Tag: mekedatu hike

  • ಮೇಕೆದಾಟು ಯೋಜನೆ ಸ್ಥಗಿತಗೊಂಡ್ರೆ ಕಾಂಗ್ರೆಸ್ ಪಕ್ಷದವರೇ ನೇರ ಹೊಣೆ: ಭೈರತಿ ಬಸವರಾಜ್

    ಮೇಕೆದಾಟು ಯೋಜನೆ ಸ್ಥಗಿತಗೊಂಡ್ರೆ ಕಾಂಗ್ರೆಸ್ ಪಕ್ಷದವರೇ ನೇರ ಹೊಣೆ: ಭೈರತಿ ಬಸವರಾಜ್

    ಬೆಂಗಳೂರು: ಮೇಕೆದಾಟು ಯೋಜನೆ ವಿವಾದವನ್ನು ಸೂಕ್ಷ್ಮವಾಗಿ ಬಗೆ ಹರಿಸಬೇಕಿದೆ. ದ್ವಂದ್ವ ನಿಲುವಿನ ಕಾಂಗ್ರೆಸ್ ಪಾದಯಾತ್ರೆ ಮಾಡಲು ಬೀದಿಗಿಳಿದಿರುವುದರಿಂದ ಇನ್ನಷ್ಟು ಕ್ಲಿಷ್ಟಕರವಾಗಲಿದೆ. ಮೇಕೆದಾಟು ಯೋಜನೆ ಸ್ಥಗಿತವಾದರೆ ಅದಕ್ಕೆ ನೇರ ಹೊಣೆ ಕಾಂಗ್ರೆಸ್ ಪಕ್ಷವೆಂದು ಸಚಿವ ಭೈರತಿ ಬಸವರಾಜ್ ನೇರ ಆರೋಪ ಮಾಡಿದರು.

    ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಗಂಭೀರವಾದ ವಿಷಯ. ಇದನ್ನು ಕಾನೂನಿನ ಮೂಲಕ ಗುಪ್ತವಾಗಿ ಪರಿಹರಿಸಬೇಕಿತ್ತು. ಆದರೆ ಇದೀಗ ರಾಜಕಾರಣಕ್ಕೋಸ್ಕರ ಇದನ್ನ ಜಟಿಲಗೊಳಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ಕೊರೊನಾ ಪಾಸಿಟಿವ್

    ಹಲವು ರೀತಿಯ ಕಾನೂನು ತೊಡಕುಗಳನ್ನ ನಿವಾರಿಸಬೇಕಿದೆ. ಈ ಪ್ರಕರಣ ಗಂಭೀರವಾಗಿ ತೆಗೆದುಕೊಂಡು ಗುಪ್ತವಾಗಿ ಸಮಾಲೋಚನೆ ಮಾಡುವ ವಿಷಯವನ್ನ ಬೀದಿಗೆ ತಂದಿದ್ದಾರೆ. ಈ ಯೋಜನೆಗೆ ತೊಂದರೆಯಾದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮತ್ತು ಪ್ರತಿಪಕ್ಷ ನಾಯಕರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ ಆಗಿರುತ್ತಾರೆ ಎಂದು ಹೇಳಿದರು.

    ಈ ಮೊದಲು ನೀರಾವರಿ ಸಚಿವರಾಗಿ ಮತ್ತು ಮುಖ್ಯಮಂತ್ರಿಯಾಗಿ ಕೆಲಸ ಮಾಡಿ ಎಲ್ಲ ಗೊತ್ತಿದ್ದರು ಈ ರೀತಿಯ ಕೆಲಸ ಮಾಡುವುದು ಸರಿಯಲ್ಲ. ಮೇಕೆದಾಟು ಯೋಜನೆಗೆ ತೊಂದರೆಯಾದರೆ ಕಾಂಗ್ರೆಸ್ ಹೊಣೆಯೆನ್ನುವ ಮೂಲಕ ಪುನರುಚ್ಚಿಸಿದರು.

    ಬೆಂಗಳೂರಿನ ಅಭಿವೃದ್ಧಿಗೆ ಹಿಂದೆಂದು ಯಾರು 6 ಸಾವಿರ ಕೋಟಿ ರೂ. ಕೊಟ್ಟಿರಲಿಲ್ಲ. ಸಿಎಂ ಬೊಮ್ಮಾಯಿ ನೀರುಗಾಲುವೆ ಸ್ಟಾಮ್ ವಾಟರ್ ಮೊಟರ್ಸ್‍ಗಳಿಗೆ ಕೊಟ್ಟಿದ್ದಾರೆ. ಈ ಮೂಲಕ ಬೆಂಗಳೂರು ಅಭಿವೃದ್ಧಿಯಾಗುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಹಿರಿಯ ಸಾಹಿತಿ, ರಾಷ್ಟ್ರಪ್ರಶಸ್ತಿ ವಿಜೇತ ಎನ್.ಎಸ್.ದೇವಿಪ್ರಸಾದ್ ನಿಧನ

    ಈಗಾಗಲೇ ಪಾಸಿಟಿವ್ ಪ್ರಕರಣಗಳು 9 ಸಾವಿರ ದಾಟುತ್ತಿದೆ. ಇನ್ನೂ ಯಾವ ಪ್ರಮಾಣದಲ್ಲಿ ಏರಿಕೆ ಆಗುತ್ತದೆ ಗೊತ್ತಿಲ್ಲ. ಒಂದು ವೇಳೆ ಕೊರೊನಾ ಜಾಸ್ತಿ ಆದರೆ ಇವರೆ ಹೊಣೆ. ಇದರ ನಡುವೆಯೂ ಬೀದಿಗಿಳಿದು ಹೋರಾಟ ಮಾಡುತ್ತಿರುವುದು ಸಂಪೂರ್ಣ ರಾಜಕೀಯವಾಗಿದೆ. ಕೊರೊನಾ 3ನೇ ಅಲೆ ಸೋಂಕು ತೀವ್ರವಾಗಿ ಹರಡುತ್ತಿರುವ ವೇಳೆ ವಾರಾಂತ್ಯ ಕಫ್ರ್ಯೂ ಅವಧಿಯಲ್ಲೂ ಅವರು ನಿಯಮಾವಳಿ ಉಲ್ಲಂಘಿಸಿ ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯದ ಜನತೆಯ ಆರೋಗ್ಯಕ್ಕಿಂತ ರಾಜಕಾರಣವೇ ಅವರಿಗೆ ಮುಖ್ಯವಾಗಿದೆ. ಇದೊಂದು ರಾಜಕೀಯ ಪ್ರಹಸನವಾಗಿದ್ದು, ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

  • ಮೇಕೆದಾಟು ಪಾದಯಾತ್ರೆಗೆ ಶಿವಣ್ಣ ಬಂದ್ರೆ ಧೈರ್ಯ ಬರುತ್ತೆ: ಸಾಧುಕೋಕಿಲ

    ಮೇಕೆದಾಟು ಪಾದಯಾತ್ರೆಗೆ ಶಿವಣ್ಣ ಬಂದ್ರೆ ಧೈರ್ಯ ಬರುತ್ತೆ: ಸಾಧುಕೋಕಿಲ

    ರಾಮನಗರ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಶಿವಣ್ಣ ಬಂದರೆ ಧೈರ್ಯ ಬರುತ್ತೆ ಎಂದು ಕನ್ನಡ ಚಲನಚಿತ್ರರಂಗದ ಹಾಸ್ಯ ನಟ ಸಾಧುಕೋಕಿಲ ಹೇಳಿದರು.

    ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಅವರು, ನಾನಂತೂ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಮ್ಮ ಚಿತ್ರರಂಗದ ಕಲಾವಿದರೆಲ್ಲರೂ ಬರುತ್ತಾರೆ ಅಂತಾ ನನಗೆ ಮಾಹಿತಿ ಇದೆ. ಶಿವಣ್ಣನವರು ಬರುತ್ತಿದ್ದಾರೆ ಅಂತಾ ಹೇಳುತ್ತಿದ್ದಾರೆ. ಅವರು ಬಂದರೆ ಒಳ್ಳೆಯದು, ಇವಾಗ ಶಿವಣ್ಣ ಅವರಷ್ಟೇ ಅಲ್ಲ. ಈ ಹಿಂದೆ ಅಣ್ಣಾವ್ರು ಇದ್ದಾಗ ಕಲಾವಿದರೆಲ್ಲರೂ ಅವರೊಟ್ಟಿಗೆ ಹೋಗುತ್ತಿದ್ದೆವು. ಇಂತಹ ಹೋರಾಟಗಳಲ್ಲಿ ಅವರೂ ಸಹ ಪಾಲ್ಗೊಳ್ಳುತ್ತಿದ್ದರು. ಕಾವೇರಿ ನೀರಿನ ವಿಷಯದಲ್ಲಿ ಅಣ್ಣಾವ್ರು, ವಿಷ್ಣುವರ್ಧನ್, ಅಂಬರೀಷ್ ಅವರೆಲ್ಲರೂ ಭಾಗವಹಿಸುತ್ತಿದ್ದರು. ಈಗ ಶಿವಣ್ಣ ಅವರು ಬಂದರೆ ನಮಗೆ ಸ್ಫೂರ್ತಿ ಮತ್ತು ಧೈರ್ಯ ಬರುತ್ತೇ ಎಂದು ಅಭಿಪ್ರಾಯಪಟ್ಟರು.

    ಇಂತಹ ಕಾರ್ಯಕ್ರಮಗಳಿಗೆ ಎಲ್ಲರೂ ಖಂಡಿತವಾಗಿ ಬರಬೇಕು. ಇಂತಹ ಕಾರ್ಯಕ್ರಮಗಳನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತ ಎಂದು ಭಾವಿಸಬಾರದು. ಯಾವುದೇ ರೀತಿಯ ರಾಜಕೀಯ ಇಲ್ಲಿ ಬರಬಾರದು. ನಾನು ಕೂಡಾ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಾನು ಡಿಕೆಶಿಯವರ ಎಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಆದರೆ ನಾನು ಯಾವ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ನಾವು ಯಾವ ರಾಜಕೀಯ ಪಕ್ಷದ ಸದಸ್ಯತ್ವ ತೆಗೆದುಕೊಂಡಿಲ್ಲ. ಇದು ಕನ್ನಡದ ಜನತೆಗಾಗಿ ಆಗಬೇಕಾದ ಕೆಲಸ ಎಂದು ನಾವು ಪರಿಗಣಿಸಬೇಕಾಗುತ್ತದೆ. ಇದರಿಂದ ಯಾರಿಗಾದರೂ ತೊಂದರೆಯಾಗುತ್ತಾ? ಯಾರಿಗೂ ಏನೂ ತೊಂದರೆ ಆಗುವುದಿಲ್ಲ. ಎಲ್ಲ ಕೈಗಳು ಸೇರಿದಾಗ ಒಂದು ಶಕ್ತಿ ಬರುತ್ತೇ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ‘ಅಕಟಕಟ’ ಎನ್ನುತ್ತ ಹೊಸತಂಡದೊಂದಿಗೆ ಮತ್ತೆ ಬಂದ್ರು ನಿರ್ದೇಶಕ ನಾಗರಾಜ್ ಸೋಮಯಾಜಿ

    ವೀಕೆಂಡ್ ಕಫ್ರ್ಯೂ ಕುರಿತು ಮಾತನಾಡಿ, 3 ವರ್ಷದಿಂದ ಕಫ್ರ್ಯೂ ಮಾಡುತ್ತಲೇ ಇದ್ದಾರೆ. ಲಾಕ್‍ಡೌನ್ ಆಗುತ್ತಲೇ ಇದೆ. ಕೊರೊನಾ 1ನೇ ಅಲೆ ಏನಾಯಿತು, 2 ನೇ ಅಲೆ ಏನಾಯಿತು? ಹೇಗಿದೆ ಈಗಿನ ಪರಿಸ್ಥಿತಿ ಅನ್ನೋದು ಎಲ್ಲರಿಗೂ ಗೊತ್ತಿದೆ. ಜನರ ಒಳ್ಳೆಯದಾಗಲೆಂದು ಕಫ್ರ್ಯೂ ವಿಧಿಸಿದರೆ ತಪ್ಪೇನಿಲ್ಲ. ಕಫ್ರ್ಯೂ ಹಾಕಿರುವುದು ಸರಿಯಾಗಿದೆಯೇ? ಆದರೆ ಈ ಕಾರ್ಯಕ್ರಮದಲ್ಲಿ ಎಲ್ಲರೂ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಕೋವಿಡ್ ನಿಯಮ ಪಾಲಿಸಿಯೇ ಪಾದಯಾತ್ರೆ ಮಾಡಲಾಗುತ್ತಿದೆ. ಈ ಪಾದಯಾತ್ರೆಗೆ ಯಾರು ಬರತ್ತಾರೋ ಗೊತ್ತಿಲ್ಲ, ನಾನಂತು ಅಣೆಕಟ್ಟು ಶುರುವಾಗುವವರೆಗೂ ಜೊತೆಯಲ್ಲಿ ಇರುತ್ತೇನೆ ಎಂದರು. ಇದನ್ನೂ ಓದಿ: ರೈತ ಗೀತೆ ಮೂಲಕ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್‌ ಚಾಲನೆ

  • ಸರ್ಕಾರ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ: ಸಿದ್ದರಾಮಯ್ಯ ಕಿಡಿ

    ಸರ್ಕಾರ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ: ಸಿದ್ದರಾಮಯ್ಯ ಕಿಡಿ

    ಬೆಂಗಳೂರು: ಸರ್ಕಾರ ಯೋಜನೆಯನ್ನು ಅನುಷ್ಠಾನಗೊಳಿಸಲು ವಿಳಂಬ ಮಾಡುವುದರ ಜೊತೆಗೆ ಜನರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

    ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿದ ಅವರು, ಇಂದಿನಿಂದ ಜ.19ರವರೆಗೆ ಪಾದಯಾತ್ರೆ ನಡೆಯುತ್ತದೆ. ಪಾದಯಾತ್ರೆಯ ಬಗ್ಗೆ ಡಿಕೆಶಿ ಹಾಗೂ ನಾನು ಸೇರಿ ವಿವಿಧ ಮುಖಂಡರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಂಡಿದ್ದೆವು. ಈ ಬಗ್ಗೆ 2 ತಿಂಗಳ ಹಿಂದೆಯೇ ಘೋಷಣೆ ಮಾಡಿದ್ದೆವು. ಆದರೆ ಈ ಪಾದಯಾತ್ರೆ ಹತ್ತಿಕ್ಕಲು ಸರ್ಕಾರ ಬಹಳ ಪ್ರಯತ್ನ ಮಾಡುತ್ತಿದೆ. ಅದಕ್ಕೆ ಕಫ್ರ್ಯೂವನ್ನು ಜಾರಿಗೊಳಿಸಿದೆ ಎಂದು ವಾಗ್ದಾಳಿ ನಡೆಸಿದರು.

    ಬಿಜೆಪಿ ಅಧಿಕಾರಕ್ಕೆ ಬಂದು 2 ವರ್ಷವಾಗಿದೆ. ಆದರೆ ಯೋಜನೆಯನ್ನು ಅನುಷ್ಠಾನಗೊಳಿಸಲು ವಿಳಂಬ ಮಾಡುತ್ತಿದೆ. ಜೊತೆಗೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಏನೂ ಮಾಡಿಲ್ಲ ಎಂದು ತಪ್ಪು ಮಾಹಿತಿ ನೀಡಿ, ಇದರಿಂದಲೇ ಮೇಕೆದಾಟು ಯೋಜನೆ ವಿಳಂಬವಾಗಿದೆ ಎಂದು ಜಾಹೀರಾತು ನೀಡುತ್ತಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ರೈತ ಗೀತೆ ಮೂಲಕ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್‌ ಚಾಲನೆ

    ಬಿಎಸ್‍ವೈ, ಜಗದೀಶ್ ಶೆಟ್ಟರ್, ಸದಾನಂದಗೌಡ ಸಿಎಂ ಆಗಿದ್ದರು. ಆಗ ಅದನ್ನು ಕೈಗೆತ್ತಿಕೊಳ್ಳಲಿಲ್ಲ, ಪ್ರಾರಂಭವನ್ನು ಮಾಡಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಮೇಕೆದಾಟು ಯೋಜನೆಯನ್ನು ಕೈಗೆತ್ತುಕೊಂಡೆವು. 2013ರಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆ ಸಭೆ ಮಾಡಿ ಡಿಪಿಆರ್ ತಯಾರು ಮಾಡಬೇಕು ಎಂದು ತೀರ್ಮಾನ ಮಾಡಿದೆವು. ಎಲ್ಲಾ ಪ್ರಕ್ರಿಯೆ ಮುಗಿದ ಮೇಲೆ ಡಿಪಿಆರ್ ತಯಾರು ಆಯಿತು. ಆಗಿನ ಜಲಸಂನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರು ರಿವೈಸ್ಡ್ ಡಿಪಿಆರ್ ಸಲ್ಲಿಸಿದ್ದಾರೆ. ನಮ್ಮ ಕಾಲದಲ್ಲಿ ಎಲ್ಲೂ ಸಹ ವಿಳಂಬವಾಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಜನಸಾಮಾನ್ಯರಿಗೊಂದು, ಕಾಂಗ್ರೆಸ್‍ಗೆ ಒಂದು ಕಾನೂನು ಇಲ್ಲ: ಆರಗ ಜ್ಞಾನೇಂದ್ರ

    ಮೇಕೆದಾಟು ಯೋಜನೆ ಕೋರ್ಟ್‍ನಲ್ಲಿ ವಿಚಾರಣೆಗಿದೆ. ಹಾಗಾಗಿ ಏನು ಮಾಡಲು ಆಗುವುದಿಲ್ಲ ಎಂದು ನಿರಾವರಿ ಸಚಿವ ಗೋವಿಂದ ಕಾರಜೋಳ ಹೇಳುತ್ತಿದ್ದಾರೆ. ಆದರೆ 2 ವರ್ಷದಿಂದ ಕ್ಲಿಯರೆನ್ಸ್ ತೆಗೆದುಕೊಂಡಿಲ್ಲ ಅಂದರೆ ಜನರಿಗೆ ಮಾಡಿರುವ ದ್ರೋಹವಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:  ಯಾರನ್ನಾದರೂ ಮುಟ್ಟಲಿ ನೋಡೋಣ, ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ: ಡಿಕೆಶಿ

    ಕುಡಿಯುವ ನೀರಿಗೆ ಪಾದಯಾತ್ರೆ ಮಾಡುತ್ತಿದ್ದೇವೆ. ಈ ಯೋಜನೆ ಜಾರಿಯಾದರೆ ಇನ್ನು 50 ವರ್ಷದವರೆಗೆ ಕುಡಿಯುವ ನೀರಿಗೆ ಸಮಸ್ಯೆ ಇರಲ್ಲ. ಇದರಿಂದಾಗಿ ಎರಡೂವರೆ ಕೋಟಿ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

    ತಮಿಳುನಾಡಿಗೆ ತಕರಾರು ತೆಗಿಯಲು ಯಾವುದೇ ಆಧಾರವಿಲ್ಲ. ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಈ ರೀತಿ ಮಾಡುತ್ತಿದೆ. ಬಿಜೆಪಿ ಅಧ್ಯಕ್ಷ ಅಣ್ಣಮಲೈ, ಸಿ.ಟಿ.ರವಿ ಕರ್ನಾಟಕದವರು ಎಂದು ಅವರು ಬೆಂಬಲ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಸರ್ಕಾರದ ನಿಯಮಕ್ಕೆ ಗೌರವ ಕೊಡಬೇಕು. ನಮಗೂ ಜವಬ್ದಾರಿ ಇದೆ. ಆ ಜವಾಬ್ದಾರಿಯನ್ನು ನಿರ್ವಹಿಸಿ ಪಾದಯಾತ್ರೆ ನಡೆಸುತ್ತಿದ್ದೇವೆ. ಬಿಜೆಪಿ ಎಷ್ಟೇ ತಡೆಯಲು ಪ್ರಯತ್ನಿಸಿದರೂ ನಾವು ನಿಲ್ಲಲ್ಲ. ಬೇರೆ ಬೇರೆ ಜಿಲ್ಲೆಯವರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ನಾಳೆ ಚಾಮರಾಜನಗರ, ನಾಡಿದ್ದು ಮೈಸೂರಿನವರು ಬರುತ್ತಾರೆ ಎಂದು ತಿಳಿಸಿದರು.

    ಇದೆ ಸಂದರ್ಭದಲ್ಲಿ ಪಾದಾಯಾತ್ರೆಯಲ್ಲಿ ಪಾಲ್ಗೊಂಡಿರುವ ಚಲನಚಿತ್ರ ವಾಣಿಜ್ಯ ಮಂಡಳಿ, ಸ್ವಾಮೀಜಿ, ರೈತ ಸಂಘ ಹಾಗೂ ಬೇರೆ ಬೇರೆ ಕ್ಷೇತ್ರದವರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.

  • ರಾಜಕೀಯಕ್ಕಾಗಿ ಪಾದಯಾತ್ರೆ ಮಾಡ್ತಿಲ್ಲ: ಸಿದ್ದರಾಮಯ್ಯ

    ರಾಜಕೀಯಕ್ಕಾಗಿ ಪಾದಯಾತ್ರೆ ಮಾಡ್ತಿಲ್ಲ: ಸಿದ್ದರಾಮಯ್ಯ

    ರಾಮನಗರ: ಮೇಕೆದಾಟು ಪಾದಯಾತ್ರೆಯನ್ನು ರಾಜಕೀಯಕ್ಕಾಗಿ ಮಾಡುತ್ತಿಲ್ಲ. ಬದಲಾಗಿ ರಾಜ್ಯದ ಹಿತಕ್ಕಾಗಿ ಮಾಡುತ್ತಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.

    ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾವುದೇ ಕಾನೂನು ಉಲ್ಲಂಘನೆ ಮಾಡುವುದಿಲ್ಲ. ಕೋವಿಡ್ ನಿಯಮ ಪಾಲನೆ ಮಾಡಿಯೇ ಪಾದಯಾತ್ರೆ ಮಾಡುತ್ತೇವೆ. ನಮ್ಮ ನೀರು ಬಳಸಿಕೊಳ್ಳಲು ನಾವು ಯಾಕೆ ತಮಿಳುನಾಡಿನವರನ್ನು ಕೇಳಬೇಕು ಎಂದು ವಾಗ್ದಾಳಿ ನಡೆಸಿದರು.

    ಕರ್ಫ್ಯೂ ವಿಚಾರವಾಗಿ ಮಾತನಾಡಿ, ನಾವು ಪಾದಯಾತ್ರೆ ಮಾಡುತ್ತಿರುವುದಕ್ಕೆ ಸರ್ಕಾರ ಕರ್ಫ್ಯೂ ವಿಧಿಸಿದೆ. ನಾವು ಎರಡು ತಿಂಗಳ ಹಿಂದೆಯೇ ಪಾದಯಾತ್ರೆ ಘೋಷಣೆ ಮಾಡಿದ್ದೆವು. ಆದರೆ ಇದನ್ನು ಮಾಡಬಾರದೆಂದು ಕರ್ಫ್ಯೂ ಹಾಕಿದ್ದಾರೆ. ರಾಜ್ಯದ ಹಿತ, ಬೆಂಗಳೂರಿನ ಜನರ ಹಿತಕ್ಕಾಗಿ ಈ ಪಾದಯಾತ್ರೆ ಮಾಡ್ತಿದ್ದೇವೆ. ನಮ್ಮ ನೀರು ನಾವು ಬಳಸಿಕೊಳ್ಳುತ್ತೇವೆ ಅಷ್ಟೆ. ಇದರಿಂದ ತಮಿಳುನಾಡಿಗೂ ಅನುಕೂಲ ಆಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಅಂಡರ್‌ಗ್ರೌಂಡ್‌ನಲ್ಲಿ ಕಂತೆ ಕಂತೆ ನೋಟು ಬಚ್ಚಿಟ್ಟಿದ್ದ ಉದ್ಯಮಿ – ಇವನ ಆಸ್ತಿ ಬಗ್ಗೆ ಮಾಹಿತಿ ನೀಡಿದ್ರೆ 10,000 ಬಹುಮಾನ

    ಹೆಚ್ಚು ಪೊಲೀಸರ ನಿಯೋಜನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುವುದಕ್ಕೆ ಹೆಚ್ಚು ಪೊಲೀಸ್‍ರನ್ನು ನಿಯೋಜಿಸಿದ್ದಾರೆ. ನಾವು ಯಾವುದೇ ಕಾನೂನು ಭಂಗ ಮಾಡುವುದಿಲ್ಲ. ಕಾನೂನು ಭಂಗ ಮಾಡದೇ ಪಾದಯಾತ್ರೆ ಮಾಡುತ್ತೇವೆ ಎಂದರು.  ಇದನ್ನೂ ಓದಿ: ಹಿಮದಲ್ಲಿ ದೃಢವಾಗಿ ನಿಂತ ಯೋಧನಿಗೆ ಒಂದು ಸೆಲ್ಯೂಟ್ – ವೀಡಿಯೋ ವೈರಲ್

  • ನೀವು ಇರಬೇಕು ಎನ್ನುವುದು ನನ್ನ ಆಸೆ: ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್

    ನೀವು ಇರಬೇಕು ಎನ್ನುವುದು ನನ್ನ ಆಸೆ: ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್

    ಶಿವಮೊಗ್ಗ: ಕೋವಿಡ್ ಹೆಚ್ಚಳವಾಗುತ್ತಿರುವುದರಿಂದ ನಿಮ್ಮ ಹೋರಾಟವನ್ನು ಮುಂದಕ್ಕೆ ಹಾಕಿ. ನೀವು ಇನ್ನೂ ಇರಬೇಕು ಎನ್ನುವುದು ನನ್ನ ಆಸೆಯಾಗಿದೆ ಎಂದು ಸಿದ್ದರಾಮಯ್ಯ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಟಾಂಗ್ ನೀಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಡಿಕೆಶಿ ಹಾಗೂ ಸಿದ್ದರಾಮಯ್ಯ ನಾವು ಇಬ್ಬರೇ ಪಾದಯಾತ್ರೆ ಮಾಡುತ್ತೇವೆ ಎನ್ನುತ್ತಿದ್ದಾರೆ. ನೀವು ಇಬ್ಬರೇ ಹೋಗಿ ಏಕೆ ಸಾಯುತ್ತೀರಿ. ನೀವು ಇಬ್ಬರೇ ಹೋಗುತ್ತೇವೆ ಅಂದರೂ ನಿಮ್ಮ ಕಾರ್ಯಕರ್ತರು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆ ಸೇರಿದಂತೆ ಅಸೆಂಬ್ಲಿ ಚುನಾವಣೆ ಸಹ ಬರುತ್ತಿದೆ. ಹೀಗಾಗಿ ಕಾರ್ಯಕರ್ತರು ನಿಮ್ಮ ಎದುರು ಶೋ ಮಾಡಲು ತುಂಬಾ ಜನ ಬರುತ್ತಾರೆ. ಸುಮ್ಮ ಸುಮ್ಮನೆ ಅವರನ್ನು ಸಾಯಿಸಿ, ನೀವು ಏಕೆ ಸಾಯುತ್ತೀರಾ. ನಾವು ನೀವು ಒಟ್ಟಿಗೆ ಸಂತೋಷವಾಗಿ ಜೀವನ ಮಾಡೋಣ. ರಾಜಕಾರಣ ಮಾಡುವ ಸಲುವಾಗಿ ಪಾದಯಾತ್ರೆ ಮಾಡಲೇಬೇಕು ಎಂದು ಹಠ ಹಿಡಿದರೆ ನನ್ನ ಅಭ್ಯಂತರ ಏನು ಇಲ್ಲ ಎಂದರು.

    ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಕ್ಕೆ ಹೋರಾಟ ಮಾಡುವ ಅವಕಾಶ ಇದೆ. ಆದರೆ ರಾಜಕಾರಣಕೋಸ್ಕರ ಕಾಂಗ್ರೆಸ್ ನವರು ಹೋರಾಟವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯದ ಜನ ಯೋಚನೆ ಮಾಡುತ್ತಿದ್ದಾರೆ. ನೀವು ಅಧಿಕಾರದಲ್ಲಿ ಇದ್ದಾಗ ಕೃಷ್ಣ, ಕಾವೇರಿ, ಮೇಕೆದಾಟು ಏಕೆ ಎಲ್ಲಾ ಮರೆತು ಹೋಗಿತ್ತು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾಂಗ್ರೆಸ್‍ನವ್ರು ರೈಲು, ಬಸ್ ಯಾವುದಲ್ಲಾದ್ರೂ ಹೋಗ್ಲಿ, ಆದ್ರೆ ಸಂದರ್ಭ ನೋಡಿ ಪ್ರತಿಭಟನೆ ಮಾಡ್ಲಿ: ಸುಧಾಕರ್

    ದೇಶದಲ್ಲಿ, ರಾಜ್ಯದಲ್ಲಿ ವಿರೋಧ ಪಕ್ಷ ಇರಲೇಬೇಕು. ಆದರೆ ಇಂದು ವಿರೋಧ ಪಕ್ಷವೇ ಇಲ್ಲದ ಹಾಗೆ ಹೋಗಿದೆ. ಕೇಂದ್ರದಲ್ಲಿ ಅಧಿಕೃತವಾಗಿ ವಿರೋಧ ಪಕ್ಷವೇ ಇಲ್ಲ. ರಾಜ್ಯದಲ್ಲಿ ನಾಳೆ ಅಸೆಂಬ್ಲಿ ಚುನಾವಣೆ ಎದುರಾದರೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ವಿಪಕ್ಷದಲ್ಲಿ ಇರುವ ಪರಿಸ್ಥಿತಿಯೇ ಇಲ್ಲ.

    ಯೋಜನೆ ಬಗ್ಗೆ ಕೇಂದ್ರದ ಗಮನಕ್ಕೆ ತಂದು ಏನೇನು ಆಗಬೇಕಿದೆಯೋ, ಆ ಕೆಲಸ ಮಾಡುತ್ತೇವೆ. ಮೇಕೆದಾಟು ಯೋಜನೆಯನ್ನು ಮಾಡಿಯೇ ಮಾಡುತ್ತೇವೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದವರು, ಅವರಿಗೆ ಸರ್ಕಾರದ ನೀತಿ ನಿಯಮಗಳು ಗೊತ್ತಿಲ್ವಾ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ನಾವು ಸರ್ಕಾರದ ನಿರ್ಧಾರವನ್ನು ಧಿಕ್ಕರಿಸುತ್ತೇವೆ ಎಂದಿದ್ದೇವಾ. ನಮ್ಮನ್ನು ಅರೆಸ್ಟ್ ಮಾಡಿ, ಆದರೂ ಹೋರಾಟ ಮಾಡುತ್ತೇವೆ ಎನ್ನುತ್ತೀರಾ. ಇಂತಹ ಪೌರುಷದ ಮಾತು ಬೇಡ. ನೀವು ಹೋರಾಟ ಮಾಡಿ ಬೇಡ ಅನ್ನುವುದಿಲ್ಲ. ಆದರೆ ಜನರಿಗೆ ಒಳ್ಳೆಯದು ಆಗುವ ರೀತಿಯಲ್ಲಿ ಹೋರಾಟ ಮಾಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘಿಸಿ ಹೋರಾಟ ಮಾಡ್ಬೇಡಿ – ಕಾಂಗ್ರೆಸ್‍ಗೆ ಕಾರಜೋಳ ಮನವಿ