Tag: Mekedatu dam

  • ಕೇಂದ್ರ ಮಧ್ಯಸ್ಥಿಕೆ ವಹಿಸಲಿ, ಮೇಕೆದಾಟು ಅಣೆಕಟ್ಟು ಕಟ್ಟಲು ಸಿದ್ಧ – ಸಿದ್ದರಾಮಯ್ಯ

    ಕೇಂದ್ರ ಮಧ್ಯಸ್ಥಿಕೆ ವಹಿಸಲಿ, ಮೇಕೆದಾಟು ಅಣೆಕಟ್ಟು ಕಟ್ಟಲು ಸಿದ್ಧ – ಸಿದ್ದರಾಮಯ್ಯ

    ಮೈಸೂರು: ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಲಿ ಮೇಕೆದಾಟು ಅಣೆಕಟ್ಟು (Mekedatu Dam) ಕಟ್ಟಲು ನಾವು ಸಿದ್ಧರಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ (Mekedatu Project) ವಿಚಾರಕ್ಕೆ ಪ್ರತಿಕ್ರಿಯಿಸಿದರು. ಮೇಕೆದಾಟು ಅಣೆಕಟ್ಟು ಕಟ್ಟಲು ನಾವು ಸಿದ್ಧರಿದ್ದೇವೆ. ತಮಿಳುನಾಡಿನವರು ರಾಜಕೀಯ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ. ಆದ್ದರಿಂದ ಕೇಂದ್ರದವರು (Union Government) ಮಧ್ಯಸ್ಥಿಕೆ ವಹಿಸಲಿ ಅಂತ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ದೇವೇಗೌಡರ ಕುಟುಂಬಕ್ಕೆ ಎಷ್ಟು ಸೈಟು ಬರೆಸಿಕೊಂಡಿದ್ದಾರೆ ಪಟ್ಟಿ ಕೊಡ್ಲಾ? – ಸಿದ್ದರಾಮಯ್ಯ

    ವಿತ್ತ ಸಚಿವರು ಕರ್ನಾಟಕದ ಋಣ ತೀರಿಸಬಾರದಾ?
    ಇದೇ ವೇಳೆ ನೀತಿ ಆಯೋಗದ ಸಭೆಗೆ ಗೈರಾದ ವಿಚಾರಕ್ಕೆ ಪ್ರತಿಕ್ರಿಯಿಸಿ, ಉದ್ದೇಶ ಪೂರ್ವಕವಾಗಿ ನೀತಿ ಆಯೋಗದ ಸಭೆಗೆ ಬಾಯ್ಕಾಟ್ ಮಾಡಿದ್ದೇನೆ. ನಾನು ಮಾತ್ರ ಅಲ್ಲ, ಬಿಜೆಪಿಯೇತರ ಸರ್ಕಾರದ ರಾಜ್ಯಗಳು ಬಾಯ್ಕಾಟ್ ಮಾಡಿದ್ದಾರೆ. ರಾಜ್ಯಕ್ಕೆ ನ್ಯಾಯವೇ ಸಿಗದಿದ್ದ ಮೇಲೆ ಸಭೆಗೆ ಹೋಗಿ ಏನು ಪ್ರಯೋಜನ? ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಸಂಪೂರ್ಣ ಅನ್ಯಾಯವಾಗಿದೆ. ಪ್ರತಿ ಬಾರಿಯೂ ನಿರ್ಮಾಲಾ ಸೀತಾರಾಮನ್ ರಾಜ್ಯಕ್ಕೆ ಬಂದು ಸುಳ್ಳು ಹೇಳಿ ಹೋಗುತ್ತಾರೆ. ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಕರ್ನಾಟಕದ ಋಣ ತೀರಿಸಿಬಾರದಾ? ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ರಾಮನಗರ ಹೆಸರು ಬದಲಾವಣೆಗೆ ಸಂಘಟನೆಗಳ ವಿರೋಧ – ರಾಜ್ಯಪಾಲರಿಗೆ ಮನವಿ ಸಲ್ಲಿಸಲು ನಿರ್ಧಾರ

    ಕುಮಾರಸ್ವಾಮಿ ಮಂಡ್ಯದಿಂದ ಆಯ್ಕೆಯಾಗಿದ್ದಾರೆ. ಮಂಡ್ಯ ಕ್ಷೇತ್ರಕ್ಕೆ ಕಾರ್ಖಾನೆ ತಂದಿದ್ದಾರಾ? 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯ ದೇಶದ ಯಾವ ರಾಜ್ಯಕ್ಕೂ ಆಗಿಲ್ಲ. ಅತಿ ಹೆಚ್ಚು ತೆರಿಗೆ ಕೊಡುವ 2ನೇ ರಾಜ್ಯ ಕರ್ನಾಟಕ ಇಂತಹ ರಾಜ್ಯಕ್ಕೆ ಅನ್ಯಾಯಾಗುತ್ತಿದೆ. ಅನ್ಯಾಯ ಆಗಿಲ್ಲ ಎಂದು ಕೇಂದ್ರ ಸಚಿವರು ಹೇಳುತ್ತಾರೆ. ಆಂಧ್ರ ಪ್ರದೇಶ, ಬಿಹಾರಕ್ಕೆ ಕೊಟ್ಟಿರುವ ಅನುದಾನ ಎಷ್ಟು? ನಮ್ಮದು ಎಷ್ಟು ಎಂದು ಹೇಳಲಿ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಹಳೇಯ ಯಾವ ಯೋಜನೆಗಳಿಗೆ ದುಡ್ಡು ಕೊಟ್ಟಿಲ್ಲ. ನಮಗೆ ಪಾಠ ಮಾಡಲು ಬರುತ್ತಾರಾ? ನಿರ್ಮಾಲಾ ಸೀತಾರಾಮನ್ ವಿರುದ್ಧ ಸಿಎಂ ನಡೆದಿಸಿದರು.

    ಕರಪ್ಷನ್ ಸಂಪೂರ್ಣ ಹೋಗಿದೆ ಅಂತ ಹೇಳಲ್ಲ:
    ನನ್ನ ಅವಧಿಯಲ್ಲಿ ಕರಪ್ಷನ್ ಸಂಪೂರ್ಣ ಹೋಗಿದೆ ಎಂದು ಹೇಳಲ್ಲ. ಆದರೆ ಕಡಿಮೆಯಾಗಿದೆ ಎಂದು ಹೇಳಬಲ್ಲೆ. ಬಿಜೆಪಿಯ ಅವಧಿಯಲ್ಲಿ ಭ್ರಷ್ಟಾಚಾರ ಎಷ್ಟಿತ್ತು? ಅದನ್ನ ಇಡೀ ದೇಶವೇ ನೋಡಿದೆ. ಈಗ ಕರ್ನಾಟಕವನ್ನ ಭ್ರಷ್ಟ್ರ ರಾಜ್ಯ ಎಂದು ಬಿಂಬಿಸುವ ಯತ್ನವನ್ನ ಬಿಜೆಪಿ ಮಾಡುತ್ತಿದೆ. ಸಂಸತ್‌ನಲ್ಲಿ ಕರ್ನಾಟಕಕ್ಕೆ ಭ್ರಷ್ಟಚಾರದ ಹಣೆ ಪಟ್ಟಿ ಕಟ್ಟುವ ಯತ್ನ ನಡೆಯುತ್ತಿದೆ. ಬಿಜೆಪಿಗೆ ಮಾನ ಮರ್ಯಾದೆ ಇದ್ಯಾ? ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಬಿಹಾರದಲ್ಲಿ ಮೀಸಲಾತಿ ಹೆಚ್ಚಿಸಿದ್ದ ನಿತೀಶ್‌ಗೆ ಹಿನ್ನಡೆ – ಹೈಕೋರ್ಟ್‌ ಆದೇಶಕ್ಕೆ ತಡೆ ನೀಡದ ಸುಪ್ರೀಂ

  • ಯಾವುದೇ ಕಾರಣಕ್ಕೂ ಮೇಕೆದಾಟು ನಿರ್ಮಾಣಕ್ಕೆ ಅನುಮತಿ ನೀಡಲ್ಲ: ತಮಿಳುನಾಡು ಸರ್ಕಾರ

    ಯಾವುದೇ ಕಾರಣಕ್ಕೂ ಮೇಕೆದಾಟು ನಿರ್ಮಾಣಕ್ಕೆ ಅನುಮತಿ ನೀಡಲ್ಲ: ತಮಿಳುನಾಡು ಸರ್ಕಾರ

    ನವದೆಹಲಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಲು ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್‍ಗೆ ತಮಿಳುನಾಡು ಸರ್ಕಾರ ಹೇಳಿದೆ.

    ಸೋಮವಾರ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಹಿನ್ನೆಲೆ ಪ್ರಕರಣ ಸಂಬಂಧ ವಿವರಣೆ ನೀಡುವಂತೆ ಸುಪ್ರೀಂಕೋರ್ಟ್ ಕಳೆದ ವಿಚಾರಣೆ ವೇಳೆ ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್ ಗೆ ಉತ್ತರಿಸಿರುವ ತಮಿಳುನಾಡು ಸರ್ಕಾರ ಮೇಕೆದಾಟು ಅಣೆಕಟ್ಟು ನಿರ್ಮಾಣ ಬಗ್ಗೆ ನಿರ್ಧರಿಸುವ ಯಾವುದೇ ಅಧಿಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಇಲ್ಲ ಎಂದು ಹೇಳಿದೆ.

    ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸುಪ್ರೀಂಕೋರ್ಟ್ ನೀಡಿದ ಕಾರ್ಯ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು, ನೀರು ಹಂಚಿಕೆ ಬಗ್ಗೆ ಪರಿಶೀಲನೆ ಮಾಡಬೇಕು. ಈ ಪ್ರಾಧಿಕಾರಕ್ಕೆ ಅಣೆಕಟ್ಟು ನಿರ್ಮಾಣ ಮಾಡುವ ಬಗ್ಗೆ ನಿರ್ಧರಿಸುವ ಅಧಿಕಾರ ಇಲ್ಲ. ಹೀಗಾಗಿ ತನ್ನ ಸಭೆಯಲ್ಲಿ ಅಣೆಕಟ್ಟು ನಿರ್ಮಾಣದ ಬಗ್ಗೆ ಅಥವಾ ಮೇಕೆದಾಟು ಡಿಪಿಆರ್ ಬಗ್ಗೆ ಚರ್ಚೆ ಮಾಡಬಾರದು ಎಂದು ಹೇಳಿದೆ.

    River

    ಕಳೆದ ಒಂಭತ್ತು ವರ್ಷದಲ್ಲಿ ಐದು ವರ್ಷ ಕರ್ನಾಟಕ ಸಮರ್ಪಕ ನೀರು ಹರಿಸದೇ ತಮಿಳುನಾಡಿಗೆ ಮೋಸ ಮಾಡಿದೆ. ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ಕೆಳ ಹಂತದ ರಾಜ್ಯಗಳಿಗೆ ತೊಂದರೆಯಾಗಲಿದೆ. ಹೀಗಾಗಿ ಅಣೆಕಟ್ಟು ನಿರ್ಮಾಣ ಮಾಡಬಾರದು ಎಂದು ತನ್ನ ಅಫಿಡೆವಿಟ್ ನಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಮೇಕೆದಾಟು ಆಣೆಕಟ್ಟು ನಿರ್ಮಾಣ ಯೋಜನೆ- ಜು. 26ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

    ಇನ್ನು ಕರ್ನಾಟಕವೂ ಈ ಬಗ್ಗೆ ಉತ್ತರಿಸಿದ್ದು ಮೇಕೆದಾಟು ಯೋಜನೆ ಕರ್ನಾಟಕದ ಯೋಜನೆಯಾಗಿದ್ದು ತಮಿಳುನಾಡು ಅನುಮತಿ ಅಗತ್ಯ ಇಲ್ಲ. ಇದು ಕುಡಿಯುವ ನೀರು ಮತ್ತು ಹೈಡ್ರೋ ಪವರ್ ಪ್ರಾಜೆಕ್ಟ್ ಯೋಜನೆಯಾಗಿದೆ. ಇದರಿಂದ ತಮಿಳುನಾಡಿಗೆ ನೀರಿನ ಕೊರತೆಯಾಗುವುದಿಲ್ಲ. ನೀರಿನ ಕೊರತೆಯ ಬಗ್ಗೆ ಪ್ರಾಧಿಕಾರ ಸಭೆಯಲ್ಲಿ ಚರ್ಚಿಸಬಹುದು ಎಂದು ತಿಳಿಸಿದೆ.

    ಮೇಕೆದಾಟು ಅಣೆಕಟ್ಟು ನಿರ್ಮಿಸಲು ಹೊರಟಿರುವ ಕರ್ನಾಟಕ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಡಿಪಿಆರ್ ಬಗ್ಗೆ ಚರ್ಚಿಸಲು ಅನುಮತಿ ಕೇಳಿತ್ತು. ಇದಕ್ಕೆ ಪ್ರಾಧಿಕಾರ ಒಪ್ಪಿಕೊಂಡಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಪ್ರಾಧಿಕಾರದ ಸಭೆಯಲ್ಲಿ ಚರ್ಚೆ ನಡೆಸಿದಂತೆ ಸೂಚಿಸಲು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ಬಗ್ಗೆ ಸೋಮವಾರ ವಿಸ್ತೃತ ವಿಚಾರಣೆ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರ – ತಮಿಳುನಾಡಿನಿಂದ ಮತ್ತೆ ತಕರಾರು

    ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರ – ತಮಿಳುನಾಡಿನಿಂದ ಮತ್ತೆ ತಕರಾರು

    ನವದೆಹಲಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿರ್ಧಾರಗಳಿಗೆ ತಮಿಳುನಾಡು ಮತ್ತೆ ಅಡ್ಡಗಾಲು ಹಾಕುವ ಪ್ರಯತ್ನ ಆರಂಭಿಸಿದೆ.

    ಸುಪ್ರೀಂ ಕೋರ್ಟ್‍ಗೆ ಹೊಸ ಅರ್ಜಿಯೊಂದನ್ನು ಸಲ್ಲಿಸಿರುವ ಎಂ.ಕೆ.ಸ್ಟಾಲಿನ್ ನೇತೃತ್ವದ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಮೇಕೆದಾಟು ಯೋಜನೆಯ ಬಗ್ಗೆ ಚರ್ಚಿಸದಂತೆ ತಡೆಯಾಜ್ಞೆ ನೀಡಲು ಮನವಿ ಮಾಡಿದೆ. ಇದನ್ನೂ ಓದಿ: RSS ಚಡ್ಡಿ ಬಗ್ಗೆ ಸಿದ್ದರಾಮಯ್ಯ ಭಯಭೀತರಾಗಿದ್ದಾರೆ: ಕೋಟ ಶ್ರೀನಿವಾಸ ಪೂಜಾರಿ 

    ಇಂದು ಈ ಬಗ್ಗೆ ಅರ್ಜಿ ಸಲ್ಲಿಸಿರುವ ತಮಿಳುನಾಡು ಸರ್ಕಾರ, ಮೇಕೆದಾಟು ಯೋಜನೆ ಬಗ್ಗೆ ಚರ್ಚಿಸಲು ಕರ್ನಾಟಕ ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಲಿಖಿತ ಮನವಿ ಮಾಡಿದೆ. ಪ್ರಾಧಿಕಾರದ ಅಧಿಕಾರಿಗಳು ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುವ ಭರವಸೆ ನೀಡಿದೆ.

    ಸುಪ್ರೀಂ ಕೋರ್ಟ್‍ನಲ್ಲಿ ಮೇಕೆದಾಟು ಯೋಜನೆಗೆ ಸಂಬಂಧಿಸಿದ ಮೂಲ ಅರ್ಜಿಯ ವಿಚಾರಣೆ ಬಾಕಿ ಇರುವ ಹೊತ್ತಲ್ಲಿ ಪ್ರಾಧಿಕಾರಕ್ಕೆ ಈ ಬಗ್ಗೆ ಚರ್ಚಿಸುವ ಯಾವುದೇ ಅಧಿಕಾರವಿಲ್ಲ. ಕೇಂದ್ರ ಸರ್ಕಾರವೇ ಡಿಪಿಆರ್ ಸಲ್ಲಿಸಲು ಅನುಮತಿ ನೀಡಿದ್ದು, ಆದರೆ ಪರಿಸರ ಇಲಾಖೆ ಅನುಮತಿಗೆ ನೆರೆ ರಾಜ್ಯಗಳ ಅನುಮತಿ ಅಗತ್ಯ ಎಂದು ಹೇಳಿದೆ. ಹೀಗಾಗಿ ಪ್ರಾಧಿಕಾರದ ಸಭೆಯಲ್ಲಿ ಈ ಬಗ್ಗೆ ಚರ್ಚಿಸುವುದು ಸೂಕ್ತವಲ್ಲ. ಇದನ್ನೂ ಓದಿ:  KRDIL ಅಧಿಕಾರಿಗಳಿಂದ ಕಟ್ಟಡ ನಿರ್ಮಾಣ: ಮೈಮೇಲೆ ಗೇಟ್ ಬಿದ್ದು ಬಾಲಕ ಸಾವು

    ಈ ಹಿನ್ನೆಲೆ ಮುಂದಿನ ಸಭೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳು ಮೇಕೆದಾಟು ಅಣೆಕಟ್ಟು ನಿರ್ಮಾಣದ ಬಗ್ಗೆ ಚರ್ಚೆ ಮಾಡದಂತೆ ಹಾಗೂ ಯಾವುದೇ ಆದೇಶಗಳನ್ನು ಮಾಡದಂತೆ ಕೋರ್ಟ್ ತಡೆಯಾಜ್ಞೆ ನೀಡಬೇಕು ಎಂದು ತಮಿಳುನಾಡು ತನ್ನ ಅರ್ಜಿಯಲ್ಲಿ ಮನವಿ ಮಾಡಿದೆ.

  • ಮೇಕೆದಾಟು ಅಣೆಕಟ್ಟು ನಿರ್ಮಾಣ ವಿವಾದ – ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

    ಮೇಕೆದಾಟು ಅಣೆಕಟ್ಟು ನಿರ್ಮಾಣ ವಿವಾದ – ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

    ನವದೆಹಲಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಎಂ ಖಾನಿಲ್ವಕರ್ ನೇತೃತ್ವದ ದ್ವಿ-ಸದಸ್ಯ ಪೀಠ ವಿಚಾರಣೆ ಮುಂದೂಡಿತು.

    ಹಸಿರು ನ್ಯಾಯಾಧಿಕರಣಗಳಿಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಬಗೆಗೆ ಇರುವ ಅಧಿಕಾರಗಳ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಆದೇಶ ಬಾಕಿ ಇದ್ದು, ಈ ಹಂತದಲ್ಲಿ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೂಕ್ತವಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಇಂತಹ ಕೆಟ್ಟ ಸರ್ಕಾರವನ್ನು ರಾಜಕೀಯ ಜೀವನದಲ್ಲಿ ನೋಡಿಲ್ಲ: ಸಿದ್ದರಾಮಯ್ಯ

    ಕರ್ನಾಟಕ ಸರ್ಕಾರವು ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಅಕ್ರಮವಾಗಿ ಅಣೆಕಟ್ಟೆ ನಿರ್ಮಿಸುತ್ತಿದೆ ಎಂಬ ಪತ್ರಿಕಾ ವರದಿ ಆಧರಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ದಕ್ಷಿಣದ ಹಸಿರು ಪೀಠ, ಮೇ 21ರಂದು ಸಮಿತಿಯೊಂದನ್ನು ರಚಿಸಿ ಸ್ಥಳ ಪರಿಶೀಲನೆಗಾಗಿ ಆದೇಶಿಸಿತ್ತು. ಮೇಕೆದಾಟು ಸ್ಥಳ ಪರಿಶೀಲನೆಗಾಗಿ ಸಮಿತಿ ರಚಿಸಿ ದಕ್ಷಿಣ (ಚೆನ್ನೈ) ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಕರ್ನಾಟಕ ದೆಹಲಿಯಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಧಿಕರಣಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಇದನ್ನೂ ಓದಿ: ಮಾನಮರ್ಯಾದೆ ಇಲ್ಲದ ಸರ್ಕಾರದ ವಿರುದ್ಧ ಜನರ ಧ್ವನಿಯಾಗಿ ಹೋರಾಟ: ಡಿ.ಕೆ ಶಿವಕುಮಾರ್

    ಅರ್ಜಿ ವಿಚಾರಣೆ ನಡೆಸಿದ್ದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಚೆನೈ ಪೀಠ ನೀಡಿದ್ದ ಆದೇಶವನ್ನು ರದ್ದು ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಈಗ ತಮಿಳುನಾಡು ಸುಪ್ರೀಂಕೋರ್ಟ್ ಮೇಲ್ಮನವಿ ಅರ್ಜಿ ಸಲ್ಲಿಸಿದೆ.

  • ಮೇಕೆದಾಟು ಡ್ಯಾಂ – ಕರ್ನಾಟಕಕ್ಕೆ ಆರಂಭಿಕ ಗೆಲುವು, ತಮಿಳುನಾಡಿಗೆ ಮುಖಭಂಗ

    ಮೇಕೆದಾಟು ಡ್ಯಾಂ – ಕರ್ನಾಟಕಕ್ಕೆ ಆರಂಭಿಕ ಗೆಲುವು, ತಮಿಳುನಾಡಿಗೆ ಮುಖಭಂಗ

    ಬೆಂಗಳೂರು: ತಮಿಳುನಾಡು ವಿರೋಧದ ನಡುವೆ ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಆರಂಭಿಕ ಒಪ್ಪಿಗೆ ಸಿಕ್ಕಿದೆ. ಕೇಂದ್ರ ಜಲ ಸಂಪನ್ಮೂಲ ಇಲಾಖೆಯಿಂದ ಪ್ರಾಥಮಿಕ ಹಂತದ ಅನುಮತಿ ದೊರಕಿದ್ದು ಯೋಜನೆ ವಿರೋಧಿಸಿದ್ದ ತಮಿಳುನಾಡಿಗೆ ತೀವ್ರ ಹಿನ್ನಡೆಯಾಗಿದೆ. ಮೇಕೆದಾಟು ಯೋಜನೆ ಸಾಧ್ಯಸಾಧ್ಯತೆ ಸಂಬಂಧಿಸಿದಂತೆ ಪ್ರಾಥಮಿಕ ವರದಿ “ಪ್ರಿ-ಫೀಸಿಬಿಲಿಟಿ ರಿಪೋರ್ಟ್” ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ನಿರ್ದೇಶನ ನೀಡಿದೆ.

    ಈ ಬಗ್ಗೆ ಕೇಂದ್ರ ಜಲ ಸಂಪನ್ಮೂಲ ಅಧಿಕಾರಿಗಳು ರಾಜ್ಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಯೋಜನೆಯ ಪ್ರಾಥಮಿಕ ವರದಿ ನೀಡಲು ಸೂಚನೆ ನೀಡಿದೆ. ಕಾವೇರಿ ನದಿ ನೀರು ಹಂಚಿಕೆ ವಿವಾದ ಬಳಿಕ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡುವಂತೆ ಕೇಂದ್ರ ಜಲಸಂಪನ್ಮೂಲ ಇಲಾಖೆಗೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿತ್ತು. ಕರ್ನಾಟಕದಲ್ಲೇ ಅಣೆಕಟ್ಟು ನಿರ್ಮಿಸಿಕೊಳ್ಳುತ್ತಿದ್ದು, ತಮಿಳುನಾಡಿನ ಒಪ್ಪಿಗೆಯ ಅವಶ್ಯಕತೆ ಇಲ್ಲ ಎಂದಿತ್ತು.

    ಮೇಕೆದಾಟು ಯೋಜನೆಯಿಂದ ಮಳೆಗಾಲದ ಸಂದರ್ಭದಲ್ಲಿ ಸಮುದ್ರಕ್ಕೆ ಹರಿದು ಹೋಗಬಹುದಾದ ಹೆಚ್ಚುವರಿ ನೀರನ್ನು ಸಂಗ್ರಹಿಸಿ ಇಡಬಹುದು. ಬೇಸಿಗೆ ವೇಳೆ ಕರ್ನಾಟಕ ಹಾಗೂ ತಮಿಳುನಾಡು ಈ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಬಹುದು. ಜಲವಿದ್ಯುತ್ ಉತ್ಪಾದನೆಗೂ ಅನುಕೂಲ ಆಗಲಿದೆ ಎಂದು ಕೇಂದ್ರದ ಮುಂದೆ ಕರ್ನಾಟಕ ಪ್ರಸ್ತಾವನೆ ಸಲ್ಲಿಸಿತ್ತು. ಕರ್ನಾಟಕ ಪ್ರಸ್ತಾವನೆಯನ್ನು ಪರಿಗಣಿಸಿರುವ ಕೇಂದ್ರ ಜಲಸಂಪನ್ಮೂಲ ಇಲಾಖೆ ಯೋಜನೆಯು ಪ್ರಾಥಮಿಕ ವರದಿ ಕುರಿತು ಮಾಹಿತಿ ನೀಡುವಂತೆ ಕೋರಿದೆ. ಕೇಂದ್ರದ ಈ ನಡೆಯಿಂದ ಕಾಲುಕೆರೆದು ಜಗಳಕ್ಕೆ ಬರುತ್ತಿದ್ದ ತಮಿಳುನಾಡಿಗೆ ಮುಖಭಂಗವಾಗಿದೆ.

    ತಮಿಳುನಾಡಿಗೆ ಹಿನ್ನಡೆ:
    ಸೆಪ್ಟೆಂಬರ್ ತಿಂಗಳಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡುವಂತೆ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಭೇಟಿಯಾಗಿ ಮನವಿ ಮಾಡಿದ್ದರು. ಈ ಬೆನ್ನಲ್ಲೇ ತಮಿಳುನಾಡು ಸಿಎಂ ಪಳನೀಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮೇಕೆದಾಟು ಯೋಜನೆ ಒಪ್ಪಿಗೆ ಸೂಚಿಸದಂತೆ ಒತ್ತಾಯಿಸಿದ್ದರು. ಅಲ್ಲದೇ ಮೇಕೆದಾಟು ಯೋಜನೆ ಪ್ಲಾನ್ ಸರಿ ಇಲ್ಲ ಅಣೆಕಟ್ಟು ನಿರ್ಮಾಣದಿಂದ ನದಿ ನೀರಿನ ನೈಸರ್ಗಿಕ ಹರಿವಿಗೆ ತೊಂದರೆ ಆಗಲಿದೆ. ಅಲ್ಲದೆ ಇದರಿಂದ ಪರಿಸರಕ್ಕೆ ದಕ್ಕೆಯಾಗುವ ಸಾಧ್ಯತೆ ಇದ್ದು, ಕರ್ನಾಟಕ ಮನವಿ ತಿರಸ್ಕರಿಸಬೇಕು ಎಂದು ಪತ್ರವನ್ನು ಬರೆದಿದ್ದರು.

    ಈಗ ತಮಿಳುನಾಡು ವಿರೋಧದ ನಡುವೆಯೇ ಜಲಸಂಪನ್ಮೂಲ ಇಲಾಖೆ ವರದಿ ಕೇಳಿರುವುದು ಕರ್ನಾಟಕ ಪಾಲಿಗೆ ಆಶಾಭಾವನೆ ಮೂಡಿಸಿದೆ. ಕಾವೇರಿ, ಮಹದಾಯಿ ಬಳಿಕ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಶುಭ ಸುದ್ದಿ ಸಿಗುವ ಸಾಧ್ಯತೆ ಕಂಡುಬರುತ್ತಿದೆ. ಸದ್ಯ ಇದು ಕರ್ನಾಟಕದ ಆರಂಭಿಕ ಜಯ ಎನಿಸಿದರೂ ಪ್ರಾಥಮಿಕ ವರದಿ ಬಳಿಕ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಹಾಗೂ ತಾಂತ್ರಿಕ ವಿಭಾಗಗಳಿಂದ ಮೇಕೆದಾಟು ಯೋಜನೆಗೆ ಒಪ್ಪಿಗೆ ಸಿಗಬೇಕಿದೆ.

    ಏನಿದು ಮೇಕೆದಾಟು ಯೋಜನೆ?
    ಮೇಕೆದಾಟು ಬಳಿ ಕುಡಿಯುವ ನೀರಿನ ಯೋಜನೆಗಾಗಿ ಕಾವೇರಿ ನದಿಗೆ ಅಡ್ಡಲಾಗಿ ಕಿರು ಅಣೆಕಟ್ಟು ಕಟ್ಟಲು ಕರ್ನಾಟಕ ಸರ್ಕಾರ ಮುಂದಾಗಿದೆ. ಕಾವೇರಿ ನದಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿ ಬಾರಿಯೂ ಕ್ಯಾತೆ ತೆಗೆಯುವ ತಮಿಳುನಾಡು ಈಗ ಮತ್ತೆ ಅಣೆಕಟ್ಟು ನಿರ್ಮಾಣ ಮಾಡುವುದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದೆ. ಅಷ್ಟೇ ಅಲ್ಲದೇ ಸುಪ್ರೀಂ ಕೋರ್ಟ್‍ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ ಈ ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದೆ.

    ಕರ್ನಾಟಕ ಸರ್ಕಾರ ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಿಸಲು ಹೊರಟ್ಟಿದ್ದು ಯಾಕೆ?
    ಕಾವೇರಿ ನ್ಯಾಯಾಧೀಕರಣ ಐತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪ್ರತಿವರ್ಷ ಕರ್ನಾಟಕ 177 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಆದೇಶ ನೀಡಿದೆ. ಈ ನೀರಿನ ಜೊತೆಗೆ ಹೆಚ್ಚುವರಿಯಾಗಿ ಒಂದು ಅಂದಾಜಿನ ಪ್ರಕಾರ 80, 90 ಟಿಎಂಸಿ ನೀರು ತಮಿಳುನಾಡಿಗೆ ಸೇರುತ್ತದೆ. ಹೀಗೆ ರಾಜ್ಯದಿಂದ ಹರಿದು ಹೋಗುತ್ತಿರುವ ಈ ನೀರನ್ನು ಸಂಗ್ರಹಿಸಿ ಬೆಂಗಳೂರು ನಗರಕ್ಕೆ ಪೂರೈಕೆ ಮಾಡಲು ಕರ್ನಾಟಕ ಸರ್ಕಾರ ಅಣೆಕಟ್ಟು ನಿರ್ಮಿಸಲು ಹೊರಟಿದೆ.

    ತಮಿಳುನಾಡು ವಿರೋಧ ಯಾಕೆ?
    ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಬೇಕೆಂಬ ಪ್ರಸ್ತಾಪ 1952ರಲ್ಲೇ ಚಿಗುರೊಡೆದಿತ್ತು. ಆದರೆ ಕೆಲ ಕಾರಣಗಳಿಂದ ಈ ಯೋಜನೆಯನ್ನು ಸರ್ಕಾರ ಕೈಬಿಟ್ಟಿತ್ತು. 1996ರಲ್ಲಿ ಮೇಕೆದಾಟುವಿನಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿ ಕೇಂದ್ರ ವಿದ್ಯುತ್ ಪ್ರಾಧಿಕಾರಕ್ಕೆ ಅನುಮೋದನೆಗೆ ಕಳುಹಿಸಿಕೊಟ್ಟಿತ್ತು. ಆದರೆ ಇದೇ ಸಮಯದಲ್ಲಿ ಕಾವೇರಿ ವಿವಾದ ನ್ಯಾಯಾಧಿಕರಣ ಮುಂದೆ ಇದ್ದ ಕಾರಣ ಮೊದಲು ಈ ವಿವಾದವನ್ನು ಬಗೆಹರಿಸಿಕೊಳ್ಳಿ, ನಂತರ ಈ ವಿಚಾರವನ್ನು ಪ್ರಸ್ತಾಪ ಮಾಡಿ ಎಂದು ಹೇಳುವ ಮೂಲಕ ವಿದ್ಯುತ್ ಪ್ರಾಧಿಕಾರ ಉಪಾಯದಿಂದ ಜಾರಿಕೊಂಡಿತ್ತು. 2007ರಲ್ಲಿ ನ್ಯಾಯಾಧಿಕರಣ ಅಂತಿಮ ತೀರ್ಪು ಪ್ರಕಟಿಸಿದ ಬಳಿಕ ಮತ್ತೆ ಮೇಕೆದಾಟು ಯೋಜನೆ ಗರಿಗೆದರತೊಡಗಿತು. ಅಂತಿಮವಾಗಿ 2013ರಲ್ಲಿ ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ನಿರ್ಮಿಸಲು ಮಹತ್ವದ ಹೆಜ್ಜೆ ಇಟ್ಟಿತು. ರಾಜ್ಯ ಸರ್ಕಾರ ಅಣೆಕಟ್ಟು ನಿರ್ಮಿಸಲು ಮುಂದಾಗುತ್ತಿದ್ದಂತೆ ಆಗಿನ ತಮಿಳುನಾಡು ಸಿಎಂ ಜಯಲಲಿತಾ ಕೇಂದ್ರದ ಮೊರೆ ಹೋಗಿ, ಸುಪ್ರೀಂನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದರು. ಈಗ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧವಾಗುತ್ತಿದ್ದು ತಮಿಳುನಾಡು ಸಿಎಂ ಪಳನಿಸ್ವಾಮಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

    ತಮಿಳುನಾಡು ವಾದ ಏನು?
    ಕಾವೇರಿ ನ್ಯಾಯಾಧಿಕರಣದಲ್ಲಿ ನೀರು ಹಂಚಿಕೆ ವಿಚಾರಣೆ ನಡೆಯುವ ವೇಳೆ ಮೇಕೆದಾಟು ವಿಚಾರ ಪ್ರಸ್ತಾಪವಾಗಿಲ್ಲ. ಆದರೆ ಸರ್ಕಾರ ಈಗ ಯೋಜನೆ ಮುಂದಾಗಿದ್ದು ನ್ಯಾಯಮಂಡಳಿಯ ತೀರ್ಪನ್ನು ಉಲ್ಲಂಘಿಸಿದೆ. ತಮಿಳುನಾಡಿಗೆ ನೈಸರ್ಗಿಕವಾಗಿಯೇ ಮಳೆ ಮೂಲಕ ಹೆಚ್ಚುವರಿ ನೀರು ಬರುತ್ತದೆ. ಅದರೆ ಈ ಅಣೆಕಟ್ಟು ನಿರ್ಮಿಸುವ ಮೂಲಕ ಕರ್ನಾಟಕ ತಮಿಳುನಾಡಿನ ರೈತರ ಕೃಷಿಗೆ ಅಡ್ಡಗಾಲು ಹಾಕುತ್ತಿದೆ.

    ಕರ್ನಾಟಕದ ವಾದ ಏನು?
    ಪ್ರತಿವರ್ಷ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವುದು ನಮ್ಮ ಹೊಣೆ. ಒಂದು ವೇಳೆ ನಾವು ಅಷ್ಟು ಪ್ರಮಾಣದ ನೀರನ್ನು ಬಿಡದಿದ್ದರೆ ತಮಿಳುನಾಡು ಪ್ರಶ್ನಿಸುವುದು ಸರಿ. 2018 ರಲ್ಲಿ ಭಾರೀ ಮಳೆಯಾದ ಪರಿಣಾಮ ಈಗಾಗಲೇ ಕರ್ನಾಟಕದಿಂದ 310 ಟಿಎಂಸಿಗಿಂತಲೂ ಹೆಚ್ಚಿನ ಪ್ರಮಾಣದ ನೀರು ತಮಿಳುನಾಡು ಹರಿದುಹೋಗಿದೆ. ಮೆಟ್ಟೂರಿನಲ್ಲಿ ಅಧಿಕ ನೀರಿನ ಸಂಗ್ರಹ ಸಾಮಥ್ರ್ಯ ಇಲ್ಲದೇ ಇರುವ ಕಾರಣ 100 ಟಿಎಂಸಿಗೂ ಹೆಚ್ಚು ನೀರು ಸಮುದ್ರಕ್ಕೆ ಹರಿದು ಹೋಗಿದೆ. ಮೇಕೆದಾಟಿನಲ್ಲಿ ಅಣೆಕಟ್ಟೆ ಇದ್ದಿದ್ದರೆ ಕನಿಷ್ಠ 60 ಟಿಎಂಸಿ ಹಿಡಿದಿಟ್ಟುಕೊಳ್ಳಬಹುದಾಗಿತ್ತು. ಒಂದು ಡ್ಯಾಂ ಇದ್ದಿದ್ದರೆ ತಮಿಳುನಾಡಿಗೆ ತಿಂಗಳವಾರು ಕೋಟಾದಂತೆ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೂ ಅನುಕೂಲವಾಗುತ್ತಿತ್ತು. ನಾವು ಕುಡಿಯುವ ನೀರಿಗಾಗಿ ಡ್ಯಾಂ ಕಟ್ಟುತ್ತೇವೆಯೇ ಹೊರತು ವಿದ್ಯುತ್ ಉತ್ಪಾದನೆಯೇ ನಮ್ಮ ಮೂಲ ಉದ್ದೇಶ ಅಲ್ಲ. ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕೆಂದು ಎಂದು ಅಂತಾರಾಷ್ಟ್ರೀಯ ಜಲ ನೀತಿಯೇ ಹೇಳಿದೆ. ಹೀಗಾಗಿ ನಾವು ಎತ್ತಿಕೊಂಡ ಮೇಕೆದಾಟು ಯೋಜನೆ ನ್ಯಾಯ ಸಮ್ಮತವಾಗಿದೆ.

    ಕರ್ನಾಟಕಕ್ಕೆ ಈ ಅಣೆಕಟ್ಟು ಅಗತ್ಯ ಯಾಕೆ?
    ಬೆಂಗಳೂರು ನಗರಕ್ಕೆ ನೀರು ಬರುವುದು ಕೆಆರ್‍ಎಸ್ ಡ್ಯಾಂನಿಂದ. ಮಳೆಗಾಲದಲ್ಲಿ ಡ್ಯಾಂ ಭರ್ತಿಯಾದರೆ ಬೆಂಗಳೂರು ಜನತೆಗೆ ನೀರು ಭಾಗ್ಯ. ಬೆಂಗಳೂರು ನಗರಕ್ಕೆ ಪ್ರತಿದಿನ 1400 ದಶಲಕ್ಷ ಲೀಟರ್ ಅಗತ್ಯವಿದೆ. ಬೇಸಿಗೆ ಸಮಯದಲ್ಲಿ ನೀರಿನ ಬೇಡಿಕೆ ಶೇ.15ರಷ್ಟು ಹೆಚ್ಚಾಗುತ್ತದೆ. ತಿಪ್ಪಗೊಂಡನಹಳ್ಳಿ ಜಲಾಶಯದಿಂದ 2012ರಲ್ಲಿ ನೀರು ಪಂಪಿಂಗ್ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಬೆಂಗಳೂರಿನ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಇಲ್ಲಿ ಸಂಗ್ರಹವಾದ ಡ್ಯಾಂ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗೆ ಬಳಸುವ ಉದ್ದೇಶ ರಾಜ್ಯ ಸರ್ಕಾರದ್ದು.

    ಎಷ್ಟು ಡ್ಯಾಂ ನಿರ್ಮಾಣವಾಗಲಿದೆ?
    ಆರಂಭಿಕ ಯೋಜನೆ ಪ್ರಕಾರ 4,500 ಎಕ್ರೆ ಅರಣ್ಯ ಪ್ರದೇಶ ಮುಳುಗಡೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಮುಳುಗಡೆಯಾಗುವ ಪ್ರದೇಶವನ್ನು ತಪ್ಪಿಸಲು 20 ಟಿಎಂಸಿ ಸಾಮಥ್ರ್ಯದ 2, 3 ಅಣೆಕಟ್ಟು ಕಟ್ಟುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ. ಆದರೆ ಎಷ್ಟು ಡ್ಯಾಂ ನಿರ್ಮಾಣ ಮಾಡಬೇಕು ಎನ್ನುವುದು ಇನ್ನೂ ಅಂತಿಮವಾಗಿಲ್ಲ. ಸ್ಥಳ ಪರಿಶೀಲನೆಯಾಗಿದ್ದು, ಸಮಗ್ರ ಯೋಜನಾ ವರದಿ ಸರ್ಕಾರದ ಕೈ ಸೇರಿದ ಬಳಿಕ ಎಷ್ಟು ಡ್ಯಾಂ ನಿರ್ಮಿಸಬೇಕು ಎನ್ನುವುದು ಅಂತಿಮವಾಗಲಿದೆ.

    ಅಂತಿಮ ಐತೀರ್ಪು ಪ್ರಕಾರ ಯಾರಿಗೆ ಎಷ್ಟು ನೀರು?
    ನ್ಯಾ. ಎನ್.ಪಿ.ಸಿಂಗ್, ನ್ಯಾ. ಸುಧೀರ್ ನಾರಿಯನ್, ನ್ಯಾ. ಎನ್.ಎಸ್. ರಾವ್ ಅವರನ್ನು ಒಳಗೊಂಡ ಕಾವೇರಿ ನ್ಯಾಯಾಧಿಕರಣ 2007ರ ಫೆಬ್ರವರಿ 2ರಂದು ಅಂತಿಮ ಐತೀರ್ಪು(ನ್ಯಾಯಾಲಯಗಳು ನೀಡುವ ಅಂತಿಮ ಆದೇಶಕ್ಕೆ ತೀರ್ಪು ಎಂದು ಕರೆದರೆ ನ್ಯಾಯಾಧಿಕರಣಗಳು ನೀಡುವ ಅಂತಿಮ ಆದೇಶಕ್ಕೆ ಐತೀರ್ಪು(ಂತಿಚಿಡಿಜ) ಎಂದು ಕರೆಯಲಾಗುತ್ತದೆ) ನೀಡಿತು. ಈ ಐತೀರ್ಪಿನ ಅನ್ವಯ ಕಾವೇರಿ ಕಣಿವೆಯಲ್ಲಿ 740 ಟಿಎಂಸಿ ನೀರಿದೆ ಎಂದು ಲೆಕ್ಕಹಾಕಲಾಯಿತು. ಕರ್ನಾಟಕಕ್ಕೆ 270 ಟಿಎಂಸಿ, ತಮಿಳುನಾಡಿಗೆ 419 ಟಿಎಂಸಿ, ಕೇರಳಕ್ಕೆ 30 ಟಿಎಂಸಿ, ಪುದುಚೇರಿಗೆ 10, ಪರಿಸರ ಸಂರಕ್ಷಣೆಗೆ 10 ಟಿಎಂಸಿ, ಸಮುದ್ರ ಸೇರುವ ನೀರು 4 ಟಿಎಂಸಿ ನೀರನ್ನು ಹಂಚಲಾಯಿತು. ಇದರ ಜೊತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಆದೇಶಿಸಿತು.

    ಕಾವೇರಿಯಲ್ಲಿ ಯಾರಿಗೆ ಎಷ್ಟು ನೀರು?
    ಕಾವೇರಿ ನ್ಯಾಯಾಧಿಕರಣ ನೀಡಿದ ಐತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿ 2018ರ ಫೆಬ್ರವರಿ 15 ರಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿತ್ತು. ಈ ತೀರ್ಪಿನ ಅನ್ವಯ ಕರ್ನಾಟಕಕ್ಕೆ 284 ಟಿಎಂಸಿ, ತಮಿಳುನಾಡು 177.25 ಟಿಎಂಸಿ, ಕೇರಳ 30 ಟಿಎಂಸಿ, ಪುದುಚೇರಿಗೆ 10 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ.

    ಯಾವ ತಿಂಗಳು ಎಷ್ಟು ಟಿಎಂಸಿ ನೀರು ಬಿಡಬೇಕು?
    ಜೂನ್ 9.19, ಜುಲೈ 31.24, ಆಗಸ್ಟ್ 45.95, ಸೆಪ್ಟೆಂಬರ್ 36.76, ಅಕ್ಟೋಬರ್ 20.22, ನವೆಂಬರ್ 13.78, ಡಿಸೆಂಬರ್ 7.35, ಜನವರಿ 2.76 ಟಿಎಂಸಿ ಬಿಡಬೇಕು. ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ತಲಾ 2.5 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಡಬೇಕು.

    ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಕರ್ನಾಟಕ ನಿರ್ಮಿಸಿರುವ ಅಣೆಕಟ್ಟುಗಳು ಹಾರಂಗಿ (ಕೊಡಗು), ಕಬಿನಿ (ಮೈಸೂರು), ಹೇಮಾವತಿ (ಹಾಸನ), ಕೆಆರ್‍ಎಸ್ (ಮಂಡ್ಯ)ದಲ್ಲಿ ಅಣೆಕಟ್ಟು ನಿರ್ಮಾಣ ಮಾಡಿದೆ.

    ತಮಿಳುನಾಡಿಗೆ ಕರ್ನಾಟಕದಿಂದ ನೀರು ಹರಿದಿದೆ ಎಂದು ಪತ್ತೆ ಮಾಡೋದು ಹೇಗೆ?
    ತಮಿಳುನಾಡಿನ ಭಾಗದಲ್ಲಿರುವ ಬಿಳಿಗುಂಡ್ಲುವಿನಲ್ಲಿ ಎಷ್ಟು ಪ್ರಮಾಣದ ನೀರು ಹರಿದಿದೆ ಎಂದು ಪತ್ತೆ ಮಾಡಲು ಕೇಂದ್ರ ಜಲ ಆಯೋಗದ ಅಧಿಕಾರಿಗಳು ವರ್ಷವಿಡಿ ನೀರಿನ ಲೆಕ್ಕಾಚಾರ ಹಾಕುತ್ತಾರೆ. ಪ್ರತಿದಿನ ಬೆಳಗ್ಗೆ 8ರಿಂದ 10ರವರೆಗೆ ಎರಡು ಗಂಟೆಗಳ ಕಾಲ 160 ಮೀಟರ್ ಪ್ರದೇಶದ 15 ನಿರ್ದಿಷ್ಟ ಸ್ಥಳಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ. 7 ಮಂದಿ ಸಿಬ್ಬಂದಿ ದೋಣಿ ಮೂಲಕ ಒಂದು ದಂಡೆಯಿಂದ ಮತ್ತೂಂದು ದಂಡೆಗೆ ಸಾಗಿ ತಮ್ಮ ಜೊತೆ ಇರುವ ಉಪಕರಣವನ್ನು ನೀರಿಗೆ ಬಿಡುತ್ತಾರೆ. ಈ ಮೂಲಕ ಪ್ರತಿ ಸೆಕೆಂಡ್‍ಗೆ ಎಷ್ಟು ನೀರು ಕರ್ನಾಟಕದಿಂದ ತಮಿಳುನಾಡಿಗೆ ಹೋಗುತ್ತಿದೆ ಎಂಬುದನ್ನು ಪತ್ತೆ ಮಾಡುತ್ತಾರೆ. ಈ ಸಿಬ್ಬಂದಿಯನ್ನು ಕರ್ನಾಟಕ, ತಮಿಳುನಾಡಿನನವರು ನೇರವಾಗಿ ಸಂಪರ್ಕಿಸುವಂತಿಲ್ಲ. ರಾಜ್ಯ ಸರ್ಕಾರಗಳು ಅಥವಾ ನ್ಯಾಯಾಲಯಗಳು ಕೇಳಿದರೆ ಮಾತ್ರ ಮಾಹಿತಿಯನ್ನು ನೀಡಲಾಗುತ್ತದೆ.

    ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು Cubic feet per Second ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

    https://www.youtube.com/watch?v=SU08dZx8pRI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv