ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಇನ್ ಸ್ಟಾಗ್ರಾಮ್ ಖಾತೆಯ ಸ್ಟೋರಿಯಾಗಿ ಬಾಲ್ಯದ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಮೇಘನಾ ತಮ್ಮ ತಾಯಿ ಪ್ರಮೀಳಾ ಜೋಷಾಯ್ ಜೊತೆ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಮೇಘನಾ ತಂದೆ ಸುಂದರ್ ರಾಜ್ ಈ ಫೋಟೋವನ್ನು ಕ್ಲಿಕ್ಕಿಸಿದ್ದಾರೆ.
ಆಗಾಗ ಇನ್‍ಸ್ಟಾಗ್ರಾಮ್ ಖಾತೆ ತೆರೆದು ಅಭಿಮಾನಿಗಳನ್ನು ಮತ್ತು ಪತಿ ಚಿರಂಜೀವಿ ಸರ್ಜಾ ಫೋಟೋ ನೋಡುತ್ತಿದ್ದ ಮೇಘನಾ ರಾಜ್ ಈ ಬಾರಿ ಇನ್ ಸ್ಟಾಗ್ರಾಮ್ ಸ್ಟೋರಿಯಾಗಿ ತಮ್ಮ ಬಾಲ್ಯದ ಫೋಟೋವನ್ನು ಹಾಕಿದ್ದಾರೆ. ಈ ಫೋಟೋವನ್ನು ವೀಕ್ಷಿಸಿದ ನಂತರ ಮೇಘನಾ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವುದರ ಜೊತೆಗೆ ಹಾಸ್ಯಮಯವಾದ ಕ್ಯಾಪ್ಷನ್ ಕೂಡ ಹಾಕಿಕೊಂಡಿದ್ದಾರೆ.
ಈ ಫೋಟೋನಲ್ಲಿ ಮೇಘನಾ ಬಾಬ್ ಕಟ್ ಮಾಡಿಸಿಕೊಂಡಿದ್ದಾರೆ. ಟಾಪ್ ಟೂ ಬಾಟಂ ಕಪ್ಪು ಬಣ್ಣದ ಉಡುಪು ಧರಿಸಿರುವ ಮೇಘನಾ ಪ್ರಮೀಳಾ ಜೋಷಾಯ್ ಅವರ ಪಕ್ಕ ನಡೆದುಕೊಂಡು ಬರುತ್ತಿದ್ದಾರೆ. ಈ ಫೋಟೋವನ್ನು ಶೇರ್ ಮಾಡಿಕೊಂಡಿರುವ ಮೇಘನಾ ನನ್ನ ತಂದೆ ಛಾಯಾಗ್ರಹಕರಾಗಿದ್ದಾಗ ನಾನು ಫೋಟೋಗಳಿಗೆ ಪೋಸ್ ನೀಡುವಂತೆ ನಟಿಸುತ್ತಿದ್ದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.
ಅಲ್ಲದೆ ಫೆಬ್ರವರಿ 2ರಂದು ಮೇಘನಾ ತಂದೆ ಸುಂದರ್ ರಾಜ್ ಪ್ರೀತಿಯಿಂದ ತಮ್ಮ ಕೆನ್ನೆಗೆ ಚುಂಬಿಸುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿಕೊಳ್ಳುವುದರ ಮೂಲಕ ಸುಂದರ್ ರಾಜ್‍ಗೆ ಜನ್ಮ ದಿನದ ಶುಭಾಶಯವನ್ನು ಕೋರಿದ್ದರು.
ಜೊತೆಗೆ ಪ್ರೀತಿಯ ಅಪ್ಪ ನಾನು ಅವಲಂಬಿತವಾಗಿರುವ ಏಕೈಕ ಭುಜ ಅಂದರೆ ಅದು ನಿಮ್ಮದು. ಈ ವಿಚಾರವನ್ನು ನಿಮ್ಮ ಹುಟ್ಟುಹಬ್ಬದ ದಿನ ನಾನು ಜಗತ್ತಿಗೆ ಹೇಳಲು ಬಯಸುತ್ತೇನೆ. ನೀವು ಒಂದು ಸಣ್ಣ ಹೆಣ್ಣು ಮಗುವಿದ್ದಂತೆ ನಾನು ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದರು.
– ಮೇಘನಾಗಾಗಿ ತೊಟ್ಟಿಲು ಬೆಲೆ 15 ಸಾವಿರ ಕಡಿಮೆ
– ಪುರಾಣ ಕಥೆಯ ಚಿತ್ರಗಳನ್ನು ಒಳಗೊಂಡಿದೆ ಕಲಘಟಗಿ ತೊಟ್ಟಿಲು
ಬೆಂಗಳೂರು: ಜೂನಿಯರ್ ಚಿರು ಆಗಮನದಿಂದಾಗಿ ಚಿರಂಜೀವಿ ಸರ್ಜಾ ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದ್ದು, ಇನ್ನೂ ವಿಶೇಷವೆಂದರೆ ಮೇಘನಾ ರಾಜ್ ಸರ್ಜಾ ಅವರ ಸೀಮಂತ ಕಾರ್ಯದಿಂದ ಹಿಡಿದು, ಮಗುವನ್ನು ಸ್ನಾನ ಮಾಡಿಸುವುದು, ನಾಮಕರಣ ಮಾಡುವ ಶಾಸ್ತ್ರದ ವರೆಗೆ ಉತ್ತರ ಕರ್ನಾಟಕದ ಶೈಲಿಯನ್ನು ಅನುಸರಿಸಿರುವುದು ವಿಶೇಷವಾಗಿದೆ. ಈ ಬಗ್ಗೆ ಎಲ್ಲ ಶಾಸ್ತ್ರಗಳ ನೇತೃತ್ವ ವಹಿಸಿದ್ದ ವನಿತಾ ಗುತ್ತಲ್ ಅವರು ಹೇಗೆಲ್ಲ ಶಾಸ್ತ್ರ ನೆರವೇರಿಸಿದರು. ಯಾವ ರೀತಿ ಆರೈಕೆ ಮಾಡಲಾಗಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.
ವನಿತಾ ಅವರಿಗೆ ಹೊಳೆದದ್ದು ಹೇಗೆ?
ನಮ್ಮ ಪತಿ ಒಂದು ದಿನ ತಡವಾಗಿ ಬಂದರು, ಯಾಕೋ ಬರುವುದು ತಡವಾಯಿತು ಎಂದು ಕರೆ ಮಾಡಿದೆ. ಆಗ ನನ್ನ ಮಕ್ಕಳು ಅಪ್ಪ ಒಂದು ದಿನ ತಡವಾಗಿ ಬಂದಿದ್ದಕ್ಕೆ ನೀನಗೆ ತಡೆಯಲು ಆಗುತ್ತಿಲ್ಲ. ಚಿರು ಅವರು ತೀರಿದ್ದಾರೆ, ಮೇಘನಾ ಅವರ ಹೊಟ್ಟೆಯಲ್ಲಿ ಪಾಪು ಇದೆ ಅವರು ಹೇಗೆ ಇರಬೇಡ ಎಂದು ಪ್ರಶ್ನಿಸಿದರು. ಆಗ ನನ್ನ ಮನಸ್ಸಿಗೆ ತುಂಬಾ ನೋವಾಯಿತು. ತಕ್ಷಣವೇ ನಮಗೆ ಪರಿಚಯವಿದ್ದ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಅವರನ್ನು ಸಂಪರ್ಕಿಸಿ, ಮೇಘನಾ ಅವರ ಸೀಮಂತ ಶಾಸ್ತ್ರ ಮಾಡುವ ಬಗ್ಗೆ ಚರ್ಚಿಸಿದೆವು. ಅಲ್ಲದೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಾರುತಿ ಬಡಿಗೇರ್ ಅವರ ಬಳಿ ನೈಸರ್ಗಿಕ ಬಣ್ಣದಿಂದ ಕೈಯಿಂದ ಮಾಡಿದ ದೇಶದ ಸಂಸ್ಕೃತಿ, ಮಹಾಭಾರತ ಹಾಗೂ ರಾಮಾಯಣ ಸನ್ನಿವೇಶಗಳ ಚಿತ್ರಗಳನ್ನು ಒಳಗೊಂಡ ತೊಟ್ಟಿಲನ್ನು ತಯಾರಿಸಲು ಕೇಳಿಕೊಂಡೆವು.
ತೊಟ್ಟಿಲಿನ ಬೆಲೆ ಎಷ್ಟು?
ಕಲಘಟಗಿಯ ಕರಕುಶಲಕರ್ಮಿ ಮಾರುತಿ ಬಡಿಗೇರ್ ತೊಟ್ಟಿಲು ತಯಾರಿಸಿ ಕೊಟ್ಟರು. ಆರಂಭದಲ್ಲಿ ಒಂದು ತೊಟ್ಟಿಲಿಗೆ 1.10 ಲಕ್ಷ ರೂ. ಹೇಳಿದ್ದರು. ನಾನು ಮೇಘನಾ ಕುಟುಂಬಕ್ಕೆ ತೊಟ್ಟಿಲು ಕೊಡುತ್ತಿರುವುದು ತಿಳಿದು 15 ಸಾವಿರ ರೂ. ಕಡಿಮೆ ಮಾಡಿದರು. ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ತೊಂದರೆಯಾದಾಗ ಸಹಾಯ ಮಾಡುತ್ತೇವೆ. ಆದರೆ ಮೇಘನಾ ಅವರು ಇಷ್ಟು ಬೇಸರಗೊಂಡಿದ್ದಾರೆ. ಹೀಗಾಗಿ ಸಹಾಯ ಮಾಡಬೇಕು ಎಂದು ಈ ಕೆಲಸ ಮಾಡಲು ನಿರ್ಧರಿಸಿದೆವು ಎಂದು ವನಿತಾ ತಿಳಿಸಿದರು.
ಉತ್ತರ ಕರ್ನಾಟಕ ಶೈಲಿಯಲ್ಲಿ ಸೀಮಂತ
ಸರ್ಜಾ ಕುಟುಂಬಸ್ಥರನ್ನು ಹೇಗೆ ಸಂಪರ್ಕಿಸಬೇಕು ಎಂದು ನಮಗೆ ತಿಳಿದಿರಲಿಲ್ಲ. ಬಳಿಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾಗಿರುವ ಉಮೇಶ್ ಬಣಕಾರ್ ಅವರು ನಮ್ಮ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನವರು ಹೀಗೆ ಅವರನ್ನು ಸಂಪರ್ಕಿಸಿ, ಬಳಿಕ ಪ್ರಮೀಳಾ ಅವರನ್ನು ಸಂಪರ್ಕಿಸಿದೆವು. ಆರಂಭದಲ್ಲಿ ಸೀಮಂತ ಮಾಡುತ್ತೇವೆ ಎಂದು ಕೇಳಿದಾಗ ಅಷ್ಟೇನು ಆಸಕ್ತಿ ತೋರಲಿಲ್ಲ. ಬಳಿಕ ನಾವು ಕಾರ್ಯಕ್ರಮ ಮಾಡಲು ಮುಂದಾದಾಗ ಚೆನ್ನಾಗಿ ಸ್ಪಂದಿಸಿದರು. ಉತ್ತರ ಕರ್ನಾಟಕ ಶೈಲಿಯಲ್ಲೇ ಸೀಮಂತ ಮಾಡಿದೆವು. ಮೇಘನಾ ನಾನ್ ವೆಜ್ ಊಟ ಎಂದರೆ ಹೆಚ್ಚು ಇಷ್ಟ ಎಂದರು ಆಗ ಅಡಿಗೆ ಮಾಡಿ ಎರಡು ದಿನ ಬಿಟ್ಟು ಊಟ ತಂದುಕೊಟ್ಟೆವು. ಬಳಿಕ ಹೆರಿಗೆ ಆದಮೇಲೆ ಸಹ ಉತ್ತರ ಕರ್ನಾಟಕ ಶೈಲಿಯ ಕೊಬ್ಬರಿಖಾರ, ಅವಳಿ ಬೀಜ, ಅರಿಶಿಣ, ಬೆಳ್ಳುಳ್ಳಿ ಹೀಗೆ ನಮ್ಮ ಉತ್ತರ ಕರ್ನಾಟಕ ಪದ್ಧತಿಯಂತೆ ಎಲ್ಲ ಪದಾರ್ಥಗಳನ್ನು ಮೇಘನಾ ಮನೆಯವರಿಗೆ ನೀಡಿದೆವು ಎಂದು ತಿಳಿಸಿದರು.
ತೊಟ್ಟಿಲು ತಯಾರಿಗೆ ಬೇಕು 4-5 ತಿಂಗಳು
ಮಗುವನ್ನು ಸ್ನಾನ ಮಾಡಿಸಲು ನಮ್ಮ ಸದಸ್ಯರೊಬ್ಬರನ್ನು 10 ದಿನಗಳ ಕಾಲ ಮೇಘನಾ ಅವರ ಮನೆಯಲ್ಲಿಯೇ ಬಿಟ್ಟಿದ್ದೆವು. ಇದೀಗ ಮಗುವಿನ ನಾಮಕರಣಕ್ಕೆ 16 ಜನ ಸ್ತ್ರೀ ಸಂಘದ ಸದಸ್ಯರೆಲ್ಲ ಬಂದಿದ್ದೇವೆ. ಹುಟ್ಟಿದ ಮನಿ ಪುಟ್ಟ ಎಂದು ಹೇಳಿ ನಾನೇ ಮಗುವಿಗೆ ಹೆಸರಿಟ್ಟೆ ತುಂಬಾ ಖುಷಿಯಾಯಿತು. 4-5 ತಿಂಗಳ ಕಾಲ ಕೆಲಸ ಮಾಡಿ ತೊಟ್ಟಿಲು ತಯಾರಿಸಿದ್ದಾರೆ ವನಿತಾ ಗುತ್ತಲ್ ಅವರು ವಿವರಿಸಿದರು.
ಸ್ತ್ರೀ ಶಕ್ತಿ ಮಹಿಳಾ ಸೇವಾ ಸಂಸ್ಥೆಯನ್ನು 18 ವರ್ಷಗಳ ಹಿಂದೆ ಕಟ್ಟಿ ಬೆಳೆಸಿದ್ದೇನೆ. ಈ ಸಂಸ್ಥೆ ಅಡಿಯಲ್ಲಿ 27 ಸ್ತ್ರಿ ಶಕ್ತಿ ಸಂಘ ಸಂಸ್ಥೆಗಳು ಬರುತ್ತವೆ. ನಾವು ಎಲ್ಲರಿಂದಲೂ 10 ರೂ. ಸಂಗ್ರಹಿಸಿ ಅದೇ ಹಣವನ್ನು ನಾವು ಅನಿವಾರ್ಯವಿದ್ದ ಸದಸ್ಯರಿಗೆ ಸಾಲವನ್ನಾಗಿ ನೀಡಿ ಸಹಾಯ ಮಾಡಲಾಗುತ್ತವೆ. ರಾಜ್ಯಾದ್ಯಂತ ಮಹಿಳೆಯರಿಗೆ ತೊಂದರೆಯಾಗುತ್ತಿದ್ದಾಗ ಸಹಾಯ ಮಾಡುತ್ತೇವೆ ಎಂದು ತಿಳಿಸಿದರು.
ಬೆಂಗಳೂರು: ಮೇಘನಾ ರಾಜ್ ಡೆಲಿವರಿ ಬಳಿಕ ಇದೀಗ ಅರ್ಜುನ್ ಸರ್ಜಾ ಕುಟುಂಬ ಆಸ್ಪತ್ರೆಗೆ ತೆರಳಿ ಜೂನಿಯರ್ ಚಿರುನನ್ನು ಕಣ್ತುಂಬಿಕೊಂಡು ಸಂತಸಪಟ್ಟಿದ್ದಾರೆ. ಇದೇ ವೇಳೆ ನಟಿ, ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಮಾಧ್ಯಮಗಳ ಜೊತೆ ಮಗು ಬಗ್ಗೆ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಐಶ್ವರ್ಯಾ, ತುಂಬಾ ಕ್ಯೂಟ್ ಆಗಿದ್ದಾನೆ. ಸೇಮ್ ಚಿರು ತರಾನೇ ಇದಾನೆ. ಒಬ್ಬರಿಂದ ಇನ್ನೊಬ್ಬರಿಗೆ ಸ್ವಲ್ಪ ಬದಲಾವಣೆ ಇರಬಹುದು. ಆದರೆ ಮೂಗು ಮಾತ್ರ ಥೇಟ್ ಅವನ ತರಾನೇ ಇದೆ. ಈ ಅನುಭವವನ್ನು ಹೇಳಿಕೊಳ್ಳಲು ಸಾಧ್ಯವೇ ಇಲ್ಲ. ತುಂಬಾ ಖುಷಿಯಾಗುತ್ತಿದೆ. ಆದರೆ ಅದೇ ಸಮಯದಲ್ಲಿ ಚಿರು ನೆನಪು ಸಹ ಬರುತ್ತಿದೆ. ಆದರೆ ಅವನ ಆಶೀರ್ವಾದ ಯಾವಾಗಲೂ ಮಗು ಮೇಲೆ ಇರುತ್ತದೆ ಎಂದರು. ಇದನ್ನೂ ಓದಿ: ಚಿರು ಮಗನನ್ನ 20 ವರ್ಷದ ನಂತ್ರ ನಾನೇ ಲಾಂಚ್ ಮಾಡ್ತೀನಿ: ಅರ್ಜುನ್ ಸರ್ಜಾ
ಈ ಮಗು ತುಂಬಾ ಸ್ಪೆಷಲ್, ಯಾಕಂದ್ರೆ ನಮ್ಮ ಕಟುಂಬದ ಪ್ರೀತಿ ಒಂದುಕಡೆಯಾದರೆ. ಮತ್ತೊಂದು ಕಡೆ ಇಡೀ ಕರ್ನಾಟಕದ ಪ್ರೀತಿ, ಆಶೀರ್ವಾದ ಈ ಮಗು ಮೇಲಿದೆ. ತುಂಬಾನೇ ಖುಷಿಯಾಗುತ್ತದೆ. ಗಂಡು ಮಗುನೇ ಆಗುತ್ತೆ ಎಂದು ಎಲ್ಲರೂ ಗೆಸ್ ಮಾಡಿದ್ದೆವು. ಆದರೆ ನನಗೆ ಎಲ್ಲೋ ಒಂದು ಕಡೆ ಹೆಣ್ಣು ಮಗು ಆಗಬಹುದಾ ಎಂದು ಅನಿಸಿತ್ತು. ಮೇಘನಾ ತುಂಬಾ ಮುದ್ದಾಗಿ ಕಾಣಿಸುತ್ತಿದದ್ದರಿಂದ ಹಾಗೆ ಅನ್ನಿಸಿತ್ತು. ಆದರೆ ಯಾವುದೇ ಮಗುವಾದರೂ ನಮಗೆ ಖುಷಿ ಇತ್ತು. ಈಗ ಗಂಡು ಮಗುವಾಗಿದ್ದಕ್ಕೆ ಎಲ್ಲರಿಗೂ ಹೆಚ್ಚು ಸಂತಸವಾಗಿದೆ ಎಂದು ಐಶ್ವರ್ಯಾ ಹೇಳಿದ್ದಾರೆ.
ಇದೇ ವೇಳೆ ಅರ್ಜುನ್ ಸರ್ಜಾ ಪತ್ನಿ ಆಶಾ ರಾಣಿ ಮಾತನಾಡಿ, ತುಂಬಾ ಖುಷಿಯಾಗಿದೆ. ಹೃದಯಪೂರ್ವಕವಾಗಿ ಮಗುವನ್ನು ಸ್ವಾಗತಿಸಿದ್ದೇವೆ. ತಾಯಿ, ಮಗುವನ್ನು ದೇವರು ಚೆನ್ನಾಗಿ ನೋಡಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಆದರೆ ಚಿರುನನ್ನು ಮಿಸ್ ಮಾಡುತ್ತೇವೆ. ಆ ಮಗುನಲ್ಲೇ ಚಿರುನನ್ನು ನೋಡುತ್ತೇವೆ. ಅಜ್ಜಿ ಆಗಿರೋ ಸಂಭ್ರಮ ಹೇಳೋಕೆ ಆಗಲ್ಲ ಎಂದು ಹೇಳಿದ್ದಾರೆ.
ಮೇಘನಾ ಅವರಿಗೆ ಹೆರಿಗೆಯಾದಾಗ ಅರ್ಜುನ್ ಸರ್ಜಾ ತಮಿಳುನಾಡಿನಲ್ಲಿದ್ದರು. ಹೀಗಾಗಿ ಬರಲು ಆಗಿರಲಿಲ್ಲ. ಇದೀಗ ಬೆಂಗಳೂರಿಗೆ ಆಗಮಿಸಿದ್ದು, ಈ ಹಿನ್ನೆಲೆ ಮೆಘನಾ ಹಾಗೂ ಜೂನಿಯರ್ ಚಿರುನನ್ನು ಕಣ್ತುಂಬಿಕೊಂಡು ಸಂತಸ ಪಟ್ಟಿದ್ದಾರೆ. ಕುಟುಂಬ ಸಮೇತರಾಗಿ ಆಸ್ಪತ್ರೆಗೆ ಆಗಮಿಸಿ ಮೇಘನಾ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಮಗುವನ್ನು ಎತ್ತಿ ಮುದ್ದಾಡಿ ಸಂತಸ ಪಟ್ಟಿದ್ದಾರೆ.
ಬೆಂಗಳೂರು: ನಮ್ಮ ನೋವನ್ನು ದೂರ ಮಾಡಲು ಚಿರು ಮಗು ರೂಪದಲ್ಲಿ ಹುಟ್ಟಿದ್ದಾನೆ ಎಂದು ಅರ್ಜುನ್ ಸರ್ಜಾ ಸಂತೋಷ ಹಂಚಿಕೊಂಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, 36 ವರ್ಷಗಳ ಹಿಂದೆ ಚಿರು ಹುಟ್ಟಿದಾಗ ಚೆನ್ನೈಯಿಂದ ಅವನ್ನು ನೋಡಲು ಓಡಿ ಬಂದಿದ್ದೆ. ಈಗ ಅವನ ಮಗುವನ್ನು ನೋಡಲು ಬರುತ್ತಿದ್ದೇನೆ. ನಮ್ಮ ಕುಟುಂಬಕ್ಕೆ ಹೇಳಲಾಗದಷ್ಟು ಸಂತೋಷವಾಗಿದೆ. ನಾಲ್ಕು ತಿಂಗಳ ನಂತರ ನಮ್ಮ ಕುಟುಂಬದಲ್ಲಿ ಸಂತೋಷ ಸಂಭ್ರಮ ಮನೆಮಾಡಿದೆ. ಚಿರು ವಾಪಸ್ ಬಂದಿದ್ದಾನೆ ಎಂಬ ತೃಪ್ತಿ ಇದೆ ಎಂದರು.
ಮಗು ನೋಡಲು ಚಿರುವಿನಂತೆ ಇದೆ. ಮೂಗು ಕಣ್ಣು ಎಲ್ಲವೂ ತಂದೆಯನ್ನು ಹೋಲುತ್ತದೆ. ಚಿರು ನಮ್ಮೊಂದಿಗೆ ಇದ್ದಿದ್ದರೆ ಎಷ್ಟು ಸಂತೋಷವನ್ನು ಪಡುತ್ತಿದ್ದ ಎಂದು ನೆನಪಿಸಿಕೊಂಡರೆ ತುಂಬಾ ಬೇಸರವಾಗುತ್ತೆ. ಈಗಾಗಲೇ ಜೋರಾಗಿ ಕಿರುಚಿಕೊಂಡು ಮಾಮ ಗಂಡು ಮಗು ಎಂದು ಹೇಳುತ್ತಿದ್ದ. ಇದ್ದೆಲ್ಲ ನೆನಪಿಸಿಕೊಂಡರೆ ಮನಸ್ಸಿಗೆ ತಂಬಾ ಕಷ್ಟವಾಗುತ್ತೆ. ಆದರೆ ಚಿರು ಕಳೆದುಕೊಂಡಿರುವ ದುಃಖವನ್ನು ಅವನ ಮಗು ಮುಖ ನೋಡಿ ಮರೆಯುತ್ತೇವೆ ಎಂದು ಹೇಳಿದರು.
ನಮ್ಮ ತಾಯಿ ಮುತ್ತಜ್ಜಿ ಆದರೆ ನಾನು ತಾತನಾಗಿದ್ದೇನೆ. ಗಂಡು ಮಗು ಹೆಣ್ಣು ಮಗು ಎನ್ನು ಭೇದ ಇಲ್ಲ. ಆದರೂ ಗಂಡು ಮಗು ಆಗಿರುವುದು ಚಿರು ಮತ್ತೆ ಹುಟ್ಟಿ ಬಂದಿದ್ದಾನೆ ಎನ್ನುವಷ್ಟು ಸಂತೋಷವನ್ನು ತಂದಿದೆ ಎಂದರು.
ದುಃಖದಲ್ಲಿದ್ದ ನಮ್ಮ ಕುಟುಂಬಕ್ಕೆ ಸಂತೋಷ ತರಲು ಮಗು ಕಾರಣನಾಗಿದ್ದಾನೆ. ಧ್ರುವ ಸರ್ಜಾ ಮುಖದಲ್ಲಿ ಕಳೆದ ನಾಲ್ಕು ತಿಂಗಳಿಂದ ನಗುವೇ ಇಲ್ಲದಂತಾಗಿತ್ತು. ಇದೀಗ ಚಿರು ಮಗುವನ್ನು ನೋಡಿ ಸಣ್ಣ ಕಿರು ನಗು ಕಾಣಿಸಿಕೊಂಡಿದೆ. ಕಷ್ಟ, ಸುಖ, ದುಃಖದಲ್ಲಿ ನಮ್ಮೊಂದಿಗೆ ಇದ್ದು ಸಹಕರಿಸಿದ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಅರ್ಜುನ್ ಸರ್ಜಾ ತಿಳಿಸಿದರು.
ಕೈಗೆ ಬಂದಿರುವ ಮಗನನ್ನು ಕಳೆದುಕೊಂಡಾಗ ಆಗುವ ದುಃಖ ಹೇಳಲಾಗದು. ಚಿರು ಕಳೆದುಕೊಂಡ ದಿನದಿಂದ ನಾನು ದೇವರ ಪೂಜೆ ಮಾಡುವುದು ಬಿಟ್ಟು ಬಿಟ್ಟಿದ್ದೇನೆ. ಚಿರು ನೆನಪು ಕಾಡುತ್ತಲೇ ಇರುತ್ತದೆ. ಆದರೆ ಚಿರು ಇಲ್ಲದ ಆ ನೋವನ್ನು ಕಡಿಮೆ ಮಾಡಲು ಚಿರು ರೂಪದಲ್ಲಿ ಅವನ ಮಗು ಇದ್ದಾನೆ ಎಂಬುದೇ ಸಂತೋಷವಾಗಿದೆ ಎಂದು ತಿಳಿಸಿದರು.
ಮಗು ಹುಟ್ಟಿರುವ ಸಂತೋಷವನ್ನು ನಾವು ಸಂಭ್ರಮಿಸಬೇಕು. ಮಗುವಿನ ಮುಖದ ನಗುವಿನಲ್ಲಿ ನಾವು ಚಿರುವನ್ನು ಕಾಣುತ್ತೇವೆ. ಚಿರು ಹುಟ್ಟು ಹಬ್ಬದ ದಿನದಂದು ಮಗು ಹುಟ್ಟುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಚಿರು ಮತ್ತು ಮೇಘನಾ ಎಂಗೆಜ್‍ಮ್ಮೆಂಟ್ ದಿನ ಮತ್ತು ನವರಾತ್ರಿ ಹಬ್ಬದ ದಿನವೇ ಮಗು ಹುಟ್ಟಿರುವುದು ತಂಬಾ ಸಂತೋಷವಾಗಿದೆ ಎಂದು ಸಂಭ್ರಮ ವ್ಯಕ್ತಪಡಿಸಿದರು.
ಬೆಂಗಳೂರು: ಸರ್ಜಾ ಕುಟುಂಬ ಹಾಗೂ ಮೇಘನಾ ರಾಜ್ ಅವರು ಜೂನಿಯರ್ ಚಿರು ಆಗಮನದ ನಿರೀಕ್ಷೆಯಲ್ಲಿದ್ದು, ಮನೆಗೆ ಮುದ್ದಾದ ಮಗು ಬರುವ ಮುನ್ನವೇ ಧ್ರುವ ಸರ್ಜಾ ಅವರು ಬೆಳ್ಳಿ ತೊಟ್ಟಿಲು ಖರೀದಿಸಿದ್ದಾರೆ.
ಇತ್ತೀಚೆಗೆಷ್ಟೇ ಮೇಘನಾ ಅವರಿಗೆ ಸೀಮಂತ ಸಮಾರಂಭ ನೆರವಿಸಿದ್ದ ಸರ್ಜಾ ಫ್ಯಾಮಿಲಿ ಅಕಾಲಿಕವಾಗಿ ಕಣ್ಮರೆಯಾಗಿದ್ದ ಕನ್ನಡ ಯುವ ನಟ ಚಿರಂಜೀವಿ ಸರ್ಜಾ ಅವರು ಅಗಲಿಕೆಯ ನೋವಿನಿಂದ ಹೊರ ಬರುವ ಪ್ರಯತ್ನದಲ್ಲಿದೆ. ಇದೇ ವೇಳೆ ಆ ನೋವನ್ನು ಮರೆಸಲು ಜೂನಿಯರ್ ಚಿರುಗೆ ಸ್ವಾಗತವನ್ನು ಕೋರಲು ಸಿದ್ಧರಾಗಿದ್ದಾರೆ.
ಮುದ್ದು ಮಗು ಮನೆಗೆ ಬರುವ ಮುನ್ನವೇ ಪ್ರೀತಿಯ ಅಣ್ಣನ ಮಗುವಿಗೆ ಭರ್ಜರಿ ಸ್ವಾಗತ ಕೋರಲು ಮುಂದಾಗಿರುವ ಧ್ರುವ ಸರ್ಜಾ, ಸುಮಾರು 10 ಲಕ್ಷ ರೂ. ಮೌಲ್ಯದ ಬೆಳ್ಳಿ ತೊಟ್ಟಲು ಖರೀದಿ ಮಾಡಿದ್ದಾರೆ. ನವರತ್ನ ಜ್ಯೂವೆಲರ್ಸ್ ನಲ್ಲಿ ಬೆಳ್ಳಿ ತೊಟ್ಟಿಲು ಖರೀದಿ ಮಾಡಲಾಗಿದ್ದು, ತೊಟ್ಟಿಲು ಜೊತೆಗೆ ಚಿನ್ನದ ಬಟ್ಟಲನ್ನು ಖರೀದಿ ಮಾಡಲಾಗಿದೆ.
ಅಕ್ಟೋಬರ್ 17 ರಂದು ಚಿರು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಈ ವೇಳೆ ವಿಡಿಯೋ ಪೋಸ್ಟ್ ಮಾಡಿ ಶುಭ ಕೋರಿದ್ದ ಧ್ರುವ ಸರ್ಜಾ, ಹ್ಯಾಪಿ ಬರ್ತ್ ಡೇ ಚಿರು ಎಂದು ಹಾರ್ಟ್ ಸಿಂಬಲ್ ಹಾಕಿದ್ದರು. ಮೈ ಲವ್ ಫಾರ್ ಎವರ್, ಜೂನಿಯರ್ ಚಿರು ಕಮಿಂಗ್ ಸೂನ್ ಎಂದು ಬರೆದು ತೋಳುಗಳ ಎಮೋಜಿ ಹಾಕಿದ್ದರು.
ಉಳಿದಂತೆ ಅಕ್ಟೋಬರ್ 4ರಂದು ಧ್ರುವ ಸರ್ಜಾ ಅತ್ತಿಗೆ ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನೆರವೇರಿದೆ. ಮನೆಯಲ್ಲಿಯೇ ಸರಳವಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ. ಕುಟುಂಬದವರು ಮತ್ತು ಕೆಲ ಆಪ್ತರು ಮಾತ್ರ ಸೀಮಂತ ಶಾಸ್ತ್ರಕ್ಕೆ ಆಗಮಿಸಿದ್ದರು. ಜೊತೆಗೆ ಚಿರು ಇಲ್ಲ ಎಂಬ ನೋವು ಮೇಘನಾಗೆ ಕಾಡದಿರಲಿ ಎಂದು ಚಿರು ಅವರ ದೊಡ್ಡ ಫೋಟೋವನ್ನು ಪಕ್ಕದಲ್ಲೇ ಇಟ್ಟು ಸೀಮಂತ ಮಾಡಿದ್ದು ವಿಶೇಷವಾಗಿತ್ತು. ಆ ಬಳಿಕ ಸರ್ಜಾ ಕುಟುಂಬ ಕೂಡ ವಿಶೇಷವಾಗಿ ಸೀಮಂತ ಶಾಸ್ತ್ರ ನೆರವೇರಿಸಿತ್ತು.
ಬೆಂಗಳೂರು: ಇತ್ತೀಚೆಗಷ್ಟೆ ದಿವಗಂತ ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನಡೆದಿದೆ. ಇದರ ಬೆನ್ನಲ್ಲೆ ನಟಿ ಮೇಘನಾ ಚಿರು ಅಭಿಮಾನಿಗಳಿಗೆ ಗುಡ್‍ನ್ಯೂಸ್ ನೀಡಿದ್ದಾರೆ.
ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ ಶಿವಾರ್ಜುನ. ಈ ಸಿನಿಮಾ ಇದೇ ಅಕ್ಟೋಬರ್ 16ರಂದು ಶುಕ್ರವಾರ ಮತ್ತೆ ಬಿಡುಗಡೆಯಾಗುತ್ತಿದೆ. ಈ ಸಿಹಿಸುದ್ದಿಯನ್ನು ಚಿರು ಪತ್ನಿ ಮೇಘನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
“ಚಿರು ಮತ್ತೆ ಉದಯಿಸುತ್ತಿದ್ದಾರೆ, ಅದಕ್ಕೆ ಕಾರಣ ಅಕ್ಟೋಬರ್ 16ರಂದು ಶಿವಾರ್ಜುನ ಸಿನಿಮಾ ಮತ್ತೆ ಬಿಡುಗಡೆಯಾಗುತ್ತಿದೆ” ಎಂದು ಕ್ಯಾಪ್ಶನ್ ಹಾಕಿಕೊಂಡಿದ್ದಾರೆ. ಜೊತೆಗೆ ಸಿನಿಮಾ ಪೋಸ್ಟರನ್ನು ಪೋಸ್ಟ್ ಮಾಡಿದ್ದಾರೆ. ಈ ಸಿನಿಮಾವನ್ನು ಮತ್ತೆ ರಿಲೀಸ್ ಮಾಡಲು ಮತ್ತೊಂದು ಕಾರಣವೂ ಇದೆ. ಅದೇನೆಂದರೆ ಇದೇ ಅ.17ರಂದು ಚಿರಂಜೀವಿ ಹುಟ್ಟುಹಬ್ಬ ಇದೆ. ಈ ಹಿನ್ನೆಲೆಯಲ್ಲಿ ಚಿರುವಿನ ಕೊನೆಯ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
‘ಸಿಂಗ’ ಮತ್ತು ‘ಖಾಕಿ’ಯಲ್ಲಿ ಅಬ್ಬರಿಸಿದ್ದ ಚಿರು ‘ಶಿವಾರ್ಜುನ’ನಾಗಿ ಪ್ರೇಕ್ಷಕರನ್ನು ರಂಜಿಸಿದ್ದರು. ಈ ಸಿನಿಮಾ ಶಿವತೇಜಸ್ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ನಿರ್ಮಾಪಕ ಶಿವಾರ್ಜುನ್ ನಿರ್ಮಿಸಿದ್ದಾರೆ. ಇದೊಂದು ಕಮರ್ಷಿಯಲ್ ಎಂಟರ್ ಟೈನ್ಮೆಂಟ್ ಸಿನಿಮಾವಾಗಿದೆ. ಕಾಮಿಡಿ, ಫ್ಯಾಮಿಲಿ, ಎಮೋಷನ್ ಹೀಗೆ ಎಲ್ಲಾ ಅಂಶಗಳು ಈ ಸಿನಿಮಾದಲ್ಲಿ ಅಡಕವಾಗಿದೆ. ಕಿಶೋರ್, ಸಾಧುಕೋಕಿಲಾ, ನಯನಾ, ಕುರಿ ಪ್ರತಾಪ್ ಸೇರಿದಂತೆ ಕಾಮಿಡಿ ಬಳಗವೇ ಸಿನಿಮಾದಲ್ಲಿದೆ.
ಧ್ರುವ ಸರ್ಜಾ ಹುಟ್ಟುಹಬ್ಬದ ವಿಚಾರವಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿದ್ದ ಮೇಘನಾ, “ನನ್ನ ಕಷ್ಟದ ಸಮಯದಲ್ಲಿ ನೀನು ಹೇಗೆ ನನ್ನ ಜೊತೆಯಲ್ಲಿ ಗಟ್ಟಿಯಾಗಿ ನಿಂತಿದ್ದೆ ಹಾಗೆಯೇ ನಾನು ಕೂಡ ಶಾಶ್ವತವಾಗಿ ನಿನ್ನ ಪಕ್ಕ ನಿಲ್ಲುತ್ತೇನೆ. ಪ್ರಾಮಿಸ್ ಬರ್ತ್ ಡೇ ಬಾಯ್. ಸದಾ ನೀನು ಖುಷಿಯಾಗಿರು ಎಂದು ಆಶೀಸುತ್ತೇನೆ. ನಮ್ಮ ಚಿರು ನಕ್ಕಂತೆ ನೀನು ನಗುತ್ತಿರು. ಹ್ಯಾಪಿಸ್ಟ್ ಬರ್ತ್ ಡೇ ಬಿಲ್ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದರು.
ಭಾನುವಾರವಷ್ಟೇ ಧ್ರುವ ಸರ್ಜಾ ಅತ್ತಿಗೆ ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನೆರವೇರಿದೆ. ಮನೆಯಲ್ಲಿಯೇ ಸರಳವಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ. ಕುಟುಂಬದವರು ಮತ್ತು ಕೆಲ ಆಪ್ತರು ಮಾತ್ರ ಸೀಮಂತ ಶಾಸ್ತ್ರಕ್ಕೆ ಆಗಮಿಸಿದ್ದರು. ಜೊತೆಗೆ ಚಿರು ಇಲ್ಲ ಎಂಬ ನೋವು ಮೇಘನಾಗೆ ಕಾಡದಿರಲಿ ಎಂದು ಚಿರು ಅವರ ದೊಡ್ಡ ಫೋಟೋವನ್ನು ಪಕ್ಕದಲ್ಲೇ ಇಟ್ಟು ಸೀಮಂತ ಮಾಡಿದ್ದು ವಿಶೇಷವಾಗಿತ್ತು.
ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ದೈಹಿಕವಾಗಿ ದೂರವಾಗಿ ಇಂದಿಗೆ ಒಂದು ತಿಂಗಳು ಆಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬದವರು, ಆಪ್ತ ಸ್ನೇಹಿತರು ವಿಶೇಷವಾಗಿ ಚಿರುವನ್ನು ಸ್ಮರಿಸಿಕೊಳ್ಳುವ ಮೂಲಕ ವಂದನೆ ಸಲ್ಲಿಸಿದ್ದಾರೆ.
ಚಿರಂಜೀವಿ ಸರ್ಜಾ ಅವರು ಜೂನ್ 7 ರಂದು ಹೃದಯಾಘಾತವಾಗಿ ಮೃತಪಟ್ಟಿದ್ದರು. ಸಹೋದರ ಧ್ರುವ ಸರ್ಜಾ ತಮ್ಮ ಆಸೆಯಂತೆ ಅಣ್ಣ ಚಿರಂಜೀವಿಯ ಅಂತ್ಯಕ್ರಿಯೆಯನ್ನು ಕನಕಪುರದಲ್ಲಿರುವ ನೆಲಗುಳಿಯ ಬೃಂದಾವನ ಫಾರ್ಮ್ ಹೌಸ್‍ನಲ್ಲಿ ನೆರವೇರಿಸಿದ್ದರು. ಚಿರಂಜೀವಿ ಸರ್ಜಾ ಅವರು ದೈಹಿಕವಾಗಿ ದೂರವಾಗಿ ಇಂದಿಗೆ ತಿಂಗಳು ಕಳೆಯಲಿದೆ.
ನಗುಮೊಗದ ಯುವ ಪ್ರತಿಭೆ ಚಿರು, ಇವರು ಸದಾ ನಗುತ್ತಿದ್ದರು. ಹೀಗಾಗಿ ಅವರ ಕುಟುಂಬಸ್ಥರು ಮತ್ತು ಆಪ್ತರು ಚಿರುವಿನ ನಗುವನ್ನು ಚಿರಾಯುವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಎಲ್ಲರೂ ಅವರಿಗೆ ನಗುವಿನ ಮೂಲಕ ಗೌರವ ಸಲ್ಲಿಸಿದ್ದಾರೆ. ಚಿರಂಜೀವಿ ಸರ್ಜಾ ಮೃತಪಟ್ಟು ಒಂದು ತಿಂಗಳ ಕಳೆದ ಹಿನ್ನೆಲೆಯಲ್ಲಿ ಆಪ್ತರು, ಮನೆಯವರೆಲ್ಲರೂ ಒಂದುಗೂಡಿದ್ದಾರೆ. ಈ ವೇಳೆ ಅವರೆಲ್ಲರೂ ಚಿರಂಜೀವಿ ಫೋಟೋ ಮುಂದೆ ಕುಳಿತು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಪ್ರತಿಯೊಬ್ಬರು ನಗುವ ಮೂಲಕ ಚಿರುವಿಗೆ ಗೌರವ ಸಲ್ಲಿಸಿದ್ದಾರೆ.
ಚಿರು ಪತ್ನಿ ಮೇಘನಾ ರಾಜ್ ಚಿರುವಿನ ಫೋಟೋ ಮತ್ತು ಸ್ನೇಹಿತರು, ಆಪ್ತರು ನಗು ಮುಖದಿಂದ ತೆಗೆಸಿಕೊಂಡಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ “ನನ್ನ ಪ್ರೀತಿಯ ಚಿರು…ಚಿರು ಒಂದು ಸೆಲೆಬ್ರೇಷನ್ ಆಗಿದೆ. ಈ ಆಚರಣೆ ಯಾವಾಗಲೂ ಇರುತ್ತದೆ. ಈಗಲೂ ಮತ್ತು ಮುಂದೆಯೂ ಇರುತ್ತದೆ. ಬೇರೆ ಯಾವ ರೀತಿಯನ್ನು ನೀನು ಇಷ್ಟಪಡುವುದಿಲ್ಲ ಎಂಬುದು ನನಗೆ ತಿಳಿದಿದೆ. ಆದರೆ ನಾನು ನಗಲು ಕಾರಣ ಚಿರು” ಎಂದು ಚಿರುವಿನ ನಗುವಿನ ಬಗ್ಗೆ ನೋವಿನಿಂದ ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೇ “ಅವರು ನನಗೆ ಕೊಟ್ಟಿದ್ದು ಅತ್ಯಂತ ಅಮೂಲ್ಯವಾದುದ್ದು ನನ್ನ ಕುಟುಂಬ…ನಾವು ಮಾತ್ರವೇ. ನಾವು ಯಾವಾಗಲೂ ಒಟ್ಟಿಗೆ ಇರುತ್ತೇವೆ ಬೇಬಿಮಾ. ಪ್ರತಿ ದಿನವೂ ನೀವು ಇಷ್ಟಪಡುವ ರೀತಿಯಲ್ಲಿಯೇ ಇರುತ್ತೇವೆ. ಪ್ರೀತಿ, ನಗು, ಕುಚೇಷ್ಟೇಗಳು, ಪ್ರಾಮಾಣಿಕತೆ ಮತ್ತು ಮುಖ್ಯವಾಗಿ ಒಗ್ಗಟ್ಟಿನಿಂದ ಒಟ್ಟಾಗಿರುತ್ತೇವೆ. ನಾವು ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ ಬೇಬಿಮಾ” ಎಂದು ಮೇಘನಾ ಹೇಳಿದ್ದಾರೆ.
ಕಳೆದ ದಿನ ಕುಟುಂಬ ಸದಸ್ಯರು ಫಾರ್ಮ್ ಹೌಸ್‍ಗೆ ಭೇಟಿ ಕೊಟ್ಟು ಚಿರಂಜೀವಿ ಸರ್ಜಾ ತಿಂಗಳ ಕಾರ್ಯ ಮಾಡಿದ್ದಾರೆ. ಚಿರು ಸ್ಮಾರಕಕ್ಕೆ ಸೋದರ ಧ್ರುವ ಸರ್ಜಾ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಅರ್ಜುನ್ ಸರ್ಜಾ, ಮೇಘನಾ ರಾಜ್, ಚಿರು ಅಪ್ಪ, ಅಮ್ಮ ಪೂಜೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಚಿರಂಜೀವಿ ಸರ್ಜಾ ಅವರನ್ನು ನೆನೆದು ಕುಟುಂಬ ಸದಸ್ಯರು ಕಣ್ಣೀರಿಟ್ಟಿದ್ದರು.
ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅಗಲಿಕೆಯ ನೆನಪಿನಲ್ಲಿಯೇ ಪತ್ನಿ ನಟಿ ಮೇಘನಾ ರಾಜ್ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು. ಇದೀಗ ಮೇಘನಾ ಫೇಸ್‍ಬುಕ್ ಪೇಜಿನಲ್ಲಿ ಪ್ರೊಫೈಲ್ ಫೋಟೋ ಕೂಡ ಚೇಂಜ್ ಮಾಡಿದ್ದಾರೆ. ಇದನ್ನೂ ಓದಿ: ನಿಮ್ಮ ಪ್ರೀತಿಯೇ ನನಗೆ ಆಸರೆ, ರಕ್ಷಾಕವಚ – ಅಭಿಮಾನಿಗಳ ಬಗ್ಗೆ ಮೇಘನಾ ಮಾತು
ನಟಿ ಮೇಘನಾ ಫೇಸ್‍ಬುಕ್ ಪೇಜಿನಲ್ಲಿ ಇಷ್ಟು ದಿನ ಅವರ ಫೋಟೋ ಮಾತ್ರ ಇತ್ತು. ಆದರೆ ಈಗ ಪತಿಯ ನೆನಪಿನಲ್ಲಿ ಪ್ರೊಫೈಲ್ ಫೋಟೋ ಬದಲಾಯಿಸಿದ್ದಾರೆ. ನೂತನವಾಗಿ ಅಪ್‍ಡೇಟ್ ಮಾಡಿರುವ ಫೋಟೋದಲ್ಲಿ ಚಿರು ಮತ್ತು ಮೇಘನಾ ಕಾರಿನಲ್ಲಿ ಕುಳಿತಿದ್ದು, ಇಬ್ಬರು ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸೆಲ್ಫಿ ಸಿಕ್ಕಿಸಿಕೊಂಡಿದ್ದಾರೆ. ಇಬ್ಬರು ಜೊತೆಯಾಗಿ ಕ್ಯೂಟ್ ಆಗಿ ನಗುತ್ತಿರುವುದನ್ನು ಕಾಣಬಹುದಾಗಿದೆ.
ಮೇಘನಾ ಪ್ರೊಫೈಲ್ ಫೋಟೋ ಚೇಂಜ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಸಾಂತ್ವನ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೆ ಮೇಘನಾ ಚಿರು ನೆನಪಿನಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.
ಇನ್‍ಸ್ಟಾಗ್ರಾಂ ಖಾತೆಯಲ್ಲಿ ಇಷ್ಟು ದಿನ ಮೇಘನಾ ರಾಜ್ ಎಂದು ಮಾತ್ರ ಇತ್ತು. ಆದರೆ ಈಗ ಚಿರು ನೆನಪಿನಲ್ಲಿ ತಮ್ಮ ಹೆಸರನ್ನು ಎಡಿಟ್ ಮಾಡಿದ್ದು, ಅದರಲ್ಲಿ ಸರ್ಜಾ ಕುಟುಂಬದ ಸರ್ ನೇಮ್ ಸೇರಿಸಿಕೊಂಡಿದ್ದಾರೆ. ಹೀಗಾಗಿ ಈಗ ‘ಮೇಘನಾ ರಾಜ್ ಸರ್ಜಾ’ ಎಂದು ಬದಲಾಯಿಸಿಕೊಂಡಿದ್ದಾರೆ. ಈ ಮೂಲಕ ಮೇಘನಾ ತಮ್ಮ ಪತಿ ಚಿರಂಜೀವಿ ಸರ್ಜಾ ಹೆಸರನ್ನು ತಮ್ಮ ಹೆಸರಿನ ಜೊತೆಗೆ ಶಾಶ್ವತವಾಗಿ ನೆನಪಿಸುವಂತೆ ಮಾಡಿಕೊಂಡಿದ್ದಾರೆ.
ಚಿರು ಸಾವಿನ ನಂತರ ಮೇಘನಾ ರಾಜ್ ತಮ್ಮ ಭಾವನೆಗಳನ್ನು ಇನ್‍ಸ್ಟಾಗ್ರಾಂ ಮೂಲಕ ಹೇಳಿಕೊಂಡಿದ್ದರು. ಮೊದಲಿಗೆ ತನ್ನ ಪತಿಯ ಬಗ್ಗೆ ಸುದೀರ್ಘವಾಗಿ ಬರೆದು ಪೋಸ್ಟ್ ಮಾಡಿದ್ದರು. ಮತ್ತೊಂದು ಪೋಸ್ಟ್ ಮಾಡಿ, ಕಷ್ಟದ ದಿನಗಳಲ್ಲಿ ತಮ್ಮ ಜೊತೆಗಿದ್ದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದರು.
ಬೆಂಗಳೂರು: ನೋವಿನ ಬೇಗುದಿಯಲ್ಲಿ ಬೆಂದು ಮೌನಕ್ಕೆ ಶರಣಾಗಿದ್ದ ನಟಿ, ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಇಂದು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಇನ್‍ಸ್ಟಾಗ್ರಾಮನ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಚಿರು ಶಾಶ್ವತ, ಎಲ್ಲ ಸಂಬಂಧಗಳಿಗೂ ಮೀರಿದವ, ನಾನು ನಿನಗಾಗಿ ಕಾಯುತ್ತೇನೆ, ನೀನೂ ನನಗಾಗಿ ಕಾಯಿ ಎಂಬ ಸಾಲುಗಳನ್ನು ಬರೆದಿದ್ದಾರೆ.
ನಾನು ಪದೇ ಪದೇ ಪ್ರಯತ್ನ ಮಾಡುತ್ತಲೇ ಇದ್ದೇನೆ. ಆದರೆ ನಿನ್ನ ಬಗ್ಗೆ ಹೇಳಲು ಪದಗಳು ಸಾಲುತ್ತಿಲ್ಲ. ಪ್ರಪಂಚದಲ್ಲಿರುವ ಎಲ್ಲ ಪದಗಳು ನೀನು. ನನಗೆ ಏನಾಗಬೇಕು ಎಂಬುದನ್ನು ವಿವರಿಸಲು ಸಾಕಾಗುವುದಿಲ್ಲ. ನನ್ನ ಸ್ನೇಹಿತ, ನನ್ನ ಪ್ರಿಯತಮ, ನನ್ನ ಸಂಗಾತಿ, ನನ್ನ ಮಗು, ನನ್ನ ಆತ್ಮವಿಶ್ವಾಸ, ನನ್ನ ಪತಿ ಇದೆಲ್ಲದಕ್ಕಿಂತ ನೀನು ಮಿಗಿಲು. ನೀನು ನನ್ನ ಆತ್ಮದ ಒಂದು ಭಾಗ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.
ಪ್ರತಿಸಲ ನಾನು ಬಾಗಿಲ ಕಡೆ ನೋಡಿದಾಗೆಲ್ಲಾ, ನೀನು `ನಾನು ಮನೆಗೆ ಬಂದೆ’ ಎಂದು ಹೇಳುವುದಿಲ್ಲವಲ್ಲ ಎನ್ನುವುದನ್ನು ನೆನಸಿಕೊಳ್ಳಲು ಆಗುತ್ತಿಲ್ಲ. ಪ್ರತಿ ದಿನ, ಪ್ರತಿಕ್ಷಣ ನಿನ್ನ ನೋಡಲಾಗದೆ, ಸ್ಪರ್ಶಿಸಲಾಗದೆ, ಮನಸ್ಸು ಕುಗ್ಗುತ್ತಿದೆ. ಸಾವಿರ ಸಾವುಗಳನ್ನು ಒಟ್ಟೊಟ್ಟಿಗೆ ಅನುಭವಿಸುವ ರೀತಿ ಭಾಸವಾಗುತ್ತಿದೆ. ತಕ್ಷಣವೇ ಮ್ಯಾಜಿಕ್ ಎಂಬಂತೆ ನೀನು ನನ್ನ ಪಕ್ಕದಲ್ಲೇ ಇದ್ದೀಯಾ, ಎನ್ನಿಸುತ್ತದೆ. ನಾನು ಕುಗ್ಗಿದಾಗಲೆಲ್ಲ ಕಾಯುವ ದೇವರಂತೆ ನನ್ನ ಜೊತೆಗೇ ಇದ್ದಿಯಾ ಎಂದು ಬರೆದಿದ್ದಾರೆ.
ನನ್ನನ್ನು ಹೆಚ್ಚು ಪ್ರೀತಿಸುತ್ತಿದ್ದ ವ್ಯಕ್ತಿ, ನನ್ನನ್ನು ಹಿಂದೆ ಬಿಟ್ಟು ನೀನೇ ಹೋದೆ? ನಮ್ಮ ಮಗು ನಮ್ಮಿಬ್ಬರ ಪ್ರೀತಿಯ ಪ್ರತೀಕವಾಗಿ ನೀನು ನನಗೆ ನೀಡಿದ ಅಮೂಲ್ಯ ಉಡುಗೊರೆ. ಈ ಸಿಹಿಯಾದ ಅದ್ಭುತಕ್ಕೆ ಶಾಶ್ವತವಾಗಿ ನಿನಗೆ ಕೃತಜ್ಞಳಾಗಿರುತ್ತೇನೆ. ಮಗುವಾಗಿ ನಿನ್ನನ್ನು ಮತ್ತೆ ಭೂಮಿಗೆ ಕರೆ ತರಲು ಹೆಚ್ಚು ಕಾತರಳಾಗಿದ್ದೇನೆ. ನಿನ್ನನ್ನು ಮತ್ತೆ ಬಿಗಿದಪ್ಪಲು, ನಿನ್ನ ನಗು ನೋಡಲು ಹೆಚ್ಚು ಕಾಯಲಾರೆ. ನಿನ್ನ ನಗುವನ್ನು ಕೇಳಲು ಹೆಚ್ಚು ಕಾಯಲಾರೆ. ನಾನು ನಿನಗಾಗಿ ಕಾಯುತ್ತೇನೆ, ಇನ್ನೊಂದು ಕಡೆ ನೀನು ನನಗಾಗಿ ಕಾಯಿ ಎಂದಿದ್ದಾರೆ.
ಕೊನೆಯ ಸಾಲು ತುಂಬಾ ದುಃಖ ತರಿಸುವಂತಿದ್ದು, ನನ್ನ ಉಸಿರಿರುವ ವರೆಗೂ ನೀನು ಜೀವಂತವಾಗಿರುತ್ತೀಯಾ. ನೀನು ನನ್ನೊಳಗಿದ್ದೀಯಾ. ಐ ಲವ್ ಯೂ ಎಂದು ಬರೆದಿದ್ದಾರೆ. ಕಪ್ಪು ಬಣ್ಣದಲ್ಲಿ ಬಿಳಿ ಅಕ್ಷರಗಳನ್ನು ಬರೆದಿರುವ ಈ ಎರಡು ಫೋಟೋ ಹಾಕಿದ್ದು, ಜೊತೆಗೆ ಚಿರು ಮುದ್ದು ಮಾಡುತ್ತಿರುವ ಇನ್ನೊಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ‘ಮೈ ಚಿರು ಫಾರ್‍ಎವರ್’ ಎಂಬ ಸಾಲು ಬರೆದಿದ್ದಾರೆ.
ಮೇಘನಾ ಅವರ ಈ ಭಾವನಾತ್ಮಕ ಪೋಸ್ಟ್‍ಗೆ ಹಲವರು ಕಮೆಂಟ್ ಮಾಡಿ, ಸ್ಟ್ರಾಂಗ್ ಆಗಿರಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಹೇಳುತ್ತಿದ್ದಾರೆ.
ಬೆಂಗಳೂರು: ನಟ ಚಿರು ಯಾವತ್ತೂ ಚಿರಂಜೀವಿನೇ ಎಂದು ನಟಿ ಹರಿಪ್ರಿಯ ಅವರು ಚಿರು ಸಾವಿನ ಬಗ್ಗೆ ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ.
ಚಿರು ಅವರ ಜೊತೆ ಕಳೆದ ಸಮಯ ಮತ್ತು ಅವರ ಸಾವಿನ ಸುದ್ದಿಯನ್ನು ಕೇಳಿದಾಗ ಆದ ಆಘಾತವನ್ನು ಹರಿಪ್ರಿಯ ಇಲಿಹಂಚಿಕೊಂಡಿದ್ದಾರೆ. ಜೊತೆಗೆ ಚಿರು ಅವರನ್ನು ನೋಡಲು ಹೋದಾಗ ಅವರಿಗಾದ ನೋವು, ಮೇಘನಾ, ಅರ್ಜುನ್ ಸರ್ಜಾ ಮತ್ತು ಧ್ರುವ ಅವರ ಬಗ್ಗೆಯೂ ಭಾವನಾತ್ಮಕವಾದ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಭಾನುವಾರ ನನ್ನ ಆಪ್ತರಿಂದ ಒಂದು ಮೆಸೇಜ್ ಬಂದಿತ್ತು. ನಾನ್ ಅದನ್ನು ನಾಲ್ಕೈದು ಸಲ ಓದಿದೆ. ಯಾಕೆಂದರೆ ಆ ಮೆಸೇಜ್‍ನ ನಂಗೆ ನಂಬುವುದಕ್ಕೆ ಸಾಧ್ಯನೇ ಆಗಲಿಲ್ಲ. ನಾನೇ ಏನಾದರೂ ತಪ್ಪು ಓದುತ್ತಿದ್ದೇನಾ ಎಂದು ಮತ್ತೆ ಮತ್ತೆ ಓದಿಕೊಂಡೆ. ಅಷ್ಟರಲ್ಲಿ ಬೇರೆ ಬೇರೆ ಕಡೆಯಿಂದಲೂ ಅದೇ ಮೆಸೇಜ್ ಬರುತ್ತಿತ್ತು. ಟಿವಿಯಲ್ಲೂ ಅದೇ ಬ್ರೇಕಿಂಗ್ ನ್ಯೂಸ್. `ಚಿರು ಇನ್ನಿಲ್ಲ’ ಅನ್ನೋ ಸುದ್ದಿ ಇನ್ನೂ ಪೂರ್ತಿಯಾಗಿ ನಂಬುವುದಕ್ಕೆ ಆಗಲ್ಲ ಎಂದು ಹರಿಪ್ರಿಯ ಹೇಳಿದ್ದಾರೆ.
ಚಿರು ಮಾತ್ರ ಅಲ್ಲ, ಅವರ ಫ್ಯಾಮಿಲಿ ಎಲ್ಲರ ಜೊತೆ ಆ್ಯಕ್ಟ್ ಮಾಡಿದ್ದೀನಿ. ನಾನು, ಚಿರು `ಸಂಹಾರ’ ಸಿನಿಮಾದಲ್ಲಿ ಆ್ಯಕ್ಟ್ ಮಾಡಿದ್ದೆವು. ಅಲ್ಲಿ ಹೀರೋಯಿನ್ ವಿಲನ್ ರೋಲ್. ಹಾಗಾಗಿ ನನಗೂ ಚಿರುಗೂ ಒಟ್ಟಿಗೆ ಇರೋ ಸೀನ್ಸ್ ಜಾಸ್ತಿ ಇರಲಿಲ್ಲ. ಆದರೆ ಸಾಂಗ್ ಶೂಟ್‍ನಲ್ಲಿ ನಾವಿಬ್ಬರೂ ತುಂಬಾ ಮಾತಾಡಿದ್ದು, ನಕ್ಕಿದ್ದು ಇದೆ. ಅದರಲ್ಲಿ ಕೊನೆಗೆ ಒಂದು ಫೈಟ್ ಇತ್ತು. ಆಗ ಒಂದು ಪಲ್ಟಿ ಹೊಡೆಯುವಾಗ ಆಯತಪ್ಪಿ ಜೋರಾಗಿ ನೆಲಕ್ಕೆ ಬಿದ್ದು `ಅಮ್ಮಾ’ ಅಂತ ಕಿರುಚಿದ್ದೆ. ಆವಾಗಿಂದ ಶೂಟಿಂಗ್ ಮುಗಿಯುವರೆಗೂ ನಾನು ಕಿರುಚಿದ ಟೋನ್‍ನಲ್ಲೇ `ಅಮ್ಮಾ’ ಎಂದು ರೇಗಿಸುತ್ತಿದ್ದರು ಚಿರು ಎಂದು ಹರಿಪ್ರಿಯ ಬರೆದುಕೊಂಡಿದ್ದಾರೆ.
ಚಿರು ಇಲ್ಲ ಅಂದ ತಕ್ಷಣ ಶಾಕ್ ಆಗಿತ್ತು. ಭಾನುವಾರ ಟಿವಿಲಿ ನೋಡ್ತಾ ಮನೆಯಲ್ಲೇ ತುಂಬಾ ಅತ್ತಿದ್ದೆ. ಚಿರುನ ಆ ರೀತಿಯಲ್ಲಿ ಹೇಗೆ ನೋಡೋದು ಎಂದು ಹೋಗುವುದಕ್ಕೂ ಹಿಂಜರಿದೆ. ಸೋಮವಾರ ಕೊನೆದಾಗಿ ಒಂದು ಬಾರಿ ನೋಡಬೇಕು ಎಂದು ತಕ್ಷಣ ಹೊರಟೆ. ಆದರೆ ಅಲ್ಲಿ ಮೇಘನಾನ ಕಂಡು ನನಗೆ ಇನ್ನೂ ಜಾಸ್ತಿ ದುಃಖ ಆಯ್ತು. ಏನ್ ಸಮಾಧಾನ ಹೇಳುವುದಕ್ಕೂ ಮಾತೇ ಬರಲಿಲ್ಲ.
ಅಲ್ಲಿ ಯಾರೋ ಹೇಳುತ್ತಿದ್ದರು. ಮೇಘನಾ ಗರ್ಭಿಣಿ ಎಂಬ ವಿಷಯಾನ ಚಿರು ಸ್ವಲ್ಪದಿನದಲ್ಲೇ ಪಬ್ಲಿಕ್ ಮಾಡುತ್ತಿದ್ದರು ಎಂದು. ಆದರೆ ಅಷ್ಟರಲ್ಲಿ ಏನೇನಾಯ್ತಲ್ಲ? ಲೈಫ್ ಎಷ್ಟು ಅನ್‍ಪ್ರೆಡಿಕ್ಟೇಬಲ್ ಅಲ್ವಾ? ಒಬ್ಬರ ಸ್ಥಾನವನ್ನು ಇನ್ನೊಬ್ಬರು ಯಾವತ್ತೂ ತುಂಬಲು ಆಗಲ್ಲ ಎಂದು ಹರಿಪ್ರಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅರ್ಜುನ್ ಸರ್, ಕಾಫೀನ್ ಬಾಕ್ಸ್ ಗ್ಲಾಸ್‍ಗೆ ತಲೆ ಕೊಟ್ಟು, `ಚಿರು ಮಾಮ ಬಂದಿದ್ದೀನಿ, ಎದ್ದೇಳೋ’ ಅಂದಿದನ್ನು ನೋಡಿದಾಗ ತುಂಬಾ ಸಂಕಟ ಆಗಿತ್ತು. ಬೆಳೆದು ನಿಂತಿರೋ ಮಗನನ್ನು ಕಳೆದುಕೊಂಡ ಸಂಕಟದಲ್ಲಿರೋ ಅಪ್ಪ-ಅಮ್ಮಂಗೆ ಯಾವ ಸಾಂತ್ವನ ಸಮಾಧಾನ ಹೇಳೋಕೆ ಸಾಧ್ಯ? ಚಿಕ್ಕಂದಿನಿಂದ ಒಟ್ಟಿಗೇ ಆಡಿ ಬೆಳೆದ ಧ್ರುವಂಗೆ ಆಗಿರೋ ಕಷ್ಟ ಯಾರಾದರೂ ಊಹಿಸೋಕೆ ಸಾಧ್ಯನಾ? ಈ ಲಾಕ್‍ಡೌನ್ ಟೈಮಲ್ಲಿ ಎಲ್ಲ ಮನೇಲೇ ಇದ್ದು ಎಂದಿಗಿಂತ ಜಾಸ್ತಿ ಸಮಯ ಒಟ್ಟಿಗೇ ಕಳೆದಿರುತ್ತಾರೆ. ಆದರೆ ಈ ಸಮಯದಲ್ಲೇ ಹೀಗಾದರೆ ಹೇಗೆ ಎಂದು ಹರಿಪ್ರಿಯ ಪ್ರಶ್ನೆ ಮಾಡಿದ್ದಾರೆ.
ನಾನಲ್ಲ ಯಾರೇ ಆದರೂ ಸಾಂತ್ವನ ಹೇಳುವುದು ಬಿಟ್ಟು ಬೇರೇನೂ ಮಾಡೋಕಾಗಲ್ಲ. ಮೇಘನಾಗೆ ಅವರ ಅಮ್ಮ-ಅಪ್ಪಂಗೆ, ಅರ್ಜುನ್ ಸರ್‍ಗೆ, ಧ್ರುವಂಗೆ, ಅವರೆಲ್ಲರಿಗೂ ದುಃಖ ಸಹಿಸಿಕೊಳ್ಳುವ ಶಕ್ತಿ ಕೊಡು ದೇವರೇ ಅಂತ ಪ್ರಾರ್ಥನೆ ಮಾಡೋಣ. ಹೋದವರು ಹೋದಾಗ ಆಗೋ ನೋವಿಗಿಂತ ಆಮೇಲೆ ಅವರ ನೆನಪಾಗಿ ಆಗೋ ನೋವೇ ಅದೇ ದೊಡ್ಡ ಯಾತನೆ. ಅದನ್ನು ಸಹಿಸಿಕೊಳ್ಳುವ ಶಕ್ತಿ ಚಿರು ಫ್ಯಾಮಿಲಿಗೆ ದೇವರು ಕೊಡಲಿ ಎಂದು ಹರಿಪ್ರಿಯ ಬೇಡಿಕೊಂಡಿದ್ದಾರೆ.
ಚಿರು ಸಿನಿಮಾಗಳು ರಿಲೀಸ್ ಆಗೋದಿವೆ. ಇನ್ನೂ ತುಂಬಾ ಸಿನಿಮಾ ಮಾಡೋದಿತ್ತು. ಆದರೆ ಚಿರು ಇಲ್ಲ ಅನ್ನುವುದನ್ನು ನನಗೆ ಇನ್ನೂ ನಂಬುವುದಕ್ಕೇ ಆಗುತ್ತಿಲ್ಲ. ನೋಡಲು, ಮಾತನಾಡಲು, ರೇಗಿಸಲು ಚಿರು ಇನ್ನು ಕಾಣಿಸದೇ ಇರಬಹುದು. ಆದರೆ ಎಲ್ಲರ ಮನಸ್ಸಿಲ್ಲಿ ಚಿರು ಯಾವತ್ತೂ ಚಿರಂಜೀವಿನೇ ಎಂದು ಹರಿಪ್ರಿಯ ತಿಳಿಸಿದ್ದಾರೆ.