Tag: MB Patil

  • ಕನ್ನೇರಿ ಶ್ರೀಗಳು ಆಡಿರುವ ಶಬ್ದಗಳು ಖಂಡನೀಯ, ಕ್ಷಮೆ ಕೇಳಬೇಕು – ಎಂ.ಬಿ ಪಾಟೀಲ್ ಆಗ್ರಹ

    ಕನ್ನೇರಿ ಶ್ರೀಗಳು ಆಡಿರುವ ಶಬ್ದಗಳು ಖಂಡನೀಯ, ಕ್ಷಮೆ ಕೇಳಬೇಕು – ಎಂ.ಬಿ ಪಾಟೀಲ್ ಆಗ್ರಹ

    ವಿಜಯಪುರ: ಕನ್ನೇರಿ ಶ್ರೀಗಳು ಆಡಿರುವ ಶಬ್ದಗಳು ಖಂಡನೀಯ, ಕ್ಷಮೆ ಕೇಳಬೇಕು ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಆಗ್ರಹಿಸಿದ್ದಾರೆ.

    ವಿಜಯಪುರದಲ್ಲಿ (Vijayapura)  ಮಾಧ್ಯಮದವರೊಂದಿಗೆ ಮಾತನಾಡಿ, ಕನ್ನೇರಿ ಶ್ರೀಗಳು (Kanneri Shri) ಸುಮ್ಮನೇ ಕ್ಷಮೆ ಕೇಳುವುದನ್ನು ಬಿಟ್ಟು ಭಂಡತನ ತೋರಿದ್ದಾರೆ. ಇದು ಸುಮ್ಮನೇ ಪೌರುಷ ತೋರಿಸಲು ಇಷ್ಟೆಲ್ಲಾ ಮಾಡಿದ್ದಾರೆ. ಶ್ರೀಗಳು ಆಡಿರುವ ಶಬ್ದಗಳು ಖಂಡನೀಯ, ಕ್ಷಮೆ ಕೇಳಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಕೇಸ್‌ನ ಆರೋಪಿ ಪ್ರದೋಷ್ ತಂದೆ ನಿಧನ – 20 ದಿನ ಮಧ್ಯಂತರ ಜಾಮೀನು ನೀಡಿದ ಕೋರ್ಟ್

    ಶ್ರೀಗಳು ಆಡುಭಾಷೆಯಲ್ಲಿ ಮಾತನಾಡಿದ್ದಾರೆ. ಆಡು ಭಾಷೆಯಲ್ಲಿ ಅನೇಕ ಶಬ್ದಗಳು ಬರುತ್ತವೆ. ನಾನು ಹಾಗೇ ಮಾತಾಡಿದ್ರೆ ಏನಾಗುತ್ತೆ. ಅಲ್ಲದೇ ಕನ್ನೇರಿ ಶ್ರೀಗಳಿಗೆ ಜಿಲ್ಲಾಪ್ರವೇಶ ನಿಷೇಧದ ಹಿಂದೆ ನಾನಿಲ್ಲ. ಅದು ಜಿಲ್ಲಾಡಳಿತ ನಿರ್ಧಾರ. ಕನ್ನೇರಿ ಶ್ರೀಗಳು ಸಿದ್ದೇಶ್ವರ ಶ್ರೀಗಳನ್ನು ನೋಡಿ ಕಲಿಯಬೇಕು. ಆಡು ಭಾಷೆಯಲ್ಲೆ ಪ್ರವಚನ ಮಾಡ್ತಿದ್ದರು. ಅವರು ಎಂದಾದರು ಈ ರೀತಿ ಮಾತನಾಡಿದ್ದಾರಾ? ಸಿದ್ದೇಶ್ವರ ಶ್ರೀಗಳು ಲಿಂಗಾಯತ ಧರ್ಮ ಒಂದು ಜಾಗತಿಕ ಧರ್ಮ ಅಂತಾ ಹೇಳಿದ್ದಾರೆ ಎಂದು ಹೇಳಿದ್ದಾರೆ.

  • ರಾಜ್ಯದಲ್ಲಿ 27,000 ಕೋಟಿ ಹೂಡಿಕೆಗೆ ಅಸ್ತು – 13 ಯೋಜನೆಗಳಿಂದ 8,000 ಉದ್ಯೋಗ ಸೃಷ್ಟಿ

    ರಾಜ್ಯದಲ್ಲಿ 27,000 ಕೋಟಿ ಹೂಡಿಕೆಗೆ ಅಸ್ತು – 13 ಯೋಜನೆಗಳಿಂದ 8,000 ಉದ್ಯೋಗ ಸೃಷ್ಟಿ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿಂದು ನಡೆದ ಸಭೆಯಲ್ಲಿ ರಾಜ್ಯದಲ್ಲಿ 13 ಕಂಪನಿಗಳಿಂದ 27,000 ಕೋಟಿ ರೂ. ಹೂಡಿಕೆ ಮಾಡಲು ಒಪ್ಪಿಗೆ ಸೂಚಿಸಲಾಯಿತು.

    ಸಿದ್ದರಾಮಯ್ಯ ವಿಧಾನಸೌಧದಲ್ಲಿಂದು ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ ಸಭೆಯಲ್ಲಿ ರಾಜ್ಯದಲ್ಲಿ 13 ಕಂಪನಿಗಳಿಂದ 27 ಸಾವಿರ ಕೋಟಿ ಹೂಡಿಕೆಗೆ (Investment Proposals) ಒಪ್ಪಿಗೆ ನೀಡಲಾಗಿದೆ. ಅದರ ಅನ್ವಯ 11 ಹೊಸ ಯೋಜನೆಗಳು, 8 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ. 11 ಹೊಸ ಕೈಗಾರಿಕಾ ಯೋಜನೆಗಳು ಮತ್ತು 2 ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳು ಸೇರಿವೆ ಒಟ್ಟು 13 ಯೋಜನೆಗಳಿಂದ 8,704 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಚಿವ ಎಂ.ಬಿ ಪಾಟೀಲ್‌ (MB Patil) ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

    11 ಹೊಸ ಹೂಡಿಕೆ ಯೋಜನೆಗಳ ಪೈಕಿ ತೇಜಸ್ ನೆಟ್ವರ್ಕ್ಸ್ 542.19 ಕೋಟಿ ರೂ., ವಾಯು ಅಸೆಟ್ಸ್ 1,251 ಕೋಟಿ ರೂ., ಜಿಂದಾಲ್ ಸ್ಟೀಲ್ಸ್ 1,300.57 ಕೋಟಿ ರೂ., ಜಿಂದಾಲ್ ಎಲೆಕ್ಟ್ರಿಕಲ್ ಸ್ಟೀಲ್ 7,102 ಕೋಟಿ ರೂ., ಗ್ರಾಸಿಂ ಇಂಡಸ್ಟ್ರೀಸ್ 1,386 ಕೋಟಿ ರೂ., ಎಸ್ಎಫ್ಎಕ್ಸ್ ಇಂಡಿಯಾ 9,298 ಕೋಟಿ ರೂ., ಸ್ನೀಡರ್ ಎಲೆಕ್ಟ್ರಿಕ್ ಐಟಿ ಬಿಝಿನೆಸ್, ಎಚ್ಎಸ್ಎಸ್ ಟೆಕ್ಸ್ಟೈಲ್ಸ್ 740 ಕೋಟಿ ರೂ., ಸ್ನೈಡರ್ ಎಲೆಕ್ಟ್ರಿಕ್ ಬಿಸಿನೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 1,520.75 ಕೋಟಿ ರೂ., ಕ್ಯೂಪಿಐಎಐ ಇಂಡಿಯಾ 1,136 ಕೋಟಿ ರೂ., ಟೊಯೋಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಲಿಮಿಟೆಡ್ 1,330 ಕೋಟಿ ರೂ. ಮತ್ತು ರಿಲಯನ್ಸ್ ಕನ್ಸೂಮರ್ ಪ್ರಾಡಕ್ಟ್ಸ್ 1,622 ಕೋಟಿ ರೂ., ಹೂಡಿಕೆ ಮಾಡಲಿವೆ. ಮಿಕ್ಕಂತೆ, ಎಂಬೆಸಿ ಇಂಡಸ್ಟ್ರಿಯಲ್ ಪಾರ್ಕ್ ಮತ್ತು ಬಾಲಾಜಿ ವೇಫರ್ಸ್ ಕಂಪನಿಗಳು ಕ್ರಮವಾಗಿ 80 ಮತ್ತು 298.75 ಕೋಟಿ ರೂ. ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡಲಿವೆ.

  • ಆಳಂದದಲ್ಲಿ 80 ರೂ.ಗೆ ವೋಟ್ ಡಿಲೀಟ್ ಸಾಕ್ಷಿ ಸಿಕ್ಕಿದೆ, ಚುನಾವಣಾ ಆಯೋಗ ಉತ್ತರಿಸಲಿ: ಪ್ರಿಯಾಂಕ್ ಖರ್ಗೆ, ಎಂ.ಬಿ ಪಾಟೀಲ್ ಆಗ್ರಹ

    ಆಳಂದದಲ್ಲಿ 80 ರೂ.ಗೆ ವೋಟ್ ಡಿಲೀಟ್ ಸಾಕ್ಷಿ ಸಿಕ್ಕಿದೆ, ಚುನಾವಣಾ ಆಯೋಗ ಉತ್ತರಿಸಲಿ: ಪ್ರಿಯಾಂಕ್ ಖರ್ಗೆ, ಎಂ.ಬಿ ಪಾಟೀಲ್ ಆಗ್ರಹ

    ಬೆಂಗಳೂರು: ಬಿಜೆಪಿ (BJP) ಅವರಿಂದ ಮತಗಳ್ಳತನ ಆಗುತ್ತಿದೆ ಎಂದು ನಾವು ಹೇಳಿದ್ವಿ. ಈಗ ಸಾರ್ವಜನಿಕವಾಗಿ ಮಾಹಿತಿ ಬರುತ್ತಿದೆ. ಒಂದು ವೋಟು ಡಿಲೀಟ್ ಮಾಡೋಕೆ 80 ರೂ. ತೆಗೆದುಕೊಂಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ (Priyank Kharge) ಟಾಂಗ್ ಕೊಟ್ಟಿದ್ದಾರೆ.

    ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಆಳಂದ ಫೈಲ್ಸ್ ಬಗ್ಗೆ ಎಸ್‌ಐಟಿ ತನಿಖೆ ಮುಗಿದಿಲ್ಲ, ಇನ್ನೂ 10 ದಿನ, ವಾರ ಆಗಬಹುದು. ಹಲವು ಸಾಕ್ಷಿಗಳು ಸಿಕ್ಕಿವೆ ಎನ್ನಲಾಗಿದೆ. ದಾಖಲೆ ಮುಂದಿಟ್ಟು ಚುನಾವಣಾ ಆಯೋಗವನ್ನ ಕೇಳುತ್ತೇವೆ, ದಾಖಲೆ ಕೊಟ್ಟು ಮಾತಾಡ್ತೀವಿ. ಇದು ಆಳಂದದ ಪ್ರಶ್ನೆ ಅಲ್ಲ, ಇಡೀ ವ್ಯವಸ್ಥೆಯ ಪ್ರಶ್ನೆ ಎಂದು ತಿರುಗೇಟು ನೀಡಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಜೋರಾದ ಉತ್ತರಾಧಿಕಾರಿ ಕದನ – ಯತೀಂದ್ರ ವಿರುದ್ಧ ಶಿಸ್ತುಕ್ರಮವೋ? ಸಿಎಂ ಪುತ್ರ ಅಂತ ಎಚ್ಚರಿಕೆಯೋ?

    ಫ್ರೀ ಆಂಡ್ ಫೇರ್ ಎಲೆಕ್ಷನ್ ಅಂತಾರೆ, ಫ್ರೀನೂ ಇಲ್ಲ. ಫೇರ್ ಕೂಡ ಇಲ್ಲ. ಹಣ ಕೊಟ್ಟು ಕೊಂಡುಕೊಳ್ತಾರೆ ಅಂದ್ರೆ ಹೇಗೆ? ಚುನಾವಣಾ ಆಯೋಗ ಈ ಬಗ್ಗೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

    ಇನ್ನು ಸಚಿವ ಎಂ.ಬಿ.ಪಾಟೀಲ್ ಕೂಡ ಪ್ರತಿಕ್ರಿಯಿಸಿದ್ದು, ರಾಹುಲ್ ಗಾಂಧಿ ಏನು ಹೇಳಿದ್ರು? ಏನು ಆರೋಪ ಮಾಡಿದ್ರು ಎಂದು ಈಗ ಗೊತ್ತಾಗ್ತಿದೆ. ಒಂದು ವೋಟ್ ಚೋರಿಗೆ 80 ರೂಪಾಯಿ ಅಂತೆ. ಪ್ರತಿ ಸಲ ಸಾಕ್ಷಿ ಕೊಡಿ, ಸಾಕ್ಷಿ ಕೊಡಿ ಅಂತಿದ್ದರು. ಅವರಿಗೆ ಅಫಿಡವಿಟ್ ನೀವು ಕೇಳ್ತೀರಾ? ಈಗ ಬಿಜೆಪಿ ಹಾಗೂ ಎಲೆಕ್ಷನ್ ಕಮಿಷನ್ ಹೇಳಲಿ. ನವೆಂಬರ್ ಕ್ರಾಂತಿ ಅಲ್ಲ, ಈಗ ಎಲೆಕ್ಷನ್ ಕಮಿಷನ್ ಕ್ರಾಂತಿ ಎಂಧು ಟಕ್ಕರ್ ಕೊಟ್ಟಿದ್ದಾರೆ.ಇದನ್ನೂ ಓದಿ: ಆಳಂದ ವೋಟ್ ಚೋರಿ ಕೇಸಲ್ಲಿ ಯಾರೇ ಇದ್ರೂ ಸರ್ಕಾರ ಕ್ರಮ ತೆಗೆದುಕೊಳ್ಳಲಿ – ರವಿಕುಮಾರ್

  • KSDL | ಸರ್ಕಾರಕ್ಕೆ ದಾಖಲೆಯ 135 ಕೋಟಿ ಡಿವಿಡೆಂಡ್ ಚೆಕ್ ಹಸ್ತಾಂತರ

    KSDL | ಸರ್ಕಾರಕ್ಕೆ ದಾಖಲೆಯ 135 ಕೋಟಿ ಡಿವಿಡೆಂಡ್ ಚೆಕ್ ಹಸ್ತಾಂತರ

    – ಒಂದೇ ವರ್ಷದಲ್ಲಿ 1,700 ಕೋಟಿ ರೂ. ವಹಿವಾಟು

    ಬೆಂಗಳೂರು: ಸಾರ್ವಜನಿಕ ವಲಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (KSDL) 2024-25ನೇ ಸಾಲಿನ ಲಾಭದಲ್ಲಿ 135 ಕೋಟಿ ರೂಪಾಯಿಗಳನ್ನು ಶುಕ್ರವಾರ ಸರ್ಕಾರಕ್ಕೆ ಹಸ್ತಾಂತರಿಸಿತು.

    ಸಂಸ್ಥೆಯ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್‌ (MB Patil) ಮತ್ತು ಕೆಎಸ್‌ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ (Appaji Nadagouda) ಅವರು ಈ ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದರು. ಈ ಕಾರ್ಯಕ್ರಮವು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು.

    ಈ ವೇಳೆ ಸಚಿವ ಪಾಟೀಲ್‌ ಮಾತನಾಡಿ, ಕೆಎಸ್‌ಡಿಎಲ್ ಸಂಸ್ಥೆಯು ಕಳೆದ ಹಣಕಾಸು ವರ್ಷದಲ್ಲಿ 1,700 ಕೋಟಿ ರೂಪಾಯಿ ವಹಿವಾಟು ನಡೆಸಿ, 451 ಕೋಟಿ ರೂ. ಲಾಭ ಕಂಡಿದೆ. ಇದರ ಪೈಕಿ ನಿಯಮದಂತೆ ಶೇ.30ರಷ್ಟು ಲಾಭಾಂಶವನ್ನು ಸರ್ಕಾರಕ್ಕೆ ಕೊಡಲಾಗಿದೆ. ವಹಿವಾಟು, ಲಾಭ ಮತ್ತು ಲಾಭಾಂಶ ಮೂರರಲ್ಲೂ ಇದು ಸಾರ್ವಕಾಲಿಕ ದಾಖಲೆ ಆಗಿದೆ ಎಂದಿದ್ದಾರೆ.

    2022-23ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಸಂಸ್ಥೆಯ ವತಿಯಿಂದ ಸರ್ಕಾರಕ್ಕೆ 54 ಕೋಟಿ ರೂಪಾಯಿ ಡಿವಿಡೆಂಡ್ (ಲಾಭಾಂಶ) ಕೊಡಲಾಗಿತ್ತು. 2023-24ರಲ್ಲಿ 108 ಕೋಟಿ ರೂ. ಲಾಭಾಂಶ ಹಸ್ತಾಂತರಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಲಾಭಾಂಶದಲ್ಲಿ ಈಗ 27 ಕೋಟಿ ರೂ. ಹೆಚ್ಚಳವಾಗಿದೆ. ಮುಂಬರುವ ವರ್ಷಗಳಲ್ಲಿ ಇದು ಮತ್ತಷ್ಟು ಹೆಚ್ಚಲಿದೆ ಎಂದು ಅವರು ನುಡಿದಿದ್ದಾರೆ.

    ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ ಜಾರ್ಜ್, ಪ್ರಿಯಾಂಕ್ ಖರ್ಗೆ, ಡಾ.ಎಂ.ಸಿ ಸುಧಾಕರ್‌, ಸಂತೋಷ ಲಾಡ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಕೆ ಪ್ರಶಾಂತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • ಐನಾಕ್ಸ್‌ವಿಂಡ್‌ ಕಂಪನಿಯಿಂದ ಕುಷ್ಟಗಿಯಲ್ಲಿ 400 ಕೋಟಿ ಹೂಡಿಕೆ: ಎಂಬಿ ಪಾಟೀಲ್‌

    ಐನಾಕ್ಸ್‌ವಿಂಡ್‌ ಕಂಪನಿಯಿಂದ ಕುಷ್ಟಗಿಯಲ್ಲಿ 400 ಕೋಟಿ ಹೂಡಿಕೆ: ಎಂಬಿ ಪಾಟೀಲ್‌

    ಬೆಂಗಳೂರು: ಪವನ ವಿದ್ಯುತ್‌ ಕ್ಷೇತ್ರದಲ್ಲಿ ಅಗತ್ಯವಾಗಿ ಬೇಕಾಗಿರುವ ದೈತ್ಯಾಕಾರದ ಬ್ಲೇಡ್‌ಗಳು ಮತ್ತು ಗೋಪುರಗಳ ಉತ್ಪಾದನೆಗೆ ಹೆಸರಾಗಿರುವ ಐನಾಕ್ಸ್‌ವಿಂಡ್‌ (Inox Wind) ಕಂಪನಿಯು ಕೊಪ್ಪಳ (Koppala) ಜಿಲ್ಲೆಯ ಕುಷ್ಟಗಿ (Kustgai) ತಾಲ್ಲೂಕಿನ ಕ್ಯಾದಿಗುಪ್ಪ ಕೈಗಾರಿಕಾ ಪ್ರದೇಶದಲ್ಲಿ 400 ಕೋಟಿ ರೂ. ಬಂಡವಾಳ ಹೂಡಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್‌ (MB Patil) ಬುಧವಾರ ತಿಳಿಸಿದ್ದಾರೆ.

    ಖನಿಜ ಭವನದಲ್ಲಿ ಕಂಪನಿಯ ಕಾರ್ಪೊರೇಟ್ ತಂತ್ರಗಾರಿಕೆ ವಿಭಾಗದ ಅಧ್ಯಕ್ಷ ಸಂತೋಷ್‌ ಖೈರ್ನಾರ್‌ ಜೊತೆ ಇಂದು ಮಾತುಕತೆ ನಡೆಸಿದರು.

    ಬಳಿಕ ಮಾಹಿತಿ ನೀಡಿದ ಸಚಿವರು, ಐನಾಕ್ಸ್‌ವಿಂಡ್‌ ಕಂಪನಿಯ ಮಾಲೀಕರಾಗಿರುವ ದೇವಾಂಶ್‌ ಜೈನ್‌ ಅವರು ತಮ್ಮ ಕಂಪನಿಗೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆಯೇ 70 ಎಕರೆ ಭೂಮಿ ಬೇಕು. ಅತ್ಯುತ್ತಮ ಮತ್ತು ವಿಶಾಲ ರಸ್ತೆಗಳು ಇಲ್ಲದ ಕಡೆ ಭೂಮಿ ಒದಗಿಸಿದರೆ ಬೃಹದಾಕಾರದ ಬ್ಲೇಡುಗಳು ಮತ್ತು ಗೋಪುರಗಳನ್ನು ಸಾಗಿಸಲು ಸಾಧ್ಯವಾಗುವುದಿಲ್ಲ ಎಂದು ನನಗೆ ಪತ್ರ ಬರೆದು ಕೋರಿದ್ದರು ಎಂದಿದ್ದಾರೆ. ಇದನ್ನೂ ಓದಿ: ಅಹಮದಾಬಾದ್‌ನಲ್ಲಿ ನಡೆಯಲಿದೆ 2030ರ ಕಾಮನ್‌ವೆಲ್ತ್‌ ಗೇಮ್ಸ್‌

    ಮೊದಲಿಗೆ ವಿಜಯಪುರ ಜಿಲ್ಲೆಯಲ್ಲಿ ಈ ಕಂಪನಿ ಬಂಡವಾಳ ಹೂಡಿಕೆಗೆ ಒಲವು ತೋರಿತ್ತು. ಆದರೆ ಅಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಕೈಗಾರಿಕಾ ಪ್ರದೇಶವಿಲ್ಲ. ಕಂಪನಿಯು ಎರಡು ಹಂತಗಳಲ್ಲಿ ಒಟ್ಟು 400 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ತೀರ್ಮಾನಿಸಿದೆ. ಕುಷ್ಟಗಿ ತಾಲೂಕಿನಲ್ಲಿ ಈಗಾಗಲೇ ಇದ್ದ ಕೆಐಎಡಿಬಿ ಭೂಮಿಯನ್ನೇ ಈಗ ಕೊಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

    ಐನಾಕ್ಸ್‌ವಿಂಡ್‌ ಕಂಪನಿಯು ಮೊದಲನೆಯ ಹಂತದಲ್ಲಿ 300 ಕೋಟಿ ರೂ. ಹೂಡಲಿದ್ದು ಬ್ಲೇಡುಗಳನ್ನು ತಯಾರಿಸಲಿದೆ. ಎರಡನೆಯ ಹಂತದಲ್ಲಿ 100 ಕೋಟಿ ರೂ. ಹೂಡಿಕೆಯೊಂದಿಗೆ ಗೋಪುರಗಳನ್ನು ಉತ್ಪಾದಿಸಲಿದೆ. ಈ ಯೋಜನೆಯಿಂದ ನೇರವಾಗಿ 1,000 ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಕಂಪನಿಯು ಪವನ ವಿದ್ಯುತ್‌ ಕ್ಷೇತ್ರಕ್ಕೆ ಬೇಕಾಗುವ ಬಾನೆತ್ತರದ ಕಂಬಗಳನ್ನೂ ತಯಾರಿಸಲಿದೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ದೀಪಾವಳಿಗೆ ಸಿಹಿ ಸುದ್ದಿ- ರಾಜ್ಯದ ಸರ್ಕಾರಿ ನೌಕರರ DA 2% ಏರಿಕೆ

    ಹೊಸ ಕೈಗಾರಿಕಾ ನೀತಿಯ ಅನ್ವಯ ಕೊಡುವ ಎಲ್ಲ ಸೌಲಭ್ಯಗಳನ್ನೂ ಐನಾಕ್ಸ್‌ವಿಂಡ್‌ ಕಂಪನಿಗೂ ಕೊಡಲಾಗುವುದು. ಇದರಿಂದಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೂ ಒಳ್ಳೆಯದಾಗಲಿದ್ದು, ಪ್ರಾದೇಶಿಕ ಅಸಮಾನತೆ ನಿವಾರಣೆಯತ್ತ ಒಂದು ದೊಡ್ಡ ಹೆಜ್ಜೆಯಾಗಲಿದೆ ಎಂದು ಪಾಟೀಲ ಭರವಸೆ ವ್ಯಕ್ತಪಡಿಸಿದ್ದಾರೆ.

    ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ಬಕುಮಾರ್, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

  • ಸೇನಾ ಕ್ಯಾಂಟೀನ್ ಮಾದರಿಯಲ್ಲಿ ಸರ್ಕಾರಿ ನೌಕರರಿಗೆ MSIL ಸೂಪರ್‌ ಮಾರ್ಕೆಟ್‌ ಚಿಂತನೆ: ಎಂ ಬಿ ಪಾಟೀಲ್‌

    ಸೇನಾ ಕ್ಯಾಂಟೀನ್ ಮಾದರಿಯಲ್ಲಿ ಸರ್ಕಾರಿ ನೌಕರರಿಗೆ MSIL ಸೂಪರ್‌ ಮಾರ್ಕೆಟ್‌ ಚಿಂತನೆ: ಎಂ ಬಿ ಪಾಟೀಲ್‌

    – ತಿಂಗಳಲ್ಲಿ ಸಾಧ್ಯಾಸಾಧ್ಯತೆ ವರದಿ ಕೊಡಲು ಸೂಚನೆ
    – ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ 4-5 ಮಳಿಗೆ

    ಬೆಂಗಳೂರು: ಪೊಲೀಸ್ ಮತ್ತು ಸೇನಾ‌ ಕ್ಯಾಂಟೀನ್ (Army Canteen) ಮಾದರಿಯಲ್ಲೇ ರಾಜ್ಯ ಸರಕಾರಿ ನೌಕರರಿಗೆ ದಿನನಿತ್ಯದ ಬದುಕಿಗೆ ಅಗತ್ಯವಿರುವ ಪ್ರತಿಯೊಂದು ವಸ್ತುವೂ ರಿಯಾಯಿತಿ ದರದಲ್ಲಿ ಸಿಗಬೇಕೆಂಬ ಉದ್ದೇಶದೊಂದಿಗೆ ಸರಕಾರಿ ಸ್ವಾಮ್ಯದ ಎಂಎಸ್‌ಐಎಲ್‌ (MSIL) ವತಿಯಿಂದ ಸೂಪರ್‌ ಮಾರ್ಕೆಟ್‌ (Super Market) ಆರಂಭಿಸುವ ಚಿಂತನೆ ಇದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್‌ (MB Patil) ತಿಳಿಸಿದ್ದಾರೆ.

    ಈ ಸಂಬಂಧ ಅವರು ಖನಿಜ ಭವನದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್‌ ಕುಮಾರ್‌ ಸೇರಿದಂತೆ ಇತರ ಹಿರಿಯ ಅಧಿಕಾರಿಗಳೊಂದಿಗೆ ಬುಧವಾರ ಪ್ರಾಥಮಿಕ ಸುತ್ತಿನ ಸಭೆ ನಡೆಸಿದರು.

    ಬಳಿಕ ಮಾಹಿತಿ ನೀಡಿದ ಅವರು, ರಾಜ್ಯದ ಪೊಲೀಸ್, ಅರೆ ಸೇನಾ ಪಡೆಗಳ ನೌಕರರಿಗೆ ಈ ರೀತಿಯ ಕ್ಯಾಂಟೀನ್‌ ಸೌಲಭ್ಯವಿದೆ. ರಾಜ್ಯದಲ್ಲಿ 6 ಲಕ್ಷ ಸರ್ಕಾರಿ ನೌಕರರಿದ್ದಾರೆ. ಅವರ ಕುಟುಂಬಗಳ ಹಿತದೃಷ್ಟಿಯಿಂದ ಇಂಥದ್ದೊಂದು ಉಪಕ್ರಮ ಆರಂಭಿಸುವುದು ನಮ್ಮ ಚಿಂತನೆಯಾಗಿದೆ. ಇದಕ್ಕೆ ಸಬ್ಸಿಡಿ ಅಥವಾ ತೆರಿಗೆ ವಿನಾಯಿತಿ ಪಡೆದುಕೊಳ್ಳುವುದು ಹೇಗೆಂದು ಆರ್ಥಿಕ ಇಲಾಖೆಯ ಜೊತೆ ಚರ್ಚಿಸಲಾಗುವುದು. ಒಟ್ಟಿನಲ್ಲಿ ಇಂತಹ ಸೂಪರ್‌ ಮಾರ್ಕೆಟ್‌ ಮಳಿಗೆ ಆರಂಭಿಸುವ ಸಾಧ್ಯಾಸಾಧ್ಯತೆ ಕುರಿತು ತಮಗೆ ಒಂದು ತಿಂಗಳಲ್ಲಿ ವಿಸ್ತೃತ ವರದಿ ಸಲ್ಲಿಸುವಂತೆ ಎಂಎಸ್‌ಐಎಲ್‌ಗೆ ಸೂಚಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ:  ದೀಪಾವಳಿಗೆ ಸಿಹಿ ಸುದ್ದಿ- ರಾಜ್ಯದ ಸರ್ಕಾರಿ ನೌಕರರ DA 2% ಏರಿಕೆ

     

    ಉದ್ದೇಶಿತ ಎಂಎಸ್‌ಐಎಲ್‌ ಸೂಪರ್‌ ಮಾರ್ಕೆಟ್‌ನಲ್ಲಿ ನಮ್ಮ ಸರ್ಕಾರಿ ನೌಕರರ ದಿನನಿತ್ಯದ ಬದುಕಿಗೆ ಬೇಕಾದ ದವಸ-ಧಾನ್ಯದಿಂದ ಹಿಡಿದು ಎಫ್‌ಎಂಸಿಜಿ ವಲಯದಲ್ಲಿ ಬರುವ ಪ್ರತಿಯೊಂದು ಪದಾರ್ಥವೂ ರಿಯಾಯಿತಿ ದರದಲ್ಲಿ ಸಿಗುವಂತಾದರೆ ಚೆನ್ನಾಗಿರುತ್ತದೆ. ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ 4-5 ಮಳಿಗೆಗಳನ್ನು ತೆರೆಯುವ ಆಲೋಚನೆ ಇದೆ. ನಂತರದ ದಿನಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲೂ ಇಂತಹ ಸೌಲಭ್ಯ ವಿಸ್ತರಣೆಗೆ ಮುಂದಾಗಬಹುದು. ಒಟ್ಟಿನಲ್ಲಿ ಅಧ್ಯಯನ ವರದಿ ಬಂದ ನಂತರ ತೀರ್ಮಾನಿಸಲಾಗುವುದು ಎಂದು ಅವರು ಹೇಳಿದ್ದಾರೆ.

    ಇದರಿಂದ ಸರಕಾರಿ ಸ್ವಾಮ್ಯದ ಎಂಎಸ್‌ಐಎಲ್‌ ಚಟುವಟಿಕೆಯೂ ವಿಸ್ತಾರಗೊಂಡು, ಆದಾಯದ ಮೂಲವೊಂದು ಸಿಗಲಿದೆ. ಅಲ್ಲದೇ ಲಕ್ಷಾಂತರ ಸರ್ಕಾರಿ ನೌಕರರ ಕುಟುಂಬಗಳಿಗೂ ಇದರಿಂದ ಪ್ರಯೋಜನವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರಿ ನೌಕರರ ಸಂಘಟನೆಗಳ ಜತೆ ಮಾತುಕತೆ ನಡೆಸುವಂತೆಯೂ ಅವರು ಸೂಚಿಸಿದ್ದಾರೆ. ಇದನ್ನೂ ಓದಿ:  ಬೆಂಗಳೂರು ನಿವಾಸಿಗಳಿಗೆ ದೀಪಾವಳಿಗೂ ಮೊದಲೇ ಗಿಫ್ಟ್‌; ಬಿ-ಖಾತಾ ಪರಿವರ್ತನೆಗೆ ಹೊಸ ಪೋರ್ಟಲ್‌

    ಎಂಎಸ್‌ಐಎಲ್‌ನ ಚಟುವಟಿಕೆಗಳು ಈಗ ಸೀಮಿತ ಪ್ರಮಾಣದಲ್ಲಿವೆ. ಇದಕ್ಕೆ ಮತ್ತಷ್ಟು ಕಸುವು ತುಂಬಿ, ಆರ್ಥಿಕವಾಗಿ ಮತ್ತಷ್ಟು ಸದೃಢಗೊಳಿಸಬೇಕೆಂಬ ಆಲೋಚನೆ ತಮ್ಮದಾಗಿದೆ. ಇದರಿಂದ ಅಪಾರ ಸಂಖ್ಯೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ಎಂಎಸ್ಐಎಲ್ ನಿರ್ದೇಶಕ ಚಂದ್ರಪ್ಪ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

  • ಲಿಂಗಾಯತ ಪ್ರತ್ಯೇಕ ಧರ್ಮದ ವಿವಾದವನ್ನು ಈ ಬಾರಿ ಸಿಎಂ ತಲೆಗೆ ಕಟ್ಟಲು ಆಗಲ್ಲ: ಎಂ.ಬಿ.ಪಾಟೀಲ್

    ಲಿಂಗಾಯತ ಪ್ರತ್ಯೇಕ ಧರ್ಮದ ವಿವಾದವನ್ನು ಈ ಬಾರಿ ಸಿಎಂ ತಲೆಗೆ ಕಟ್ಟಲು ಆಗಲ್ಲ: ಎಂ.ಬಿ.ಪಾಟೀಲ್

    ಬೆಂಗಳೂರು: ಪ್ರತ್ಯೇಕ ಲಿಂಗಾಯತ (Lingayat) ಧರ್ಮ ಆಗಬೇಕು, ಆದರೆ ಧರ್ಮ ಒಡೆದ ಆರೋಪ ಕಳೆದ ಬಾರಿ ಸಿದ್ದರಾಮಯ್ಯ (Siddaramaiah) ತಲೆಗೆ ಕಟ್ಟಿದಂತೆ ಈ ಬಾರಿ ಕಟ್ಟಲು ಆಗುವುದಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ (MB Patil) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜೈನರು ಸಿಖ್ಖರು ಬೌದ್ಧರಿಂದ ಯಾರಿಗಾದರೂ ತೊಂದರೆ ಆಗಿದೆಯಾ? ಇಲ್ಲವಲ್ಲ, ಹಾಗೆಯೇ ಲಿಂಗಾಯತ ಪ್ರತ್ಯೇಕ ಧರ್ಮ. ಈ ಬಾರಿ ಸಿದ್ದರಾಮಯ್ಯ ತಲೆಗೆ ಕಟ್ಟುವುದಕ್ಕೆ ಆಗುವುದಿಲ್ಲ. ಹಿಂದೆ ಆಟ ಆಡಿದ ಹಾಗೆ ಈಗ ಆಟ ಆಡಲು ಆಗುವುದಿಲ್ಲ. ಭಾನುವಾರ ಹೇಳಿದ್ದೇವೆ, ಭೌಗೋಳಿಕವಾಗಿ ನಾವೆಲ್ಲ ಭಾರತೀಯರು, ಭೌಗೋಳಿಕವಾಗಿ ನಾವೆಲ್ಲ ಹಿಂದೂಗಳು. ಆದರೆ ಇದು ಬಸವ ಧರ್ಮ, ಇಂಡಿಕ್ ರಿಲಿಜಿಯನ್ ಇದರಲ್ಲಿ ಪ್ರಶ್ನೆ ಏನಿದೆ?ಹೋದ ಸಲ ಸಿದ್ದರಾಮಯ್ಯ ತಲೆಗೆ ಕಟ್ಟಿದರು. ಆದರೆ ಈ ಸಲ ಯಾರ ಆಟಗಳೂ ನಡೆಯುವುದಿಲ್ಲ ಎಂದರು. ಇದನ್ನೂ ಓದಿ: ಸಿಎಂ ಅಂತರಂಗದಲ್ಲಿ ಏನಿದೆ? ಪ್ರತ್ಯೇಕ ಧರ್ಮದ ಪರ ಯಾರಿದ್ದಾರೆ ಅಂತ ಸಮಾಜಕ್ಕೆ ಗೊತ್ತಿದೆ: ವಿಜಯೇಂದ್ರ

    ನಾವು ಪಾಸಿಟಿವ್ ಆಗಿ ಹೋಗೋಣ. ನಾವು ಲಿಂಗಾಯತ ಧರ್ಮದವರು, ಚತುರ್ವರ್ಣದಿಂದ ಹೊರಗೆ ಉಳಿದಿದ್ದೇವೆ. ಭಾನುವಾರ ಕಾರ್ಯಕ್ರಮ ನಡೆದಿದ್ದು ಮಠಾಧಿಪತಿಗಳ ಒಕ್ಕೂಟದಿಂದ. ಯಾರಿಗೆ ದ್ವಂದ್ವ ನಿಲುವು ಇದೆ, ಅವರನ್ನು ಕರೆಸಿಲ್ಲ. ನೇರವಾಗಿ ಇರುವವರನ್ನು ಕರೆದಿದ್ದಾರೆ. ವೀರಶೈವ ಮಹಾಸಭಾ ಕೂಡ ಒಂದು ಹಂತಕ್ಕೆ ಹತ್ತಿರ ಬಂದಿದೆ. ಅವರೂ ನಮ್ಮೊಂದಿಗೆ ಅರ್ಧ ದಾರಿಗೆ ಬಂದಿದ್ದಾರೆ. ಭಾನುವಾರ ಯಾರೂ ಜಾತಿ ಹೆಸರು ಬರೆಸಿ ಅಂತ ಕೇಳಿಲ್ಲ. ಸಣ್ಣಸಣ್ಣ ಉಪ ಪಂಗಡಗಳನ್ನು ಒಟ್ಟಿಗೆ ಕೊಂಡೊಯ್ಯಬೇಕು. ಇವರೊಂದಿಗೆ ನಾವು ಸಂಬಂಧ ಬೆಳೆಸಿಲ್ಲ. ಎಲ್ಲರನ್ನೂ ಅಪ್ಪಿಕೊಳ್ಳಬೇಕು. ಇವರೆಲ್ಲರಿಗೂ ರಾಜಕೀಯವಾಗಿ ಶಕ್ತಿ ತುಂಬಬೇಕು. ನಾವು ಹಿಂದೂ ವಿರೋಧಿಗಳಲ್ಲ, ವೀರಶೈವ ವಿರೋಧಿಗಳೂ ಅಲ್ಲ. ಜೈನರು ಸಿಖ್ಖರಿಂದ ಯಾರಿಂದಾದರೂ ತೊಂದರೆ ಆಗಿದೆಯಾ? ಆದ್ರೂ ಯಾಕೆ ಲಿಂಗಾಯತರ ಬೆನ್ನು ಬೀಳ್ತೀರಿ? ಕೇಂದ್ರ ಓಬಿಸಿಗೆ ಸೇರಿಸಿ ಎಂಬುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸುಪ್ರೀಂ ಸಿಜೆಐ ತಾಯಿ ಆರ್‌ಎಸ್‌ಎಸ್ ಕಾರ್ಯಕ್ರಮದ ಆಹ್ವಾನ ಸ್ವೀಕರಿಸದ್ದಕ್ಕೆ ಕೃತ್ಯ: ಸಂತೋಷ್ ಲಾಡ್

  • ಸುಂಕದ ಬಿಕ್ಕಟ್ಟನ್ನು ಕೇಂದ್ರ ಸರ್ಕಾರ ಬಗೆಹರಿಸಲಿ – ಎಂ.ಬಿ ಪಾಟೀಲ್ ಸಲಹೆ

    ಸುಂಕದ ಬಿಕ್ಕಟ್ಟನ್ನು ಕೇಂದ್ರ ಸರ್ಕಾರ ಬಗೆಹರಿಸಲಿ – ಎಂ.ಬಿ ಪಾಟೀಲ್ ಸಲಹೆ

    ಬೆಂಗಳೂರು: ಅಮೆರಿಕವು (America) ಭಾರತದ ಉತ್ಪನ್ನಗಳ ಮೇಲೆ ವಿಪರೀತ ಸುಂಕ ವಿಧಿಸುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಈಗ ಅವರು ನಮ್ಮ ಔಷಧೋತ್ಪನ್ನಗಳ ಮೇಲೂ ವಿಪರೀತ ಸುಂಕ ಹೇರಿದ್ದಾರೆ. ಕೇಂದ್ರ ಸರ್ಕಾರವು (Central Govt) ಮಧ್ಯ ಪ್ರವೇಶಿಸಿ ಇದನ್ನು ತ್ವರಿತವಾಗಿ ಬಗೆಹರಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಅವರು ಹೇಳಿದರು.

    ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಚೀನಾ ಮತ್ತು ವಿಯೆಟ್ನಾಂ ಎರಡೂ ಉತ್ಪಾದನೆ ಹಾಗೂ ರಫ್ತಿನಲ್ಲಿ ನಮಗಿಂತ ಮುಂದಿವೆ. ಅವುಗಳ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮವಾಗಿ ಶೇ.30 ಮತ್ತು ಶೇ.19ರಷ್ಟು ಮಾತ್ರ ಸುಂಕ ಹೇರಿದ್ದಾರೆ. ಆದರೆ ಭಾರತದ ಉತ್ಪನ್ನಗಳ ಮೇಲೆ ಶೇ.50ರಷ್ಟು ಸುಂಕ ಹೇರಿದ್ದಾರೆ. ಇದರಿಂದ ನಮಗೆ ಹೊಡೆತ ಬೀಳುತ್ತಿರುವುದು ಸುಳ್ಳಲ್ಲ ಎಂದರು.ಇದನ್ನೂ ಓದಿ: ನಾನು ಬಸವ ಧರ್ಮದ ಪರ ಇರೋನು, ಧರ್ಮದ ಕಾಲಮ್‌ನಲ್ಲಿ ಲಿಂಗಾಯತ ಧರ್ಮ ಅಂತನೇ ಬರೆಸ್ತೀನಿ: ಎಂ.ಬಿ ಪಾಟೀಲ್‌

    ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಸಲ ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಬ್ ಕೀ ಬಾರ್ ಟ್ರಂಪ್ ಎಂದು ಅವರ ಪರ ನೇರವಾಗಿ ಪ್ರಚಾರ ಮಾಡಿದ್ದರು. ಆದರೆ ಆಗ ಜೋ ಬೈಡನ್ ಗೆದ್ದರು. ಅವರೇನೂ ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಲಿಲ್ಲ. ಈ ಸಲ ಗೆದ್ದು ಬಂದ ಮೇಲೆ ಟ್ರಂಪ್ ಭಾರತದ ಮೇಲೆ ಅತಾರ್ಕಿಕವಾಗಿ ಸುಂಕ ವಿಧಿಸುತ್ತಿದ್ದು, ನಾವು ಅದರ ದುಷ್ಪರಿಣಾಮವನ್ನು ಎದುರಿಸಬೇಕಾಗಿ ಬಂದಿದೆ. ಎಚ್1-ಬಿ ವೀಸಾ ಮೇಲೆ ವರ್ಷಕ್ಕೆ ಒಂದು ಲಕ್ಷ ಡಾಲರ್ ಶುಲ್ಕ ವಿಧಿಸಿರುವುದು ಆಘಾತಕಾರಿಯಾಗಿದೆ. ಇಂತಹ ತೀರ್ಮಾನ ನಮ್ಮ ಐಟಿ ಸೇವೆಗಳು ಮತ್ತು ಎಫ್.ಡಿ.ಐ. ಮೇಲೆ ಕರಿನೆರಳನ್ನು ಸೃಷ್ಟಿಸುತ್ತಿದೆ. ಮೋದಿಯವರು ಇದನ್ನು ಬಗೆಹರಿಸಬೇಕು ಎಂದು ಪ್ರತಿಪಾದಿಸಿದರು.

    ಟ್ರಂಪ್ ಇದುವರೆಗೂ ನಮ್ಮ ಎಲೆಕ್ಟ್ರಾನಿಕ್ ಮತ್ತು ಫಾರ್ಮಾ ಉತ್ಪನ್ನಗಳಿಗೆ ಸುಂಕದಿಂದ ವಿನಾಯಿತಿ ನೀಡಿದ್ದರು. ಆದರೆ ಈಗ ಫಾರ್ಮಾ ಉತ್ಪನ್ನಗಳನ್ನೂ ಬಿಟ್ಟಿಲ್ಲ. ಇದು ಕೇವಲ ಕರ್ನಾಟಕದ ಮೇಲೆ ಮಾತ್ರವಲ್ಲ, ಇಡೀ ಭಾರತದ ಮೇಲೆ ಪರಿಣಾಮ ಉಂಟುಮಾಡುತ್ತಿದೆ. ಟ್ರಂಪ್ ಏನೇ ಮಾಡಲಿ, ನಾವು ದೇಶದ ಪರವಾಗಿದ್ದೇವೆ. ನಮ್ಮಲ್ಲಿ ಅಪಾರ ಪ್ರತಿಭೆ ಇದೆ ಎಂದು ಅಭಿಪ್ರಾಯಪಟ್ಟರು.

    ಸದ್ಯದಲ್ಲೇ ಎಂಎಸ್‌ಐಎಲ್ ಚಿಟ್ ಫಂಡ್:
    ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ವತಿಯಿಂದ ವಾರ್ಷಿಕ 10 ಸಾವಿರ ಕೋಟಿ ರೂ. ವಹಿವಾಟು ಗುರಿಯುಳ್ಳ ಚಿಟ್ ಫಂಡ್ ವ್ಯವಹಾರವನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ತಿಳಿಸಿದರು.

    ಎಂಎಸ್‌ಐಎಲ್ ಸದ್ಯಕ್ಕೆ ವಾರ್ಷಿಕವಾಗಿ ಕೇವಲ 500 ಕೋಟಿ ರೂ. ಮೊತ್ತದ ಚಿಟ್ ಫಂಡ್ ನಡೆಸುತ್ತಿದೆ. ಆದರೆ ಪಕ್ಕದ ಕೇರಳದಲ್ಲಿ ಅಲ್ಲಿನ ಸರ್ಕಾರವು ವರ್ಷಕ್ಕೆ 1 ಲಕ್ಷ ಕೋಟಿ ರೂ. ಮೊತ್ತದ ಚಿಟ್ ಫಂಡ್ ನಡೆಸುತ್ತಿದೆ. ಎಂಎಸ್‌ಐಎಲ್ ಉಪಕ್ರಮವು ಸಂಪೂರ್ಣವಾಗಿ ಡಿಜಿಟಲ್ ಸ್ವರೂಪದಲ್ಲಿ ಇರಲಿದೆ. ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತುಕತೆ ನಡೆಸಿದ್ದು, ಸದ್ಯದಲ್ಲೇ ಉದ್ಘಾಟಿಸಲಾಗುವುದು ಎಂದು ಹೇಳಿದರು.ಇದನ್ನೂ ಓದಿ: ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ: ಜಾತಿಗಣತಿ ಬಹಿಷ್ಕಾರಕ್ಕೆ ತೇಜಸ್ವಿ ಸೂರ್ಯ ಕರೆ

  • ಜಾತಿ ಕಾಲಂನಲ್ಲಿ ಕುರುಬ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ಬಗ್ಗೆ ಸಿಎಂ ಬಳಿ ಕೇಳಿದ್ದೇವೆ – ಎಂ.ಬಿ ಪಾಟೀಲ್

    ಜಾತಿ ಕಾಲಂನಲ್ಲಿ ಕುರುಬ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ಬಗ್ಗೆ ಸಿಎಂ ಬಳಿ ಕೇಳಿದ್ದೇವೆ – ಎಂ.ಬಿ ಪಾಟೀಲ್

    ವಿಜಯಪುರ: ಜಾತಿ ಕಾಲಂನಲ್ಲಿ ಕುರುಬ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಬಳಿ ಕೇಳಿದ್ದೇವೆ ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿದರು.

    ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಕಾಲಂನಲ್ಲಿ ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಕುರುಬ ಎಂದು ಕಾಲಂ ಹಾಕಿದ್ದರ ಬಗ್ಗೆ ಕ್ಯಾಬಿನೆಟ್‌ನಲ್ಲಿ ಮಾತನಾಡಿದ್ದೇವೆ. ಸಿಎಂ ಎದುರು ಸಭೆಯಲ್ಲಿ ಈ ವಿಚಾರಗಳನ್ನ ಪ್ರಸ್ತಾಪಿಸಿದ್ದೇವೆ. ಮುಸ್ಲಿಂ ಕ್ರಿಶ್ಚಿಯನ್ ಯಾಕಿಲ್ಲ ಎನ್ನುವ ಬಗ್ಗೆ ಕೂಡ ಕೇಳಿದ್ದೇವೆ. ಈ ರೀತಿ ಏನಾದರೂ ಇದ್ದರೆ ಬದಲಾವಣೆಗೆ ಹೇಳಿದ್ದೇವೆ ಎಂದರು.ಇದನ್ನೂ  ಓದಿ: 7 ಕೋಟಿ ಜನರಿಗೂ ತೃಪ್ತಿಯಾಗುವಂತೆ ಜಾತಿಗಣತಿ ಸಮೀಕ್ಷೆ ನಡೆಯಲಿದೆ: ಖಂಡ್ರೆ

    ಇಂಡಿಯಾ ಮತ್ತು ಪಾಕ್ ಮ್ಯಾಚ್ ವಿಚಾರಕ್ಕೆ ಮಾತನಾಡಿ ಪಾಕಿಸ್ತಾನ್ ಜೊತೆಗೆ ಮ್ಯಾಚ್ ಆಡಬಾರದಿತ್ತು. ಪಾಕಿಸ್ತಾನದ ಜೊತೆಗೆ ಸಂಬಂಧ ಕಟ್ ಆಗಬೇಕು. ಮುಗ್ಧ ಜನರನ್ನ ಪಾಕಿಸ್ತಾನದವರು ಹತ್ಯೆ ಮಾಡಿದ್ದಾರೆ. ಪಾಕ್ ಜೊತೆಗೆ ಮ್ಯಾಚ್ ಹಮ್ಮಿಕೊಂಡಿದ್ದೆ ಮಹಾತಪ್ಪು. ಪಾಕ್ ಜೊತೆಗೆ ಮ್ಯಾಚ್ ಆಡಿದ್ರೆ ಆ ಕುಟುಂಬಗಳಿಗೆ ಏನ್ ಅನಿಸುತ್ತೆ? ಮ್ಯಾಚ್ ಆಡಿದ್ರೆ ಆ ಕುಟುಂಬಗಳಿಗೆ ನೋವು ಆಗಲ್ವಾ? ಅಮಿತ್ ಶಾ ಪುತ್ರನೇ ಬಿಸಿಸಿ ಅಧ್ಯಕ್ಷ ಅಲ್ವಾ, ಮ್ಯಾಚ್ ಯಾಕೆ ನಡೆಸ್ತಿರೋದು ಎಂದು ಆಕ್ರೋಶ ವ್ಯಕ್ತಪಡಿಸಿದರು.

    .

  • ವಿಜಯಪುರ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ 270 ಕೋಟಿ ಕೊಡಲು ಒಪ್ಪಿಗೆ: ಎಂ.ಬಿ ಪಾಟೀಲ್

    ವಿಜಯಪುರ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ 270 ಕೋಟಿ ಕೊಡಲು ಒಪ್ಪಿಗೆ: ಎಂ.ಬಿ ಪಾಟೀಲ್

    ಬೆಂಗಳೂರು/ವಿಜಯಪುರ: ಏರ್‌ಬಸ್-320 ಮಾದರಿಯ ದೊಡ್ಡ ವಿಮಾನಗಳ ಕಾರ್ಯಾಚರಣೆ ಮತ್ತು ರಾತ್ರಿ ವೇಳೆ ಲ್ಯಾಂಡಿಂಗ್ ಸೌಲಭ್ಯ ಅಭಿವೃದ್ಧಿ ಸೇರಿದಂತೆ ಇತರ ಅನುಕೂಲಗಳಿಗಾಗಿ ವಿಜಯಪುರ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಕಾಮಗಾರಿಗಳಿಗೆ ಹೆಚ್ಚುವರಿಯಾಗಿ 270.83 ಕೋಟಿ ರೂ. ಒದಗಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಮತ್ತು ವಿಜಯಪುರ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

    ಈ ಬಗ್ಗೆ ವಿವರ ಮಾಹಿತಿ ನೀಡಿರುವ ಅವರು, ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿ, ಒಪ್ಪಿಗೆ ನೀಡಲಾಗಿದೆ. ಇದರಿಂದಾಗಿ ವಿಜಯಪುರ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿನ ಒಟ್ಟು ವೆಚ್ಚವು 618.75 ಕೋಟಿ ರೂ.ಗಳಾಗಲಿದೆ. ಎಟಿಆರ್ ಮಾದರಿಯ ನಾಗರಿಕ ವಿಮಾನ ಕಾರ್ಯಾಚರಣೆಗೆ ಸೀಮಿತವಾಗಿದ್ದ ವಿಮಾನ ನಿಲ್ದಾಣದ ಮೂಲ ವಿನ್ಯಾಸವನ್ನು ಏರ್‌ಬಸ್-320 ಮಾದರಿಯ ವಿಮಾನಗಳ ಕಾರ್ಯಾಚರಣೆಗೂ ಅನುಕೂಲವಾಗುವಂತೆ ಬದಲಿಸಿದ್ದರಿಂದ ವೆಚ್ಚ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ವಿಜಯಪುರ| ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆಯಾಗಿದ್ದ ಚಿನ್ನಾಭರಣ, ನಗದು ಮಹಾರಾಷ್ಟ್ರದಲ್ಲಿ ಪತ್ತೆ

    ವಿಮಾನ ನಿಲ್ದಾಣದ ಮೂಲವಿನ್ಯಾಸವನ್ನು ಚಿಕ್ಕ ವಿಮಾನಗಳನ್ನು ಗಮನದಲ್ಲಿಟ್ಟಿಕೊಂಡು ಮಾತ್ರ ಮಾಡಲಾಗಿತ್ತು. ಅದರಲ್ಲಿ ಏರ್‌ಬಸ್ ಮಾದರಿಯ ವಿಮಾನ ಕಾರ್ಯಾಚರಣೆಗಳಿಗಾಗಲಿ, ನೈಟ್ ಲ್ಯಾಂಡಿಂಗ್‌ಗಾಗಲಿ ಅವಕಾಶವಿರಲಿಲ್ಲ. ಆದರೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಸೇರಿದಂತೆ ಉತ್ತರ ಕರ್ನಾಟಕದ ನಗರಗಳು ಕ್ಷಿಪ್ರವಾಗಿ ಬೆಳೆಯುತ್ತಿವೆ. ಜೊತೆಗೆ ಮಹಾರಾಷ್ಟ್ರದ ಸೊಲ್ಲಾಪುರ, ಸಾತಾರಾ ಜಿಲ್ಲೆಗಳೂ ವಿಜಯಪುರಕ್ಕೆ ಹತ್ತಿರವಾಗಿವೆ. ಇತ್ತ ಬೆಳಗಾವಿ, ಕಲಬುರಗಿ ಜಿಲ್ಲೆಯ ಹಲವು ತಾಲೂಕುಗಳ ಒಡನಾಟವೂ ವಿಜಯಪುರದೊಂದಿಗೆ ಹೆಚ್ಚಾಗಿದೆ. ಹೀಗಾಗಿ ಮುಂದಿನ ಐವತ್ತು ವರ್ಷಗಳ ಅಗತ್ಯವನ್ನು ಪರಿಗಣಿಸಿ, ಹಲವು ಹೆಚ್ಚುವರಿ ಸೌಲಭ್ಯಗಳನ್ನು ಈಗ ಸೇರಿಸಲಾಗುತ್ತಿದೆ ಎಂದಿದ್ದಾರೆ.

    ಈಗ ಒದಗಿಸಲಾಗಿರುವ ಹಣದಲ್ಲಿ ನೈಟ್ ಲ್ಯಾಂಡಿಂಗ್ ಸಂಬಂಧಿತ ಕಾಮಗಾರಿಗಳು, ರನ್‌ವೇಯ ಎರಡೂ ಬದಿಗಳಿಗೆ ಪೇವ್ಡ್ ಶೋಲ್ಡರ್ ನಿರ್ಮಾಣ ಮತ್ತು ಭೂಸ್ವಾಧೀನಕ್ಕೆ ಸಂಬಂಧಿಸಿದ ಪರಿಹಾರ ಬಾಬ್ತಿಗೆ 65 ಕೋಟಿ ರೂ. ವಿನಿಯೋಗಿಸಲಾಗುವುದು. ವಿಜಯಪುರ ವಿಮಾನ ನಿಲ್ದಾಣದಿಂದ ರಾ.ಹೆ.50ಕ್ಕೆ ಸಂಪರ್ಕ ಕಲ್ಪಿಸಲಿರುವ ಮೀಸಲು ರಸ್ತೆಯ ಅಭಿವೃದ್ಧಿಗೆ 52 ಕೋಟಿ ರೂ. ವೆಚ್ಚವಾಗಲಿದೆ. ವಿಮಾನ ನಿಲ್ದಾಣದ ಮೂಲವಿನ್ಯಾಸದಲ್ಲಿ ಇವುಗಳ ಪ್ರಸ್ತಾಪವೇ ಇರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.

    ಇದಲ್ಲದೆ 25 ಕೋಟಿ ರೂ. ವೆಚ್ಚದಲ್ಲಿ ಎರಡು ವಿಮಾನ ರಕ್ಷಣೆ ಮತ್ತು ಅಗ್ನಿಶಾಮಕ ವಾಹನಗಳು (ARFF) ಮತ್ತು ಉಪಕರಣಗಳನ್ನು ಖರೀದಿಸಲಾಗುವುದು. ಮಿಕ್ಕಂತೆ 2.76 ಕೋಟಿ ರೂ.ಗಳಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯಗೊಳಿಸುವ ಉಪಕರಣಗಳು (BDDS) ಮತ್ತು 13.09 ಕೋಟಿ ರೂ. ವೆಚ್ಚದಲ್ಲಿ ಡಿವಿಒಆರ್ (ಡೋಪ್ಲರ್ ವೆರಿ ಹೈ ಫ್ರೀಕ್ವೆನ್ಸಿ ಓಮ್ನಿ ರೇಂಜ್) ಉಪಕರಣಗಳ ಖರೀದಿ ಮತ್ತು ಅಳವಡಿಕೆ ಕೆಲಸಗಳು ನಡೆಯಲಿವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ವಿಷ್ಣುವರ್ಧನ್ ಅಭಿಮಾನ ಕ್ಷೇತ್ರದ ಬ್ಲ್ಯೂ ಪ್ರಿಂಟ್‌ ರಿಲೀಸ್

    ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಕೇಂದ್ರ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ತಂಡಗಳು ಕಾಲಕಾಲಕ್ಕೆ ಪರಿಶೀಲಿಸುತ್ತಿದೆ. ಅದು ನಿಗದಿತ ಮಾನದಂಡಗಳಿಗೆ ನೀಡಿದ ಸೂಚನೆಗಳನ್ನು ಪಾಲಿಸಲಾಗುತ್ತಿದೆ. ಹೆಚ್ಚಿನ ಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚುವರಿ ಹಣಕಾಸು ನೆರವು ಕೋರಿ ಈ ವರ್ಷದ ಫೆಬ್ರವರಿಯಲ್ಲೇ ರಾಜ್ಯ ಮಟ್ಟದ ತಾಂತ್ರಿಕ ಸಲಹೆ ಮತ್ತು ಅಂದಾಜು ಪಟ್ಟಿ ಪರಿಶೀಲನಾ ಸಮಿತಿಗೆ ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಅದು ತನ್ನ ಒಪ್ಪಿಗೆ ನೀಡಿದ ನಂತರ ಸಂಪುಟ ಸಭೆಯ ಮುಂದೆ ಬಂದಿತ್ತು ಎಂದು ವಿವರಿಸಿದ್ದಾರೆ.

    ವಿಮಾನ ನಿಲ್ದಾಣವನ್ನು ವಿಜಯಪುರ ಮತ್ತು ನೆರೆಹೊರೆಯ ಜಿಲ್ಲೆಗಳಲ್ಲಿ ಕೈಗಾರಿಕಾ, ಆರ್ಥಿಕ, ಶೈಕ್ಷಣಿಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ದೂರದೃಷ್ಟಿಯಿಂದ ನಿರ್ಮಿಸಲಾಗುತ್ತಿದೆ. ಈ ನಿಲ್ದಾಣವು ಕಾರ್ಯಾಚರಣೆ ಆರಂಭಿಸಿದ ನಂತರ ಕರ್ನಾಟಕ ಮತ್ತು ಉತ್ತರ ಭಾರತದ ನಡುವೆ ಸೇತುವೆಯಾಗಿ ಪರಿಣಮಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಇದನ್ನೂ ಓದಿ: ಕಳ್ಳತನ ಮಾಡೋರಿಗೆ ಅದ್ರ ಬಗ್ಗೆ ಗೊತ್ತಿರುತ್ತೆ, ರಾಹುಲ್ ಗಾಂಧಿ ತಪಾಸಣೆ ಮಾಡಿದ್ರೆ ಎಲ್ಲ ತಿಳಿಯುತ್ತೆ – ಶೋಭಾ ಕರಂದ್ಲಾಜೆ