Tag: Mayavati

  • ಐದೇ ತಿಂಗಳಲ್ಲಿ ಮುರಿದು ಬಿತ್ತು ಎಸ್‍ಪಿ, ಬಿಎಸ್‍ಪಿ ಮೈತ್ರಿ

    ಐದೇ ತಿಂಗಳಲ್ಲಿ ಮುರಿದು ಬಿತ್ತು ಎಸ್‍ಪಿ, ಬಿಎಸ್‍ಪಿ ಮೈತ್ರಿ

    ಲಕ್ನೋ: ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸಲು ಲೋಕಸಭಾ ಚುನಾವಣೆಯಲ್ಲಿ ಒಂದಾಗಿದ್ದ ಬಿಎಸ್‍ಪಿ, ಎಸ್‍ಪಿ ಮೈತ್ರಿಕೂಟ ಫಲಿತಾಂಶ ಬಂದ ಬಳಿಕ ಮುರಿದು ಬಿದ್ದಿದ್ದು, ಒಂಟಿಯಾಗಿಯೇ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಉಪಚುನಾವಣೆಯನ್ನು ಎದುರಿಸಲು ನಿರ್ಧರಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ನಾವು ಶಾಶ್ವತವಾಗಿ ಮೈತ್ರಿಯನ್ನು ಮುರಿಯುತ್ತಿಲ್ಲ. ಭವಿಷ್ಯದಲ್ಲಿ ಎಸ್‍ಪಿ ರಾಜಕೀಯವಾಗಿ ಯಶಸ್ವಿಯಾದರೆ ನಾವು ಮತ್ತೆ ಒಂದಾಗಿ ಕೆಲಸ ಮಾಡುತ್ತೇವೆ. ಒಂದು ವೇಳೆ ಎಸ್‍ಪಿ ರಾಜಕೀಯವಾಗಿ ಯಶಸ್ಸು ಗಳಿಸಲು ವಿಫಲವಾದರೆ, ನಾವು ಬೇರೆಯಾಗುವುದೇ ಒಳ್ಳೆಯದು. ಹೀಗಾಗಿ ನಾವು ಉಪಚುನಾವಣೆಯನ್ನು ಒಂಟಿಯಾಗಿಯೇ ಎದುರಿಸಲು ನಿರ್ಧರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ಮಾಯಾವತಿಯ ಹೇಳಿಕೆಯ ಬೆನ್ನಲ್ಲೇ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿ, ನಾವು ಸಹ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುತ್ತೇವೆ. 11 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ ಎಂದು ಹೇಳಿದ್ದಾರೆ.

    ಪಕ್ಷದ ಸಭೆಯಲ್ಲಿ ಮಾತನಾಡಿದ ಮಾಯಾವತಿ ಅವರು ಮುಂಬರುವ ಉಪಚುನಾವಣೆಗೆ ಮತ್ತು 2022ರ ವಿಧಾನಸಭಾ ಚುನಾವಣೆಯಲ್ಲಿ 403 ಕ್ಷೇತ್ರಗಳಲ್ಲಿಯೂ ಸ್ಫರ್ಧಿಸಲು ತಯಾರಾಗಿರಿ ಎಂದು ಬಿಎಸ್‍ಪಿ ನಾಯಕರಿಗೆ ತಿಳಿಸಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶ ನನಗೆ ತೃಪ್ತಿ ನೀಡಿಲ್ಲ. ಎಸ್‍ಪಿ ಸರಿಯಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸಿಲ್ಲ. ಅಖಿಲೇಶ್ ಯಾದವ್‍ರೊಂದಿಗಿನ ಮೈತ್ರಿ ನಮಗೂ ಮತ್ತು ನಮ್ಮ ಪಕ್ಷದ ಭವಿಷ್ಯಕ್ಕೂ ಮುಳ್ಳಾಗಬಹುದು ಎಂದು ಮಾಯಾವತಿ ಹೇಳಿದ್ದಾರೆ ಎಂದು ವರದಿಯಾಗಿದೆ.

    ಎಸ್‍ಪಿ ನಾಯಕ ಅಖಿಲೇಶ್ ಯಾದವ್ ಕುರಿತು ಮಾತನಾಡಿ, ಎಸ್‍ಪಿ- ಬಿಎಸ್‍ಪಿ ಮೈತ್ರಿ ಮಾಡಿಕೊಂಡ ಬಳಿಕ ಅಖಿಲೇಶ್ ಯಾದವ್ ಹಾಗೂ ಅವರ ಪತ್ನಿ ಡಿಂಪಲ್ ಯಾದವ್ ನನಗೆ ಬಹಳ ಗೌರವ ನೀಡಿದ್ದಾರೆ. ದೇಶಕ್ಕಾಗಿ ನಾನು ನಮ್ಮ ಮಧ್ಯೆಯಿರುವ ಎಲ್ಲಾ ಭಿನ್ನಾಭಿಪ್ರಾಯವನ್ನು ಮರೆಯುತ್ತೇನೆ. ಅವರು ನನಗೆ ನೀಡಿದ ಗೌರವಕ್ಕೆ ನಾನು ಬದ್ಧಳಾಗಿರುತ್ತೇನೆ. ನಮ್ಮ ಸಂಬಂಧ ಕೇವಲ ರಾಜಕೀಯಕ್ಕೇ ಮಾತ್ರ ಸೀಮಿತವಲ್ಲ, ನಾವು ನಮ್ಮ ಸ್ನೇಹವನ್ನು ಎಂದಿಗೂ ಮುಂದವರಿಸುತ್ತೇವೆ ಎಂದು ತಿಳಿಸಿದರು.

    ಸಮಾಜವಾದಿ ಪಕ್ಷದ ಅಂತರಿಕ ಜಗಳದ ಕಾರಣ ಯಾದವರ ಮತಗಳು ನಮಗೆ ದೊರಕಿಲ್ಲ. ಮುಸ್ಲಿಂ ಪ್ರಾಬಲ್ಯವಿರುವ ಪಕ್ಷ ಕ್ಷೇತ್ರದಲ್ಲಿ ಗೆದ್ದಿದೆ. ಚುನಾವಣೆಗೂ ಮುನ್ನ ಶಿವಪಾಲ್ ಪ್ರಗತಿಶೀಲ ಸಮಾಜವಾದಿ ಪಕ್ಷ ಸ್ಥಾಪಿಸಿದ್ದು, ಸಮಾಜವಾದಿ ಪಕ್ಷದ ಮತಗಳು ವಿಭಜನೆಯಾಗಲು ಕಾರಣವಾಯಿತು ಮತ್ತು ಅದು ಮಹಾಮೈತ್ರಿಗೆ ಹೊಡೆತಕೊಟ್ಟಿದೆ. ಇದರಿಂದ ಎಸ್‍ಪಿಯ ಪ್ರಬಲ ಅಭ್ಯರ್ಥಿ ಕೂಡ ಸೋಲು ಕಾಣುವಂತಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮೂಲಗಳ ಪ್ರಕಾರ ಮಾಯಾವತಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಬಯಕೆ ಹೊಂದಿದ್ದರು. ಚುನಾವಣಾ ಫಲಿತಾಂಶದಿಂದ ಮಾಯವತಿ ಅಸಮಾಧಾನಗೊಂಡಿದ್ದಾರೆ. ನಾವು ಎಸ್‍ಪಿ ಪ್ರಯತ್ನವನ್ನು ಶ್ಲಾಘಿಸುತ್ತೇವೆ ಆದರೆ ಮೈತ್ರಿ ಗೆಲುವು ಮತಗಳ ವರ್ಗಾವಣೆಯಿಂದ ಮಾತ್ರ ಅಳೆಯಲು ಸಾಧ್ಯ ಆದರೆ ಅದೇ ಆಗಿಲ್ಲ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

    ಭಾನುವಾರ ನಡೆದ ಸಭೆಯಲ್ಲಿ ಮಾಯಾವತಿ ಉತ್ತರ ಪ್ರದೇಶದ ಪಕ್ಷದ ಘಟಕದಲ್ಲಿ ಹಲವಾರು ಬದಲಾಣೆಗಳನ್ನು ಮಾಡಿದ್ದು, ರಾಜ್ಯವನ್ನು ಪಶ್ಚಿಮ, ಲಕ್ನೋ, ಗೋರಖ್‍ಪುರ್, ವಾರಣಾಸಿ ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದು. ಪಕ್ಷವನ್ನು ಬೇರುಮಟ್ಟದಿಂದ ಸದೃಢಗೊಳಿಸಲು ನಿರ್ಧರಿಸಲಾಗಿದೆ. ಉತ್ತರಾಖಂಡ, ಬಿಹಾರ, ಒಡಿಶಾ, ಗುಜರಾತ್, ರಾಜಸ್ಥಾನ ಮತ್ತು ಜಾರ್ಖಂಡ್, ಡೆಲ್ಲಿ, ಮಧ್ಯಪ್ರದೇಶಗಳಲ್ಲಿ ಅಧ್ಯಕ್ಷರನ್ನು ಸೇರಿದಂತೆ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶವನ್ನು ಬಿಟ್ಟು ಬೇರೆ ರಾಜ್ಯಗಳಲ್ಲಿ ಬಿಎಸ್‍ಪಿ ಒಂದೂ ಸ್ಥಾನವನ್ನು ಗೆಲ್ಲುವಲ್ಲಿ ವಿಫಲವಾಗಿತ್ತು.

  • ಸರ್ಕಾರದ ವೈಫಲ್ಯ ಮರೆಮಾಚಲು ಮೋದಿಯಿಂದ ಉಗ್ರರ ದಾಳಿ ಬಳಕೆ: ಮಾಯಾವತಿ

    ಸರ್ಕಾರದ ವೈಫಲ್ಯ ಮರೆಮಾಚಲು ಮೋದಿಯಿಂದ ಉಗ್ರರ ದಾಳಿ ಬಳಕೆ: ಮಾಯಾವತಿ

    ಲಕ್ನೋ: ತಮ್ಮ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಪ್ರಧಾನಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರದ ಸದ್ಯದ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಎಸ್‍ಪಿ ನಾಯಕಿ ಮಾಯಾವತಿ ಆರೋಪಿಸಿದ್ದಾರೆ.

    ಲಕ್ನೋದಲ್ಲಿ ಇಂದು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರರ ದಾಳಿಯಿಂದ ಪ್ರಜೆಗಳು ಆತಂಕದಲ್ಲಿದ್ದಾರೆ. ಆದ್ರೆ ತಮ್ಮ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಮೋದಿ ಮತ್ತು ಬಿಜೆಪಿ ನಾಯಕರು ಮಾತ್ರ ಜಮ್ಮು-ಕಾಶ್ಮೀರದ ಸ್ಥಿತಿಗತಿಯನ್ನು ಹೇಗೆ ರಾಜಕೀಯಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬ ವಿಷಯ ಜನತೆಗೆ ಗೊತ್ತಾಗುತ್ತಿದೆ ಎಂದು ಟೀಕಿಸಿದರು.

    ರಾಜಕೀಯಕೋಸ್ಕರ ದೇಶದ ಭದ್ರತೆ ವಿಚಾರವನ್ನು ಕಡೆಗಣಿಸಲಾಗುತ್ತಿದೆ. ಇಂತಹ ಸ್ಥಿತಿಯನ್ನು ಎದುರಿಸಲು ಭಾರತಕ್ಕೆ ದೃಢ ನಿರ್ಧಾರ ತೆಗೆದುಕೊಂಡು ಸಮಸ್ಯೆಗಳನ್ನು ಪರಿಹರಿಸುವ ನಾಯಕರು ಬೇಕಾಗಿದ್ದಾರೆ. ದೇಶದ ಭದ್ರತೆ, ಸಮಸ್ಯೆ ಬಗ್ಗೆ ಗಮನ ಹರಿಸುವ ಬದಲು ಪ್ರಧಾನಿಯವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲು ಮೆಗಾ ವಿಡಿಯೋ ಕಾನ್ಫರೆನ್ಸ್ ಮಾಡಿದರು. ಶತ್ರು ದೇಶ ನಮ್ಮ ಮೇಲೆ ಹಗೆ ಸಾಧಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮಾತ್ರ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಇದು ದೇಶಕ್ಕೆ ಹಾಗೂ ಜನತೆಯ ಭಾವನೆಗಳಿಗೆ ದ್ರೋಹ ಬಗೆಯುವ ಕೆಲಸ. ಒಂದು ರೀತಿ ಹಾಸ್ಯಾಸ್ಪದ ವರ್ತನೆ ಎಂದು ಮಾಯಾವತಿ ಟಾಂಗ್ ನೀಡಿದ್ದಾರೆ.

    ಮಾಯಾವತಿ-ಅಖಿಲೇಶ್ ಯಾದವ್ ಜೊತೆಗೂಡಿ ಲೋಕಸಭೆ ಚುನಾವಣೆಯನ್ನು ಮೈತ್ರಿ ಮೂಲಕ ಎದುರಿಸಲು ಮುಂದಾಗಿದ್ದಾರೆ. ಆದರಿಂದ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡ್ ಮೂರು ರಾಜ್ಯಗಳಲ್ಲಿ ಈ ಮೈತ್ರಿ ಅಖಾಡಕ್ಕೆ ಇಳಿಯಲು ತಿರ್ಮಾನಿಸಿದ್ದು, ಲೋಕಸಭೆಯಲ್ಲಿ ಒಟ್ಟು 110 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಲೋಕಸಭೆ ಚುನಾವಣೆಗೆ ಕೆಲವು ದಿನಗಳು ಮಾತ್ರ ಬಾಕಿಯಿದ್ದು, ಎಲ್ಲಾ ರಾಜಕೀಯ ಪಕ್ಷದ ನಾಯಕರು ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಸ್‍ಪಿ, ಬಿಎಸ್‍ಪಿಗೆ ತಿರುಗೇಟು ನೀಡಲು ರಾಹುಲ್ ಗಾಂಧಿ ಮೆಗಾ ಪ್ಲಾನ್!

    ಎಸ್‍ಪಿ, ಬಿಎಸ್‍ಪಿಗೆ ತಿರುಗೇಟು ನೀಡಲು ರಾಹುಲ್ ಗಾಂಧಿ ಮೆಗಾ ಪ್ಲಾನ್!

    – ಉತ್ತರ ಪ್ರದೇಶದ ಎಲ್ಲ 80 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಚಿಂತನೆ
    – 13 ಕಡೆಗಳಲ್ಲಿ ಬೃಹತ್ ರ‍್ಯಾಲಿಗೆ ರಾಹುಲ್ ಗಾಂಧಿ ಸಿದ್ಧತೆ

    ಲಕ್ನೋ: ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ಹಾಗೂ ಸಮಾಜವಾದಿ ಪಕ್ಷಕ್ಕೆ (ಎಸ್‍ಪಿ) ತಿರುಗೇಟು ನೀಡಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೆಗಾ ಪ್ಲಾನ್ ರೂಪಿಸಿದ್ದಾರೆ.

    ಉತ್ತರ ಪ್ರದೇಶದ ಎಲ್ಲ 80 ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ಈ ನಿಟ್ಟಿನಲ್ಲಿ ಆರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಂದೊಂದರಂತೆ ಒಟ್ಟು 13 ಕಡೆ ಬೃಹತ್ ಬಹಿರಂಗ ರ‍್ಯಾಲಿ ಕೈಗೊಳ್ಳಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಬಹಿರಂಗ ರ‍್ಯಾಲಿ ನಡೆಸುವ ಸಂಬಂಧ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಅಜಾದ್ ಮತ್ತು ಉತ್ತರ ಪ್ರದೇಶದ ಮುಖಂಡ ರಾಜ್ ಬಬ್ಬರ್ ಇಂದು ಸುದೀರ್ಘ ಚರ್ಚೆ ನಡೆಸಿದ್ದಾರೆ. ರಾಜ್ಯದ ಪಶ್ಚಿಮ ಕ್ಷೇತ್ರಗಳಾದ ಹಾಪುರ್, ಮೊರಾದಾಬಾದ್ ಮತ್ತು ಸಹರಾನ್ಪುರ್ ನಿಂದ ರ್ಯಾಲಿ ಆರಂಭಿಸಲು ನಿರ್ಧಾರವನ್ನು ಈ ನಾಯಕರು ಕೈಗೊಂಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ಬಿಎಸ್‍ಪಿ ನಾಯಕಿ ಮಾಯಾವತಿ ಹಾಗೂ ಎಸ್‍ಪಿ ನಾಯಕ ಅಖಿಲೇಶ್ ಯಾದವ್ ಶನಿವಾರ ಸುದ್ದಿಗೋಷ್ಠಿ ನಡೆಸಿ ಮೈತ್ರಿ ವಿಚಾರವನ್ನು ತಿಳಿಸಿದ್ದರು. ಈ ಮೈತ್ರಿಯ ಒಪ್ಪಂದದ ಪ್ರಕಾರ ಎರಡೂ ಪಕ್ಷಗಳು ಒಟ್ಟು ತಲಾ 38 ಕ್ಷೇತ್ರಗಳನ್ನು ಹಂಚಿಕೊಂಡು, ಅಮೇಠಿ ಹಾಗೂ ರಾಯ್ ಬರೇಲಿಯನ್ನು ಕಾಂಗ್ರೆಸ್‍ಗೆ, ಉಳಿದ ಎರಡು ಕ್ಷೇತ್ರಗಳನ್ನು ರಾಷ್ಟ್ರೀಯ ಲೋಕದಳಗೆ ಬಿಟ್ಟುಕೊಟ್ಟಿದ್ದರು.

    ಬಿಎಸ್‍ಪಿ ಹಾಗೂ ಎಸ್‍ಪಿ ಕೇವಲ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್‍ಗೆ ಬಿಟ್ಟು ಮೈತ್ರಿ ಮಾಡಿಕೊಂಡ ಬೆನ್ನಲೇ ರಾಹುಲ್ ಗಾಂಧಿ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಕೇವಲ ಎರಡು ಕ್ಷೇತ್ರ ಬಿಟ್ಟ ಮೈತ್ರಿ ವಿರುದ್ಧ ಗರಂ ಆಗಿರುವ ರಾಹುಲ್ ಗಾಂಧಿ, 80 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ನಿರ್ಧಾರ ಕೈಗೊಂಡಿದ್ದಾರೆ.

    ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢ್‍ನಲ್ಲಿ ಅಧಿಕಾರ ಹೊಂದಿರುವ ಕಾಂಗ್ರೆಸ್ ಈ ರಾಜ್ಯಗಳಲ್ಲಿ ಹೆಚ್ಚು ಕ್ಷೇತ್ರಗಳಿಂದ ಜಯಗಳಿಸುವ ಸಾಧ್ಯತೆಗಳಿವೆ. ಆದರೆ ಮಾಯಾವತಿ ಹಾಗೂ ಅಖಿಲೇಶ್ ಮೈತ್ರಿಯಿಂದಾಗಿ ಉತ್ತರ ಪ್ರದೇಶದಿಂದ ಕಾಂಗ್ರೆಸ್ ಬೆರಳೆಣಿಕೆ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲಿದೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    ಉತ್ತರ ಪ್ರದೇಶದಲ್ಲಿ 1992ರಂದು ನಡೆದ ಬಾಬ್ರಿ ಮಸೀದಿ ದ್ವಂಸ ಘಟನೆ ಕಾಂಗ್ರೆಸ್ ಮೇಲೆ ಭಾರೀ ಪರಿಣಾಮ ಬೀರಿದೆ. ಈ ಘಟೆಯ ಬಳಿಕ ನಿಧಾನವಾಗಿ ಕಾಂಗ್ರೆಸ್ ಕ್ಷೇತ್ರಗಳನ್ನು ಕಳೆದುಕೊಂಡಿತು. ಇತ್ತ ಬಿಜೆಪಿ ತನ್ನ ಮೇಲುಗೈ ಸಾಧಿಸಿ 2014ರಲ್ಲಿ 71 ಕ್ಷೇತ್ರಗಳಿಂದ ಜಯ ಸಾಧಿಸಿತ್ತು. ಈಗ ಮತದಾರರ ನಿರೀಕ್ಷೆಗಳು ಭಿನ್ನವಾಗಿವೆ. ಯಾದವರು ಹಾಗೂ ದಲಿತರು ಬಿಎಸ್‍ಪಿ ಮತ್ತು ಎಸ್‍ಪಿಗೆ ನೀಡಿದ ಬೆಂಬಲ ಹೇಗಿದೆ ಎನ್ನುವ ಪ್ರಶ್ನೆಗೆ ಮೇ ತಿಂಗಳಿನಲ್ಲಿ ಪ್ರಕಟವಾಗಲಿರುವ ಫಲಿತಾಂಶ ಉತ್ತರ ನೀಡಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸ್-ಬಿಜೆಪಿ ಎರಡೂ ಒಂದೇ ಮುಖದ ಪಕ್ಷ: ಮಾಯಾವತಿ

    ಕಾಂಗ್ರೆಸ್-ಬಿಜೆಪಿ ಎರಡೂ ಒಂದೇ ಮುಖದ ಪಕ್ಷ: ಮಾಯಾವತಿ

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಇಂದು ರಣಕಹಳೆಯನ್ನು ಮೊಳಗಿಸಿದೆ. ಈ ಬಾರಿಯ ಚುನಾವಣೆಗೆ ಜೆಡಿಎಸ್ ಮತ್ತು ಬಿಎಸ್‍ಪಿ ಮೈತ್ರಿ ಮಾಡಿಕೊಂಡಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಇಂದು ಜೆಡಿಎಸ್ ನಗರದ ಯಲಹಂಕದ ಮೈದಾನದಲ್ಲಿ ವಿಕಾಸ ಪರ್ವವನ್ನು ಹಮ್ಮಿಕೊಂಡಿದ್ದು, ಬಿಎಸ್‍ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ಸಹ ಭಾಗಿಯಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

    ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಒಂದೇ ಮುಖವನ್ನು ಹೊಂದಿರುವ ಪಕ್ಷಗಳಾಗಿವೆ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಜನತೆ ರಾಷ್ಟ್ರೀಯ ಪಕ್ಷಗಳಿಗೆ ಬುದ್ದಿ ಕಲಿಸಬೇಕಿದೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ದಲಿತ ನಾಯಕರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿತ್ತು. ಆದ್ರೆ ಚುನಾವಣೆ ಗೆಲುವಿನ ಬಳಿಕ ಕಾಂಗ್ರೆಸ್ ತನ್ನ ಮಾತನ್ನು ಮರೆತು ಮೋಸ ಮಾಡಿತು. ಕಾಂಗ್ರೆಸ್ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರಿಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಲಕ್ಷ ದಲಿತರ ವೋಟ್‍ಗಳನ್ನ ಸೆಳೆಯಲು ನಾನಾ ಕಸರತ್ತುಗಳನ್ನು ಮಾಡುತ್ತಿದೆ. ಆದ್ರೆ ಕಾಂಗ್ರಸ್ ಇಲ್ಲಿವರೆಗೆ ದಲಿತರಿಗೆ ಸರಿಯಾದ ಸೌಲಭ್ಯಗಳನ್ನು ನೀಡದೇ ಕಡೆಗಣನೆ ಮಾಡಿದೆ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಂಪೂರ್ಣವಾಗಿ ಆದರ್ಶವಾಗಿ ಕಂಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಲಾಗಿತ್ತು. ಭಾರತರತ್ನ ಕೊಡುವಲ್ಲಿ ಅಂದಿನ ಕೇಂದ್ರ ಸರ್ಕಾರ ನೀಡಲು ಅಲ್ಲಗೆಳದಿತ್ತು ಎಂದು ಕಾಂಗ್ರೆಸ್ ವಿರುದ್ಧ ಮಾಯಾವತಿ ಕಿಡಿಕಾರಿದ್ರು.

    ಆರ್‍ಎಸ್‍ಎಸ್ ಕೈಯಲ್ಲಿ ಬಿಜೆಪಿ: ಆರ್‍ಎಸ್‍ಎಸ್ ಮುಷ್ಟಿಯಲ್ಲಿ ಬಿಜೆಪಿ ಇದೆ. ಬಿಜೆಪಿ ಸಹ ಬಡವರ ಪರವಾಗಿ ಕೆಲಸ ಮಾಡುತ್ತಿಲ್ಲ. ಯುವಕರು ಉದ್ಯೋಗ ನೀಡಿ ಅಂತಾ ಕೇಳಿದ್ರೆ ಪ್ರಧಾನಿ ಮೋದಿ ಪಕೋಡಾ ಮಾರಿ ಅಂತಾ ಸಲಹೆ ನೀಡುತ್ತಾರೆ. ಅಧಿಕಾರಕ್ಕೆ ಬಂದ ಕೂಡಲೇ ಕಪ್ಪು ಹಣ ತರುತ್ತೇವೆ ಅಂತಾ ಹೇಳಿದವರು ಇದೂವರೆಗೂ ಒಂದು ರೂಪಾಯಿಯನ್ನು ಸಹ ತಂದಿಲ್ಲ. ಇನ್ನು ನೋಟ್ ಬ್ಯಾನ್ ಮತ್ತು ಜಿಎಸ್‍ಟಿ ವ್ಯಾಪಾರಿಗಳಿಗೆ ಮತ್ತು ರೈತರಿಗೆ ಅನಾನುಕೂಲಕರವಾಗಿವೆ. ಬಿಜೆಪಿ ಉತ್ತರ ಪ್ರದೇಶ ಮತ್ತು ಗುಜರಾತ್ ಮಾದರಿಯಲ್ಲಿ ಧರ್ಮ ಸಂಘರ್ಷದ ಮೂಲಕ ಚುನಾವಣೆ ಗೆಲ್ಲಲ್ಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಕರ್ನಾಟಕದ ಜನರು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಎಸ್‍ಪಿ ಮೈತ್ರಿಗೆ ತಮ್ಮ ಮತವನ್ನು ನೀಡಬೇಕು ಎಂದು ಮನವಿ ಮಾಡಿಕೊಂಡರು. ಮುಂದಿನ ಚುನಾವಣೆಯ ಬಳಿಕೆ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗ್ತಾರೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ರೈತರು, ದಲಿತರು ಬಡವರ ಮೇಲೆ ಪ್ರೀತಿ ವಿಶ್ವಾಸ ಇಲ್ಲ. ಇಂದು ಜೆಡಿಎಸ್ ಜೊತೆ ಬಿಎಸ್ಪಿ ಹೊಂದಾಣಿಕೆ ಮಾಡಿಕೊಂಡಿದೆ. ಲಕ್ಷಾಂತರ ಜನ ಇವತ್ತು ಆಗಮಿಸಿದ್ದೀರಿ ನಿಮ್ಮನ್ನೆಲ್ಲ ನೋಡಿದ್ದು ನನಗೆ ಖುಷಿ ನೀಡಿದೆ. ಕನ್ನಡ ನಾಡಿನ ಜನತೆ ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತ, ದಲಿತರು, ರೈತರು, ಹಿಂದುಳಿದ ವರ್ಗದ ಹಿತಕ್ಕಾಗಿ ಜೆಡಿಎಸ್ ಗೆಲ್ಲಿಸಿ ಬೇಕಿದೆ ಎಂದು ಮನವಿ ಮಾಡಿಕೊಂಡರು.

    ಸಮಾರಂಭದ ವೇದಿಕೆಯಲ್ಲಿ ಮಯಾವತಿ ಅವರಿಗಾಗಿಯೇ ಬಿಎಸ್‍ಪಿ ಚಿಹ್ನೆಯುಳ್ಳ ಭಾಷಣದ ಟೇಬಲ್ ಸಿದ್ಧತೆ ಮಾಡಲಾಗಿತ್ತು. ಇತ್ತ ಜೆಡಿಎಸ್ ನಾಯಕರು ಮಾತನಾಡಲು ಪ್ರತ್ಯೇಕ ಭಾಷಣದ ಟೇಬಲ್ ವ್ಯವಸ್ಥೆ ಮಾಡಲಾಗಿತ್ತು.