Tag: maytri ujavala organization

  • ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಮೂವರ ಬಂಧನ

    ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಮೂವರ ಬಂಧನ

    ದಾವಣಗೆರೆ: ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ವೇಶ್ಯಾವಾಟಿಕೆ ತಳ್ಳುತ್ತಿದ್ದ ಜಾಲವನ್ನು ದಾವಣಗೆರೆಯ ಡಿಸಿಬಿ ಪೆÇಲೀಸರು ಪತ್ತೆ ಹಚ್ಚಿದ್ದು, ಓರ್ವ ಬಾಲಕಿಯನ್ನು ರಕ್ಷಿಸಿ, ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ.

    ದಾವಣಗೆರೆ ಜಿಲ್ಲೆ ಮೂಲದ ಗೀತಕ್ಕ (33), ಅನಿತಾ ಅಲಿಯಾಸ್ ಕಾವ್ಯಾ (34) ಹಾಗೂ ರೂಪಾ (28) ಬಂಧಿತ ಮಹಿಳೆಯರು. ಪ್ರಮುಖ ಆರೋಪಿ ಶಿವು ಹಾಗೂ ಆತನ ಇಬ್ಬರು ಸಹಚರರು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಬಂಧಿತ ಮಹಿಳೆಯರು ದಾವಣಗೆರೆ, ಗದಗ ಸೇರಿದಂತೆ ಬಹುತೇಕ ಕಡೆ ವೇಶ್ಯಾವಾಟಿಕೆ ನಡೆಸುತ್ತಿದ್ದು, ಅಪ್ರಾಪ್ತ ಬಾಲಕಿಯರಿಗೆ ಹಣದ ಆಸೆ ತೋರಿಸಿ ವೇಶ್ಯಾವಾಟಿಕೆ ತಳ್ಳುತ್ತಿದ್ದರು. ಬಸ್ ಹಾಗೂ ರೈಲ್ವೇ ನಿಲ್ದಾಣದಲ್ಲಿ ಬಾಲಕಿಯರನ್ನು ಅಪಹರಿಸಿ, ಬಳಿಕ ಅವರನ್ನು ಬೇರೆ ಬೇರೆ ಜಾಗಗಳಿಗೆ ಸಾಗಿಸುತ್ತಿದ್ದರು.

    ಜಾಲ ಪತ್ತೆಯಾಗಿದ್ದು ಹೇಗೆ:
    ಬಂಧಿತ ಮೂವರು ಮಹಿಳೆಯರು ದಾವಣಗೆರೆಯ ಮನೆಯೊಂದರಲ್ಲಿ ವಾಸವಾಗಿದ್ದರು. ಜೊತೆಗೆ 16 ವರ್ಷದ ಬಾಲಕಿಯನ್ನು ಇರಿಸಿಕೊಂಡಿದ್ದರು. ಇತ್ತೀಚೆಗೆ ಮೈತ್ರಿ ಉಜ್ವಲ ಸಂಸ್ಥೆ ಸದಸ್ಯರು ಬಾಲಕಿಯ ಕುರಿತಾಗಿ ಅನುಮಾನ ವ್ಯಕ್ತಪಡಿಸಿ, ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಆಗ ಬಾಲಕಿಗೆ ಹೆಚ್‍ಐವಿ ಇರುವುದು ಖಚಿತವಾಗಿದ್ದು, ಆಕೆಯನ್ನು ವಿಚಾರಿಸಿದಾಗ, ಮೂವರು ಮಹಿಳೆಯರು ಉದ್ಯೋಗ ಹಾಗೂ ಹಣದ ಆಮಿಷವೊಡ್ಡಿ ಕರೆದುಕೊಂಡು ಬಂದು ಮನೆಯಲ್ಲಿ ವೇಶ್ಯಾವಾಟಿಕೆ ಮಾಡಿಸುತ್ತಿದ್ದಾರೆ ಎನ್ನುವ ಸತ್ಯ ಬಯಲಾಗಿದೆ.

    ತಕ್ಷಣವೇ ಮೈತ್ರಿ ಉಜ್ವಲ ಸಂಸ್ಥೆಯು ಪೊಲೀಸರಿಗೆ ಮಾಹಿತಿ ನೀಡಿದ್ದು, ಮನೆಯ ಮೇಲೆ ದಾಳಿ ಮಾಡಿದಾಗ ಮೂವರು ಮಹಿಳೆಯರು ಸಿಕ್ಕಿಬಿದ್ದಿದ್ದಾರೆ. ಆದರೆ ಪೊಲೀಸ್ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಪ್ರಮುಖ ಆರೋಪಿ ಶಿವು ಹಾಗೂ ಆತನ ಇಬ್ಬರು ಸಹಚರರು ಪರಾರಿಯಾಗಿದ್ದಾರೆ. ಬಾಲಕಿಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್‍ಪಿ ಆರ್ ಚೇತನ್ ಹೇಳಿದರು.

    ಬಂಧಿತ ಮಹಿಳೆಯರು ಈ ಹಿಂದೆಯೂ ಬಾಲಕಿಯರನ್ನು ಅಪಹರಿಸಿದ ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಆದರೆ ಈಗ ಜಾಮೀನು ಮೇಲೆ ಹೊರ ಬಂದು ಅದೇ ದಂಧೆ ಶುರು ಮಾಡಿದ್ದಾರೆ.