Tag: Maternity

  • ಆಸ್ಪತ್ರೆ ಸಿಗದೇ 7 ಕಿ.ಮೀ ನಡಿಗೆ – ಕೊನೆಗೆ ಡೆಂಟಲ್ ಆಸ್ಪತ್ರೆಯಲ್ಲಿ ಹೆರಿಗೆ

    ಆಸ್ಪತ್ರೆ ಸಿಗದೇ 7 ಕಿ.ಮೀ ನಡಿಗೆ – ಕೊನೆಗೆ ಡೆಂಟಲ್ ಆಸ್ಪತ್ರೆಯಲ್ಲಿ ಹೆರಿಗೆ

    – ಡೆಂಟಲ್ ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಿದ ದಂತವೈದ್ಯೆ

    ಬೆಂಗಳೂರು: ಕೊರೊನಾ ಲಾಕ್‍ಡೌನ್ ವೇಳೆ ಏಳು ಕಿ.ಮೀ ನಡೆದುಕೊಂಡು ಬಂದು ಕೊನೆಗೆ ಎಲ್ಲೂ ಆಸ್ಪತ್ರೆ ಸಿಗದೆ ಡೆಂಟಲ್ ಆಸ್ಪತ್ರೆಯಲ್ಲೇ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಬೆಂಗಳೂರಿನ ದೊಡ್ಡ ಬೊಮ್ಮಸಂದ್ರದಲ್ಲಿ ನಡೆದಿದೆ.

    ಕೊರೊನಾ ಲಾಕ್‍ಡೌನ್‍ನಿಂದ ದೇಶವೇ ಸ್ತಬ್ಧವಾಗಿದೆ. ಈ ವೇಳೆ ಲೊಟ್ಟೆಗೊಲ್ಲಹಳ್ಳಿಯಲ್ಲಿ ವಾಸವಿದ್ದ ಅಸ್ಸಾಂ ಮೂಲದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಆಸ್ಪತ್ರೆಗೆ ಹೋಗಲು ಯಾವುದೇ ವಾಹನ ಕೂಡ ಸಿಕ್ಕಿಲ್ಲ. ಆಕೆ ಆಸ್ಪತ್ರೆ ಸಿಗುತ್ತದೆ ಎಂಬ ನಂಬಿಕೆ ಮೇಲೆ ಲೊಟ್ಟೆಗೊಲ್ಲಹಳ್ಳಿಯಿಂದ ದೊಡ್ಡ ಬೊಮ್ಮಸಂದ್ರದವರೆಗೂ ಸುಮಾರು ಏಳು ಕಿ.ಲೋ ಮೀಟರ್ ಹೆರಿಗೆ ನೋವಿನ ನಡುವೆಯೂ ನಡೆದುಕೊಂಡು ಬಂದಿದ್ದಾರೆ.

    ಹೀಗೆ ತನ್ನ ಗಂಡನ ಜೊತೆ ನಡೆದುಕೊಂಡು ಬಂದ ಮಹಿಳೆಗೆ ಲಾಕ್‍ಡೌನ್ ಇರುವುದರಿಂದ ಯಾವುದೇ ಆಸ್ಪತ್ರೆ ಸಿಕ್ಕಿಲ್ಲ. ಜೊತೆಗೆ ಮುಂದೆ ಹೋಗಲು ಯಾವುದೇ ವಾಹನ ಕೂಡ ಸಿಕ್ಕಿಲ್ಲ. ಈ ನಡುವೆ ಆಕೆಗೆ ಹೆರಿಗೆ ನೋವು ಜಾಸ್ತಿಯಾಗಿದೆ. ಹೀಗಾಗಿ ಆಕೆಯ ಗಂಡ ಅಲ್ಲಿಯೇ ಇದ್ದ ದೊಡ್ಡ ಬೊಮ್ಮಸಂದ್ರದ ಡೆಂಟಲ್ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ದಂತವೈದ್ಯರು ಡೆಂಟಲ್ ಆಸ್ಪತ್ರೆಯ ಪಕ್ಕದಲ್ಲೇ ಇದ್ದ ಖಾಲಿ ಜಾಗದಲ್ಲಿ ಹೆರಿಗೆ ಮಾಡಿಸಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಹೆರಿಗೆ ಮಾಡಿಸಿದ ದಂತವೈದ್ಯೆ ಡಾ. ರಮ್ಯಾ, ಆಕೆ ಹೆರಿಗೆ ನೋವಿನ ನಡುವೆಯೂ ಆಸ್ಪತ್ರೆ ಸಿಗುತ್ತೆ ಎಂಬ ನಂಬಿಕೆ ಮೇಲೆ ಸುಮಾರು 7 ಕಿ.ಮೀ ನಡೆದುಕೊಂಡು ಬಂದಿದ್ದಾರೆ. ಆದರೆ ಅವರಿಗೆ ಯಾವುದೇ ಆಸ್ಪತ್ರೆ ಸಿಕ್ಕಿರಲಿಲ್ಲ. ನಂತರ ನಮ್ಮ ಆಸ್ಪತ್ರೆಗೆ ಬಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಹೆರಿಗೆಯ ನಂತರ ಬ್ಲೀಡಿಂಗ್ ಜಾಸ್ತಿ ಇತ್ತು ಜೊತೆಗೆ ಮಗು ಯಾವುದೇ ಪ್ರತಿಕ್ರಿಯೆ ನೀಡಿಲಿಲ್ಲ. ಆದರೆ ನಂತರ ಮಗು ಪ್ರತಿಕ್ರಿಯೆ ನೀಡಿತು. ಬಳಿಕ ಅವರನ್ನು ಅಂಬುಲೆನ್ಸ್ ನಲ್ಲಿ ಕೆಸಿ ಜನರಲ್ ಆಸ್ಪತ್ರೆಗೆ ಕಳುಹಿಸಿಕೊಟ್ಟೆವು ಎಂದು ಹೇಳಿದ್ದಾರೆ.

    ಲಾಕ್‍ಡೌನ್ ರೀತಿಯ ತುರ್ತುಪರಿಸ್ಥಿತಿಯ ಸಮಯದಲ್ಲಿ ದಂತವೈದ್ಯೆ ಯಾದರೂ ಹೆರಿಗೆ ಮಾಡಿಸಿದ ವೈದ್ಯೆ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗ ಮಗು ಮತ್ತು ವೈದ್ಯೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ತುಂಬ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮಗೆ ಧನ್ಯವಾದ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಸಮಯಕ್ಕೆ ಬಾರದ ಅಂಬುಲೆನ್ಸ್- ಗರ್ಭಿಣಿಯನ್ನ ಬೈಕಿನಲ್ಲಿ ಕರೆ ತರುವಾಗ ಹೆದ್ದಾರಿಯಲ್ಲಿಯೇ ಹೆರಿಗೆ

    ಸಮಯಕ್ಕೆ ಬಾರದ ಅಂಬುಲೆನ್ಸ್- ಗರ್ಭಿಣಿಯನ್ನ ಬೈಕಿನಲ್ಲಿ ಕರೆ ತರುವಾಗ ಹೆದ್ದಾರಿಯಲ್ಲಿಯೇ ಹೆರಿಗೆ

    ಬಾಗಲಕೋಟೆ: ಆಸ್ಪತ್ರೆಗೆ ತೆರೆಳಲು ಅಂಬುಲೆನ್ಸ್ ಲಭ್ಯವಾಗಿಲ್ಲ. ಅಲ್ಲದೆ ಯಾವುದೇ ಖಾಸಗಿ ವಾಹನ ಸಹ ಸಿಕ್ಕಿಲ್ಲ. ಹೀಗಾಗಿ ಪತಿ ಬೈಕ್ ಮೇಲೆ ಗರ್ಭಿಣಿ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಹೆದ್ದಾರಿಯಲ್ಲೇ ಗರ್ಭಿಣಿಗೆ ಹೆರಿಗೆಯಾಗಿದೆ.

    ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ಸೈದಾಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ಮಂಜುಳಾ ಪಿಡಾಯಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ಬಳಿಕ ಸ್ಥಳೀಯರು ಅಂಬುಲೆನ್ಸ್ ಗೆ ಕರೆ ಮಾಡಿದ್ದು, ನಂತರ ಅಂಬುಲೆನ್ಸ್ ಮೂಲಕ ಬಾಣಂತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

    ಮಹಲಿಂಗಪುರ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ತಾಯಿ, ಮಗು ಆರೋಗ್ಯವಾಗಿದ್ದಾರೆ. ಬಾಣಂತಿ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಸೈದಾಪುರ ಗ್ರಾಮದ ನಿವಾಸಿಯಾಗಿದ್ದು, ಹೆರಿಗೆ ಬಳಿಕ ಸ್ಥಳೀಯ ಖಾಸಗಿ ವೈದ್ಯರಿಂದ ತಪಾಸಣೆ ನಡೆಸಲಾಗಿದೆ. ನಂತರ ಅಂಬುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

  • ಬ್ರಿಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು

    ಬ್ರಿಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು

    ಬೀದರ್: ಹೆರಿಗೆಯ ನಂತರ ಬಾಣಂತಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡದೇ ನಿರ್ಲಕ್ಷಿಸಿದ್ದರಿಂದ ಮಹಿಳೆ ಪ್ರಾಣ ಕಳೆದುಕೊಂಡ ಘಟನೆ ಬೀದರ್ ನ ಬ್ರಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಬೀದರ್ ತಾಲೂಕಿನ ಚಟನ್ನಳ್ಳಿ ಗ್ರಾಮದ ನಾಗಮ್ಮ ಎರಡು ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತಡರಾತ್ರಿ ವೈದ್ಯರು ಸರಿಯಾದ ಚಿಕಿತ್ಸೆ ನೀಡದ ಕಾರಣ ನಾಗಮ್ಮ ಸಾವನ್ನಪ್ಪಿದ್ದಾಳೆ ಎಂದು ಸಂಬಂಧಿಕರು ಆರೋಪಿಸುತ್ತಿದ್ದಾರೆ.

    ಹೆರಿಗೆಯಾದಾಗಿನಿಂದ ನಾಗಮ್ಮ ಆರೋಗ್ಯವಾಗಿದ್ದು ನಿನ್ನೆ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ವೈದ್ಯರು ಸೂಕ್ತ ಚಿಕಿತ್ಸೆ ನೀಡದ ಕಾರಣ ಇಂದು ಸಾವನ್ನಪ್ಪಿದ್ದಾಳೆ ಎಂದು ಸಂಬಂಧಿಕರು ದೂರಿದ್ದಾರೆ.

    ಬ್ರಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸಿ ನಿರ್ಲಕ್ಷ್ಯ ಮಾಡಿದ ವೈದ್ಯರು ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು. ಅಲ್ಲಿಯವರೆಗೆ ಶವ ತೆಗೆದುಕೊಂಡು ಹೋಗುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.

  • ಅನಿವಾಸಿ ಭಾರತೀಯರಿಗೆ ಮತ್ತೊಂದು ಶಾಕ್ ಕೊಟ್ಟ ಡೊನಾಲ್ಡ್ ಟ್ರಂಪ್!

    ಅನಿವಾಸಿ ಭಾರತೀಯರಿಗೆ ಮತ್ತೊಂದು ಶಾಕ್ ಕೊಟ್ಟ ಡೊನಾಲ್ಡ್ ಟ್ರಂಪ್!

    ವಾಷಿಂಗ್ಟನ್: ವಲಸೆ ವಿಚಾರದಲ್ಲಿ ಕಠಿಣ ನಿಯಮವನ್ನು ರೂಪಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಅನಿವಾಸಿ ಭಾರತೀಯರಿಗೆ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದಾರೆ. ಅಮೆರಿಕದಲ್ಲೇ ಜನಿಸುವ ಮಕ್ಕಳಿಗೆ ಸ್ವಾಭಾವಿಕವಾಗಿ ಸಿಗುತ್ತಿದ್ದ ಪೌರತ್ವ ನೀತಿಯನ್ನು ರದ್ದುಗೊಳಿಸಲು ಟ್ರಂಪ್ ಚಿಂತನೆ ನಡೆಸಿದ್ದಾರೆ.

    ಪ್ರಸ್ತುತ ಅಮೆರಿಕ ಕಾನೂನು ಪ್ರಕಾರ, ಯಾವುದೇ ದೇಶದ ದಂಪತಿಗೆ ಅಮೆರಿಕದಲ್ಲೇ ಮಗು ಜನನವಾದರೆ ಆ ಮಗು ಸಹಜವಾಗಿಯೇ ಅಮೆರಿಕದ ಪೌರತ್ವಕ್ಕೆ ಅರ್ಹವಾಗಿರುತ್ತದೆ. ಅಷ್ಟೇ ಅಲ್ಲದೇ ಅಮೆರಿಕದ ಮಕ್ಕಳಿಗೆ ಸಿಗುವ ಎಲ್ಲ ಸೌಲಭ್ಯಗಳು ಆ ಮಗುವಿಗೆ ಸಿಗುತ್ತದೆ. ಈ ಕಾನೂನನ್ನೇ ರದ್ದು ಪಡಿಸಲು ಟ್ರಂಪ್ ಮುಂದಾಗಿದ್ದಾರೆ.

    ಸೋಮವಾರ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನಲ್ಲಿ ಟ್ರಂಪ್ ತನ್ನ ಮುಂದಿನ ಈ ನಿರ್ಧಾರ ಬಗ್ಗೆ ತಿಳಿಸಿದ್ದು ವಿಶ್ವದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇಡೀ ವಿಶ್ವದಲ್ಲಿಯೇ ಅಮೆರಿಕ ಮಾತ್ರ ಈ ರೀತಿ ಪೌರತ್ವ ನೀಡುತ್ತದೆ. ಇದು ಹಾಸ್ಯಾಸ್ಪದ ಮತ್ತು ಅಸಂಬದ್ಧ. ಇದು ಕೊನೆಯಾಗಲೇಬೇಕು. ನಾನೇ ಇದಕ್ಕೆ ಇತಿಶ್ರೀ ಹಾಡುತ್ತೇನೆ ಎಂದು ಖಡಕ್ ಆಗಿ ಹೇಳಿದ್ದಾರೆ.

    ಈಗಾಗಲೇ ಕಾಯ್ದೆಯನ್ನು ರದ್ದುಪಡಿಸುವ ಕೆಲಸ ಆರಂಭವಾಗಿದೆ. ನಾನು ಸಹಿ ಹಾಕಿಯೇ ಹಾಕುತ್ತೇನೆ. ಮುಂದೆ ಈ ಆದೇಶ ಅಧಿಕೃತವಾಗಿ ಜಾರಿಯಾಗಲಿದೆ ಎಂದು ಟ್ರಂಪ್ ಗುಡುಗಿದ್ದಾರೆ.

    ತಾತ್ಕಾಲಿಕ ವೀಸಾ, ಟ್ರಾವೆಲ್ ವೀಸಾದಲ್ಲಿ ಬಂದಿರುವವರು, ಅಕ್ರಮವಾಗಿ ನೆಲೆಸಿರುವ ದಂಪತಿಗೆ ಮಗುವಾದರೆ ಹಾಲಿ ಕಾನೂನಿನ ಪ್ರಕಾರ ಅಮೆರಿಕದ ಜನ್ಮ ಪ್ರಮಾಣಪತ್ರ ದೊರೆಯುತ್ತದೆ. ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಅನಿವಾಸಿ ಭಾರತೀಯರ ಮಕ್ಕಳು ಈಗಾಗಲೇ ಅಮೆರಿಕದ ಪೌರತ್ವ ಪಡೆದುಕೊಂಡಿದ್ದಾರೆ.

    ಕೆಲ ದಂಪತಿ ಮಗುವಿಗೆ ಪೌರತ್ವ ಸಿಗಲೆಂದೇ ಅಮೆರಿಕಕ್ಕೆ ಬರುತ್ತಾರೆ. ಇಲ್ಲೇ ಹೆರಿಗೆ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಾಯ್ದೆಯ ದುರುಪಯೋಗವನ್ನು ತಡೆಗಟ್ಟಲು ಟ್ರಂಪ್ ಕಾನೂನನ್ನು ರದ್ದು ಮಾಡಲು ಮುಂದಾಗಿದ್ದಾರೆ. ಈ ಕಾನೂನು ತಿದ್ದುಪಡಿ ಮಾಡಬೇಕಾದರೆ ಅಷ್ಟು ಸುಲಭವಲ್ಲ. ಜನ ಪ್ರತಿನಿಧಿಗಳಿಂದ ವಿರೋಧ ವ್ಯಕ್ತವಾಗಿ ಸರ್ಕಾರ ಭಾರೀ ಕಾನೂನು ಹೋರಾಟ ನಡೆಸಬೇಕಾದಿತು ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಾಲಕ, ನರ್ಸ್ ಸಿಬ್ಬಂದಿಯಿಂದ ಹೆರಿಗೆ – ಅಂಬುಲೆನ್ಸ್ ನಲ್ಲಿಯೇ ಅವಳಿ ಮಕ್ಕಳ ಜನನ

    ಚಾಲಕ, ನರ್ಸ್ ಸಿಬ್ಬಂದಿಯಿಂದ ಹೆರಿಗೆ – ಅಂಬುಲೆನ್ಸ್ ನಲ್ಲಿಯೇ ಅವಳಿ ಮಕ್ಕಳ ಜನನ

    ದಾವಣಗೆರೆ: ಜಿಲ್ಲೆಯ ಜಗಳೂರು ಪಟ್ಟಣದಲ್ಲಿ 108 ವಾಹನದಲ್ಲೇ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಪಟ್ಟಣದ ಧರ್ಮಾಪುರ ಗ್ರಾಮದ ಅಂಜಿನಮ್ಮ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಕುಟುಂಬದವರು ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಬಳಿಕ 108 ಅಂಬುಲೆನ್ಸ್ ನಲ್ಲಿ ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲು ಕರೆದುಕೊಂಡು ಹೋಗುತ್ತಿದ್ದರು.

    ಈ ವೇಳೆ ಅಂಜಿನಮ್ಮ ಅವರಿಗೆ ಮಾರ್ಗ ಮಧ್ಯೆಯೇ ಹೆರಿಗೆ ನೋವು ಜಾಸ್ತಿಯಾಗಿ ಕಾಣಿಸಿಕೊಂಡಿದೆ. ಕೊನೆಗೆ ಅಂಬುಲೆನ್ಸ್ ನಲ್ಲೇ ಗಂಡು ಹಾಗೂ ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮಹಿಳೆ ಅಂಜಿನಮ್ಮ ಅವರಿಗೆ ಹೆರಿಗೆ ನೋವು ಜಾಸ್ತಿಯಾಗುತ್ತಿದ್ದಂತೆಯೇ 108 ಚಾಲಕ ರುದ್ರಪ್ಪ ಹಾಗೂ ಸಿಬ್ಬಂದಿ ಸುರೇಶ್ ಮಹಿಳೆಗೆ ಹೆರಿಗೆ ಮಾಡಿಸಿದ್ದು ವಿಶೇಷವಾಗಿತ್ತು.

    ಸದ್ಯ ತಾಯಿ ಮಕ್ಕಳು ಆರೋಗ್ಯವಾಗಿದ್ದು, ದಾವಣಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಯೂಟ್ಯೂಬ್ ನೋಡಿ ಪತ್ನಿಗೆ ಹೆರಿಗೆ ಸಾಹಸ – ಕಣ್ಣುಬಿಟ್ಟ ಕಂದಮ್ಮ, ಕಣ್ಣುಮುಚ್ಚಿದ ತಾಯಿ!

    ಯೂಟ್ಯೂಬ್ ನೋಡಿ ಪತ್ನಿಗೆ ಹೆರಿಗೆ ಸಾಹಸ – ಕಣ್ಣುಬಿಟ್ಟ ಕಂದಮ್ಮ, ಕಣ್ಣುಮುಚ್ಚಿದ ತಾಯಿ!

    ಚೆನ್ನೈ: ವ್ಯಕ್ತಿಯೊಬ್ಬ ಯೂಟ್ಯೂಬ್ ನಲ್ಲಿ ಸಲಹೆ ತೆಗೆದುಕೊಂಡು ಹೆರಿಗೆ ಮಾಡಿಸಲು ಹೋಗಿ ಪತ್ನಿಯೇ ಮೃತಪಟ್ಟಿರುವ ದಾರುಣ ಘಟನೆ ತಮಿಳುನಾಡಿನ ತಿರುಪ್ಪೂರು ಪಟ್ಟಣದಲ್ಲಿ ನಡೆದಿದೆ.

    ಕೃತಿಗಾ(28) ಮೃತ ಮಹಿಳೆ. ಈಕೆಯ ಪತಿ ಕಾರ್ತಿಕೇಯನ್ ಈ ರೀತಿಯ ದುಸ್ಸಾಹ ಮಾಡಿದ್ದಾನೆ. ಇವರಿಬ್ಬರು ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಇವರು ನಾರ್ಮಲ್ ಹೆರಿಗೆಯ ಮೇಲೆ ನಂಬಿಕೆ ಇಟ್ಟಿದ್ದು, ಸ್ನೇಹಿತರ ಸಲಹೆಯ ಮೇರೆಗೆ ಮನೆಯಲ್ಲಿ ಮಗುವನ್ನು ಹೊಂದಲು ನಿರ್ಧರಿಸಿದ್ದರು.

    ಕೃತಿಕಾಗೆ ಭಾನುವಾರ ಮಧ್ಯಾಹ್ನದ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಕಾರ್ತಿಕೇಯನ್ ತನ್ನ ಕುಟುಂಬ ಸ್ನೇಹಿತರಾದ ಪ್ರವೀಣ್ ಕುಮಾರ್ ಮತ್ತು ಲಾವಣ್ಯ ದಂಪತಿ ಜೊತೆ ಸೇರಿ ಮನೆಯಲ್ಲೇ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಆಗ ಮೂವರು ಯೂಟ್ಯೂಬ್ ನಿಂದ ಹೆರಿಗೆ ಮಾಡಿಸಲು ಸಲಹೆಯನ್ನು ತೆಗೆದುಕೊಂಡಿದ್ದಾರೆ. ಅದೇ ರೀತಿ ಕೃತಿಗಾಗೆ ಹೆರಿಗೆ ಮಾಡಿಸಿದ್ದಾರೆ. ಕೊನೆಗೆ ಕೃತಿಗಾ ಸುಮಾರು 1:30ಕ್ಕೆ ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ.

    ಹೆರಿಗೆಯಾಗಿ ಒಂದು ಗಂಟೆಯ ನಂತರ ಅಂಬ್ಯುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಕೃತಿಗಾ ಅಷ್ಟರಲ್ಲಿಯೇ ಮೃತಪಟ್ಟಿದ್ದರು. ಹೆರಿಗೆ ಸಮಯದಲ್ಲಿ ಕೃತಿಗಾಗೆ ತುಂಬಾ ರಕ್ತಸ್ರಾವವಾಗಿದ್ದು, ಜೊತೆಗೆ ಆಘಾತಕ್ಕೆ ಒಳಗಾದ ಕಾರಣ ಆಕೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸದ್ಯಕ್ಕೆ ಮಗು ಆರೋಗ್ಯವಾಗಿದೆ ಎಂದು ತಿರುಪ್ಪುರದ ಮುಖ್ಯ ಆರೋಗ್ಯ ಅಧಿಕಾರಿ ಕೆ. ಬೂಪತಿ ಹೇಳಿದ್ದಾರೆ.

    ಈ ದಂಪತಿಗೆ ಈಗಾಗಲೇ ಒಂದು ಮಗುವಿದ್ದು, ಇದು ಎರಡನೇ ಮಗುವಾಗಿದೆ. ಇತ್ತೀಚೆಗಷ್ಟೆ ಇವರ ಅಜ್ಜ ಮೃತಪಟ್ಟಿದ್ದರು. ಮತ್ತೆ ಅವರೇ ಹುಟ್ಟಿ ಬರುತ್ತಾರೆ ಎಂದು ನಂಬಿಕೊಂಡಿದ್ದರು. ಅಷ್ಟೇ ಅಲ್ಲದೇ ಇವರು ನಾರ್ಮಲ್ ಹೆರಿಗೆಯನ್ನು ಅತಿ ಹೆಚ್ಚು ಪ್ರೋತ್ಸಾಹಿಸಿದ್ದರು. ಅದೇ ರೀತಿ ಕೃತಿಗಾ ಯಾವುದೇ ವೈದ್ಯರು ಅಥವಾ ಆಸ್ಪತ್ರೆಗೆ ಪರೀಕ್ಷೆಗಾಗಿ ಹೋಗಿರಲಿಲ್ಲ ಎಂದು ತನಿಖಾಧಿಕಾರಿ ಜೈಯಚಂದ್ರನ್ ತಿಳಿಸಿದ್ದಾರೆ.

    ಸದ್ಯಕ್ಕೆ ಪತಿ ಕಾರ್ತಿಕೇಯನ್ ನನ್ನು ಪೊಲೀಸರು ಕಸ್ಟ್ ಡಿಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಹೆರಿಗೆಗೆ ಸಹಾಯ ಮಾಡಿದ ಪ್ರವೀಣ್ ದಂಪತಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

  • ಆಂಬುಲೆನ್ಸ್ ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

    ಆಂಬುಲೆನ್ಸ್ ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

    ಬಳ್ಳಾರಿ: ಆಂಬುಲೆನ್ಸ್ ನಲ್ಲೆ ಗರ್ಭಿಣಿಯೊಬ್ಬರು ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಮರಿಯಮ್ಮನಹಳ್ಳಿ ಬಳಿ ನಡೆದಿದೆ.

    ಹೊಸಪೇಟೆ ತಾಲೂಕಿನ ಅಯ್ಯನಹಳ್ಳಿ ಗ್ರಾಮದ ನಿವಾಸಿ ಲಕ್ಷ್ಮಿ ಅವರು ಗರ್ಭಿಣಿಯಾಗಿದ್ದು, ಇಂದು ಬೆಳ್ಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ನಂತರ ಪತಿ ಆಂಬುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು.

    ಆಂಬುಲೆನ್ಸ್ ಮರಿಯಮ್ಮನಹಳ್ಳಿ ಬರುತ್ತಿದ್ದಾಗ ಲಕ್ಷ್ಮಿ ಅವರಿಗೆ ಹೆರಿಗೆ ನೊವು ಜಾಸ್ತಿಯಾಗಿದೆ. ಬಳಿಕ ಆಂಬುಲೆನ್ಸ್ ಸಿಬ್ಬಂದಿಗಳಾದ ಅನಿಲ್ ಮತ್ತು ಚಾಲಕ ಸುರೇಶ್ ಸುರಕ್ಷಿತವಾಗಿ ಆಂಬುಲೆನ್ಸ್ ನಲ್ಲಿಯೇ ಹೆರಿಗೆ ಮಾಡಿಸಿದ್ದು, ಸಮಯ ಪ್ರಜ್ಞೆ ಮೆರೆದಿದ್ದಾರೆ.

    ಲಕ್ಷ್ಮಿ ಅವರು ಇಬ್ಬರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ನಂತರ ಬಾಣಂತಿಯನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • ಆಟೋದಲ್ಲೇ ಗಂಡು ಮಗುವಿಗೆ ಜನ್ಮ- ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯರು

    ಆಟೋದಲ್ಲೇ ಗಂಡು ಮಗುವಿಗೆ ಜನ್ಮ- ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯರು

    ಮಂಡ್ಯ: ಒಂದೆಡೆ ರಾಜ್ಯದಲ್ಲಿ ಖಾಸಗಿ ವೈದ್ಯರು ಮುಷ್ಕರ ಮಾಡುತ್ತಿದ್ದು, ಚಿಕಿತ್ಸೆ ಸಿಗದೇ ರೋಗಿಗಳು ಪರದಾಡುತ್ತಿದ್ದಾರೆ. ಆದರೆ ಮಂಡ್ಯದಲ್ಲಿ ಗರ್ಭಿಣಿಯೊಬ್ಬರಿಗೆ ಆಟೋದಲ್ಲೇ ಹೆರಿಗೆಯಾಗಿದ್ದು, ವಿಚಾರ ತಿಳಿದು ಚಿಕಿತ್ಸೆ ನೀಡಿ ಸರ್ಕಾರಿ ವೈದ್ಯರು ಮಾನವೀಯತೆಯನ್ನು ಮೆರೆದಿದ್ದಾರೆ.

    ಜಿಲ್ಲೆಯ ಷುಗರ್ ಟೌನ್ ನಿವಾಸಿ ರವಿಯವರ ಪತ್ನಿ ಸವಿತ ಎಂಬುವರು ಹೆರಿಗೆ ನೋವಿನಿಂದ ಬಳಲುತ್ತಿದ್ದು, ಕುಟುಂಬದವರು ಅವರನ್ನು ಆಟೋದಲ್ಲಿ ಕರೆದುಕೊಂಡು ಮಿಮ್ಸ್ ಆಸ್ಪತ್ರೆಗೆ ಹೋಗಿದ್ದಾರೆ. ಆಸ್ಪತ್ರೆಗೆ ದಾಖಲಾಗಲು ಚೀಟಿಗಾಗಿ ಸರತಿ ಸಾಲಿನಲ್ಲಿ ಸವಿತ ಮನೆಯವರು ಕ್ಯೂ ನಿಂತಿದ್ದಾರೆ. ಆದರೆ ಮುಷ್ಕರದಿಂದ ವೈದ್ಯರ ಕೊರತೆ ಇರುವುದರಿಂದ ರೋಗಿಗಳ ಸಂಖ್ಯೆ ಅಧಿಕವಾಗಿದ್ದು, ಕ್ಯೂ ತುಂಬಾ ಉದ್ದವಿತ್ತು.

    ಆಟೋದಲ್ಲಿದ್ದ ಸವಿತಾ ಅವರಿಗೆ ಚೀಟಿ ಪಡೆಯುವಷ್ಟರಲ್ಲೇ ಹೆರಿಗೆ ನೋವು ತುಂಬಾ ಕಾಣಿಸಿಕೊಂಡಿದೆ. ಪರಿಣಾಮ ಆಟೋದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ವಿಚಾರ ತಿಳಿದ ವೈದ್ಯರು ಆಟೋ ಬಳಿಯೇ ಧಾವಿಸಿ ಚಿಕಿತ್ಸೆ ನೀಡಿದ್ದಾರೆ.

    ಮುಷ್ಕರದಿಂದ ಹೆರಿಗೆಗಾಗಿ ಮಿಮ್ಸ್ ಆಸ್ಪತ್ರೆಗೆ ಬರುತ್ತಿರುವ ಗರ್ಭಿಣಿಯರ ಸಂಖ್ಯೆ ಹೆಚ್ಚಾಗಿದ್ದು, ಪ್ರ್ರತಿನಿತ್ಯ ಸುಮಾರು 17 ಹೆರಿಗೆಗಳು ಮಿಮ್ಸ್ ಆಸ್ಪತ್ರೆಯಲ್ಲಿ ಆಗುತ್ತಿತ್ತು. ಆದರೆ ಮುಷ್ಕರದಿಂದ ದಿನಕ್ಕೆ 20ಕ್ಕಿಂತ ಹೆಚ್ಚು ಗರ್ಭಿಣಿಯರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

  • ಆಂಬುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

    ಆಂಬುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

    ವಿಜಯಪುರ : ಜಿಲ್ಲೆಯ ಮಹಿಳೆಯೊಬ್ಬರು ಸರ್ಕಾರದ ಆರೋಗ್ಯ ಕವಚ ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಕಂಡಿ ತಾಲೂಕಿನ ತೊದಲಬಾಗಿ ಗ್ರಾಮದವರಾದ ನಿರ್ಮಲಾ ಎಂಬವರೇ ಹೆಣ್ಣು ಮಗುವಿಗೆ ಜನ್ಮ ನೀಡಿದವರು. ನಿರ್ಮಲಾ ಅವರಿಗೆ ಶುಕ್ರವಾರ ಸಂಜೆ ತೀವ್ರ ಹೆರಿಗೆನೋವು ಕಾಣಿಸಿಕೊಂಡಿತ್ತು. ತಕ್ಷಣ ವಿಜಯಪುರ ತಾಲೂಕಿನ ಬಬಲೇಶ್ವರದ 108 ಆಂಬುಲೆನ್ಸ್ ಸೇವೆಗೆ ಕರೆ ಮಾಡಿ ಹೆರಿಗೆಗಾಗಿ ಆಸ್ಪತ್ರೆಗೆ ಕರೆದ್ಯೊಯುವ ಪ್ರಯತ್ನ ನಡೆಸಲಾಗಿತ್ತು.

    ಆದರೆ ಬಾಗಲಕೋಟೆಯ ಕುಂಬಾರಹಳ್ಳ ಬಳಿಗೆ ತೆರಳುವ ವೇಳೆಗೆ ನಿರ್ಮಲಾ ಅವರಿಗೆ ಹೆರಿಗೆ ನೋವು ತೀವ್ರವಾಗಿದೆ. ಅದ್ದರಿಂದ ಆಂಬುಲೆನ್ಸ್ ನಲ್ಲಿದ್ದ ಸಿಬ್ಬಂದಿಯಾದ ಇಟಿಎಂ ವಿಶ್ವನಾಥ, ಚಾಲಕ ಸಂಜು ಹಾಗೂ ಆಶಾ ಕಾರ್ಯಕರ್ತೆ ಕುಸುಮಾ ಅವರು ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ.

    ಹೆರಿಗೆ ನಂತರ ತಾಯಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಆಂಬುಲೆನ್ಸ್ ನಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ಸಿಬ್ಬಂದಿಗೆ ನಿರ್ಮಲಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

  • ಚಲಿಸುತ್ತಿದ್ದ ಸರ್ಕಾರಿ ಬಸ್ಸಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

    ಚಲಿಸುತ್ತಿದ್ದ ಸರ್ಕಾರಿ ಬಸ್ಸಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

    ಚಿತ್ರದುರ್ಗ: ಚಲಿಸುತ್ತಿದ್ದ ಸರ್ಕಾರಿ ಬಸ್ಸಿನಲ್ಲಿಯೇ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಬೆಂಗಳೂರಿನಿಂದ ಕುಷ್ಟಗಿಗೆ ಹೋಗುವ ಕೆಎ28ಈ2194 ಬಸ್ಸಿನಲ್ಲಿ ತೆರಳುತ್ತಿದ್ದ ಹನುಮವ್ವ (21) ಎಂಬವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ದಂಪತಿ ಸಮೇತ ಸರ್ಕಾರಿ ಬಸ್‍ನಲ್ಲಿ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನುಮನಗರಕ್ಕೆ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

    ಪ್ರಯಾಣ ಮಾಡುತ್ತಿದ್ದಾಗ ಚಿತ್ರದುರ್ಗದಲ್ಲಿ ಹನುಮವ್ವ ಅವರಿಗೆ ಹೆರಿಗೆನೋವು ಕಾಣಿಸಿಕೊಂಡಿದೆ. ತಕ್ಷಣ ಸಹಪ್ರಯಾಣಿಕರು ಚಾಲಕನಿಗೆ ವಿಷಯ ತಿಳಿಸಿದ್ದಾರೆ. ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಬಾರದ ಕಾರಣ ಹನುಮವ್ವ ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಅವಧಿಗೂ ಮುನ್ನವೇ ಅಂದರೆ 7 ತಿಂಗಳಿಗೆ ಮಗು ಜನಿಸಿದ್ದು, ಮಗು ಸುಮಾರು 759 ಗ್ರಾಂ ತೂಕವಿದೆ. ಆದ್ದರಿಂದ ಮಗು ಸ್ಥಿತಿ ಚಿಂತಾಜನಕವಾಗಿದೆ.

    ಸದ್ಯಕ್ಕೆ ಜಿಲ್ಲಾಸ್ಪತ್ರೆಯ ಎನ್‍ಐಸಿಯು ವಾರ್ಡನಲ್ಲಿ ಮಗುವಿನ ಆರೈಕೆ ಮಾಡಲಾಗುತ್ತಿದ್ದು, ತಾಯಿ ಹನುಮವ್ವ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.