ಅಯೋಗ್ಯ ಚಿತ್ರದ ತರುವಾಯ ಒಂದು ಸುದೀರ್ಘಾವಧಿಯ ನಂತರ ನೀನಾಸಂ ಸತೀಶ್ (Satish Ninasam) ಮತ್ತು ರಚಿತಾ ರಾಮ್ (Rachita Ram) ಜೋಡಿಯಾಗಿ ನಟಿಸುತ್ತಿರುವ ಚಿತ್ರ `ಮ್ಯಾಟ್ನಿ’ (Matney). ಯಶಸ್ವಿ ಜೋಡಿಯಾಗಿ ಗುರುತಿಸಿಕೊಂಡಿರುವ ಸತೀಶ್ ಮತ್ತು ರಚಿತಾ ಮತ್ತೊಂದು ತೆರನಾದ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರುವ ಮ್ಯಾಟ್ನಿಯ ಬಿಡುಗಡೆ ದಿನಾಂಕದ ಬಗ್ಗೆ ಒಂದಷ್ಟು ವಿಚಾರಗಳು ಹರಿದಾಡುತ್ತಿವೆ. ಗಾಂಧಿ ನಗರದಲ್ಲಿ ಸದ್ಯಕ್ಕೆ ಗುಲ್ಲೆದ್ದಿರುವ ವಿಚಾರಗಳನ್ನಾಧರಿಸಿ ಹೇಳೋದಾದರೆ, ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಮ್ಯಾಟ್ನಿ ತೆರೆಗಾಣುವ ಸಾಧ್ಯತೆಗಳಿವೆ.

ಮನೋಹರ್ ಕಾಂಪಲ್ಲಿ ನಿರ್ದೇಶನದಲ್ಲಿ, f3 ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಮೂಡಿ ಬಂದಿರುವ ಮ್ಯಾಟ್ನಿ ಆರಂಭದಿಂದ ಇಲ್ಲಿಯವರೆಗೂ ಪ್ರೇಕ್ಷಕರ ಆಸಕ್ತಿ ಸೆಳೆಯುತ್ತಾ ಬಂದಿದೆ. ಹಂತ ಹಂತವಾಗಿ ಒಂದಿಷ್ಟು ವಿಚಾರಗಳನ್ನು ತಲುಪಿಸುತ್ತಾ ಬಂದಿರುವ ಈ ಚಿತ್ರವೀಗ ಬಿಡುಗಡೆಯ ಅಂಚಿಗೆ ಬಂದು ನಿಂತಿದೆ. ಸದ್ದಿಲ್ಲದಂತೆ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಗಿಸಿರುವ ಮ್ಯಾಟ್ನಿಯ ಪ್ರಚಾರ ಕಾರ್ಯವೂ ಚಾಲೂ ಆಗುವ ಲಕ್ಷಣಗಳು ಕಾಣಿಸುತ್ತಿವೆ.
ಇತ್ತೀಚಿನ ವರ್ಷಗಳಲ್ಲಿ ವಿಶೇಷವಾದ, ಒಂದಕ್ಕೊಂದು ಭಿನ್ನವಾದ ಪಾತ್ರಗಳನ್ನೇ ನೀನಾಸಂ ಸತೀಶ್ ಒಪ್ಪಿಕೊಳ್ಳುತ್ತಾ ಬರುತ್ತಿದ್ದಾರೆ. ಅದರ ಮುಂದುವರೆಕೆಯ ಭಾಗವೆಂಬಂತೆ ಕಾಣಿಸುತ್ತಿರುವ ಮ್ಯಾಟ್ನಿ ಮನಮೋಹಕ ಕಥೆಯ ಹೂರಣದೊಂದಿಗೆ ರೂಪಿಸಲ್ಪಟ್ಟಿದೆ. ಒಂದು ಯಶಸ್ವಿ ಜೋಡಿ ಮತ್ತೊಂದು ಸಿನಿಮಾದಲ್ಲಿಯೂ ಜೊತೆಯಾದಾಗ ಸಹಜವಾಗಿಯೇ ಅದರತ್ತ ಒಂದಷ್ಟು ಕುತೂಹಲ ಮೂಡಿರತ್ತೆ. ಈ ಸಿನಿಮಾದ ಬಗ್ಗೆಯೂ ಅಂಥದ್ದೊಂದು ನಿರೀಕ್ಷೆ ಮೂಡಿದೆ.










