Tag: McKenzie Bizos

  • ವಿಶ್ವದಲ್ಲೇ ಅತಿ ಹೆಚ್ಚು ವಿಚ್ಛೇದನ ಜೀವನಾಂಶ ಪಡೆದ ಅಮೆಜಾನ್ ಸಂಸ್ಥಾಪಕನ ಪತ್ನಿ

    ವಿಶ್ವದಲ್ಲೇ ಅತಿ ಹೆಚ್ಚು ವಿಚ್ಛೇದನ ಜೀವನಾಂಶ ಪಡೆದ ಅಮೆಜಾನ್ ಸಂಸ್ಥಾಪಕನ ಪತ್ನಿ

    ನವದೆಹಲಿ: ಅಮೆಜಾನ್ ಸಂಸ್ಥಾಪಕ ಸಿಇಓ, ವಿಶ್ವದ ನಂ.1 ಶ್ರೀಮಂತ ಜೆಫ್ ಬಿಜೋಸ್ ಅವರ 26 ವರ್ಷಗಳ ದಾಂಪತ್ಯ ಜೀವನ ಮುರಿದಿದ್ದು, ಪತ್ನಿ ಮ್ಯಾಕ್‍ಕೆಂಜೀ ಬಿಜೋಸ್ ಅವರಿಗೆ 38 ಬಿಲಿಯನ್ (ಶತಕೋಟಿ) ಯುಎಸ್ ಡಾಲರ್ ನೀಡುವ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ವಿಚ್ಛೇದನ ಪರಿಹಾರವನ್ನು ನೀಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

    49 ವರ್ಷದ ಮ್ಯಾಕ್‍ಕೆಂಜಿ ಲೇಖಕಿ ಹಾಗೂ ವಿಶ್ವದಲ್ಲೇ 4ನೇ ಅತೀ ಶ್ರೀಮಂತ ಮಹಿಳೆಯಾಗಿದ್ದಾರೆ. ಅಲ್ಲದೆ, ಈಗಾಗಲೇ ತಮ್ಮ ಅರ್ಧದಷ್ಟು ಆಸ್ತಿಯನ್ನು ಬಿಟ್ಟುಕೊಡುವುದಾಗಿ ಹೇಳಿದ್ದಾರೆ. ತಮ್ಮ ಗ್ಯಾರೇಜ್‍ನಲ್ಲಿ ಅಮೆಜಾನ್ ಪ್ರಾರಂಭಿಸುವುದಕ್ಕೂ ಒಂದು ವರ್ಷ ಮುಂಚೆ ಮ್ಯಾಕ್‍ಕೆಂಜೀ ಅವರು 1993ರಲ್ಲಿ ಜೆಫ್ ಅವರನ್ನು ಮದುವೆಯಾಗಿದ್ದರು. ಮದುವೆ ವೇಳೆ ಕಂಪನಿಗಾಗಿ ಶ್ರಮಿಸಿದಲ್ಲಿ ಸಂಸ್ಥೆಯ ಅರ್ಧದಷ್ಟು ಹಣವನ್ನು ನೀಡುವುದಾಗಿ ಜೆಫ್ ಹೇಳಿದ್ದರು.

    ಅಲ್ಲದೆ, ವಾರೆನ್ ಬಫೆಟ್ ಮತ್ತು ಬಿಲ್ ಗೇಟ್ಸ್ ಸ್ಥಾಪಿಸಿದ ದಿ ಗಿವಿಂಗ್ ಫ್ಲೆಡ್ಜ್ ಎಂಬ ಸಂಸ್ಥೆಯ ವೆಬ್‍ಸೈಟ್‍ನ ಬ್ಲಾಗ್ ಮೂಲಕ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಈ ವೆಬ್‍ಸೈಟ್ ಮೂಲ ಉದ್ದೇಶ ಜಗತ್ತಿನ ಅತೀ ಶ್ರೀಮಂತರು ತಮ್ಮ ಆದಾಯದ ಅರ್ಧಕ್ಕಿಂತ ಹೆಚ್ಚು ಹಣವನ್ನು ಲೋಕ ಕಲ್ಯಾಣಕ್ಕೆ ವಿನಿಯೋಗಿಸಲು ಪ್ರೋತ್ಸಾಹಿಸುವುದಾಗಿದೆ.

    ಈ ದಂಪತಿ ಒಟ್ಟು ನಾಲ್ಕು ಮಕ್ಕಳನ್ನು ಹೊಂದಿದ್ದು, ಏಪ್ರಿಲ್‍ನಲ್ಲಿ ತಮ್ಮ ವಿಚ್ಛೇದನದ ಕುರಿತು ಸ್ಪಷ್ಟಪಡಿಸಿದ್ದಾರೆ. ಅವರ ವಿಚ್ಛೇದನ ಪರಿಹಾರ ಹಣ ಇತಿಹಾಸದಲ್ಲೇ ಯಾರೂ ನೀಡಿರದಷ್ಟು ದೊಡ್ಡ ಮೊತ್ತವಾಗಿದೆ. ಅಮೆಜಾನ್‍ನ ಒಟ್ಟು ಶೇರ್‍ನಲ್ಲಿ ಶೇ.25 ರಷ್ಟು ಅಂದರೆ 38 ಬಿಲಿಯನ್ ಯುಎಸ್ ಡಾಲರ್‍ನ್ನು ಮ್ಯಾಕ್‍ಕೆಂಜೀ ಅವರು ಪರಿಹಾರ ಮೊತ್ತವಾಗಿ ಪಡೆದಿದ್ದಾರೆ.

    ತಮ್ಮ ಪತ್ನಿಗೆ ಶೇ.25 ಶೇರು ನೀಡಿದ ನಂತರವೂ ಸಹ ಜೆಫ್ ಅವರು ಅತ್ಯಂತ ಶ್ರೀಮಂತ ಪಟ್ಟಿಯಲ್ಲಿ ಮುಂದುವರಿದಿದ್ದಾರೆ. ಇವರ ಒಟ್ಟು ಆಸ್ತಿಯ ಮೊತ್ತ ಸುಮಾರು 118 ಬಿಲಿಯನ್ ಯುಎಸ್ ಡಾಲರ್ ಆಗಿದೆ. ಏಪ್ರಿಲ್‍ನಲ್ಲಿ ಸಲ್ಲಿಸಿದ ಹಣಕಾಸಿನ ವಿವರದ ಪ್ರಕಾರ 90 ದಿನಗಳ ಕಾಲಾವಕಾಶ ಕೇಳಿದ್ದು, ಈ ವಾರದಲ್ಲಿ ಇತ್ಯರ್ಥವಾಗಲಿದೆ ಎಂದು ಹೇಳಲಾಗುತ್ತಿದೆ.

    ಅಮೇಜಾನ್ ಸಿಇಓ ಕಡಿಮೆ ಶೇರು ಹೊಂದಿದ್ದರೂ ಸಹ ಇ-ಕಾಮರ್ಸ್ ದೈತ್ಯ ಪಟ್ಟದಿಂದ ಕೆಳಗಿಳಿದಿಲ್ಲ. ಶೀಘ್ರದಲ್ಲೇ ಜೆಫ್ ಮಾಜಿ ಪತ್ನಿ ಅಮೇಜಾನ್‍ನಲ್ಲಿ ಶೇ.4ರಷ್ಟು ಪಾಲು ಹೊಂದಲಿದ್ದು, ಆದರೂ ಜೆಫ್ ಬೆಜೋಸ್‍ಗೆ ತಮ್ಮ ಮತದಾನದ ಹಕ್ಕನ್ನು ಸ್ವಯಂ ಪ್ರೇರಣೆಯಿಂದ ಬಿಟ್ಟುಕೊಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.