Tag: meal

  • ಹೊಟ್ಟೆ ತುಂಬಾ ಊಟವೂ ಸಿಗ್ತಿಲ್ಲ: ಚಿಕ್ಕಮಗಳೂರಲ್ಲಿ ಬಾಣಂತಿ ಗೋಳು

    ಹೊಟ್ಟೆ ತುಂಬಾ ಊಟವೂ ಸಿಗ್ತಿಲ್ಲ: ಚಿಕ್ಕಮಗಳೂರಲ್ಲಿ ಬಾಣಂತಿ ಗೋಳು

    – ಊಟವಿಲ್ಲದೇ ಬಳಲುತ್ತಿರುವ ನಿರಾಶ್ರಿತ ಹಕ್ಕಿ-ಪಿಕ್ಕಿ ಕುಟುಂಬಗಳು

    ಚಿಕ್ಕಮಗಳೂರು: ಕೊರೊನಾ ಎಫೆಕ್ಟ್‍ನಿಂದ ಹೊಟ್ಟೆ ತುಂಬಾ ಊಟ ಸಿಗದೆ ಬಾಣಂತಿಯೊಬ್ಬರು ತನ್ನ ಹಸುಗೂಸಿಗೆ ಹೊಟ್ಟೆ ತುಂಬಾ ಹಾಲು ಕುಡಿಸಲು ಪರಿತಪ್ಪಿಸುತ್ತಿರುವಂತಹ ಸ್ಥಿತಿ ಚಿಕ್ಕಮಗಳೂರಿನಲ್ಲಿ ನಿರ್ಮಾಣವಾಗಿದೆ.

    ಹಣ್ಣು-ತರಕಾರಿ ಸೇರಿದಂತೆ ಪೌಷ್ಠಿಕ ಆಹಾರ ಸಿಗದೆ ಬಾಣಂತಿಯೂ ಸೊರಗಿದ್ದು, ಹಸುಗೂಸಿಗೆ ತಾಯಿಯ ಎದೆಹಾಲು ಕೂಡ ಸರಿಯಾಗಿ ಸಿಗುತ್ತಿಲ್ಲ. ನಗರದ ಹಿರೇಮಗಳೂರಿನ ರೈಲ್ವೆ ಬ್ರಿಡ್ಜ್ ಕೆಳಗೆ ಬಯಲಲ್ಲಿ ಶೆಡ್ ಹಾಕಿಕೊಂಡು ಬದುಕುತ್ತಿರುವ ನಿರಾಶ್ರಿತ ಕುಟುಂಬಗಳು ಶೋಚನಿಯ ಸ್ಥಿತಿ ತಲುಪಿವೆ. ಅಂದೇ ದುಡಿದು ಅಂದೇ ತಿನ್ನುತ್ತಿದ್ದ ಈ ನಿರಾಶ್ರಿತ ಹಕ್ಕಿ-ಪಿಕ್ಕಿ ಕುಟುಂಬಗಳಿಗೆ ಕೊರೊನಾ ಕಾಲದಲ್ಲಿ ಹೊಟ್ಟೆ ತುಂಬಾ ಊಟವೂ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ.

    ಮಗುವಿಗೆ ಜನ್ಮ ನೀಡಿರುವ ಬಾಣಂತಿಯ ಆರೋಗ್ಯದಲ್ಲೂ ಏರುಪೇರಾಗಿದ್ದು ಹೊಟ್ಟೆ ತುಂಬಾ ಊಟವಿಲ್ಲದೆ ಆಕೆ ಬಳಲುತ್ತಿದ್ದರೆ, ಹೊಟ್ಟೆ ತುಂಬಾ ತಾಯಿಯ ಎದೆ ಹಾಲು ಸಿಗದ ಹಸುಗೂಸು ಸೊರಗಿ ಹೋಗಿದೆ. ಆರಂಭದ ದಿನದಲ್ಲಿ ದಿನಕ್ಕೆ ಒಂದು ಹೊತ್ತು ಯಾರಾದರೂ ತಂದುಕೊಟ್ಟರೆ ಊಟ ಮಾಡುತ್ತಿದ್ದರು. ಆದರೆ ಈಗ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ವಾರದ ಹಿಂದೆ ಉಳ್ಳವರು ತಂದು ಕೊಟ್ಟ ಸಾಮಾಗ್ರಿಗಳ ಕಿಟ್ ಮುಗಿದು ಹೋಗಿದ್ದು ಈ ಕುಟುಂಬಗಳು ನಾಳೆಯ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.

    14 ಕುಟುಂಬಗಳು ವಾಸವಿರುವ ಈ ಬಯಲಲ್ಲಿ 20ಕ್ಕೂ ಹೆಚ್ಚು ಮಕ್ಕಳಿವೆ. ಯಾರಾದರು ಬಂದರೆ ಮಕ್ಕಳು ಏನಾದರು ಕೊಡುತ್ತಾರೆಂದು ಬಂದವರ ಕೈಯನ್ನೆ ನೋಡುತ್ತವೆ. ನಾವು ಕೆಲಸಕ್ಕೆ ಹೋಗಿದ್ದರೆ ಏನೂ ಬೇಡವಾಗಿತ್ತು. ಆದರೆ ಈಗ ತಿಂಗಳಿಂದ ಕೆಲಸಕ್ಕೆ ಹೋಗಿಲ್ಲ. ಆಸ್ಪತ್ರೆಗೆ ಹೋಗಲು ದುಡ್ಡಿಲ್ಲ. ಊಟಕ್ಕೂ ಕಷ್ಟದ ಸ್ಥಿತಿ ಎದುರಾಗಿದೆ. ಯಾರಾದರೂ ರೇಷನ್ ಕೊಟ್ಟರೆ ಬದುಕುತ್ತೇವೆ ಎಂದು ಅಲ್ಲಿನ ಜನರು ಕಷ್ಟವನ್ನು ತೋಡಿಕೊಂಡಿದ್ದಾರೆ.

  • ಬಡವರಿಗೆ, ನಿರಾಶ್ರಿತರಿಗೆ ಊಟ ಪ್ಯಾಕ್ ಮಾಡಿದ ಕರಂದ್ಲಾಜೆ

    ಬಡವರಿಗೆ, ನಿರಾಶ್ರಿತರಿಗೆ ಊಟ ಪ್ಯಾಕ್ ಮಾಡಿದ ಕರಂದ್ಲಾಜೆ

    ಬೆಂಗಳೂರು: ಸಂಸದೆ ಶೋಭಾ ಕರಂದ್ಲಾಜೆ ಇಂದು ಬೆಂಗಳೂರು ಹೊರವಲಯ ನೆಲಮಂಗಲ ನಗರದ ಬಸವಣ್ಣದೇವರ ಮಠಕ್ಕೆ ಭೇಟಿ ನೀಡಿದ್ದಾಗ ಬಡವರಿಗೆ, ನಿರಾಶ್ರಿತರಿಗೆ ತಾವೇ ಊಟ ಪ್ಯಾಕ್ ಮಾಡಿದ್ದಾರೆ.

    ಪ್ರತಿನಿತ್ಯ ಸುಮಾರು 2,000 ಜನಕ್ಕೆ ಊಟ ತಯಾರಿಸುವ ಕೇಂದ್ರ ಇದ್ದಾಗಿದ್ದು, ಬಸವಣ್ಣದೇವರ ಮಠಕ್ಕೆ ಸಂಸದೆ 250 ಕೆ.ಜಿ ಅಕ್ಕಿ, 50 ಕೆ.ಜಿ ಬೇಳೆ ಪ್ಯಾಕೆಟ್ ನೀಡಿ, ಶ್ರೀಗಳ ಹಾಗೂ ಸ್ವಯಂ ಸೇವಕ ತಂಡಕ್ಕೆ ಧನ್ಯವಾದ ಹೇಳಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೆ, ಲಾಕ್‍ಡೌನ್ ಮುಂದುವರಿಕೆ ವಿಚಾರದ ಬಗ್ಗೆ ಪ್ರಧಾನಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯುತ್ತಿದೆ. ದೇಶದ ಪರಿಸ್ಥಿತಿಯನ್ನು ನೋಡಿಕೊಂಡು ಪ್ರಧಾನಿಗಳು ಕ್ರಮ ಕೈಗೊಳ್ತಾರೆ ಅದನ್ನು ಪಾಲಿಸಬೇಕು ಎಂದಿದ್ದಾರೆ.

    14ನೇ ತಾರೀಖಿಗೆ ಲಾಕ್‍ಡೌನ್ ಮುಗಿಯುವ ವಿಶ್ವಾಸ ಇತ್ತು. ಆದರೆ ದೆಹಲಿಯ ತಬ್ಲಿಘಿ ಸಂಘಟನೆ ಸಮಾವೇಶದಿಂದ ಕೊರೊನಾ ಸೋಂಕು ಹೆಚ್ಚಾಗಿ ಹರಡಿದೆ. ಸುಮಾರು 40% ಕೊರೊನಾ ಹಬ್ಬಲು ತಬ್ಲಿಘಿ ಕೊಡುಗೆ ಇದೆ. ತಬ್ಲಿಘಿ ಸಂಘಟನೆಯಲ್ಲಿ ಭಾಗಿಯಾದವರು ಸಾವಿರಾರು ಮಂದಿಗೆ ಕೊರೊನಾ ಹಬ್ಬಿಸಿದ್ದಾರೆ. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ ಎಂದರು.

    ಈ ವೇಳೆ ಪವಾಡ ಶ್ರೀ ಬಸವದೇವರ ಮಠದ ಸಿದ್ಧಲಿಂಗ ಸ್ವಾಮೀಜಿ, ಮಾಜಿ ಶಾಸಕ ನಾಗರಾಜು, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲಯ್ಯ, ತಹಶಿಲ್ದಾರ್ ಶ್ರೀನಿವಾಸಯ್ಯ, ಪಿಎಸ್‍ಐ ಮಂಜುನಾಥ್ ಹಾಗೂ ಸ್ವಯಂ ಸೇವಕರು ದಾನಿಗಳು ಹಾಜರಿದ್ದರು.

  • ಅಮ್ಮನ ತಿಥಿಗೆ 1,500 ಜನರಿಗೆ ಊಟ ಹಾಕಿಸಿದ ಮಗ – ಮನೆಯ 12 ಮಂದಿಗೀಗ ಕೊರೊನಾ ಪಾಸಿಟಿವ್

    ಅಮ್ಮನ ತಿಥಿಗೆ 1,500 ಜನರಿಗೆ ಊಟ ಹಾಕಿಸಿದ ಮಗ – ಮನೆಯ 12 ಮಂದಿಗೀಗ ಕೊರೊನಾ ಪಾಸಿಟಿವ್

    ಭೋಪಾಲ್: ವಿಶ್ವವ್ಯಾಪಿ ಹರಡುತ್ತಿರುವ ಕೊರೊನಾ ವೈರಸ್ ಅಟ್ಟಹಾಸ ಭಾರತದಲ್ಲಿಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಸೋಂಕು ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಈ ಮಧ್ಯೆ ಮಧ್ಯಪ್ರದೇಶದಲ್ಲಿ ಓರ್ವ ವ್ಯಕ್ತಿ ತನ್ನ ಅಮ್ಮನ ತಿಥಿಗೆ ಬರೋಬ್ಬರಿ 1,500 ಮಂದಿಗೆ ಊಟ ಹಾಕಿಸಿದ್ದು, ತಿಥಿ ಕಾರ್ಯದಲ್ಲಿ ಭಾಗಿಯಾಗಿದ್ದ 12 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಮಧ್ಯಪ್ರದೇಶದ ಮೊರೇನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೊರೇನಾ ಮೂಲದ ಸುರೇಶ್ ತನ್ನ ಅಮ್ಮ ತೀರಿಹೋದ ಮೇಲೆ ದುಬೈನಿಂದ ವಾಪಸ್ ಬಂದಿದ್ದನು. ಅಮ್ಮನ ತಿಥಿಗೆ ಸುಮಾರು 1,500 ಮಂದಿಗೆ ಆಹ್ವಾನಿಸಿ ಊಟ ಹಾಕಿಸಿದ್ದನು. ದುಬೈನಿಂದ ಬಂದ ಹಿನ್ನೆಲೆ ಆತನನ್ನು ಹೋಂ ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಅಲ್ಲದೇ ತಿಥಿ ಕಾರ್ಯದಲ್ಲಿ ಭಾಗಿಯಾಗಿ ಊಟ ಮಾಡಿ ಹೋಗಿದ್ದ ಇಡೀ ಕಾಲೋನಿಯನ್ನೇ ಸೀಲ್ ಮಾಡಲಾಗಿತ್ತು. ಆದರೆ ಇದೀಗ ಸುರೇಶ್ ಜೊತೆಗೆ ಆತನ ಕುಟುಂಬದ 12 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ತಿಥಿ ಊಟ ಮಾಡಿದ್ದ 1,500 ಜನರಿಗೂ ಕೊರೊನಾ ಸೋಂಕಿನ ಭಯ ಹುಟ್ಟಿದೆ.

    ದುಬೈನಿಂದ ಅಮ್ಮನ ಅಂತ್ಯಕ್ರಿಯೆಗೆಂದು ಊರಿಗೆ ಬಂದಿದ್ದ ಸುರೇಶ್ ಮಾ. 20ರಂದು ತನ್ನ ಕಾಲೋನಿ ಮತ್ತು ಸಂಬಂಧಿಕರು ಸೇರಿ ಸುಮಾರು 1,500 ಮಂದಿಗೆ ತಿಥಿಯ ಊಟ ಹಾಕಿಸಿದ್ದನು. ಮಾ. 25ರಂದು ಸುರೇಶ್‍ಗೆ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದನು. ಈ ವೇಳೆ ಕೊರೊನಾ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದರಿಂದ ಆತನನ್ನು ಮತ್ತು ಆತನ ಪತ್ನಿಯನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಬಳಿಕ ಆತನ ಸಂಪರ್ಕದಲ್ಲಿದ್ದ 23 ಸಂಬಂಧಿಕರನ್ನು ವೈದ್ಯರು ತಪಾಸಣೆ ನಡೆಸಿದಾಗ ಈ ಪೈಕಿ 10 ಮಂದಿಯ ವರದಿ ಕೊರೊನಾ ಪಾಸಿಟಿವ್ ಬಂದಿದೆ.

    12 ಸೋಂಕಿತರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ತಿಥಿಯಲ್ಲಿ ಪಾಲ್ಗೊಂಡಿದ್ದವರೆಲ್ಲರ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದ್ದು, ಅವರ ಮೇಲೆ ನಿಗಾ ಇರಿಸಲಾಗಿದೆ.

    ದುಬೈನಿಂದ ಬರುವ ಮುನ್ನ ತಪಾಸಣೆಗೆ ಒಳಗಾದಾಗ ತನಗೆ ಕೊರೊನಾ ಸೋಂಕು ತಗುಲಿರಲಿಲ್ಲ. ಆದರೆ ತಾನು ಹಾಗೂ ತನ್ನ ಪತ್ನಿ ಊರಿಗೆ ವಾಪಸ್ ಬರುವ ಎರಡು ದಿನಗಳ ಹಿಂದೆ ಪತ್ನಿ ಅನಾರೋಗ್ಯಕ್ಕೆ ತುತ್ತಾಗಿದ್ದಳು ಎಂದು ಸುರೇಶ್ ತಿಳಿಸಿದ್ದಾನೆ.

    ಈಗಾಗಲೇ ಭಾರತದಲ್ಲಿ ಸೋಂಕಿತರ ಸಂಖ್ಯೆ 2,547ಕ್ಕೆ ಏರಿದ್ದು, 67 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದಲ್ಲಿ ಸುಮಾರು 154 ಮಂದಿ ಕೊರೊನಾಗೆ ತುತ್ತಾಗಿದ್ದಾರೆ.

    ದೆಹಲಿಯ ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗಿಯಾಗಿದ್ದವರಲ್ಲಿ ಬಹುತೇಕ ಮಂದಿಗೆ ಕೊರೊನಾ ಸೋಂಕು ತಗುಲಿದೆ. ಭಾರತದಲ್ಲಿ ವರದಿಯಾಗಿರುವ ಕೊರೊನಾ ಸೋಂಕಿತರಲ್ಲಿ ಬಹುಪಾಲು ಮಂದಿ ಈ ಸಮಾವೇಶದಲ್ಲಿ ಭಾಗಿಯಾಗಿದ್ದವರೇ ಆಗಿದ್ದಾರೆ. 2,547 ಕೊರೊನಾ ಸೋಂಕಿತರಲ್ಲಿ 950 ಮಂದಿ ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗಿಯಾಗಿದ್ದವರು ಎಂದು ವರದಿಯಾಗಿದೆ.

  • ಕೊರೊನಾ ಎಫೆಕ್ಟ್ – ಒಂದು ಹೊತ್ತಿನ ಊಟಕ್ಕೆ ಕಷ್ಟಪಡುತ್ತಿರುವ ಕುಷ್ಟರೋಗಿಗಳು

    ಕೊರೊನಾ ಎಫೆಕ್ಟ್ – ಒಂದು ಹೊತ್ತಿನ ಊಟಕ್ಕೆ ಕಷ್ಟಪಡುತ್ತಿರುವ ಕುಷ್ಟರೋಗಿಗಳು

    ರಾಯಚೂರು: ಕೊರೊನಾ ಎಫೆಕ್ಟ್ ಹಿನ್ನೆಲೆ ರಾಯಚೂರಿನ ಕುಷ್ಟರೋಗಿಗಳ ಕಾಲೋನಿ ಜನಕ್ಕೆ ತುತ್ತು ಅನ್ನಕ್ಕೂ ಕಷ್ಟವಾಗಿದೆ. ಹೊರಗೆ ಭಿಕ್ಷೆ ಬೇಡಿ ಬದುಕುತ್ತಿದ್ದ ಜನರಿಗೆ ರಸ್ತೆಯಲ್ಲಿ ಜನರೇ ಇಲ್ಲದ ಕಾರಣಕ್ಕೆ ಭಿಕ್ಷೆಯೂ ಇಲ್ಲವಾಗಿದೆ.

    ಮಾಶಾಸನ, ರೇಷನ್ ಯಾವುದೂ ಸಿಗದೆ ಇಲ್ಲಿನ ಕುಷ್ಟ ರೋಗಿಗಳು ಹಾಗೂ ಇಲ್ಲಿನ ನೂರಾರು ಜನ ನಿವಾಸಿಗಳು ಊಟಕ್ಕಾಗಿ ಪರದಾಡುತ್ತಿದ್ದಾರೆ. ಊಟ ಕೊಡಿ, ರೇಷನ್ ಕೊಡಿ ಎಂದು ಜಿಲ್ಲಾಡಳಿತಕ್ಕೆ ಇಲ್ಲಿನ ಜನ ಒತ್ತಾಯ ಮಾಡಿದ್ದಾರೆ. ಎಲ್ಲೆಡೆ ಪಡಿತರ ಆರಂಭವಾಗಿದ್ದರೂ ಇವರಿಗೆ ಇನ್ನೂ ಪಡಿತರ ನೀಡುತ್ತಿಲ್ಲ. ಒಂದು ವಾರದಿಂದ ನಮ್ಮ ಬಗ್ಗೆ ವಿಚಾರಿಸುವವರೇ ಇಲ್ಲದಾಗಿದೆ. ನಾವು ಬದುಕುವುದು ಹೇಗೆ ನಮಗೆ ಸಹಾಯ ಮಾಡಿ ಎಂದು ಕಾಲೋನಿ ನಿವಾಸಿಗಳು ಒತ್ತಾಯಿಸಿದ್ದಾರೆ.

    ಸರ್ಕಾರ ಇಲ್ಲಿನ ಕುಷ್ಟರೋಗಿಗಳಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಪ್ರತ್ಯೇಕ ಬಡಾವಣೆಯನ್ನೇ ಮಾಡಿದೆ. ಆದರೆ ಕೊರೊನಾ ವೈರಸ್ ಭೀತಿಯಲ್ಲಿ ದೇಶವೇ ಲಾಕ್ ಡೌನ್ ಆಗಿದ್ದರಿಂದ ಇಲ್ಲಿನ ನಿವಾಸಿಗಳಿಗೆ ಊಟವೇ ಸಿಗುತ್ತಿಲ್ಲ. ಯಾರಾದರೂ ದಾನಿಗಳು ತಂದುಕೊಟ್ಟರೆ ಮಾತ್ರ ಊಟ ಎನ್ನುವಂತ ಪರಿಸ್ಥಿತಿಯಲ್ಲಿದ್ದಾರೆ.

  • ಬಡವರಿಗೆ ಊಟ ನೀಡದೆ ಖಾಸಗಿ ಆಸ್ಪತ್ರೆಗೆ ಕಟೀಲಿನಿಂದ ಆಹಾರ ರವಾನೆ

    ಬಡವರಿಗೆ ಊಟ ನೀಡದೆ ಖಾಸಗಿ ಆಸ್ಪತ್ರೆಗೆ ಕಟೀಲಿನಿಂದ ಆಹಾರ ರವಾನೆ

    ಮಂಗಳೂರು: ನಿರ್ವಸಿತ ಕೂಲಿ ಕಾರ್ಮಿಕರಿಗೆ ಮತ್ತು ನಿರ್ಗತಿಕರಿಗೆ ಮುಜರಾಯಿ ಇಲಾಖೆಯ ಎ ದರ್ಜೆಯ ದೇವಸ್ಥಾನಗಳಿಂದ ಊಟ ನೀಡಲು ಸರಕಾರ ಆದೇಶ ಮಾಡಿದೆ. ಆದರೆ ಎ ದರ್ಜೆಯ ಹೆಚ್ಚಿನ ದೇವಸ್ಥಾನಗಳಿಂದ ಈ ಆದೇಶ ಪಾಲನೆಯಾಗುತ್ತಿಲ್ಲ.

    ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಎ ದರ್ಜೆಯ ದೇವಸ್ಥಾನ ಆಗಿರುವ ಕಟೀಲು ದುರ್ಗಾಪರಮೇಶ್ವರಿ ದೇಗುಲದಿಂದ ಖಾಸಗಿ ಕೆಎಂಸಿ ಆಸ್ಪತ್ರೆಗೆ ಗುಪ್ತವಾಗಿ ಊಟ ರವಾನಿಸುತ್ತಿರುವ ವಿಡಿಯೋ ಈಗ ಹರಿದಾಡುತ್ತಿದೆ. ದೇವಸ್ಥಾನದ ಅಕ್ಕಿ ಬಳಸಿ, ಅಲ್ಲಿನ ಅಡುಗೆ ಕಾರ್ಮಿಕರ ಮೂಲಕ ಊಟ ರೆಡಿ ಮಾಡಲಾಗುತ್ತಿದ್ದು ದಿನವೊಂದಕ್ಕೆ ಎರಡು ಸಾವಿರ ಜನರಿಗೆ ಊಟ ತಯಾರಿಸಿ ಕೊಡಲಾಗುತ್ತಿದೆ. ದೇವಸ್ಥಾನದ ದುಡ್ಡಲ್ಲಿ ಊಟ ರೆಡಿ ಮಾಡಿಸಿ, ಕೆಎಂಸಿ ಆಸ್ಪತ್ರೆಗೆ ಮಾರಾಟ ಮಾಡಲಾಗುತ್ತಿದೆ ಅನ್ನುವ ಆರೋಪ ಕೇಳಿಬಂದಿದೆ.

    ದೇವಸ್ಥಾನಕ್ಕೆ ಸಾರ್ವಜನಿಕರಿಗೆ ಪ್ರವೇಶ ಇಲ್ಲದಿರುವ ಸಂದರ್ಭ ಇಷ್ಟೊಂದು ಭೋಜನ ತಯಾರಿಸುತ್ತಿರುವುದಲ್ಲದೆ, ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್ ನಲ್ಲಿ ಊಟ ರವಾನಿಸುತ್ತಿರುವ ಬಗ್ಗೆ ಸಾರ್ವಜನಿಕರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ದೇವಸ್ಥಾನದ ಆಡಳಿತ ವಹಿಕೊಂಡಿರುವ ಆಸ್ರಣ್ಣರ ಕಾರುಬಾರಿನಲ್ಲಿ ಸರ್ಕಾರಿ ದೇವಸ್ಥಾನದಿಂದ ಊಟ ಮಾರಾಟ ಮಾಡಲಾಗುತ್ತಿದೆಯೇ ಅನ್ನುವ ಪ್ರಶ್ನೆ ಎದುರಾಗಿದೆ.

    ಬಡ ಕೂಲಿ ಕಾರ್ಮಿಕರಿಗೆ ಊಟ ಪೂರೈಸುವ ಬಗ್ಗೆ ಪ್ರಶ್ನೆ ಮಾಡಿದರೆ ಅಡುಗೆ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ ಎಂದು ನೆಪ ಹೇಳುತ್ತಾರೆ. ಈಗ ಕೆಎಂಸಿ ಅಂಬುಲೆನ್ಸ್ ನಲ್ಲಿ ಊಟ ರವಾನಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

  • 100ಕ್ಕೂ ಹೆಚ್ಚು ಜನರಿಗೆ ಊಟ ಹಾಕಿದ ಧಾರವಾಡ ಎಸ್‍ಪಿ – ಸ್ವತಃ ನಿಂತು ಊಟ ಬಡಿಸಿದ್ರು

    100ಕ್ಕೂ ಹೆಚ್ಚು ಜನರಿಗೆ ಊಟ ಹಾಕಿದ ಧಾರವಾಡ ಎಸ್‍ಪಿ – ಸ್ವತಃ ನಿಂತು ಊಟ ಬಡಿಸಿದ್ರು

    ಧಾರವಾಡ: ಕೊರೊನಾ ಭೀತಿಯಿಂದ ರಸ್ತೆ ಮೂಲಕ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಸೇರಿದಂತೆ ಕರ್ತವ್ಯದ ಮಧ್ಯೆಯೂ ಅನೇಕ ಪೊಲೀಸರು ಊಟ ಹಾಕಿ ಮಾನವೀಯತೆ ಮೆರೆದಿದ್ದಾರೆ.

    ಶಿವಮೊಗ್ಗದಿಂದ ರಾಜಸ್ಥಾನಕ್ಕೆ ನಡೆದುಕೊಂಡೇ ಹೊರಟಿದ್ದ ಅನೇಕ ಕಾರ್ಮಿಕರು ಹಾಗೂ ಕಾರಿನಲ್ಲಿ ಹೊರಟಿದ್ದ ರಾಜಸ್ಥಾನ ಮೂಲದ ಕುಟುಂಬಗಳಿಗೆ ತೆಗೂರ ಬಳಿ ಖುದ್ದು ಎಸ್‍ಪಿಯೇ ಊಟ ಬಡಿಸಿ ಎಲ್ಲರ ಉಪಚಾರ ಮಾಡಿದರು. ಬೆಳಗಾವಿ ರಸ್ತೆಗೆ ಸಂಪರ್ಕ ಕಲ್ಪಿಸುವ ಟೋಲ್ ಗೇಟ್‍ನಲ್ಲಿ ಕೂಲಿ ಕಾರ್ಮಿಕರಿಗೆ ಖಾಕಿ ಪಡೆ ಒಂದು ಹೊತ್ತಿನ ಊಟದ ವ್ಯವಸ್ಥೆ ಮಾಡಿದ್ದರು.

    ಧಾರವಾಡದ ಹೊರವಲಯದ ನರೇಂದ್ರ ಕ್ರಾಸ್ ಬಳಿ ಇರುವ ಟೋಲ್ ಗೇಟ್‍ನಲ್ಲಿ ಡಿವೈಎಸ್‍ಪಿ, ಪಿಎಸ್‍ಐ ಅವರಿಂದ ನೂರಾರು ಮಂದಿಗೆ ಊಟದ ವ್ಯವಸ್ಥೆ ಮಾಡಿದ್ದರು. ಬಳಿಕ ಅವರನ್ನು ಸ್ಥಳೀಯ ಹಾಸ್ಟೇಲ್‍ನಲ್ಲಿ ಆಶ್ರಯಕ್ಕಾಗಿ ಕಳುಹಿಸಲಾಗಿದೆ. ಕಳೆದ 5 ದಿನಗಳ ಹಿಂದೆಯೇ ಶಿವಮೊಗ್ಗದಿಂದ ರಾಜಸ್ಥಾನಕ್ಕೆ ಹೊರಟ 30 ಜನರ ತಂಡ, ಬಿಸಿಲಿನಿಂದ ತೊಂದರೆ ಅನುಭವಿಸುತ್ತಿತ್ತು. ಅವರನ್ನು ಪೊಲೀಸ್ ವಾಹನದಲ್ಲಿ ತೆಗೂರ ಬಳಿ ಕರೆಸಿ ಎಸ್‍ಪಿ ಅವರು ಊಟ ಬಡಿಸಿದ್ದಾರೆ.

    ರಾಜಸ್ಥಾನಕ್ಕೆ ಹೋಗಲು ಚೆನ್ನೈದಿಂದ ಬಂದ ಎರಡು ಕುಟುಂಬ ಎರಡು ದಿನಗಳಿಂದ ಹೋಗೋಕೆ ಆಗದೇ ರಸ್ತೆಯಲ್ಲೇ ಪರದಾಟ ಮಾಡಿತ್ತು. ಇದರ ಜೊತೆಗೆ ಬೆಳಗಾವಿಯ ಸಂಕೇಶ್ವರದಿಂದ ಬೆಂಗಳೂರ ಕಡೆ ಹೊರಟಿದ್ದ 30 ಜನರನ್ನ ಚೆಕ್‍ಪೋಸ್ಟನಲ್ಲಿ ತಡೆದು ಅವರಿಗೂ ಕೂಡ ಊಟಕ್ಕೆ ಹಾಕಲಾಗಿದೆ. ಆದರೆ ಬೇರೆ ಜಿಲ್ಲೆಗಳಿಂದ ಬಂದವರಿಗೆ ಧಾರವಾಡ ಜಿಲ್ಲೆಗೆ ಪ್ರವೇಶ ಇಲ್ಲದ ಕಾರಣ ಗಡಿಯಲ್ಲೇ ಅವರನ್ನ ನಿಲ್ಲಿಸಲಾಗುತ್ತಿದೆ. ಸದ್ಯ ಎಸ್‍ಪಿ ವರ್ತಿಕಾ ಕಟಿಯಾರ್ ಈ ಜನರಿಗೆ ಒಂದು ಕಡೆ ಉಳಿಯಲು ಜಿಲ್ಲಾಡಳಿತದ ಜೊತೆ ಮಾತನಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

  • ಪ್ರತಿನಿತ್ಯ 60 ಸಾವಿರ ಜನರಿಗೆ ಊಟ ಕಲ್ಪಿಸಿದ ಮುನಿರತ್ನ

    ಪ್ರತಿನಿತ್ಯ 60 ಸಾವಿರ ಜನರಿಗೆ ಊಟ ಕಲ್ಪಿಸಿದ ಮುನಿರತ್ನ

    ಬೆಂಗಳೂರು: ಇಡೀ ಭೂಮಂಡಲವೇ ಮಹಾಮಾರಿ ಕೊರೋನಾ ವೈರಸ್‍ಗೆ ತತ್ತರಿಸಿ ಹೋಗಿದ್ದು, ದೇಶದಲ್ಲಿಯೂ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಲಾಕ್ ಡೌನ್ ಘೋಷಿಸಲಾಗಿದೆ. ಹೀಗಾಗಿ ಕೆಲ ಬಡ ಜನತೆ ಊಟ, ಅಗತ್ಯ ವಸ್ತುಗಳಿಲ್ಲದೆ ಪರಿತಪಿಸುತ್ತಿದ್ದಾರೆ. ಇದನ್ನು ಮನಗಂಡ ಬಿಜೆಪಿ ಮುಖಂಡ ಮುನಿರತ್ನ ಅವರು ಬಡವರ ಹೊಟ್ಟೆ ತುಂಬಿಸುತ್ತಿದ್ದು, ನಿತ್ಯ 60 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

    ತಮ್ಮ ಕ್ಷೇತ್ರದ 50 ರಿಂದ 60 ಸಾವಿರ ಜನರಿಗೆ ಪ್ರತಿನಿತ್ಯ ಮೂರು ಹೊತ್ತು ಊಟದ ವ್ಯವಸ್ಥೆ ಮಾಡಿದ್ದಾರೆ. ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ ಮತ್ತು ರಾತ್ರಿಯ ಊಟದ ವ್ಯವಸ್ಥೆ ಮಾಡಿದ್ದು, ಇದಕ್ಕಾಗಿ ಮತ್ತಿಕೆರೆಯ ಕಲ್ಯಾಣ ಮಂಟಪದಲ್ಲಿ 60 ಜನರ ಬಾಣಸಿಗರ ತಂಡ ಊಟ ತಯಾರು ಮಾಡುತ್ತಿದೆ.

    ಪ್ರತಿನಿತ್ಯ 5 ಸಾವಿರ ಕೆ.ಜಿ ಅಕ್ಕಿ ಬಳಸಿಕೊಂಡು ಆಹಾರ ತಯಾರು ಮಾಡುತ್ತಿದ್ದು, ಕ್ಷೇತ್ರದ ಬಡವರಿಗೆ, ಕೂಲಿ ಕಾರ್ಮಿಕರಿಗೆ ಊಟದ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಬಡ ಜನತೆ ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಕೇಂದ್ರ ಸರ್ಕಾರ ಎಪ್ರಿಲ್ 14ರ ವರಗೆ ದೇಶಾದ್ಯಂತ ಲಾಕ್ ಡೌನ್ ಮಾಡಿದೆ. ಜನ ಅನವಶ್ಯಕವಾಗಿ ರಸ್ತೆಗೆ ಬರದೇ ತಮ್ಮ ಮನೆಗಳಲ್ಲೇ ಇದ್ದು ಸೋಂಕು ತಗುಲದಂತೆ ಕಟ್ಟೆಚ್ಚರವಹಿಸಬೇಕಾಗಿದೆ. ದೇಶ ಲಾಕ್ ಡೌನ್ ಆಗಿ ಇವತ್ತಿಗೆ 6 ನೇ ದಿನ. ಉಳ್ಳವರು ಹೇಗೋ ಜೀವನ ಸಾಗಿಸುತ್ತಿದ್ದಾರೆ. ಅದರೆ ದಿನಗೂಲಿ ನೌಕರರು, ಕೂಲಿ ಕಾರ್ಮಿಕರು, ಬಡವರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.

  • 21 ದಿನ ನಿರಂತರ ಅನ್ನದಾನ- ಪಬ್ಲಿಕ್ ಟಿವಿ ಮೂಲಕ ಉಡುಪಿಯ ಕಿಣಿ ಫ್ಯಾಮಿಲಿ ಘೋಷಣೆ

    21 ದಿನ ನಿರಂತರ ಅನ್ನದಾನ- ಪಬ್ಲಿಕ್ ಟಿವಿ ಮೂಲಕ ಉಡುಪಿಯ ಕಿಣಿ ಫ್ಯಾಮಿಲಿ ಘೋಷಣೆ

    ಉಡುಪಿ: ಕೊರೊನಾ ಮಹಾಮಾರಿ ಭಾರತಕ್ಕೆ ಬೀಗ ಹಾಕಿಸಿದೆ. ಉಡುಪಿಯಲ್ಲಿ ಕಾರ್ಮಿಕರು, ನಿರ್ಗತಿಕರು ಊಟಕ್ಕಿಲ್ಲದೆ ಪರಿತಪಿಸುವ ಪ್ರಮೇಯ ಬಂದಿದೆ. ಚಾಂದ್ರಮಾನ ಯುಗಾದಿ ಆಚರಿಸುತ್ತಿರುವ ಉಡುಪಿಯ ಕಿಣಿ ಫ್ಯಾಮಿಲಿ ಪ್ರತಿದಿನ ನೂರು ಜನಕ್ಕೆ ಊಟ ಕೊಡಲು ಪಬ್ಲಿಕ್ ಟಿವಿ ಮೂಲಕ ಘೋಷಿಸಿದೆ.

    ಮುಂದಿನ 21 ದಿನ ನಗರದ ಅಲ್ಲಲ್ಲಿ ನೂರು ಊಟ ಕೊಡುವುದಾಗಿ ರಾಘವೇಂದ್ರ ಕಿಣಿ ಘೋಷಿಸಿದ್ದಾರೆ. ಜನರಿದ್ದಲ್ಲಿಗೆ ಪ್ರತಿದಿನ ಊಟ ಪಾರ್ಸೆಲ್ ಆಗಲಿದೆ. ಅಡುಗೆಗೆ, ಸಪ್ಲೈಗೆ ಜನರನ್ನು ಆಯ್ಕೆ ಮಾಡಿದ್ದೇವೆ. ಸ್ವಚ್ಛತೆಗೆ ಅಡ್ಡಿಯಾಗದೆ, ಸರ್ಕಾರದ ಆರೋಗ್ಯ ಇಲಾಖೆಯ ನಿಯಮ ಪಾಲಿಸಿಕೊಂಡು ಊಟ ವಿತರಿಸುವುದಾಗಿ ರಾಘವೇಂದ್ರ ಕಿಣಿ ಹೇಳಿದ್ದಾರೆ.

    ಸಹೋದರ ನರಸಿಂಹ ಕಿಣಿಯವರ ಕಡಿಯಾಳಿಯ ಹೋಟೆಲಿನಲ್ಲಿ ಊಟದ ಪೊಟ್ಟಣ ಪಾರ್ಸೆಲ್ ಕಟ್ಟಲಾಗುತ್ತಿದೆ. ಕಾರು, ಬೈಕ್ ಮೂಲಕ ನಗರದ ಕಲ್ಸಂಕ, ಸಿಟಿ ಬಸ್ ನಿಲ್ದಾಣ, ಅಜ್ಜರಕಾಡು ಪಾರ್ಕ್, ಅಂಬಲಪಾಡಿ, ಸಂತೆಕಟ್ಟೆ ಕಲ್ಯಾಣಪುರದಲ್ಲಿ ಊಟ ಅಗತ್ಯ ಇರುವವರಿಗೆ ವಿತರಿಸುವ ನಿರ್ಧಾರವನ್ನು ಕಿಣಿಯವರ ಟ್ರಸ್ಟ್ ಮೂಲಕ ಮಾಡಲಾಗಿದೆ.

    ಯುಗಾದಿ ಆಚರಿಸುವ ಸಂದರ್ಭ ಕೋವಿಡ್ 19 ಹಬ್ಬದ ಖುಷಿಗೆ ಅಡ್ಡಿಯಾಗಿ ನಿಂತಿದೆ. ನಾವು ಹಬ್ಬ ಮಾಡಬಹುದು, ಒಪ್ಪೊತ್ತು ಊಟ ಇಲ್ಲದವರು ನಮ್ಮ ನಡುವೆ ಕೋಟಿ ಜನರು ಇದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಅಭಿಯಾನಕ್ಕೆ ಕೈ ಜೋಡಿಸಲಿ. ಮನೆ ಪಕ್ಕದಲ್ಲಿ ಊಟಕ್ಕೆ ಕಷ್ಟ ಇರುವ ಮನೆಗೆ ನಾಲ್ಕು ಊಟ ಬಡಿಸಿದರೆ ಅದೊಂದು ಪುಣ್ಯಕಾರ್ಯ ಆಗುತ್ತದೆ ಎಂದು ರಾಘವೇಂದ್ರ ಕಿಣಿ ಹೇಳಿದರು.

    ಸಹೋದರ ನರಸಿಂಹ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ತಮ್ಮನ ಜನ ಸೇವೆಗೆ ನಾನೂ ಸಹಾಯ ಮಾಡುತ್ತಿರುವುದು ಖುಷಿಯಾಗುತ್ತದೆ. ದೊಡ್ಡ ಸಂಕಷ್ಟ ಜನಕ್ಕೆ ಬಾರದಿರಲಿ ಎಂಬುದು ನನ್ನ ಪ್ರಾರ್ಥನೆ ಎಂದರು. ರಾಜ್ಯದ ಮೂಲೆ ಮೂಲೆಯಲ್ಲಿ ಜನ ಅನ್ನದಾನಕ್ಕೆ ಸಿದ್ಧರಾಗಬೇಕು. ಅನ್ನದಾನಕ್ಕಿಂತ ಶ್ರೇಷ್ಠದಾನ ಮತ್ತೊಂದಿಲ್ಲ ಎಂದರು. ಸಾಮಾಜಿಕ ಕಾರ್ಯಕರ್ತರು ಆಹಾರದ ಪೊಟ್ಟಣ ವಿತರಿಸುವ ಕೆಲಸ ಮಾಡಿದರು. ಅಂತರ ಕಾಯ್ದು, ಶುಚಿತ್ವದಲ್ಲಿ ಊಟ ಮಾಡುವಂತೆ ವಿನಂತಿ ಮಾಡಲಾಯಿತು.

  • ವಿಷಾಹಾರ ಸೇವಿಸಿ ಆತ್ಮಹತ್ಯೆಗೆ ಶರಣಾದ ಮೂವರು

    ವಿಷಾಹಾರ ಸೇವಿಸಿ ಆತ್ಮಹತ್ಯೆಗೆ ಶರಣಾದ ಮೂವರು

    – ಊಟ ಮಾಡದ ಮಕ್ಕಳು ಸೇಫ್

    ಚಿಕ್ಕಬಳ್ಳಾಪುರ: ಊಟದಲ್ಲಿ ವಿಷ ಬೆರೆಸಿಕೊಂಡು ಸೇವಿಸಿ ಇಬ್ಬರು ಮಹಿಳೆಯರು, ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕಾಶಾಪುರ ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ನಡೆದಿದೆ.

    ಚಿಕ್ಕಬಳ್ಳಾಪುರ ತಾಲೂಕು ದೊಡ್ಡಕಿರಗಂಬಿ ಗ್ರಾಮದ ಗಂಗರಾಜು (35), ಅಂದಾರ್ಲಹಳ್ಳಿ ಗ್ರಾಮದ ಶಿವಮ್ಮ (30) ಮತ್ತು ಗುಡಿಬಂಡೆ ತಾಲೂಕು ಧೂಮಕುಂಟಹಳ್ಳಿ ಗ್ರಾಮದ ಗಾಯತ್ರಿ (30) ಮೃತರು. ಮೃತರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಇಂದು ಬೆಳಗ್ಗೆ ಊಟದಲ್ಲಿ ಮೆಕ್ಕೆಜೋಳಕ್ಕೆ ಬಳಸುವ ಕ್ರಿಮಿನಾಶಕ ಔಷಧಿ ಬೆರೆಸಿಕೊಂಡು ಮೂವರು ಸೇವಿಸಿದ್ದು ಸಾವನ್ನಪ್ಪಿದ್ದಾರೆ.

    ಇದೇ ಸ್ಥಳದಲ್ಲಿದ್ದ ಗಾಯತ್ರಿಯ ಇಬ್ಬರು ಮಕ್ಕಳು ಊಟ ಮಾಡದೆ ಸಾವಿನಿಂದ ಪಾರಾಗಿದ್ದಾರೆ. ಮೃತ ಮಹಿಳೆಯರು ಸಹೋದರಿಯರಾಗಿದ್ದು, ಅವಿವಾಹಿತ ಗಂಗರಾಜು ಜೊತೆ ಸಂಬಂಧ ಇಟ್ಟುಕೊಂಡಿರಬಹುದು, ಹೀಗಾಗಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ.

    ಬಾಗೇಪಲ್ಲಿ ಪೊಲೀಸರು ಹಾಗೂ ಪ್ರಭಾರ ಎಎಸ್ಪಿ ಜಾಹ್ನವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ತನಿಖೆಯ ನಂತರ ಆಸಲಿ ಸತ್ಯ ಗೊತ್ತಾಗಬೇಕಿದೆ.

  • ಮತ್ತೆ ನಾನ್ ವೆಜ್ ತಿಂದು ದೇವಸ್ಥಾನಕ್ಕೆ ತೆರಳಿದ್ರು ಸಿದ್ದರಾಮಯ್ಯ!

    ಮತ್ತೆ ನಾನ್ ವೆಜ್ ತಿಂದು ದೇವಸ್ಥಾನಕ್ಕೆ ತೆರಳಿದ್ರು ಸಿದ್ದರಾಮಯ್ಯ!

    ಗದಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಂಸಾಹಾರ ತಿಂದು ದೇವರ ಗುಡಿಗೆ ಹೋಗುವ ಮೂಲಕ ಮತ್ತೊಮ್ಮೆ ಎಡವಟ್ಟು ಮಾಡಿಕೊಳ್ಳುವ ಜೊತೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಇದನ್ನೂ ಓದಿ:  ಧರ್ಮಸ್ಥಳಕ್ಕೆ ಹೋಗುವಾಗ ಮೀನು ಮಾತ್ರವಲ್ಲ, ಕೋಳಿಯನ್ನೂ ತಿಂದಿದ್ದೆ: ಸಿಎಂ ಸಿದ್ದರಾಮಯ್ಯ

    ಈ ಹಿಂದೆ ಕೂಡ ಮಾಜಿ ಸಿಎಂ ಮಂಗಳೂರನಲ್ಲಿ ನಾನ್ ವೆಜ್ ಊಟಮಾಡಿ ದೇವಸ್ಥಾನಕ್ಕೆ ಹೋಗಿ ಸಾಕಷ್ಟು ಪೇಚಿಗೆ ಸಿಲುಕಿದ್ದರು. ಈಗ ಅದೇ ರೀತಿ ಚಿಕನ್, ಫಿಶ್, ಎಗ್ ಊಟಮಾಡಿ ದೇವಸ್ಥಾನಕ್ಕೆ ಹೋಗುವ ಮೂಲಕ ಮತ್ತೊಮ್ಮೆ ಚರ್ಚೆಗೆ ಕಾರಣರಾಗಿದ್ದಾರೆ. ಮುಂಡರಗಿ ತಾಲೂಕಿನ ಸಿಂಗಟಾಲೂರ ಗ್ರಾಮದಲ್ಲಿ ಶ್ರೀಬೀರಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಮತ್ತು ಶಿಬಾರಗಟ್ಟಿ ಪ್ರತಿಷ್ಠಾಪನೆ, ಕಳಸಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಈ ಕಾರ್ಯಕ್ರಮಕ್ಕೆ ಆಗಮಿಸಿದ ಸಿದ್ದರಾಮಯ್ಯನವರು, ಸೋಮವಾರ ಸಂಜೆ ಕಾರ್ಯಕ್ರಮಕ್ಕೂ ಮುನ್ನ ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಮುಂಡವಾಡ ಮನೆಗೆ ಊಟಕ್ಕೆ ಹೋಗಿದ್ದರು. ಅಲ್ಲಿ ಚಿಕನ್, ಫಿಶ್, ಎಗ್ ಭರ್ಜರಿಯಾಗಿ ಬಾಡೂಟ ಸವಿದು ನಂತರ ಶ್ರೀಬೀರಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದರು. ದೇವಸ್ಥಾನ ಲೋಕಾರ್ಪಣೆ ಮಾಡಿ, ಬೀರೇಶ್ವರ ಹಾಗೂ ರೇವಣಸಿದ್ದೇಶ್ವರನಿಗೆ ಪೂಜೆ ಸಲ್ಲಿಸಿದರು. ಅಲ್ಲಿಂದ ಪಕ್ಕದ ಶಿಬಾರಗಟ್ಟಿ ಪ್ರತಿಷ್ಠಾಪನೆ, ಕಳಸಾರೋಹಣ ನೆರವೇರಿಸಿದರು. ನಂತರ ಸಮಾರಂಭದ ವೇದಿಕೆಗೆ ಆಗಮಿಸಿದರು.

    ನಾನ್ ವೆಜ್ ಊಟಮಾಡಿ ದೇವರ ಗುಡಿಗೆ ಹೋಗಿ ಪೂಜೆ ಸಲ್ಲಿಸಿರುವ ವಿಚಾರ ಸಿದ್ದರಾಮಯ್ಯನವರು ಹೋದನಂತರ ತಿಳಿದಿದೆ. ಇದರಿಂದ ಅನೇಕರ ಆಕ್ರೋಶಕ್ಕೆ ಸಿದ್ದರಾಮಯ್ಯನವರು ಗುರಿಯಾಗಿದ್ದಾರೆ. ಈ ಊಟದಲ್ಲಿ ಮಾಜಿ ಸಚಿವ ಪಿ.ಟಿ ಪರಮೇಶ್ವರ್ ನಾಯ್ಕ್, ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಶಾಸಕ ಜಿ.ಎಸ್ ಪಾಟೀಲ್, ರಾಮಕೃಷ್ಣ ದೊಡ್ಡಮನಿ ಮತ್ತು ಸಲೀಂ ಅಹ್ಮದ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಭಾಗಿಯಾಗಿದ್ದರು.