Tag: Materials

  • ಯಾರ ಮನೆ ಹಾಳು ಮಾಡಲು ಬಂದಿದ್ದೀಯಾ ನೀನು: ಸಪ್ಲೈರ್ ಗೆ ಶಾಸಕರಿಂದ ಕ್ಲಾಸ್

    ಯಾರ ಮನೆ ಹಾಳು ಮಾಡಲು ಬಂದಿದ್ದೀಯಾ ನೀನು: ಸಪ್ಲೈರ್ ಗೆ ಶಾಸಕರಿಂದ ಕ್ಲಾಸ್

    ಮಂಡ್ಯ: ಗಂಗಾಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಸರಬರಾಜು ಮಾಡಿದ್ದಕ್ಕೆ ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ, ಸರಬರಾಜುದಾರನನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.

    ಮಂಡ್ಯದ ಕೆಆರ್ ಪೇಟೆಯಲ್ಲಿ, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆಯ ಅಡಿಯಲ್ಲಿ 26ಕ್ಕೂ ಹೆಚ್ಚಿನ ವಿವಿಧ ಫಲಾನುಭವಿಗಳಿಗೆ ಪಂಪ್‍ಸೆಟ್ ಸರಬರಾಜು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ಗುತ್ತಿಗೆದಾರನು ಸರಬರಾಜು ಮಾಡಲು ತಂದಿದ್ದ ಐಎಸ್‍ಐ ಗುಣಮಟ್ಟದ ಮುದ್ರೆಯಿಲ್ಲದ ಕಳಪೆ ಗುಣಮಟ್ಟದ ಸಬ್ ಮರ್ಸಿಬಲ್ ಪಂಪುಗಳು, ಪೈಪುಗಳು ಹಾಗೂ ವಿವಿಧ ಸಾಮಗ್ರಿಗಳನ್ನು ತಪಾಸಣೆ ನಡೆಸಿದ ಶಾಸಕ ಡಾ.ನಾರಾಯಣಗೌಡ ಸರಬರಾಜುದಾರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಸರಬರಾಜು ಮಾಡಲು ಬಂದಿದ್ದವನಿಗೆ, ಯಾರ ಮನೆ ಹಾಳು ಮಾಡಲು ಬಂದಿದ್ದೀಯಾ ನೀನು, ರೈತರಿಗೆ ಸರ್ಕಾರ ದುಡ್ಡು ಕೊಡುತ್ತಿದೆ. ಬಂದು ದುಡ್ಡು ಹೊಡೆದುಕೊಂಡು ಹೋಗಲು ನಿಮ್ಮ ಮನೆ ಆಸ್ತಿ ಅಲ್ಲ ಇದು. ರೈತರ ಮನೆ ಹಾಳು ಮಾಡುತ್ತೀರಾ ನೀವು ಎಂದು ತರಾಟೆಗೆ ತೆಗೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.

    ಅಷ್ಟೇ ಅಲ್ಲದೇ ಅಧಿಕಾರಿಯನ್ನು ಕರೆದು, ಐಎಸ್‍ಐ ಮಾರ್ಕ್ ಇಲ್ಲದ ಎಲ್ಲ ವಸ್ತುಗಳನ್ನು ವಾಪಸ್ ಕಳುಹಿಸಿ ಎಂದು ಸೂಚನೆ ನೀಡಿದ್ದಾರೆ. ಫಲಾನುಭವಿ ರೈತರನ್ನು ಕುರಿತು ಈ ವಸ್ತುಗಳು ಗುಣಮಟ್ಟದಿಂದ ಕೂಡಿಲ್ಲ. ಮತ್ತೊಂದು ದಿನ ನಿಮಗೆ ಒಳ್ಳೆಯ ಗುಣಮಟ್ಟದ ಪೈಪ್ ಮತ್ತು ಸಬ್ ಮರ್ಸಿಬಲ್ ಪಂಪ್ ವಿತರಿಸುತ್ತೇವೆ. ಅಲ್ಲಿಯವರೆಗೂ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸಿಲಿಂಡರ್ ಸ್ಫೋಟ – ಸುಟ್ಟು ಕರಕಲಾಯ್ತು ಸಾಮಾಗ್ರಿಗಳು

    ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸಿಲಿಂಡರ್ ಸ್ಫೋಟ – ಸುಟ್ಟು ಕರಕಲಾಯ್ತು ಸಾಮಾಗ್ರಿಗಳು

    ದಾವಣಗೆರೆ: ಮದುವೆ ಸಂಭ್ರಮದಲ್ಲಿದ್ದ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಪರಿಣಾಮ ಸಾಮಾಗ್ರಿಗಳು ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ರಸ್ತೆಮಾಚಿಕೆರೆ ಗ್ರಾಮದಲ್ಲಿ ನಡೆದಿದೆ.

    ಷಡಕ್ಷರಪ್ಪ ಎಂಬುವವರ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಅಡುಗೆ ಮಾಡಲು ಒಲೆ ಹೊತ್ತಿಸುವಾಗ ಈ ಘಟನೆ ಸಂಭವಿಸಿದ್ದು ಲಕ್ಷಾಂತರ ರೂ. ಮೌಲ್ಯದ ಸಾಮಾಗ್ರಿಗಳು ಸುಟ್ಟು ಭಸ್ಮವಾಗಿದೆ. ಸಿಲಿಂಡರ್ ಸ್ಫೋಟದಿಂದ ಯಾವುದೇ ಪ್ರಾಣಹಾನಿ ಆಗಿಲ್ಲ.

    ಇನ್ನೆರಡು ದಿನಗಳಲ್ಲಿ ಷಡಕ್ಷರಪ್ಪ ಅವರ ಮನೆಯಲ್ಲಿ ಮದುವೆ ಸಮಾರಂಭವಿತ್ತು. ಆದ್ದರಿಂದ ಮನೆಯಲ್ಲಿ ಮದುವೆ ಬೇಕಾದ ಸಾಮಾಗ್ರಿಗಳನ್ನು ತಂದಿಡಲಾಗಿತ್ತು. ದುರದೃಷ್ಟವೆನ್ನುವಂತೆ ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮದುವೆ ಸಾಮಾಗ್ರಿಗಳೆಲ್ಲ ಬೆಂಕಿಗಾಹುತಿಯಾಗಿದೆ.

    ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಿಯಂತ್ರಣ ಮಾಡಿದ್ದಾರೆ. ಅಲ್ಲದೆ ಘಟನೆ ಕುರಿತು ಜಗಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಿಂದ ಯಾವುದೇ ಪ್ರಾಣ ಹಾನಿಯಾಗದಿದ್ದರೂ ಮದುವೆ ಸಂಭ್ರಮದಲ್ಲಿದ್ದ ಮನೆಮಂದಿ ಮುಂದೇನು ಮಾಡುವುದು ಎನ್ನುವ ಚಿಂತೆಯಲ್ಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv