Tag: medical college

  • ಸಿದ್ದರಾಮಯ್ಯ ಏನ್ ಹೇಳಿಲ್ಲ, ಡಿಕೆಶಿ ನನ್ನ ಆಪ್ತ ಸ್ನೇಹಿತ – ಬಿಎಸ್‍ವೈ

    ಸಿದ್ದರಾಮಯ್ಯ ಏನ್ ಹೇಳಿಲ್ಲ, ಡಿಕೆಶಿ ನನ್ನ ಆಪ್ತ ಸ್ನೇಹಿತ – ಬಿಎಸ್‍ವೈ

    – ಸಿದ್ದರಾಮಯ್ಯ ವಿಷ ತುಂಬಿದ ಮನುಷ್ಯ
    – ಮೆಡಿಕಲ್ ಕಾಲೇಜ್ ಕಿತ್ತುಕೊಂಡಿಲ್ಲ

    ಬೆಂಗಳೂರು: ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯನವರ ಎಲ್ಲ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಹಾಗಾಗಿ ಪ್ರತಿಯೊಂದು ಹೇಳಿಕೆಗೆ ಉತ್ತರ ನೀಡುವ ಅಗತ್ಯವಿಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

    ಅತಿವೃಷ್ಟಿಗೆ ಏನು ನೀಡಿದ್ದೇನೆ ಎಂಬುದನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಿದ್ದರಾಮಯ್ಯನವರಿಗೆ ನಂಬಿಕೆ ಬರದಿದ್ದರೆ ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಳ್ಳಬಹುದು. ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸಿದ್ದರಾಮಯ್ಯನವರು ನೀಡುವ ಸಲಹೆಯನ್ನು ಸ್ವೀಕರಿಸಲು ಸಿದ್ಧನಿದ್ದೇನೆ. ಪ್ರತಿಯೊಂದು ವಿಷಯಗಳಿಗೂ ಟೀಕೆ ಮಾಡುತ್ತಾ ನಿಂತರೆ ಏನು ಮಾಡಲು ಸಾಧ್ಯ ಎಂದು ಸಿಎಂ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಧ್ಯಕ್ಷ ಕಟೀಲ್ ಜೊತೆಗಿನ ಸಮನ್ವಯತೆಯ ಸೂತ್ರ ಬಿಚ್ಚಿಟ್ಟ ಬಿಎಸ್‍ವೈ

    ಸಿದ್ದರಾಮಯ್ಯನವರು ಸತ್ಯಾಂಶ ತಿಳಿದುಕೊಳ್ಳದೇ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ಈ ರೀತಿಯ ಹೇಳಿಕೆಗಳಿಂದ ನಿರಾಶ್ರಿತರು ಗೊಂದಲಕ್ಕೊಳಗಾಗಿ ಕಣ್ಣೀರು ಹಾಕುತ್ತಾರೆ. ನಾನು ನೀಡಿರುವ ಪ್ರಕಟಣೆಯ ಅಂಕಿ ಅಂಶಗಳಲ್ಲಿ ವ್ಯತ್ಯಾಸಗಳಿದ್ದರೆ ಸಿದ್ದರಾಮಯ್ಯ ಹೇಳಿದಂತೆ ಕೇಳಲು ನಾನು ಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಪ್ಪ, ಮಕ್ಕಳು ಈಗ ಸುಧಾರಿಸಿದ್ದಾರೆ – ಸಿಎಂ ಬಿಎಸ್‍ವೈ

    ದುರುದ್ದೇಶದಿಂದ ಟೀಕೆ ಮಾಡುವವರ ಜೊತೆ ಮಾತನಾಡುವ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ವಿಷ ತುಂಬಿದ ಮನುಷ್ಯರಾಗಿದ್ದು, ಅಭಿವೃದ್ಧಿ ಕಾರ್ಯಗಳನ್ನ ಮಾಡದ ರಾಜಕಾರಣಿ. ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಚುನಾವಣೆಯಲ್ಲಿ ಒಂದು ಸೀಟ್ ಗೆದ್ದವರೂ ನಮಗೆ ಉಪದೇಶ ಮಾಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು. ಇದನ್ನೂ ಓದಿ: ಯಡಿಯೂರಪ್ಪನವರೇ ಯಾಕೆ ಸುಳ್ಳು ಹೇಳ್ತೀರಾ? ಸಿದ್ದರಾಮಯ್ಯ

    ಸರ್ಕಾರದ ಪರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಸ್ವಾಗತಿಸೋದು ನನ್ನ ಕರ್ತವ್ಯ. ಹಾಗಂತ ನಾನು ಯಾರೊಂದಿಗೆ ಹೊಸ ಫ್ರೆಂಡ್‍ಶಿಪ್ ಮಾಡಿಕೊಂಡಿಲ್ಲ. ಈ ಮಾತುಗಳಿಗೆ ಸಿದ್ದರಾಮಯ್ಯನವರು ಒಳಒಪ್ಪಂದ ಎಂದು ಅಪಾರ್ಥ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಎಸ್‍ವೈ-ಎಚ್‍ಡಿಕೆ ನಡುವೆ ಒಳ ಒಪ್ಪಂದ: ಸಿದ್ದರಾಮಯ್ಯ ಆರೋಪ

    ಮೆಡಿಕಲ್ ಕಾಲೇಜು ಕಿತ್ತುಕೊಂಡಿಲ್ಲ: ಮಾಜಿ ಸಚಿವರಾದ ಡಿಕೆ ಶಿವಕುಮಾರ್ ನನ್ನ ಆಪ್ತ ಸ್ನೇಹಿತರು. ಸದ್ಯದ ಹಣಕಾಸು ಪರಿಸ್ಥಿತಿಯಲ್ಲಿ ತಾಲೂಕು ಕೇಂದ್ರಗಳಿಗೆ ಮೆಡಿಕಲ್ ಕಾಲೇಜು ನೀಡಲು ಸಾಧ್ಯವಿಲ್ಲ. ಮೊದಲು ಜಿಲ್ಲಾ ಕೇಂದ್ರಗಳಿಗೆ ಆಸ್ಪತ್ರೆ ನೀಡಬೇಕು ಎಂಬುವುದು ಶಿವಕುಮಾರ್ ಅವರಿಗೂ ಗೊತ್ತಿದೆ. ಕೇಂದ್ರ ಸರ್ಕಾರ ಮೂರು ಕ್ಷೇತ್ರಗಳಿಗೆ ಅನುದಾನ ನೀಡಿದೆ. 60:40 (ರಾಜ್ಯ 60% & ಕೇಂದ್ರ 40%) ಅನುಪಾತದಲ್ಲಿ ಹಣ ಬಿಡುಗಡೆಯಾಗಿದ್ದರಿಂದ ಚಿಕ್ಕಬಳ್ಳಾಪುರಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ವಿಡಿಯೋದ ತಪ್ಪು ವ್ಯಾಖ್ಯಾನ ನೀಡಿ ಬಿಜೆಪಿ ವಿಕೃತಾನಂದ: ಸಿದ್ದರಾಮಯ್ಯ

  • ಮನೆಗೆ ಹೋಗಿ ಡಿಕೆಶಿಯ ಯೋಗಕ್ಷೇಮ ವಿಚಾರಿಸುತ್ತೇನೆ: ಸುಧಾಕರ್

    ಮನೆಗೆ ಹೋಗಿ ಡಿಕೆಶಿಯ ಯೋಗಕ್ಷೇಮ ವಿಚಾರಿಸುತ್ತೇನೆ: ಸುಧಾಕರ್

    ಚಿಕ್ಕಬಳ್ಳಾಪುರ: ಮೆಡಿಕಲ್ ಕಾಲೇಜು ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಜೊತೆಗೆ ಜಟಾಪಟಿ ನಡೆಸಿರುವ ಚಿಕ್ಕಬಳ್ಳಾಪುರ ಅನರ್ಹ ಶಾಸಕ ಸುಧಾಕರ್, ಇದೀಗ ಖುದ್ದು ಡಿಕೆ ಶಿವಕುಮಾರ್ ಅವರ ಮನೆಗೆ ಹೋಗಿ ಅವರ ಯೋಗಕ್ಷೇಮ ವಿಚಾರಿಸುವುದಾಗಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸುಧಾಕರ್, ವೈಯಕ್ತಿಕವಾಗಿ ನಾನು ಡಿಕೆಶಿ ಸ್ನೇಹಿತರಾಗಿದ್ದು, ಅಕ್ಕಪಕ್ಕದ ಮನೆಯವರಾಗಿದ್ದೇವೆ. ಅವರು ಜೈಲಿನಿಂದ ಬಂದ ಮೇಲೆ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಬೇಕೆಂದಿದ್ದೆ. ಆದರೆ ಮೆಡಿಕಲ್ ಕಾಲೇಜು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಉಂಟಾದ ಪರಿಣಾಮ ಭೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಬಿಡುವಿನಲ್ಲಿದ್ದಾಗ ಅವರ ಮನೆಗೆ ಹೋಗಿ ಯೋಗಕ್ಷೇಮ ವಿಚಾರಿಸುವುದಾಗಿ ತಿಳಿಸಿದರು.

    ಚಿಕ್ಕಬಳ್ಳಾಪುರ ಜಿಲ್ಲೆಗೆ ಮಂಜೂರಾಗಿರುವ ಮೆಡಿಕಲ್ ಕಾಲೇಜು ವಿಚಾರದಲ್ಲಿ ಡಿಕೆಶಿ ಸ್ವತಂತ್ರರಾಗಿದ್ದು, ಈ ಕುರಿತು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದು, ನ್ಯಾಯಬದ್ಧ ಹೋರಾಟ ಮಾಡಲಿ ನನ್ನದೇನು ತಕರಾರಿಲ್ಲ ಎಂದರು. ನಿನ್ನೆ ತಾನೇ ಸುಧಾಕರ್ ತಮ್ಮ ತಂದೆ ಕೇಶವರೆಡ್ಡಿ ಡಿಕೆಶಿ ವಿರುದ್ಧ ಮಾತನಾಡಿದ್ದ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ಕ್ಷಮೆ ಕೋರಿದ್ದಕ್ಕೆ ಸ್ಪಷ್ಟನೆ ನೀಡಿದ ಸುಧಾಕರ್ ಇದೀಗ ಖುದ್ದು ತಾನೇ ಭೇಟಿಯಾಗುವುದಾಗಿ ಹೇಳಿದರು.

    ಇದೇ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಮೆಡಿಕಲ್ ಕಾಲೇಜು ಘೋಷಣೆ ಮಾಡಿರುವ ಸಿಎಂ ಯಡಿಯೂರಪ್ಪ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಮೆಡಿಕಲ್ ಕಾಲೇಜು ಶಂಕುಸ್ಥಾಪನೆಗೆ ನವೆಂಬರ್ 8 ರಂದು ಜಿಲ್ಲೆಗೆ ಸಿಎಂ ಯಡಿಯೂರಪ್ಪ ಬರಲಿದ್ದಾರೆಂದು ಸುಧಾಕರ್ ತಿಳಿಸಿದರು.

  • ತಾಲೂಕಿಗೊಂದು ಮೆಡಿಕಲ್ ಕಾಲೇಜ್ ಕೊಡೋಕ್ಕಾಗಲ್ಲ – ಡಿಕೆಶಿಗೆ ಬಿಎಸ್‍ವೈ ಶಾಕ್

    ತಾಲೂಕಿಗೊಂದು ಮೆಡಿಕಲ್ ಕಾಲೇಜ್ ಕೊಡೋಕ್ಕಾಗಲ್ಲ – ಡಿಕೆಶಿಗೆ ಬಿಎಸ್‍ವೈ ಶಾಕ್

    – ಟಿಪ್ಪು ಪಠ್ಯ ತೆಗ್ದು ಹಾಕೋ ವಿಷ್ಯದಲ್ಲಿ ಗೊಂದಲವಿಲ್ಲ

    ಬೆಂಗಳೂರು: ತಾಲೂಕಿಗೊಂದು ಮೆಡಿಕಲ್ ಕಾಲೇಜು ಕೋಡೋಕ್ಕಾಗಲ್ಲ ಎಂದು ಹೇಳುವ ಮೂಲಕ ಸಿಎಂ ಯಡಿಯೂರಪ್ಪ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಶಾಕ್ ನೀಡಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು, ಮೆಡಿಕಲ್ ಕಾಲೇಜು ಸಂಬಂಧ ಗೊಂದಲ ಇಲ್ಲ. ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಎಂದು ಈಗಾಗಲೇ ನಿರ್ಧರಿಸಲಾಗಿದೆ. ಹೀಗಿರುವಾಗ ತಾಲೂಕಿಗೆ ಒಂದು ಕಾಲೇಜು ಕೊಡಕ್ಕಾಗುತ್ತಾ? ಇದರ ಬಗ್ಗೆ ನಾನು ಡಿ.ಕೆ ಶಿವಕುಮಾರ್ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.

    ಇದೇ ವೇಳೆ ಟಿಪ್ಪು ಪಠ್ಯದ ವಿಚಾರದ ಬಗ್ಗೆ ಮಾತನಾಡಿದ ಅವರು, ಟಿಪ್ಪು ಪಠ್ಯ ಬಗ್ಗೆ ಯಾವುದೇ ಗೊಂದಲ ಇಲ್ಲ. ಇಂದು ಬೆಳಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬಂದಿದ್ದರು. ಟಿಪ್ಪು ಸುಲ್ತಾನ್ ಪಠ್ಯದ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಒಂದು ಸಮಿತಿ ಮಾಡಿದ್ದಾರೆ. ಆ ಸಮಿತಿ ವರದಿ ಬಂದ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದರಲ್ಲಿ ಗೊಂದಲ ಏನೂ ಇಲ್ಲ. ಟಿಪ್ಪು ಸುಲ್ತಾನ್ ಸಂಬಂಧ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು.

    ನೆರೆಪರಿಹಾರ ವಿಚಾರದಲ್ಲಿ ಸಿದ್ದರಾಮಯ್ಯನವರ ಟೀಕೆಗೆ ತಿರುಗೇಟು ನೀಡಿದ ಬಿಎಸ್‍ವೈ, ನಾವು ಮಾಡಿರುವ ಕೆಲಸದ ಬಗ್ಗೆ ವಿವರವಾಗಿ ಜಾಹೀರಾತು ಕೊಡಲಾಗಿದೆ. ಸಿದ್ದರಾಮಯ್ಯ ಅವರು ಸರ್ಕಾರ ಸತ್ತು ಹೋಗಿದೆ ಎಂದು ಆರೋಪ ಮಾಡಿದ್ದಾರೆ. ಈಗಾಗಲೇ ಕೇಂದ್ರದ ಸಚಿವರಾದ ನಿರ್ಮಲಾ ಸೀತಾರಾಮನ್ ನಿನ್ನೆ ಬಂದಾಗಲೂ ನೆರೆ ಸ್ಥಿತಿಗತಿ ಬಗ್ಗೆ ತಿಳಿಸಿದ್ದೇನೆ. ನಿರ್ಮಲಾ ಸೀತಾರಾಮನ್ ಇನ್ನಷ್ಟು ಸಹಕಾರ ಕೊಟ್ಟರೆ ಪರಿಹಾರ ಕಾರ್ಯ ಮತ್ತಷ್ಟೂ ವೇಗವಾಗಿ ಮಾಡಬಹುದು. ರಾಜ್ಯ ಸರ್ಕಾರ ನೆರೆ ಪರಿಹಾರ ಕಾಮಗಾರಿ ಉತ್ತಮವಾಗಿ ಮಾಡುತ್ತಿದೆ ಎಂದು ತಿಳಿಸಿದರು.

  • ಜಂಜಾಟವೇ ಸಾಕಾಗಿದೆ, ದೊಡ್ಡವ್ರ ವಿಚಾರ ನನಗೆ ಬೇಡ- ಡಿಕೆಶಿ

    ಜಂಜಾಟವೇ ಸಾಕಾಗಿದೆ, ದೊಡ್ಡವ್ರ ವಿಚಾರ ನನಗೆ ಬೇಡ- ಡಿಕೆಶಿ

    – ಸಿಎಂಗೆ ನಿಜ ಗೊತ್ತಿದ್ದರೆ ಸ್ಥಳಾಂತರ ಮಾಡ್ತಿರಲಿಲ್ಲ

    ಬೆಂಗಳೂರು: ದೊಡ್ಡವರ ನ್ಯಾಯ ನನಗೆ ಬೇಡ. ನನ್ನ ಲೆವೆಲ್‍ನ ವಿಚಾರ ಮಾತ್ರ ನಾನು ಮಾತನಾಡುತ್ತೇನೆ. ಇಲ್ಲಿನ ಜಂಜಾಟವೇ ನನಗೆ ಸಾಕಾಗಿದೆ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

    ಸದಾಶಿವನಗರದಲ್ಲಿಂದು ಹೆಚ್‍ಡಿಕೆ ಮತ್ತು ಸಿದ್ದರಾಮಯ್ಯ ನಡುವಿನ ವಾಕ್ಸಮರ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕನಕಪುರ ಬಂಡೆ, ದೊಡ್ಡವರ ನ್ಯಾಯದ ವಿಚಾರ ನನಗೆ ಬೇಡ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಏನೇನು ಹೇಳಿಕೆಗಳನ್ನು ನೀಡಿದ್ದಾರೆ ಎಂದು ನನಗೆ ಗೊತ್ತಿಲ್ಲ ಎಂದರು.

    ದೊಡ್ಡವರ ನ್ಯಾಯ ನನಗೆ ಬೇಡ. ನನ್ನ ಲೆವೆಲ್‍ನ ವಿಚಾರ ಮಾತ್ರ ಮಾತನಾಡುತ್ತೇನೆ. ಇಲ್ಲಿನ ಜಂಜಾಟವೇ ಸಾಕಾಗಿದೆ. ಆರೋಗ್ಯ ಸಮಸ್ಯೆಯನ್ನೇ ಮೊದಲು ಸರಿ ಮಾಡಿಕೊಳ್ಳಬೇಕಾಗಿದೆ. ಆಸ್ಪತ್ರೆಗೆ ಹೋಗೋದಕ್ಕೂ ನನಗೆ ಆಗುತ್ತಿಲ್ಲ. ಏನು ಪಾಲಿಟಿಕ್ಸ್ ಆಗಿದೆಯೋ ಗೊತ್ತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಿಎಸ್‍ವೈ-ಎಚ್‍ಡಿಕೆ ನಡುವೆ ಒಳ ಒಪ್ಪಂದ: ಸಿದ್ದರಾಮಯ್ಯ ಆರೋಪ

    ಇದೇ ವೇಳೆ ಮೆಡಿಕಲ್ ಕಾಲೇಜು ಸ್ಥಳಾಂತರ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪಗೆ ನಿಜ ಸಂಗತಿ ಗೊತ್ತಿಲ್ಲ. ಗೊತ್ತಿದ್ದರೆ ಮೆಡಿಕಲ್ ಕಾಲೇಜ್ ಸ್ಥಳಾಂತರ ಮಾಡುತ್ತಿರಲಿಲ್ಲ. ನಾನು ಸುಧಾಕರ್ ವಿಚಾರದಲ್ಲಿ ಟೀಕೆ ಮಾಡೋದಿಲ್ಲ. ಚಿಕ್ಕಬಳ್ಳಾಪುರಕ್ಕಲ್ಲ, ಬೇರೆ ನೂರು ಕಡೆ ಬೇಕಾದ್ರೂ ಕೊಡಲಿ. ಆದರೆ ನಮಗೆ ಹಂಚಿಕೆಯಾಗಿದ್ದನ್ನ ಕಿತ್ತುಕೊಂಡಿದ್ದು ಸರಿಯಲ್ಲ. ನಾನು ಸಚಿವನಾಗಿದ್ದಾಗ ಒಂದೇ ಒಂದು ಕೆಲಸ ಮಾಡಿಸಿಕೊಳ್ಳಲೂ ಸಾಧ್ಯವಾಗಲಿಲ್ಲ. ಎಷ್ಟು ಕಷ್ಟಪಟ್ಟು ನನ್ನ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ತೆಗೆದುಕೊಂಡು ಹೋದೆ ಎಂದು ಬೇಸರಗೊಂಡರು.

    ಕಾವೇರಿ ನೀರಿನ ವಿಚಾರದಲ್ಲೂ ಹೀಗೇ ಆಗಿದ್ದು. ಮೇಕೆದಾಟು ಯೋಜನೆ ಜಾರಿಗೆ ಬಂದರೆ ಹೆಚ್ಚು ತೊಂದರೆ ಆಗೋದು ನಮ್ಮ ಕ್ಷೇತ್ರಕ್ಕೆ ಆದರೂ ನಾವು ಬೆಂಗಳೂರಿಗಾಗಿ ತ್ಯಾಗಕ್ಕೆ ಸಿದ್ಧರಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಮೆಡಿಕಲ್ ಕಾಲೇಜು ಸ್ಥಳಾಂತರ ಮಾಡಲೇ ಬಾರದು ಸಿಎಂಗೆ ಪತ್ರ ಬರೆಯುತ್ತೇನೆ.

  • ಹೊಡಿ, ಬಡಿ ಅನ್ನೋದು ಡಿಕೆಶಿ ಸಂಸ್ಕೃತಿ- ಬಂಡೆಗೆ ಸುಧಾಕರ್ ಸವಾಲ್

    ಹೊಡಿ, ಬಡಿ ಅನ್ನೋದು ಡಿಕೆಶಿ ಸಂಸ್ಕೃತಿ- ಬಂಡೆಗೆ ಸುಧಾಕರ್ ಸವಾಲ್

    ಚಿಕ್ಕಬಳ್ಳಾಪುರ: ತಮ್ಮ ಕ್ಷೇತ್ರ ಚಿಕ್ಕಬಳ್ಳಾಪರದಲ್ಲಿ ಮೆಡಿಕಲ್ ಕಾಲೇಜು ಶಂಕು ಸ್ಥಾಪನೆ ಮಾಡಿಯೇ ಮಾಡುತ್ತೇನೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಅನರ್ಹ ಶಾಸಕ ಸುಧಾಕರ್ ಸವಾಲು ಹಾಕಿದ್ದಾರೆ.

    ಡಿ.ಕೆ.ಶಿವಕುಮಾರ್ ಓರ್ವ ಹೋರಾಟಗಾರ ಅನ್ನೋದನ್ನು ಒಪ್ಪುತ್ತೇನೆ. ಜೀವ ಉಳಿಸಲು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಆರಂಭಿಸಲಾಗುತ್ತದೆ. ಹಾಗಾಗಿ ಡಿಕೆ ಶಿವಕುಮಾರ್ ಪ್ರಾಣ ಬಿಡುವ ಮಾತನ್ನಾಡಬಾರದು. 2016-17ರ ಬಜೆಟ್ ನಲ್ಲಿ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಆಗಿತ್ತು. ಸಿದ್ದರಾಮಯ್ಯನವರ ಮನವಿ ಮಾಡಿಕೊಂಡಿದ್ದರಿಂದ ಮೆಡಿಕಲ್ ಕಾಲೇಜಿಗೆ ಒಪ್ಪಿಗೆ ಸೂಚಿಸಲಾಗಿತ್ತು.

    ರಾಜಕೀಯ ನಿವೃತ್ತಿ: ಸಮ್ಮಿಶ್ರ ಸರ್ಕಾರ ಬಂದ ಮೇಲೆ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಿಕೆ ಶಿವಕುಮಾರ್ ನಮ್ಮ ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ಉದ್ದೇಶಪೂರ್ವಕವಾಗಿ ಅನುದಾನ ಬಿಡುಗಡೆ ಮಾಡಿಲಿಲ್ಲ. ಆದರೆ ಕನಕಪುರ ಕಾಲೇಜಿಗೆ ಒಂದೇ ಸಾರಿ 450 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂಬುದನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದೇನೆ. ಮೊದಲು ಜಿಲ್ಲೆಗೆ ಮೆಡಿಕಲ್ ಕಾಲೇಜು ಆಗಬೇಕೆಂದು ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಉಪ ಚುನಾವಣೆಗೆ ಮುನ್ನವೇ ಚಿಕ್ಕಬಳ್ಳಾಪುರದ ಮೆಡಿಕಲ್ ಕಾಲೇಜಿಗೆ ಶಂಕು ಸ್ಥಾಪನೆ ಮಾಡಿಸುತ್ತೇನೆ. ಇಲ್ಲವಾದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.

    ಡಿ.ಕೆ.ಶಿವಕುಮಾರ್ ಕನಕಪುರವನ್ನು ಕರ್ನಾಟಕ ಎಂದು ತಿಳಿದುಕೊಂಡಿದ್ದಾರೆ. ಕನಕಪುರ ಕರ್ನಾಟಕದಲ್ಲಿ ಕೇವಲ ಒಂದು ತಾಲೂಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹಿಂದಿನ ಸರ್ಕಾರ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಎಂದು ಹೇಳಿತ್ತು. ಈಗಾಗಲೇ ರಾಮನಗರಕ್ಕೆ ಆರೋಗ್ಯ ವಿಶ್ವವಿದ್ಯಾಲಯ ಮಂಜೂರು ಆಗಿದೆ. ಕನಕಪುರ ಮೆಡಿಕಲ್ ಕಾಲೇಜಿನ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು. ನಾನೇನು ಕನಕಪುರದ ಮೆಡಿಕಲ್ ಕಾಲೇಜು ಅನುಮತಿಯನ್ನು ರದ್ದುಗೊಳಿಸಿ ಎಂದು ಹೇಳಿಲ್ಲ ಎಂದರು.

    ನೇಣು ಹಾಕೋದು, ನೇಣು ಹಾಕಿಸಿಕೊಳ್ಳವ ಎಂಬಿತ್ಯಾದಿ ಮಾತುಗಳು ಡಿಕೆ ಶಿವಕುಮಾರ್ ಅವರ ಸಂಸ್ಕಾರವನ್ನು ತೋರಿಸುತ್ತದೆ. ಹಿರಿಯರಿಗೆ ಗೌರವ ಕೊಡುವುದು, ಎಲ್ಲರನ್ನು ಪ್ರೀತಿ ಭಾವನೆಯಿಂದ ಕಾಣೋದನ್ನು ನಮ್ಮ ಮನೆಯಲ್ಲಿ ಕಲಿಸಿಕೊಟ್ಟ ಸಂಸ್ಕಾರ. ಹೊಡೆಯೋದು, ಬಡಿಯೋದು, ಕೊಲ್ಲೋದು ಡಿ.ಕೆ.ಶಿವಕುಮಾರ್ ಅವರ ಸಂಸ್ಕೃತಿ. ಹೊಸ ಬಿಜೆಪಿ ಸರ್ಕಾರ ನಮ್ಮ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅಸ್ತು ಎಂದಿದೆ. ಈ ಬಗ್ಗೆ ಕ್ಯಾಬಿನೆಟ್ ಸಹ ಒಪ್ಪಿಗೆ ಸೂಚಿಸಿದ್ದು, ಮುಖ್ಯಮಂತ್ರಿಗಳು ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ಪ್ರತಿಭಟನೆ: ಡಿಕೆ ಶಿವಕುಮಾರ್ ಹೇಳಿಕೆ ಖಂಡಿಸಿ ಅನರ್ಹ ಶಾಸಕ ಸುಧಾಕರ್ ಬೆಂಬಲಿಗರು ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ನಗರದ ಪಿ.ಎಲ್.ಡಿ.ಬ್ಯಾಂಕ್ ನಿಂದ ಶಿಡ್ಲಘಟ್ಟ ವೃತ್ತದ ವರೆಗೂ ಪ್ರತಿಭಟನಾ ಮೆರವಣಿಗೆ ಸಾಗಲಿದೆ.

  • ಕೋಟ್ಯಂತರ ರೂ. ವಂಚನೆ ಆರೋಪ – ಸಿದ್ಧಾರ್ಥ್ ಕಾಲೇಜ್ ಮೇಲೆ ಐಟಿ ದಾಳಿ

    ಕೋಟ್ಯಂತರ ರೂ. ವಂಚನೆ ಆರೋಪ – ಸಿದ್ಧಾರ್ಥ್ ಕಾಲೇಜ್ ಮೇಲೆ ಐಟಿ ದಾಳಿ

    ಬೆಂಗಳೂರು: ಡಿಕೆ ಶಿವಕುಮಾರ್ ಬಳಿಕ ಮಾಜಿ ಡಿಸಿಎಂ ಪರಮೇಶ್ವರ್ ಅವರಿಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದು, ಪರಮೇಶ್ವರ್ ಒಡೆತನದ ಸಿದ್ಧಾರ್ಥ್ ಶಿಕ್ಷಣ ಸಂಸ್ಥೆಯ ಮೇಲೆ ಐಟಿ ದಾಳಿ ನಡೆದಿದೆ.

    ತುಮಕೂರು, ನೆಲಮಂಗಲದಲ್ಲಿರುವ ಸಿದ್ಧಾರ್ಥ್ ಕಾಲೇಜುಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

    ದಾಳಿ ಯಾಕೆ?
    ಸಿದ್ಧಾರ್ಥ್ ಶಿಕ್ಷಣ ಸಂಸ್ಥೆಯಲ್ಲಿ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಸೀಟ್ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಸೀಟ್ ಹೊರತುಪಡಿಸಿ ಮ್ಯಾನೇಜ್‍ಮೆಂಟ್ ಸೀಟ್ ಗಳು ಇರುತ್ತವೆ. ಈ ಸೀಟ್ ಗಳಿಗೆ ಕಾಲೇಜುಗಳು ಲ್ಕ ವಿಧಿಸಬಹುದಾಗಿದ್ದು, ಇದರಲ್ಲಿ ಕೋಟ್ಯಂತರ ರೂ. ಅಕ್ರಮ ನಡೆದಿದೆ. ಅಷ್ಟೇ ಅಲ್ಲದೇ ತೆರಿಗೆಯನ್ನು ಮರೆಮಾಚಲು ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸಲಾಗಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

  • ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ಯಾದಗಿರಿ ಸಂಪೂರ್ಣ ಬಂದ್

    ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ಯಾದಗಿರಿ ಸಂಪೂರ್ಣ ಬಂದ್

    ಯಾದಗಿರಿ: ಉದ್ದೇಶಿತ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಇಂದು ಯಾದಗಿರಿ ನಗರದಲ್ಲಿ ಸಂಪೂರ್ಣ ಬಂದ್ ಕರೆ ನೀಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಬಿಜೆಪಿ ಶಾಸಕ ವೆಂಕಟಗೌಡ ಮುದ್ನಾಳ್ ಕರೆ ನೀಡಿರುವ ಈ ಬಂದ್‍ಗೆ ಕನ್ನಡಪರ ಸಂಘಟನೆ ಸೇರಿದಂತೆ ಒಟ್ಟು 61 ಸಂಘಟನೆಗಳು ಬಂದ್ ಬೆಂಬಲ ನೀಡಿವೆ. ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಸಹ ಬಂದ್‍ಗೆ ಕೈ ಜೋಡಿಸಿದ್ದು, ನಗರದಲ್ಲಿ ವ್ಯಾಪಾರ- ವಹಿವಾಟು, ಆಟೋ ಮತ್ತು ಸರ್ಕಾರಿ ಬಸ್ ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

    ಜಿಲ್ಲಾ ಬಿಜೆಪಿ ಮತ್ತು ಬಂದ್‍ಗೆ ಬೆಂಬಲ ನೀಡಿರುವ ವಿವಿಧ ಸಂಘಟನೆಗಳಿಂದ, ನಗರದ ಮೈಲಾಪುರ ಬೇಸ್ನಿಂದ ನಗರ ಸಭೆವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದು, ಈ ಮೆರವಣಿಗೆಯಲ್ಲಿ ಸಾವಿರಾರು ಪ್ರತಿಭಟನಾಕಾರರು ಪಾಲ್ಗೊಂಡಿದ್ದಾರೆ.

    ಕಳೆದ ತಿಂಗಳು ಜಿಲ್ಲೆಯ ಚಂಡರಕಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದ ಮುಖ್ಯಮಂತ್ರಿಗಳೂ ಈಗಾಗಲೇ ಜಿಲ್ಲೆಗೆ ಮಂಜೂರಾಗಿರುವ ಮೆಡಿಕಲ್ ಕಾಲೇಜು ರದ್ದುಪಡಿಸಿ, 300 ಬೆಡ್ ಆಸ್ಪತ್ರೆ ಘೋಷಣೆ ಮಾಡಿದ್ದರು. ಅಲ್ಲದೆ ಇಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿದರೆ ಅದು ಜಿಲ್ಲೆಯ ಜನರಿಗಿಂತ ಹೊರಗಿನವರಿಗೆ ಅನುಕೂಲವಾಗತ್ತದೆ ಎಂಬ ಹೇಳಿಕೆ ಸಹ ನೀಡಿದ್ದರು.

    ಮುಖ್ಯಮಂತ್ರಿಗಳ ಈ ಹೇಳಿಕೆಯಿಂದ ಅಸಮಾಧಾನಗೊಂಡಿರುವ ಸ್ಥಳೀಯ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಮತ್ತು ವಿವಿಧ ಸಂಘಟನೆಗಳು ಇಂದು ಬಂದ್‍ಗೆ ಕರೆ ನೀಡಿವೆ.

  • 10ನೇ ಬಾರಿಗೆ ಗರ್ಭಿಣಿ – ಸಂತಾನ ನಿಯಂತ್ರಣ ಮಾಡ್ಕೊಳ್ಳಿ ಎಂದಿದ್ದಕ್ಕೆ ಆಸ್ಪತ್ರೆಯಿಂದ್ಲೇ ಮಹಿಳೆ ಎಸ್ಕೇಪ್!

    10ನೇ ಬಾರಿಗೆ ಗರ್ಭಿಣಿ – ಸಂತಾನ ನಿಯಂತ್ರಣ ಮಾಡ್ಕೊಳ್ಳಿ ಎಂದಿದ್ದಕ್ಕೆ ಆಸ್ಪತ್ರೆಯಿಂದ್ಲೇ ಮಹಿಳೆ ಎಸ್ಕೇಪ್!

    ತಿರುಚ್ಚಿ (ತಮಿಳುನಾಡು): 10ನೇ ಬಾರಿ ಗರ್ಭಿಣಿಯಾಗಿ ಆಸ್ಪತ್ರೆಗೆ ಬಂದ ಮಹಿಳೆಗೆ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ, ಹೆರಿಗೆ ಬಳಿಕ ಸಂತಾನ ನಿಯಂತ್ರಣ ಸರ್ಜರಿ ಮಾಡಿಸಿಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಕ್ಕೆ ಸಂಬಂಧಿಕರ ಜೊತೆ ಆಸ್ಪತ್ರೆಯಿಂದಲೇ ಪರಾರಿಯಾದ ಘಟನೆ ಇಲ್ಲಿನ ವೆತ್ತಿಯಾಂಗುಡಿ ಎಂಬಲ್ಲಿ ನಡೆದಿದೆ. ಮಹಿಳೆ ಹಿಮೋಗ್ಲೋಬಿನ್ ಕೊರತೆಯಿಂದ ಬಳಲುತ್ತಿದ್ದು, ಆಕೆ ತುಂಬು ಗರ್ಭಿಣಿಯಾಗಿದ್ದಳು. ಇನ್ನೊಂದು ವಾರಕ್ಕೆ ಆಕೆಗೆ ಹೆರಿಗೆಯಾಗುವ ಸಾಧ್ಯತೆಯಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಅರಂತಂಗಿ ಸಮೀಪದ ವೆತ್ತಿಯಂಗುಡಿಯಲ್ಲಿರುವ 52 ವರ್ಷದ ಆರಾಯಿ ಹಾಗೂ 56 ವರ್ಷದ ಆನಂದನ್ ದಂಪತಿಗೆ 9 ಮಕ್ಕಳು. ಆರಾಯಿ 13 ವರ್ಷದ ಹಿಂದೆಯೇ 9 ಮಕ್ಕಳಿಗೂ ಜನ್ಮ ನೀಡಿದ್ದರು. ಆದರೆ ಕಳೆದ ಕೆಲ ದಿನಗಳ ಹಿಂದೆ ಆಕೆಗೆ ಸುಸ್ತಾಗಿದ್ದರಿಂದ ಆಕೆಯನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ಸೇರಿಸಿದ್ದರು. ಈ ವೇಳೆ ಆಕೆ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ವಯೋಸಹಜವಾಗಿ ಮುಟ್ಟುನಿಂತಿದೆ ಅಂದುಕೊಂಡಿದ್ದ ಆಕೆಗೆ ತಾನು ಗರ್ಭಿಣಿ ಎಂದು ಗೊತ್ತೇ ಇರಲಿಲ್ಲ.

    ಆದರೆ ಮೊನ್ನೆ ಸುಸ್ತು ಕಾಣಿಸಿಕೊಂಡು ಸಿಂಗವನಂನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಾಗ ಗರ್ಭಿಣಿಯಾಗಿದ್ದು ಗೊತ್ತಾಗಿದೆ. ಹೀಗಾಗಿ ವೈದ್ಯರು ಆಕೆಯನ್ನು ತಕ್ಷಣ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ಳಲು ಸೂಚಿಸಿದ್ದಾರೆ. ಅಲ್ಲದೆ ಹೆರಿಗೆ ಬಳಿಕ ಸಂತಾನ ನಿಯಂತ್ರಣ ಸರ್ಜರಿ ಬಗ್ಗೆಯೂ ಹೇಳಿದ್ದಾರೆ. ಆದರೆ ಯಾವಾಗ ವೈದ್ಯರಿಂದ ಈ ಸೂಚನೆ ಬಂತೋ ಕುಟುಂಬ ಸದಸ್ಯರೆಲ್ಲಾ ಹೇಳದೇ ಕೇಳದೇ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ.

    9 ಹೆರಿಗೆಯೂ ಮನೆಯಲ್ಲೇ ಆಗಿತ್ತು!
    ಆರಾಯಿ ದಂಪತಿಯ 9 ಮಕ್ಕಳ ಹೆರಿಗೆಯೂ ಮನೆಯಲ್ಲೇ ಆಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ವೆತ್ತಿಯಾಂಗುಡಿಯಲ್ಲಿ ಕಳೆದ 5 ವರ್ಷದಿಂದ ಇವರು ವಾಸ ಮಾಡುತ್ತಿದ್ದಾರೆ. ಈ ಕುಟುಂಬ ಒಂದೇ ಕಡೆ ಹೆಚ್ಚು ವರ್ಷಗಳ ಕಾಲ ಇರಲೇ ಇಲ್ಲ. ಆರಾಯಿಯ ನಾಲ್ವರು ಮಕ್ಕಳಿಗೆ ಮದುವೆಯಾಗಿ ಅವರ ಕುಟುಂಬದ ಜೊತೆ ಬಾಳುತ್ತಿರುವ ಹೊತ್ತಲ್ಲೇ ಆರಾಯಿ ಮತ್ತೆ ಗರ್ಭ ಧರಿಸಿದ್ದಾರೆ. ಆದರೆ ತಾನು ಗರ್ಭಿಣಿಯಾಗಿದ್ದೇನೆ ಎಂದು ಆಕೆಗೆ ಗೊತ್ತಿರಲೇ ಇಲ್ಲ.

    ಆಗಸ್ಟ್ 18ರಂದು ಆಕೆಯ 10ನೇ ಮಗುವಿನ ಹೆರಿಗೆಗೆ ಡೇಟ್ ಹೇಳಿದ್ದು, ಎಲ್ಲಾ ಮಕ್ಕಳನ್ನು ಮನೆಯಲ್ಲೇ ಹೆತ್ತಿದ್ದರಿಂದ ಆಕೆ ಆಸ್ಪತ್ರೆಯಿಂದ ನಾಪತ್ತೆಯಾಗಿರಬೇಕು. ಅಲ್ಲದೇ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಸಂತಾನ ನಿಯಂತ್ರಣ ಸರ್ಜರಿ ಬಗ್ಗೆ ಹೇಳಿದ್ದರಿಂದ ಆಕೆ ನಾಪತ್ತೆಯಾಗಿರಬೇಕು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 4 ತಿಂಗಳ ಹಿಂದೆ ಆರಾಯಿ ಆಸ್ಪತ್ರೆಗೆ ಬಂದಿದ್ದಾಗ ಆಕೆಯಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಇರುವ ವಿಚಾರ ಬೆಳಕಿಗೆ ಬಂದಿತ್ತು. ಇದಾದ ಬಳಿಕ ಆಕೆಯನ್ನು ಪುದುಕೋಟೈ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಎರಡು ಯೂನಿಟ್ ರಕ್ತವನ್ನು ನೀಡಲಾಗಿತ್ತು. ಇದಾದ ಬಳಿಕ ಆಕೆ ಅಸ್ಪತ್ರೆಗೆ ಬಂದಿರಲಿಲ್ಲ ಎಂದು ಸಿಂಗಾವನಂ ಆಸ್ಪತ್ರೆಯ ಮೆಡಿಕಲ್ ಅಧಿಕಾರಿ ಎಂ.ಅಯ್ಯಪ್ಪನ್ ಹೇಳಿದ್ದಾರೆ.

    ಇದಾದ ಬಳಿಕ ಇಲ್ಲಿಂದ ಹೊರಟ ಆಕೆ ಕಳೆದ 10 ದಿನಗಳವರೆಗೆ ಆಸ್ಪತ್ರೆಗೆ ಬಂದಿರಲಿಲ್ಲ. ನಮ್ಮ ಆಸ್ಪತ್ರೆಗೆ ಬಂದಾಗ ಆಕೆಗೆ ಹೈ ಬಿಪಿ ಇತ್ತು. ಹೀಗಾಗಿ ಅವರನ್ನು ಪುದುಕೋಟೈ ಆಸ್ಪತ್ರೆಗೆ ದಾಖಲಿಸಲು ಹೇಳಿದ್ದೆವು. ಆದರೆ ಈ ಸೂಚನೆ ನೀಡಿದ ಬೆನ್ನಲ್ಲೇ ಆಕೆ ಇಲ್ಲಿಂದ ನಾಪತ್ತೆಯಾಗಿದ್ದಾರೆ ಎಂದು ಅಯ್ಯಪ್ಪನ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews