ಬೆಂಗಳೂರು: ನೀವು ಮ್ಯಾಟ್ರಿಮೋನಿ ತಾಣದಲ್ಲಿ ಮದುವೆಯಾಗಲು ಸೂಕ್ತ ವರನನ್ನು ಹುಡುಕುತ್ತಿದ್ದೀರಾ. ಹಾಗಾದ್ರೆ ನೀವು ಎಚ್ಚರವಾಗಿರುವುದು ಒಳಿತು. ಅಪ್ಪಿ ತಪ್ಪಿ ಸರಿಯಾಗಿ ಯೋಚಿಸದೇ ನಿರ್ಧಾರ ತೆಗೆದುಕೊಂಡರೆ ನೀವು ಮೋಸ ಹೋಗುವುದು ಖಂಡಿತ.
ಹೌದು. ಒಂದಲ್ಲ ಎರಡಲ್ಲ, ಬರೋಬ್ಬರಿ 75 ಮಂದಿಗೆ ವಂಚನೆ ಎಸಗಿದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಹಾಸನ ಮೂಲದ ಸಾದತ್ ಖಾನ್ (28) ಬಂಧಿತ ಆರೋಪಿ. ಲೈಂಗಿಕವಾಗಿ ಬಳಸಿಕೊಂಡು ಅವರಿಂದಲೇ ಹಣ ಪಡೆದು ಪರಾರಿಯಾಗುತ್ತಿದ್ದ ಖದೀಮ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ಮ್ಯಾಟ್ರಿಮೋನಿ ತಾಣದಲ್ಲಿನ ಪ್ರೊಫೈಲ್‍ಗಳನ್ನು ಟಾರ್ಗೆಟ್ ಮಾಡುತ್ತಿದ್ದ, ಈತ ನಾನು ಕೇಂದ್ರ ಸರ್ಕಾರದ ಉದ್ಯೋಗಿ/ ಕಂಪೆನಿಯ ಸಿಇಒ ಇತ್ಯಾದಿ ಹೆಸರಿನಲ್ಲಿ ಪ್ರೊಫೈಲ್ ಕ್ರಿಯೆಟ್ ಮಾಡುತ್ತಿದ್ದ. ಈ ವೆಬ್‍ಸೈಟ್ ಗಳಲ್ಲಿ ಯುವತಿಯರನ್ನು/ ವಿಚ್ಚೇದನವಾಗಿರುವ ಮಹಿಳೆಯರನ್ನು ಟಾರ್ಗೆಟ್ ಮಾಡಿ ಮದುವೆಯಾಗುವುದಾಗಿ ನಂಬಿಸಿ, ನಂತರ ಲೈಂಗಿಕವಾಗಿ ಬಳಸಿಕೊಂಡು ಅವರಿಂದಲೇ ಹಣ ಪಡೆದು ಸಾದತ್ ಖಾನ್ ಪರಾರಿಯಾಗುತ್ತಿದ್ದ.

ಸುಮಾರು 40 ಕ್ಕೂ ಹೆಚ್ಚು ಮಹಿಳೆಯರಿಗೆ ಹಣ ಪಡೆದು ಮೋಸ ಮಾಡಿದ್ದು, 75 ರಿಂದ 100 ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಬಳಸಿರುವ ಮಾಹಿತಿ ಈಗ ಸಿಕ್ಕಿದೆ. ಬೆಂಗಳೂರಿನ ಯಲಹಂಕ, ಜಯನಗರ, ಮೈಸೂರು ಕೆ. ಅರ್.ಪುರ. ಧಾರವಾಡ ಸೇರಿದಂತೆ 8 ಕಡೆ ಅಧಿಕೃತ ದೂರು ದಾಖಲಾಗಿದೆ. ಪಿಯೂ ಓದಿದ ಬಳಿಕ ಐಟಿಐ ಮಾಡಿದ್ದ ಈತ ಹೇರ್ ಸ್ಟೈಲ್, ಬಾಡಿ ಸ್ಟ್ರಕ್ಚರ್, ಭಾಷೆ, ಊರು ಎಲ್ಲ ಬದಲಾಯಸಿಕೊಂಡಿದ್ದ. ಅನ್ ಲೈನ್‍ಲ್ಲಿ ಫಾರೀನ್ ಇಂಗ್ಲಿಷ್ ಶೈಲಿಯನ್ನು ಕಲಿತು ಯುವತಿಯರನ್ನು ಪಟಾಯಿಸುತ್ತಿದ್ದ. ಓರ್ವ ಮಹಿಳೆ ಬಳಿಯಿಂದ 20 ಲಕ್ಷ ಹಣ ಸುಲಿಗೆ ಮಾಡಿದ್ದಾನೆ. ನಿವೃತ್ತ ಸರ್ಕಾರಿ ಅಧಿಕಾರಿಯ ಮಗಳಿಗೂ ಮೋಸ ವಂಚಕ ಮೋಸ ಮಾಡಿದ್ದಾನೆ. ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್, ಸರ್ಕಾರಿ ನೌಕರರು, ಟೆಕ್ಕಿಗಳು, ಕಾರ್ಪೊರೇಟ್ ಸಂಸ್ಥೆಯ ಮುಖ್ಯಸ್ಥರು ಸಹ ಇವನಿಂದ ಮೋಸ ಹೋಗಿದ್ದು, ಕೆಲ ಮಹಿಳೆಯರ ಸಂಪೂರ್ಣ ಆಸ್ತಿ ಕಿತ್ತುಕೊಂಡಿರುವ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಈತನಿಗೆ ಇದೆ 17 ಹೆಸರು: ಅತಿಯಾದ ಕುಡುಕನಾದ ಈತನಿಗೆ ಹಣ ಬೇಕಿತ್ತು. ಹೀಗಾಗಿ ಸುಲಭವಾಗಿ ಯುವತಿಯರಿಂದ ಹಣ ಸಿಗುತ್ತದೆ ಎನ್ನುವ ಕಾರಣಕ್ಕೆ ಮ್ಯಾಟ್ರಿಮೋನಿ ತಾಣಗಳಲ್ಲಿ 17 ವಿವಿಧ ಹೆಸರಿಟ್ಟುಕೊಂಡು ಆರೋಪಿ ವಂಚಿಸುತ್ತಿದ್ದ. ಒಂದು ತಾಣದಲ್ಲಿ ಸರ್ಕಾರಿ ನೌಕರಿ, ಟೆಕ್ಕಿ, ಬ್ಯಾಂಕ್ ಮ್ಯಾನೇಜರ್ ಇತ್ಯಾದಿ ಹೆಸರುಗಳನ್ನು ನಮೂದಿಸಿ ಪರಿಚಯ ಮಾಡಿಕೊಂಡು ಯುವತಿಯರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ.
ಮ್ಯಾಟ್ರಿಮೋನಿಯಲ್ಲಿ ಹೇಗೆ? ಸಾಧಾರಣವಾಗಿ ಮ್ಯಾಟ್ರಿಮೋನಿ ತಾಣಗಳಲ್ಲಿ ಸ್ವ ವಿವರದ ಮಾಹಿತಿಯ ಜೊತೆ ತನಗೆ ಬೇಕಾದ ವಧು/ ವರ ಹೇಗಿರಬೇಕು ಎನ್ನುವುದನ್ನು ತಿಳಿಸಲು ಆಯ್ಕೆಗಳಿರುತ್ತದೆ. ಈ ಆಯ್ಕೆಯಲ್ಲಿ ಯುವತಿಯರು ಯಾವ ರೀತಿಯ ವರ ಇರಬೇಕು ಎನ್ನುವುದನ್ನು ನಮೂದಿಸಿದ್ದಾರೋ, ಆ ಬೇಕಾಗಿದ್ದ ಮಾಹಿತಿಗೆ ಅನುಗುಣವಾಗಿ ಈತ ತನ್ನ ಪ್ರೊಫೈಲ್ ಕ್ರಿಯೆಟ್ ಮಾಡಿ ಟಾರ್ಗೆಟ್ ಆಗಿದ್ದ ಯುವತಿಯರನ್ನು ಖೆಡ್ಡಾಕ್ಕೆ ಬೀಳಿಸುತ್ತಿದ್ದ.

ಲೈಫ್‍ಸ್ಟೈಲ್ ನೋಡಿ ಮನಸೋತ್ರು: ಹುಡುಗಿಯರು ಮತ್ತು ಮಹಿಳೆಯರು ಶ್ರೀಮಂತ ವರನನ್ನೇ ಹುಡುಕುತ್ತಿದ್ದಾರೆ ಎನ್ನುವುದು ಸಾದತ್‍ಗೆ ತಿಳಿದಿತ್ತು. ಇದಕ್ಕಾಗಿ ಈತ ಪರಸ್ಪರ ಪರಿಚಯವಾಗುವ ವೇಳೆ ಐಷಾರಾಮಿ ಕಾರುಗಳನ್ನು ಬುಕ್ ಮಾಡಿ ಸ್ಥಳಕ್ಕೆ ಬಂದು ಭೇಟಿ ಮಾಡುತ್ತಿದ್ದ. ಬೆನ್ಜ್, ಆಡಿ ಕಾರ್‍ಗಳನ್ನು ಬಾಡಿಗೆ ಪಡೆದು ಹೆಣ್ಣುಮಕ್ಕಳ ಮುಂದೆ ಓಡಾಡುತ್ತಿದ್ದ. ಪ್ರೊಫೈಲ್ ನೋಡಿ ಈತನಿಗೆ ಬಿದ್ದಿದ್ದ ಹುಡುಗಿಯರು ಈತನ ಹೈಫೈ ಲೈಫ್‍ಸ್ಟೈಲ್ ನೋಡಿ ಮನಸೋಲುತ್ತಿದ್ದರು.
ಹಣ ಪಡೆದು ವಂಚನೆ: ಪರಿಚಯವಾದ ಹುಡುಗಿ ಬಳಿ ನನಗೆ ಸ್ವಲ್ಪ ಸಹಾಯ ಮಾಡಬೇಕು ಎಂದು ಎಂದು ಹೇಳಿ ಅವರಿಂದ ಹಣವನ್ನು ಪಡೆಯುತ್ತಿದ್ದ. ಪಡೆದ ಹಣದಲ್ಲಿ ಅರ್ಧ ಹಣವನ್ನು ತನ್ನ ಶೋಕಿ ಲೈಫ್ ಗೆ ಬಳಸುತ್ತಿದ್ದರೆ ಅರ್ಧ ಹಣವನ್ನು ಬೇರೆ ಯುವತಿಗೆ ನೀಡುತ್ತಿದ್ದ. ಈತನ ಈ ವಿಶೇಷ ಉಪಕಾರವನ್ನು ನೋಡಿ ಹುಡುಗಿಯರು ಸಾದತ್ ಮೇಲೆ ಮತ್ತಷ್ಟು ನಂಬಿಕೆ ಇಡುತ್ತಿದ್ದರು. ಈ ರೀತಿಯ ಸಹಾಯ ಮಾಡಿದ ಕೆಲ ದಿನಗಳ ಬಳಿಕ ಅದೇ ಹುಡುಗಿಯರಿಂದ ಹಣವನ್ನು ಪಡೆಯುತ್ತಿದ್ದ.
ಬ್ಲ್ಯಾಕ್‌ಮೇಲ್ ಆಟ: ಯುವತಿಯರಿಗೆ ಈತನ ಮೇಲೆ ನಂಬಿಕೆ ಜಾಸ್ತಿ ಆಗುತ್ತಿದ್ದಂತೆ ಈತ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಲೈಂಗಿಕವಾಗಿ ಬಳಸಿದ ಬಳಿಕ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ತನ್ನ ನಿಜರೂಪವನ್ನು ತೋರಿಸುತ್ತಿದ್ದ.
ಬಂಧನವಾಗಿದ್ದ: ಈ ಹಿಂದೆ ಈ ಪ್ರಕರಣದಲ್ಲೇ ಪೊಲೀಸರು ಬಂಧಿಸಿದ್ದರು. ಆದರೆ ಜೈಲಿನಿಂದ ಜಾಮೀನು ಪಡೆದು ಬಿಡುಗಡೆಯಾಗಿ ಮತ್ತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸುತ್ತಿದ್ದ. ಸಾಫ್ಟ್ ವೇರ್ ಎಂಜಿನಿಯರ್, ಪ್ರೊಫೆಸರ್ ಉದ್ಯೋಗದಲ್ಲಿರುವ ಯುವತಿಯರು ಮತ್ತು ವಿಚ್ಛೆದಿತ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಕೃತ್ಯವನ್ನು ಎಸಗುತ್ತಿದ್ದ. ಲೈಂಗಿಕವಾಗಿ ಶೋಷಣೆಗೆ ಒಳಗಾದ ಯುವತಿಯರು/ ಮಹಿಳೆಯರು ಪೈಕಿ ಬಹುತೇಕ ಮಂದಿ ದೂರು ನೀಡದೇ ಇದ್ದ ಕಾರಣ ತನ್ನ ವಿಕೃತ ಆಟವನ್ನು ಮುಂದುವರಿಸುತ್ತಿದ್ದ.
ಪೊಲೀಸರ ಮನವಿ: ಅರೋಪಿಯ ಎಲ್ಲಾ ಬ್ಯಾಂಕ್ ಖಾತೆಯನ್ನು ಸೀಜ್ ಮಾಡಲಾಗಿದೆ. ಈತ ಉಮೇಶ್ ರೆಡ್ಡಿಯ ರೀತಿಯ ಮತ್ತೊಬ್ಬ ವಿಕೃತ ಮನಸ್ಸಿನ ವ್ಯಕ್ತಿ. ಅನೇಕ ಮಹಿಳೆಯರು ಮರ್ಯಾದೆಗೆ ಅಂಜಿ ದೂರು ನೀಡಲು ಬರುತ್ತಿಲ್ಲ. ಈ ಹಿಂದೆ ಯಲಹಂಕದಲ್ಲಿ ಒಂದು ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ. ಧಾರವಾಡ ಠಾಣೆಯಲ್ಲಿ ಒಮ್ಮೆ ಅರೆಸ್ಟ್ ಆಗಿದ್ದ. ಜೈಲಿಗೆ ಹೋಗಿ ಬಂದ ಮೇಲೆ ಎಲ್ಲಾ ಬದಲಾಯಿಸಿಕೊಳ್ಳುತ್ತಾನೆ. ಪೊಲೀಸರು ಮಾರುವೇಷದಲ್ಲಿ ಹೋಗಿ ಲಾಡ್ಜ್ ನಲ್ಲಿ ಆರೋಪಿಯನ್ನು ಹಿಡಿದಿದ್ದಾರೆ. ಶ್ರೀಮಂತ ಮಹಿಳೆಯರ ಲೈಫ್ ಸ್ಟೈಲ್ ತಿಳಿದುಕೊಂಡಿದ್ದ ಈತ ಆನಂತರ, ಡೈವೋರ್ಸ್ ಆದ ಮಹಿಳೆಯರು, ಲೇಟ್ ಮದುವೆಯಾದವರು, ಗಂಡ ಹೆಂಡತಿಯರ ಸಬಂಧ ಸರಿಯಿಲ್ಲದವರನ್ನು ಟಾರ್ಗೆಟ್ ಮಾಡಿ ಕೃತ್ಯ ಎಸಗುತ್ತಿದ್ದ. ಈತನಿಂದ ನೊಂದವರು ಯಾರಾದರೂ ಇದ್ದರೆ ಬಂದು ದೂರು ಕೊಡಬಹುದು ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ. ಹರ್ಷಾ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

