Tag: medical college

  • ವೈದ್ಯಕೀಯ ಸೀಟ್‍ನಲ್ಲಿ OBC ಶೇ.27, EWSಗೆ ಶೇ.10 ಮೀಸಲಾತಿ

    ವೈದ್ಯಕೀಯ ಸೀಟ್‍ನಲ್ಲಿ OBC ಶೇ.27, EWSಗೆ ಶೇ.10 ಮೀಸಲಾತಿ

    ನವದೆಹಲಿ: ಒಬಿಸಿ, ಇಡಬ್ಲ್ಯೂಎಸ್ (ಆರ್ಥಿಕ ಹಿಂದುಳಿದ ವರ್ಗ) ವರ್ಗಗಳಿಗೆ ಮೆಡಿಕಲ್ ಮತ್ತು ಡೆಂಟಲ್ ಕಾಲೇಜ್‍ಗಳಲ್ಲೂ ಮೀಸಲಾತಿ ನೀಡೋದಾಗಿ ಕೇಂದ್ರ ಪ್ರಕಟಿಸಿದೆ. ಒಬಿಸಿಗೆ ಶೇ.27, ಇಬಿಸಿಗೆ ಶೇ.10ರಷ್ಟು ಮೀಸಲಾತಿ ಕೋಟಾ ಪ್ರಸ್ತುತ ವರ್ಷದಿಂದಲೇ ಜಾರಿಗೆ ಬರುತ್ತೆ. ಸಾವಿರಾರು ಯುವಜನತೆಗೆ ಅನುಕೂಲತೆಯೊಂದಿಗೆ ಸಾಮಾಜಿಕ ನ್ಯಾಯ ಸಿಗಲಿದೆ ಅಂತ ಮೋದಿ ಟ್ವೀಟ್ ಮಾಡಿದ್ದಾರೆ.

    ಪದವಿ ಪೂರ್ವ ಮತ್ತು ಸ್ನಾತಕೋತ್ತರ ಪದವಿಗಳಾದ ಎಂಬಿಬಿಎಸ್/ಎಂಡಿ/ಎಂಎಸ್/ಡಿಪ್ಲೋಮಾ/ಬಿಡಿಎಸ್/ಎಂಡಿಎಸ್ ಕೋರ್ಸ್ ಗೆ ಇದು ಅನ್ವಯ ಆಗಲಿದೆ. ಇದರಿಂದ 5,550 ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಅನುಕೂಲವಾಗಲಿದೆ ಅಂತ ಕೇಂದ್ರ ಆರೋಗ್ಯ ಸಚಿವ ಮನ್‍ಸುಖ್ ಮಾಂಡವೀಯ ಹೇಳಿದ್ದಾರೆ. ಎಂಬಿಬಿಎಸ್ ನಲ್ಲಿ 1,500 ಮತ್ತು ಸ್ನಾತಕೋತ್ತರ ಪದವಿಯಲ್ಲಿ 2,500 ಒಬಿಸಿ ವಿದ್ಯಾರ್ಥಿಗಳು ಸೀಟು ಪಡೆದುಕೊಳ್ಳಬಹುದಾಗಿದೆ. ಇಡಬ್ಲ್ಯೂಎಸ್ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ನಲ್ಲಿ ಸುಮಾರು 550 ಮತ್ತು ಸ್ನಾತಕೋತ್ತರ ಪದವಿಯಲ್ಲಿ ಸುಮಾರು 1,000 ಸೀಟುಗಳು ಲಭ್ಯವಾಗಲಿವೆ.

    ಈ ಮಧ್ಯೆ, ರಾಷ್ಟ್ರೀಯ ಶಿಕ್ಷಣ ನೀತಿಗೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ನೀತಿ ನಿರೂಪಕರು, ವಿದ್ಯಾರ್ಥಿಗಳು, ಶಿಕ್ಷಕರನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ರು. ನವ ಭಾರತಕ್ಕೆ ಹೊಸ ಶಿಕ್ಷಣ ನೀತಿಯ ಅಗತ್ಯ ಇದೆ ಅಂತ ಹೇಳಿದದರು. ಇದನ್ನೂ ಓದಿ: 75 ವರ್ಷ, 75 ಗ್ರಾಮ, 75 ಗಂಟೆ – ಆಗಸ್ಟ್ 15ಕ್ಕೆ ಸಂಸದರಿಗೆ ಮೋದಿ ಟಾಸ್ಕ್

    ಇದೇ ವೇಳೆ ಶಿಕ್ಷಣ ನೀತಿಯ ಸಾಕ್ಷ್ಯಾಚಿತ್ರ ಬಿಡುಗಡೆ ಮಾಡಲಾಯಿತು. ಹೊಸ ಶಿಕ್ಷಣ ನೀತಿ ಜಾರಿಯಲ್ಲಿ ಇಲ್ಲಿಯವರೆಗೆ ಆಗಿರುವ ಪ್ರಗತಿ, ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯ್ತು. ಉನ್ನತ ಶಿಕ್ಷಣ ಮಾಡುವ ವಿದ್ಯಾರ್ಥಿಗಳಿಗೆ ಬಹು ಹಂತದ ಪ್ರವೇಶ ನಿರ್ಗಮನದ ಆಯ್ಕೆಗಳನ್ನು ಒದಗಿಸುವ ಅಕ್ಯಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್‍ಗೆ ಚಾಲನೆ ನೀಡಿದ್ರು. ಮೊದಲ ವರ್ಷದ ಪ್ರಾದೇಶಿಕ ಭಾಷೆಯ ಎಂಜಿನಿಯರಿಂಗ್ ಕಾರ್ಯಕ್ರಮಗಳು, ಉನ್ನತ ಶಿಕ್ಷಣದಲ್ಲಿ ಅಂತಾರಾಷ್ಟ್ರೀಯ ಕ್ಷೇತ್ರದ ಮಾರ್ಗಸೂಚಿಗಳನ್ನು ಕೂಡ ಪ್ರಕಟಿಸಲಾಯ್ತು. ಇದನ್ನೂ ಓದಿ: ಗಡ್ಡ ಬಿಟ್ಟಾಗ ಶಿವಾಜಿ, ಈಗ ಬಸವಣ್ಣ: ಶಾಸಕ ಯತ್ನಾಳ್

  • ಜೈನ್ ಮಿಷನ್ ಆಸ್ಪತ್ರೆ ಉದ್ಘಾಟಿಸಿದ ಸಚಿವ ಸುಧಾಕರ್

    ಜೈನ್ ಮಿಷನ್ ಆಸ್ಪತ್ರೆ ಉದ್ಘಾಟಿಸಿದ ಸಚಿವ ಸುಧಾಕರ್

    – 1 ವರ್ಷದೊಳಗೆ ಸರ್ಕಾರಿ ಮೆಡಿಕಲ್ ಕಾಲೇಜು ಲೋಕಾರ್ಪಣೆ

    ಚಿಕ್ಕಬಳ್ಳಾಪುರ: ನಗರದ ಬೆಂಗಳೂರು ಮುಖ್ಯ ರಸ್ತೆಯ ಜಡಲತಿಮ್ಮನಹಳ್ಳಿ ಕ್ರಾಸ್ ಬಳಿ ನಿರ್ಮಾಣಗೊಂಡಿರುವ ನೂತನ ಜೈನ್ ಮಿಷನ್ ಆಸ್ಪತ್ರೆಯನ್ನ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಲೋಕಾರ್ಪಣೆ ಮಾಡಿದರು.

    ಜೈನ್ ಮಿಷನ್ ಸಂಸ್ಥೆಯಿಂದ ನೂತನ ಅತ್ಯಾಧುನಿಕ ಸೌಲಭ್ಯಗಳುಳ್ಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗಿದ್ದು, ನೂತನ ಆಸ್ಪತ್ರೆಗೆ ಚಾಲನೆ ನೀಡಿ ಮಾತನಾಡಿದ ಸಚಿವ ಸುಧಾಕರ್‍ರವರು, ಜಿಲ್ಲೆಗೆ ಇಂತಹದೊಂದು ಆಸ್ಪತ್ರೆ ಅತ್ಯವಶ್ಯಕವಾಗಿದ್ದು, ಜೈನ್ ಮಿಷನ್ ವತಿಯಿಂದ ಆರಂಭವಾಗಿರುವ ಈ ಆಸ್ಪತ್ರೆಯನ್ನ ಜಿಲ್ಲೆಯ ಜನತೆ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.

    ಜೈನ್ ಸಮುದಾಯದವರು ಸೇವಾ ಮನೋಭಾವದವರು ಆ ಸಮುದಾಯದ ಬಗ್ಗೆ ನನಗೆ ಹೆಮ್ಮೆ ಇದೆ. ಚಿಕ್ಕಬಳ್ಳಾಪುರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿ ಜನರ ಸೇವೆ ಮಾಡಲು ಮುಂದಾಗಿರುವ ಜೈನ್ ಮಿಷನ್ ಸೇವೆ ಶ್ಲಾಘನೀಯವಾದದ್ದು. ಲಾಭ ರಹಿತ ಉದ್ದೇಶದಿಂದ ಈ ಆಸ್ಪತ್ರೆ ಆರಂಭವಾಗಿದೆ. ಈ ಆಸ್ಪತ್ರೆಗೆ ಬೇಕಾದ ಎಲ್ಲ ಸಹಕಾರವನ್ನ ತಾವು ನೀಡುವುದಾಗಿ ತಿಳಿಸಿದರು.

    ಆಸ್ಪತ್ರೆ ಶೇ. 90 ರಷ್ಟು ನಿರ್ಮಾಣ ಆಗಿದ್ದಾಗಲೇ ಇಡೀ ಆಸ್ಪತ್ರೆಯನ್ನ ಕೋವಿಡ್ ಆಸ್ಪತ್ರೆ ಮಾಡಿ ಸೋಂಕಿತರಿಗೆ ಚಿಕಿತ್ಸೆ ಕೊಡಲು ಬಳಸಿಕೊಳ್ಳಿ ಅಂತ ಆಸ್ಪತ್ರೆಯ ಮುಖ್ಯಸ್ಥರಾದ ನರಪತ್ ಸೋಲಂಕಿಯವರು, ಉತ್ತಮ್ ಚಂದ್‍ರವರು ಉದಾರತಾ ಭಾವದಿಂದ ಹೇಳಿದ್ದರು. ಕೋವಿಡ್ ಆಸ್ಪತ್ರೆ ಮಾಡಲು ಸಕಲ ಸಿದ್ದತೆಗಳನ್ನ ಸಹ ಜಿಲ್ಲಾಡಳಿತ ಮಾಡಿಕೊಂಡಿತ್ತು. ಆದರೆ ಈಗ ಕೋವಿಡ್ ಕಡಿಮೆ ಆದ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆ ಆರಂಭ ಮಾಡುವುದು ಅವಶ್ಯಕವಾಗಲಿಲ್ಲ. ಹೀಗಾಗಿ ಸದ್ಯ ಜೈನ್ ಮಿಷನ್ ಸಂಸ್ಥೆಯವರೇ ಜನರಲ್ ಆಸ್ಪತ್ರೆ ಆರಂಭಿಸಿದ್ದು, ಜನತೆಗೆ ಉತ್ತಮ ಚಿಕಿತ್ಸೆ ಸಿಗುವಂತಗಾಲಿ ಎಂದು ಸಚಿವರು ಆಶಿಸಿದರು. ಇದನ್ನೂ ಓದಿ: ಲಾಕ್‍ಡೌನ್ ವೇಳೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಶೇಷ ಜೋಡಿ

    ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಕಾರ್ಯ ಸಹ ಭರದಿಂದ ಸಾಗುತ್ತಿದ್ದು 1 ವರ್ಷದೊಳಗೆ ಕಾಲೇಜು ಲೋಕಾರ್ಪಣೆ ಮಾಡುವುದಾಗಿ ತಿಳಿಸಿದರು.

  • ನೂರಕ್ಕೆ ನೂರರಷ್ಟು ಕೆಲಸ ಮಾಡಿಲ್ಲ – ಮೆಡಿಕಲ್ ಕಾಲೇಜ್ ವೈದ್ಯರ ವಿರುದ್ಧ ಸೋಮಣ್ಣ ಗರಂ

    ನೂರಕ್ಕೆ ನೂರರಷ್ಟು ಕೆಲಸ ಮಾಡಿಲ್ಲ – ಮೆಡಿಕಲ್ ಕಾಲೇಜ್ ವೈದ್ಯರ ವಿರುದ್ಧ ಸೋಮಣ್ಣ ಗರಂ

    ಮಡಿಕೇರಿ: ನೂರಕ್ಕೆ ನೂರರಷ್ಟು ಮೆಡಿಕಲ್ ಕಾಲೇಜಿನ ವೈದ್ಯರು ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರು ಸಾಯುತ್ತಿದ್ದಾರೆ ಎಂದು ಉಸ್ತುವಾರಿ ಸಚಿವ ವಿ ಸೋಮಣ್ಣ ಗರಂ ಆಗಿ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಇದು ನಡೆಯಿತು.

    ಮಡಿಕೇರಿ ನಗರದ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಹಾಗೂ ಸಾವು ನೋವು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಂದು ಡೀನ್ ಮತ್ತು ಸಿಬ್ಬಂದಿ ಜೊತೆ ಸೋಮಣ್ಣ ಸಭೆ ನಡೆಸಿದರು.

    ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದ ಸೋಮಣ್ಣ ಕೋವಿಡ್ ಕೇರ್ ಸೆಂಟರ್, ಅಸ್ಪತ್ರೆಗಳ ಪರಿಶೀಲನೆ ಹಾಗೂ ಅರೋಗ್ಯ ಇಲಾಖೆ ಕೆಲಸವನ್ನು ಗಮನಿಸಿ ಮಾಹಿತಿಯನ್ನು ಸಂಗ್ರಹಿಸಿ ಸಭೆಗೆ ಆಗಮಿಸಿದ್ದರು. ಈ ವೇಳೆ, ನೂರರಕ್ಕೆ ನೂರರಷ್ಟು ಮೆಡಿಕಲ್ ಕಾಲೇಜಿನ ವೈದ್ಯರು ಕೆಲಸ ಮಾಡಿಲ್ಲ. ಸರಿಯಾಗಿ ಕೆಲಸ ಮಾಡದಿದ್ದರೆ ಸುಮ್ಮನಿರುವುದಿಲ್ಲ ಎಂದು ಹೇಳಿ ಗರಂ ಆದರು.

    ಕೊಡಗು ಜಿಲ್ಲೆಯಲ್ಲಿ ಇರುವ ಜನಸಂಖ್ಯೆ ಅತ್ಯಂತ ಕಡಿಮೆ ಇದೆ. ದಿನನಿತ್ಯ 10 ರಿಂದ 12 ಸಾವುಗಳು ಸಂಭವಿಸುತ್ತಿದೆ. ಇದರಿಂದ ನಮಗೆ ದಿಗಿಲು ಬಡಿದಂತೆ ಅಗುತ್ತಿದೆ. ಸಾವು ನೋವುಗಳ ಸಂಖ್ಯೆ ಕಡಿಮೆ ಮಾಡಲು ಹಗಲು ಇರುಳು ಶ್ರಮಪಡಬೇಕು ಎಂದು ಸೋಮಣ್ಣ ಸೂಚಿಸಿದರು.

    ಸಚಿವರ ಸಭೆಗೆ ನಾಲ್ಕು ಮಂದಿ ವೈದ್ಯರು ಗೈರಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸುತ್ತಾರೆ ಎಂದು ಗೊತ್ತಿದ್ದರೂ ವಿಚಾರವನ್ನು ಹಗುರವಾಗಿ ತೆಗೆದುಕೊಂಡ ಈ ವೈದ್ಯರಿಗೆ ನೋಟಿಸ್ ನೀಡಬೇಕು. ಮೆಡಿಕಲ್ ಕಾಲೇಜಿನ ಡೀನ್ ಕಾರ್ಯಪ್ಪ ಅವರ ಕಾರ್ಯವೈಖರಿಗೆ ಇದರಲ್ಲೇ ಗೊತ್ತಾಗುತ್ತದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

  • ನೇಣು ಬಿಗಿದುಕೊಂಡು ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ

    ನೇಣು ಬಿಗಿದುಕೊಂಡು ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ

    ಬೀದರ್: ಬ್ರೀಮ್ಸ್ ಮೇಡಿಕಲ್ ಕಾಲೇಜು ವಿದ್ಯಾರ್ಥಿ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬ್ರೀಮ್ಸ್ ಮೇಡಿಕಲ್ ಕಾಲೇಜಿನ ಪಿಜಿ ಹಾಸ್ಟೆಲ್ ನಲ್ಲಿ ನಡೆದಿದೆ.

    ವಿನೂತ್ ಕಾಂಬಳೆ(24) ಆತ್ಮಹತ್ಯೆಗೆ ಶರಣಾದ ಮೇಡಿಕಲ್ ವಿದ್ಯಾರ್ಥಿಯಾಗಿದ್ದು, ಆತ್ಮಹತ್ಯೆ ಗೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಅಂತಿಮ ವರ್ಷದ ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿ ಇಂದು ಬೆಳಗಿನ ಜಾವ ನೇಣಿಗೆ ಶರಣಾಗಿದ್ದಾನೆ.

    ಮೂಲತಃ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ವಿದ್ಯಾರ್ಥಿಯಾಗಿದ್ದು, ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ಮೆಡಿಕಲ್ ಕಾಲೇಜಿನ ಆವರಣದಲ್ಲಿ ಓಡಾಡಿದ ಗಜರಾಜ – ಅರಣ್ಯಾಧಿಕಾರಿಗಳಿಂದ ಆನೆಯ ರಕ್ಷಣೆ

    ಮೆಡಿಕಲ್ ಕಾಲೇಜಿನ ಆವರಣದಲ್ಲಿ ಓಡಾಡಿದ ಗಜರಾಜ – ಅರಣ್ಯಾಧಿಕಾರಿಗಳಿಂದ ಆನೆಯ ರಕ್ಷಣೆ

    ಕೋಲ್ಕತ್ತಾ: ಮೇಡಿಕಲ್ ಕಾಲೇಜಿನ ಆವರಣದಲ್ಲಿ ಓಡಾಡುತ್ತಿದ್ದ ಆನೆಯನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ.

    ಪಶ್ಚಿಮ ಬಂಗಾಳದ ಮಿಡ್ನಾಪುರದ ಮೆಡಿಕಲ್ ಕಾಲೇಜು ಮತ್ತು ಹಾಸ್ಟೆಲ್ ಆವರಣದಲ್ಲಿ ರಾತ್ರಿ ಕಾಡಾನೆ ಆವರಣದ ತುಂಬಾ ಓಡಾಡಿದೆ. ವಿದ್ಯಾರ್ಥಿಗಳು ಪೊಲೀಸರಿಗೆ ಮತ್ತು ಅರಣ್ಯ ಇಲಾಖೆಗೆ ಮಾಹಿತಿಯನ್ನೂ ನೀಡಿದ್ದರು. ಈ ವಿಚಾರ ತಿಳಿದ ಹಲವರು ಆನೆಯನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನ ಕೂಡಾ ಕಾಲೇಜು ಆವರಣದಲ್ಲಿ ಜಮಾಯಿಸಿದ್ದರು. ಆನೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಸದ್ಯ ಈ ಕಾರ್ಯಾಚರಣೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಆನೆಯನ್ನು ಕ್ರೇನ್ ಮೂಲಕ ಟ್ರಕ್‍ಗೆ ತರುವ ದೃಶ್ಯವಿದೆ. ಹೀಗೆ ಅತ್ಯಂತ ಸುರಕ್ಷಿತವಾಗಿ ಆನೆಯನ್ನು ಹಿಡಿದ ಅರಣ್ಯ ಸಿಬ್ಬಂದಿ ಆನೆಯನ್ನು ಅರಣ್ಯಕ್ಕೆ ಕರೆತಂದಿದ್ದಾರೆ. ಇಲ್ಲಿ ಆನೆಗೆ ಸೂಕ್ತ ಆರೈಕೆ ಮಾಡಿ ಬಳಿಕ ಕಾಡಿಗೆ ಬಿಡಲು ನಿರ್ಧರಿಸಲಾಗಿದೆ ಎಂದು ಬರೆದು ಕೊಂಡು ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಾಚರಣೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅರಣ್ಯ ಅಧಿಕಾರಿ ರಮೇಶ್ ಪಾಂಡೆ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ನಗರ ಪ್ರದೇಶಗಳಲ್ಲಿ ಆನೆಗಳನ್ನು ರಕ್ಷಿಸುವುದು ನಿಜವಾಗಿಯೂ ಕಷ್ಟ ಮತ್ತು ಸವಾಲಿನ ಕೆಲಸ. ಪಶ್ಚಿಮ ಬಂಗಾಳದ ಮಿಡ್ನಾಪುರದ ಅರಣ್ಯ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಆನೆಯನ್ನು ಮರಳಿ ಕಾಡಿಗೆ ಬಿಡುಗಡೆ ಮಾಡಿದ ನಂತರ ಅದರ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ರಮೇಶ್ ಪಾಂಡೆ ಹೇಳಿದ್ದಾರೆ.

  • ಬಿಜೆಪಿ ಮುಖಂಡನ ಮೆಡಿಕಲ್ ಕಾಲೇಜ್ ಮೇಲೆ ಐಟಿ ದಾಳಿ

    ಬಿಜೆಪಿ ಮುಖಂಡನ ಮೆಡಿಕಲ್ ಕಾಲೇಜ್ ಮೇಲೆ ಐಟಿ ದಾಳಿ

    ತುಮಕೂರು: ಇಂದು ಬೆಳ್ಳಂಬೆಳಗ್ಗೆ ಬಿಜೆಪಿ ಮುಖಂಡನ ಮೆಡಿಕಲ್ ಕಾಲೇಜಿನ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಶಿರಾಗೇಟ್ ಬಳಿ ಇರುವ ಬಿಜೆಪಿ ಮುಖಂಡ ಡಾ.ಹುಲಿನಾಯಕ್ ಒಡೆತನದ ಶ್ರೀ ದೇವಿ ಮೆಡಿಕಲ್ ಕಾಲೇಜಿನ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ.

    ಸುಮಾರು 30 ಜನ ಅಧಿಕಾರಿಗಳ ತಂಡ ಹುಲಿನಾಯ್ಕರ್ ಒಡೆತನದ ಮೆಡಿಕಲ್ ಕಾಲೇಜ್, ಎಂಜಿನಿಯರಿಂಗ್ ಕಾಲೇಜು ಹಾಗೂ ಎಸ್ ಎಸ್ ಪುರಂ ನಲ್ಲಿರುವ ಮನೆ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

  • ಚಾಮರಾಜನಗರ ವೈದ್ಯಕೀಯ ಕಾಲೇಜಿನಲ್ಲಿ ಚಿರತೆ ರೌಂಡ್ಸ್

    ಚಾಮರಾಜನಗರ ವೈದ್ಯಕೀಯ ಕಾಲೇಜಿನಲ್ಲಿ ಚಿರತೆ ರೌಂಡ್ಸ್

    ಚಾಮರಾಜನಗರ: ಕರ್ನಾಟಕದ ಚಾಮರಾಜನಗರ ಜಿಲ್ಲೆಯ ವೈದ್ಯಕೀಯ ಕಾಲೇಜಿನ ಹಾಸ್ಟೇಲ್‍ನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆ ಕಾಲೇಜಿನ ಕ್ಯಾಂಪಸ್‍ನಲ್ಲಿ ನಡೆದಾಡುತ್ತಿರು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

    ಮುಖ್ಯ ದ್ವಾರದ ಮೂಲಕ ಹಾಸ್ಟೆಲ್ ಗೆ ಚಿರತೆ ಪ್ರವೇಶ ಪಡೆದಿದೆ. ಹಾಸ್ಟೆಲ್ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆಯ ಓಡಾಟದ ದೃಶ್ಯ ಸೆರೆಯಾಗಿದೆ.

    ಹಾಸ್ಟೆಲ್ ಒಳನುಗ್ಗಿದ ಚಿರತೆ ಸಿಬ್ಬಂದಿಯ ಶಬ್ದ ಕೇಳಿ ಮತ್ತೆ ಹೊರಹೋಗಿದೆ. ಇದರಿಂದ ಹಾಸ್ಟೆಲ್ ವಿದ್ಯಾರ್ಥಿಗಳು, ವೈದ್ಯಕೀಯ ಸಿಬ್ಬಂದಿ ಕೂಡ ಭಯಭೀತರಾಗಿದ್ದಾರೆ. ಮೆಡಿಕಲ್ ಕಾಲೇಜಿನ ಪಕ್ಕದಲ್ಲಿ ಯಡಬೆಟ್ಟವಿದ್ದು ಬೆಟ್ಟದಿಂದ ಚಿರತೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಚಿರತೆ ಸೆರೆಹಿಡಿಯುವಂತೆ ಜನ ಆಗ್ರಹಿಸಿದ್ದಾರೆ.

    ಚಿರತೆ ಹಾಸ್ಟೆಲ್ ಕಟ್ಟಡದಲ್ಲಿ ಓಡಾಡುತ್ತಿರುವ ವಿಡಿಯೋ ತುಣುಕನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಸುಮಾರು 8,000 ಜನ ವೀಕ್ಷಿಸಿದ್ದಾರೆ.

  • ಡಿಸೆಂಬರ್ 1ರಿಂದ ರಾಜ್ಯದಲ್ಲಿ ಮೆಡಿಕಲ್ ಕಾಲೇಜುಗಳು ಪ್ರಾರಂಭ

    ಡಿಸೆಂಬರ್ 1ರಿಂದ ರಾಜ್ಯದಲ್ಲಿ ಮೆಡಿಕಲ್ ಕಾಲೇಜುಗಳು ಪ್ರಾರಂಭ

    ಬೆಂಗಳೂರು: ಡಿಸೆಂಬರ್ 1ರಿಂದ ರಾಜ್ಯದಲ್ಲಿ ಮೆಡಿಕಲ್ ಕಾಲೇಜು ಆರಂಭ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.

    ಕೊರೊನಾ ಕಾರಣದಿಂದ ಬಾಗಿಲು ಮುಚ್ಚಿದ್ದ ರಾಜ್ಯದ ವೈದ್ಯಕೀಯ ಕಾಲೇಜುಗಳು ಮತ್ತೆ ಆರಂಭವಾಗಲಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಅವರು ಟ್ವೀಟ್ ಮಾಡಿದ್ದಾರೆ. ಮೆಡಿಕಲ್, ಡೆಂಟಲ್, ಆಯುಷ್, ಪ್ಯಾರಾ ಮೆಡಿಕಲ್, ನರ್ಸಿಂಗ್ ಮತ್ತು ಫಾರ್ಮಸಿ ಕಾಲೇಜುಗಳು ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಸುಧಾಕರ್, ರಾಜೀವ್ ಗಾಂಧಿ ಆರೋಗ್ಯ ವಿವಿಯ ಎಲ್ಲಾ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಪ್ಯಾರಾ ಮೆಡಿಕಲ್, ನರ್ಸಿಂಗ್ ಮತ್ತು ಫಾರ್ಮಸಿ ಕಾಲೇಜುಗಳನ್ನು ಡಿಸೆಂಬರ್ 1ರಿಂದ ಪುನರಾರಂಭಿಸಲು ನಿರ್ಧರಿಸಲಾಗಿದೆ. ಈಗಾಗಲೇ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಕಾಲೇಜುಗಳ ಆಡಳಿತ ಮಂಡಳಿಗಳನ್ನು ಹಾಗೂ ವಿದ್ಯಾರ್ಥಿಗಳನ್ನು ವಿನಂತಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.

    ಮಾರ್ಗಸೂಚಿ ಏನಿದೆ?
    * ನಿತ್ಯ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡುವುದು ಕಡ್ಡಾಯ.
    * ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
    * ವಿದ್ಯಾರ್ಥಿಗಳಿಗೆ ಸ್ಯಾನಿಟೈಸ್ ವ್ಯವಸ್ಥೆ ಮಾಡಬೇಕು.
    * ತರಗತಿ ಮುಗಿದ ಬಳಿಕ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಬೇಕು.
    * ಪ್ರತಿ ಕ್ಯಾಂಪಸ್‍ಗಳಲ್ಲಿ ಆರೋಗ್ಯ ಸಹಾಯವಾಣಿ ಪ್ರಾರಂಭಿಸಬೇಕು.

    * ಬೋಧಕ-ಬೋಧಕೇತರ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಧರಿಸಬೇಕು.
    * ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರದ ಬಗ್ಗೆ ಅಗತ್ಯ ಜಾಗೃತಿ ಮೂಡಿಸಬೇಕು.
    * ಕನಿಷ್ಠ ಸಾಮಾಜಿಕ ಅಂತರದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಬೇಕು.
    * ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ಶುಚಿತ್ವ ಕಾಪಾಡಬೇಕು.
    * ವಾಹನ ವ್ಯವಸ್ಥೆ ಇರೋ ಕಾಲೇಜುಗಳು ನಿತ್ಯ ವಾಹನಗಳನ್ನು ಸ್ಯಾನಿಟೈಸ್ ಮಾಡಬೇಕು.

    * ಶೈಕ್ಷಣಿಕ ವರ್ಷ ತಡವಾಗಿರೋದ್ರಿಂದ ಶನಿವಾರ ಪೂರ್ತಿ ತರಗತಿ, ರಜೆಗಳಿಗೆ ಬ್ರೇಕ್ ಹಾಕಲು ನಿರ್ಧಾರ.
    * ಶನಿವಾರ-ಭಾನುವಾರ ಆನ್‍ಲೈನ್ ತರಗತಿಗೆ ಹೆಚ್ಚು ಒತ್ತು ನೀಡುವುದು.
    * ಶಿಫ್ಟ್ ಪ್ರಕಾರ ತರಗತಿ ನಡೆಸಲು ನಿರ್ಧಾರ.
    * ಒಂದು ತರಗತಿಯಲ್ಲಿ 30 ವಿದ್ಯಾರ್ಥಿಗಳಿಗೆ ಮಾತ್ರ ಪಾಠ ಮಾಡಲು ಅವಕಾಶ.
    * ಮಾರ್ಗಸೂಚಿ ಅನುಷ್ಠಾನಕ್ಕೆ ಪ್ರಾಂಶುಪಾಲರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ.

  • ಚಿಕ್ಕಮಗಳೂರಿನಲ್ಲಿ 30 ತಿಂಗಳಲ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆ: ಸುಧಾಕರ್

    ಚಿಕ್ಕಮಗಳೂರಿನಲ್ಲಿ 30 ತಿಂಗಳಲ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆ: ಸುಧಾಕರ್

    – 400ಕ್ಕೂ ಹೆಚ್ಚು ಹಾಸಿಗೆಗಳ ಸುಸಜ್ಜಿತ ಕಾಲೇಜು
    – ರಾಜ್ಯದಲ್ಲಿ 2,500 ವೈದ್ಯರ ನೇರ ನೇಮಕ

    ಬೆಂಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ 24ರಿಂದ 30 ತಿಂಗಳಲ್ಲಿ ಸುಸಜ್ಜಿತ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣವಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಕಾಲೇಜಿನ ಕಟ್ಟಡ ನಿರ್ಮಾಣ ಯೋಜನೆ ಹಾಗೂ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

    ಕಟ್ಟಡದ ನಿರ್ಮಾಣದ ಭೂಮಿ ಪೂಜೆಗೆ ಡಿಸೆಂಬರಿನಲ್ಲಿ ದಿನ ಗೊತ್ತುಪಡಿಸಲಾಗುವುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಕಟ್ಟಡ ವಿನ್ಯಾಸ ಉತ್ತಮವಾಗಿದ್ದು, ಕೆಲ ಬದಲಾವಣೆ ಸೂಚಿಸಲಾಗಿದೆ. 400ಕ್ಕೂ ಹೆಚ್ಚು ಹಾಸಿಗೆ ಇರುವ ಈ ವೈದ್ಯಕೀಯ ಕಾಲೇಜಿನ ಜೊತೆಗೆ 200 ಹಾಸಿಗೆಯ ತಾಯಿ-ಶಿಶುವಿನ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

    ಮುಂದಿನ ಜೂನ್ ವೇಳೆಗೆ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ವ್ಯಾಸಂಗ ಮಾಡಬಹುದು. ಅದಕ್ಕಾಗಿ ತಾತ್ಕಾಲಿಕ ಕಟ್ಟಡ ಗುರುತಿಸಿದ್ದು, ಹೊಸ ಕಟ್ಟಡ ನಿರ್ಮಾಣ ಬಳಿಕ ಸ್ಥಳಾಂತರಿಸಲಾಗುತ್ತದೆ. ಜೊತೆಗೆ ಎನ್‍ಎಂಸಿ ನಿಯಮದಂತೆ, 3 ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಒಂದು ನಗರ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗುವುದು. 69 ಬೋಧಕ ಸಿಬ್ಬಂದಿ ನೇಮಕಕ್ಕೆ ಈಗಾಗಲೇ ಪರವಾನಗಿ ನೀಡಿದ್ದು, 91 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ನಾಲ್ಕರಲ್ಲಿ ವೈದ್ಯ ಹುದ್ದೆ ಭರ್ತಿ ಮಾಡಲಾಗುವುದು ಎಂದು ವಿವರಿಸಿದರು.

    ಚಿಕ್ಕಮಗಳೂರಿನಲ್ಲಿ ದಿನಕ್ಕೆ 1,900 ಕೋವಿಡ್ ಪರೀಕ್ಷೆ ನಿಗದಿಪಡಿಸಿದ್ದು, ಇದಕ್ಕೂ ಹೆಚ್ಚಿನ ಪರೀಕ್ಷೆ ನಡೆಯುತ್ತಿದೆ. ಇದರಿಂದಾಗಿ ಸೋಂಕು ನಿಯಂತ್ರಣಕ್ಕೆ ಬಂದಿದೆ. ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ಶೇ.1.08 ರಷ್ಟಿದೆ. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ, ಹೆಚ್ಚು ಜನರಿಗೆ ಚಿಕಿತ್ಸೆ ನೀಡಬೇಕೆಂದು ಸೂಚಿಸಲಾಗಿದೆ ಎಂದರು.

    ಪ್ರತಿ ತಿಂಗಳು ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆರೋಗ್ಯ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಸ್ಥಳೀಯ ಆರೋಗ್ಯಾಧಿಕಾರಿಗಳ ಮೇಲೆ ನಿಗಾ ಇರಿಸಿ, ಸೌಲಭ್ಯಗಳು ಜನರಿಗೆ ತಲುಪಲು ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ. ಜನೌಷಧಿ ಮಳಿಗೆಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಆರಂಭಿಸಲು ತೀರ್ಮಾನಿಸಿದ್ದು, ಈ ಬಗ್ಗೆಯೂ ಚರ್ಚೆಯಾಗಿದೆ ಎಂದು ವಿವರಿಸಿದರು.

    2,500 ವೈದ್ಯರ ನೇಮಕ
    ರಾಜ್ಯದಲ್ಲಿ 2,500 ವೈದ್ಯರ ನೇರ ನೇಮಕ ಪ್ರಕ್ರಿಯೆ ಆರಂಭವಾಗಿದೆ. ನವೆಂಬರ್ ಅಂತ್ಯದ ವೇಳೆಗೆ ಪ್ರಕ್ರಿಯೆ ಮುಗಿಯಲಿದೆ. ವೈದ್ಯರ ಕೊರತೆ ಆಗಬಾರದು ಎಂಬ ದೃಢ ಸಂಕಲ್ಪ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಸಚಿವರು ಹೇಳಿದ ಇತರೆ ಅಂಶಗಳು
    1. ನವೆಂಬರ್ ಅಂತ್ಯದೊಳಗೆ ಹೋಮ್ ಸ್ಟೇಗಳ ಮಾಹಿತಿ ಪಡೆದು ಅಲ್ಲಿ ಇರುವವರ ಮೇಲೆ ನಿಗಾ ಇರಿಸಲಾಗುತ್ತದೆ. ಅವರಿಗೆ ಕೋವಿಡ್ ಪರೀಕ್ಷೆ ಮಾಡಲಾಗುವುದು.
    2. ಚಿಕ್ಕಮಗಳೂರು ತಾಲೂಕು ಆಸ್ಪತ್ರೆಗಳಲ್ಲಿ 50 ಹಾಸಿಗೆಗಳಿಗೆ ಆಕ್ಸಿಜನ್ ಅಳವಡಿಸಲಾಗಿದೆ.
    3. ಖಾಸಗಿ ಆಸ್ಪತ್ರೆಗಳು ಹೆಚ್ಚು ಶುಲ್ಕ ವಸೂಲಿ ಮಾಡಿದರೆ, ಪರವಾನಗಿ ರದ್ದು ಮಾಡುವ ಕಠಿಣ ಕ್ರಮ ಕೈಗೊಳ್ಳಲಾಗುವುದು.
    4. ಸರ್ಕಾರಕ್ಕೆ ಕಠಿಣ ಸವಾಲುಗಳಿವೆ. ಕೋವಿಡ್ ನಿಂದಾದ ಆರ್ಥಿಕ ಸಂಕಷ್ಟ, ಅತಿವೃಷ್ಟಿ ಮೊದಲಾದ ಸವಾಲುಗಳು ಬಂದಿವೆ. ಸರ್ಕಾರ ಎಂದರೆ ಅಕ್ಷಯಪಾತ್ರೆ ಅಲ್ಲ. ಇಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ವಿದ್ಯುತ್ ದರ ಏರಿಕೆ ಮಾಡಲಾಗಿದೆ.
    5. ಪರಿಸರ ಸ್ನೇಹಿ ಪಟಾಕಿ ಸಿಡಿಸಲು ಅವಕಾಶವಿದೆ. ಸರ್ಕಾರಕ್ಕೆ ಜನರ ಆರೋಗ್ಯ ಮುಖ್ಯವೇ ಹೊರತು ಯಾರದ್ದೇ ಲಾಭವಲ್ಲ.
    6. ಕೆಲ ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆಯನ್ನು ಪಿಪಿಪಿ ಮಾದರಿಯಲ್ಲಿ ಮಾಡಲಾಗಿದೆ. ಆದರೆ ನಿರ್ವಹಣೆ ಮಾಡುತ್ತಿದ್ದ ಕಂಪನಿ ಆರ್ಥಿಕ ಸಂಕಷ್ಟಕ್ಕೊಳಗಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು.

  • ದಿನಕ್ಕೆ 1 ಸಾವಿರ ಕೋವಿಡ್-19 ಟೆಸ್ಟ್ ಗುರಿ- ಸಚಿವ ಸುಧಾಕರ್

    ದಿನಕ್ಕೆ 1 ಸಾವಿರ ಕೋವಿಡ್-19 ಟೆಸ್ಟ್ ಗುರಿ- ಸಚಿವ ಸುಧಾಕರ್

    – ಟೆಸ್ಟ್ ಹೆಚ್ಚಿಸುವಂತೆ ಮೆಡಿಕಲ್ ಕಾಲೇಜು, ಖಾಸಗಿ ಸಂಸ್ಥೆಗಳಿಗೆ ಸೂಚನೆ
    – 10- 15 ದಿನಗಳಲ್ಲಿ ಟೆಸ್ಟ್ ಹೆಚ್ಚಿಸಲು ಗಡುವು

    ಬೆಂಗಳೂರು: ಕೋವಿಡ್-19 ಪರೀಕ್ಷೆ ವಿಷಯದಲ್ಲಿ ನಿರ್ಲಕ್ಷ್ಯ ತೋರಿಸುವ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಮುಂದಿನ 10-15 ದಿನಗಳಲ್ಲಿ ಪ್ರತಿ ದಿನ 500ರಿಂದ 1 ಸಾವಿರ ಟೆಸ್ಟ್ ಗಳವರೆಗೆ ಗುರಿ ತಲುಪಬೇಕು. ಈ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಸರ್ಕಾರ ಕಳೆದ ನಾಲ್ಕು ತಿಂಗಳಿಂದ ಅನೇಕ ಸೂಚನೆಗಳನ್ನು ನೀಡಿದೆ. ಲ್ಯಾಬ್ ಸ್ಥಾಪನೆಗೆ ಅಗತ್ಯವಿರುವ ನೆರವು ನೀಡಲಾಗಿದೆ. ಸಿಬ್ಬಂದಿಗೆ ನಿಮ್ಹಾನ್ಸ್ ಮೂಲಕ ತರಬೇತಿ ನೀಡಲಾಗಿದೆ. ಆದರೂ ಸರ್ಕಾರದ ಜೊತೆ ಕೈಜೋಡಿಸುತ್ತಿಲ್ಲ. ಇಂತಹ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಮೆಡಿಕಲ್ ಕಾಲೇಜುಗಳಲ್ಲಿ ಪ್ರಯೋಗಾಲಯ ಸ್ಥಾಪನೆ ಮಾಡುವುದು ಕಡ್ಡಾಯ. ಎಂಸಿಐನಿಂದ ಸ್ಪಷ್ಟ ನಿದರ್ಶನಗಳಿವೆ. ಆದರೂ ಕೆಲವರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇನ್ನು ಇಂತಹ ಮೀನಮೇಷ ವರ್ತನೆಯನ್ನು ಸಹಿಸುವುದಿಲ್ಲ ಎಂದರು.

    ರಾಜ್ಯದಲ್ಲಿ ಸೋಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಟೆಸ್ಟ್ ಫಲಿತಾಂಶ ವಾರಗಳವರೆಗೆ ಬರುತ್ತಿಲ್ಲ ಎಂಬ ದೂರುಗಳಿವೆ. ಇನ್ನು ಮುಂದೆ 24 ರಿಂದ 30 ಗಂಟೆಗಳಲ್ಲಿ ವರದಿ ಕೈಸೇರಬೇಕು. ಈ ಉದ್ದೇಶದಿಂದ ಹಿರಿಯ ಅಧಿಕಾರಿ ಶಾಲಿನಿ ರಜನೀಶ್ ಅವರಿಗೆ ಇದರ ಉಸ್ತುವಾರಿಗೆ ನಿಯೋಜಿಸಲಾಗಿದೆ ಎಂದರು.

    ಕೊಪ್ಪಳ ಆಸ್ಪತ್ರೆಯಲ್ಲಿ ಕನಿಷ್ಠ ಸಿಬ್ಬಂದಿ ಇಟ್ಟುಕೊಂಡು 1200 ಟೆಸ್ಟ್‍ಗಳನ್ನು ಮಾಡಿ ರಾಜ್ಯಕ್ಕೆ ಮಾದರಿಯಾಗಿದೆ. ಉಳಿದ ಸಂಸ್ಥೆಗಳು ಈ ಗುರಿ ತಲುಪಬೇಕು. ಅದಕ್ಕಾಗಿ ಅಗತ್ಯ ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನು ಅಳವಡಿಸಬೇಕು. ಪ್ರತಿದಿನ ಮಾಡುವ ಟೆಸ್ಟ್ ಮತ್ತು ಬಾಕಿ ಉಳಿದ ಸ್ಯಾಂಪಲ್ ವಿವರಗಳನ್ನು ರಾಜ್ಯದ ಡ್ಯಾಷ್ ಬೋಡ್9ನಲ್ಲಿ ಸಿಗುವಂತೆ ಎಲ್ಲರೂ ಮಾಹಿತಿ ಒದಗಿಸಬೇಕು. ಇದಕ್ಕಾಗಿಯೇ ಡಾಟಾ ಆಪರೇಟರ್ ಗಳನ್ನು ನೇಮಕ ಮಾಡಬೇಕು. ಇನ್ನು ಮುಂದೆ ನೆಪಗಳನ್ನು ಹೇಳುವಂತಿಲ್ಲ ಎಂದರು.

    ರೋಗ ಲಕ್ಷಣ ಇದ್ದವರು ಮತ್ತು ಇಲ್ಲದವರ ಸ್ಯಾಂಪಲ್ ಗಳನ್ನು ಸರ್ಕಾರ ನೀಡಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಟೆಸ್ಟ್ ಮಾಡಬೇಕು. ಚೌಕಾಸಿ ಪ್ರಶ್ನೆಯೇ ಇಲ್ಲ. ಮೆಡಿಕಲ್ ಕಾಲೇಜು ಹೊರತು ಪಡಿಸಿ ಇರುವ ಖಾಸಗಿ ಪ್ರಯೋಗಾಲಯಗಳ ಜೊತೆ ಬುಧವಾರ ಮತ್ತೊಂದು ಸುತ್ತಿನ ಸಭೆ ನಡೆಸಿ ಪರಾಮರ್ಶೆ ಮಾಡಲಾಗುತ್ತದೆ ಎಂದು ಸಚಿವರು ಎಂದು ತಿಳಿಸಿದರು.

    ಪ್ರಯೋಗಾಲಯ ಸ್ಥಾಪನೆ, ಸಿಬ್ಬಂದಿ ತರಬೇತಿ ಹಾಗೂ ನಾನಾ ಸಂಸ್ಥೆಗಳ ಅಕ್ರಡೇಶನ್ ಕೊಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತ್ತಿರುವ ನಿಮ್ಹಾನ್ಸ್ ನ ಡಾ.ರವಿ ಅವರನ್ನು ಸಚಿವರು ಅಭಿನಂದಿಸಿದರು. ಮುಂದಿನ ಹತ್ತು ದಿನಗಳಲ್ಲಿ ಬಾಕಿ ಇರುವ 25 ರಿಂದ 30 ಪ್ರಯೋಗಾಲಯಗಳನ್ನು ಸ್ಥಾಪಿಸಿ ಟೆಸ್ಟ್ ಗಳ ವಿಷಯದಲ್ಲಿ ಗೊಂದಲ ಉದ್ಭವಿಸದಂತೆ ನೋಡಿಕೊಳ್ಳಬೇಕು ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದರು.