Tag: mayor election

  • ಬಿಬಿಎಂಪಿ ಮೇಯರ್ ಚುನಾವಣೆ – ಕೈ, ತೆನೆ ಮೈತ್ರಿ ಅಭ್ಯರ್ಥಿ ಫೈನಲ್

    ಬಿಬಿಎಂಪಿ ಮೇಯರ್ ಚುನಾವಣೆ – ಕೈ, ತೆನೆ ಮೈತ್ರಿ ಅಭ್ಯರ್ಥಿ ಫೈನಲ್

    ಬೆಂಗಳೂರು: ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಮಂಗಳವಾರ ನಡೆಯಲಿದ್ದು, ಈ ಬಾರಿಯೂ ಬಿಬಿಎಂಪಿಯಲ್ಲಿ ಮೈತ್ರಿಯನ್ನು ಮುಂದುವರಿಸಿಕೊಂಡು ಹೋಗಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಿರ್ಧರಿಸಿದೆ. ಮೈತ್ರಿ ಅನ್ವಯ ಕಾಂಗ್ರೆಸ್‍ಗೆ ಮೇಯರ್ ಸ್ಥಾನ ಹಾಗೂ ಜೆಡಿಎಸ್‍ಗೆ ಉಪ ಮೇಯರ್ ಸ್ಥಾನ ಹಂಚಿಕೆ ಮಾಡಿಕೊಳ್ಳಲಾಗಿದೆ.

    ಮೈತ್ರಿ ಅನ್ವಯ ಕಾಂಗ್ರೆಸ್, ಜೆಡಿಎಸ್‍ನಿಂದ ಮೇಯರ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ದತ್ತಾತ್ರೇಯ ವಾರ್ಡ್ ಸದಸ್ಯರಾದ ಸತ್ಯನಾರಾಯಣರನ್ನು  ಆಯ್ಕೆ ಮಾಡಲಾಗಿದ್ದು, ಕೆಪಿಸಿಸಿ ಅಧಿಕೃತವಾಗಿ ಪ್ರಕಟಿಸಿದೆ. ಮಂಗಳವಾರ ಸತ್ಯನಾರಾಯಣ ಅವರು ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.

    ಇತ್ತ ಉಪಮೇಯರ್ ಸ್ಥಾನಕ್ಕೆ ಅಂತಿಮ ಕ್ಷಣದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಬದಲಿಸಿದ್ದು, ಶಕ್ತಿ ಗಣಪತಿ ವಾರ್ಡ್ 74ರ ಪಾಲಿಕೆ ಸದಸ್ಯೆ ಗಂಗಮ್ಮ ರಾಜಣ್ಣ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಲು ಜೆಡಿಎಸ್ ವರಿಷ್ಠರು ಸೂಚನೆ ನೀಡಿದ್ದಾರೆ. ಇದಕ್ಕೂ ಮುನ್ನ ವಾರ್ಡ್ 32 ಕಾವಲಭೈರಸಂದ್ರ ಪಾಲಿಕೆ ಸದಸ್ಯೆ ನೇತ್ರಾ ನಾರಾಯಣ ಅಥವಾ ಇಮ್ರಾನ್ ಪಾಷಾ ಅವರಿಗೆ ಉಪಮೇಯರ್ ಸ್ಥಾನಕ್ಕೆ ಸ್ಪರ್ಧೆ ನಡೆಸಲು ಅವಕಾಶ ನೀಡಲಾಗುತ್ತದೆ ಎನ್ನಲಾಗಿತ್ತು.

    ಬಿಜೆಪಿ ಪಳಯದಲ್ಲಿ ಅಭ್ಯರ್ಥಿ ಫೈನಲ್ ಮಾಡಲು ಭಾರೀ ಚರ್ಚೆ ನಡೆಯುತ್ತಿದೆ. ಸತತ 2 ಗಂಟೆಗಳ ಅವಧಿಯ ಸಭೆಯ ಬಳಿಕವೂ ಅಭ್ಯರ್ಥಿ ಆಯ್ಕೆ ಅಂತಿಮವಾಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಪ್ರಮುಖವಾಗಿ ಬಿಜೆಪಿಯಿಂದ ಮುನೇಂದ್ರ ಕುಮಾರ್, ಎಲ್ ಶ್ರೀನಿವಾಸ್, ಪದ್ಮನಾಭ ರೆಡ್ಡಿ, ಬಾಲಕೃಷ್ಣ ಅವರ ನಡುವೆ ಮೇಯರ್ ಸ್ಥಾನ ಸ್ಪರ್ಧೆಗೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.

  • ಸಿಎಂ ಮಾತಿಗೂ ಡೋಂಟ್ ಕೇರ್ – ಸರ್ಕಾರಕ್ಕೆ ಸವಾಲೆಸೆದ ನಿಷ್ಠಾವಂತ ಅಧಿಕಾರಿ

    ಸಿಎಂ ಮಾತಿಗೂ ಡೋಂಟ್ ಕೇರ್ – ಸರ್ಕಾರಕ್ಕೆ ಸವಾಲೆಸೆದ ನಿಷ್ಠಾವಂತ ಅಧಿಕಾರಿ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಲೆಕ್ಷನ್ ಮುಂದೂಡಿಕೆಗೆ ಮಾಡಲು ಯತ್ನಿಸಿದ್ದ ಬಿಜೆಪಿಗೆ ಸರ್ಕಾರಿ ಅಧಿಕಾರಿ ಸವಾಲೆಸೆದಿದ್ದು, ಸಿಎಂ ಮಾತಿಗೂ ಕೇರ್ ಮಾಡದ ನಿಷ್ಠಾವಂತ ಐಎಎಸ್ ಅಧಿಕಾರಿ ಹರ್ಷಾಗುಪ್ತಾ ನಾಳೆಯೇ ಚುನಾವಣೆ ನಡೆಸುವುದಾಗಿ ಹೇಳಿದ್ದಾರೆ.

    ಬಿಬಿಎಂಪಿ ಮೇಯರ್ ಚುನಾವಣೆ ಮುಂದೂಡಿಕೆ ಮಾಡಲು ಪ್ಲಾನ್ ಮಾಡಿದ್ದ ಬಿಜೆಪಿಗೆ ಅಧಿಕಾರಿಯ ಈ ನಿರ್ಧಾರ ಬಹುದೊಡ್ಡ ಶಾಕ್ ಲಭಿಸಿದ್ದು, ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಲು ಆಗಲ್ಲ. ಶಾಸನ ಬದ್ಧವಾಗಿ ಲಭಿಸಿರುವ ಅಧಿಕಾರ ಬಳಿಸಿಕೊಂಡು ಚುನಾವಣೆ ದಿನಾಂಕ ನಿಗದಿ ಮಾಡಲಾಗಿದೆ. ಈಗಾಗಲೇ ನಿಗದಿಪಡಿಸಿದಂತೆ ಅಕ್ಟೋಬರ್ 1 ರಂದು ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳ ಚುನಾವಣೆ ನಡೆಯುತ್ತದೆ ಎಂದು ಪ್ರಾದೇಶಿಕ ಚುನಾವಣಾ ಆಯುಕ್ತರಾದ ಹರ್ಷಗುಪ್ತಾ 7 ಪುಟಗಳ ಪತ್ರದಲ್ಲಿ ತಿಳಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ಮೇಯರ್ ಅವಧಿ ಈಗಾಗಲೇ ಮುಕ್ತಾಯವಾಗಿದ್ದು, ಚುನಾವಣೆ ನಡೆಸುವುದು ಬಹುತೇಕ ಖಚಿತವಾಗಿದೆ ಎಂದು ಪತ್ರದಲ್ಲಿ ಗುಪ್ತಾ ಅವರು ಸ್ಪಷ್ಟಪಡಿಸಿದ್ದಾರೆ.

    ನಗರಾಭಿವೃದ್ಧಿ ಇಲಾಖೆಗೆ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ತಿಳಿಸಿರುವಂತೆ, ಕೆಎಂಸಿ ಕಾಯ್ದೆ 10(1), 11(2), (ಬಿ) ಹಾಗೂ ಹೈಕೋರ್ಟ್ ತೀರ್ಪಿನ ಅನ್ವಯ ಕಾನೂನಿನ ಪ್ರಕಾರವೇ ನಾಳೆ ಚುನಾವಣೆ ನಡೆಯಲಿದೆ. ಚುನಾವಣೆ ಮುಂದೂಡುವ ಅಗತ್ಯವಿಲ್ಲ. ಮೇಯರ್ ಅವಧಿ ಸೆಪ್ಟೆಂಬರ್ 27 ಕ್ಕೆ ಮುಗಿದಿರುವುದರಿಂದ ಚುನಾವಣೆ ನಡೆಸುವುದು ಚುನಾವಣಾಧಿಕಾರಿಯಾಗಿ ನನ್ನ ಕರ್ತವ್ಯ ಎಂದು ಹರ್ಷಗುಪ್ತ ತಿಳಿಸಿದ್ದಾರೆ.

    ಮೇಯರ್, ಉಪಮೇಯರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಮಾರುಕಟ್ಟೆ, ಲೆಕ್ಕಪತ್ರ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆ 8-30 ರಿಂದ ನಡೆಯಲಿದ್ದು, 11-30 ಕ್ಕೆ ಚುನಾವಣೆ ನಡೆಯಲಿದೆ.

    ಕೆಎಂಸಿ ಕಾಯ್ದೆ ಪ್ರಕಾರವೇ ತಿರುಗೇಟು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮುಂದೂಡಿಕೆ ಮಾಡಲು ಪ್ರಾದೇಶಿಕ ಆಯುಕ್ತರಿಗೆ ನಗರಾಭಿವೃದ್ಧಿ ಇಲಾಖೆಯಿಂದ ಇಂದು ಅಧಿಕೃತವಾಗಿ ಸೂಚನೆ ರವಾನೆಯಾಗಿತ್ತು. ನಗರಾಭಿವೃದ್ಧಿ ಇಲಾಖೆಯ ಅಪರ ಕಾರ್ಯದರ್ಶಿ ವಿಜಯ್‍ಕುಮಾರ್ ಅವರು ಪ್ರಾದೇಶಿಕ ಆಯುಕ್ತರಿಗೆ ಚುನಾವಣೆ ಮುಂದೂಡುವಂತೆ ಬಿಬಿಎಂಪಿ ಕಾಯ್ದೆ ನಿಯಮಗಳನ್ನು ಉಲ್ಲೇಖಿಸಿ ಚುನಾವಣೆ ಮುಂದೂಡಲು ಸೂಚಿಸಲಾಗಿತ್ತು. ಆದರೆ ಈ ಇದೇ ಕೆಎಂಸಿ ಕಾಯ್ದೆ ನಿಯಮಗಳನ್ನು ಮುಂದಿಟ್ಟಿರುವ ಗುಪ್ತಾ ಅವರು, ಕೆಎಂಸಿ ಕಾಯ್ದೆಯ 10(1) , 11(2)ಬಿ ಪ್ರಕಾರ ಚುನಾವಣೆ ನಡೆಸಲು ಅವಕಾಶವಿದೆ. 1976 ಪ್ರಕಾರ 71 ರಲ್ಲಿ ಮೇಯರ್ ಚುನಾವಣೆ ದಿನಾಂಕ ನಿಗದಿ ಮಾಡುವ ಅಧಿಕಾರ ಪ್ರಾದೇಶಿಕ ಆಯುಕ್ತರಾಗಿದೆ. ಹೈಕೋರ್ಟ್ 8 ಸ್ಥಾಯಿ ಸಮಿತಿಗೆ ಮಾತ್ರ ಚುನಾವಣೆ ತಡೆಯಾಜ್ಞೆ ನೀಡಿದ್ದು, ಕಾನೂನಿನಲ್ಲಿ ಚುನಾವಣೆ ಮುಂದೂಡಲು ಅವಕಾಶವಿಲ್ಲದಿರುವುದರಿಂದ ಚುನಾವಣೆ ನಡೆಸಬೇಕಿದೆ. ಪ್ರಾದೇಶಿಕ ಆಯುಕ್ತ ಶಾಸನಬದ್ಧ ಕರ್ತವ್ಯ. ಇದರ ಅನ್ವಯ ಚುನಾವಣೆ ದಿನಾಂಕ ಮುಂದೂಡಲು ಅವಕಾಶವಿಲ್ಲ ಎಂದು ಗೌರವ ಪೂರ್ವಕವಾಗಿ ಗುಪ್ತಾ ಅವರು ಮಾಹಿತಿ ಪತ್ರವನ್ನು ರವಾನೆ ಮಾಡಿದ್ದಾರೆ.

  • ಬಿಬಿಎಂಪಿ ಮೇಯರ್ ಚುನಾವಣೆ ಮುಂದೂಡಿಕೆ

    ಬಿಬಿಎಂಪಿ ಮೇಯರ್ ಚುನಾವಣೆ ಮುಂದೂಡಿಕೆ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮುಂದೂಡಿಕೆಯಾಗಿದೆ. ಪ್ರಾದೇಶಿಕ ಆಯುಕ್ತರಿಗೆ ನಗರಾಭಿವೃದ್ಧಿ ಇಲಾಖೆಯಿಂದ ಅಧಿಕೃತವಾಗಿ ಸೂಚನೆ ರವಾನೆಯಾಗಿದ್ದು ಚುನಾವಣೆ ಮುಂದೂಡಿಕೆಯಾಗಿದೆ.

    ನಗರಾಭಿವೃದ್ಧಿ ಇಲಾಖೆಯ ಅಪರ ಕಾರ್ಯದರ್ಶಿ ವಿಜಯ್‍ಕುಮಾರ್ ಅವರು ಪ್ರಾದೇಶಿಕ ಆಯುಕ್ತರಿಗೆ ಚುನಾವಣೆ ಮುಂದೂಡುವಂತೆ ಸೂಚಿಸಿದ್ದಾರೆ.

    ಬಿಬಿಎಂಪಿ ಮೇಯರ್/ ಉಪಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಸುವ ಸಂದರ್ಭದಲ್ಲೇ ಸ್ಥಾಯಿ ಸಮಿತಿಗಳ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಸುವ ಬಗ್ಗೆ ಹೈಕೋರ್ಟ್ ಮಧ್ಯಂತರ ಆದೇಶ ಪ್ರಕಟಿಸಿದೆ. ಹೀಗಾಗಿ ಮೇಯರ್ ಉಪಮೇಯರ್ ಚುನಾವಣೆಯಂದ ಸ್ಥಾಯಿ ಸಮಿತಿಗಳ ಚುನಾವಣೆ ನಡೆಸಬೇಕೆಂದು ವಿಜಯ್ ಕುಮಾರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

    ಈ ಸಂಬಂಧ ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿ, ಬಿಬಿಎಂಪಿ ಚುನಾವಣೆ ಮಾಡಲು ಸಿಎಂ ಆದೇಶ ಮಾಡಿದ್ದರು. ಆದರೆ ಸಮಿತಿಗಳ ಚುನಾವಣೆ ಕೂಡ ಮಾಡಬೇಕು ಎಂದು ನ್ಯಾಯಾಲಯದ ಆದೇಶ ಇದೆ. ಮತ್ತೊಂದು ಕಡೆ ಕೆಲವು ಸಮಿತಿ ಚುನಾವಣೆ ಬೇಡ ಎಂದು ಮತ್ತೊಂದು ನ್ಯಾಯಾಲಯ ಹೇಳಿದೆ. ಹೀಗಾಗಿ ಚುನಾವಣೆ ಮುಂದೂಡಲಾಗಿದೆ ಎಂದು ತಿಳಿಸಿದರು.

  • ನಾನೇ ಬೇರೆ ನನ್ನ ಸ್ಟೈಲೇ ಬೇರೆ ಅಂತಿದ್ದ ರೋಷನ್ ಬೇಗ್‍ಗೆ ಶಾಕ್!

    ನಾನೇ ಬೇರೆ ನನ್ನ ಸ್ಟೈಲೇ ಬೇರೆ ಅಂತಿದ್ದ ರೋಷನ್ ಬೇಗ್‍ಗೆ ಶಾಕ್!

    – ಮಿನಿಸ್ಟರ್ ಗಿರಿ ಆಸೆಗೆ ಕಲ್ಲು ಎಳ್ಕೊಂಡ್ರಾ ಹಿರಿಯ ನಾಯಕ

    ಬೆಂಗಳೂರು: ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂದುಕೊಂಡಿದ್ದ ಕಾಂಗ್ರೆಸ್ ಹಿರಿಯ ನಾಯಕ ರೋಷನ್ ಬೇಗ್ ಪಕ್ಷದ ಮೇಲಿನ ಕೋಪಕ್ಕೆ ಧಾರ್ಮಿಕ ಲೇಪನ ಮಾಡಿ ಮೇಯರ್ ಚುನಾವಣೆಗೆ ಗೈರಾಗಿ ಈಗ ಎಲ್ಲಿಲ್ಲದ ಫಜೀತಿ ಎದುರಾಗಿದೆ.

    ಮಾಜಿ ಸಚಿವ ರೋಷನ್ ಬೇಗ್ ಅವರು, ನನ್ನ ಬಿಟ್ಟು ಇವರೇನು ಮಾಡುತ್ತಾರೇ ಎಂದು ಆಪ್ತರ ಬಳಿ ಹೇಳುತ್ತಿದ್ದರು. ಆದ್ರೆ ಇದರಿಂದಾಗಿ ರಾಜಕೀಯ ಅಳಿವು ಉಳಿವಿನ ಪ್ರಶ್ನೆ ಉಂಟಾಗಿದೆ. ಮೇಯರ್ ಚುನಾವಣೆಗೆ ಬೇಕಂತಲೇ ಗೈರು ಹಾಜರಾಗಿದ್ದರಿಂದ ಪಕ್ಷದ ಹಿರಿಯರು ಎಂಬುದನ್ನು ನೋಡದೆ ಶೋಕಾಸ್ ನೋಟಿಸ್ ನೀಡಿದೆ. ಇದೀಗ ಪಕ್ಷದ ಕೆಂಗಣ್ಣಿಗೆ ಗುರಿಯಾಗಿ ಉತ್ತರಿಸಲೇಬೇಕಾದ ಅನಿವಾರ್ಯತೆ ಜೊತೆಗೆ ತನ್ನ ನಿಜ ಬಣ್ಣ ಬಯಲಾಗಿ ಮುಜುಗರ ಉಂಟಾಗಿದೆ.

    ಉದ್ದೇಶ ಪೂರ್ವಕವಾಗಿಯೇ ಮೇಯರ್ ಚುನಾವಣೆ ಸಮಯದಲ್ಲೇ ಹಜ್ ಯಾತ್ರೆಗೆ ತೆರಳಿ ಪಕ್ಷಕ್ಕೆ ಸೆಡ್ಡು ಹೊಡೆದಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಅನುಮಾನವಾಗಿದ್ದು, ಇದಕ್ಕೆ ಪೂರಕವೆಂಬಂತೆ ಸಾಕಷ್ಟು ಘಟನೆಗಳು ಸಹ ಮೇಯರ್ ಚುನಾವಣೆಯ ಮುನ್ನವೂ ನಡೆದಿವೆ. ಸಚಿವ ಸಂಪುಟದ ಮೊದಲ ಹಂತದಲ್ಲಿ ನನ್ನಂತಹ ಹಿರಿಯ ಶಾಸಕನಿಗೆ ಅವಕಾಶ ಕೊಡಲಿಲ್ಲ ಎಂದು ಮುನಿಸಿಕೊಂಡು ಪಕ್ಷದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದರು. ಜೆಡಿಎಸ್ ನಿಂದ ವಲಸೆ ಬಂದ ಜಮೀರ್ ಅಹಮ್ಮದ್ ಖಾನ್ ಗೆ ಸಚಿವ ಸ್ಥಾನ ನೀಡಿ ಸಮುದಾಯದ ನಾಯಕ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಕೂಡ ಅಸಮಧಾನ ಹೊರಹಾಕಿದ್ದರು. ಇವೆರಡು ವಿಷಯದ ಬಗ್ಗೆ ಪಕ್ಷದ ನಾಯಕರು ಸ್ಪಂದಿಸದ ಕಾರಣ ನಾಯಕರ ವಿರುದ್ಧ ಮುನಿಸಿಕೊಂಡು ಸಂಪುಟದಲ್ಲಿ ಸ್ಥಾನ ಸಿಗದ ಅಸಮಧಾನಿತರ ಜೊತೆ ಗುರುತಿಸಿಕೊಂಡಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.

    ಪಕ್ಷದ ನಾಯಕರು ಯಾವುದೇ ಖಚಿತ ಭರವಸೆ ನೀಡಲಿಲ್ಲ. ಇದರಿಂದ ಸಿಟ್ಟಾದ ರೋಶನ್ ಬೇಗ್ ಮೇಯರ್ ಚುನಾವಣೆಗೆ 5 ದಿನ ಬಾಕಿ ಇರುವಾಗ ಉಮ್ರಾಗೆ ಹೋಗಿದ್ದಾರೆ. ನನ್ನನ್ನ ಯಾರು ಲೆಕ್ಕಕ್ಕಿಟ್ಟಿಲ್ಲ. ನಾನು ಏನು ಅಂತ ತೋರಿಸುತ್ತೀನಿ ಅಂತ ಆಪ್ತರ ಬಳಿ ಹೇಳಿಕೊಂಡಿರುವುದು ಕಾಂಗ್ರೆಸ್ ನಾಯಕರ ಕಿವಿಗೆ ಬಿದ್ದಿದೆ. ಮೇಯರ್ ಚುನಾವಣೆಗೆ ಬರಲೇಬೇಕು ಎಂಬ ಪಕ್ಷದ ವರಿಷ್ಠರ ಸೂಚನೆ ಹೊರತಾಗಿಯು ರೋಷನ್ ಬೇಗ್ ವಾಪಾಸ್ ಬಂದಿಲ್ಲ. ಈಗ ಪಕ್ಷ ಕಾರಣ ಕೇಳಿ ನೋಟಿಸ್ ನೀಡಿದೆ. ಇದಕ್ಕೆ ಧಾರ್ಮಿಕ ಕಾರಣ ಹೇಳಿದ್ರೂ ನಂಬುವ ಸ್ಥಿತಿಯಲ್ಲಿ ಪಕ್ಷದ ನಾಯಕರು ಇಲ್ಲ. ಪಕ್ಷದ ವಿರುದ್ಧ ನನ್ನ ತಾಕತ್ ತೋರಿಸುತ್ತೇನೆ ಎಂದು ಹೊರಟ ರೋಷನ್ ಬೇಗ್, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟೇ ಅಲ್ಲದೇ ಇತ್ತ ಮಿನಿಸ್ಟರ್ ಗಿರಿ ಅತ್ತ ಲೋಕಸಭಾ ಟಿಕೆಟ್ ಎರಡು ಆಸೆಗೂ ಸ್ವತಃ ತಾವೇ ಕಲ್ಲು ಹಾಕಿಕೊಂಡರು ಎಂಬ ಮಾತು ಕಾಂಗ್ರೆಸ್ ವಲಯದಲ್ಲೇ ಕೇಳಿ ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಂಗ್ರೆಸ್‍ನಲ್ಲಿ ಯಾವುದೇ ಅಸಮಾಧಾನ ಇಲ್ಲ: ಮಾಜಿ ಸಚಿವ ರಾಮಲಿಂಗಾರೆಡ್ಡಿ

    ಕಾಂಗ್ರೆಸ್‍ನಲ್ಲಿ ಯಾವುದೇ ಅಸಮಾಧಾನ ಇಲ್ಲ: ಮಾಜಿ ಸಚಿವ ರಾಮಲಿಂಗಾರೆಡ್ಡಿ

    ಬೆಂಗಳೂರು: ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ಮೇಯರ್ ಆಯ್ಕೆ ಆಗುವ ಸಂದರ್ಭದಲ್ಲಿ ಯಾರೂ ಯಾವ ಕೆಟಗೇರಿ ಎಂದು ಕೇಳುವುದು ಸಾಮಾನ್ಯ. ಆದರೆ ಇದನ್ನು ನಾವು ಅಸಮಾಧಾನ ಎಂದು ಹೇಳಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದಾರೆ.

    ಕಾಂಗ್ರೆಸ್‍ನಲ್ಲಿ ಯಾವುದೇ ಅಸಮಾಧಾನ ಇಲ್ಲ. ಮೇಯರ್ ಆಯ್ಕೆ ವೇಳೆ ಆಕಾಂಕ್ಷಿಗಳು ಇರೋದು ಸಾಮಾನ್ಯ. ಹಾಗಂತ ಇದನ್ನು ಭಿನ್ನಮತ ಎನ್ನುವುದು ಸರಿಯಲ್ಲ. ಆಶಾ ಸುರೇಶ್ ಇಲ್ಲೇ ಒಳಗೆ ಕೂತಿದ್ದಾರೆ. ಅಲ್ಲದೇ 6 ಪಕ್ಷೇತರರು ಕೂಡ ಬಂದಿದ್ದಾರೆ ಎಂದು ಹೇಳಿದ್ರು.

    ಜೆಡಿಎಸ್‍ನವರು ಯಾರೂ ವಿಪ್ ಉಲ್ಲಂಘನೆ ಮಾಡಲ್ಲ. 1993ರಿಂದ ಎಲ್ಲಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಪರಮೇಶ್ವರ್, ದಿನೇಶ್ ಗುಂಡೂರಾವ್, ಹ್ಯಾರಿಸ್ ಎಲ್ಲರೂ ಒಟ್ಟಾಗಿ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಚುನಾವಣೆಗೆ ಮುನ್ನವೇ ಮೈಸೂರಿನಲ್ಲಿ ಸೋತ ಸಿಎಂ ಸಿದ್ದರಾಮಯ್ಯ!

    ಚುನಾವಣೆಗೆ ಮುನ್ನವೇ ಮೈಸೂರಿನಲ್ಲಿ ಸೋತ ಸಿಎಂ ಸಿದ್ದರಾಮಯ್ಯ!

    ಬೆಂಗಳೂರು: ಅರಮನೆ ನಗರಿಯ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಯಶಸ್ವಿಯಾಗಿದ್ದು, ಈ ಮೈತ್ರಿ ವಿಧಾನಸಭಾ ಚುನಾವಣೆಗೂ ಅನ್ವಯವಾಗುತ್ತಾ ಎನ್ನುವ ಪ್ರಶ್ನೆ ಈಗ ಮತ್ತೊಮ್ಮೆ ಎದ್ದಿದೆ.

    ಹೌದು. ಮೈಸೂರು ಮಹಾನಗರಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಭಾರೀ ಹೈಡ್ರಾಮಾ ನಡೆದಿದ್ದು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಭಾಗ್ಯವತಿ ಜೆಡಿಎಸ್, ಬಿಜೆಪಿ ಸದಸ್ಯರಿಂದಾಗಿ ಮೇಯರ್ ಪಟ್ಟ ಅಲಂಕರಿಸಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ತವರಿನಲ್ಲಿ ಭಾರೀ ಮುಖಭಂಗವಾಗಿದೆ.  ಇದನ್ನೂ ಓದಿ: ಮೈಸೂರು ಮೇಯರ್ ಚುನಾವಣೆಯಲ್ಲಿ ಹೈಡ್ರಾಮ ನಡೆದಿದ್ದು ಹೀಗೆ

    ಕಾಂಗ್ರೆಸ್ ಸೋಲಿಸಲು ಮೈಸೂರು ಜಿಲ್ಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಂದಾಗುತ್ತಿರುವುದು ಇದೆ ಮೊದಲಲ್ಲ. ಕಳೆದ ಶುಕ್ರವಾರ ಹುಣಸೂರು ನಗರಸಭೆ ಚುನಾವಣೆಯಲ್ಲೂ ಮೈತ್ರಿ ನಡೆದಿತ್ತು. ಕಾಂಗ್ರೆಸ್‍ನಿಂದ ಜೆಡಿಎಸ್‍ಗೆ ವಲಸೆ ಹೋಗಿದ್ದ ಶಿವಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಸಂಸದ ಪ್ರತಾಪ್ ಸಿಂಹ ಅವರು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿ ಗೆಲುವಿಗೆ ಕಾರಣರಾಗಿದ್ದರು.

    ಹುಣಸೂರು ನಗರಸಭೆಯಲ್ಲಿ 15 ಕಾಂಗ್ರೆಸ್, 9 ಜೆಡಿಎಸ್, 3 ಪಕ್ಷೇತರ ಸದಸ್ಯರು, ಒಬ್ಬರು ಶಾಸಕರು ಹಾಗೂ ಲೋಕಸಭಾ ಸದಸ್ಯರು ಸೇರಿ ಒಟ್ಟು 29 ಸಂಖ್ಯಾಬಲ ಹೊಂದಿತ್ತು. ಕಾಂಗ್ರೆಸ್ ನ ಮೊದಲ ವಾರ್ಡ್ ಸದಸ್ಯ ಶಿವಕುಮಾರ್ ಹಾಗೂ 5ನೇ ವಾರ್ಡ್ ಶಿವರಾಜು, 3ನೇ ವಾರ್ಡ್‍ನ ಮಂಜುಳಾ, 9ನೇ ವಾರ್ಡ್ ಸುನೀತಾ, 10ನೇ ವಾರ್ಡ್‍ನ ಯೋಗಾನಂದ, 18 ವಾರ್ಡ್‍ನ ರವಿಕುಮಾರ್ ಜೆಡಿಎಸ್ ಗೆ ವಲಸೆ ಬಂದಿದ್ದರು.

    ಒಟ್ಟು 29 ಸದಸ್ಯ ಬಲದ ನಗರಸಭೆ ಚುನಾವಣೆಯಲ್ಲಿ ಎರಡೂ ಕಡೆಯೂ ತಲಾ 14 ಸದಸ್ಯರಿದ್ದರು. ಒಂದು ವೇಳೆ ಸಂಸದರು ಭಾಗವಹಿಸದೇ ಇದ್ದಲ್ಲಿ ಲಾಟರಿ ಎತ್ತುವ ಮೂಲಕ ಆಯ್ಕೆ ನಡೆಯಬೇಕಿತ್ತು. ಈ ಚುನಾವಣೆಯಲ್ಲಿ ಸಂಸದ ಪ್ರತಾಪ್ ಸಿಂಹ ಭಾಗವಹಿಸಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಶಿವಕುಮಾರ್ ಪರ ವೋಟು ಚಲಾಯಿಸಿದ್ದರು. ಸದಸ್ಯರು ಕೈ ಎತ್ತುವ ಮೂಲಕ ಮತದಾನ ಮಾಡಿದರು. ಶಿವಕುಮಾರ್ ವಿಜೇತರಾಗಿದ್ದಾರೆಂದು ಚುನಾವಣಾಧಿಕಾರಿಯಾದ ಉಪ ವಿಭಾಗಾಧಿಕಾರಿ ಕೆ.ನಿತಿನ್ ಘೋಷಿಸಿದ್ದರು. ಈ ಮೂಲಕ ಬಹುಮತವಿದ್ದರೂ ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಂಡಿತ್ತು. ಇದನ್ನೂ ಓದಿ: ಜೆಡಿಎಸ್‍ಗೆ ಮತ ಹಾಕಿದ್ದು ಯಾಕೆ? ಸಂಸದ ಪ್ರತಾಪ್ ಸಿಂಹ ಹೇಳಿದ್ದು ಏನು?

    ಬಿಬಿಎಂಪಿಯಲ್ಲಿ ಮೈತ್ರಿ: 2015ರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಯಲ್ಲಿ ಬಿಜೆಪಿ 100, ಕಾಂಗ್ರೆಸ್ 76, ಜೆಡಿಎಸ್ 14, ಪಕ್ಷೇತರರಿಗೆ 8 ಸ್ಥಾನಗಳು ಲಭಿಸಿತ್ತು. ಆದರೆ ಅಂತಿಮವಾಗಿ ಕಾಂಗ್ರೆಸ್ ಜೆಡಿಎಸ್ ಮತ್ತು ಪಕ್ಷೇತರರ ಬೆಂಬಲ ಗಳಿಸಿ ಬಿಬಿಎಂಪಿ ಗದ್ದುಗೆ ಏರಿತ್ತು. ಈ ಸಂದರ್ಭದಲ್ಲಿ ಬಿಬಿಎಂಪಿಗೆ ಅನುದಾನ ಬರುವುದು ರಾಜ್ಯ ಸರ್ಕಾರದಿಂದ. ಒಂದು ವೇಳೆ ಅಧಿಕಾರಕ್ಕೆ ಏರಿದರೂ ಅನುದಾನ ಸಿಗದೇ ಇದ್ದರೆ ಬೆಂಗಳೂರಿನ ಅಭಿವೃದ್ಧಿ ಕಷ್ಟವಾಗಿ ವಿಧಾನಸಭಾ ಚುನಾವಣೆ ಸಂದರ್ಭಲ್ಲಿ ತಿರುಗುಬಾಣವಾಗಬಹುದು ಎನ್ನುವ ಕಾರಣಕ್ಕೆ ಬಿಜೆಪಿ ಅಧಿಕಾರಕ್ಕೆ ಏರಲು ಹೆಚ್ಚಿನ ಪ್ರಯತ್ನ ನಡೆಸಲಿಲ್ಲ. ಇದಾದ ಬಳಿಕ ರಾಜ್ಯದಲ್ಲಿ ಬಹಳ ವಿದ್ಯಮಾನಗಳು ನಡೆದಿದ್ದು,  ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ  ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಹೆಚ್‍ಡಿಡಿ ವಿರುದ್ಧ ರಫ್&ಟಫ್ ವರ್ತನೆ ಬೇಡ- ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ

    ಈ ಹಿಂದೆ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಮಾಜಿ ಪ್ರಧಾನಿ ದೇವೇಗೌಡ ಅವರ ನಿವಾಸಕ್ಕೆ ತೆರಳಿ ಮಾತನಾಡಿದ್ದರು. ಪಿಯೂಶ್ ಗೋಯಲ್ ಕರ್ನಾಟಕ ರಾಜ್ಯ ಬಿಜೆಪಿಯ ಚುನಾವಣಾ ಉಸ್ತುವಾರಿಯಾಗಿದ್ದ ಕಾರಣ ಈ ಭೇಟಿ ಬಹಳ ಮಹತ್ವ ಪಡೆದಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಸಹ ದೇವೇಗೌಡ ಅವರ ಜೊತೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ದೇವೇಗೌಡ ಅವರು ದೆಹಲಿಗೆ ಹೋದ ಸಮಯದಲ್ಲಿ ಹಲವು ಬಾರಿ ಪ್ರಧಾನಿ ಅವರನ್ನು ಭೇಟಿ ಮಾಡಿದ್ದಾರೆ. ವಿಶೇಷವಾಗಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿ ಸಮಯದಲ್ಲಿ ದೇವೇಗೌಡ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಸ್ತುತ ಸ್ವಿಜರ್ಲ್ಯಾಂಡ್  ದಾವೋಸ್‍ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಜಾಗತಿಕ ಶೃಂಗ ಸಭೆಯಲ್ಲಿ ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೆಸರು ಪ್ರಸ್ತಾಪಿಸಿದ್ದರು.  ಇದನ್ನೂ ಓದಿ: ನನ್ನ ಮನೆಗೆ ಕೇಂದ್ರ ಸಚಿವ ಗೋಯಲ್ ಬಂದಿದ್ದು ಯಾಕೆ: ದೇವೇಗೌಡ್ರು ವಿವರಿಸಿದ್ರು

    ಬಿಜೆಪಿ ಮತ್ತು ಜೆಡಿಎಸ್ ಜೊತೆ ಸಂಬಂಧ ಉತ್ತಮವಾಗುತ್ತಿರುವ ಹಿನ್ನೆಲೆಯಲ್ಲಿ ಮೈತ್ರಿ ನಡೆಯುತ್ತಾ ಎನ್ನುವ ಪ್ರಶ್ನೆಗೆ ದೇವೇಗೌಡ ಅವರು ಮಂಗಳೂರಿನಲ್ಲಿ, ಫಲಿತಾಂಶ ಬಂದ ಬಳಿಕ ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಚುನಾವಣಾ ಮೈತ್ರಿ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಕ್ಷಣದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಲೋಪವನ್ನು ಹಿಡಿದುಕೊಂಡು ಪಕ್ಷ ಕಟ್ಟುವ ಅಗತ್ಯ ಇಲ್ಲ. ನಮ್ಮ ಸಿದ್ಧಾಂತಗಳನ್ನು ಹಿಡಿದುಕೊಂಡು ಪಕ್ಷ ಕಟ್ಟುತ್ತೇವೆ ಎಂದು ಉತ್ತರಿಸಿದ್ದರು. ಇದನ್ನೂ ಓದಿ: ಮೋದಿ ಬಗ್ಗೆ ಸಾಫ್ಟ್ ಕಾರ್ನರ್ ಇದೆ ಎಂಬ ಆರೋಪಕ್ಕೆ ದೇವೇಗೌಡ್ರು ಪ್ರತಿಕ್ರಿಯಿಸಿದ್ದು ಹೀಗೆ

    ರಾಜಕೀಯ ಪಕ್ಷಗಳು ಈಗ ಯಾವುದೇ ವಿಚಾರವನ್ನು ತಿಳಿಸದೇ ಇದ್ದರೂ  ಸಮೀಕ್ಷೆಗಳಲ್ಲಿ ಕರ್ನಾಟಕದಲ್ಲಿ ಈ ಬಾರಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ ಎನ್ನುವ ಫಲಿತಾಂಶ ಪ್ರಕಟವಾಗಿದೆ. ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಮೈತ್ರಿ ಅನಿವಾರ್ಯವಾಗುತ್ತದೆ. ಚುನಾವಣೆ ಹತ್ತಿರದಲ್ಲಿರುವಾಗಲೇ ಹುಣಸೂರು ನಗರಸಭೆ ಮತ್ತು ಮೈಸೂರು ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಒಂದಾಗಿ ಸಿದ್ದರಾಮಯ್ಯನವರನ್ನು ಸೋಲಿಸಿದೆ. ಹೀಗಾಗಿ ಈ ಮೈತ್ರಿ ಈ ಚುನಾವಣೆಗೆ ಮಾತ್ರವೇ ಅಥವಾ ಚುನಾವಣೆಯ ಫಲಿತಾಂಶದ ಬಳಿಕವೂ ಮುಂದುವರಿಯುತ್ತಾ ಎನ್ನುವ ಪ್ರಶ್ನೆಗೆ ಮೇ ತಿಂಗಳಿನಲ್ಲಿ ಸ್ಪಷ್ಟ ಉತ್ತರ ಸಿಗಲಿದೆ. ಇದನ್ನೂ ಓದಿ: ಯಾರಿಗೂ ಬಹುಮತವಿಲ್ಲ, ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ! ಈಗ ಚುನಾವಣೆ ನಡೆದರೆ ಯಾರಿಗೆ ಎಷ್ಟು ಸ್ಥಾನ?

    https://youtu.be/rbIYLnwQSCs

     

  • ಮೈಸೂರು ಮೇಯರ್ ಚುನಾವಣೆಯಲ್ಲಿ ಹೈಡ್ರಾಮ- ಹಿಂಬದಿ ಬಾಗಿಲಿಂದ ಬಂದು ಜೆಡಿಎಸ್ ಅಭ್ಯರ್ಥಿ ನಾಮಿನೇಷನ್

    ಮೈಸೂರು ಮೇಯರ್ ಚುನಾವಣೆಯಲ್ಲಿ ಹೈಡ್ರಾಮ- ಹಿಂಬದಿ ಬಾಗಿಲಿಂದ ಬಂದು ಜೆಡಿಎಸ್ ಅಭ್ಯರ್ಥಿ ನಾಮಿನೇಷನ್

    ಮೈಸೂರು: ಮಹಾನಗರಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಹಿಂಬದಿ ಬಾಗಿಲಿಂದ ಬಂದು ಹೈಜಾಕ್ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ.

    ನಗರಪಾಲಿಕೆ ಕಾಂಗ್ರೆಸ್ ಸದಸ್ಯೆ ಭಾಗ್ಯವತಿ ಜೆಡಿಎಸ್ ನಾಯಕರ ಜೊತೆ ಪ್ರತ್ಯಕ್ಷವಾಗಿದ್ದಾರೆ. ಶಾಸಕ ಜಿ.ಟಿ.ದೇವೇಗೌಡ, ಸಾರಾ.ಮಹೇಶ್ ಜೊತೆ ಭಾಗ್ಯವತಿ ಬಂದಿದ್ದು, ಜೆಡಿಎಸ್-ಬಿಜೆಪಿ ಬೆಂಬಲಿತವಾಗಿ ಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ಶಾಸಕ ಸಾ.ರಾ. ಮಹೇಶ್, ಬಿಜೆಪಿ-ಜೆಡಿಎಸ್ ಮೈತ್ರಿ ಮುರಿಯಲು ಕಾಂಗ್ರೆಸ್ ಮೀಸಲಾತಿ ಅಸ್ತ್ರ ಬಳಸಿದ್ರು. ಜೆಡಿಎಸ್ ವರಿಷ್ಟರ ಜೊತೆ ಮಾತುಕತೆ ಮಾಡಿ ರಣತಂತ್ರ ರೂಪಿಸಿದ್ದೇವೆ. ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಭಾಗ್ಯವತಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಹೇಳಿದ್ರು.

    ಇದೀಗ ಮೇಯರ್ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳ ಸ್ಪರ್ಧೆ ಮಾಡುತ್ತಿದ್ದು, ಬಹುತೇಕ ಭಾಗ್ಯವತಿ ಗೆಲ್ಲುವ ಸಾಧ್ಯತೆ ಇದೆ. ಈ ಮೂಲಕ ಜೆಡಿಎಸ್-ಬಿಜೆಪಿ ಕಾಂಗ್ರೆಸ್‍ಗೆ ಶಾಕ್ ನೀಡಿವೆ. ನಿರೀಕ್ಷೆ ಮೀರಿದ ಬೆಳವಣಿಗೆ ಕಂಡು ಕಾಂಗ್ರೆಸ್ ಬೆರಗಾಗಿದೆ. ಇದೊಂದು ಅಪವಿತ್ರ ಮೈತ್ರಿ ಎಂದು ಕಾಂಗ್ರೆಸ್ ಶಾಸಕ ವಾಸು ಕಿಡಿ ಕಾರಿದ್ದಾರೆ.

    ಇವತ್ತು ಬೆಳಗ್ಗೆ 11.30 ಕ್ಕೆ ಪಾಲಿಕೆಯಲ್ಲಿ ಚುನಾವಣೆ ನಡೆಯಲಿದೆ. ಪರಿಶಿಷ್ಟ ಜಾತಿ ಮಹಿಳೆಗೆ ಮೇಯರ್ ಸ್ಥಾನ ಮೀಸಲಾಗಿದ್ದು, ಪರಶಿಷ್ಟ ವರ್ಗದ ಮಹಿಳೆಗೆ ಉಪ ಮೇಯರ್ ಸ್ಥಾನ ಮೀಸಲಾಗಿದೆ. ಕಾಂಗ್ರೆಸ್‍ನಲ್ಲಿ ಮಾತ್ರ ಪರಿಶಿಷ್ಟ ಜಾತಿಯ ಮಹಿಳಾ ಸದಸ್ಯೆಯರು ಇರುವುದು. ಕಾಂಗ್ರೆಸ್‍ನ ಪರಿಶಿಷ್ಟ ಜಾತಿಯ ಮಹಿಳಾ ಸದಸ್ಯರಾದ ಕಮಲಾ ಉದಯ್ ಹಾಗೂ ಭಾಗ್ಯಲಕ್ಷ್ಮಿ ಮೇಯರ್ ಸ್ಥಾನದ ಅರ್ಹ ಆಕಾಂಕ್ಷಿಗಳು. ಹೀಗಾಗಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಪಾಲಿಕೆಯಲ್ಲಿ ಅನಿವಾರ್ಯವಾಗಿತ್ತು.

    65 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್ 20, ಜೆಡಿಎಸ್ 20, ಬಿಜೆಪಿ 15, ಎಸ್‍ಡಿಪಿಐ 2, ಪಕ್ಷೇತರ 8 ಸದಸ್ಯರು ಇದ್ದಾರೆ. ಇದರ ಜೊತೆ ಶಾಸಕರು ಮತ್ತು ಸಂಸದರ ಮತ ಸೇರಿ 74 ಮತಗಳು ಇವೆ. ನಾಲ್ಕು ವರ್ಷದಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ ಆಡಳಿತ ಇತ್ತು. ಈ ಬಾರಿ ಮೀಸಲು ಪ್ರಕಾರ ಜೆಡಿಎಸ್ – ಬಿಜೆಪಿಯಲ್ಲಿ ಅರ್ಹ ಸದಸ್ಯರು ಇಲ್ಲದ ಕಾರಣ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅನಿವಾರ್ಯವಾಗಿತ್ತು. ಆದ್ರೆ ಸಿಎಂ ಮೀಸಲಾತಿ ತಂತ್ರಕ್ಕೆ ಜೆಡಿಎಸ್- ಬಿಜೆಪಿ ತಿರುಗೇಟು ನೀಡಿವೆ.

    ಮೈಸೂರು ಮಹಾ ನಗರ ಪಾಲಿಕೆ ಕೊನೆ ಅವಧಿಯ ಆಡಳಿತ ಹಿಡಿಯುವ ಸಿಎಂ ಪ್ಲಾನ್‍ಗೆ ಜೆಡಿಎಸ್ ತಿರುಮಂತ್ರ ಹಾಕಿದಂತಾಗಿದೆ.

  • ಬಂಡಾಯ ಸುದ್ದಿಗೋಷ್ಠಿ ನಡೆಸಿ ಪಕ್ಷದ ನಾಯಕರ ವಿರುದ್ಧವೇ ತೊಡೆ ತಟ್ಟಿದ ಡಿ.ಕೆ.ಸುರೇಶ್

    ಬಂಡಾಯ ಸುದ್ದಿಗೋಷ್ಠಿ ನಡೆಸಿ ಪಕ್ಷದ ನಾಯಕರ ವಿರುದ್ಧವೇ ತೊಡೆ ತಟ್ಟಿದ ಡಿ.ಕೆ.ಸುರೇಶ್

    ಬೆಂಗಳೂರು: ನಮ್ಮ ನೆನಪೇ ಪಕ್ಷದ ನಾಯಕರಿಗೆ ಇಲ್ಲ. ನಾನು ಕಾಂಗ್ರೆಸ್ ಪಕ್ಷದ ಒಬ್ಬ ಸಂಸದನಿದ್ದೇನೆ ಎಂಬ ವಿಚಾರವನ್ನೇ ಮರೆತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

    ಬೆಂಗಳೂರು ಬಿಬಿಎಂಪಿ ಮೇಯರ್ ಆಯ್ಕೆಯ ವಿಚಾರವಾಗಿ ಚರ್ಚೆ ನಡೆಸಲು ಕರೆದಿದ್ದ ಸಭೆಗೆ ತಮಗೇ ಆಹ್ವಾನ ನೀಡದಿರುವ ಕುರಿತು ಮಾತನಾಡಿದ ಸುರೇಶ್, ಈ ಸುದ್ದಿಗೋಷ್ಠಿಯನ್ನು ಬಂಡಾಯ ಪತ್ರಿಕಾಗೋಷ್ಠಿ ಅಂದರೂ ಯಾವುದೇ ತೊಂದರೆ ಇಲ್ಲ. ಬೆಂಗಳೂರು ಮೇಯರ್ ಚುನಾವಣೆ ಇದೇ ತಿಂಗಳ 26 ರಂದು ನಡೆಯಲಿದ್ದು, ಪ್ರಬಲ ನಾಯಕರೇ ಮೇಯರ್ ಆಗ್ತಾರೆ. ಆದರೆ ಬೆಂಗಳೂರು ವ್ಯಾಪ್ತಿಯಲ್ಲಿ ಹೊಸದಾಗಿ ಸೇರಿರುವ ಹಲವು ವಾರ್ಡ್‍ಗಳಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆದಿಲ್ಲ. ಸರ್ಕಾರ ಹಾಗೂ ಎಲ್ಲಾ ಮೇಯರ್‍ಗಳು ಈ ವಾರ್ಡ್‍ಗಳ ಅಭಿವೃದ್ಧಿಯನ್ನು ಮರೆತಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರಗಳಲ್ಲಿಯೇ ಇಂತಹ ಹಲವು ವಾರ್ಡ್‍ಗಳಿವೆ ಎಂದು ಸರ್ಕಾರದ ನಿರ್ಲಕ್ಷದ ವಿರುದ್ಧ ಹಾರಿಯ್ದರು.

    ಮೇಯರ್ ಚುನಾವಣೆಯ ಬಗ್ಗೆ ನಮಗೇ ಜವಾಬ್ದಾರಿಯನ್ನು ವಹಿಸಿದರೆ ನಾವೇ ಸ್ವತಃ ಜೆಡಿಎಸ್ ನಾಯಕರೊಂದಿಗೆ ಮಾತಾನಾಡುತ್ತೇವೆ. ಈ ಬಾರಿಯ ಮೇಯರ್ ಚುನಾವಣೆಯಲ್ಲಿ ಬೆಂಗಳೂರು ಹೊರ ವಲಯದ ಕಾರ್ಪೊರೇಟರ್ ಗಳಿಗೆ ಹುದ್ದೆಯನ್ನು ನೀಡಬೇಕು. ಅದರಲ್ಲೂ ಪರಿಶಿಷ್ಟ ಜಾತಿಗೆ ಸೇರಿದ ವೇಲು ನಾಯಕ್ ಹಾಗೂ ಅಂಜನಪ್ಪ ಇಬ್ಬರಲ್ಲಿ ಒಬ್ಬರನ್ನು ಮೇಯರ್ ಮಾಡಬೇಕು. ಈ ವಿಚಾರವಾಗಿ ಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರನ್ನು ಒತ್ತಾಯ ಮಾಡುತ್ತೇವೆ ಎಂದರು.

    ನನ್ನ ಸಹೋದರ ಶಿವಕುಮಾರ್ ಸಂಪತ್ ರಾಜುಗೆ ಮೇಯರ್ ಆಗಲು ಬೆಂಬಲ ನೀಡಬಹುದು ಆದರೆ ನಾನು ನನ್ನ ಕ್ಷೇತ್ರದ ಕಾರ್ಪೊರೇಟರ್‍ಗಳಿಗೆ ಬೆಂಬಲ ನೀಡುತ್ತೇನೆ. ಅತ್ತರೆ ಹಾಲು ಕುಡಿಸುತ್ತಾರೆ ಎಂಬ ಮಾತಿದೆ. ಹಾಗೆಯೇ ನಾವಾಗೆ ಕೇಳದಿದ್ದರೆ ಅವರು ನಮ್ಮನ್ನು ಗಮನಿಸುವುದಿಲ್ಲ. ನನ್ನ ಸಹನೆ ಕಟ್ಟೆ ಒಡೆಯುತ್ತದೆ. ಮುಂದಿನ ದಿನಗಳಲ್ಲಿ ಅದು ದೊಡ್ಡದಾಗಬಹುದು ಎಂದು ಎಚ್ಚರಿಸಿದರು.

    ನನ್ನ ನಾಯಕರಾದ ಸಂಸದ ಡಿ.ಕೆ.ಸುರೇಶ್ ತೀರ್ಮಾನಕ್ಕೆ ನಾನು ಬದ್ದನಾಗಿದ್ದೇನೆ. ಸುರೇಶ್ ಅವರ ಬೇಡಿಕೆ ನ್ಯಾಯಯುತವಾಗಿದೆ ಎಂದು ಶಾಸಕ ಮುನಿರತ್ನ ಹೇಳಿದರು.