Tag: Mayor Gangambike

  • ಬಾಲಕನಿಗೆ ವಿದ್ಯುತ್ ತಂತಿ ಸ್ಪರ್ಶಿಸಿದ ಪ್ರಕರಣಕ್ಕೆ ನಾವು ಹೊಣೆಯಲ್ಲ – ಬೆಸ್ಕಾಂ

    ಬಾಲಕನಿಗೆ ವಿದ್ಯುತ್ ತಂತಿ ಸ್ಪರ್ಶಿಸಿದ ಪ್ರಕರಣಕ್ಕೆ ನಾವು ಹೊಣೆಯಲ್ಲ – ಬೆಸ್ಕಾಂ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಾಲಕನೊಬ್ಬ ವಿದ್ಯುತ್ ತಂತಿ ಸ್ಪರ್ಶಿಸಿ ಗಂಭೀರ ಗಾಯಗೊಂಡಿರುವ ಪ್ರಕರಣಕ್ಕೆ ನಾವು ಹೊಣೆಯಲ್ಲ ಎಂದು ಬೆಸ್ಕಾಂನ ಪ್ರಧಾನ ವ್ಯವಸ್ಥಾಪಕ ಜಿ.ಕೃಷ್ಣಮೂರ್ತಿ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದಾರೆ.

    ಈ ಘಟನೆಗೆ ಸ್ಥಳೀಯರು, ಮನೆ ಮಾಲೀಕರೇ ಹೊಣೆಗಾರರು ಎಂದು ಬೆಸ್ಕಾಂ ಮೇಲೆ ಮಾಡಿದ್ದ ಆರೋಪವನ್ನು ತಳ್ಳಿಹಾಕಿದ್ದಾರೆ. ಕೆಪಿಟಿಸಿಎಲ್ ನಿಯಮಗಳ ಪ್ರಕಾರ ಮನೆಗಳ ಮೇಲೆ ನಾಲ್ಕು ಮೀಟರ್ ಎತ್ತರದಲ್ಲಿ ವಿದ್ಯುತ್ ವೈರ್ ಇರಬೇಕಿತ್ತು. ಆದರೆ ಈ ಘಟನೆ ನಡೆದ ಸ್ಥಳದಲ್ಲಿದ್ದ ಕಟ್ಟಡ ಮೇಲೆ ನಾಲ್ಕು ಮೀಟರ್ ಕ್ಲಿಯರೆನ್ಸ್ ಇರಲಿಲ್ಲ. ಈ ಬಗ್ಗೆ ಕಟ್ಟಡ ಮಾಲೀಕರಿಗೆ ಈ ಹಿಂದೆ ನೋಟಿಸ್ ಕೂಡ ಕೊಟ್ಟಿದ್ದೆವು. ಆದರೆ ಮನೆ ಮಾಲೀಕರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಘಟನಾ ಸ್ಥಳಕ್ಕೆ ಮೇಯರ್ ಗಂಗಾಂಬಿಕಾ ಹಾಗೂ ಉಪ-ಮೇಯರ್ ಭದ್ರೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮೇಯರ್ ಗಂಗಾಂಭಿಕೆ ಮಾತನಾಡಿ, ಇಲ್ಲಿನ ಕಟ್ಟಡಗಳು ಹೈಟೆನ್ಷನ್ ವಯರ್ ಗೆ ಸಮೀಪವಿದೆ. 4 ಅಡಿಯಷ್ಟು ಅಂತರವಿಲ್ಲ. ಹಾಗಾಗಿ ಆ ಭಾಗದಲ್ಲಿ ಯಾರೇ ಹೋದರೂ ಕರೆಂಟ್ ಶಾಕ್ ಹೊಡಿಯುವುದು ಖಂಡಿತ. ಈ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

    ಏನಿದು ಪ್ರಕರಣ?
    ಮತ್ತಿಕೆರೆಯ ನೇತಾಜಿ ಸರ್ಕಲ್ ಬಳಿ ಇಂದು ಲಿಖಿತ್(14) ವಿದ್ಯುತ್ ತಂತಿ ತುಳಿದು, ಸದ್ಯ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ. ವಿದ್ಯುತ್ ಸ್ಪರ್ಶದಿಂದ ಬಾಲಕನ ದೇಹ ಶೇ.40 ರಷ್ಟು ಸುಟ್ಟು ಹೋಗಿದ್ದು, ಬಾಲಕನ ಸ್ಥಿತಿ ಚಿಂತಾಜನಕವಾಗಿದೆ.

    ಮನೆ ಬಳಿ ಸ್ನೇಹಿತರೊಡನೆ ಲಿಖಿತ್ ಕ್ರಿಕೆಟ್ ಆಡುವಾಗ ಕಟ್ಟಡದ ಮೊದಲ ಮಹಡಿಗೆ ಬಾಲ್ ಹೋಗಿತ್ತು. ಈ ವೇಳೆ ಅದನ್ನು ತರಲು ಹೋಗಿದ್ದ ಲಿಖಿತ್ ತಂತಿ ತುಳಿದು ಕೆಳಗೆ ಬಿದ್ದಿದ್ದಾನೆ. ತಕ್ಷಣ ಬಾಲಕನನ್ನು ಸ್ಥಳೀಯರು ಹಾಗೂ ಪೋಷಕರು ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

  • ಕಸ ವಿಂಗಡಣೆ ಆಗದಿದ್ದರೆ ಸಿಎಂಗೂ ದಂಡ ಹಾಕ್ತೀವಿ- ಮೇಯರ್ ಗಂಗಾಂಬಿಕೆ

    ಕಸ ವಿಂಗಡಣೆ ಆಗದಿದ್ದರೆ ಸಿಎಂಗೂ ದಂಡ ಹಾಕ್ತೀವಿ- ಮೇಯರ್ ಗಂಗಾಂಬಿಕೆ

    ಬೆಂಗಳೂರು: ಕಸ ವಿಂಗಡಣೆ ಮಾಡಿ ಕಸದ ವಾಹನಕ್ಕೆ ಹಾಕದಿದ್ದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ದಂಡ ಹಾಕುತ್ತೇವೆ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಹೇಳಿದ್ದಾರೆ.

    ಜನಪ್ರತಿನಿಧಿಗಳ ಮನೆಯ ಕೆಲಸಗಾರರು ಕಸವಿಂಗಡಣೆ ಮಾಡದೆ ವಾಹನಕ್ಕೆ ಹಾಗೂ ಕಸದ ತೊಟ್ಟಿಗೆ ಹಾಕುವ ಕುರಿತು ಪಬ್ಲಿಕ್ ಟಿವಿ ಇಂದು ವರದಿ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ರಾಜಕೀಯ ನಾಯಕರಿಗೆ ಹಾಗೂ ಸಚಿವರಿಗೆ ಖಡಕ್ ಸಂದೇಶ ನೀಡಿದೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಮೇಯರ್ ಗಂಗಾಬಿಕೆ, ಜನಪ್ರತಿನಿಧಿಗಳು ತಮ್ಮ ಮನೆಯ ಕೆಲಸಗಾರರಿಗೆ ಕಸವಿಂಗಡಣೆ ಮಾಡುವಂತೆ ತಿಳಿಹೇಳಬೇಕು. ಕೆಸಗಾರರಿಗೆ ಗೊತ್ತಾಗದೆ ತಪ್ಪು ನಡೆಯುತ್ತಿದ್ದರೆ ತಕ್ಷಣವೇ ರಾಜಕೀಯ ನಾಯಕರು, ಸಚಿವರು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಎಲ್ಲರಂತೆ ಅವರಿಗೂ ದಂಡ ಹಾಕಲಾಗುತ್ತದೆ ಎಂದು ಹೇಳಿದ್ದಾರೆ.

    ಮನೆಗಳಿಗೆ ಬಂದು ಕಸ ಪಡೆಯುವ ಹಾಗೂ ನಗರವನ್ನು ಸ್ವಚ್ಛವಾಗಿರಿಸುವ ಪೌರಕಾರ್ಮಿಕರಿಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು. ನಮ್ಮ ಅನೇಕ ಪೌರ ಕಾರ್ಮಿಕರು ಕಸ ವಿಂಗಡಣೆ ಮಾಡಿಕೊಡುವಂತೆ ತಿಳಿ ಹೇಳುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

    ಸಿಲಿಕಾನ್ ಸಿಟಿ ಕಸದ ನಗರಿ ಅಂತ ಈಗಾಗಲೇ ಜಗಜ್ಜಾಹೀರಾಗಿದೆ. ಬಿಬಿಸಿಯೇ ಬೆಂಗಳೂರು ನಗರವನ್ನು ಕೊಳಕು ನಗರ ಅಂತಲೂ ಘೋಷಿಸಿ ಬಿಟ್ಟಿದೆ. ಈ ಹಣೆಪಟ್ಟಿಯಿಂದ ಹೊರ ಬರೋದಕ್ಕೆ ಜಾಹೀರಾತಿಗಾಗಿ ಬಿಬಿಎಂಪಿ ಕೋಟಿಗಟ್ಟಲೇ ಹಣ ಕೂಡ ಖರ್ಚು ಮಾಡುತ್ತಿದೆ. ಹಸಿ ಕಸ, ಒಣ ಕಸ ಅಂತ ವಿಂಗಡಣೆ ಮಾಡದಿದ್ರೆ, ನಿಮ್ಮ ಮನೆ ಕಸ ಸ್ವೀಕರಿಸಲ್ಲ ಅಂತ ಬಿಬಿಎಂಪಿ ಫರ್ಮಾನು ಕೂಡ ಹೊರಡಿಸಿದೆ. ಬೆಳಗ್ಗೆ ಹೊತ್ತು ಮನೆ ಮುಂದೆ ಬರೋ ಪೌರ ಕಾರ್ಮಿಕರು ಕಸ ವಿಂಗಡಣೆ ಮಾಡದಿದ್ದರೆ ನಾವು ಸ್ವೀಕರಿಸಲ್ಲ ಅಂತ ಬಿಸಾಡಿ ಹೊರಡುತ್ತಾರೆ. ಆದ್ರೆ, ಇದೀಗ ಈ ರೂಲ್ಸ್ ಗಳನ್ನ ಜನಪ್ರತಿನಿಧಿಗಳು ಫಾಲೋ ಮಾಡುತ್ತಿಲ್ಲ ಎಂಬುದು ಪಬ್ಲಿಕ್ ಟಿವಿ ಬೆಳಗ್ಗೆ ಪರೀಕ್ಷೆ ನಡೆಸಲು ಹೊರಟಿತ್ತು. ರಾಜ್ಯದ ಅಧಿಪತಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಡಿಸಿಎಂ ಪರಮೇಶ್ವರ್, ಸಚಿವೆ ಜಯಮಾಲಾ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮನೆ ಬಳಿ ಸ್ಟಿಂಗ್ ಆಪರೇಷನ್ ಕೂಡ ನಡೆಸಿತ್ತು. ಈ ವೇಳೆ ಅಲ್ಲಿ ಕಂಡು ಬಂದ ದೃಶ್ಯ ನಿಜಕ್ಕೂ ಮುಜುಗರ ತರಿಸುವಂತಿತ್ತು.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv