Tag: Medal

  • ಗಂಗಾ ನದಿಯಲ್ಲಿ ಪದಕ ವಿಸರ್ಜಿಸಲು ಮುಂದಾದ ಕುಸ್ತಿಪಟುಗಳನ್ನು ತಡೆದ ರೈತ ಹೋರಾಟಗಾರ

    ಗಂಗಾ ನದಿಯಲ್ಲಿ ಪದಕ ವಿಸರ್ಜಿಸಲು ಮುಂದಾದ ಕುಸ್ತಿಪಟುಗಳನ್ನು ತಡೆದ ರೈತ ಹೋರಾಟಗಾರ

    ನವದೆಹಲಿ: ಸರ್ಕಾರ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (WFI) ಮುಖ್ಯಸ್ಥ ಹಾಗೂ ಬಿಜೆಪಿ (BJP) ಸಂಸದ ಬ್ರಿಜ್ ಭೂಷಣ್ ಸಿಂಗ್ (Brij Bhushan Sharan Singh) ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಹಿನ್ನೆಲೆ ಬೇಸತ್ತ ಕುಸ್ತಿಪಟುಗಳು (Wrestlers) ತಮ್ಮ ಪದಕಗಳನ್ನು (Medals) ಗಂಗಾ ನದಿಯಲ್ಲಿ (Ganga River) ವಿಸರ್ಜಿಸಲು ಮುಂದಾಗಿದ್ದರು. ಕುಸ್ತಿಪಟುಗಳ ಈ ನಡೆಯನ್ನು ಸದ್ಯ ತಡೆಯಲಾಗಿದ್ದು, ಸಿಂಗ್ ಬಂಧನಕ್ಕೆ 5 ದಿನಗಳ ಕಾಲಾವಕಾಶ ನೀಡಲು ಒಪ್ಪಿಕೊಂಡಿದ್ದಾರೆ.

    ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪವನ್ನು ಹೊರಿಸಿ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ತಮ್ಮ ಪದಕಗಳನ್ನು ಸಂಜೆ 6 ಗಂಟೆಗೆ ಹರಿದ್ವಾರದ ಬಳಿ ಗಂಗಾ ನದಿಯಲ್ಲಿ ಎಸೆಯುವುದಾಗಿ ಪ್ರಕಟಿಸಿದ್ದರು. ಗಂಗೆಯಲ್ಲಿ ಪದಕಗಳನ್ನು ವಿಸರ್ಜಿಸಲು ಮುಂದಾದಾಗ ರೈತ ಹೋರಾಟಗಾರ ನರೇಶ್ ಟಿಕಾಯತ್ ಕುಸ್ತಿಪಟುಗಳ ಮೆಡಲ್‌ಗಳನ್ನು ಪಡೆದುಕೊಂಡಿದ್ದಾರೆ.

    ಬಳಿಕ ಕುಸ್ತಿಪಟುಗಳೊಂದಿಗೆ ಮಾತುಕತೆ ನಡೆಸಿದ ನರೇಶ್ ಟಿಕಾಯತ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರೆ. ಮುಂದಿನ 5 ದಿನಗಳೊಳಗೆ ಬ್ರಿಜ್ ಭೂಷಣ್ ಬಂಧನವಾಗದಿದ್ದರೆ ಮತ್ತೆ ಹರಿದ್ವಾರಕ್ಕೆ ಬಂದು ಪದಕಗಳನ್ನು ವಿಸರ್ಜಿಸುವುದಾಗಿ ಕುಸ್ತಿಪಟುಗಳು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ Vs ಡಿಎಂಕೆ – ಬಿಜೆಪಿ ಕಾರ್ಯಕರ್ತ ಜಡೇಜಾ ಆಟದಿಂದ ಚೆನ್ನೈಗೆ ಜಯ ಎಂದ ಅಣ್ಣಾಮಲೈ

    ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ ಹಲವು ದಿನಗಳಿಂದ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದರು. ನೂತನ ಸಂಸತ್ ಭವನದತ್ತವೂ ತೆರಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದರು. ಇದನ್ನೂ ಓದಿ: ಮನೆಗೆ ಅತ್ತೆಯೇ ಸಿನಿಯರ್, ಅತ್ತೆ ಒಪ್ಪಿದ್ರಷ್ಟೇ ಸೊಸೆಗೆ 2,000 – ಲಕ್ಷ್ಮಿ ಹೆಬ್ಬಾಳ್ಕರ್

  • CWG 2022: 61 ಪದಕ ಬಾಚಿದ ಭಾರತಕ್ಕೆ 4 ನೇ ಸ್ಥಾನ

    CWG 2022: 61 ಪದಕ ಬಾಚಿದ ಭಾರತಕ್ಕೆ 4 ನೇ ಸ್ಥಾನ

    ಲಂಡನ್: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 ಕೊನೆಗೂ ಮುಕ್ತಾಯಗೊಂಡಿದೆ. ಭಾರತದ ಕ್ರೀಡಾಪಟುಗಳು ಅದ್ಭುತ ಪ್ರದರ್ಶನಗಳನ್ನು ನೀಡಿ ಒಟ್ಟು 61 ಪದಕಗಳನ್ನು ಗೆದ್ದು, ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ವೇದಿಕೆಯಲ್ಲಿ 4ನೇ ಸ್ಥಾನ ಗಳಿಸುವಂತೆ ಮಾಡಿದ್ದಾರೆ.

    ಈ ಬಾರಿ ಭಾರತ 22 ಚಿನ್ನ, 16 ಬೆಳ್ಳಿ ಹಾಗೂ 23 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದು, ಇದು ಭಾರತದ ಕಾಮನ್‌ವೆಲ್ತ್‌ನ 5ನೇ ಅತ್ಯುತ್ತಮ ಪ್ರದರ್ಶನವಾಗಿದೆ. ಈ ಹಿಂದೆ 2010ರಲ್ಲಿ ಭಾರತ 38 ಚಿನ್ನ ಸೇರಿದಂತೆ 101 ಪದಕಗಳನ್ನು ಗೆದ್ದು ಅತ್ಯುತ್ತಮ ಪ್ರದರ್ಶನ ನೀಡಿತ್ತು. ಮ್ಯಾಂಚೆಸ್ಟರ್-2002ರಲ್ಲಿ 69 ಪದಕ, ಗೋಲ್ಡ್ ಕೋಸ್ಟ್-2018ರಲ್ಲಿ 66 ಪದಕ ಹಾಗೂ ಗ್ಲಾಸ್ಗೋ-2014ರಲ್ಲಿ 64 ಪದಕಗಳನ್ನು ಭಾರತ ಪಡೆದಿತ್ತು.

    ಈ ಬಾರಿ ಆಸ್ಟ್ರೇಲಿಯಾ 67 ಚಿನ್ನದೊಂದಿಗೆ ಒಟ್ಟು 178 ಪದಕಗಳನ್ನು ಪಡೆದು ಪ್ರಥಮ ಸ್ಥಾನಕ್ಕೇರಿದೆ. ಇಂಗ್ಲೆಂಡ್ 57 ಚಿನ್ನದೊಂದಿಗೆ 176 ಪದಕಗಳನ್ನು ಪಡೆದರೆ, ಕೆನಡಾ 26 ಚಿನ್ನದೊಂದಿಗೆ ಒಟ್ಟು 92 ಪದಕಗಳನ್ನು ಪಡೆದಿದೆ. ಇದನ್ನೂ ಓದಿ: CWG 2022: 40ರ ಹುಮ್ಮಸ್ಸಿನಲ್ಲೂ TTಯಲ್ಲಿ ಚಿನ್ನ ಗೆದ್ದ ಅಚಂತ ಶರತ್

    ಈ ಹಿಂದೆ ಶೂಟಿಂಗ್‌ನಲ್ಲಿ ಭಾರತ ಹೆಚ್ಚಿನ ಪದಕಗಳನ್ನು ಗೆಲ್ಲುತ್ತಿದ್ದು, ಈ ಬಾರಿ ಕಾಮನ್‌ವೆಲ್ತ್‌ನಿಂದ ಅದನ್ನು ಕೈ ಬಿಡಲಾಗಿತ್ತು. ಆದರೂ ಭಾರತ ಇತರ ಆಟಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅಗ್ರ 5 ಸ್ಥಾನಗಳಲ್ಲೊಂದಾಗಲು ಸಾಧ್ಯವಾಯಿತು. ಕುಸ್ತಿಯಲ್ಲಿ ಭಾರತ ಹೆಚ್ಚಿನ ಪದಕಗಳನ್ನು ಗೆದ್ದಿದ್ದು, 12 ಪದಕಗಳನ್ನು ಬಾಚಿಕೊಂಡಿದೆ. ವೇಟ್‌ಲಿಫ್ಟಿಂಗ್‌ನಲ್ಲಿ 10 ಪದಕಗಳನ್ನು ಗೆದ್ದರೆ, ಟೇಬಲ್ ಟೆನ್ನಿಸ್‌ನಲ್ಲಿ 7 ಪದಕಗಳು ಭಾರತದ ಪಾಲಾಗಿದೆ.

    ಒಟ್ಟು ಪದಕಗಳು:
    ಕುಸ್ತಿಯಲ್ಲಿ 6 ಚಿನ್ನ, 1 ಬೆಳ್ಳಿ, 5 ಕಂಚು. ಟೇಬಲ್ ಟೆನ್ನಿಸ್‌ನಲ್ಲಿ 4 ಚಿನ್ನ, 1 ಬೆಳ್ಳಿ, 2 ಕಂಚು. ವೈಟ್‌ಲಿಫ್ಟಿಂಗ್‌ನಲ್ಲಿ 3 ಚಿನ್ನ, 3 ಬೆಳ್ಳಿ, 4 ಕಂಚು. ಬಾಕ್ಸಿಂಗ್‌ನಲ್ಲಿ 3 ಚಿನ್ನ, 1 ಬೆಳ್ಳಿ, 3 ಕಂಚು. ಬ್ಯಾಡ್ಮಿಂಟನ್‌ನಲ್ಲಿ 3 ಚಿನ್ನ, 1 ಬೆಳ್ಳಿ, 2 ಕಂಚು. ಅಥ್ಲೆಟಿಕ್ಸ್ನಲ್ಲಿ 1 ಚಿನ್ನ, 4 ಬೆಳ್ಳಿ, 3 ಕಂಚು. ಲಾನ್ ಬೌಲ್ಸ್‌ನಲ್ಲಿ 1 ಚಿನ್ನ, 1 ಬೆಳ್ಳಿ. ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ 1 ಚಿನ್ನ. ಜುಡೋದಲ್ಲಿ 2 ಬೆಳ್ಳಿ, 1 ಕಂಚು. ಹಾಕಿಯಲ್ಲಿ 1 ಬೆಳ್ಳಿ, 1 ಕಂಚು. ಕ್ರಿಕೆಟ್‌ನಲ್ಲಿ 1 ಬೆಳ್ಳಿ. ಸ್ಕ್ವಾಷ್‌ನಲ್ಲಿ 2 ಕಂಚು. ಇದನ್ನೂ ಓದಿ: ಕೈಜಾರಿದ ಚಿನ್ನ – ಹಾಕಿಯಲ್ಲಿ ಬೆಳ್ಳಿಗೆ ತೃಪ್ತಿಪಟ್ಟ ಭಾರತ

    Live Tv
    [brid partner=56869869 player=32851 video=960834 autoplay=true]

  • ಸಂಸ್ಕೃತದಲ್ಲಿ 5 ಚಿನ್ನದ ಪದಕಗಳನ್ನ ಗೆದ್ದ ಮುಸ್ಲಿಂ ದಿನಗೂಲಿ ಕಾರ್ಮಿಕನ ಮಗಳು

    ಸಂಸ್ಕೃತದಲ್ಲಿ 5 ಚಿನ್ನದ ಪದಕಗಳನ್ನ ಗೆದ್ದ ಮುಸ್ಲಿಂ ದಿನಗೂಲಿ ಕಾರ್ಮಿಕನ ಮಗಳು

    ಲಕ್ನೋ: ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯೊಬ್ಬಳು ಲಕ್ನೋ ವಿಶ್ವವಿದ್ಯಾನಿಲಯದ (ಎಲ್‍ಸಿ) ಸ್ನಾತಕೋತ್ತರ ಪದವಿಯ (ಎಂಎ) ಸಂಸ್ಕೃತ ವಿಷಯದಲ್ಲಿ ಐದು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

    ಲಕ್ನೋ ವಿಶ್ವವಿದ್ಯಾನಿಲಯದ (ಎಲ್‍ಸಿ) ವಿದ್ಯಾರ್ಥಿನಿ ಗಜಲ ಅವರಿಗೆ ಪ್ರೋ. ಶಶಿ ಶುಕ್ಲಾ ಪದಕಗಳನ್ನು ಪ್ರದಾನ ಮಾಡಿದರು. ಕಳೆದ ವರ್ಷ ನವೆಂಬರ್‍ನಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಈ ಕುರಿತು ಘೋಷಣೆ ಮಾಡಲಾಗಿತ್ತು. ಕೋವಿಡ್ ಕಾರಣದಿಂದ ಎಲ್ಲ ವಿದ್ಯಾರ್ಥಿಗಳಿಗೆ ಪದಕ ನೀಡಲು ಸಾಧ್ಯವಾಗಿರಲಿಲ್ಲ.

    ದಿನಗೂಲಿ ಕಾರ್ಮಿಕನ ಮಗಳಾಗಿರುವ ಗಜಲ, 5 ಭಾಷೆಯನ್ನು (ಇಂಗ್ಲಿಷ್, ಹಿಂದಿ, ಉರ್ದು, ಅರೆಬೀಕ್, ಸಂಸ್ಕೃತ) ಬಲ್ಲವಳಾಗಿದ್ದಾಳೆ. 10ನೇ ತರಗತಿಯಲ್ಲಿದ್ದಾಗ ಆಕೆಯ ತಂದೆ ನಿಧನರಾದರು. ಬಳಿಕ ಶಿಕ್ಷಣ ಮುಂದುವರಿಸಲು ತೊಂದರೆ ಎದುರಾಗಿತ್ತು. ಆದರೆ ಇಬ್ಬರು ಸಹೋದರರ ಬೆಂಬಲದಿಂದ ಶಿಕ್ಷಣ ಮುಂದುವರಿಸಲು ಗಜಲಳಿಗೆ ಸಾಧ್ಯವಾಯಿತು. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?

    ಸಂಸ್ಕೃತ ವಿಷಯವನ್ನು ಏಕೆ ಆರಿಸಿದ್ದೀರಿ ಎಂದು ಕೇಳಿದಾಗ, ದೇವರ ಸ್ವಂತ ಭಾಷೆಯಾಗಿರುವ ಸಂಸ್ಕೃತ ಎಲ್ಲ ಭಾಷೆಗಳಿಗೆ ತಾಯಿ. ಇದು ದೈವಿಕವಾಗಿದ್ದು, ಸಾಹಿತ್ಯವಾಗಿದೆ. ಸಂಸ್ಕೃತ ಕಾವ್ಯವು ಹೆಚ್ಚು ಮಧುರವಾಗಿದೆ. ಈ ಪದಕಗಳನ್ನು ನನ್ನಿಂದಾಗಿ ಅಲ್ಲ, ನನ್ನ ಸಹೋದರಾದ ಶದಾಬ್ ಹಾಗೂ ನಬಾವ್ ಅವರ ಸಹಾಯದಿಂದ ಗಳಿಸಲು ಸಾಧ್ಯವಾಗಿದೆ. ಅವರಿಬ್ಬರು ಸಣ್ಣ ವಯಸ್ಸಿನಲ್ಲಿಯೇ ಗ್ಯಾರೇಜ್‍ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಇದರಿಂದಾಗಿ ನನಗೆ ಅಧ್ಯಯನ ಮುಂದುವರಿಸಲು ಸಾಧ್ಯವಾಯಿತು. ಗಜಲಗೆ ತಾಯಿ ನಸ್ರೀನ್ ಬಾನು ಹಾಗೂ ಸಹೋದರಿ ಯಾಸ್ಮೀನ್ ಕೂಡಾ ಇದ್ದಾರೆ. ಅಲ್ಲದೆ ಭವಿಷ್ಯದಲ್ಲಿ ಸಂಸ್ಕೃತ ಪ್ರಾಧ್ಯಾಪಕಿಯಾಗುವ ಗುರಿ ಎಂದಿದ್ದಾರೆ.

  • ರಾಷ್ಟ್ರಮಟ್ಟದ ಸ್ಕೇಟಿಂಗ್ – ಏಕಾಂಶ್ ಕುಮಾರ್‌ಗೆ 1 ಬೆಳ್ಳಿ, 1 ಕಂಚಿನ ಪದಕ

    ರಾಷ್ಟ್ರಮಟ್ಟದ ಸ್ಕೇಟಿಂಗ್ – ಏಕಾಂಶ್ ಕುಮಾರ್‌ಗೆ 1 ಬೆಳ್ಳಿ, 1 ಕಂಚಿನ ಪದಕ

    ಬೆಂಗಳೂರು: ರೋಲರ್ ಸ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾ ಡಿ.15 ರಿಂದ 22ರವರೆಗೆ ದೆಹಲಿಯಲ್ಲಿ ಆಯೋಜಿಸಿದ 59ನೇ ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಏಕಾಂಶ್ ಕುಮಾರ್.ಎನ್ ಎರಡು ಪದಕಗಳನ್ನು ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

    14 ರಿಂದ 17 ವರ್ಷದೊಳಗಿನ ರಾಷ್ಟ್ರಮಟ್ಟದ ಇನ್‍ಲೈನ್ ಸ್ಕೇಟಿಂಗ್‍ನ ಜ್ಯೂನಿಯರ್ಸ್ ಬಾಲಕರ ವಿಭಾಗದಲ್ಲಿ ಏಕಾಂಶ್ ಕುಮಾರ್ ಎನ್ 1,000 ಮೀಟರ್ ರಿಂಕ್ ರೇಸ್‍ನಲ್ಲಿ ಬೆಳ್ಳಿ ಪದಕ ಹಾಗೂ ರಿಂಕ್ ರಿಲೇ ರೇಸ್‍ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಫೆ.12,13 ರಂದು ಐಪಿಎಲ್ ಮೆಗಾ ಹರಾಜು?

    ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಮೂರು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದ ಏಕಾಂಶ್ ಕುಮಾರ್.ಎನ್ ರಾಷ್ಟ್ರ ಮಟ್ಟದಲ್ಲೂ ಪದಕ ಪಡೆದು ಸಾಧನೆ ಮಾಡಿದ್ದಾರೆ. ಏಕಾಂಶ್ ಬೆಂಗಳೂರಿನ ಅಪೋಲೋ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನಲ್ಲಿ 8ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು, ಹೊಸಕೆರೆ ಹಳ್ಳಿ ನವೀನ್ ಕುಮಾರ್ ಹಾಗೂ ಸೌಮ್ಯ ಟಿ.ಆರ್ ದಂಪತಿಯ ಪುತ್ರ. ಬೆಂಗಳೂರಿನ ಫೋರ್ಸ್ ವನ್ ಸ್ಕೇಟಿಂಗ್ ಕ್ಲಬ್‍ನ ಸದಸ್ಯರಾಗಿದ್ದು, ತರಬೇತುದಾರಾದ ಪ್ರತೀಕ್ ರಾಜ ಹಾಗೂ ಕುಮಾರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಬಿಸಿಸಿಐಯನ್ನು ಟೀಕಿಸಿ ಕೊಹ್ಲಿ ಪರ ಅಫ್ರಿದಿ ಬ್ಯಾಟಿಂಗ್

  • ಆರ್ಚರಿ ಕಂಚಿನ ಪದಕ ಗೆದ್ದ ಹರ್ವಿಂದರ್ ಸಿಂಗ್

    ಆರ್ಚರಿ ಕಂಚಿನ ಪದಕ ಗೆದ್ದ ಹರ್ವಿಂದರ್ ಸಿಂಗ್

    ಟೋಕಿಯೋ: ಪ್ಯಾರಾಲಂಪಿಕ್ಸ್ ಭಾರತದ ಹರ್ವಿಂದರ್ ಸಿಂಗ್ ಆರ್ಚರಿಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತ ಕೂಟದಲ್ಲಿ 13ನೇ ಪದಕ ಗೆದ್ದುಕೊಂಡಿದೆ. ಇದನ್ನೂ ಓದಿ: ಪ್ಯಾರಾಲಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ- ಜಾವೆಲಿನ್ ಎಸೆದು ಚಿನ್ನ ಪಡೆದ ಸುಮಿತ್

    ಕಂಚಿನ ಪದಕದ ಹೋರಾಟದಲ್ಲಿ ದಕ್ಷಿಣ ಕೊರಿಯಾದ ಕಿಮ್ ಮಿನ್ ಸು ವಿರುದ್ಧ ಹರ್ವಿಂದರ್ ಸಿಂಗ್ 6-5 ಅಂತರದ ರೋಚಕ ಜಯದೊಂದಿಗೆ ಕಂಚಿನ ಪದಕದ ಪಡೆದುಕೊಂಡರು. ಈ ಮೂಲಕ ಇಂದು ಭಾರತ ಮೂರು ಪದಕಗಳನ್ನು ಗೆದ್ದಂತಾಗಿದೆ. ಇದನ್ನೂ ಓದಿ: ಶೂಟಿಂಗ್‍ನಲ್ಲಿ ಕಂಚು – ಭಾರತದ ಪರ ದಾಖಲೆ ಬರೆದ ಅವನಿ

    ಇಂದು ಬೆಳಗ್ಗೆ ಹೈಜಂಪ್ ವಿಭಾಗದಲ್ಲಿ ಭಾರತದ ಪ್ರವೀಣ್ ಕುಮಾರ್ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಬಳಿಕ ಮಹಿಳಾ ವಿಭಾಗದ 50 ಮೀಟರ್ ಏರ್ ರೈಫಲ್ ಶೂಟಿಂಗ್ ವಿಭಾಗದಲ್ಲಿ ಭಾರತದ ಶೂಟರ್ ಅವನಿ ಲೇಖರಾ ಕಂಚಿನ ಪದಕ ಪಡೆದಿದ್ದರು. ಇದೀಗ ಆರ್ಚರಿಯಲ್ಲಿ ಹರ್ವಿಂದರ್ ಸಿಂಗ್ ಕಂಚಿನ ಪದಕದೊಂದಿಗೆ ಭಾರತದ ಪದಕಗಳ ಸಂಖ್ಯೆ 13ಕ್ಕೆ ಏರಿಕೆ ಕಂಡಿದೆ. ಇದನ್ನೂ ಓದಿ: ಬೆಳ್ಳಿ ಪದಕ ಗೆದ್ದ ಪ್ರವೀಣ್ ಕುಮಾರ್‌ಗೆ ಮೋದಿ ವಿಶ್

  • ಜಾವೆಲಿನ್ ಎಸೆತ ಭಾರತಕ್ಕೆ ಅವಳಿ ಪದಕ

    ಜಾವೆಲಿನ್ ಎಸೆತ ಭಾರತಕ್ಕೆ ಅವಳಿ ಪದಕ

    ಟೋಕಿಯೋ: ಪ್ಯಾರಾಲಂಪಿಕ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಪುರುಷರ ಜಾವೆಲಿನ್ ಎಸೆತದಲ್ಲಿ ಭಾರತದ ಕ್ರೀಡಾಪಟುಗಳಾದ ದೇವೇಂದ್ರ ಝಝಾರಿಯಾ ಬೆಳ್ಳಿ ಪದಕ ಮತ್ತು ಸುಂದರ್ ಸಿಂಗ್ ಕಂಚಿನ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಅವಳಿ ಪದಕ ಗೆದ್ದಿದ್ದಾರೆ.

    ಈ ಹಿಂದೆ ಎರಡು ಬಾರಿ ಪ್ಯಾರಾಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದ ದೇವೇಂದ್ರ ಝಝಾರಿಯಾ ಈ ಬಾರಿ 64.35 ಮೀಟರ್ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದರು. ಇದಲ್ಲದೆ ತಮ್ಮ ವೈಯಕ್ತಿಕ ಅತ್ಯುನ್ನತ ಸಾಧನೆಗೆ ಪಾತ್ರರಾದರು. ಇದನ್ನೂ ಓದಿ: ಡಿಸ್ಕಸ್ ಥ್ರೋ ಬೆಳ್ಳಿ ಪದಕ ಗೆದ್ದ ಯೋಗೇಶ್ ಕಥುನಿಯಾ

    ಝಝಾರಿಯಾ ಬೆಳ್ಳಿ ಗೆದ್ದರೆ ಇದೇ ಸ್ಪರ್ಧೆಯಲ್ಲಿ ಭಾರತದ ಇನ್ನೋರ್ವ ಕ್ರೀಡಾಪಟು ಸುಂದರ್ ಸಿಂಗ್ ಗುರ್ಜಾರ್ ಕಂಚಿನ ಪದಕ ಪಡೆದುಕೊಂಡರು. 64.01 ಮೀಟರ್ ಎಸೆದ ಸುಂದರ್ ಸಿಂಗ್ ಗುರ್ಜಾರ್ ಭಾರತದ ಪದಕ ಪಟ್ಟಿಯನ್ನು ಹೆಚ್ಚಿಸಿದರಲ್ಲದೆ ಒಂದೇ ವಿಜಯ ವೇದಿಕೆಯಲ್ಲಿ ಇಬ್ಬರು ಒಂದೇ ದೇಶದ ಕ್ರೀಡಾಪಟುಗಳು ಒಟ್ಟಿಗೆ ಪದಕ ಸ್ವೀಕರಿಸುವ ವಿಶೇಷ ಸನ್ನಿವೇಶಕ್ಕೆ ದಾರಿ ಮಾಡಿಕೊಟ್ಟರು.

    ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಭಾರತದ ಪರ ಮೂವರು ಆಟಗಾರರಾದ ದೇವೇಂದ್ರ ಝಝಾರಿಯಾ, ಸುಂದರ್ ಸಿಂಗ್ ಗುರ್ಜಾರ್ ಮತ್ತು ಸಜೀತ್ ಸಿಂಗ್ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಶ್ರೀಲಂಕಾದ ಹೆರಾತ್ ಮುಡಿಯನ್ಸ್ 67.79 ಮೀಟರ್ ದೂರ ಎಸೆದು ಚಿನ್ನದ ಪದಕ ಗೆದ್ದುಕೊಂಡರು. ಇದನ್ನೂ ಓದಿ: ಶೂಟಿಂಗ್‍ನಲ್ಲಿ ಚಿನ್ನ ಗೆದ್ದ ಅವನಿ ಲೇಖರಾ

  • ಟೋಕಿಯೋ ಒಲಿಂಪಿಕ್ಸ್​ನ ಚಿನ್ನದ ಮೀನು ಡ್ರೆಸ್ಸೆಲ್

    ಟೋಕಿಯೋ ಒಲಿಂಪಿಕ್ಸ್​ನ ಚಿನ್ನದ ಮೀನು ಡ್ರೆಸ್ಸೆಲ್

    ಟೋಕಿಯೋ: ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ನ ಈಜು ಸ್ಪರ್ಧೆಯಲ್ಲಿ 5 ಚಿನ್ನದ ಪದಕ ಗೆಲ್ಲುವ ಮೂಲಕ ಅಮೆರಿಕದ ಕೇಲೆಬ್ ಡ್ರೆಸೆಲ್ ಚಿನ್ನದ ಮೀನಾಗಿದ್ದಾರೆ.

    ಈ ಹಿಂದೆ ಅಮೆರಿಕಾದವರೇ ಆದ ಮೈಕಲ್ ಫೆಲ್ಫ್ಸ್ ಈಜು ಸ್ಪರ್ಧೆಯ ಚಿನ್ನದ ಮೀನಾಗಿದ್ದರು. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಅವರು ಸ್ಪರ್ಧಿಸುತ್ತಿಲ್ಲ. ಆದರೆ ಅವರದೇ ದೇಶದ ಡ್ರೆಸೆಲ್ ಸ್ವಿಮ್ಮಿಂಗ್‍ನಲ್ಲಿ 5 ಚಿನ್ನವನ್ನು ಗೆಲ್ಲುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶಿಸಿದ ಭಾರತೀಯ ಮಹಿಳಾ ಹಾಕಿ ತಂಡ

    ಡ್ರೆಸೆಲ್ ಜುಲೈ 26ರಂದು 4/100 ಮೀ. ಫ್ರೀಸ್ಟೈಲ್ ರಿಲೇಯಲ್ಲಿ ಮೊದಲ ಚಿನ್ನ ಪಡೆದರೆ, ಜುಲೈ 29ರಂದು 100 ಮೀ. ಫ್ರೀಸ್ಟೈಲ್‍ನಲ್ಲಿ ಎರಡನೇ ಚಿನ್ನ, ಜುಲೈ 31ರಂದು 100 ಮೀ. ಬಟರ್‍ಫ್ಲೈನಲ್ಲಿ ಮೂರನೇ ಚಿನ್ನ, ಆಗಸ್ಟ್ 1ರಂದು ನಡೆದ 50 ಮೀ. ಫ್ರೀಸ್ಟೈಲ್ ನಾಲ್ಕು ಮತ್ತು 4/100 ಮೀ. ಮೆಡ್ಲೆ ರಿಲೇ ಸ್ಪರ್ಧೆಯಲ್ಲಿ 5ನೇ ಚಿನ್ನದ ಪದಕ ಗೆದ್ದು ಚಿನ್ನದ ಮೀನಾಗಿ ಮಿನುಗಿದ್ದಾರೆ.

    ಈ ಹಿಂದೆ 2008ರಲ್ಲಿ ಮೈಕೆಲ್ ಫೆಲ್ಫ್ಸ್ 8 ಚಿನ್ನ, 2004ರಲ್ಲಿ 6 ಚಿನ್ನ, 2016ರಲ್ಲಿ 5 ಚಿನ್ನ ಗೆದ್ದಿದ್ದರು. 1972ರಲ್ಲಿ ಆಂಡ್ರೋ ಸ್ಪಿಟ್ಜ್ 7 ಚಿನ್ನ, 1988ರಲ್ಲಿ ಕ್ರಿಸ್ಟಿನ್ ಒಟ್ಟೋ 6 ಚಿನ್ನ, 1988ರಲ್ಲಿ ಮ್ಯಾಥ್ಯೂ ನಿಕೋಲಸ್ ಬಿಯಾಂಡಿ 5 ಚಿನ್ನ ಗೆದ್ದಿದ್ದರು. ಇದೀಗ ಡ್ರೆಸೆಲ್ 5 ಚಿನ್ನ ಗೆಲ್ಲುವ ಮೂಲಕ ಒಂದೇ ಒಲಿಂಪಿಕ್ಸ್​ನಲ್ಲಿ 5 ಚಿನ್ನ ಗೆದ್ದ ಐದನೇ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

  • ಒಲಿಂಪಿಕ್ಸ್ ಕ್ರೀಡಾಪಟುಗಳು ಗೆದ್ದ ಪದಕವನ್ನು ಕಚ್ಚಲು ಇದು ಅಸಲಿ ಕಾರಣ!

    ಒಲಿಂಪಿಕ್ಸ್ ಕ್ರೀಡಾಪಟುಗಳು ಗೆದ್ದ ಪದಕವನ್ನು ಕಚ್ಚಲು ಇದು ಅಸಲಿ ಕಾರಣ!

    ಟೋಕಿಯೋ: ಒಲಿಂಪಿಕ್ಸ್ ಅಥವಾ ಬೇರೆ ಯಾವುದೇ ಕ್ರೀಡಾಕೂಟದಲ್ಲೂ ಕೂಡ ಆಥ್ಲೀಟ್ಸ್ ಗಳು ತಾವು ಪದಕ ಗೆದ್ದರೆ ಅದನ್ನು ಕಚ್ಚುವ ಫೋಟೋ ನಾವು ನೋಡಿರುತ್ತೇವೆ. ಹಾಗಾದರೆ ಈ ರೀತಿ ಪದಕ ಕಚ್ಚಲು ಕಾರಣವೇನು? ಈ ಕುರಿತು ಅಸಲಿ ಕಾರಣ ಕೇಳಿದರೆ ನೀವು ಕೂಡ ಒಂದು ಕ್ಷಣ ನಗುತ್ತೀರಿ.

    ಹೌದು, ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಆಥ್ಲೀಟ್ಸ್ ಗಳು ಕಷ್ಟ ಪಟ್ಟು ತಮ್ಮ ದೇಶಕ್ಕಾಗಿ, ರಾಜ್ಯಕ್ಕಾಗಿ, ಚಿನ್ನ, ಬೆಳ್ಳಿ ಅಥವಾ ಕಂಚಿನ ಪದಕ ಗೆದ್ದರೆ ಆ ಪದಕವನ್ನು ಕಚ್ಚಿಕೊಂಡು ನಿಂತಿರುವ ಫೋಟೋವನ್ನು ಸಾಕಷ್ಟು ಬಾರಿ ನಾವೆಲ್ಲರೂ ನೋಡಿದ್ದೇವೆ. ಪದಕ ಕಚ್ಚುವುದು ಇತಿಹಾಸದಿಂದಲೂ ನಡೆದುಕೊಂಡು ಬರುತ್ತಿದೆ. ಈ ಹಿಂದೆ ಚಿನ್ನದ ವ್ಯಾಪಾರಿಗಳು ಅಸಲಿ ಚಿನ್ನವನ್ನು ತಿಳಿಯಲು ಕಚ್ಚುತ್ತಿದ್ದರಂತೆ. ಅಸಲಿ ಚಿನ್ನ ಮೃದು ಲೋಹವಾಗಿರುವುದರಿಂದ ಕಚ್ಚಿದ ಭಾಗದಲ್ಲಿ ಹಲ್ಲಿನ ಗುರುತು ಕಾಣಿಸಿಕೊಳ್ಳುತ್ತಿತ್ತು. ಈ ಮೂಲಕ ಅಸಲಿ ಮತ್ತು ನಕಲಿ ಚಿನ್ನವನ್ನು ಪತ್ತೆ ಹಚ್ಚುತ್ತಿದ್ದರಂತೆ. ಇದನ್ನೂ ಓದಿ: ನನ್ನ ದೇಶಕ್ಕಾಗಿ ಬೆಳ್ಳಿ ಪದಕ ಗೆದ್ದಿದ್ದು ಅತೀವ ಆನಂದ ನೀಡಿದೆ: ಮೀರಾಬಾಯಿ ಚಾನು

    ಆದರೆ ಕ್ರೀಡಾಪಟುಗಳು ಕೂಡ ಈ ರೀತಿ ಚಿನ್ನವನ್ನು ಪರೀಕ್ಷಿಸುತ್ತಿದ್ದಾರ ಎಂಬ ಅನುಮಾನ ಮೂಡಿದರೆ ಅದು ತಪ್ಪು. ಒಲಿಂಪಿಕ್ಸ್‍ನಲ್ಲಿ ನೀಡುವ ಪದಕ ಪೂರ್ತಿ ಚಿನ್ನದಾಗಿರುವುದಿಲ್ಲ ಅಲ್ಪ ಪ್ರಮಾಣದ ಚಿನ್ನದ ಲೇಪಣ ಇರುತ್ತದೆ. ಇದು ಕ್ರೀಡಾಪಟುಗಳಿಗು ತಿಳಿದಿದೆ. ಆದರೂ ಕೂಡ ಆಥ್ಲೀಟ್ಸ್‍ಗಳು ಮಾತ್ರ ಆತನ ಕಣ್ಣಿಗೆ ಸುಂದರವಾಗಿ ಕಾಣಲು ಪದಕವನ್ನು ಕಚ್ಚುತ್ತಾರೆ ಎಂಬುದು ಬಯಲಾಗಿದೆ.

    ಹಾಗಾದರೆ ಆತ ಯಾರು ಗೊತ್ತ ಆತ ಬೇರೆಯಾರು ಅಲ್ಲ ಫೋಟೋಗ್ರಾಫರ್. ಹೌದು ಪದಕ ಗೆದ್ದ ಕ್ರೀಡಾಪಟುಗಳು ಪದಕ ಗೆದ್ದ ಖುಷಿಯನ್ನು ಬೇರೆ ಬೇರೆ ರೀತಿಯಾಗಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯಲು ಈ ಹಿಂದೆ ಫೋಟೋಗ್ರಾಫರ್ ಒಬ್ಬರು ಪದಕವನ್ನು ಕಚ್ಚಿ ಫೋಸ್ ನೀಡುವಂತೆ ಕ್ರೀಡಾಪಟುವಿಗೆ ಸೂಚಿಸಿದ್ದರಂತೆ. ಅದು ಮುಂದುವರಿದಿದ್ದು, ಇದೀಗ ಕೂಡ ಪದಕ ಗೆದ್ದವರು ಈ ರೀತಿ ಪದಕ ಕಚ್ಚಿಕೊಂಡು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ.

  • ನಾಳೆ ಭಾರತಕ್ಕೆ ಹಿಂದಿರುಗಲಿದ್ದಾರೆ ಮೀರಾಬಾಯಿ ಚಾನು

    ನಾಳೆ ಭಾರತಕ್ಕೆ ಹಿಂದಿರುಗಲಿದ್ದಾರೆ ಮೀರಾಬಾಯಿ ಚಾನು

    ಟೋಕಿಯೋ: ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದು ಕೊಟ್ಟ ವೇಟ್‍ಲಿಫ್ಟರ್ ಮೀರಾಬಾಯಿ ಚಾನು ಜುಲೈ 26ಕ್ಕೆ ಭಾರತಕ್ಕೆ ಹಿಂದಿರುಗಲಿದ್ದಾರೆ.

    ಟೋಕಿಯೋ ಒಲಿಂಪಿಕ್ಸ್‌ನಲ್ಲಿ 49 ಕೆ.ಜಿ ವಿಭಾಗದ ವೇಟ್‍ಲಿಫ್ಟಿಂಗ್‍ನಲ್ಲಿ 26 ವರ್ಷದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರು. ಈ ಮೂಲಕ ಯಶಸ್ವಿಯಾಗಿ ತನ್ನ ಸ್ಪರ್ಧೆ ಮುಗಿಸಿರುವ ಮೀರಾಬಾಯಿ ಚಾನು ನಾಳೆ ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ ವೇಳೆಗೆ ಬಂದಿಳಿಯಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬೆಳ್ಳಿ ಪದಕ ಗೆದ್ದ ಮೀರಾಬಾಯಿಗೆ ಡೊಮಿನೊಸ್ ಕಡೆಯಿಂದ ಜೀವನ ಪೂರ್ತಿ ಪಿಜ್ಜಾ

    49 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗಳಿಸಿ ಕೊಟ್ಟ ಕೀರ್ತಿಗೆ ಭಾಜನರಾಗಿದ್ದಾರೆ. ಚೀನಾದ ಹೊ ಜಿಹೂಹು ಒಟ್ಟು 210 ಕೆಜಿ (94+116 ಕೆಜಿ) ಭಾರ ಎತ್ತಿ ಚಿನ್ನದ ಪದಕ ಬೇಟೆಯಾಡಿದರೆ, ಮೀರಾಬಾಯಿ ಚಾನು 202 ಕೆಜಿ (87+115 ಕೆಜಿ) ಭಾರ ಎತ್ತಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಇಂಡೋನೇಷ್ಯಾದ ಐಸಾಹ್ ವಿಂಡಿ ಕಾಂಟಿಕಾ ವಿಂಡಿ 194 ಕೆಜಿ (84+110ಕೆಜಿ) ಕಂಚಿನ ಪದಕ ಪಡೆದರು.

    84 ಕೆಜಿ ಮತ್ತು 87 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದ ಮಿರಾಬಾಯ್ ಚಾನು 89 ಕೆಜಿ ಭಾರ ಎತ್ತುವಲ್ಲಿ ವಿಫಲರಾದರು. ಆದರೆ ಚೀನಾದ ಸ್ಪರ್ಧಿ ಜಿಹೂಹು 94 ಕೆಜಿ ಭಾರ ಎತ್ತಿ ಒಲಿಂಪಿಕ್ ದಾಖಲೆ ಬರೆದರು. ಇದು ಒಲಿಂಪಿಕ್ಸ್‍ನಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ಶ್ರೇಷ್ಠ ಸಾಧನೆಯಾಗಿದೆ. ಈ ಹಿಂದೆ ಸಿಡ್ನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದರು. 69 ಕೆಜಿ ವಿಭಾಗದಲ್ಲಿ ಕರ್ಣಂ ಮಲ್ಲೇಶ್ವರಿ ಅವರು ಕಂಚಿನ ಪದಕ ಗಳಿಸಿದ್ದರು.

  • ನನ್ನ ದೇಶಕ್ಕಾಗಿ ಬೆಳ್ಳಿ ಪದಕ ಗೆದ್ದಿದ್ದು ಅತೀವ ಆನಂದ ನೀಡಿದೆ: ಮೀರಾಬಾಯಿ ಚಾನು

    ನನ್ನ ದೇಶಕ್ಕಾಗಿ ಬೆಳ್ಳಿ ಪದಕ ಗೆದ್ದಿದ್ದು ಅತೀವ ಆನಂದ ನೀಡಿದೆ: ಮೀರಾಬಾಯಿ ಚಾನು

    ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ಗಳಿಸಿಕೊಟ್ಟ ಹೆಮ್ಮೆಯ ವೇಟ್‍ಲಿಫ್ಟರ್ ಮೀರಾಬಾಯಿ ಚಾನು ನನ್ನ ದೇಶಕ್ಕಾಗಿ ಬೆಳ್ಳಿ ಪದಕ ಗೆದ್ದಿರುವುದು ಅತೀವ ಆನಂದ ನೀಡಿದೆ ಎಂದು ಹೇಳಿದ್ದಾರೆ.

    ಪದಕ ಗೆದ್ದ ಖುಷಿಯನ್ನು ಟ್ವೀಟ್ ಮೂಲಕ ಹಂಚಿಕೊಂಡ ಮೀರಾಬಾಯಿ ಚಾನು, ಇದು ನನಗೆ ಕನಸು ನನಸಾದ ಗಳಿಗೆ. ಈ ಗೆಲುವನ್ನು ನನ್ನ ದೇಶ ಹಾಗೂ ನನ್ನ ಗೆಲುವಿಗಾಗಿ ನನ್ನ ಜರ್ನಿಯುದ್ದಕ್ಕೂ ಪಾರ್ಥಿಸಿದ ಕೋಟ್ಯಂತರ ಜನರಿಗೆ ಅರ್ಪಿಸುತ್ತೇನೆ. ತಮ್ಮ ಕುಟುಂಬದ ಪ್ರೋತ್ಸಾಹ ನನ್ನೊಂದಿಗೆ ಸದಾ ಇತ್ತು. ತಮ್ಮ ತಾಯಿ ತಮಗಾಗಿ ಮಾಡಿದ ತ್ಯಾಗ ಮತ್ತು ತನ್ನ ಮೇಲೆ ನಂಬಿಕೆಯಿಂದ ಈ ಗೆಲುವು ಸಾಧ್ಯವಾಯಿತು. ಸರ್ಕಾರದ ಪ್ರೋತ್ಸಾಹ ಹಾಗೂ ಕೋಚ್ ವಿಜಯ್ ಶರ್ಮಾ ಅವರಿಗೆ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಟ್ವಿಟ್ಟರ್‍ ನಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

    ಮೀರಾಬಾಯಿ ಚಾನುಗೆ ಡಾ.ನಾರಾಯಣಗೌಡ ಅಭಿನಂದನೆ
    ಟೋಕಿಯೋ ಒಲಿಂಪಿಕ್ಸ್‍ನ ಮಹಿಳೆಯರ 49 ಕೆಜಿ ವಿಭಾಗದ ವೇಟ್‍ಲಿಫ್ಟಿಂಗ್‍ನಲ್ಲಿ ಬೆಳ್ಳಿ ಪದಕ ಗೆದ್ದ ಮಣಿಪುರದ ಮೀರಾಬಾಯಿ ಚಾನು ಅವರಿಗೆ ಕರ್ನಾಟಕದ ಯುವ ಸಬಲೀಕರಣ ಮತ್ತು ಕ್ರೀಡೆ ಸಚಿವ ಡಾ. ನಾರಾಯಣಗೌಡ ಅಭಿನಂದನೆ ಸಲ್ಲಿಸಿದ್ದಾರೆ.


    ಮೀರಾಬಾಯಿ ಚಾನು ಅವರ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಭಾರತೀಯರ ನಿರೀಕ್ಷೆ ಹುಸಿಗೊಳಿಸದ ಮೀರಾ ಅವರು ಮೊದಲ ದಿನವೇ ಬೆಳ್ಳಿ ಪದಕ ಗೆದ್ದು ಶುಭಾರಂಭ ಮಾಡಿದ್ದಾರೆ. ಮೀರಾ ಅವರ ಗೆಲುವು ಭಾರತದ ಎಲ್ಲ ಕ್ರೀಡಾಪಟುಗಳಲ್ಲಿ ಇನ್ನಷ್ಟು ಹುಮ್ಮಸ್ಸು ತುಂಬುವಂತೆ ಮಾಡಿದೆ. ಪದ್ಮಶ್ರೀ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಮೀರಾಬಾಯಿ ಚಾನು ಅವರು ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಪದಕ ಬೇಟೆಗೆ ನಾಂದಿ ಹಾಡಿದ ಮೀರಾ ಅವರಿಗೆ ಸಚಿವರು ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಸಂಭ್ರಮ – ಮೀರಾಬಾಯಿ ಚಾನುವಿಗೆ ಬೆಳ್ಳಿ!

     ಭಾರತಕ್ಕೆ ಮೊದಲ ಪದಕ ಸಂಭ್ರಮ:
    49 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ 26 ವರ್ಷದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ಗಳಿಸಿ ಕೊಟ್ಟಿದ್ದಾರೆ. ಚೀನಾದ ಹೊ ಜಿಹೂಹು ಒಟ್ಟು 210 ಕೆಜಿ (94+116 ಕೆಜಿ) ಭಾರ ಎತ್ತಿ ಚಿನ್ನದ ಪದಕ ಬೇಟೆಯಾಡಿದರೆ, ಮೀರಾಬಾಯಿ ಚಾನು 202 ಕೆಜಿ (87+115 ಕೆಜಿ) ಭಾರ ಎತ್ತಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಇಂಡೋನೇಷ್ಯಾದ ಐಸಾಹ್ ವಿಂಡಿ ಕಾಂಟಿಕಾ ವಿಂಡಿ 194 ಕೆಜಿ (84+110ಕೆಜಿ) ಕಂಚಿನ ಪದಕ ಪಡೆದರು.

    84 ಕೆಜಿ ಮತ್ತು 87 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದ ಮಿರಾಬಾಯ್ ಚಾನು 89 ಕೆಜಿ ಭಾರ ಎತ್ತುವಲ್ಲಿ ವಿಫಲರಾದರು. ಆದರೆ ಚೀನಾದ ಸ್ಪರ್ಧಿ ಜಿಹೂಹು 94 ಕೆಜಿ ಭಾರ ಎತ್ತಿ ಒಲಿಂಪಿಕ್ ದಾಖಲೆ ಬರೆದರು. ಇದು ಒಲಿಂಪಿಕ್ಸ್ ನಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ಶ್ರೇಷ್ಠ ಸಾಧನೆಯಾಗಿದೆ. ಈ ಹಿಂದೆ ಸಿಡ್ನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದರು. 69 ಕೆಜಿ ವಿಭಾಗದಲ್ಲಿ ಕರ್ಣಂ ಮಲ್ಲೇಶ್ವರಿ ಅವರು ಕಂಚಿನ ಪದಕ ಗಳಿಸಿದ್ದರು.