Tag: match fixing

  • ಮಹಾರಾಷ್ಟ್ರ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ – ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಬಾಂಬ್‌

    ಮಹಾರಾಷ್ಟ್ರ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ – ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಬಾಂಬ್‌

    – ಮುಂದೆ ಬಿಹಾರಕ್ಕೂ ಬರಬಹುದು, ಬಿಜೆಪಿ ಸೋಲುವಲ್ಲೆಲ್ಲಾ ಮ್ಯಾಚ್ ಫಿಕ್ಸಿಂಗ್ ನಡೆಯಬಹುದು; ಆರೋಪ

    ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ (Maharashtra Assembly Elections) ನಡೆದ ಮ್ಯಾಚ್ ಫಿಕ್ಸಿಂಗ್ ಈಗ ಬಿಹಾರದಲ್ಲಿ ನಡೆಯಬಹುದು. ಹಾಗೂ ಬಿಜೆಪಿ ಸೋಲುವಲ್ಲೆಲ್ಲಾ ಮ್ಯಾಚ್ ಫಿಕ್ಸಿಂಗ್ ನಡೆಯಬಹುದು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಆರೋಪಿಸಿದ್ದಾರೆ.

    ರಾಹುಲ್‌ ಗಾಂಧಿ ಅವರು ಶನಿವಾರ (ಇಂದು) ಮತ್ತೆ ಎನ್‌ಡಿಎ ನೇತೃತ್ವದ ಬಿಜೆಪಿ (BJP) ಚುನಾವಣಾ ಅಕ್ರಮಗಳಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ. ಕಳೆದ ವರ್ಷ ಮಹಾರಾಷ್ಟ್ರ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ (Match Fixing) ನಡೆದಿದೆ. ಇದು ಬಿಹಾರಕ್ಕೂ ಬರಬಹುದು. ಈ ರೀತಿ ಮ್ಯಾಚ್ ಫಿಕ್ಸಿಂಗ್ ಚಟುವಟಿಕೆ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ.

    ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಬುಡಮೇಲು ಮಾಡಲು ಮ್ಯಾಚ್ ಫಿಕ್ಸಿಂಗ್ ಮಾದರಿಯನ್ನು ಬಳಸಿದೆ ಎಂದು ಆರೋಪಿಸಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಇಂಗ್ಲಿಷ್‌ ಪತ್ರಿಕೆಯೊಂದರಲ್ಲಿ ʻಮ್ಯಾಚ್ ಫಿಕ್ಸಿಂಗ್ ಮಹಾರಾಷ್ಟ್ರʼ ಶೀರ್ಷಿಕೆಯಲ್ಲಿ ಪ್ರಕಟವಾದ ಲೇಖನವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮಹಾರಾಷ್ಟ್ರ ಚುನಾವಣಾ ಫಲಿತಾಂಶದಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಹೇಗೆ ನಡೆಯಿತು? ಎಂಬುದನ್ನು ಹಂತ-ಹಂತವಾಗಿ ವಿವರಿಸಿದ್ದಾರೆ.

    ಅವುಗಳೆಂದರೆ….
    ಹಂತ 1: ಚುನಾವಣಾ ಆಯೋಗ ನೇಮಿಸುವ ಸಮಿತಿಯನ್ನು ರಿಗ್ಗಿಂಗ್ ಮಾಡುವುದು.
    ಹಂತ 2: ಮತದಾರರ ಪಟ್ಟಿಗೆ ನಕಲಿ ಹೆಸರುಗಳನ್ನು ಸೇರಿಸುವುದು.
    ಹಂತ 3: ಮತದಾನದ ಶೇಕಡಾವಾರು (ವೋಟ್‌ ಶೇರಿಂಗ್‌) ಪ್ರಮಾಣವನ್ನ ಹೆಚ್ಚಿಸುವುದು
    ಹಂತ 4: ಬಿಜೆಪಿ ಗೆಲ್ಲಲು ಅಗತ್ಯವಿರುವ ಕಡೆಗಳಲ್ಲಿ ನಕಲಿ ಮತದಾನ ಮಾಡಿಸುವುದು.
    ಹಂತ 5: ಸಾಕ್ಷ್ಯಗಳನ್ನು ಮುಚ್ಚಿಡುವ ಕೆಲಸಗಳನ್ನು ಮಾಡಿದ್ದಾರೆ ಎಂದು ವಿವರಿಸಿದ್ದಾರೆ.

    ಬಿಜೆಪಿ ತಿರುಗೇಟು:
    ಇನ್ನೂ ರಾಹುಲ್‌ ಗಾಂಧಿ ಅವರ ಹೇಳಿಕೆಗಳು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೀಡಾಗುತ್ತಿದ್ದಂತೆ ಬಿಜೆಪಿ ನಾಯಕರು ತಿರುಗೇಟು ನೀಡುವ ಕೆಲಸ ಮಾಡಿದ್ದಾರೆ. ಇದು ದಾರಿತಪ್ಪಿಸುವ ಹೇಳಿಕೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕರೆದಿದ್ದಾರೆ.

    ರಾಹುಲ್‌ ಗಾಂಧಿ ಅವರು ಪದೇ ಪದೇ ಮತದಾರರಲ್ಲಿ ಅನುಮಾನ ಹಾಗೂ ವಿಭಜನೆತ ಬೀಜ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣಾ ಪ್ರಕ್ರಿಯೆ ಹೇಗೆ ಕೆಲಸ ಮಾಡುತ್ತದೆ ಅನ್ನೋದು ಅವರಿಗೆ ಅರ್ಥವಾಗುತ್ತಿಲ್ಲ ಅನ್ನೋದು ಚೆನ್ನಾಗಿ ಗೊತ್ತಾಗ್ತಿದೆ. ತೆಲಂಗಾಣ, ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆದ್ದಾಗ ಅಲ್ಲಿ ಅದೇ ವ್ಯವಸ್ಥೆಯನ್ನು ನ್ಯಾಯಯುತ ಎಂದು ಪ್ರಶಂಸಿಸಿದರು. ಹರಿಯಾಣದಿಂಧ ಮಹಾರಾಷ್ಟ್ರದ ವರೆಗೆ ಸೋತ ಚುನಾವಣೆಗಳಲೆಲ್ಲಾ ಪಿತೂರಿ ಅಂತ ಗೊಣಗುತ್ತಾ ಬಂದರು. ಮತದಾರರ ಮನಸ್ಸಿನಲ್ಲಿ ಭಿನ್ನಾಭಿಪ್ರಾಯದ ಬೀಜಗಳನ್ನು ಬಿತ್ತುವ ಪ್ರಯತ್ನವನ್ನು ಉದ್ದೇಶಪೂರ್ವಕವಾಗಿ ಮಾಡುತ್ತಲೇ ಇರುತ್ತಾರೆ ಎಂದು ಎಕ್ಸ್‌ನಲ್ಲಿ ಕಿಡಿ ಕಾರಿದ್ದಾರೆ.

    ಮಹಾರಾಷ್ಟ್ರ ಫಲಿತಾಂಶ ಏನಾಗಿತ್ತು?
    ಬಿಜೆಪಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಒಳಗೊಂಡ ಮಹಾಯುತಿ ಮೈತ್ರಿಕೂಟವು 288 ವಿಧಾನಸಭಾ ಸ್ಥಾನಗಳಲ್ಲಿ 235 ಸ್ಥಾನಗಳನ್ನು ಗೆದ್ದಿದೆ. ಇದರಲ್ಲಿ ಬಿಜೆಪಿ 132 ಸ್ಥಾನಗಳನ್ನು ಗಳಿಸಿದ್ದು, ರಾಜ್ಯದ ಇತಿಹಾಸದಲ್ಲಿ ಇದು ಅತ್ಯುತ್ತಮ ಪ್ರದರ್ಶನವಾಗಿದೆ.

  • ಮ್ಯಾಚ್‌ ಫಿಕ್ಸಿಂಗ್‌ ಇಲ್ಲದೇ 400 ಸೀಟು ಗೆಲ್ಲಲು ಸಾಧ್ಯವಿಲ್ಲ – ಮೋದಿ ವಿರುದ್ಧ ಘರ್ಜಿಸಿದ ರಾಗಾ

    ಮ್ಯಾಚ್‌ ಫಿಕ್ಸಿಂಗ್‌ ಇಲ್ಲದೇ 400 ಸೀಟು ಗೆಲ್ಲಲು ಸಾಧ್ಯವಿಲ್ಲ – ಮೋದಿ ವಿರುದ್ಧ ಘರ್ಜಿಸಿದ ರಾಗಾ

    – ಬಿಜೆಪಿ ಗೆದ್ದು ಸಂವಿಧಾನ ಬದಲಾಯಿಸಿದ್ರೆ ದೇಶವೇ ಹೊತ್ತಿ ಉರಿಯುತ್ತದೆ ಎಂದ ಸಂಸದ

    ನವದೆಹಲಿ: ಮ್ಯಾಚ್‌ ಫಿಕ್ಸಿಂಗ್‌ (Match Fixing) ಇಲ್ಲದೇ ಬಿಜೆಪಿ ʻ400 ಪಾರ್‌ʼ ಘೋಷಣೆ ಸಾಧ್ಯವಿಲ್ಲ. 400 ಸೀಟು ಗೆಲ್ಲಲು ಪ್ರಧಾನಿ ಮೋದಿ ಅಂಪೈರ್‌ಗಳನ್ನ ಆಯ್ಕೆ ಮಾಡಿದ್ದಾರೆ. ಮೋದಿ ಒಬ್ಬರೇ ಈ ಕೆಲಸ ಮಾಡುತ್ತಿಲ್ಲ. ಅವರ ಜೊತೆಗೆ ಕೆಲವು ಉದ್ಯಮಿಗಳೂ ಸೇರಿಕೊಂಡಿದ್ದಾರೆ ಎಂದು ಸಂಸದ ರಾಹುಲ್‌ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದಾರೆ.

    ಸಿಎಂ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರ ED ಬಂಧನ ಖಂಡಿಸಿ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ I.N.D.I.A. ಒಕ್ಕೂಟದ ʻಪ್ರಜಾಪ್ರಭುತ್ವ ಉಳಿಸಿʼ ಪ್ರತಿಭಟನಾ ರ‍್ಯಾಲಿಯನ್ನು ದ್ದೇಶಿಸಿ ಅವರು, ಬಿಜೆಪಿ ಗೆದ್ದು ಸಂವಿಧಾನವನ್ನ ಬದಲಾಯಿಸಿದ್ರೆ, ದೇಶವೇ ಹೊತ್ತಿ ಉರಿಯುತ್ತದೆ. ಸಂವಿಧಾನ ಹೋದರೆ ಬಡವರ ಹಕ್ಕುಗಳು ಮತ್ತು ಮೀಸಲಾತಿಯೂ ಹೋಗುತ್ತದೆ ಎಂದು ಆತಂಕಪಟ್ಟಿದ್ದಾರೆ.

    ಸಂವಿಧಾನ ಬದಲಾದ ದಿನವೇ ದೇಶ ಒಡೆಯುತ್ತದೆ:
    ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಬಿಜೆಪಿ ತನ್ನ ಪ್ರಯತ್ನಗಳಲ್ಲಿ ಯಶಸ್ವಿಯಾದರೆ, ದೇಶದ ಸಂವಿಧಾನವನ್ನು ಬದಲಾಯಿಸುತ್ತದೆ. ಬಡವರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಬಡವರ ಹಣವನ್ನು ಕಸಿದುಕೊಳ್ಳುತ್ತಾರೆ, ಸಂವಿಧಾನ ಬದಲಾದ ದಿನವೇ ದೇಶ ಒಡೆದು ಹೋಗುತ್ತದೆ. ಅವರು ಸಂವಿಧಾನ ಬದಲಾಯಿಸುತ್ತೇವೆ ಎಂದು ಸುಮ್ಮನೆ ಹೇಳಿಲ್ಲ. ಜನರ ಪ್ರತಿಕ್ರಿಯೆಯನ್ನ ಪರೀಕ್ಷೆ ಮಾಡ್ತಿದ್ದಾರೆ. ಆದ್ದರಿಂದ ಇದು ಸಾಮಾನ್ಯ ಚುನಾವಣೆಯಲ್ಲ, ಭಾರತ ಮತ್ತು ಸಂವಿಧಾನ ಉಳಿಸುವ ಚುನಾವಣೆ, ಬಡವರ, ರೈತರ ಹಕ್ಕು ರಕ್ಷಿಸುವ ಚುನಾವಣೆ. ಇಂತಹ ಚುನಾವಣೆಯನ್ನು ಮ್ಯಾಚ್ ಫಿಕ್ಸಿಂಗ್ ಮಾಡಲಾಗುತ್ತಿದೆ. ವಿಪಕ್ಷಗಳು ಚುನಾವಣೆ ಎದುರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ. ನ್ಯಾಯಂಗದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

    ಮ್ಯಾಚ್‌ ಫಿಕ್ಸಿಂಗ್‌ ಆಗದಿದ್ದರೆ 180 ಸ್ಥಾನ ದಾಟಲ್ಲ:
    ಕ್ರಿಕೆಟ್‌ನಲ್ಲಿ ಅಂಪೈರ್‌ಗಳು ಮತ್ತು ನಾಯಕನ ಮೇಲೆ ಒತ್ತಡ ಹೇರಿ, ಆಟಗಾರರನ್ನು ಖರೀದಿಸಿ ಪಂದ್ಯ ಗೆದ್ದರೆ ಮ್ಯಾಚ್ ಫಿಕ್ಸಿಂಗ್ ಎನ್ನುತ್ತಾರೆ. ನಮ್ಮ ಮುಂದೆ ಲೋಕಸಭೆ ಚುನಾವಣೆ ಇದೆ. ಅಂಪೈರ್‌ಗಳನ್ನು ಆಯ್ಕೆ ಮಾಡಿದವರು ಯಾರು? ಪಂದ್ಯ ಆರಂಭವಾಗುವ ಮುನ್ನ ಇಬ್ಬರು ಆಟಗಾರರನ್ನು (ಇಬ್ಬರು ಸಿಎಂ) ಬಂಧಿಸಲಾಗಿದೆ. ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಮ್ಯಾಚ್ ಫಿಕ್ಸಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಇವಿಎಂಗಳು, ಮ್ಯಾಚ್ ಫಿಕ್ಸಿಂಗ್, ವಿರೋಧ ಪಕ್ಷದ ನಾಯಕರ ಮೇಲೆ ಒತ್ತಡ ತರದಿದ್ದರೆ, ಮಾಧ್ಯಮಗಳನ್ನು ಖರೀದಿಸದಿದ್ದರೆ ಅವರು 180 ಸ್ಥಾನಗಳನ್ನೂ ದಾಟಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

    ದೇಶದಲ್ಲಿ ಕಾಂಗ್ರೆಸ್‌ ಅತಿದೊಡ್ಡ ವಿರೋಧ ಪಕ್ಷವಾಗಿದೆ. ಆದ್ರೆ ಪಕ್ಷದ ಎಲ್ಲಾ ಖಾತೆಗಳನ್ನ ಸ್ಥಗಿತಗೊಳಿಸಲಾಗಿದೆ. ಇಬ್ಬರು ಸಿಎಂ ಗಳನ್ನ ಬಂಧಿಸಲಾಗಿದೆ. ಇದು ಯಾವ ರೀತಿಯ ಚುನಾವಣೆ? ಎಂದು ಪ್ರಶ್ನಿಸಿದ್ದಾರೆ.

  • 2023 ವಿಶ್ವಕಪ್ ಆಡುವುದೇ ನನ್ನ ಗುರಿ: ಶ್ರೀಶಾಂತ್

    2023 ವಿಶ್ವಕಪ್ ಆಡುವುದೇ ನನ್ನ ಗುರಿ: ಶ್ರೀಶಾಂತ್

    ತಿರುವನಂತಪುರಂ: 2023ರ ವಿಶ್ವಕಪ್ ಆಡುವುದೇ ತಮ್ಮ ಮುಂದಿರುವ ಬಹುದೊಡ್ಡ ಗುರಿ, ನನ್ನ ಮಾತು ಕೇಳಲು ಅಚ್ಚರಿ ಎನಿಸಿದರೂ ಈ ಬಗ್ಗೆ ನನಗೆ ನಂಬಿಕೆ ಇದೆ ಎಂದು ಕ್ರಿಕೆಟಿಗ ಎಸ್.ಶ್ರೀಶಾಂತ್ ಹೇಳಿದ್ದಾರೆ.

    2023ರ ಏಕದಿನ ವಿಶ್ವಕಪ್ ಆಡುವ ವಿಶ್ವಾಸವಿದೆ. ಎಂದೂ ನಮ್ಮ ಗುರಿಗಳು ಉನ್ನತಮಟ್ಟದಲ್ಲಿರಬೇಕು, ನನ್ನ ಲಕ್ಷ್ಯವೂ ಎತ್ತರದಲ್ಲಿರುತ್ತವೆ. ಒಂದೊಮ್ಮೆ ಒಬ್ಬ ಅಥ್ಲೀಟ್ ಚಿಕ್ಕ ಗುರಿಯನ್ನು ಹೊಂದಿದ್ದರೆ ಸಾಧಾರಣ ವ್ಯಕ್ತಿಯಾಗಿ ಪರಿವರ್ತನೆ ಆಗುತ್ತಾನೆ ಎಂದು ಶ್ರೀಶಾಂತ್ ಹೇಳಿದ್ದಾರೆ.

    ಮ್ಯಾಚ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಶ್ರೀಶಾಂತ್ ಬಿಸಿಸಿಐ ವಿಧಿಸಿದ್ದ ನಿಷೇಧ ಸೆಪ್ಟೆಂಬರ್ ಗೆ ಅಂತ್ಯವಾಗಲಿದೆ. ನಿಷೇಧ ಮುಗಿದ ಬಳಿಕ ಕೇರಳ ಪರ ರಣಜಿ ಟ್ರೋಫಿ ಆಡುವ ಅವಕಾಶ ನೀಡಲಾಗಿದೆ. ಈಗಾಗಲೇ ಕೇರಳ ಕ್ರಿಕೆಟ್ ಬಿಡುಗಡೆ ಮಾಡಿರುವ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಶ್ರೀಶಾಂತ್‍ಗೆ ಸ್ಥಾನ ನೀಡಿದೆ. ಶ್ರೀಶಾಂತ್ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆದ್ರೆ ರಣಜಿ ಆಡುವುದು ಬಹುತೇಕ ಖಚಿತವಾಗಿದೆ.

    ರಣಜಿ ಕ್ರಿಕೆಟ್ ಆವೃತ್ತಿಯಲ್ಲಿ ಶ್ರೀಶಾಂತ್ ಸ್ಥಿರ ಪ್ರದರ್ಶನ ನೀಡಿದರೆ ಟೀಂ ಇಂಡಿಯಾ ‘ಎ’ ತಂಡಕ್ಕೆ, ಆ ಬಳಿಕ ಭಾರತ ತಂಡಕ್ಕೆ ಆಡುವ ಅವಕಾಶ ಲಭಿಸಲಿದೆ. ಶ್ರೀಶಾಂತ್ ಕಳೆದ 7 ವರ್ಷಗಳಿಂದ ಕ್ರಿಕೆಟ್‍ನಿಂದಲೇ ದೂರ ಉಳಿದಿದ್ದು, 37 ವರ್ಷದ ಆಟಗಾರ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಉದ್ಭವಿಸಿದೆ. ಅಲ್ಲದೇ ಟೀಂ ಇಂಡಿಯಾಗೆ ಆಯ್ಕೆಯಾಗಲು ತಂಡದಲ್ಲಿ ಆಟಗಾರರ ನಡುವೆ ಭಾರೀ ಪೈಪೋಟಿ ಇದೆ. ಆದರೆ ಶ್ರೀಶಾಂತ್ ಮಾತ್ರ 2023ರ ವಿಶ್ವಕಪ್ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಪರ 27 ಟೆಸ್ಟ್, 53 ಏಕದಿನ ಪಂದ್ಯ ಆಡಿರುವ ಶ್ರೀಶಾಂತ್ ಕ್ರಮವಾಗಿ 87, 75 ವಿಕೆಟ್ ಪಡೆದಿದ್ದು, 10 ಟಿ20 ಪಂದ್ಯಗಳಲ್ಲಿ 7 ವಿಕೆಟ್ ಉರುಳಿಸಿದ್ದಾರೆ. 2011ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿ ಶ್ರೀಶಾಂತ್ ಸದಸ್ಯರಾಗಿದ್ದರು.

     

    View this post on Instagram

     

    https://youtu.be/yv4mSzAzvY0

    A post shared by Sree Santh (@sreesanthnair36) on

  • 2011ರ ವಿಶ್ವಕಪ್ ಫೈನಲ್ ಫಿಕ್ಸಿಂಗ್ ಆರೋಪ- ಶ್ರೀಲಂಕಾ ಮಾಜಿ ಸಚಿವರ ಸಮರ್ಥನೆ

    2011ರ ವಿಶ್ವಕಪ್ ಫೈನಲ್ ಫಿಕ್ಸಿಂಗ್ ಆರೋಪ- ಶ್ರೀಲಂಕಾ ಮಾಜಿ ಸಚಿವರ ಸಮರ್ಥನೆ

    – ಸಂಗಕ್ಕಾರ, ಮಹೇಲಾ ಜಯವರ್ಧನೆ ತಿರುಗೇಟು

    ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವೆ ನಡೆದಿದ್ದ 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಮೇಲಿನ ಫಿಕ್ಸಿಂಗ್ ಆರೋಪ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಆರೋಪಿಸಿದ್ದ ಶ್ರೀಲಂಕಾ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಳುತಗಾಮೆಗೆ ತಮ್ಮ ಹೇಳಿಕೆಗಳ ಕುರಿತು ಸ್ಪಷ್ಟನೆ ನೀಡಿ ಸಮರ್ಥಿಸಿಕೊಂಡಿದ್ದಾರೆ.

    ಫಿಕ್ಸಿಂಗ್ ಆರೋಪದಲ್ಲಿ ನಾನು ಯಾವುದೇ ಆಟಗಾರರ ಹೆಸರನ್ನು ಉಲ್ಲೇಖ ಮಾಡಿಲ್ಲ. ಆದರೆ ಮಾಜಿ ಆಟಗಾರರಾದ ಸಂಗಕ್ಕಾರ, ಜಯವರ್ಧನೆ ಅವರು ಏಕೆ ಇಷ್ಟು ತೀಷ್ಣವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎಂದು ಮಹಿಂದಾನಂದ ಪ್ರಶ್ನಿಸಿದ್ದಾರೆ.

    ಸರ್ಕಸ್ ಆರಂಭವಾಗಿದೆ ಎಂದು ಜಯವರ್ಧನೆ ಹೇಳುತ್ತಿದ್ದಾರೆ. ಆದರೆ ಈ ಇಬ್ಬರು ಆಟಗಾರರು ಏಕೆ ಇದಕ್ಕೆ ಹೆಚ್ಚು ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂಬುವುದು ತಿಳಿಯುತ್ತಿಲ್ಲ. ಅಲ್ಲದೇ ಫಿಕ್ಸಿಂಗ್ ಕುರಿತ ಆರೋಪ ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ ರಣತುಂಗಾ ಕೂಡ ಬಹಿರಂಗವಾಗಿಯೇ ಫಿಕ್ಸಿಂಗ್ ಕುರಿತು ಹೇಳಿದ್ದರು ಎಂದು ಮಹಿಂದಾನಂದ ಹೇಳಿದ್ದಾರೆ.

    ಇತ್ತ ಮಹಿಂದಾನಂದ ಹೇಳಿಕೆಗಳ ಕುರಿತು ಮತ್ತೊಮ್ಮೆ ಪ್ರತಿಕ್ರಿಯೆ ನೀಡಿ ಅಸಮಾಧಾನ ಹೊರ ಹಾಕಿರುವ ಜಯವರ್ಧನೆ, ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಮಾಡುವುದು ಅಷ್ಟು ಸುಲಭದ ವಿಚಾರವಲ್ಲ. ಆದರೆ ಪಂದ್ಯದ ಆಡುವ 12ರ ಬಳಗದಲ್ಲಿರೋ ಆಟಗಾರರು ಫಿಕ್ಸಿಂಗ್‍ನಲ್ಲಿ ಭಾಗಿಯಾಗದೆ ಹೇಗೆ ಫಿಕ್ಸಿಂಗ್ ನಡೆಸುತ್ತಾರೆ ಎಂಬುವುದೇ ತಿಳಿಯುತ್ತಿಲ್ಲ. ವಿಶ್ವಕಪ್ ಟೂರ್ನಿ ನಡೆದ 9 ವರ್ಷಗಳ ಬಳಿಕ ಈಗ ಆದರೂ ನಮಗೆ ಜ್ಞಾನೋದಾಯ ಕಲ್ಪಿಸಿ ಎಂದು ಆರೋಪಗಳಿಗೆ ತಿರುಗೇಟು ನೀಡಿದ್ದರು. ಮುಂಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಅಂದು ತಂಡದಲ್ಲಿದ್ದ ಜಯವರ್ಧನೆ ಶತಕ (103 ರನ್) ಸಿಡಿಸಿದ್ದರು.

    ಇತ್ತ ಮಾಜಿ ಕ್ರೀಡಾ ಸಚಿವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಶ್ರೀಲಂಕಾ ಸರ್ಕಾರ ಆರೋಪಗಳ ಕುರಿತು ತನಿಗೆ ಆದೇಶಿಸಿತ್ತು. ಫಿಕ್ಸಿಂಗ್‍ನಲ್ಲಿ ಆಟಗಾರ ಆಟಗಾರರ ಪಾತ್ರವಿಲ್ಲ. ಆದರೆ ಕೆಲ ಪಾರ್ಟಿಗಳು ಈ ಫಿಕ್ಸಿಂಗ್‍ನಲ್ಲಿ ಭಾಗಿಯಾಗಿವೆ ಎಂದು ಮಹಿಂದಾನಂದ ಮಾಡಿದ್ದ ಆರೋಪಗಳ ಸತ್ಯಾಸತ್ಯತೆ ಅರಿಯಲು ಶ್ರೀಲಂಕಾ ಸರ್ಕಾರ ತನಿಖೆಗೆ ಆದೇಶಸಿದೆ. ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಮೊದಲು ಬ್ಯಾಟ್ ಬೀಸಿ 275 ರನ್ ಗುರಿ ನೀಡಿತ್ತು. ಸವಾಲಿನ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾ ಗೌತಮ್ ಗಂಭಿರ್ 97 ರನ್, ಧೋನಿ 91 ರನ್‍ಗಳ ಬ್ಯಾಟಿಂಗ್ ನೆರವಿನಿಂದ ಭಾರತ ಗೆಲುವು ಪಡೆದಿತ್ತು.

  • ಮ್ಯಾಚ್ ಫಿಕ್ಸಿಂಗ್: ಅಫ್ಘಾನ್ ಸ್ಟಾರ್ ಕ್ರಿಕೆಟಿಗನಿಗೆ 6 ವರ್ಷ ನಿಷೇಧ!

    ಮ್ಯಾಚ್ ಫಿಕ್ಸಿಂಗ್: ಅಫ್ಘಾನ್ ಸ್ಟಾರ್ ಕ್ರಿಕೆಟಿಗನಿಗೆ 6 ವರ್ಷ ನಿಷೇಧ!

    ಕಾಬುಲ್: ಮ್ಯಾಚ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ (ಎಸಿಬಿ) ತನ್ನ ತಂಡದ ಸ್ಟಾರ್ ಕ್ರಿಕೆಟ್ ಆಟಗಾರ ಶಫಿಕುಲ್ಲಾ ಶಫಾಕ್ ಮೇಲೆ 6 ವರ್ಷ ಅಮಾನತು ಶಿಕ್ಷೆ ವಿಧಿಸಿದೆ.

    ಅಫ್ಘಾನಿಸ್ತಾನ ಪ್ರೀಮಿಯರ್ ಲೀಗ್ 2018ರ ಆವೃತ್ತಿ ಹಾಗೂ 2019ರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ನಲ್ಲಿ ಶಫಾಕ್ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದ ಪರಿಣಾಮ ಆತನ ವಿರುದ್ಧ ಐಸಿಸಿ ನಿಯಮ 2.1.1ರ ಅನ್ವಯ ನಿಷೇಧ ವಿಧಿಸಲಾಗಿದೆ ಎಂದು ಎಸಿಬಿ ಮಾಹಿತಿ ನೀಡಿದೆ.

    ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳಲು ವಿವಿಧ ರೀತಿ ಪ್ರಯತ್ನ ನಡೆಸಿದ್ದು ಮಾತ್ರವಲ್ಲದೇ, ಬುಕ್ಕಿಗಳು ಸಂಪರ್ಕ ಮಾಡಿದ್ದರು ಉದ್ದೇಶ ಪೂರ್ವಕವಾಗಿ ಬೋರ್ಡಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಆಟಗಾರ ಫಿಕ್ಸಿಂಗ್‍ನಲ್ಲಿ ಪಾಲ್ಗೊಂಡಿರುವುದಕ್ಕೆ ಬೋರ್ಡ್ ಅಸಮಾಧಾನ ವ್ಯಕ್ತಪಡಿಸಿದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ 30 ವರ್ಷದ ಶಫಾಕ್ ದೇಶದ ಪರ ಅಂತಿಮ ಪಂದ್ಯವನ್ನಾಡಿದ್ದು, ಇದುವರೆಗೂ 24 ಏಕದಿನ, 46 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.

    ವಿಶ್ವ ಕ್ರಿಕೆಟ್‍ನಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್, ಮೊಹಮ್ಮದ್ ನಬಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು. ಈ ಇಬ್ಬರು ಆಟಗಾರರ ಬಳಿಕ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಆಗಿರುವ ಶಫಾಕ್ ಸ್ಟಾರ್ ಕ್ರಿಕೆಟಿಗ ಎಂದು ಗುರುತಿಸಿಕೊಂಡಿದ್ದರು. ದೇಶಿಯ ಕ್ರಿಕೆಟ್‍ನಲ್ಲಿರುವಾಗಲೇ ಟಿ20 ಮಾದರಿಯಲ್ಲಿ ಕೇವಲ 71 ಎಸೆತಗಳಲ್ಲಿ 214 ರನ್ ಸಿಡಿಸಿದ್ದರು.

  • ಫಿಕ್ಸಿಂಗ್ ನಡೆಸಿ ನಿಷೇಧಕ್ಕೊಳಗಾದ ಪಾಕ್ ಕ್ರಿಕೆಟಿಗರು ಇವರೇ!

    ಫಿಕ್ಸಿಂಗ್ ನಡೆಸಿ ನಿಷೇಧಕ್ಕೊಳಗಾದ ಪಾಕ್ ಕ್ರಿಕೆಟಿಗರು ಇವರೇ!

    ಫಿಕ್ಸಿಂಗ್‍ಗೂ ಪಾಕಿಸ್ತಾನಕ್ಕೂ ಬಿಡದ ನಂಟು..!

    ಇಸ್ಲಾಮಾಬಾದ್: ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಎಂದಾಕ್ಷಣ ಪಾಕಿಸ್ತಾನ ಕ್ರಿಕೆಟ್ ಆಟಗಾರರ ಹೆಸರು ನೆನಪಾಗುತ್ತದೆ. ಕಳೆದ 2 ದಶಕಗಳಲ್ಲಿ ಸರಿ ಸುಮಾರು 8 ಮಂದಿ ಪಾಕಿಸ್ತಾನ ಕ್ರಿಕೆಟ್ ಆಟಗಾರರು ಮ್ಯಾಚ್ ಫಿಕ್ಸಿಂಗ್ ಕಾರಣದಿಂದ ನಿಷೇಧವನ್ನು ಎದುರಿಸಿದ್ದಾರೆ. ಈಗಲೂ ಕೂಡ ಪಾಕ್ ಕ್ರಿಕೆಟಿಗರೊಂದಿಗೆ ಫಿಕ್ಸಿಂಗ್ ನಡೆಸಲು ಬುಕ್ಕಿಗಳು ಮಾತುಕತೆ ನಡೆಸುತ್ತಿದ್ದಾರೆ ಎಂದರೇ ಆಟಗಾರರಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಸ್ಪಷ್ಟವಾಗುತ್ತದೆ.

    ಇತ್ತೀಚೆಗೆ ಪಾಕಿಸ್ತಾನ ಸೂಪರ್ ಲೀಗ್‍ಗೂ ಮುನ್ನ ಪಾಕಿಸ್ತಾನ ಅನುಭವಿ ಆಟಗಾರ ಉಮರ್ ಅಕ್ಮಲ್‍ರನ್ನು ಫಿಕ್ಸಿಂಗ್ ಮಾಡಲು ಬುಕ್ಕಿಗಳು ಸಂಪರ್ಕಿಸಿದ್ದರು. ಪರಿಣಾಮ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಕ್ಮಲ್‍ಗೆ ಮೂರು ವರ್ಷ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ಅಮಾನತು ಮಾಡಿದೆ. ಇದೇ ವೇಳೆ ಫಿಕ್ಸಿಂಗ್ ಕಾರಣದಿಂದ ನಿಷೇಧಕ್ಕೊಳಗಾದ ಆಟಗಾರರ ಪಟ್ಟಿ ಇಂತಿದೆ.

    ಸಲೀಂ ಮಲಿಕ್ (2000): ಮ್ಯಾಚ್ ಫಿಕ್ಸಿಂಗ್ ಕಾರಣದಿಂದ ಮೊದಲ ಬಾರಿಗೆ ಪಾಕ್ ಕ್ರಿಕೆಟ್ ಇತಿಹಾಸದಲ್ಲಿ ನಿಷೇಧಕ್ಕೆ ಒಳಗಾದ ಆಟಗಾರ ಸಲೀಂ ಮಲಿಕ್. ಆ ವೇಳೆ ಆತನ ಮೇಲೆ ಜೀವಮಾನದ ಅಮಾನತು ವಿಧಿಸಲಾಗಿತ್ತು. ಆದರೆ ಕೆಲ ಸಮಯದ ಬಳಿಕ ಆತನ ಮೇಲಿನ ಅಮಾನತು ವಾಪಸ್ ಪಡೆಯಲಾಗಿತ್ತು. ಆದರೆ 2008ರಲ್ಲಿ ಮತ್ತೊಮ್ಮೆ ಫಿಕ್ಸಿಂಗ್ ನಡೆಸಿ ಸಲೀಂ ಸಿಕ್ಕಿಹಾಕಿಕೊಂಡಿದ್ದ.

    ಅಟಾ-ಉರ್-ರೆಹಮಾನ್ (2000): ಫಿಕ್ಸಿಂಗ್ ನಡೆಸಲು ಬುಕ್ಕಿಗಳೊಂದಿಗೆ ಮಾತುಕತೆ ನಡೆಸಿದ ಕಾರಣದಿಂದ 2000ರಲ್ಲಿ ಆತನ ವಿರುದ್ಧ ಜೀವಮಾನದ ಅಮಾನತು ವಿಧಿಸಲಾಗಿತ್ತು. ಆದರೆ 2006 ರಲ್ಲಿ ಅಮಾನತು ಹಿಂಪಡೆಯಲಾಗಿತ್ತು.

    ಮೊಹಮ್ಮದ್ ಅಮಿರ್ (2011): ಇಂಗ್ಲೆಂಡ್ ಟೂರ್ನಿ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿ ನೋ ಬಾಲ್ ಎಸೆಯಲು ಬುಕ್ಕಿಗಳೊಂದಿಗೆ ಸ್ಪಾಟ್ ಫಿಕ್ಸಿಂಗ್ ಮಾಡಿಕೊಳ್ಳಲಾಗಿತ್ತು. 2010 ರಲ್ಲಿ ಅಮಿರ್ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದ. ಪರಿಣಾಮ 2011ರಲ್ಲಿ 5 ವರ್ಷ ಅಮಾನತು ಮಾಡಲಾಗಿತ್ತು. ಅಮಾನತು ಅಂತ್ಯವಾದ ಬಳಿಕ 2016ರಲ್ಲಿ ಮತ್ತೆ ಅಮಿರ್ ಪಾಕ್ ತಂಡಕ್ಕೆ ರೀ ಎಂಟ್ರಿ ಕೊಟ್ಟಿದ್ದ.

    ಮೊಹಮ್ಮದ್ ಆಸಿಫ್ (2011): ಸ್ಪಾಟ್ ಫಿಕ್ಸಿಂಗ್ ಭಾಗವಾಗಿ ನೋ ಬಾಲ್ ಎಸೆದಿದ್ದ ಆಸಿಫ್‍ಗೆ 7 ವರ್ಷ ಅಮಾನತು ವಿಧಿಸಿಲಾಗಿತ್ತು. ಆದರೆ ಆ ಬಳಿಕ ಅಮಾನತು ಶಿಕ್ಷೆಯನ್ನು 5 ವರ್ಷಕ್ಕೆ ಇಳಿಸಲಾಗಿತ್ತು. ಅಲ್ಲದೇ ವಿಚಾರಣೆ ಕಾರಣದಿಂದ ಆಸಿಫ್ 12 ತಿಂಗಳು ಜೈಲು ವಾಸ ಅನುಭವಿಸಿದ್ದ.

    ಸಲ್ಮಾನ್ ಭಟ್ (2011): 2010ರ ಇಂಗ್ಲೆಂಡ್ ಟೂರ್ನಿ ಭಾಗವಾಗಿ ನಡೆದಿದ್ದ ಟೂರ್ನಿಯಲ್ಲಿ ಅಮಿರ್, ಆಸಿಫ್‍ರೊಂದಿಗೆ ಭಟ್ ಕೂಡ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದ. ಪರಿಣಾಮ ಜೀವಮಾನ ನಿಷೇಧಕ್ಕೆ ಒಳಗಾಗಿದ್ದ ಭಟ್‍ಗೆ ಆ ಬಳಿಕ ಶಿಕ್ಷೆಯನ್ನು 5 ವರ್ಷಕ್ಕೆ ಇಳಿಸಲಾಗಿತ್ತು.

    ಡ್ಯಾನಿಶ್ ಕನೇರಿಯಾ (2010): ಪಾಕಿಸ್ತಾನ ಪರ ಆಡಿದ ಮೊದಲ ಹಿಂದೂ ಎಂಬ ದಾಖಲೆ ಬರೆದಿದ್ದ ಡ್ಯಾನಿಶ್ ಕನೇರಿಯಾ ಇಂಗ್ಲೆಂಡ್‍ನಲ್ಲಿ ನಡೆದಿದ್ದ ಕೌಂಟಿ ಕ್ರಿಕೆಟ್ ಟೂರ್ನಿ ಸಂದರ್ಭದಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದ. ಪರಿಣಾಮ ಆತನ ವಿರುದ್ಧ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಜೀವಮಾನ ನಿಷೇಧ ವಿಧಿಸಿತ್ತು. 2018 ರಲ್ಲಿ ಸ್ಪಾಟ್ ಫಿಕ್ಸಿಂಗ್ ಕುರಿತು ಮಾತನಾಡಿದ್ದ ಕನೇರಿಯಾ ಫಿಕ್ಸಿಂಗ್ ನಡೆಸಿದ್ದಾಗಿ ಒಪ್ಪಿಕೊಂಡಿದ್ದ.

    ಶಾರ್ಜೀಲ್ ಖಾನ್ (2018): ಪಾಕ್ ತಂಡದ ಆರಂಭಿಕ ಆಟಗಾರನಾಗಿದ್ದ ಶಾರ್ಜೀಲ್ ಖಾನ್ ಪಾಕ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ಪಾಕಿಸ್ತಾನ್ ಸೂಪರ್ ಲೀಗ್‍ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿ ಸಿಕ್ಕಿಹಾಕಿಕೊಂಡಿದ್ದ. ಪರಿಣಾಮ 5 ವರ್ಷ ಆತನನ್ನು ಅಮಾನತು ಮಾಡಲಾಗಿದೆ.

    ಉಮರ್ ಅಕ್ಮಲ್ (2020): ಪಾಕಿಸ್ತಾನ ಸೂಪರ್ ಲೀಗ್‍ನಲ್ಲಿ ಫಿಕ್ಸಿಂಗ್ ನಡೆಸಲು ಬುಕ್ಕಿಗಳು ಉಮರ್ ಅಕ್ಮಲ್‍ನನ್ನು ಸಂಪರ್ಕಿಸಿದ್ದರು. ಆದರೆ ಈ ವಿಚಾರವನ್ನು ಆತ ಪಾಕ್ ಕ್ರಿಕೆಟ್ ಬೋರ್ಡಿಗೆ ತಿಳಿಸಿರಲಿಲ್ಲ. ಪರಿಣಾಮ ಪಾಕ್ ಕ್ರಿಕೆಟ್ ಬೋರ್ಡಿನ ಭ್ರಷ್ಟಾಚಾರ ನಿಗ್ರಹ ಸಮಿತಿ ಉಮರ್ ಅಕ್ಮಲ್‍ಗೆ 3 ವರ್ಷ ನಿಷೇಧ ವಿಧಿಸಲಾಗಿದೆ.

  • ಕೋಟಿ ಕೋಟಿ ಹಣ ಸಂಪಾದನೆಗಾಗಿ ಆಟವನ್ನೇ ಪಣಕ್ಕಿಟ್ಟಿದ್ದವರ ವಿರುದ್ಧ ಚಾರ್ಚ್ ಶೀಟ್

    ಕೋಟಿ ಕೋಟಿ ಹಣ ಸಂಪಾದನೆಗಾಗಿ ಆಟವನ್ನೇ ಪಣಕ್ಕಿಟ್ಟಿದ್ದವರ ವಿರುದ್ಧ ಚಾರ್ಚ್ ಶೀಟ್

    – ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ: ದೋಷಾರೋಪ ಸಲ್ಲಿಕೆ

    ಬೆಂಗಳೂರು: ಕೋಟಿ ಕೋಟಿ ಹಣ ಸಂಪಾದನೆಗಾಗಿ ಕ್ರಿಕೆಟ್ ಆಟವನ್ನೇ ಪಣಕ್ಕಿಟ್ಟಿದವರು ಅಂದರ್ ಆಗಿದ್ದು ಆಯ್ತು, ಬೇಲ್‍ನ ಮೇಲೆ ಬಿಡುಗಡೆಯೂ ಆದರು. ಆದ್ರೀಗ ಆ ಎಲ್ಲಾ ಖತರ್ನಾಕ್ ಟೀಂ ಮೇಲೆ ಸಿಸಿಬಿ ಪೊಲೀಸರು ದೋಷಾರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದಾರೆ. ಆರೋಪಿಗಳು ಯಾವ ರೀತಿಯಲ್ಲಿ ಪ್ರಕರಣಕ್ಕೆ ಕೈ ಜೋಡಿಸಿದ್ದರು ಎನ್ನುವುದನ್ನು ಸಾಕ್ಷ್ಯ ಸಮೇತ ಸಿಸಿಬಿ ಪೊಲೀಸರು ಬಿಚ್ಚಿಟ್ಟಿದ್ದಾರೆ.

    ಕೆಪಿಎಲ್‍ನ ಎರಡು ಟೀಂಗಳ ಮಾಲೀಕರಾದ ಆಲಿ, ಅರವಿಂದ ರೆಡ್ಡಿ, ಆಟಗಾರರಾದ ಗೌತಮ್, ಖಾಜಿ ವಿರುದ್ಧ ಪ್ರಾಥಮಿಕ ದೋಷಾರೋಪ ಪಟ್ಟಿಯನ್ನು ಸಿಸಿಬಿ ಪೊಲೀಸರು ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್‍ನಲ್ಲಿ ಉಲ್ಲೇಖವಾದ ಪ್ರಮುಖ ಅಂಶಗಳ ಪ್ರಕಾರ, ಮೊದಲು ಅಂತರರಾಷ್ಟ್ರೀಯ ಮಟ್ಟದ ಬುಕ್ಕಿಗಳಿಂದ ಕೆಪಿಎಲ್ ತಂಡಗಳ ಮಾಲೀಕರ ಸಂಪರ್ಕವಾಗಿತ್ತು. ಬಳಿಕ ಮ್ಯಾಚ್ ಫಿಕ್ಸಿಂಗ್ ಬಗ್ಗೆ ದುರಾಲೋಚನೆಯುಳ್ಳ ಮಾಲೀಕರು ತಮ್ಮ ತಂಡದ ಕೆಲ ಆಟಗಾರರನ್ನು ಸಂಪರ್ಕಿಸಿದ್ದರು. ನಂತರ ಆಟಗಾರರು ಹಾಗೂ ಬುಕ್ಕಿಗಳು ಜೊತೆ ಅನ್ಯೋನ್ಯತೆ ಬೆಳೆಸಿ ಫಿಕ್ಸಿಂಗ್ ನಡೆದಿತ್ತು ಎಂದು ತಿಳಿಸಲಾಗಿದೆ.

    ಮ್ಯಾಚ್ ಫಿಕ್ಸಿಂಗ್ ಟ್ರಿಕ್ಸ್:
    * ಒಂದು ಓವರಿನಲ್ಲಿ 10ಕ್ಕೂ ಹೆಚ್ಚು ರನ್ ನೀಡುವಂತೆ ಡೀಲ್
    * ಅತಿ ಹೆಚ್ಚು ಬಾಲ್‍ಗಳಲ್ಲಿ ಕಡಿಮೆ ರನ್ ಗಳಿಸುವಂತೆ ಫಿಕ್ಸ್
    * ಫುಲ್ ಸ್ಲೀವ್ ಶರ್ಟ್ ಅನ್ನು ಅರ್ಧಕ್ಕೆ ಏರಿಸಿಕೊಂಡು ಸಿಗ್ನಲ್
    * ಪದೇ ಪದೇ ಬ್ಯಾಟ್‍ಗಳನ್ನು ಬದಲಿಸುವ ರೀತಿ ಸಿಗ್ನಲ್ ನೀಡುತ್ತಿದ್ದ ಫಿಕ್ಸರ್ಸ್

  • ದಕ್ಷಿಣ ಏಷ್ಯಾದಲ್ಲೇ ಮೊದಲು- ಶ್ರೀಲಂಕಾದಲ್ಲಿ ಮ್ಯಾಚ್ ಫಿಕ್ಸಿಂಗ್ ಕ್ರಿಮಿನಲ್ ಅಪರಾಧ

    ದಕ್ಷಿಣ ಏಷ್ಯಾದಲ್ಲೇ ಮೊದಲು- ಶ್ರೀಲಂಕಾದಲ್ಲಿ ಮ್ಯಾಚ್ ಫಿಕ್ಸಿಂಗ್ ಕ್ರಿಮಿನಲ್ ಅಪರಾಧ

    ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ಮಂಡಳಿ ಮ್ಯಾಚ್ ಫಿಕ್ಸಿಂಗ್ ವಿರುದ್ಧ ಕಠಿಣ ನಿಯಮಗಳನ್ನು ಜಾರಿ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಕಳ್ಳಾಟ ಪ್ರಕರಣಗಳನ್ನು ಕ್ರಿಮಿನಲ್ ಅಪರಾಧದ ಅಡಿ ಪರಿಗಣಿಸುವ ಕಾಯ್ದೆಗೆ ಶ್ರೀಲಂಕಾ ಸಂಸತ್ ಅನುಮೋದನೆ ನೀಡಿದೆ.

    ಕಳೆದ ಕೆಲ ವರ್ಷಗಳಿಂದ ಮ್ಯಾಚ್ ಫಿಕ್ಸಿಂಗ್ ಹಾಗೂ ಕ್ರೀಡಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಿಂದ ಸಂಕಷ್ಟ ಎದುರಿಸಿದ್ದ ಶ್ರೀಲಂಕಾ ಕ್ರಿಕೆಟ್ ಬೋರ್ಡ್, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಯಮಗಳ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿತ್ತು. ಸದ್ಯ ಈ ಪ್ರಸ್ತಾವನೆಗಳನ್ನು ಸ್ವೀಕರಿಸಿರುವ ಸರ್ಕಾರ ಪಾರ್ಲಿಮೆಂಟ್‍ನಲ್ಲಿ ಮಸೂದೆಗೆ ಅನುಮೋದನೆ ನೀಡಿದೆ.

    ಹೊಸ ಕಾಯ್ದೆಯ ಅನ್ವಯ ಕ್ರೀಡಾ ಕಳ್ಳಾಟ, ಭ್ರಷ್ಟಾಚಾರ ಪ್ರಕರಣಗಳನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಿ ತನಿಖೆ ನಡೆಸುವುದು ಹಾಗೂ ಇಂತಹ ಪ್ರಕರಣದಲ್ಲಿ ಅಪರಾಧಿಗೆ 10 ವರ್ಷವರೆಗೂ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶ ನೀಡಲಾಗಿದೆ.

    ಶ್ರೀಲಂಕಾ ಕ್ರೀಡಾ ಸಚಿವ ಹರಿನ್ ಫರ್ನಾಂಡೋ ಮಸೂದೆಯನ್ನು ಸದನದಲ್ಲಿ ಮಂಡನೆ ಮಾಡಿದರು. ಈ ಕಾಯ್ದೆಗೆ ಸಚಿವ, ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ ರಣತುಂಗ ಬೆಂಬಲ ನೀಡಿದ್ದರು. ಈ ಕಾಯ್ದೆಯನ್ನು ಜಾರಿ ಮಾಡಲು ಕ್ರೀಡಾ ಸಚಿವಾಲಯ ಐಸಿಸಿಯೊಂದಿಗೆ ಮಾತುಕತೆ ನಡೆಸಿತ್ತು. ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ವ್ಯಕ್ತಿ ಮಾತ್ರವಲ್ಲದೇ ಈ ಇದಕ್ಕೆ ನೆರವು ನೀಡುವ ವ್ಯಕ್ತಿಗಳಿಗೂ ಶಿಕ್ಷೆ ನೀಡಲು ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಅಲ್ಲದೇ ಭ್ರಷ್ಟಾಚಾರದಲ್ಲಿ ಪಾಲ್ಗೊಂಡದ ಈಗಿನ ಆಟಗಾರರು ಮಾತ್ರವಲ್ಲದೇ ಮಾಜಿ ಆಟಗಾರರಿಗೂ ಈ ಕಾಯ್ದೆ ಅನ್ವಯವಾಗುತ್ತದೆ.

  • ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ- ಇಬ್ಬರು ಆಟಗಾರರು ಅರೆಸ್ಟ್

    ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ- ಇಬ್ಬರು ಆಟಗಾರರು ಅರೆಸ್ಟ್

    ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಪಂದ್ಯಾವಳಿಯ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಕರ್ನಾಟಕ ತಂಡದ 2 ಆಟಗಾರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    2019ರ ಕೆಪಿಎಲ್ ಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿತ್ತು ಎಂಬ ಆರೋಪವಿದೆ. ಈ ಹಿನ್ನೆಲೆ ತನಿಖೆ ತೀವ್ರಗೊಳಿಸಿದ ಸಿಸಿಬಿ ಪೊಲೀಸರ ಬಲೆಗೆ ಬಳ್ಳಾರಿ ಟಸ್ಕರ್ಸ್ ತಂಡದ ಇಬ್ಬರು ಆಟಗಾರರು ಸಿಕ್ಕಿಬಿದ್ದಿದ್ದಾರೆ. ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿಎಂ ಗೌತಮ್ ಹಾಗೂ ಅಬ್ರರ್ ಖಾಜಿ ಬಂಧನಕ್ಕೊಳಗಾದ ಆಟಗಾರರು. ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡುವುದಾಗಿ ಆಟಗಾರರು 20 ಲಕ್ಷ ರೂ. ಹಣ ಪಡೆದಿದ್ದರು. ಬುಕ್ಕಿಗಳ ಬಳಿ ಹಣ ಪಡೆದು ಇಬ್ಬರು ಆಟಗಾರರು ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

    ಸಿಎಂ ಗೌತಮ್ ಅವರು ಕರ್ನಾಟಕದ ಪರವಾಗಿ ರಣಜಿ ಪಂದ್ಯಗಳಲ್ಲಿ, ಐಪಿಎಲ್‌ನಲ್ಲಿ ಮುಂಬೈ, ಆರ್‌ಸಿಬಿ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಟವಾಡಿದ್ದರು. ಇತ್ತ ಅಬ್ರರ್ ಖಾಜಿ ಕೂಡ ಕರ್ನಾಟಕ ತಂಡದ ರಣಜಿ ಆಟಗಾರರಾಗಿದ್ದಾರೆ. ಸದ್ಯ ಇಬ್ಬರು ಆಟಗಾರರನ್ನು ಬಂಧಿಸಿದ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಆಗಸ್ಟ್ 31ರಂದು ಮೈಸೂರಿನಲ್ಲಿ ಬಳ್ಳಾರಿ ಟಸ್ಕರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ನಡುವೆ ಕೆಪಿಎಲ್ ಫೈನಲ್ ಪಂದ್ಯ ನಡೆದಿತ್ತು. ಇದೇ ವೇಳೆ ಪಂದ್ಯದಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪವಿದೆ. ಈಗಾಗಲೇ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಫ್ಯಾಂಥರ್ಸ್ ತಂಡದ ಮಾಲೀಕ ಅಶ್ಪಾಕ್ ಅಲಿ ತಾರ್, ಬಳ್ಳಾರಿ ಟಸ್ಕರ್ಸ್ ತಂಡದ ಡ್ರಮ್ಮರ್ ಭವೇಶ್, ಬೆಂಗಳೂರು ಬ್ಲಾಸ್ಟರ್ ತಂಡದ ಬೌಲಿಂಗ್ ಕೋಚ್ ವಿನು ಪ್ರಸಾದ್ ಹಾಗೂ ಬ್ಯಾಟ್ಸ್‌ಮನ್ ವಿಶ್ವನಾಥನ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ದೆಹಲಿಯ ಇಬ್ಬರು ಬುಕ್ಕಿಗಳ ಬಂಧನಕ್ಕೆ ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ. ಈ ಹಿನ್ನೆಲೆ ಬುಕ್ಕಿಗಳಾದ ಜತ್ತಿನ್, ಸಯ್ಯಾಂ ವಿದೇಶದಲ್ಲಿ ತಲೆ ಮರಿಸಿಕೊಂಡಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

  • ‘ನನ್ನ ಮಗುವಿನ ಮೇಲಾಣೆ ತಪ್ಪು ಮಾಡಿಲ್ಲ’: ಶ್ರೀಶಾಂತ್

    ‘ನನ್ನ ಮಗುವಿನ ಮೇಲಾಣೆ ತಪ್ಪು ಮಾಡಿಲ್ಲ’: ಶ್ರೀಶಾಂತ್

    ನವದೆಹಲಿ: ಕಳೆದ ತಿಂಗಳು ಭಾತದ ವೇಗಿ ಶ್ರೀಶಾಂತ್ ಮೇಲಿನ ನಿಷೇಧವನ್ನು ಕಡಿಮೆ ಮಾಡಿ ಬಿಸಿಸಿಐ ಸಮಿತಿ ನಿರ್ಣಯ ತೆಗೆದುಕೊಂಡಿದ್ದು ಎಲ್ಲರಿಗೂ ತಿಳಿದಿದೆ. ಸ್ಪಾಟ್ ಫಿಕ್ಸಿಂಗ್ ಆರೋಪದ ಕುರಿತು ಇತ್ತೀಚೆಗೆ ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀಶಾಂತ್, ‘ನನ್ನ ಮಗುವಿನ ಮೇಲಾಣೆ ನಾನು ಆ ತಪ್ಪು ಮಾಡಿಲ್ಲ’ ಎಂದು ಭಾವುಕರಾಗಿದ್ದಾರೆ.

    ನನ್ನ ತಂದೆ, ಮಗುವಿನ ಮೇಲಾಣೆ, ನಾನು ಯಾವುದೇ ರೀತಿಯ ಫಿಕ್ಸಿಂಗ್ ಮಾಡಿಲ್ಲ. ಅಂತಹ ಯೋಚನೆಯೇ ನನಗೆ ಬಂದಿಲ್ಲ. ಇಂದು ನನ್ನ ತಂದೆ, ತಾಯಿ ಅನಾರೋಗ್ಯದಿಂದ ಬಳುತ್ತಿದ್ದಾರೆ. ಕಳೆದ 5 ವರ್ಷಗಳಿಂದಲೂ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದು, ಇಂದು ನಾನು ಆಡುವ ಪಂದ್ಯವನ್ನು ಅವರು ನೋಡಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾರೆ. 100 ಕೋಟಿ ರೂ. ಕೊಟ್ಟರೂ ನಾನು ಅಂತಹ ಕೆಲಸ ಮಾಡುವುದಿಲ್ಲ ಎಂದು ಶ್ರೀಶಾಂತ್ ಹೇಳಿದ್ದಾರೆ.

    ಮುಂದಿನ ವರ್ಷದ ಆಗಸ್ಟ್ ವೇಳೆಗೆ ಶ್ರೀಶಾಂತ್ ಮೇಲಿನ ನಿಷೇಧದ ಅವಧಿ ಪೂರ್ಣಗೊಳ್ಳಲಿದ್ದು, 7 ವರ್ಷದ ನಿಷೇಧದ ಅವಧಿ ಅಂತ್ಯವಾಗಲಿದೆ. ನಿಷೇಧ ತೆರವಾದ ಬಳಿಕ ಮತ್ತೆ ತಾವು ಕ್ರಿಕೆಟ್ ಆಡಬೇಕು ಎಂದು ಶ್ರೀಶಾಂತ್ ಹೇಳಿದ್ದು, ವಿಶ್ವ ಕ್ರಿಕೆಟ್‍ನಲ್ಲಿ ಹಲವು ಲೀಗ್ ಆಡುತ್ತಿದ್ದಾರೆ. ನನ್ನ ಕುಟುಂಬವನ್ನು ರಕ್ಷಣೆ ಮಾಡಿಕೊಳ್ಳಲು ನಾನು ಕ್ರಿಕೆಟ್‍ಗೆ ಕಮ್ ಬ್ಯಾಕ್ ಮಾಡಬೇಕಿದೆ ಎಂದು ಹೇಳಿದ್ದಾರೆ.