Tag: MCD Elections

  • ಇವಿಎಂ ಆಲ್ಲ, ಆಡಳಿತ ಪಕ್ಷದ ಸಾಫ್ಟ್ ವೇರ್ ಬದಲಾಗಬೇಕು: ಯೋಗೇಂದ್ರ ಯಾದವ್

    ಇವಿಎಂ ಆಲ್ಲ, ಆಡಳಿತ ಪಕ್ಷದ ಸಾಫ್ಟ್ ವೇರ್ ಬದಲಾಗಬೇಕು: ಯೋಗೇಂದ್ರ ಯಾದವ್

    ನವದೆಹಲಿ: ದೆಹಲಿಯ ಮತದಾರ ಕೇಜ್ರಿವಾಲ್ ರನ್ನು ತಿರಸ್ಕರಿಸಿ, ಪ್ರಧಾನಿ ಮೋದಿ ಅವರನ್ನು ಗೆಲ್ಲಿಸಿದ್ದಾನೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ಯೋಗೇಂದ್ರ ಯಾದವ್ ಹೇಳಿದ್ದಾರೆ.

    ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ನಾಯಕರಾಗಿ ಬಳಿಕ ಪಕ್ಷದಿಂದ ಉಚ್ಚಾಟನೆಯಾಗಿದ್ದ ಯೋಗೇಂದ್ರ ಯಾದವ್ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿ, ಮೋಸ ಮಾಡಿರುವ ಆಪ್‍ಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಅವರು ತಿಳಿಸಿದರು.

    ಇವಿಎಂ ದುರ್ಬಳಕೆ ಮಾಡಿದ್ದಾರೆ ಎನ್ನುವ ಆಪ್ ನಾಯಕರ ಆರೋಪಕ್ಕೆ, ಇವಿಎಂ ಸಾಫ್ಟ್ ವೇರ್ ಏನು ಆಗಿಲ್ಲ. ಆಡಳಿತ ನಡೆಸುವ ಪಕ್ಷದ ಸಾಫ್ಟ್ ವೇರ್ ಬದಲಾವಣೆಯಾಗುವ ಅಗತ್ಯವಿದೆ. ಆಪ್ ನಾಯಕರು ಮಹಾನಗರ ಪಾಲಿಕೆಯ ಚುನಾವಣೆಯನ್ನಲ್ಲ, ಅವರನ್ನು ಅವರೇ ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂದರು.

    ನಾವು ಈ ಚುನಾವಣೆಯಲ್ಲಿ ಜಯಗಳಿಸಬೇಕು ಎನ್ನುವ ಯಾವುದೇ ನಿರೀಕ್ಷೆಯನ್ನು ಇಟ್ಟುಕೊಂಡಿರಲಿಲ್ಲ. ನಾವು ದೆಹಲಿ ಜನರ ನಿಜವಾದ ಸಮಸ್ಯೆಯನ್ನು ಇಟ್ಟುಕೊಂಡು ಚುನಾವಣೆ ಎದುರಿಸಿದ್ದೇವೆ, ನಾವು ತಳಮಟ್ಟದ ಸಮಸ್ಯೆಯ ಬಗ್ಗೆ ಮಾತನಾಡುತ್ತೇವೆ ವಿನಾಃ ಕಾಶ್ಮೀರ ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.

    ಇದೇ ವೇಳೆ ದೇಶದಲ್ಲಿ  ನಮ್ಮ ಪಕ್ಷ ಮಾತ್ರ ದೇಣಿಗೆ ನೀಡಿದ ವ್ಯಕ್ತಿಗಳ ವಿವರವನ್ನು ವೆಬ್‍ಸೈಟ್ ನಲ್ಲಿ ಪ್ರಕಟಿಸುತ್ತಿದೆ ಎಂದು ಹೇಳಿದರು.

  • ದೆಹಲಿಯಲ್ಲಿ ಆಪ್‍ಗೆ ಸೋಲು ಯಾಕಾಯ್ತು? ಬಿಜೆಪಿ ಗೆದ್ದಿದ್ದು ಹೇಗೆ?

    ದೆಹಲಿಯಲ್ಲಿ ಆಪ್‍ಗೆ ಸೋಲು ಯಾಕಾಯ್ತು? ಬಿಜೆಪಿ ಗೆದ್ದಿದ್ದು ಹೇಗೆ?

    ನವದೆಹಲಿ: ಎರಡು ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಧಿಕ್ಕರಿಸಿ ಆಪ್‍ಗೆ ಮತ ನೀಡಿದ್ದ ದೆಹಲಿಯ ಜನತೆ ಈ ಬಾರಿ ಕೇಜ್ರಿವಾಲ್ ಸರ್ಕಾರದ ವಿರುದ್ಧ ಮತ ನೀಡಿದ್ದಾರೆ. ಚುನಾವಣೋತ್ತರ ಸಮೀಕ್ಷೆಯಂತೆ ದೆಹಲಿ ಮಹಾನಗರ ಪಾಲಿಕೆಯಯಲ್ಲಿ ಮೂರನೇ ಬಾರಿಯೂ ಬಿಜೆಪಿ ಜಯಭೇರಿ ಬಾರಿಸಿದೆ.

    2015ರ ಫೆಬ್ರವರಿಯಲ್ಲಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಾರ್ಟಿ ಸರ್ಕಾರಕ್ಕೆ ದೆಹಲಿ ಜನತೆ ನೀಡುತ್ತಿರುವ ಮಧ್ಯಂತರ ತೀರ್ಪು ಎಂದೇ ಬಿಂಬಿತವಾಗಿದ್ದ ಈ ಚುನಾವಣೆಯಲ್ಲಿ ಆಪ್ ಭಾರೀ ಸೋಲಾಗಿದೆ. ಹೀಗಾಗಿ ಬಿಜೆಪಿ ಗೆದ್ದಿದ್ದು ಹೇಗೆ? ಆಪ್‍ಗೆ ಸೋಲು ಯಾಕಾಯ್ತು ಎನ್ನುವ ವಿವರಣೆಯನ್ನು ಇಲ್ಲಿ ನೀಡಲಾಗಿದೆ

    #1 ಮೋದಿ ವರ್ಸಸ್ ಕೇಜ್ರಿವಾಲ್
    ಆಪ್ ತನ್ನ ಪ್ರಚಾರದಲ್ಲಿ ಪಕ್ಷಕ್ಕಿಂತ ಹೆಚ್ಚಾಗಿ ಕೇಜ್ರಿವಾಲ್ ಅವರನ್ನೇ ಹೈಲೈಟ್ ಮಾಡಿತ್ತು. ಪಕ್ಷಕ್ಕಿಂತಲೂ ಕೇಜ್ರಿವಾಲ್ ಅವರನ್ನೇ ಹೈಲೈಟ್ ಮಾಡಿದ್ದು ಆಂತರಿಕ ಅಸಮಾಧಾನಕ್ಕೆ ಕಾರಣವಾಗಿತ್ತು. ಮೋದಿ ವರ್ಸಸ್ ಕೇಜ್ರಿವಾಲ್ ಎಂಬಂತೆ ಪೋಸ್ಟರ್ ಪ್ರಕಟಿಸಿತ್ತು. ಪ್ರಧಾನಿ ಮೋದಿ ಬಿಜೆಪಿಯ ಶಕ್ತಿ. ಹೀಗಾಗಿ ಮೋದಿಯನ್ನು ವಿರೋಧಿಸಿ ಪ್ರಚಾರ ಮಾಡಿದ್ರೆ ನಾವು ಕ್ಲಿಕ್ ಆಗಬಹುದು ಎನ್ನುವ ಪ್ರಚಾರ ತಂತ್ರವನ್ನು ಆಪ್ ರೂಪಿಸಿತ್ತು. ಮೋದಿಗೆ ಸದ್ಯಕ್ಕೆ ದೇಶದಲ್ಲಿ ಪ್ರತಿ ನಾಯಕ ಕೇಜ್ರಿವಾಲ್ ಒಬ್ಬರೇ ಎನ್ನುವಂತೆ ಬಿಂಬಿಸಿತ್ತು. ಆದರೆ ಬಿಜೆಪಿ ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ದೆಹಲಿ ಪಕ್ಷದ ಮುಖ್ಯಸ್ಥ ಮನೋಜ್ ತಿವಾರಿ ಭಾವಚಿತ್ರಗಳನ್ನು ಪ್ರಕಟಿಸಿ ಪೋಸ್ಟರ್ ಹಾಕಿತ್ತು. ದೆಹಲಿಯ ಕೆಲವು ಕಡೆ ಪಕ್ಷದ ಹೆಸರು ಸಹ ಇಲ್ಲದೇ ಕೇವಲ ಕೇಜ್ರಿವಾಲ್ ಭಾವಚಿತ್ರದ ಪೋಸ್ಟರ್‍ಗಳು ಪ್ರಕಟಗೊಂಡಿತ್ತು.

    #2 ಪಕ್ಷದ ವಿಸ್ತರಣೆಗೆ ಹೆಚ್ಚಿನ ಆದ್ಯತೆ:
    ದೆಹಲಿ ಯಶಸ್ಸಿನ ಬಳಿಕ ಕೇಜ್ರಿವಾಲ್ ಪಕ್ಷವನ್ನು ಭಾರತದ ಇತರ ಕಡೆಗಳಲ್ಲಿ ವಿಸ್ತರಿಸಲು ಮುಂದಾದರು. ಪಂಚರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ಪಂಜಾಬ್, ಗುಜರಾತ್, ಗೋವಾ, ಹಿಮಾಚಲ ಪ್ರದೇಶ ಪಕ್ಷದ ಪರ ಹಿರಿಯ ನಾಯಕರು ಪ್ರಚಾರ ನಡೆಸಿದರು. ಕೇಜ್ರಿವಾಲ್ ಮತ್ತು ಹಿರಿಯ ನಾಯಕರು ಎರಡು ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದ ಮತದಾರ ಈ ಬಾರಿಯೂ ನಮಗೆ ಮತ ನೀಡುತ್ತಾನೆ ಎನ್ನುವ ಅತಿಯಾದ ವಿಶ್ವಾಸವನ್ನು ಹೊಂದಿ ಪಕ್ಷವನ್ನು ಬೇರೆ ಕಡೆ ತರಲು ಪ್ರಯತ್ನ ಪಟ್ಟರು. ಆದರೆ ಈ ಅತಿಯಾದ ವಿಶ್ವಾಸ ಈಗ ಆಪ್‍ಗೆ ಮುಳುವಾಗಿದೆ.

    #3 ಇವಿಎಂ ವಿರುದ್ಧ ಹೋರಾಟ:
    ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ಬಳಿಕ ಇವಿಎಂ ವಿರುದ್ಧ ಆರೋಪಗಳನ್ನೇ ಮಾಡಿತು. ಸ್ವತಃ ಕೇಜ್ರಿವಾಲ್ ಅವರೇ ಇವಿಎಂನ್ನು ಬಿಜೆಪಿ ಹ್ಯಾಕ್ ಮಾಡಿದೆ ಎಂದು ಆರೋಪಿಸಿದರು. ಆದರೆ ಬಿಜೆಪಿ ಈ ಆರೋಪ ಪ್ರತಿ ತಿರುಗೇಟು ನೀಡಿ ಈ ಹಿಂದಿನ ಚುನಾವಣೆಯಲ್ಲಿ ಆಪ್ ಕ್ವೀನ್ ಸ್ವೀಪ್ ಮಾಡಿತ್ತು. ಆಗ ಫಲಿತಾಂಶವನ್ನು ನೋಡಿ ಸಂಭ್ರಮಿಸಿದ ಆಪ್ ಈಗ ಆಯೋಗವನ್ನು ದೂರುತ್ತಿದೆ ಎಂದು ತಿರುಗೇಟು ನೀಡಿ ಪ್ರಚಾರ ನಡೆಸಿದ್ದು ಯಶಸ್ವಿ ಆಗಿದೆ.

    #4 ಪಕ್ಷದ ಒಳಗಡೆ ಅಸಮಾಧಾನ:
    2013 ಮತ್ತು 2015ರ ವಿಧಾನಸಭಾ ಚುನಾವಣೆ ವೇಳೆ ಆಪ್ ಸಂಘಟನೆ ಯಶಸ್ವಿಯಾಗಿತ್ತು. ನಾಯಕರು ಮತ್ತು ಕಾರ್ಯಕರ್ತರ ನಡುವಿನ ಸಂಬಂಧ ಚೆನ್ನಾಗಿತ್ತು. ಆದರೆ ಈ ಬಾರಿ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಿದ್ದ ಹಲವು ನಾಯಕರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಇದು ಹಲವು ಕಾರ್ಯಕರ್ತರಿಗೆ ಮತ್ತು ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. 2013 ಮತ್ತು 2015ರ ಚುನಾವಣೆಯ ಸಂದರ್ಭದಲ್ಲಿ ಬೂತ್‍ಗಳಲ್ಲಿ ಕಾರ್ಯಕರ್ತರು ಕುಳಿತು ಮತದಾರರನ್ನು ಸೆಳೆಯುತ್ತಿದ್ದರು. ಆದರೆ ಈ ಬಾರಿ ಅಷ್ಟೊಂದು ಸಂಖ್ಯೆಯಲ್ಲಿ ಕಾರ್ಯಕರ್ತರು ಬೂತ್‍ನಲ್ಲಿ ಇರಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿತ್ತು. ಇದರಿಂದಾಗಿ ತಳಮಟ್ಟದಲ್ಲಿ ಪಕ್ಷದ ಪರ ಕಾರ್ಯಕರ್ತರು ಪ್ರಚಾರ ನಡೆಸಿದ ಕಾರಣ ಆಪ್‍ಗೆ ಸೋಲಾಗಿದೆ.

    #5 ಆಡಳಿತ ವಿರೋಧಿ ಅಲೆ:
    ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿದ ಭರವಸೆಗಳನ್ನು ಈಡೇರಿಸದ ಕರಣ ಆಡಳಿತ ವಿರೋಧಿ ಅಲೆ ಎದ್ದಿತ್ತು. ಶುದ್ಧ ಕುಡಿಯುವ ನೀರು, ವಿದ್ಯುತ್ ಬೆಲೆ ಇಳಿಕೆ, ಇನ್ನೂ ಕೆಲಸ ಮಾಡದ ಮೊಹಲ್ಲ ಕ್ಲಿನಿಕ್, ಅರೇಗುತ್ತಿಗೆ ನೌಕರಿಗೆ ಖಾಯಂ ಇನ್ನೂ ಮಾಡದೆ ಇರುವುದು, ಬಡವರಿಗೆ ವ್ಯವಸ್ಥೆ ಕಾಲೋನಿ ನಿರ್ಮಿಸುವ ಭರವಸೆ ಹುಸಿಯಾಗಿತ್ತು. ಎರಡು ವರ್ಷದಲ್ಲಿ ಹೇಳಿಕೊಳ್ಳುವ ಕೆಲಸ ಆಗದೇ ದೆಹಲಿಗಿಂತ ಹೊರ ರಾಜ್ಯದದಲ್ಲಿ ಹೆಚ್ಚು ಸಮಯ ಕಳೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಇದರ ಜೊತೆ ದೆಹಲಿ ಹಣವನ್ನು ಪಂಚ ರಾಜ್ಯ ಚುನಾವಣೆಗೆ ಬಳಕೆ ಮಾಡಿದ್ದಾರೆ ಅನ್ನೂ ಆರೋಪ ಬಂದಿತ್ತು.

    #6 ಕಾನೂನು ಹೋರಾಟ:
    ಕೇಂದ್ರ ಸರ್ಕಾರದ ಆಡಳಿತದಲ್ಲಿ ಅನಗತ್ಯವಾಗಿ ಕೇಜ್ರಿ ಸರ್ಕಾರ ಮೂಗು ತುರಿಸುತಿತ್ತು. ವೈಯುಕ್ತಿಕ ಕಾನೂನು ಹೋರಾಟಕ್ಕೆ ಸರ್ಕಾರದ ಹಣ ಬಳಕೆ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ದೆಹಲಿ ಅಭಿವೃದ್ಧಿಯಾಗಲಿಲ್ಲ, ವಿಶೇಷವಾಗಿ ಹಳೆ ದಿಲ್ಲಿ ಕಡೆಗಣೆ ಮಾಡಿದ್ದು ಆಪ್ ಸೋಲಿಗೆ ಕಾರಣವಾಗಿದೆ.

    #7 ಬೇಕಾಬಿಟ್ಟಿ ಹೇಳಿಕೆ:
    ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದ ಕಾರಣ ಅವರ ಮೇಲೆ ಆರಂಭದಲ್ಲಿ ಜನ ಇಟ್ಟಿದ್ದ ನಂಬಿಕೆ ಕಡಿಮೆ ಆಯ್ತು. ಪಂಚರಾಜ್ಯಗಳ ಫಲಿತಾಂಶದ ಬಳಿಕ ಇವಿಎಂ ವಿರುದ್ಧ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದು ಅಲ್ಲದೇ ಪ್ರಚಾರದ ವೇಳೆ ಆಪ್ ಗೆ ಮತ ಹಾಕದಿದ್ರೆ ನಿಮ್ಮ ಮಕ್ಕಳಿಗೆ ಡೆಂಗ್ಯೂ ಬರುತ್ತೆ ಅಂತಾ ಹೇಳಿಕೆ ನೀಡಿದ್ದರು. ಸಿಎಂ ಕೇಜ್ರಿವಾಲ್ ದೆಹಲಿ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿಲ್ಲ. ಪ್ರಚಾರಕ್ಕಾಗಿ ಮೋದಿ ವಿರುದ್ಧವೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿತ್ತು.

    #8 ಹೊಸಬರಿಗೆ ಟಿಕೆಟ್, ಪಕ್ಷ ಸಂಘಟನೆ:
    ವಿಧಾನಸಭಾ ಚುನಾವಣೆಯ ಸೋಲಿನಿಂದ ಪಾಠ ಕಲಿತ ಬಿಜೆಪಿ ತಳಮಟ್ಟದಲ್ಲಿ ಪಕ್ಷವನ್ನು ಸಂಘಟನೆ ಮಾಡಿತ್ತು. ಅಷ್ಟೇ ಅಲ್ಲದೇ ಒಟ್ಟು ಇರುವ 270 ವಾರ್ಡ್ ಗಳಲ್ಲಿ 267 ಕಡೆ ಬಿಜೆಪಿ ಹೊಸ ಮುಖಗಳನ್ನು ಕಣಕ್ಕಿಳಿಸಿತ್ತು. ಯಾವ ಹಳೆಯ ಕಾರ್ಪೋರೇಟರ್‍ಗೂ ಟಿಕೆಟ್ ಕೊಟ್ಟಿರಲಿಲ್ಲ. ಹೊಸಬರಿಗೆ ಆದ್ಯತೆ ನೀಡುವ ಮೂಲಕ ಆಡಳಿತ ವಿರೋಧಿ ಅಲೆಯನ್ನು ಬಿಜೆಪಿ ಕಡಿಮೆ ಮಾಡಿಕೊಂಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಆಪ್ ವೈಫಲ್ಯವನ್ನು ಜನರಿಗೆ ತಿಳಿಸಿದ ಜೊತೆಗೆ ಮೋದಿ ಮತ್ತು ಕೇಂದ್ರದ ಸಾಧನೆಗಳನ್ನು ಪ್ರಚಾರ ಮಾಡಿತ್ತು. ಅಷ್ಟೇ ಅಲ್ಲದೇ ಆಮ್ ಆದ್ಮಿ ಪಾರ್ಟಿ ಶಾಸಕ ವೇದ್ ಪ್ರಕಾಶ್ ಬಿಜೆಪಿಗೆ ಹಾರಿದ್ದರು. ದೆಹಲಿ ಕಾಂಗ್ರೆಸ್ ಘಟಕದ ಅಧ್ಯಕ್ಷ, ಮಾಜಿ ಸಚಿವ ಅರವಿಂದರ್ ಸಿಂಗ್ ಲವ್ಲಿ ಕೂಡಾ ಬಿಜೆಪಿ ಸೇರಿದ್ದರು. ಈ ಎಲ್ಲ ಕಾರಣದ ಜೊತೆಗೆ ಕೇಂದ್ರ ಸರ್ಕಾರದ ಅಧಿನವಾಗಿರುವ ದೆಹಲಿಯನ್ನು ಅದೇ ಪಕ್ಷಕ್ಕೆ ಅಧಿಕಾರ ನೀಡಬೇಕು ಜನರ ಮನೋಭಾವದಿಂದಾಗಿ ಬಿಜೆಪಿ ಪ್ರಚಂಡ ಜಯಗಳಿಸಿದೆ.

    ಇದೇ ತಿಂಗಳು ನಡೆದ ಉಪ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ತನ್ನ ತೆಕ್ಕೆಯಲ್ಲಿದ್ದ ರಜೌರಿ ಗಾರ್ಡನ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಎದುರು ಸೋಲು ಅನುಭವಿಸಿತ್ತು.

    ಚುನಾವಣೆಯಲ್ಲಿ ಯಾರಿಗೆ ಎಷ್ಟು ಸ್ಥಾನ?
    2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 31, ಆಪ್ 28, ಕಾಂಗ್ರೆಸ್ 8 ಸ್ಥಾನಗಳನ್ನು ಗಳಿಸಿದ್ದರೆ, 2015ರ ಚುನಾವಣೆಯಲ್ಲಿ ಆಪ್ 67, ಬಿಜೆಪಿ 3 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2014 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎಲ್ಲ 7 ಸ್ಥಾನಗಳನ್ನು ಗೆದ್ದುಕೊಂಡಿತ್ತು.