Tag: mayavathi

  • ಎಲ್ಲಾ ಸಂಸ್ಥೆಗಳು ಆರ್‌ಎಸ್‌ಎಸ್‌ ಹಿಡಿತದಲ್ಲಿವೆ: ರಾಹುಲ್‌ ಗಾಂಧಿ ವಾಗ್ದಾಳಿ

    ಎಲ್ಲಾ ಸಂಸ್ಥೆಗಳು ಆರ್‌ಎಸ್‌ಎಸ್‌ ಹಿಡಿತದಲ್ಲಿವೆ: ರಾಹುಲ್‌ ಗಾಂಧಿ ವಾಗ್ದಾಳಿ

    ನವದೆಹಲಿ: ನಾವು ಸಂವಿಧಾನವನ್ನು ರಕ್ಷಿಸಬೇಕು. ಸಂವಿಧಾನ ಉಳಿಸಲು, ನಾವು ನಮ್ಮ ಸಂಸ್ಥೆಗಳನ್ನು ರಕ್ಷಿಸಬೇಕು. ಆದರೆ ಎಲ್ಲ ಸಂಸ್ಥೆಗಳೂ ಈಗ ಆರ್‌ಎಸ್‌ಎಸ್‌ ಹಿಡಿತದಲ್ಲಿವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

    ನಗರದಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಅಧಿಕಾರದ ಆಸೆಗೆ ಬಿದ್ದ ರಾಜಕಾರಣಿಗಳೂ ಇದ್ದಾರೆ. ಅವರು ಪೂರ್ತಿಯಾಗಿ ಅಧಿಕಾರವನ್ನು ಪಡೆಯುವ ಬಗ್ಗೆ ಯೋಚಿಸುತ್ತಾರೆ. ನಾನು ಅಧಿಕಾರದ ಕೇಂದ್ರದಲ್ಲಿ ಹುಟ್ಟಿದ್ದೇನೆ. ಆದರೆ ನನಗೆ ಅದರಲ್ಲಿ ಆಸಕ್ತಿ ಇಲ್ಲ. ಬದಲಿಗೆ ನಾನು ದೇಶವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ತವರಿಗೇ ಲಗ್ಗೆಯಿಟ್ಟ XE ಕೊರೊನಾ ರೂಪಾಂತರಿ

    ಮಾಯಾವತಿ ಅವರು ಉತ್ತರ ಪ್ರದೇಶ ಚುನಾವಣೆಯಲ್ಲಿ ಹೋರಾಡಲಿಲ್ಲ. ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ನಾವು ಮಾಯಾವತಿ ಕೇಳಿದ್ದೆವು. ಆದರೆ ಅವರು ಸ್ಪಂದಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ದಲಿತರ ಏಳಿಗೆಗಾಗಿ ಕಾನ್ಸಿರಾಮ್‌ ಜಿ ಅವರು ಧ್ವನಿ ಎತ್ತಿದ್ದರು. ಆದರೆ ಅದು ಕಾಂಗ್ರೆಸ್‌ ಮೇಲೆ ಪರಿಣಾಮ ಬೀರಿತ್ತು. ಈಗ ಮಾಯಾವತಿಯವರು ದಲಿತರ ಧ್ವನಿಯಾಗಿ ಹೋರಾಡಲಿಲ್ಲ. ಏಕೆಂದರೆ ಸಿಬಿಐ, ಇಡಿ, ಪೆಗಾಸಸ್‌ ಭಯದಲ್ಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯುಪಿ ಸಿಎಂ ಕಚೇರಿಯ ಟ್ವಿಟ್ಟರ್ ಖಾತೆ ಹ್ಯಾಕ್

  • 26 ವರ್ಷಗಳ ಬಳಿಕ ಎಸ್‍ಪಿ-ಬಿಎಸ್‍ಪಿ ಮೈತ್ರಿ

    26 ವರ್ಷಗಳ ಬಳಿಕ ಎಸ್‍ಪಿ-ಬಿಎಸ್‍ಪಿ ಮೈತ್ರಿ

    -ಮಹಾಘಟಬಂಧನ್ ದಿಂದ ಹೊರಬಂದು ಕಾಂಗ್ರೆಸ್‍ಗೆ ಶಾಕ್ ಕೊಟ್ಟ ಎಸ್‍ಪಿ-ಬಿಎಸ್‍ಪಿ
    -80 ಕ್ಷೇತ್ರಗಳಲ್ಲಿ 38-38ರಂತೆ ಹಂಚಿಕೆ

    ಲಕ್ನೋ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್‍ಪಿ) ಮತ್ತು ಬಹುಜನ ಸಮಾಜವಾದಿ ಪಕ್ಷ(ಬಿಎಸ್‍ಪಿ) 26 ವರ್ಷಗಳ ಬಳಿಕ ಮೈತ್ರಿ ರಚಿಸಿಕೊಂಡಿವೆ. ಈ ಮೂಲಕ ಕಾಂಗ್ರೆಸ್ ನಿಂದ ಹೊರ ಬಂದಿರುವ ಪ್ರಾದೇಶಿಕ ಪಕ್ಷಗಳು ಮಹಾಘಟಬಂಧನ್‍ಗೆ ಶಾಕ್ ನೀಡಿವೆ. ಇದೇ ಮೈತ್ರಿಯನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮುಂದುವರಿಸುವುದಾಗಿ ಎರಡು ಪಕ್ಷಗಳೂ ಹೇಳಿಕೊಂಡಿವೆ.

    ಇಂದು ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಎಸ್‍ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಬಿಎಸ್‍ಪಿ ಮುಖ್ಯಸ್ಥೆ ಮಯಾವತಿ, ಚುನಾವಣೆಯ ಮೈತ್ರಿ ಬಗ್ಗೆ ಹೇಳಿಕೊಂಡರು. ಉತ್ತರ ಪ್ರದೇಶದ ಒಟ್ಟು 80 ಕ್ಷೇತ್ರಗಳಲ್ಲಿ ನಾವು 38-38ರಂತೆ ಕ್ಷೇತ್ರಗಳನ್ನು ಹಂಚಿಕೊಂಡಿದ್ದೇವೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸುವ ಅಮೇಥಿ ಮತ್ತು ಕಾಂಗ್ರೆಸ್ ಅಧಿನಾಯಕಿ ಸ್ಪರ್ಧಿಸುವ ರಾಯ್‍ಬರೇಲಿ ಕ್ಷೇತ್ರದಲ್ಲಿ ಎಸ್‍ಪಿ ಮತ್ತು ಬಿಎಸ್‍ಪಿ ಅಭ್ಯರ್ಥಿಗಳು ಸ್ಪರ್ಧೆ ಮಾಡಲ್ಲ. ಉಳಿದೆರೆಡು ಕ್ಷೇತ್ರಗಳಲ್ಲಿ ರಾಜ್ಯದ ಪ್ರಾದೇಶಿಕ ಪಕ್ಷಗಳಿಗೆ ಬೆಂಬಲ ನೀಡಲಾಗುವುದು ಎಂದು ಮಯಾವತಿ ತಿಳಿಸಿದರು.

    ಮೈತ್ರಿ ಯಾಕೆ?
    ನಮ್ಮ ಈ ಸುದಿಗೋಷ್ಠಿ ಪ್ರಧಾನ ಮಂತ್ರಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಬ್ಬರ ನಿದ್ದೆಯನ್ನು ಕೆಡಿಸಲಿದೆ ಎಂದು ಹೇಳುತ್ತಲೇ ಮಾಯಾವತಿ ತಮ್ಮ ಮಾತು ಆರಂಭಿಸಿದರು. 1990ರಿಂದ ಬಿಜೆಪಿಯ ಜಾತಿವಾದಿ, ಸಂಪ್ರದಾಯಿಕ ನೀತಿಗಳಲ್ಲಿ ರಾಜಕೀಯ ತಂದಿದ್ದು, ಅಯೋಧ್ಯೆ ವಿಚಾರದಲ್ಲಿ ರಾಜಕಾರಣ ಮಾಡುತ್ತಿರೋದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಈ ಹಿಂದೆ ಚುನಾವಣೆಗೂ ಮುನ್ನ ನೀಡಿದ ಭರವಸೆಗಳನ್ನು ಈಡೇರಿಸಲು ಬಿಜೆಪಿ ವಿಫಲವಾಗಿದೆ. ರೈತ ವಿರೋಧಿ ನೀತಿ, ಬಿಜೆಪಿ ಸರ್ವಾಧಿಕಾರತ್ವವವನ್ನು ಶಮನಗೊಳಿಸಲು ಇಂದು ನಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಸ್‍ಪಿ ಮತ್ತು ಬಿಎಸ್‍ಪಿ ಒಂದಾಗಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೈತ್ರಿ ಇದ್ದರೂ ಕಾಂಗ್ರೆಸ್ ಜೊತೆ ಹೆಚ್ಚು ಗುರುತಿಸಿಕೊಳ್ಳಬೇಡಿ: ಎನ್.ಮಹೇಶ್‍ಗೆ ಮಾಯಾ ಸೂಚನೆ

    ಮೈತ್ರಿ ಇದ್ದರೂ ಕಾಂಗ್ರೆಸ್ ಜೊತೆ ಹೆಚ್ಚು ಗುರುತಿಸಿಕೊಳ್ಳಬೇಡಿ: ಎನ್.ಮಹೇಶ್‍ಗೆ ಮಾಯಾ ಸೂಚನೆ

    ನವದೆಹಲಿ: ಕಾಂಗ್ರೆಸ್ ಜೊತೆ ಹೆಚ್ಚು ಗುರುಸಿಕೊಳ್ಳಬೇಡಿ ಎಂದು ಬಿಎಸ್‍ಪಿ ಶಾಸಕ ಎನ್ ಮಹೇಶ್ ಅವರಿಗೆ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಸೂಚನೆ ನೀಡಿದ್ದಾರೆ.

    ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಂಗಳವಾರ ಎನ್ ಮಹೇಶ್ ದೆಹಲಿಯಲ್ಲಿ ಮಾಯಾವತಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

    ದೆಹಲಿಯಲ್ಲಿ ನಡೆದ ಬಿಎಸ್‍ಪಿ ಸಭೆಯಲ್ಲಿ ಮಾಯಾವತಿಯವರು ಎನ್. ಮಹೇಶ್‍ಗೆ, ಕಾಂಗ್ರೆಸ್ ಜೊತೆಗೆ ರಾಜ್ಯದಲ್ಲಿ ಹೆಚ್ಚು ಗುರುತಿಸಿಕೊಳ್ಳಬೇಡಿ. ಮೈತ್ರಿ ಸರ್ಕಾರ ಇದ್ದರೂ, ಕಾಂಗ್ರೆಸ್ ನಡೆಗೆ ಬೆಂಬಲ ನೀಡದೇ ತಟಸ್ಥವಾಗಿರಿ. ಅಲ್ಲದೇ ಜೆಡಿಎಸ್ಸಿಗೆ ನೀಡಿರುವ ಬೆಂಬಲವನ್ನು ಲೋಕಸಭಾ ಚುನಾವಣೆಯಲ್ಲಿಯೂ ಮುಂದುವರಿಸಿ. ಈಗಾಗಲೇ ನಾವು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ಸನ್ನು ವಿರೋಧಿಸಿದ್ದೇವೆ. ಹೀಗಾಗಿ ಕಾಂಗ್ರೆಸ್ ಬಗ್ಗೆ ಮೃದು ಧೋರಣೆ ತೋರುವ ಅವಶ್ಯಕತೆ ಬೇಡ. ನೀವು ಸಚಿವರಾದ ಬಳಿಕ ರಾಜ್ಯದಲ್ಲಿ ಕಾರ್ಯಕರ್ತರಿಗೆ ಹೊಸ ಹುರುಪು ಬಂದಿದೆ. ಮೊದಲು ಪಕ್ಷ ಸಂಘಟನೆಗೆ ಹೆಚ್ಚಿನ ಆಧ್ಯತೆ ನೀಡಿ. ಜಿಲ್ಲಾ ಹಾಗೂ ತಾಲೂಕು ಮಟ್ಟಗಳಲ್ಲಿ ಪಕ್ಷವನ್ನು ಸಂಘಟಿಸಿ ಬಲಿಷ್ಟಗೊಳಿಸಿ. ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಸ್ಥಾನಗಳ ಗೆಲುವಿಗೆ ಪ್ರಯತ್ನಿಸಿ ಎಂದು ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಿವೆ.

    ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಮಹೇಶ್, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿತ್ತು. ಪಕ್ಷದ ಸಂಘಟನೆ ಕುರಿತು ಚರ್ಚೆ ನಡೆದಿದೆ. ಕರ್ನಾಟಕದಿಂದ ಇಪ್ಪತ್ತಕ್ಕೂ ಹೆಚ್ಚು ನಾಯಕರು ಭಾಗವಹಿಸಿದ್ದೇವು. ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ನಾಯಕರು ಸಹ ಭಾಗವಹಿಸಿದ್ದರು. ಲೋಕಸಭೆಗೆ ಪಕ್ಷ ಸಂಘಟಿಸಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಆದರೆ ನಾನು ಲೋಕಸಭೆಗೆ ಸ್ಪರ್ಧೆ ಮಾಡಲ್ಲ. ಲೋಕ ಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿಗಳು ಕೇವಲ ವಂದತಿ ಮಾತ್ರ ಎಂದು ಹೇಳಿದರು.

    ಯಾವುದೇ ಕಾರಣಕ್ಕೂ ನಾವು ಕಾಂಗ್ರೆಸ್ಸಿಗೆ ಬೆಂಬಲ ನೀಡುವುದಿಲ್ಲ. ರಾಜ್ಯದಲ್ಲಿ ಜೆಡಿಎಸ್ ಜೊತೆಗೆ ಮಾತ್ರ ಮೈತ್ರಿ ಮಾಡಿಕೊಂಡಿದ್ದೇವೆ. ಹೀಗಾಗಿ ಉಪಚುನಾವಣೆಯಲ್ಲಿ ಜೆಡಿಎಸ್ ಗೆ ಬೆಂಬಲ ನೀಡುತ್ತೇವೆ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಭಾಗಿದಾರ ಹಿನ್ನೆಲೆ ಅನಿವಾರ್ಯತೆ ಇದೆ. ಆದರೆ ನಾವು ಮಾತ್ರ ಜೆಡಿಎಸ್‍ಗೆ ಬೆಂಬಲ ನೀಡುತ್ತೇವೆ. ಅಲ್ಲದೇ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ರಾಜ್ಯಾದ್ಯಂತ ಪ್ರವಾಸ ಮಾಡಲು ಹಿರಿಯ ನಾಯಕರಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಚಿವರ ರಾಜೀನಾಮೆಯನ್ನು ಅಂಗೀಕರಿಸ್ತಾರೋ, ಇಲ್ಲ ಮಾಯಾವತಿ ಜೊತೆ ಮಾತಾಡ್ತಾರೋ ಗೊತ್ತಿಲ್ಲ: ಎಚ್.ಡಿ.ರೇವಣ್ಣ

    ಸಚಿವರ ರಾಜೀನಾಮೆಯನ್ನು ಅಂಗೀಕರಿಸ್ತಾರೋ, ಇಲ್ಲ ಮಾಯಾವತಿ ಜೊತೆ ಮಾತಾಡ್ತಾರೋ ಗೊತ್ತಿಲ್ಲ: ಎಚ್.ಡಿ.ರೇವಣ್ಣ

    ಹಾಸನ: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್‍ರವರ ರಾಜೀನಾಮೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅಂಗೀಕರಿಸುತ್ತಾರೋ ಅಥವಾ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಜೊತೆ ಮಾತಾನಾಡಿ ಬಗೆಹರಿಸುತ್ತಾರೋ ಎನ್ನುವ ಮಾಹಿತಿ ತಿಳಿದಿಲ್ಲವೆಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ಸಚಿವ ಎನ್.ಮಹೇಶ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ಶಿಕ್ಷಣ ಸಚಿವರ ರಾಜೀನಾಮೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅಲ್ಲದೇ ಖುದ್ದು ಅವರೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಯಾರೂ ಗಾಬರಿ ಪಡುವ ಅಗತ್ಯವಿಲ್ಲ. ನಾನು ಬೆಂಗಳೂರಿಗೆ ಹೋಗಿ ಮಾಹಿತಿ ಪಡೆದ ನಂತರ ಈ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದರು.

    ಎನ್.ಮಹೇಶ್‍ರವರ ರಾಜೀನಾಮೆ ಅವರ ಪಕ್ಷದ ತೀರ್ಮಾನ ಇರಬಹುದು. ಹೀಗಾಗಿ ಸಿಎಂ ಕುಮಾರಸ್ವಾಮಿಯವರು ಸಚಿವರ ರಾಜೀನಾಮೆಯನ್ನು ಅಂಗೀಕರಿಸುತ್ತಾರೋ ಅಥವಾ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿಯವರೊಂದಿಗೆ ಮಾತನಾಡುತ್ತಾರೋ ಎನ್ನುವ ಮಾಹಿತಿ ಗೊತ್ತಿಲ್ಲ. ಮೊದಲ ಬಾರಿ ಗೆದ್ದು ಸಚಿವರಾಗಿದ್ದ ಒಳ್ಳೆಯ ರಾಜಕಾರಣಿ ಅವರು. ಅವರು ರಾಜೀನಾಮೆ ನೀಡದೆ, ತಮ್ಮ ಸ್ಥಾನದಲ್ಲೇ ಮುಂದುವರಿಯುವಂತೆ ಹೇಳುತ್ತೇನೆ ಎಂದು ಹೇಳಿದರು.

    ರಾಜೀನಾಮೆ ಬಗ್ಗೆ ಎನ್.ಮಹೇಶ್‍ರ ಸ್ಪಷ್ಟನೆ ಏನು?
    ನಾನು ನನ್ನ ಕ್ಷೇತ್ರಗಳಿಗೆ ಭೇಟಿ ಆಗೋದಕ್ಕೆ ಸಮಯ ಸಿಗುತ್ತಿಲ್ಲ. ಹಾಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಲಿದ್ದೇನೆ. ನನ್ನನ್ನು ಸಚಿವರನ್ನಾಗಿ ಮಾಡಿದ್ದ ಮಾನ್ಯ ಸಿಎಂ ಕುಮಾರಸ್ವಾಮಿ ಅವರ ಧನ್ಯವಾದ ತಿಳಿಸುತ್ತೇನೆ. ಮುಂದೆ ಸರ್ಕಾರದ ಭಾಗವಾಗಿ ಇರಲ್ಲ, ಕೇವಲ ಕುಮಾರಸ್ವಾಮಿ ನೇತೃತ್ವ ಸರ್ಕಾರದ ಬೆಂಬಲಿಗನಾಗಿ ಇರುತ್ತೇನೆ. ನನ್ನ ಸಂಪೂರ್ಣ ಬೆಂಬಲ ಕುಮಾರಸ್ವಾಮಿ ಅವರಿಗಿದ್ದು, ಉಪ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೆಡಿಎಸ್ ಜಾಹೀರಾತುಗಳಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸ್ಥಾನವೇ ಇಲ್ಲ!

    ಜೆಡಿಎಸ್ ಜಾಹೀರಾತುಗಳಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸ್ಥಾನವೇ ಇಲ್ಲ!

    ಬೆಂಗಳೂರು: ಮೊದಲು ರಾಜ್ಯದ ಕೆಲ ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಜೊತೆ ಸೇರಿ ಸರ್ಕಾರ ರಚಿಸೋದು ಇಷ್ಟ ಇಲ್ಲ ಎನ್ನಲಾಗ್ತಿತ್ತು. ಇದು ಗೊತ್ತಿದ್ದೋ ಏನೋ, ತೆನೆ ನಾಯಕರು ಕಾಂಗ್ರೆಸ್ ಹೈಕಮಾಂಡ್ ಜೊತೆ ಈಗ ನೇರ ಸಂಪರ್ಕ ಸಾಧಿಸಿದ್ದಾರೆ.

    ಈ ಮಾತಿಗೆ ಪೂರಕ ಎನ್ನುವಂತೆ ಜೆಡಿಎಸ್ ಜಾಹೀರಾತುಗಳಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸ್ಥಾನವೇ ಸಿಕ್ಕಿಲ್ಲ. ಕುಮಾರಸ್ವಾಮಿ, ದೇವೇಗೌಡ, ಸೋನಿಯಾ, ರಾಹುಲ್, ಮಾಯಾವತಿ ಫೋಟೋಗಳು ಮಾತ್ರ ಜಾಹೀರಾತುಗಳಲ್ಲಿ ರಾರಾಜಿಸುತ್ತಿವೆ. ಈ ಮೂಲಕ ಜೆಡಿಎಸ್ ತಮ್ಮ ವ್ಯವಹಾರ ಏನಿದ್ರೂ ಡೆಲ್ಲಿ ಲೆವೆಲ್, ರಾಜ್ಯ ನಾಯಕರ ಜೊತೆ ಅಲ್ಲ ಎಂಬ ಸಂದೇಶ ರವಾನಿಸಿದೆ ಎನ್ನಲಾಗುತ್ತಿದೆ.

    ಇದು ರಾಜ್ಯ ಕಾಂಗ್ರೆಸ್‍ನಲ್ಲಿ ತಳಮಳ ಉಂಟು ಮಾಡಿದೆ. ನಮ್ ಕತೆ ಏನಪ್ಪಾ ಅನ್ನೋ ಚಿಂತೆಯಲ್ಲಿ ಕೆಲ ನಾಯಕರು ಮುಳುಗಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯಿಂದಾಗಿ ಈಗ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದೆ. ಚುನಾವಣೆಗೆ ಮೊದಲು ಸಿದ್ದರಾಮಯ್ಯ ಜೊತೆ ರಾಹುಲ್ ನಿಕಟ ಬಾಂಧವ್ಯ ಹೊಂದಿದ್ದರು. ಹಲವು ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತೇ ಫೈನಲ್ ಆಗುತಿತ್ತು. ಆದರೆ ಅತಂತ್ರ ಫಲಿತಾಂಶದ ಬಳಿಕ ಸಿದ್ದರಾಮಯ್ಯನವರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿಲ್ಲ. ಮೈತ್ರಿ ಸರ್ಕಾರ ಇರುವಾಗ ಸಿದ್ದರಾಮಯ್ಯಗೆ ಮಣೆ ಹಾಕಿದ್ರೆ ಕಷ್ಟ ಎನ್ನುವ ನಿಟ್ಟಿನಲ್ಲಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆಯಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

    ಇತ್ತ ಫಲಿತಾಂಶದ ಬಳಿಕ ಬಹುಮತ ಸಾಬೀತುಪಡಿಸದೇ ಲಾಬಿ ಮಾಡಲೂ ಯಾರೂ ದೆಹಲಿಗೆ ಬರಬೇಡಿ ಅಂತ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿತ್ತು. ಆದರೆ ಈ ನಡುವೆ ಎಚ್‍ಡಿ ಕುಮಾರಸ್ವಾಮಿ ಅವರು ದೆಹಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಭೇಟಿ ಮಾಡಿದ್ದರು. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ ಮೈತ್ರಿ ಸರ್ಕಾರ ಬಂದಾಗ ರಾಜ್ಯ ಕಾಂಗ್ರೆಸ್ ನಾಯಕರನ್ನೇ ಹೈಕಮಾಂಡ್ ಕಡೆಗಣಿಸುತ್ತಿದೆಯಾ ಎಂಬ ಪ್ರಶ್ನೆ ಎದ್ದಿದೆ.


    ಹೆಚ್‍ಡಿಕೆ ಸಂಪುಟದಲ್ಲಿ ಕೆಲವು ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಗೋದು ಅನುಮಾನ ಎನ್ನಲಾಗುತ್ತಿದೆ. ಹಲವು ಜಿಲ್ಲೆಗಳಿಗೆ ಉಸ್ತುವಾರಿಗಳಾಗಿ ಹೊರಗಿನವರು ನೇಮಕಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಯಾಕಂದ್ರೆ, ಶಿವಮೊಗ್ಗ, ಚಿತ್ರದುರ್ಗ, ಉಡುಪಿ, ಚಿಕ್ಕಮಗಳೂರು, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯೇ ಆಗಿಲ್ಲ. ಉಡುಪಿಯಲ್ಲಂತೂ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. 2004ರಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದಾಗಲೂ ಇಂತದ್ದೇ ಸ್ಥಿತಿ ನಿರ್ಮಾಣ ಆಗಿತ್ತು. ಸ್ಥಳೀಯರು ಜಿಲ್ಲಾ ಉಸ್ತುವಾರಿ ಸಚಿವರಾಗದಿದ್ದರೆ ಆ ಜಿಲ್ಲೆಗಳ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂಬ ಆರೋಪ ಮೊದಲಿನಿಂದಲೂ ಕೇಳಿಬರುತ್ತಿದೆ. ಹೀಗಾಗಿ ಹೊಸ ಸರ್ಕಾರ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎನ್ನುವ ಕುತೂಹಲ ಹೆಚ್ಚಾಗಿದೆ.

  • 130 ಎಕರೆ ಪ್ರದೇಶದಲ್ಲಿ ಜೆಡಿಎಸ್ ಸಮಾವೇಶ- ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ರಿಲೀಸ್

    130 ಎಕರೆ ಪ್ರದೇಶದಲ್ಲಿ ಜೆಡಿಎಸ್ ಸಮಾವೇಶ- ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ರಿಲೀಸ್

    ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ತನ್ನ ಸೈನ್ಯವನ್ನು ರೆಡಿ ಮಾಡಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಸೆಡ್ಡು ಹೊಡೆಯಲು ನಿರ್ಧಾರ ಮಾಡಿರುವ ಜೆಡಿಎಸ್, ಲಕ್ಷಾಂತರ ಜನರ ಸಮ್ಮುಖದಲ್ಲಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಫೋಷಣೆ ಮಾಡಲು ಇಂದು ಅದ್ಧೂರಿ ಸಮಾವೇಶ ಆಯೋಜಿಸಿದೆ.

    ವಿಕಾಸ ಪರ್ವದ ಹೆಸರಿನಲ್ಲಿ ಯಲಹಂಕದ ಬಳಿ 130 ಎಕರೆ ಜಾಗದಲ್ಲಿ ಮಧ್ಯಾಹ್ನ 12 ಗಂಟೆಗೆ ಸಮಾವೇಶ ಆಯೋಜಿಸಿದ್ದು, 10 ಲಕ್ಷ ಜನ ಸೇರಿಸುವ ಪ್ಲಾನ್ ಮಾಡಿದೆ. ಇನ್ನು ಚುನಾವಣೆ ಸಮರಕ್ಕೆ ತಮ್ಮ ಹುರಿಯಾಳುಗಳನ್ನು ಕಣಕ್ಕೆ ಇಳಿಸಲು ಸಜ್ಜಾಗಿದ್ದು, 150 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಕೂಡ ಸಿದ್ಧತೆ ಮಾಡಿಕೊಂಡಿದೆ.

    25 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ದಲಿತ ಮತಗಳು ನಿರ್ಣಾಯಕವಾಗಿದ್ದು, ಆ ಮತಗಳನ್ನು ತನ್ನತ್ತ ಸೆಳೆಯಲು ಜೆಡಿಎಸ್ ಪಕ್ಕಾ ಪ್ಲಾನ್ ಮಾಡಿಕೊಂಡಿದೆ. ಇದೇ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬಿಎಸ್‍ಪಿ ನಾಯಕಿ ಮಾಯಾವತಿ ಆಗಮಿಸುತ್ತಿದ್ದು, ಜೆಡಿಎಸ್‍ಗೆ ಪರವಾಗಿ ಬೆಂಬಲದ ಕಹಳೆ ಊದಲಿದ್ದಾರೆ.

    ಮೋದಿ, ರಾಹುಲ್ ಗಾಂಧಿ ಬೆಂಗಳೂರಿಗೆ ಬಂದಿದ್ದಾರೆ ಎಂದು ಸಮಾವೇಶ ಮಾಡಿಲ್ಲ. ಪಕ್ಷ ಅಧಿಕಾರಕ್ಕೆ ತರಲು ಸಮಾವೇಶ ಮಾಡುತ್ತಿದ್ದು, ಸ್ವತಂತ್ರ ಬಲದಲ್ಲಿ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.