Tag: Mehbooba Mufti

  • ಅಫ್ಘಾನ್‍ನಿಂದ ಪಾಠ ಕಲಿತುಕೊಳ್ಳಿ, ನಮ್ಮನ್ನು ಪರೀಕ್ಷಿಸಬೇಡಿ- ಕೇಂದ್ರಕ್ಕೆ ಮುಫ್ತಿ ಎಚ್ಚರಿಕೆ

    ಅಫ್ಘಾನ್‍ನಿಂದ ಪಾಠ ಕಲಿತುಕೊಳ್ಳಿ, ನಮ್ಮನ್ನು ಪರೀಕ್ಷಿಸಬೇಡಿ- ಕೇಂದ್ರಕ್ಕೆ ಮುಫ್ತಿ ಎಚ್ಚರಿಕೆ

    ಶ್ರೀನಗರ: ತಾಲಿಬಾನ್ ಅಧಿಕಾರ ವಶಪಡಿಸಿಕೊಂಡು, ಅಮೆರಿಕವನ್ನು ಅಫ್ಘಾನಿಸ್ತಾನದಿಂದ ಪಲಾಯನ ಮಾಡುವಂತೆ ಮಾಡಿದೆ. ಕೇಂದ್ರ ಸರ್ಕಾರ ಅಫ್ಘಾನಿಸ್ತಾನದಿಂದ ಪಾಠ ಕಲಿಯಲಿ. ಅಲ್ಲದೆ 2019ರಲ್ಲಿ ರದ್ದು ಮಾಡಿರುವ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರು ಸ್ಥಾಪಿಸಲಿ ಎಂದು ಹೇಳಿದ್ದಾರೆ.

    ದಕ್ಷಿಣ ಕಾಶ್ಮೀರದ ಕುಲ್ಗಮ್‍ನಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಶಪಡಿಸಿಕೊಂಡಿರುವುದನ್ನು ಉಲ್ಲೇಖಿಸಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ, ನಮ್ಮನ್ನು ಪರೀಕ್ಷಿಸಬೇಡಿ. ಸರ್ಕಾರ ಮಾರ್ಗಗಳನ್ನು ಸರಿಪಡಿಸಿಕೊಂಡು, ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ನಿಮ್ಮ ಪಕ್ಕದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಮ್ಮನಿಂದ ದೂರವಾದ ಕಂದಮ್ಮನನ್ನ ರಕ್ಷಿಸಿದ ಟರ್ಕಿ ಸೈನಿಕರು

    ಸೂಪರ್ ಪವರ್ ಆಗಿರುವ ಅಮೆರಿಕ ಗಂಟು ಮೂಟೆ ಕಟ್ಟಿಕೊಂಡು ಪಲಾಯನ ಮಾಡಿದೆ. ಮಾಜಿ ಪ್ರಧಾನಿ ವಾಜಪೇಯಿಯವರ ರೀತಿ ಜಮ್ಮು ಕಾಶ್ಮೀರದೊಂದಿಗೆ ಮಾತುಕತೆ ನಡೆಸಲು ನಿಮಗೆ ಇನ್ನೂ ಸಮಯವಿದೆ. ಜಮ್ಮು ಕಾಶ್ಮೀರವನ್ನು ಕಾನೂನುಬಾಹಿರವಾಗಿ ಮತ್ತು ಅಸಂವಿಧಾನಿಕವಾಗಿ ಕಿತ್ತುಕೊಳ್ಳುವುದು. ಜಮ್ಮು ಕಾಶ್ಮೀರವನ್ನು ವಿಭಜನೆ ಮಾಡಿರುವ ನಿಮ್ಮ ತಪ್ಪನ್ನು ತಕ್ಷಣ ಸರಿಪಡಿಸಿ, ತಡವಾದರೆ ತೊಂದರೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನಮ್ಮ ಸೈನಿಕರ ಮೇಲೆ ದಾಳಿಯಾದ ಮರು ಕ್ಷಣವೇ ಪ್ರತಿದಾಳಿ – ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಕೆ

    ಕೇಂದ್ರ ಸರ್ಕಾರ ನಮ್ಮಿಂದ ಕಸಿದುಕೊಂಡಿರುವುದನ್ನು ಹಿಂದಿರುಗಿಸಬೇಕು. ಕಾಶ್ಮೀರ ಸಮಸ್ಯೆಯನ್ನು ಜಮ್ಮು ಕಾಶ್ಮೀರದ ಜನರ ಆಶಯಗಳು ಹಾಗೂ ಆಕಾಂಕ್ಷೆಗಳ ಪ್ರಕಾರ ಪರಿಹರಿಸಬೇಕು ಎಂದು ಹೇಳಿದ್ದಾರೆ.

    ಗನ್ ಹಾಗೂ ಕಲ್ಲುಗಳನ್ನು ಹಿಡಿಯುವುದರಿಂದ ಸಮಸ್ಯೆಗಳು ಬಗೆಹರಿಯುವುದಿಲ್ಲ. ತಾಲಿಬಾನಿಗಳು ಇದೀಗ ಅಫ್ಘಾನಿಸ್ತಾನವನ್ನು ನಿಯಂತ್ರಣಕ್ಕೆ ಪಡೆದಿದ್ದಾರೆ. ಈ ಮೂಲಕ ಅಮೆರಿಕ ಪಲಾಯನ ಮಾಡುವಂತೆ ಮಾಡಿದ್ದಾರೆ. ಇಡೀ ವಿಶ್ವ ಅವರತ್ತ ನೋಡುತ್ತಿದೆ. ಅವರು ಹೇಗೆ ವರ್ತಿಸುತ್ತಿದ್ದಾರೆ? ಹೇಗೆ ಕಟ್ಟುನಿಟ್ಟು ಪಾಲಿಸುತ್ತಾರೆ, ಜನರೊಂದಿಗೆ ಯಾವ ರೀತಿ ವರ್ತಿಸುತ್ತಿದ್ದಾರೆ ಎನ್ನುವುದನ್ನು ಗಮನಿಸುತ್ತಿದ್ದಾರೆ ಎಂದು ಹೇಳಿದರು.

    ಯುವಕರು ಶಸ್ತ್ರಾಸ್ತ್ರಗಳನ್ನು ಹಿಡಿಯಬಾರದು. ಗನ್ ಹಾಗೂ ಕಲ್ಲುಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅಫ್ಘಾನಿಸ್ತಾದ ಪರಿಸ್ಥಿತಿ ಜಮ್ಮು ಕಾಶ್ಮೀರದ ಜನರಿಗೆ ಪಾಠವಾಗಬೇಕು. ಯುವಕರು ಜೀವಗಳನ್ನು ಕಾಪಾಡಿಕೊಳ್ಳಬೇಕು. ನೀವು ಜೀವಗಳನ್ನು ಕಳೆದುಕೊಂಡರೆ ಎಲ್ಲವೂ ಮುಗಿದಂತೆ ಎಂದು ಎಚ್ಚರಿಸಿದ್ದಾರೆ.

    ಮೆಹಬೂಬಾ ಮುಫ್ತಿ ಅವರ ಈ ಹೇಳಿಕೆಗೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ತಮ್ಮ ನೆಲೆಯನ್ನು ಕಳೆದುಕೊಂಡ ಬಳಿಕ ಹತಾಶೆಯಿಂದ ದ್ವೇಷದ ರಾಜಕಾರಣದಲ್ಲಿ ತೊಡಗಿದ್ದಾರೆ. ಅಲ್ಲದೆ ಭಾರತದ ವಿರುದ್ಧ ಪಿತೂರಿ ಮಾಡುವವರು ನಾಶವಾಗುತ್ತಾರೆ ಎಂದು ಹೇಳಿದೆ.

  • ರಾಷ್ಟ್ರ ಧ್ವಜ ಹಿಡಿಯಲ್ಲ ಎಂಬ ಮುಫ್ತಿ ಹೇಳಿಕೆ ಖಂಡಿಸಿ ಪಿಡಿಪಿಯ ಮೂವರು ನಾಯಕರು ರಾಜೀನಾಮೆ

    ರಾಷ್ಟ್ರ ಧ್ವಜ ಹಿಡಿಯಲ್ಲ ಎಂಬ ಮುಫ್ತಿ ಹೇಳಿಕೆ ಖಂಡಿಸಿ ಪಿಡಿಪಿಯ ಮೂವರು ನಾಯಕರು ರಾಜೀನಾಮೆ

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಮೂವರು ಹಿರಿಯ ನಾಯಕರು ರಾಜೀನಾಮೆ ನೀಡಿದ್ದಾರೆ.

    ರಾಷ್ಟ್ರ ಧ್ವಜದ ಬಗ್ಗೆ ಮೆಹಬೂಬಾ ಮುಫ್ತಿ ಹೇಳಿಕೆ ಕುರಿತು ಅಸಮಾಧಾನಗೊಂಡು ಪಿಡಿಪಿಯ ಮೂವರು ಹಿರಿಯ ನಾಯಕರಾದ ಟಿ.ಎಸ್.ಬಜ್ವಾ, ವೆದ್ ಮಹಾಜನ್ ಹಾಗೂ ಹುಸೇನ್ ಎ ವಫ್ಫಾ ರಾಜೀನಾಮೆ ನೀಡಿದ್ದಾರೆ. ನೀವು ತೆಗೆದುಕೊಳ್ಳುತ್ತಿರುವ ಕೆಲ ನಿರ್ಧಾರಗಳಿಂದಾಗಿ ನಮಗೆ ಇರಿಸು ಮುರಿಸು ಉಂಟಾಗುತ್ತಿದ್ದು, ನಿಮ್ಮ ಅನಪೇಕ್ಷಿತ ಮಾತುಗಳು ಅದರಲ್ಲೂ ದೇಶಭಕ್ತಿಯ ಭಾವನೆಗೆ ನೋವುಂಟಾಗುವ ಮಾತುಗಳನ್ನು ಸಹಿಸಲಾಗುತ್ತಿಲ್ಲ ಎಂಬ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ದಾರೆ.

    ತ್ರಿವರ್ಣ ಧ್ವಜದ ಬಗ್ಗೆ ಮೆಹಬೂಬಾ ಮುಫ್ತಿ ಹೇಳಿರುವ ಮಾತುಗಳನ್ನು ಖಂಡಿಸಿ ಜಮ್ಮು ಕಾಶ್ಮೀರದಲ್ಲಿ ಸಾಕಷ್ಟು ಹೋರಾಟಗಳು ನಡೆಯುತ್ತಿವೆ. ಇದರ ನಡುವೆಯೇ ಸ್ವತಃ ಅವರ ಪಕ್ಷದ ನಾಯಕರೇ ರಾಜೀನಾಮೆ ನೀಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ರಾಣಾ ಮಾತನಾಡಿ, ಜಮ್ಮು ಕಾಶ್ಮೀರದಲ್ಲಿನ ಎಲ್ಲರೂ ತ್ರಿವರ್ಣ ಧ್ವಜವನ್ನು ಪ್ರೀತಿಸುತ್ತಾರೆ. ಹೀಗಾಗಿ ಶ್ರೀನಗರದ ಪ್ರತಿ ಬೀದಿಯಲ್ಲಿ ತಿರಂಗಾ ಬೃಹತ್ ರ್ಯಾಲಿ ನಡೆಸುತ್ತಿದ್ದಾರೆ ಎಂದಿದ್ದಾರೆ.

    ಈ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ವೇಳೆ ಮೆಹಬೂಬಾ ಮುಫ್ತಿ ಆಕ್ರೋಶ ಭರಿತರಾಗಿ ಮಾತನಾಡಿ, ಕಾಶ್ಮೀರದ ಧ್ವಜವನ್ನು ಮರುಸ್ಥಾಪಿಸುವವರೆಗೆ ನಾನು ತ್ರಿವರ್ಣ ಧ್ವಜವನ್ನು ಹಿಡಿಯುವುದಿಲ್ಲ ಎಂದಿದ್ದರು. ಬಿಜೆಪಿ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಕಾಶ್ಮೀರದ ರಾಜಕಾರಣಿಗಳು ಪ್ರತ್ಯೇಕತಾ ವಾದಿಗಳಿಂತ ಅಪಾಯಕಾರಿ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಕಿಡಿಕಾರಿದ್ದರು.

    ಮುಫ್ತಿಯ ವಿವಾದಾತ್ಮಕ ಹೇಳಿಕೆಯಿಂದಾಗಿ ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಜಮ್ಮುವಿನ ಪಕ್ಷದ ಕಚೇರಿ ಮೇಲೆ ದಾಳಿ ನಡೆಸಿ ಗುಂಪೊಂದು ತ್ರಿವರ್ಣ ಧ್ವಜ ಸ್ಥಾಪಿಸಲು ಯತ್ನಿಸಿತ್ತು ಎಂದು ಪಿಡಿಪಿ ಆರೋಪಿಸಿದೆ. ಪಕ್ಷದ ಪ್ರಧಾನ ಕಚೇರಿಗೆ ಗುಂಪು ಆಗಮಿಸಿ ರಾಷ್ಟ್ರ ಧ್ವಜವನ್ನು ಸ್ಥಾಪಿಸಲು ಯತ್ನಿಸಿತು. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅದು ಬಲ ಪಂಥೀಯ ಗುಂಪಾಗಿತ್ತು. ಅದೇ ರೀತಿಯ ಪ್ರತ್ಯೇಕ ಬಣ್ಣದ ಬಟ್ಟೆ ಧರಿಸಿದ್ದರು ಎಂದು ಪಿಡಿಪಿ ಆರೋಪಿಸಿದೆ.

    ಈ ಕುರಿತು ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಸೈಫುದ್ದೀನ್ ಸೋಝ್ ಈ ಕುರಿತು ಪ್ರತಿಕ್ರಿಯಿಸಿ, ಜಮ್ಮು ಕಾಶ್ಮೀರದ ಧ್ವಜವನ್ನು ಮರು ಸ್ಥಾಪಿಸುವ ಮೆಹಬೂಬಾ ಮುಫ್ತಿ ಹೇಳಿಕೆ ಜನರ ಆಶಯವನ್ನು ಪ್ರತಿಬಿಂಬಿಸಿದೆ. ಜಮ್ಮು ಕಾಶ್ಮೀರದ ಧ್ವಜ ಸ್ಥಾಪಿಸುವ ವರೆಗೆ ರಾಷ್ಟ್ರ ಧ್ವಜ ಹಿಡಿಯುವುದಿಲ್ಲ ಎಂದು ಮೆಹಬೂಬಾ ಮುಫ್ತಿ ಹೇಳಿರುವುದು ಜನರ ಭಾವನೆಯಾಗಿದೆ ಎಂದಿದ್ದಾರೆ.

  • 14 ತಿಂಗಳ ಬಳಿಕ ಮೆಹಬೂಬಾ ಮುಫ್ತಿ ಬಿಡುಗಡೆ

    14 ತಿಂಗಳ ಬಳಿಕ ಮೆಹಬೂಬಾ ಮುಫ್ತಿ ಬಿಡುಗಡೆ

    – ಕೇಂದ್ರದ ನಿರ್ಧಾರ ಕ್ರೂರ ಎಂದು ಕಿಡಿ

    ಶ್ರೀನಗರ: ಜಮ್ಮು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಮುಖ್ಯಸ್ಥೆ, ಮಾಜಿ ಸಿಎಂ ಮೆಹಬೂಬಾ ಮುಫ್ತಿಯರನ್ನು ಗೃಹಬಂಧನದಿಂದ ಬಿಡುಗಡೆ ಮಾಡಲಾಗಿದೆ. ಆಗಸ್ಟ್ 5ರಂದು 370ನೇ ವಿಧಿ ರದ್ದುಪಡಿಸಿದ ಬಳಿಕ ಮುಫ್ತಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು.

    ಬಿಡುಗಡೆಯಾಗುತ್ತಿದ್ದಂತೆ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಮೆಹಬೂಬಾ ಮುಫ್ತಿ ಕಿಡಿ ಕಾರಿದ್ದಾರೆ. ಪೂರ್ತಿ ಕಪ್ಪು ಬಣ್ಣದ ವಿಡಿಯೋವನ್ನು ಹಂಚಿಕೊಂಡಿರುವ ಅವರು, ಆಡಿಯೋ ಮೆಸೇಜ್ ಮೂಲಕ ಕಿಡಿಕಾರಿದ್ದಾರೆ. ಒಂದೂ ವರ್ಷಕ್ಕೂ ಹೆಚ್ಚು ಕಾಲ ಅಂದರೆ 14 ತಿಂಗಳ ಬಳಿಕ ಬಿಡುಗಡೆ ಹೊಂದಿದ್ದೇನೆ. 370ನೇ ವಿಧಿ ರದ್ದುಗೊಳಿಸಿದ ಕೇಂದ್ರದ ಕ್ರೂರ ನಿರ್ಧಾರದ ಬಗ್ಗೆ ನಾನು ಯಾವಾಗಲೂ ಯೋಚಿಸುತ್ತಿದ್ದೇನೆ. ಸರ್ಕಾರ ವಿಶೇಷ ಸ್ಥಾನಮಾನವನ್ನು ಮರಳಿಸಬೇಕು ಹಾಗೂ ದೇಶದ ಹಲವು ಭಾಗಗಳಲ್ಲಿ ಜೈಲಿನಲ್ಲಿ ಬಳಲುತ್ತಿರುವವರನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ಇದು ಸುಲಭವಲ್ಲ ಎಂದು ನನಗೆ ತಿಳಿದಿದೆ. ಆದರೆ ನಾವೆಲ್ಲರೂ ಹೋರಾಡಬೇಕಿದೆ ಎಂದು ಗುಡುಗಿದ್ದಾರೆ.

    ಇತ್ತೀಚೆಗೆ ಅವರು ಮಗಳು ಇಲ್ತಿಝಾ ಮುಫ್ತಿ ಸಹ ಮೆಹಬೂಬಾ ಮುಫ್ತಿ ಟ್ವಿಟ್ಟರ್ ಖಾತೆ ಮೂಲಕ ಅವರು ಬಿಡುಗಡೆಯಾಗುವುದನ್ನು ಖಚಿತಪಡಿಸಿದ್ದರು. ಕೊನೆಗೂ ಮುಫ್ತಿಯವರ ಕಾನೂನು ಬಾಹಿರ ಬಂಧನ ಮುಗಿಯುತ್ತಿದೆ. ಇಂತಹ ಕಠಿಣ ಸಂದರ್ಭದಲ್ಲಿ ನಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ನಿಮಗೆ ಋಣಿಯಾಗಿದ್ದೇನೆ. ಇದು ಇಲ್ತಿಜಾ ಸೈನಿಂಗ್ ಆಫ್. ಅಲ್ಲಾ ನಿಮ್ಮನ್ನು ರಕ್ಷಿಸಲಿ ಎಂದು ಬರೆದುಕೊಂಡಿದ್ದರು.

    ಪಿಡಿಪಿ ಮುಖ್ಯಸ್ಥೆ ಮುಫ್ತಿಯವರು ಬಿಡುಗಡೆಯಾಗಿರುವ ಕುರಿತು ಜಮ್ಮು ಕಾಶ್ಮೀರ ಸರ್ಕಾರದ ವಕ್ತಾರ ರೋಹಿತ್ ಕನ್ಸಾಲ್ ತಿಳಿಸಿದ್ದಾರೆ. 370ನೇ ವಿಧಿ ರದ್ದು ಪಡಿಸಿದ ಬಳಿಕ ಮೆಹಮೂಬೂಬಾ ಮುಫ್ತಿಯವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ಅವರ ಮನೆಯಲ್ಲಿಯೇ ಅವರನ್ನು ಬಂಧಿಸಲಾಗಿತ್ತು.

  • ಭಾರತ ಮುಸ್ಲಿಮರಿಗೆ ಸೂಕ್ತ ಸ್ಥಳವಲ್ಲ- ಮೆಹಬೂಬಾ ಮುಫ್ತಿ ಪುತ್ರಿ

    ಭಾರತ ಮುಸ್ಲಿಮರಿಗೆ ಸೂಕ್ತ ಸ್ಥಳವಲ್ಲ- ಮೆಹಬೂಬಾ ಮುಫ್ತಿ ಪುತ್ರಿ

    ನವದೆಹಲಿ: ನೆರೆಯ ರಾಷ್ಟ್ರಗಳ ಮುಸ್ಲಿಮೇತರರಿಗೆ ಮಾತ್ರ ಪೌರತ್ವ ನೀಡುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪುತ್ರಿ ಸನಾ ಇಲ್ತಿಜಾ ಜವೇದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ವಿವಾದಿತ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಲಾಗಿದೆ. ಇದಕ್ಕೆ ಮೆಹಬೂಬಾ ಮುಫ್ತಿ ಪುತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿಯವರ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದು, ಭಾರತ-ಮುಸ್ಲಿಮರಿಗಾಗಿ ಇರುವ ದೇಶವಲ್ಲ ಎಂದು ಬರೆದಿದ್ದಾರೆ.

    ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇಂದು ತಿದ್ದುಪಡಿ ಮಸೂದೆಗೆ ಒಪ್ಪಿಗೆ ಸೂಚಿಸುತ್ತಿದ್ದಂತೆ ಈ ಕುರಿತು ಟ್ವೀಟ್ ಮಾಡಲಾಗಿದ್ದು, ಸರ್ಕಾರ ಮುಸ್ಲಿಮರನ್ನು ಹೊರಗಿಡುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ಸಂದರ್ಭದಲ್ಲಿ ಆಗಸ್ಟ್ 5ರಂದು ಮೆಹಬೂಬಾ ಮುಫ್ತಿಯವರನ್ನು ಬಂಧನಕ್ಕೊಳಪಡಿಸಿದಾಗಿನಿಂದ ಸನಾ ಇಲ್ತಿಜಾ ಜವೇದ್ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಸಹ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಸನಾ, ಮುಸ್ಲಿಮರು ಹೆಚ್ಚಿರುವ ದೇಶದಲ್ಲಿ ಅವರು ಎರಡನೇ ದರ್ಜೆಯ ಪ್ರಜೆಗಳಾಗುತ್ತಿದ್ದಾರೆ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.

    ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ಸಂದರ್ಭದಲ್ಲಿ ಬಂಧಿಸಲಾಗಿದ್ದ ಮೆಹಬೂಬಾ ಮುಫ್ತಿ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ ಹಾಗೂ ಮಗ ಒಮರ್ ಅಬ್ದುಲ್ಲಾ ಅವರನ್ನು ಇನ್ನೂ ಸಹ ಬಿಡುಗಡೆ ಮಾಡಿಲ್ಲ. ಅಲ್ಲದೆ ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಕುರಿತು ಸಹ ಸ್ಪಷ್ಟತೆ ಇಲ್ಲ.

    ಇಂದು ಸಚಿವ ಸಂಪುಟ ಸಭೆಯಲ್ಲಿ ಬಾಂಗ್ಲಾದೇಶ, ಅಫ್ಘಾನಿಸ್ಥಾನ ಹಾಗೂ ಪಾಕಿಸ್ಥಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಲಾಗಿದೆ.

    ಈ ದೇಶಗಳಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳು, ಸಿಖ್, ಜೈನರು, ಬೌದ್ಧರು, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮುದಾಯ ಕಿರುಕುಳ ಅನುಭವಿಸುತ್ತಿದೆ. ಹೀಗಾಗಿ ಇವರಿಗೆ ಭಾರತದ ಪೌರತ್ವ ನೀಡುವ ಅವಶ್ಯಕತೆ ಇದೆ ಎನ್ನುವುದು ಕೇಂದ್ರದ ವಾದ. ಆದರೆ ಮುಸ್ಲಿಮರನ್ನು ಹೊರಗಡೆ ಇಟ್ಟಿರುವುದು ಸಂವಿಧಾನ ವಿರೋಧಿ ನಡೆ ಎನ್ನುವುದು ವಿಪಕ್ಷಗಳ ಪ್ರತಿವಾದ.

    ಭಾರತದ ಪೌರತ್ವ ಪಡೆಯಬೇಕಾದರೆ 12 ವರ್ಷಕ್ಕಿಂತ ಹೆಚ್ಚು ಕಾಲ ದೇಶದಲ್ಲಿ ನೆಲೆಸಿರಬೇಕು ಎನ್ನುವ ನಿಯಮವನ್ನು 6 ವರ್ಷಕ್ಕೆ ಈ ಮಸೂದೆ ಇಳಿಸಿದೆ. ಸೂಕ್ತ ದಾಖಲೆಯ ಅಗತ್ಯತೆಯೂ ಇಲ್ಲದಿದ್ದರೂ ಕೂಡ ಪೌರತ್ವ ಸಿಗಲಿದೆ.

    2016ರಲ್ಲಿ ಈ ಮಸೂದೆ ಮೊದಲ ಬಾರಿಗೆ ಲೋಕಸಭೆಯಲ್ಲಿ ಮಂಡನೆಯಾಗಿತ್ತು. ಈ ವೇಳೆ ಕೋಲಾಹಲ ನಡೆದು ಜಂಟಿ ಸಂಸದೀಯ ಸಮಿತಿ ಪರಾಮರ್ಶೆಗೆ ಹೋಗಿತ್ತು. ಈ ಸಮಿತಿ ಈ ವರ್ಷದ ಜನವರಿಯಲ್ಲಿ ವರದಿ ನೀಡಿದ ಬಳಿಕ ಮಸೂದೆ ಮಂಡನೆಯಾಗಿತ್ತು. ಲೋಕಸಭೆಯಲ್ಲಿ ಪಾಸ್ ಆದರೂ ರಾಜ್ಯಸಭೆಯಲ್ಲಿ ಬಹುಮತ ಇಲ್ಲದ ಕಾರಣ ಮಸೂದೆ ಪಾಸ್ ಆಗಿರಲಿಲ್ಲ. ಈ ಸಂದರ್ಭದಲ್ಲಿ 16ನೇ ಲೋಕಸಭೆಯ ಅವಧಿ ಮುಕ್ತಾಯವಾಗಿತ್ತು. ಹೀಗಾಗಿ ಈಗ ತಿದ್ದುಪಡಿ ಮಾಡಿ ಮಂದಿನ ಮಂಗಳವಾರ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗುತ್ತಿದೆ.

    ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸುವಷ್ಟೇ ಮಹತ್ವದ ಮಸೂದೆ ಇದಾಗಿದೆ. ಹೀಗಾಗಿ ಎಲ್ಲ ಸಂಸದರು ಸದನದಲ್ಲಿ ಹಾಜರಿರಬೇಕು ಎಂದು ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಿಜೆಪಿ ಸಂಸದರಿಗೆ ಸೂಚಿಸಿದ್ದಾರೆ.

  • ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ ಸೇರಿ ಜಮ್ಮು ಕಾಶ್ಮೀರ ರಾಜಕೀಯ ನಾಯಕರು ಜೈಲಿಗೆ ಶಿಫ್ಟ್

    ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ ಸೇರಿ ಜಮ್ಮು ಕಾಶ್ಮೀರ ರಾಜಕೀಯ ನಾಯಕರು ಜೈಲಿಗೆ ಶಿಫ್ಟ್

    ನವದೆಹಲಿ: ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರದ ವಿರುದ್ಧ ಪಾಕಿಸ್ತಾನ ಸೇರಿದಂತೆ ಕಾಶ್ಮೀರ ರಾಜಕೀಯ ನಾಯಕರು ಕಿಡಿಕಾರಿದ್ದಾರೆ.

    ನಿನ್ನೆಯಿಂದಲೇ ಜಮ್ಮು ಕಾಶ್ಮೀರದ ರಾಜಕೀಯ ನಾಯಕರನ್ನು ಮುನ್ನೆಚರಿಕಾ ಕ್ರಮವಾಗಿ ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಆದರೆ ಇಂದು ಸದನದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ ರದ್ದು ಪಡಿಸುವ ಪ್ರಸ್ತಾವನೆಯನ್ನು ಮುಂದಿಡುತ್ತಿದಂತೆ ಸಾಮಾಜಿಕ ಜಾಲತಾಣದ ಮೂಲಕ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಸೇರಿದಂತೆ ಹಲವು ನಾಯಕರು ಆಕ್ರೋಶ ಹೊರ ಹಾಕಿದ್ದರು. ಸದ್ಯ ಅಶಾಂತಿಯನ್ನ ಸೃಷ್ಟಿಸುತ್ತಿರುವ ಯತ್ನ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ತಾತ್ಕಾಲಿಕವಾಗಿ ಜೈಲಿಗೆ ಕಳುಹಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಜಮ್ಮು ಕಾಶ್ಮೀರದಲ್ಲಿ ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಿ ನಿಷೇಧಾಜ್ಞೆ ಹೇರಲಾಗಿದೆ. ಅಲ್ಲದೇ ಮೊಬೈಲ್ ಹಾಗೂ ಇಂಟರ್ ನೆಟ್ ಸೇವೆಯನ್ನು ರದ್ದುಗೊಳಿಸಲಾಗಿದೆ.

    ಇತ್ತ ಕಾಶ್ಮೀರ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಬಾರಿ ಮುಖಭಂಗ ಅನುಭವಿಸಿದರೂ ಪಾಕ್ ತನ್ನ ಹಳೆಯ ಧೋರಣೆ, ಹಳೆಯ ಚಾಳಿಯನ್ನು ಮುಂದುವರಿಸಿದೆ. ಜಮ್ಮು ಕಾಶ್ಮೀರ ವಿಭಜನೆಯಲ್ಲಿ ಯಾವುದೇ ಸಂಬಂಧ ಇಲ್ಲದಿದ್ದರೂ ಕೂಡ ಭಾರತ ಸರ್ಕಾರ ಕೈಗೊಂಡ ಕ್ರಮದ ವಿರುದ್ಧ ಪಾಕ್ ಕೆಂಡ ಕಾರಿದೆ. ಕಾಶ್ಮೀರ ಒಂದು ಅಂತಾಷ್ಟ್ರೀಯ ವಿವಾದವಾಗಿದ್ದು, ಕಾಶ್ಮೀರದ ವಿಚಾರದಲ್ಲಿ ಮಧ್ಯಪ್ರವೇಶಿಸಲು ತಮಗೂ ಹಕ್ಕಿದೆ. ಭಾರತ ಸರ್ಕಾರ ಕೈಗೊಂಡ ನಿರ್ಣಯವನ್ನು ನಾವು ಒಪ್ಪಲ್ಲ. ಕಾಶ್ಮೀರಿಗಳ ಹಿತ ಕಾಪಾಡಲು ಪಾಕಿಸ್ತಾನ ಸದಾ ಮುಂದಿರುತ್ತದೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಅಲ್ಲದೇ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಗಳಲ್ಲಿ ಕಾಶ್ಮೀರ ವಿವಾದಿತ ಸ್ಥಾನವೆಂದು ಮಾನ್ಯ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಜಂಟಿ ಸಂಸತ್ತು ಅಧಿವೇಶನ ಕರೆಯಲಾಗಿದೆ ಎಂದು ಪಾಕಿಸ್ತಾನ ನಾಯಕರು ಹೇಳಿದ್ದಾರೆ.

  • ಪರಿಚ್ಛೇಧ 370, 35ಎ ರದ್ದು ಕಾನೂನುಬಾಹಿರ, ಅಸಂವಿಧಾನಿಕ ನಡೆ: ಮೆಹಬೂಬಾ ಮುಫ್ತಿ

    ಪರಿಚ್ಛೇಧ 370, 35ಎ ರದ್ದು ಕಾನೂನುಬಾಹಿರ, ಅಸಂವಿಧಾನಿಕ ನಡೆ: ಮೆಹಬೂಬಾ ಮುಫ್ತಿ

    ಶ್ರೀನಗರ: ಇಂದು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಗುವುದು ಎಂದು ಘೋಷಿಸಿದ್ದು, ಪರಿಚ್ಛೇಧ 370 ಮತ್ತು 35(ಎ) ಕೂಡ ರದ್ದು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರು ಟ್ವೀಟ್ ಮಾಡಿ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

    ರಾಜ್ಯಸಭೆಯಲ್ಲಿ ಪರಿಚ್ಛೇಧ 370 ಮತ್ತು 35(ಎ) ರದ್ದುಗೊಳಿಸಿ, ಇನ್ನು ಮುಂದೆ ಜಮ್ಮು-ಕಾಶ್ಮೀರ ಕೇಂದ್ರದ ಅಧೀನಕ್ಕೆ ಒಳಪಡಲಿದ್ದು, ಲಡಾಕ್ ಕೇಂದ್ರಾಡಳಿಯ ಪ್ರದೇಶವಾಗಲಿದೆ. ಈ ಬಗ್ಗೆ ಮೆಹಬೂಬಾ ಮುಫ್ತಿ ಅವರು ಟ್ವೀಟ್ ಮಾಡಿ, ಕೇಂದ್ರದ ಈ ನಿರ್ಧಾರ ಸರಿಯಲ್ಲ. ಇಂದು ಭಾರತೀಯ ಪ್ರಜಾಪ್ರಭುತ್ವಕ್ಕೆ ಕರಾಳ ದಿನವಾಗಿದೆ. ಈ ನಿರ್ಧಾರ ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಹರಿಹಾಯ್ದಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಇಂದು ಭಾರತ ಪ್ರಜಾಪ್ರಭುತ್ವದ ಕರಾಳ ದಿನವಾಗಿದೆ. 1947ರಲ್ಲಿ 2 ರಾಷ್ಟ್ರಗಳ ಸಿದ್ಧಾಂತವನ್ನು ತಿರಸ್ಕರಿಸಿ, ಜಮ್ಮು-ಕಾಶ್ಮೀರ ನಾಯಕತ್ವ ಭಾರತದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ನಿರ್ಧಾರವನ್ನು ಹಿಮ್ಮೆಟ್ಟಿತ್ತು. ಆರ್ಟಿಕಲ್ 370 ಅನ್ನು ಸ್ಕ್ರ್ಯಾಪ್ ಮಾಡಿರುವ ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರ ಕಾನೂನುಬಾಹಿರ ಮತ್ತು ಅಸಂವಿಧಾನಿಕವಾಗಿದೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತವನ್ನು ಆಕ್ಯೂಪೇಷನಲ್ ಫೋರ್ಸ್ ಆಗಿ ಮಾಡುತ್ತದೆ.

    ಈ ನಿರ್ಣಯ ದುರಂತ ಪರಿಣಾಮಗಳನ್ನು ಉಂಟುಮಾಡುತ್ತದೆ. ಕೇಂದ್ರ ಸರ್ಕಾರದ ಉದ್ದೇಶಗಳು ಸ್ಪಷ್ಟವಾಗಿದ್ದು, ಜನರನ್ನು ಭಯಭೀತಿಗೊಳಿಸುವ ಮೂಲಕ ಜಮ್ಮು- ಕಾಶ್ಮೀರ ಪ್ರದೇಶವನ್ನು ಪಡೆಯಲು ಬಯಸಿದ್ದಾರೆ. ಭಾರತ ಕಾಶ್ಮೀರಕ್ಕೆ ಕೊಟ್ಟ ತನ್ನ ಭರವಸೆಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಅಮಿತ್ ಶಾ ಮಾತು ಆರಂಭಿಸುತ್ತಿದ್ದಂತೆ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ವಿರೋಧ ವ್ಯಕ್ತಪಡಿಸಿದರು. ಮಸೂದೆಗೂ ಮಂಡನೆಗೂ ಮುನ್ನ ಚರ್ಚೆ ನಡೆಯಬೇಕು. ಕಾಶ್ಮೀರದಲ್ಲಿ ಯುದ್ಧದ ಸನ್ನಿವೇಶ ನಿರ್ಮಾಣವಾಗಿದ್ದು, ಜನತೆ ಭಯಗೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಸ್ಥಳೀಯ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ತಡರಾತ್ರಿ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ, ಸಜ್ಜದ್ ಲೋನ್ ಅವರನ್ನು ವಶಕ್ಕೆ ಪಡೆದು ಗೃಹಬಂಧನದಲ್ಲಿ ಇರಿಸಲಾಗಿದೆ. ರಾಜ್ಯದಲ್ಲಿ ಬೃಹತ್ ಭದ್ರತೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಈ ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿ ಇಡಲಾಗಿದೆ.

    ತಡರಾತ್ರಿಯಿಂದ ಶ್ರೀನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಗುಂಪು ಗುಂಪಾಗಿ ರಸ್ತೆಗಳಲ್ಲಿ ನಿಲ್ಲುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಕೆಲವು ಪ್ರದೇಶಗಳಲ್ಲಿ ಇಂಟರ್‍ನೆಟ್ ಸೇವೆ, ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಜಮ್ಮು-ಕಾಶ್ಮೀರಕ್ಕೆ ತೆರಳಿದ್ದ ಪ್ರವಾಸಿಗರಿಗೆ ಹಿಂದಿರುಗುವಂತೆ ಸೂಚಿಸಲಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

    ಮೆಹಬೂಬಾ ಮುಫ್ತಿಯವರು ಭಾನುವಾರದಂದು ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಲು ಖಾಸಗಿ ಹೋಟೆಲಿನಲ್ಲಿ ಸರ್ವಪಕ್ಷ ಸಭೆಯನ್ನು ಕರೆದಿದ್ದರು. ಆದರೆ ಯಾವುದೇ ಸಭೆ ನಡೆಸುವಂತಿಲ್ಲ ಎಂದು ಪೊಲೀಸರು ಹೋಟೆಲ್ ಬುಕ್ಕಿಂಗ್ ರದ್ದುಗೊಳಿಸಿದ್ದರು. ಹೀಗಾಗಿ ಮುಫ್ತಿ ಅವರು ತಮ್ಮ ಮನೆಯಲ್ಲಿ ಸಭೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ಮುಜಾಗ್ರತಾ ಕ್ರಮವಾಗಿ ಪೊಲೀಸರು ಅವರನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ.

  • ಕಾಶ್ಮೀರದಲ್ಲಿ ಏನಾಗ್ತಿದೆ, ಯಾರು ಏನು ಹೇಳ್ತಿಲ್ಲ: ಮೆಹಬೂಬಾ ಮುಫ್ತಿ

    ಕಾಶ್ಮೀರದಲ್ಲಿ ಏನಾಗ್ತಿದೆ, ಯಾರು ಏನು ಹೇಳ್ತಿಲ್ಲ: ಮೆಹಬೂಬಾ ಮುಫ್ತಿ

    ಶ್ರೀನಗರ: ಕಳೆದ ಕೆಲವು ದಿನಗಳಿಂದ ಕಾಶ್ಮೀರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕಾಶ್ಮೀರದಲ್ಲಿ ಏನಾಗ್ತಿದೆ ಎಂಬುದರ ಬಗ್ಗೆ ಯಾರು ಸಹ ಮಾಹಿತಿ ನೀಡುತ್ತಿಲ್ಲ ಎಂದು ಮಾಜಿ ಸಿಎಂ ಮೆಹಬೂಬಾ ಮುಫ್ತಿ ಆತಂಕ ವ್ಯಕ್ತಪಡಿಸಿದ್ದಾರೆ.

    ಇಂದು ಖಾಸಗಿ ಹೋಟೆಲ್ ನಲ್ಲಿ ರಾಜಕೀಯ ನಾಯಕರ ಸಭೆಯನ್ನು ಕರೆಯಲಾಗಿತ್ತು. ಆದ್ರೆ ಪೊಲೀಸರು ನಮ್ಮ ಹೋಟೆಲ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿಸಿದ್ದಾರೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಸಹ ಸೋಮವಾರ ದಿಢೀರ್ ಎಂದು ಸಂಪುಟ ಸಭೆಯನ್ನು ಕರೆದಿದ್ದಾರೆ. ಸಾಮಾನ್ಯವಾಗಿ ಮೋದಿ ಅವರ ಮಂತ್ರಿಮಂಡಲದ ಸಭೆ ಬುಧವಾರ ನಡೆಯುತ್ತದೆ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.

    ಜಮ್ಮು-ಕಾಶ್ಮೀರದ ಕೆಲ ಭಾಗಗಳಿಗೆ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜನೆ ಮಾಡಲಾಗಿದೆ. ಇತ್ತ ಕಳೆದ ಕೆಲ ದಿನಗಳಿಂದ ಗಡಿ ಪ್ರದೇಶದಲ್ಲಿ ನಿರಂತರವಾಗಿ ಗುಂಡಿನ ಚಕಮಕಿ ನಡೆಯುತ್ತಿದೆ. ಇತ್ತ ಪರಿಚ್ಛೇಧ 370ರ ಬಗ್ಗೆ ಕೆಲ ಸುದ್ದಿಗಳು ಹರಿದಾಡುತ್ತಿವೆ. ಜಮ್ಮು, ಕಾಶ್ಮೀರ ಮತ್ತು ಲಡಾಕ್ ಎಂದು ರಾಜ್ಯವನ್ನು ಮೂರು ಭಾಗಗಳಾಗಿ ವಿಂಗಡನೆ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಜನತೆ ಭಯಭೀತರಾಗಿದ್ದಾರೆ ಎಂದು ಮಾಜಿ ಸಿಎಂ ತಿಳಿಸಿದರು.

    ಪರಿಚ್ಛೇಧ 370 ಅಥವಾ 35ಎ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾದ್ರೆ ಪರಿಣಾಮ ವ್ಯತಿರಿಕ್ತವಾಗಲಿದೆ ಎಂಬುದನ್ನು ದೇಶದ ಜನತೆಗೆ ತಿಳಿಸಲು ಇಚ್ಛಿಸುತ್ತೇನೆ. ಈ ಸಂಬಂಧ ಯಾವುದೇ ಮಸೂದೆಯನ್ನು ಅಂಗೀಕರಿಸಕೂಡದು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಇಂದು ಹೋಟೆಲ್ ನಲ್ಲಿ ಕರೆಯಲಾಗಿದ್ದ ಸಭೆ ಸಂಜೆ 6 ಗಂಟೆಗೆ ನನ್ನ ನಿವಾಸದಲ್ಲಿ ನಡೆಯಲಿದೆ ಎಂದರು.

    ಕಾಶ್ಮೀರದಲ್ಲಿ ದಿಢೀರ್ ಬೆಳವಣಿಗೆ ಹಿನ್ನೆಲೆಯಲ್ಲಿ ಜನರು ಪೆಟ್ರೋಲ್ ಬಂಕ್, ಎಟಿಎಂ ಮುಂದೆ ಸಾಲಿನಲ್ಲಿ ನಿಂತಿದ್ದಾರೆ. ಇತ್ತ ಜನರು ದಿನನಿತ್ಯದ ಅವಶ್ಯಕ ಸಾಮಾಗ್ರಿಗಳನ್ನು ಹೆಚ್ಚು ಹೆಚ್ಚು ಖರೀದಿಸುತ್ತಿದ್ದಾರೆ. ಉತ್ತರ ಕಾಶ್ಮೀರದ ಹಲವು ಭಾಗಗಳಲ್ಲಿ ಈ ಪರಿಸ್ಥಿತಿಯ ನಿರ್ಮಾಣವಾಗಿದೆ.

    https://twitter.com/sageelani/status/1157651337498320896

  • ಕೇಸರಿ ಜರ್ಸಿ ಧರಿಸಿದ್ದಕ್ಕೆ ಟೀಂ ಇಂಡಿಯಾಗೆ ಸೋಲು – ಮೆಹಬೂಬಾ ಮುಫ್ತಿ

    ಕೇಸರಿ ಜರ್ಸಿ ಧರಿಸಿದ್ದಕ್ಕೆ ಟೀಂ ಇಂಡಿಯಾಗೆ ಸೋಲು – ಮೆಹಬೂಬಾ ಮುಫ್ತಿ

    ನವದೆಹಲಿ: ಭಾನುವಾರ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಇಂಡಿಯಾ ಸೋಲಲು ಭಾರತದ ಆಟಗಾರರು ಧರಿಸಿದ್ದ ಕಿತ್ತಳೆ ಬಣ್ಣದ ಜರ್ಸಿ ಕಾರಣ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

    ವಿಶ್ವಕಪ್‍ನಲ್ಲಿ ಸೋಲನ್ನೇ ಕಾಣದ ಭಾರತ ಇಂಗ್ಲೆಂಡ್ ವಿರುದ್ಧ ಬರ್ಮಿಗ್ಹ್ಯಾಮ್‍ನಲ್ಲಿ ನಡೆದ ಪಂದ್ಯದಲ್ಲಿ 31 ರನ್‍ಗಳ ಅಂತರದಿಂದ ಸೋತಿದೆ. ಇದಕ್ಕೆ ಬೇಸರ ವ್ಯಕ್ತಪಡಿಸುವ ರೂಪದಲ್ಲಿ ಮೆಹಬೂಬಾ ಮುಫ್ತಿ ಭಾರತ ಸೋಲಿಗೆ ಕಿತ್ತಳೆ ಬಣ್ಣದ ಜರ್ಸಿ ಕಾರಣ ಎಂದು ಟ್ವೀಟ್ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ.

    ಭಾರತದ ಸೋಲಿನ ನಂತರ ಟ್ವೀಟ್‍ವೊಂದನ್ನು ಮಾಡಿರುವ ಮೆಹಬೂಬಾ ಮುಫ್ತಿ, “ನಾನು ಮೂಢ ನಂಬಿಕೆಗಳನ್ನು ನಂಬುತ್ತೇನೆಂದು ಕರೆದರೂ ಪರವಾಗಿಲ್ಲ ಭಾರತದ ಗೆಲುವಿನ ಓಟವನ್ನು ತಡೆದದ್ದೆ ಟೀಂ ಇಂಡಿಯಾ ಧರಿಸಿದ್ದ ಕೇಸರಿ ಸರ್ಜಿ” ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಈಗ ವ್ಯಾಪಕ ವಿರೋಧ ವ್ಯಕ್ತವಾಗಿದೆ.

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಮ್ಮು ಕಾಶ್ಮೀರದ ಬಿಜೆಪಿ ಮುಖಂಡ ರವೀಂದರ್ ರೈನಾ ಭಾರತ ಸೋತು ಪಾಕಿಸ್ತಾನವನ್ನು ಮನೆಗೆ ಕಳುಹಿಸಿದ್ದಕ್ಕೆ ಮೆಹಬೂಬಾ ಮುಫ್ತಿ ಅವರ ಮನಸ್ಸಿಗೆ ತುಂಬಾ ನೋವಾಗಿದೆ ಆದಕ್ಕೆ ಅವರು ಈ ರೀತಿ ಭಾರತದ ಜರ್ಸಿ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

    ಇದಕ್ಕೆ ಶಿವಸೇನೆ ಮುಖಂಡ ಸಂಜಯ್ ರೌತ್ ಅವರು ಕೂಡ ಪ್ರತಿಕ್ರಿಯಿಸಿದ್ದು, “ಹಾಗಾದರೆ ಪಾಕಿಸ್ತಾನ ಹಸಿರು ಬಣ್ಣದ ಜರ್ಸಿ ಧರಿಸಿ ಆಡುತ್ತದೆ ಮತ್ತೆ ಪಾಕಿಸ್ತಾನ ಏಕೆ ಸೋಲುತ್ತದೆ. ಪಾಕಿಸ್ತಾನದ ಆಟಗಾರರು ಪಾದ್ರಿಗಳಂತೆ ಗಡ್ಡ ಬಿಡುತ್ತಾರೆ ಅದಕ್ಕಾಗಿಯೇ ಸೋಲುತ್ತಿರಬಹುದು” ಎಂದು ಪರೋಕ್ಷವಾಗಿ ಕಿಡಿಕಾರಿದ್ದಾರೆ.

    ಇದಕ್ಕೂ ಮುಂಚೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಕೇಸರಿ ಬಣ್ಣದ ಜರ್ಸಿಗೆ ಆಕ್ಷೇಪ ಎತ್ತಿದ್ದವು. ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದ ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಮ್ ಅಜ್ಮಿ ಅವರು, ಬಿಸಿಸಿಐ ನಿರ್ಧಾರದ ಹಿಂದೆ ಕೇಂದ್ರ ಸರ್ಕಾರವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನು ಕೇಸರಿಮಯವಾಗಿಸಲು ಹೊರಟಿದ್ದಾರೆ. ಭಾರತದ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದ್ದು ಒಬ್ಬ ಮುಸ್ಲಿಂ. ತ್ರಿವರ್ಣ ಧ್ವಜದ ಮೂರು ಬಣ್ಣಗಳಲ್ಲಿ ಕೇಸರಿಯನ್ನೇ ಆಯ್ಕೆ ಮಾಡಿದ್ದು ಯಾಕೆ? ಜರ್ಸಿಯಲ್ಲಿ ಮೂರು ವರ್ಣಗಳನ್ನು ಬಳಸಿದ್ದರೆ ಉತ್ತಮವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಐಸಿಸಿ 2019 ಏಕದಿನ ವಿಶ್ವಕಪ್‍ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ ವಿರುದ್ಧ 31 ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಆತಿಥೇಯ ಇಂಗ್ಲೆಂಡ್ ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಿದೆ. ಈ ಮೂಲಕ 1992ರ ಬಳಿಕ ಭಾರತ ವಿರುದ್ಧ ವಿಶ್ವಕಪ್‍ನಲ್ಲಿ ಮೊದಲ ಗೆಲುವನ್ನು ದಾಖಲಿಸಿದೆ.

    ಹೊಸ ಜರ್ಸಿ ಯಾಕೆ?
    ಐಸಿಸಿ ನಿಯಮದಂತೆ 2 ತಂಡಗಳು ಒಂದೇ ಬಣ್ಣದ ಜರ್ಸಿ ಧರಿಸುವಂತಿಲ್ಲ. ಎರಡೂ ತಂಡಗಳು ಒಂದೇ ವರ್ಣದ ಜರ್ಸಿ ತೊಟ್ಟು ಮೈದಾನಕ್ಕೆ ಇಳಿದರೆ ಪ್ರೇಕ್ಷಕರಿಗೆ ಗೊಂದಲ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಒಂದು ತಂಡವು ತನ್ನ ಜರ್ಸಿಯನ್ನು ಬದಲಾಯಿಸಬೇಕಾಗುತ್ತದೆ. ಫುಟ್ಬಾಲ್‍ನಲ್ಲಿರುವ `ಹೋಮ್’ ಮತ್ತು `ಅವೇ’ ನಿಯಮವನ್ನು ಕ್ರಿಕೆಟ್‍ಗೆ ಅಳವಡಿಸಲಾಗಿದೆ. ಈ ನಿಯಮದ ಪ್ರಕಾರ ಅತಿಥೇಯ ತಂಡ ಇಂಗ್ಲೆಂಡ್ ತನ್ನದೇ ಜರ್ಸಿಯನ್ನು ತೊಟ್ಟು ಆಡಿದ್ದು, ಕೊಹ್ಲಿ ಪಡೆ ಬೇರೆ ಬಣ್ಣದ ಜರ್ಸಿ ಧರಿಸಬೇಕಿದೆ. ಹೀಗಾಗಿ ಭಾರತ ನೀಲಿಯ ಬದಲು ಕೇಸರಿ ಬಣ್ಣ ಇರುವ ಜರ್ಸಿಯನ್ನು ಧರಿಸಲಿದೆ.

    ಈ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಟೀಂ ಇಂಡಿಯಾ ಅಭಿಮಾನಿಗಳು ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಭಾರತದ ಫುಟ್‍ಬಾಲ್ ಮತ್ತು ಹಾಕಿ ಆಟಗಾರರು ಕೇಸರಿ ಬಣ್ಣದ ಜರ್ಸಿಯಲ್ಲಿ ಆಡಿದ್ದಾರೆ. ಈ ವೇಳೆ ಆಕ್ಷೇಪ ಎತ್ತದ ರಾಜಕೀಯ ನಾಯಕರು ಈಗ ಪ್ರಚಾರಕ್ಕಾಗಿ ವಿವಾದವನ್ನು ಎತ್ತುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

  • ಕಲ್ಲಿನಿಂದ ಹೊಡೆದು ಕರಡಿಯನ್ನು ನದಿಗೆ ತಳ್ಳಿದ್ರು – ವಿಡಿಯೋ

    ಕಲ್ಲಿನಿಂದ ಹೊಡೆದು ಕರಡಿಯನ್ನು ನದಿಗೆ ತಳ್ಳಿದ್ರು – ವಿಡಿಯೋ

    ಶ್ರೀನಗರ: ಕಲ್ಲಿನಿಂದ ಹೊಡೆದು ಕಂದು ಬಣ್ಣದ ಕರಡಿಯನ್ನು ಕಡಿದಾದ ಪರ್ವತದಿಂದ ನದಿಗೆ ಬೀಳಿಸುತ್ತಿರುವ ಶಾಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಜಮ್ಮು-ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಕಾಡಿನಿಂದ ತಪ್ಪಿಸಿಕೊಂಡು ನಾಡಿನತ್ತ ಬಂದ ಕರಡಿಯನ್ನು ಜನರು ಕಲ್ಲಿನಿಂದ ಹೊಡೆದಿದ್ದಾರೆ. ಎತ್ತರದ ಶಿಖರದಿಂದ ಕೆಳಗೆ ಬೀಳುತ್ತಿರುವ ವಿಡಿಯೋ ಮಾಡಿ ಮಾನವೀಯತೆಯನ್ನು ಮರೆತಿದ್ದಾರೆ.

    ದಾರಿ ತಪ್ಪಿ ನಾಡಿಗೆ ಬಂದ ಕರಡಿಯನ್ನು ಅಲ್ಲಿನ ಸ್ಥಳೀಯ ಜನರು ಓಡಾಡಿಸಿದ್ದಾರೆ. ಜನರ ಗಲಾಟೆಯಿಂದ ಭಯಗೊಂಡ ಕರಡಿ ಸಮೀಪದ ಎತ್ತರದ ಪ್ರದೇಶ(ಬೆಟ್ಟ)ವೇರಿದೆ. ಕಲ್ಲಿನಿಂದ ಹೊಡೆಯುತ್ತಾ ಜನರು ಕರಡಿಯನ್ನು ಬೆನ್ನತ್ತಿದ್ದಾರೆ. ಎತ್ತರ ಪ್ರದೇಶಕ್ಕೆ ತಲುಪಿದಂತೆ ಸಮತೋಲನ ಕಳೆದುಕೊಂಡು ಆಳವಾದ ಕಂದಕಕ್ಕೆ ಉರುಳಿದೆ. ಪ್ರಾಣ ಉಳಿಸಿಕೊಳ್ಳಲು ಕರಡಿ ಮತ್ತೆ ಮೇಲೆ ಬರಲು ಪ್ರಯತ್ನಿಸಿದೆ.

    ಕರಡಿ ಪ್ರಾಣ ಉಳಿಸಿಕೊಳ್ಳಲು ಮೇಲೆ ಬರುತ್ತಿದ್ದನ್ನು ಕಂಡ ಜನರು ಮತ್ತೆ ಕಲ್ಲಿನ ದಾಳಿ ನಡೆಸಿದ್ದಾರೆ. ಕಲ್ಲಿನ ದಾಳಿಗೆ ಆಯತಪ್ಪಿದ ಕರಡಿ ಕಂದಕದಲ್ಲಿ ಹರಿಯುತ್ತಿರುವ ನದಿಯ ಪಾಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕರಡಿಯ ಸಾವಿಗೆ ಕಾರಣರಾದವರನ್ನು ಕಂಡು ಹಿಡಿದು ಶಿಕ್ಷೆ ನೀಡಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

    ಕರಡಿಯ ಮೇಲೆ ಕಲ್ಲೆಸೆದವರನ್ನು ಪತ್ತೆ ಹಚ್ಚಿ ಅವರೆಲ್ಲ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ನದಿಯಲ್ಲಿ ಬಿದ್ದಿರುವ ಕರಡಿಯ ಪತ್ತೆಗಾಗಿ ವನ್ಯಜೀವಿ ಇಲಾಖೆಯಿಂದ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ಉಲ್-ಹಕ್ ಚೌಧರಿ ಸ್ಪಷ್ಟನೆ ನೀಡಿದ್ದಾರೆ.

    ಈ ವಿಡಿಯೋ ರೀಟ್ವೀಟ್ ಮಾಡಿಕೊಂಡಿರುವ ಮಾಜಿ ಸಿಎಂ ಮೆಹಬೂಬ ಮುಫ್ತಿ, ಇದೊಂದು ಹೃದಯ ವಿದ್ರಾವಕ ಘಟನೆಯಾಗಿದ್ದು, ಅಮಾನವೀಯತೆಯ ಸಾಕ್ಷಿಯಾಗಿದೆ. ಪ್ರಾಣಿಗಳ ವಾಸಸ್ಥಳವನ್ನು ಅತಿಕ್ರಮಣ ಮಾಡಿಕೊಂಡಿದ್ದು ನಮ್ಮ ತಪ್ಪು ಎಂದು ಬರೆದುಕೊಂಡಿದ್ದಾರೆ.

  • ಶಂಕಿತ ಉಗ್ರರ ಗುಂಡಿನ ದಾಳಿಗೆ ಬಿಜೆಪಿ ಹಿರಿಯ ಮುಖಂಡ ಬಲಿ

    ಶಂಕಿತ ಉಗ್ರರ ಗುಂಡಿನ ದಾಳಿಗೆ ಬಿಜೆಪಿ ಹಿರಿಯ ಮುಖಂಡ ಬಲಿ

    ಶ್ರೀನಗರ: ಶನಿವಾರ ಮೂರು ಜನ ಶಂಕಿತ ಉಗ್ರರ ಗುಂಡಿನ ದಾಳಿಗೆ ಸ್ಥಳೀಯ ಬಿಜೆಪಿ ಹಿರಿಯ ಮುಖಂಡ ಗುಲ್ ಮಹಮ್ಮದ್ ಮಿರ್ ಬಲಿಯಾಗಿದ್ದಾರೆ.

    ಅನಂತ್ ನಾಗ್ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷರಾಗಿದ್ದ ಗುಲ್ ಮಹಮ್ಮದ್ ಮಿರ್ ಅವರನ್ನು ಕಾರು ಕೀ ಕೇಳುವ ನೆಪದಲ್ಲಿ ಮನೆಗೆ ಬಂದ 3 ಜನ ಶಂಕಿತ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಎದೆಗೆ ಗುಂಡು ತಗುಲಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಕಾಶ್ಮೀರದಲ್ಲಿ “ಅಟಲ್” ಎಂದೆ ಖ್ಯಾತಿಯಾಗಿದ್ದ ಗುಲ್ ಅವರಿಗೆ ಭದ್ರತೆಯನ್ನು ನೀಡಲಾಗಿತ್ತು. ಅದರೆ ಕೆಲವು ದಿನಗಳ ಹಿಂದೆ ಅವರಿಗೆ ನೀಡಿದ್ದ ಭದ್ರತೆಯನ್ನು ಅಲ್ಲಿನ ರಾಜ್ಯಪಾಲ ಸತ್ಯಪಾಲ್ ಮಲಿಕ್ ನೇತೃತ್ವದ ರಾಜ್ಯ ಆಡಳಿತ ಹಿಂಪಡೆದಿತ್ತು. ಹೀಗೆ ಹಿಂಪಡೆದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದ್ದು ರಾಜ್ಯ ಆಡಳಿತದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಘಟನೆಯ ಬಳಿಕ ಪ್ರತಿಕ್ರಿಯಿಸಿರುವ ಗುಲ್ ಮಹಮ್ಮದ್ ಕುಟುಂಬದವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಕಾಶ್ಮೀರದ ಕಣಿವೆಯಲ್ಲಿ ಶಾಂತಿ ಕದಡುತ್ತಿರುವ ಮತ್ತು ಮುಗ್ಧ ಜನರನ್ನು ಕೊಲ್ಲುತಿರುವ ಉಗ್ರರನ್ನು ಹತ್ಯೆಮಾಡಬೇಕು ಎಂದು ಅಗ್ರಹಿಸಿದ್ದಾರೆ.

    ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ಪ್ರಧಾನಿ ಮೋದಿ ಅವರು, ಹಿರಿಯ ಬಿಜೆಪಿ ನಾಯಕನ ಕೊಲೆಯನ್ನು ಖಂಡಿಸಿದ್ದಾರೆ. ಇಂತಹ ಹಿಂಸೆಗೆ ನಮ್ಮ ದೇಶದಲ್ಲಿ ಯಾವುದೇ ಸ್ಥಳವಿಲ್ಲ ಎಂದು ಹೇಳಿದ್ದಾರೆ.

    ಪಿಡಿಪಿ ಮುಖ್ಯಸ್ಥೆ ಮೆಹಬೂಬ್ ಮಫ್ತಿಯವರು ಹಿರಿಯ ಬಿಜೆಪಿ ಮುಖಂಡ ಗುಲ್ ಮಹಮ್ಮದ್ ಮಿರ್ ಅವರ ಹತ್ಯೆಯನ್ನು ನಾನು ಖಂಡಿಸುತ್ತೇನೆ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಕೊಡಲಿ ಎಂದು ಸಂತಾಪ ಸೂಚಿಸಿದ್ದಾರೆ.