Tag: Mayanna

  • ನಂಗೆ 50 ಸಾವಿರ ಸಂಬಳ, ಸ್ವಂತ ಸಹಿ ಇಲ್ಲ: ಮಾಯಣ್ಣ

    ನಂಗೆ 50 ಸಾವಿರ ಸಂಬಳ, ಸ್ವಂತ ಸಹಿ ಇಲ್ಲ: ಮಾಯಣ್ಣ

    ಬೆಂಗಳೂರು: ನಾನು ಕಾನೂನಿಗೆ ಬದ್ಧನಾಗಿದ್ದೇನೆ. ಯಾವುದೇ ಅಕ್ರಮ ಆಸ್ತಿಗಳನ್ನು ಮಾಡಿಲ್ಲ. ನಾನು ಓಡಾಡುವ ಐಷಾರಾಮಿ ಕಾರು ನನ್ನದಲ್ಲ ಎಂದು ಬಿಬಿಎಂಪಿ ರಸ್ತೆ ಮತ್ತು ಮೂಲಭೂತ ಸೌಕರ್ಯ ವಿಭಾಗದಲ್ಲಿ ದ್ವಿತೀಯ ದರ್ಜೆ ಗುಮಾಸ್ತನಾಗಿ ಕೆಲಸ ಮಾಡಿಕೊಂಡಿದ್ದ ಮಾಯಣ್ಣ ಹೇಳಿಕೆ ನೀಡಿದ್ದಾರೆ.

    ನಿನ್ನೆ ಬೆಳಗ್ಗೆ ಎಸಿಬಿ ಅಧಿಕಾರಿಗಳು ಮಾಯಣ್ಣ ಹಾಗೂ ಅವರ ಸಂಬಂಧಿಕರ ಮನೆಯ ಮೇಲೆ ದಾಳಿ ನಡೆಸಿದ ಬಳಿಕ ಕೋಟಿಗಟ್ಟಲೆ ಅಸ್ತಿ ಹೊಂದಿರುವುದು ಬಯಲಾಗಿತ್ತು. ಇದನ್ನೂ ಓದಿ: ಎಸಿಬಿ ಅಧಿಕಾರಿಗಳ ಭರ್ಜರಿ ರಣಬೇಟೆ – 503 ಅಧಿಕಾರಿಗಳು 68 ಕಡೆ ದಾಳಿ..!

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನಗೆ ಈಗ 50 ಸಾವಿರ ರೂ. ಸಂಬಳ ಬರುತ್ತಿದೆ. ಇದೇ ಹಣದಲ್ಲಿ ನಾನು ಜೀವನವನ್ನು ಸಾಗಿಸುತ್ತಿದ್ದೇನೆ. ಹಾಗೆಯೇ ನಾನೊಬ್ಬ ಪ್ರಥಮ ದರ್ಜೆ ಸಹಾಯಕ. ನನಗೆ ಸ್ವಂತದ ಸಹಿ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ನನಗೆ ಬರುವ ಸಂಬಳ ಸಾಕಾಗ್ತಿಲ್ಲ: ಮಾಯಣ್ಣ

    ನಾನು ಫೈನಲ್ ಅಥಾರಿಟಿಯೂ ಅಲ್ಲ. ಯಾವುದೇ ಕಡತದ ಇಲ್ಲವೇ ಕಚೇರಿಯ ನಿರ್ಧಾರವನ್ನೂ ತೆಗೆದುಕೊಳ್ಳಲು ನನ್ನಿಂದ ಸಾಧ್ಯವಿಲ್ಲ. ನಾನು ಯಾವುದರ ನಿರ್ಣಾಯಕನೂ ಅಲ್ಲ. ಕೇವಲ ಫಾರ್ವರ್ಡಿಂಗ್ ಆಫಿಸರ್ ಆಗಿದ್ದೇನೆ ಅಷ್ಟೇ ಎಂದು ಹೇಳಿಕೆ ನೀಡಿದರು.

  • ನನಗೆ ಬರುವ ಸಂಬಳ ಸಾಕಾಗ್ತಿಲ್ಲ: ಮಾಯಣ್ಣ

    ನನಗೆ ಬರುವ ಸಂಬಳ ಸಾಕಾಗ್ತಿಲ್ಲ: ಮಾಯಣ್ಣ

    ಬೆಂಗಳೂರು: ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಬರುವ ಸಂಬಳ ಜೀವನಕ್ಕೆ ಸಾಲುತ್ತಿಲ್ಲ ಎಂದು ಬಿಬಿಎಂಪಿ ಕ್ಲರ್ಕ್‌ ಹೇಳಿದ್ದಾರೆ.

    ನಿವಾಸದ ಮೇಲೆ ಎಸಿಬಿ ದಾಳಿ ಕುರಿತು ಪ್ರತಿಕ್ರಿಯಿಸಿರುವ ಅವರು, ಬರುವ ಸಂಬಳ ನನಗೆ ಸಾಕಾಗುತ್ತಿಲ್ಲ. ಸಾಕಷ್ಟು ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದೇನೆ. ಕಸಾಪ ಚುನಾವಣೆಗೆ ಸ್ಪರ್ಧಿಸಿರುವುದಕ್ಕೆ ಹೀಗಾಗಿದೆ. ಎಸಿಬಿ ದಾಳಿ ಕಾನೂನಾತ್ಮಕವಾಗಿದೆ. ಕಾಲವೇ ಇದಕ್ಕೆಲ್ಲ ಉತ್ತರ ಹೇಳುತ್ತದೆ. ನನ್ನನ್ನು ಯಾರೋ ಟಾರ್ಗೆಟ್ ಮಾಡಿದ್ದಾರೆ ಎಂದು ಹೇಳುವುದಿಲ್ಲ. ಕಾಲಚಕ್ರ ತಿರುಗಿ ಬರುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಪ್ರಾಮಾಣಿಕ ಅಧಿಕಾರಿ, ತೆರಿಗೆ ಕಟ್ಟುತ್ತಿದ್ದೇನೆ: ಎಲ್‌.ಸಿ.ನಾಗರಾಜ್‌

    ನಾನು ಬೇನಾಮಿ ಆಸ್ತಿ ಮಾಡಿಲ್ಲ. 59,000 ರೂ. ನಗದು, 556 ಗ್ರಾಂ ಚಿನ್ನ ಇದೆ. ಒಂದೂವರೆ ಕೆ.ಜಿ ಬೆಳ್ಳಿ ಇದೆ. ಚುನಾವಣೆಯಲ್ಲಿ ನನಗೆ ಬೆಂಬಲ ನೀಡಿದವರನ್ನೆಲ್ಲ ಟಾರ್ಗೆಟ್ ಮಾಡಿದ್ದಾರೆ. ನಾನು ಸರ್ಕಾರಕ್ಕೆ ಎಲ್ಲ ಆಸ್ತಿಯ ವರದಿಯನ್ನು ನೀಡಿದ್ದೀನಿ. ನನಗೆ ನೋಟಿಸ್‌ ಕೊಟ್ಟಿದ್ದಾರೆ ಎಂದಿದ್ದಾರೆ.

    ಎಸಿಬಿ ಅಧಿಕಾರಿಗಳು ಕಾನೂನು ರೀತಿಯಲ್ಲಿ ಕೆಲಸ ಮಾಡಿದ್ದಾರೆ. ನಾನು ಕಾನೂನು ಬದ್ಧವಾಗಿದ್ದೇನೆ. ಬಿಬಿಎಂಪಿಯಲ್ಲಿ ತಂದೆ-ತಾಯಿ ಪೌರಕಾರ್ಮಿಕರಾಗಿ ದುಡಿದವರು. ಬಿಬಿಎಂಪಿ ಅಧಿಕಾರಿಗಳಿಗೆ ಉತ್ತರಾದಾಯಿತ್ವ ಇದ್ದೀನಿ. ನಾನು ಕಾನೂನು ಬದ್ಧವಾಗಿ ಬದುಕುತ್ತಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಮಹಾನಗರ ಪಾಲಿಕೆ ನನ್ನ ತಾಯಿ ಇದ್ದಂತೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಪೈಪ್, ಬಕೆಟ್‍ನಲ್ಲಿ ಫುಲ್ ಹಣ – ಕಲಬುರಗಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

    ಸಾಹಿತ್ಯ ಪರಿಷತ್‌ ಚುನಾವಣೆಗೆ ಸ್ಪರ್ಧಿಸಿದ್ದಕ್ಕೆ ಇದೆಲ್ಲಾ ಆಗಿದೆ. ಉಮಾದೇವಿ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದಕ್ಕೆ ಅವರನ್ನೂ ಗುರಿ ಮಾಡಿದ್ದಾರೆ. ಎಲ್ಲಾ ದಾಖಲೆಯ ಜೆರಾಕ್ಸ್ ಪ್ರತಿಯನ್ನು ಅಧಿಕಾರಿಗಳು ಕೊಂಡೊಯ್ದಿದ್ದಾರೆ. ಅವರು ಕೇಳಿದ 24 ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಮಾಯಣ್ಣ ಅವರಿಗೆ ಬೆಂಗಳೂರಲ್ಲಿ 4 ವಾಸದ ಮನೆ, ವಿವಿಧ ಕಡೆ 6 ನಿವೇಶನ, 2 ಎಕರೆ ಕೃಷಿ ಜಮೀನು, 2 ಬೈಕ್ ಮತ್ತು 1 ಕಾರ್, 59 ಸಾವಿರ ನಗದು, 10 ಲಕ್ಷ ರೂ. ಎಫ್‍ಡಿ, ಉಳಿತಾಯ ಖಾತೆಯಲ್ಲಿ 1.50 ಲಕ್ಷ ರೂ., 600 ಗ್ರಾಂ ಚಿನ್ನಾಭರಣ, 3 ಸ್ಥಳಗಳಲ್ಲಿ ಬೇನಾಮಿ ಆಸ್ತಿ, 12 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳಿವೆ. ಅವುಗಳನ್ನು ವಶಕ್ಕೆ ಪಡೆದು ಎಸಿಬಿ ಪರಿಶೀಲನೆ ನಡೆಸಿದ್ದಾರೆ.

  • ಬಿಬಿಎಂಪಿ ಎಫ್‍ಡಿಎ ನೌಕರನ ಬಳಿ ಕೋಟಿ ಕೋಟಿ ಆಸ್ತಿ – ಸರ್ಕಾರಕ್ಕೆ ಬರಬೇಕಿದೆ 125 ಕೋಟಿ

    ಬಿಬಿಎಂಪಿ ಎಫ್‍ಡಿಎ ನೌಕರನ ಬಳಿ ಕೋಟಿ ಕೋಟಿ ಆಸ್ತಿ – ಸರ್ಕಾರಕ್ಕೆ ಬರಬೇಕಿದೆ 125 ಕೋಟಿ

    – ಮತದಾರರಿಗೆ ಬೆಳ್ಳಿ ನಾಣ್ಯ ಗಿಫ್ಟ್

    ಬೆಂಗಳೂರು: ಬಿಬಿಎಂಪಿ ನೌಕರ ಮಾಯಣ್ಣ ಅವರ ಮನೆ ಮೇಲೆ ಇಂದು ಎಸಿಬಿ ದಾಳಿ ನಡೆಸಿದೆ. ದಾಳಿಯಲ್ಲಿ ಭಾರೀ ಪ್ರಮಾಣದ ದಾಖಲೆಗಳು ದೊರೆತಿದ್ದು, ಇವರ ಬಗ್ಗೆ ಗಂಭೀರ ಆರೋಪಗಳು ಕೇಳಿಬರುತ್ತಿದೆ.

    ಮಾಯಣ್ಣ ಅವರು ರಸ್ತೆ ಹಾಗೂ ಮೂಲಭೂತ ಸೌಕರ್ಯ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬಿಬಿಎಂಪಿ ಎಂಪ್ಲೈಯ್ ಅಸೋಸಿಯೇಷನ್ ಮೂಲಕ ಹಾಗೂ ಸಾಹಿತ್ಯ ಪರಿಷತ್‍ನಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದರು. ಅವರ ಹೆಸರು ಬಿಬಿಎಂಪಿ ನೌಕರಿಗಿಂತ ಹೆಚ್ಚಾಗಿ ಬಿಬಿಎಂಪಿ ಅಕ್ರಮಗಳಲ್ಲೇ ಕೇಳಿ ಬರುತ್ತಿತ್ತು.

    ಒಂದೇ ಪೋಸ್ಟ್: ಬಿಬಿಎಂಪಿ ಇತಿಹಾಸದಲ್ಲೇ 11 ವರ್ಷಗಳ ಕಾಲ ಒಂದೇ ಪೋಸ್ಟ್‌ ನಲ್ಲಿ  ದ್ದ ಏಕೈಕ ವ್ಯಕ್ತಿ ಮಾಯಣ್ಣ. 2009 ರಿಂದ 11 ವರ್ಷಗಳ ಕಾಲ ಒಂದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸಾಕಷ್ಟು ಬಾರಿ ಬಿಬಿಎಂಪಿಯ ಬೇರೆ ವಿಭಾಗಗಳಿಗೆ ವರ್ಗಾವಣೆಗಳಾದ್ದರೂ, ಮೇಲಾಧಿಕಾರಿಗಳಿಂದ ಒತ್ತಡ ತಂದು ಮತ್ತದೇ ಪೋಸ್ಟ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ಐದು ವರ್ಷದ ಹಿಂದೆ ಸಸ್ಪೆಂಡ್ ಆಗಿದ್ದರು. ಸಸ್ಪೆಂಡ್ ರಿವೋಕ್ ಮಾಡಿಸಿಕೊಂಡು ಮತ್ತೆ ಇದೇ ಹುದ್ದೆಯಲ್ಲೇ ಮುಂದುವರೆದಿದ್ದರು. ಇದನ್ನೂ ಓದಿ: ಅಂಬರೀಶ್ ಹೆಸರಲ್ಲಿ ಏನೂ ಮಾಡಿಲ್ಲ ಅನ್ನೋ ಬೇಸರ ಅಭಿಮಾನಿಗಳಲ್ಲಿದೆ: ಸುಮಲತಾ

    ಕೆಲಸಕ್ಕಿಂತ ಬೇರೆ ಬೇರೆ ಡೀಲ್‍ಗಳಲ್ಲೇ ಹೆಚ್ಚು ಬ್ಯುಸಿಯಾಗಿರುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. 2012-13 ರಲ್ಲಿ ಕಾನೂನು ಬಾಹಿರವಾಗಿ ಗುತ್ತಿಗೆದಾರರಿಗೆ 135 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದರು. ಜೊತೆಗೆ 26 ಕೋಟಿ ರೂಪಾಯಿ ಹೆಚ್ಚಿನ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಿದ್ದ ಎನ್ನುವುದರ ಬಗ್ಗೆಯೂ ಆರೋಪ ಇವರ ಮೇಲಿದೆ.

    ಬಿಬಿಎಂಪಿ ಲೆಕ್ಕಪರಿಶೋಧಕ ವರದಿಯಲ್ಲಿ ಮಾಯಣ್ಣ ಅಕ್ರಮ ಬಯಲಾದ ಹಿನ್ನೆಲೆಯಲ್ಲಿ ಮಾಯಣ್ಣ ಅವರ ಸ್ವಂತ ಅಕೌಂಟ್‍ನಿಂದ ಹಣ ವಸೂಲಿ ಮಾಡುವಂತೆ ನಗರಾಭಿವೃದ್ಧಿ ಇಲಾಖೆ ಆದೇಶಿಸಿತ್ತು. ಎಸಿಬಿ ಬೇಟೆಗೆ ಬಿದ್ದ ಮಾಯಣ್ಣ ಅವರು ಒಟ್ಟಾರೆಯಾಗಿ 135 ಕೋಟಿ ರೂ.ಗಳನ್ನು ಸರ್ಕಾರಕ್ಕೆ ನೀಡಬೇಕಿದೆ.

    ಮಾಯಣ್ಣ ವಿರುದ್ಧ ಸಾಮಾಜಿಕ ಕಾರ್ಯಕರ್ತ ರಾಬರ್ಟ್ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಸೂಚನೆ ಅನ್ವಯ ಮಾಯಣ್ಣರಿಂದ 135 ಕೋಟಿ ವಸೂಲಿ ಮಾಡಬೇಕೆಂದು ನಗರಾಭಿವೃದ್ಧಿ ಇಲಾಖೆಗೆ ಆದೇಶಿಸಲಾಗಿದೆ. ಆದರೆ, ಸರ್ಕಾರದ ಆದೇಶಕ್ಕೆ ಕ್ಯಾರೆ ಅನ್ನದೆ ಮಾಯಣ್ಣ ತಮ್ಮ ಹುದ್ದೆಯಲ್ಲಿ ಮುಂದುವರೆದಿದ್ದರು. ಇದನ್ನೂ ಓದಿ: ಮದುವೆ ವಾರ್ಷಿಕೋತ್ಸವಕ್ಕೆ ಪತ್ನಿಗೆ ವಿಶೇಷವಾಗಿ ವಿಶ್ ಮಾಡಿದ ಧ್ರುವ

    ಬೆಳ್ಳಿ ನಾಣ್ಯ ಗಿಫ್ಟ್: ಮೊನ್ನೆ ನಡೆದ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಹುದ್ದೆಗೆ ಮಾಯಣ್ಣ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಮತ ನೀಡಲು ಸದಸ್ಯರಿಗೆ ಬೆಳ್ಳಿ ಕಾಯಿನ್ ಜೊತೆಗೆ ಸಾಕಷ್ಟು ಹಣಗಳ ಆಮಿಷ ಒಡ್ಡಿದ್ದರು. ಆದರೂ ಚುನಾವಣೆಯಲ್ಲಿ ನಾಲ್ಕನೇ ಸ್ಥಾನಕ್ಕೆ ಪಡೆದು ಸೋಲನ್ನು ಒಪ್ಪಿಕೊಂಡಿದ್ದರು.

    ಈ ಹಿಂದೆ ಬೆಂಗಳೂರು ನಗರ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ಮಾಯಣ್ಣ ಕರ್ತವ್ಯ ನಿರ್ವಹಿಸುತ್ತಿದ್ದರು. ಬಿಬಿಎಂಪಿಯಲ್ಲಿ ಕನ್ನಡ ಸಾಹಿತ್ಯದ ಕಾರ್ಯಕ್ರಮ ಮಾಡಿ ಸಾಕಷ್ಟು ಹಣವನ್ನು ಗುಳುಂ ಮಾಡಿದ್ದಾರೆ ಎಂಬ ಆರೋಪಗಳೂ ಈಗ ಕೇಳಿ ಬರುತ್ತಿವೆ.

    ಈ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ್ದ ಎಸಿಬಿ ಇಂದು ದಾಳಿ ನಡೆಸಿದ್ದು, ಮಾಯಣ್ಣನ ಅಕ್ರಮ ಆಸ್ತಿಯ ಬಗ್ಗೆ ಹಲವು ದಾಖಲೆಗಳು ಲಭ್ಯವಾಗುತ್ತಿದೆ. ಮಾಯಣ್ಣ ಪತ್ನಿ ಹೆಸರಲ್ಲಿ ಬೆಲೆಬಾಳೋ ಬೆನ್ಜ್ ಹಾಗೂ ಇನ್ನೋವಾ ಕಾರುಗಳಿದೆ. ಮಾಯಣ್ಣ ಕುಣಿಗಲ್, ಮಾಗಡಿ, ಬೆಂಗಳೂರು ಸೇರಿದಂತೆ ಹತ್ತಾರು ಕಡೆ ಇಪ್ಪತ್ತಕ್ಕೂ ಹೆಚ್ಚು ಆಸ್ತಿ-ಪಾಸ್ತಿ ಹೊಂದಿದ್ದಾರೆ. ಅಷ್ಟೇ ಅಲ್ಲದೇ ತನ್ನ ಹೆಂಡತಿ- ಮಕ್ಕಳ ಹೆಸರಲ್ಲೇ ಕೋಟಿ ಕೋಟಿ ರೂ. ಬೆಲೆ ಬಾಳುವ ಆಸ್ತಿ ಮಾಡಿರುವುದು ಪತ್ತೆಯಾಗಿದೆ. ಈ ಎಲ್ಲಾ ದಾಖಲೆಗಳನ್ನು ಚಾಮರಾಜಪೇಟೆಯಲ್ಲಿರುವ ಕಚೇರಿಯಲ್ಲಿ ಶೇಖರಿಸಿ ಇಟ್ಟಿದ್ದರು.

    ಎಸಿಬಿ ದಾಳಿಯಾದ ಮೇಲಾದರೂ 135 ಕೋಟಿ ರೂ. ನಗರಾಭಿವೃದ್ಧಿ ಇಲಾಖೆ ವಸೂಲಿ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.