಾ ಕೇಸ್ ಕಡಿಮೆಯಾದ ಮೇಲೆ ಮತ್ತೆ ರಾಮನಗರದಿಂದ ನಮ್ಮ ಪಾದಯಾತ್ರೆ ಮುಂದುವರೆಸುತ್ತೆವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಚಾಮುಂಡೇಶ್ವರಿಯಿಂದ ಓಡಿಸಲಾಗಿದೆ, ಬಾದಾಮಿಯಿಂದ ಓಡಿಸುವುದು ಬಾಕಿ ಇದೆ: ಸಿದ್ದು ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

    ಪಂಚ ರಾಜ್ಯ ಚುನಾವಣೆಯ ಸಮೀಕ್ಷೆಗಳೆಲ್ಲಾ ಸುಳ್ಳಾಗಲಿದ್ದು, ಬಿಜೆಪಿ ಪಂಚರಾಜ್ಯ ಚುನಾವಣೆಯಲ್ಲಿ ಧೂಳಿ ಪಟವಾಗುತ್ತದೆ ಎಂದ ಅವರು ಬಿಜೆಪಿ ನಾಯಕರು ಹಾಗೂ ಕೇಂದ್ರ ಸಚಿವ ಭಗವಂತ್ ಖೂಬಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

  • ಎಲ್ಲಾ ಜಿಲ್ಲೆಗಳಲ್ಲಿ ಡ್ರೋನ್ ಮೂಲಕ ಸರ್ವೆ: ಅಶೋಕ್

    ಎಲ್ಲಾ ಜಿಲ್ಲೆಗಳಲ್ಲಿ ಡ್ರೋನ್ ಮೂಲಕ ಸರ್ವೆ: ಅಶೋಕ್

    ಬೆಂಗಳೂರು: ಕೇಂದ್ರ ಸರ್ಕಾರದ ಅನುದಾನದ ಮೂಲಕ ಎಲ್ಲಾ ಜಿಲ್ಲೆಗಳಲ್ಲಿ ಡ್ರೋನ್ ಮೂಲಕ ಸರ್ವೆ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 287 ಕೋಟಿ ರೂ.ಗಳ ವೆಚ್ಚದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಡ್ರೋನ್ ಮೂಲಕ ಸರ್ವೆ ಮಾಡಿ ಡಿಜಿಟಲ್ ರೂಪದಲ್ಲಿ ದಾಖಲೆಗಳನ್ನು ಇಡುತ್ತೇವೆ. ಪ್ರಾಯೋಗಿಕವಾಗಿ 4 ಜಿಲ್ಲೆಗಳಲ್ಲಿ ಈ ಕಾರ್ಯ ಸದ್ಯದಲ್ಲೇ ಪ್ರಾರಂಭಿಸುತ್ತೇವೆ ಎಂದು ಮಾಹಿತಿ ನೀಡಿದರು.

    ಕಂದಾಯ ಇಲಾಖೆಯ ಕಾರ್ಯಕ್ರಮದ ಕುರಿತು ಮಾತನಾಡಿ, ಇನಾಂತಿ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತರು ಅರ್ಜಿ ಹಾಕಿಕೊಳ್ಳಲು ಇನ್ನೂ ಒಂದು ವರ್ಷ ಅವಕಾಶ ಮಾಡಿಕೊಟ್ಟಿದ್ದೇನೆ. ಆ ಕುರಿತು ಗೆಜೆಟ್ ನೋಟಿಫಿಕೇಷನ್ ಆಗಿದೆ ಎಂದರು. ಇದನ್ನೂ ಓದಿ: ರೇಣುಕಾಚಾರ್ಯ, ಯತ್ನಾಳ್ ಭೇಟಿ – ಸಚಿವ ಸ್ಥಾನದ ಬಗ್ಗೆ ಚರ್ಚೆ

    ಮುಖ್ಯಮಂತ್ರಿ ಮನೆಯ ಮುಂದೆ ಕಾಂಗ್ರೆಸ್ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ಯಾರಿಗೂ ಪ್ರತಿಭಟನೆ ಮಾಡುವುದಕ್ಕೇ ಬಿಡುತ್ತಿರಲಿಲ್ಲ. ನಮ್ಮದು ಪ್ರಜಾಪ್ರಭುತ್ವಕ್ಕೆ ಬೆಲೆ ಕೊಡುವ ಸರ್ಕಾರ. ಸಿಎಂ ನಿವಾಸದ ಮುಂದೆ ಪ್ರತಿಭಟನೆ ಮಾಡುವುದಾದರೆ ಸ್ವಾಗತ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಚೀನಾದಿಂದ ಅರುಣಾಚಲ ಪ್ರದೇಶದ ಹುಡುಗನ ಅಪಹರಣ – ಪ್ರಧಾನಿ ವಿರುದ್ಧ ರಾಗಾ ಕಿಡಿ

    ಮಹದಾಯಿ ಯೋಜನೆಗೆ ಪ್ರತಿಭಟನೆ ನಡೆಸಿದವರ ಮೇಲೆ ಲಾಟಿ ಚಾರ್ಜ್ ಮಾಡಿಸಿದ್ದವರು ಕಾಂಗ್ರೆಸ್ ನಾಯಕರು. ಪಾದಯಾತ್ರೆಯ ಮೂಲಕ ಇಡೀ ರಾಜ್ಯಕ್ಕೆ ಕೋವಿಡ್ ಸ್ಫೋಟಕ್ಕೆ ಕಾರಣರಾದರು. ಕಾಂಗ್ರೆಸ್‍ನವರು ಪಾದಯಾತ್ರೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಯಾರೂ ಕೋವಿಡ್ ಟೆಸ್ಟ್ ಮಾಡಿಸಬೇಡಿ ಎಂದು ಸೂಚನೆ ಕೊಟ್ಟಿದ್ದಾರೆ. ಪರೀಕ್ಷೆ ಮಾಡಿದರೆ, ಪಾದಯಾತ್ರೆಯಲ್ಲಿ ಭಾಗವಹಿಸಿದ ಐದಾರು ಸಾವಿರ ಜನರಿಗೆ ಪಾಸಿಟಿವ್ ಬರುತ್ತಿತ್ತು ಎಂದು ಕಿಡಿಕಾರಿದರು.

  • ಸಿಎಂ ಕುರ್ಚಿ ಸ್ಪರ್ಧೆಗಾಗಿ ಕಾಂಗ್ರೆಸ್ ಪಾದಯಾತ್ರೆ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಟೀಕೆ

    ಸಿಎಂ ಕುರ್ಚಿ ಸ್ಪರ್ಧೆಗಾಗಿ ಕಾಂಗ್ರೆಸ್ ಪಾದಯಾತ್ರೆ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಟೀಕೆ

    ಬೆಂಗಳೂರು: ಮುಖ್ಯಮಂತ್ರಿ ಕುರ್ಚಿಯ ಸ್ಪರ್ಧೆಯಲ್ಲಿ ನಾ ಮುಂದೆ ತಾ ಮುಂದೆ ಎಂದು ಸ್ಪರ್ಧೆಗೆ ಇಳಿವಂತೆ ಕಾಂಗ್ರೆಸ್‍ನವರು ಭಂಡತನದ ಪಾದಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್‍ನವರಿಗೆ ಸಾಮಾನ್ಯ ಜ್ಞಾನದ ಗುಲಗಂಜಿಯೂ ಇಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ʻಜಗನ್ನಾಥ ಭವನʼದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹೆಚ್ಚಳದ ನಡುವೆ ಪಾದಯಾತ್ರೆ ಬೇಡ ಎಂದು ಹೈಕೋರ್ಟ್ ಹೇಳಿದ ವಿಷಯವನ್ನು ಸರ್ಕಾರ ಮೊದಲೇ ತಿಳಿಸಿತ್ತು. ಮುಖ್ಯಮಂತ್ರಿಗಳು, ಸಚಿವರ ಮನವಿ, ಜನರ ಅಭಿಪ್ರಾಯವನ್ನು ಧಿಕ್ಕರಿಸಿ ಪತ್ರಿಕಾ ಸಂಪಾದಕೀಯದ ಸಲಹೆಯನ್ನೂ ಬದಿಗೊತ್ತಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಮೇಕೆದಾಟು ಪಾದಯಾತ್ರೆ ಆರಂಭಿಸಿದರು ಎಂದು ಟೀಕಿಸಿದರು. ಇದನ್ನೂ ಓದಿ: ಕೋವಿಡ್ ಪ್ರಕರಣ ಹೆಚ್ಚಲು ಕಾಂಗ್ರೆಸ್ ಪಾದಯಾತ್ರೆಯೂ ಕಾರಣ‌: ಸಚಿವ ಸುಧಾಕರ್

    ಕೋವಿಡ್ ತೀವ್ರವಾಗುತ್ತಿರುವಾಗಲೇ ಈ ಪಾದಯಾತ್ರೆ ಬೇಕಿತ್ತೇ ಪ್ರಶ್ನಿಸಿರುವ ಹೈಕೋರ್ಟ್ ಪಾದಯಾತ್ರೆ ನಿಲ್ಲಿಸಿ ಎಂದು ಸೂಚಿಸಿದೆ. ಅದೇ ರೀತಿ ಪಾದಯಾತ್ರೆ ನಿಲ್ಲಿಸಬಾರದೇ ಎಂದು ರಾಜ್ಯ ಸರ್ಕಾರವನ್ನೂ ಪ್ರಶ್ನಿಸಿದೆ. ಮಾನವೀಯತೆಯ ಲವಲೇಶವಿಲ್ಲದೆ ಈ ಪಾದಯಾತ್ರೆ ಮಾಡಲಾಗುತ್ತಿದೆ. ಪಾದಯಾತ್ರೆಯಲ್ಲಿ ಭಾಗವಹಿಸಿದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಶಾಸಕಿ ಮಲ್ಲಾಜಮ್ಮ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಮಂಜುಳಾ ಮಾನಸ, ವಿಧಾನ ಪರಿಷತ್ ಹಿರಿಯ ಸದಸ್ಯ ಸಿ.ಎಂ.ಇಬ್ರಾಹಿಂ, ಮಾಜಿ ಸಿಎಂ ವೀರಪ್ಪ ಮೊಯಿಲಿ, ಮಾಜಿ ಸಚಿವ ರೇವಣ್ಣ ಅವರಿಗೆ ಈಗಾಗಲೇ ಕೋವಿಡ್ ಬಂದಿದೆ. ಇದರಲ್ಲಿ ಪಾಲ್ಗೊಂಡ ಬಹಳಷ್ಟು ಜನರಿಗೆ ಕೋವಿಡ್ ಬಂದಿದೆ ಎಂದು ತಿಳಿಸಿದರು.

    ನಿನ್ನೆ ರಾಮನಗರದಲ್ಲಿ ಪರೀಕ್ಷೆ ಮಾಡಿದ 100 ಜನರ ಪೈಕಿ 30 ಜನರಿಗೆ ಕೋವಿಡ್ ಇದೆ. ಇದು ಇನ್ನೂ ಹೆಚ್ಚಾಗುತ್ತಿದೆ. ಕಾಂಗ್ರೆಸ್‍ನದ್ದು ಪಾದಯಾತ್ರೆಯಲ್ಲ, ಕೋವಿಡ್ ಹೆಚ್ಚಳದ ಜಾತ್ರೆ. ಪಾದಯಾತ್ರೆ ವಿಚಾರ ಹೈಕಮಾಂಡ್‍ಗೆ ಗೊತ್ತಿತ್ತು. ಆದರೆ, ಉಸ್ತುವಾರಿ ಸುರ್ಜೇವಾಲಾ ಅವರು ಪರಿಸ್ಥಿತಿ ಕೈಮೀರಿದರೆ ಪಾದಯಾತ್ರೆ ನಿಲ್ಲಿಸಿ ಎಂದು ಇವತ್ತು ಸೂಚನೆ ಕೊಡುತ್ತಿದ್ದಾರೆ. ಇನ್ನೂ ಎಷ್ಟು ಕೈಮೀರಬೇಕು. ರಾಜ್ಯದಲ್ಲಿ ಕೋವಿಡ್ ಪ್ರಮಾಣ ಹೆಚ್ಚಳದಲ್ಲಿ ಕಾಂಗ್ರೆಸ್ ಮತ್ತು ಆ ಪಕ್ಷದ ಹೈಕಮಾಂಡ್ ಪಾತ್ರ ದೊಡ್ಡದಾಗಿದೆ ಎಂದು ಟೀಕಿಸಿದರು. ಇದನ್ನೂ ಓದಿ: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಬಗ್ಗೆ ನಮಗೆ ನಂಬಿಕೆ ಇಲ್ಲ: ಸುನಿಲ್ ಕುಮಾರ್

    ಡಿ.ಕೆ.ಶಿವಕುಮಾರ್‌ರನ್ನು ಸಿಎಂ ಮಾಡಲು ಮತ್ತು ಅವರ ಬೇಳೆ ಬೇಯಿಸಲು ಹೈಕಮಾಂಡ್ ಕೂಡ ಕೋವಿಡ್ ಹೆಚ್ಚಿಸಲು ಸಹಾಯ ಮಾಡುತ್ತಿದೆ. ಪಾದಯಾತ್ರೆ ಮುಂದೂಡಿಕೆಗೆ ಹೈಕಮಾಂಡ್ ಯಾಕೆ ಮುಂದಾಗಲಿಲ್ಲ? ಡಿ.ಕೆ.ಶಿವಕುಮಾರ್ ಒಬ್ಬರಿಗೇ ಪಾದಯಾತ್ರೆಯ ಲಾಭ ಸಿಗಬಾರದೆಂದು ಸಿದ್ದರಾಮಯ್ಯರು ತಮಗೆ ಅನಾರೋಗ್ಯವಿದ್ದರೂ ಕಷ್ಟಪಟ್ಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ ಎಂದರು.

    ರಾಜ್ಯ ಸರ್ಕಾರ ನೂರಾರು ಜನರ ವಿರುದ್ಧ ಪ್ರಕರಣ ದಾಖಲಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕರೇ ನಿಯಮಗಳನ್ನು ಉಲ್ಲಂಘಿಸಿದ್ದು ಸರಿಯೇ? ಎಂದು ಕೇಳಿದರು. ಮೇಕೆದಾಟು ವಿಳಂಬಕ್ಕೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರೇ ಕಾರಣ. 2013ರಿಂದ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವುದೇ ತಡೆಯಾಜ್ಞೆ ಇರಲಿಲ್ಲ. ಇದರ ಬಗ್ಗೆ ಕಾಂಗ್ರೆಸ್ ವಲಯದಲ್ಲೇ ಚರ್ಚೆ ನಡೆದಿದೆ. ಶಿವಕುಮಾರ್ ಮತ್ತು ಎಂ.ಬಿ.ಪಾಟೀಲರಿಗೆ ಮಂಪರು ಪರೀಕ್ಷೆ ಮಾಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ನೋಟಿಸ್‍ಗೆ ಹೆದರಲ್ಲ, ಜನರ ಹಿತದೃಷ್ಟಿಯಿಂದ ಪಾದಯಾತ್ರೆ ರದ್ದು: ಸಿದ್ದರಾಮಯ್ಯ

    ರಾಜ್ಯ ವಕ್ತಾರರು ಹಾಗೂ ವಿಧಾನಪರಿಷತ್ ಸದಸ್ಯರಾದ ತೇಜಸ್ವಿನಿ ಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷವು ಮೇಕೆದಾಟು ವಿಚಾರದಲ್ಲಿ ಸಲಹೆಗಳನ್ನು ಸರ್ವಪಕ್ಷ ಸಭೆಯಲ್ಲಿ ತಿಳಿಸಬೇಕಿತ್ತು. ಇವರು ಪರಮ ಸ್ವಾರ್ಥಕ್ಕಾಗಿ ಮತ್ತು ರಾಜಕೀಯ ಲಾಭಕ್ಕಾಗಿ ಈ ಪಾದಯಾತ್ರೆ ಮಾಡಿದ್ದಾರೆ ಎಂದು ಟೀಕಿಸಿದರು. ಮೊದಲು ಕೋವಿಡ್ ಲಸಿಕೆ ಹಾಕಿಸಿಕೊಳ್ಳದಿರಿ ಎಂದರು. ಈಗ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಕೋವಿಡ್ ತಗುಲಿದಂತೆ ಕಾಣುತ್ತದೆ ಎಂದರು.

  • ಪಾದಯಾತ್ರೆ ಕೈ ಬಿಡುವಂತೆ ಸಿದ್ದರಾಮಯ್ಯ, ಡಿಕೆಶಿಗೆ ಸಿಎಂ ಬೊಮ್ಮಾಯಿ ಪತ್ರ

    ಪಾದಯಾತ್ರೆ ಕೈ ಬಿಡುವಂತೆ ಸಿದ್ದರಾಮಯ್ಯ, ಡಿಕೆಶಿಗೆ ಸಿಎಂ ಬೊಮ್ಮಾಯಿ ಪತ್ರ

    ಬೆಂಗಳೂರು: ಮೇಕೆದಾಟು ಪಾದಯಾತ್ರೆ ಕೈಬಿಡುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದಾರೆ. ಮೇಕೆದಾಟು ಯೋಜನೆಗೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸಿದ್ಧನಿದ್ದೇನೆ ಎಂದು ಸಿಎಂ ಪತ್ರದಲ್ಲಿ ಭರವಸೆ ನೀಡಿದ್ದಾರೆ.

    ಪಾದಯಾತ್ರೆಯನ್ನು ಮುಂದುವರೆಸುವುದನ್ನು ಕೈಬಿಟ್ಟು ನಾವೆಲ್ಲ ಈಗ ಕೊರೊನಾವನ್ನು ಎದುರಿಸಿ ಮುಂಬರುವ ದಿನಗಳಲ್ಲಿ ಒಂದಾಗಿ ಮೇಕೆದಾಟು ಯೋಜನೆ ಅನುಷ್ಠಾನದ ಕುರಿತು ಕ್ರಮ ಕೈಗೊಳ್ಳೋಣ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅನಿವಾರ್ಯತೆ ಬಂದ್ರೆ ಮೇಕೆದಾಟು ಪಾದಯಾತ್ರೆ ನಿಲ್ಲಿಸಿ: ಕೈ ಹೈಕಮಾಂಡ್‌ ಸೂಚನೆ

    ಬೊಮ್ಮಾಯಿ ಬರೆದ ಪತ್ರದಲ್ಲೇನಿದೆ?
    ಸಿದ್ದರಾಮಯ್ಯನವರು, ವಿರೋಧಪಕ್ಷದ ನಾಯಕರು ಹಾಗೂ ಡಿ.ಕೆ.ಶಿವಕುಮಾರ್, ಕೆ.ಪಿ.ಸಿ.ಸಿ ಅಧ್ಯಕ್ಷರು ಇವರಿಗೆ,

    ನಾನು ಮೇಕೆದಾಟು ಯೋಜನೆ ಬಗ್ಗೆ ನಿಮ್ಮೆಲ್ಲರ ವಿಶ್ವಾಸದೊಂದಿಗೆ ಅನುಷ್ಠಾನಕ್ಕಾಗಿ ಬೇಕಾಗಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧನಿದ್ದೇನೆ.

    ಕೊರೊನಾ ಮಹಾಮಾರಿಯ 3ನೇ ಅಲೆ ತೀವ್ರವಾಗಿ ಅಪ್ಪಳಿಸಿದ ಹಿನ್ನೆಲೆಯಲ್ಲಿ ಜನಜೀವನ ವಿಶೇಷವಾಗಿ ಮಕ್ಕಳ ಮೇಲೆ ದುಷ್ಪರಿಣಾಮ ಬೀರಿದೆ. ಈ ಸಂದರ್ಭದಲ್ಲಿ ಹೆಚ್ಚು ಜನರನ್ನು ಸೇರಿಸಿ ಪಾದಯಾತ್ರೆ ಮುಂತಾದವುಗಳನ್ನು ಮಾಡುವುದು ಸಾರ್ವಜನಿಕ ಆರೋಗ್ಯ ದೃಷ್ಠಿಯಿಂದ ಸರಿಯಿರುವುದಿಲ್ಲ. ಈಗಾಗಲೇ ಮಾನ್ಯ ಉಚ್ಛನ್ಯಾಯಾಲಯ ಕೂಡ ಇದರ ಬಗ್ಗೆ ತೀವ್ರವಾದಂತಹ ಅಭಿಪ್ರಾಯ ನೀಡಿದೆ ಮತ್ತು ಇದು ಜನಾಭಿಪ್ರಾಯ ಕೂಡ ಆಗಿದೆ. ಇದನ್ನೂ ಓದಿ: ನಿಮ್ದು ದುರ್ಯೋಧನನ ರೀತಿ ಕೆಟ್ಟ ಹಠ: ಸಿದ್ದು, ಡಿಕೆಶಿಗೆ ಅಶೋಕ್ ಗುದ್ದು

    ಹೀಗಾಗಿ ಪಾದಯಾತ್ರೆಯನ್ನು ಮುಂದುವರೆಸುವುದನ್ನು ಕೈಬಿಟ್ಟು ನಾವೆಲ್ಲ ಈಗ ಕೊರೊನಾವನ್ನು ಎದುರಿಸಿ ಮುಂಬರುವ ದಿನಗಳಲ್ಲಿ ಒಂದಾಗಿ ಮೇಕೆದಾಟು ಯೋಜನೆ ಅನುಷ್ಠಾನದ ಕುರಿತು ಕ್ರಮ ಕೈಗೊಳ್ಳೋಣ ಎಂಬ ಮನವಿಯನ್ನು ತಮ್ಮಲ್ಲಿ ಮಾಡುತ್ತೇನೆ.

    – ಬಸವರಾಜ ಬೊಮ್ಮಾಯಿ