Tag: Master Hirannaiah

  • ಅನಂತದಲ್ಲಿ ಮಾಸ್ಟರ್ ಹಿರಣ್ಣಯ್ಯ ಲೀನ

    ಅನಂತದಲ್ಲಿ ಮಾಸ್ಟರ್ ಹಿರಣ್ಣಯ್ಯ ಲೀನ

    ಬೆಂಗಳೂರು: ಹಿರಿಯ ರಂಗಕರ್ಮಿ, ಚತುರ ಮಾತುಗಾರ ಮಾಸ್ಟರ್ ಹಿರಣ್ಣಯ್ಯ(85) ಅವರ ಅಂತ್ಯ ಸಂಸ್ಕಾರವು ಬ್ರಾಹ್ಮಣ ಸಂಪ್ರದಾಯದಂತೆ ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ಇಂದು ನೆರವೇರಿತು.

    ಹಿರಣ್ಣಯ್ಯ ಅವರ ಪುತ್ರರಾದ ಬಾಬು ಹಿರಣ್ಣಯ್ಯ, ಶ್ರೀಕಾಂತ್ ಹಿರಣ್ಣಯ್ಯ ಮತ್ತು ಗುರುನಾಥ್ ಹಿರಣ್ಣಯ್ಯ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಕುಟುಂಬಸ್ಥರು ಹಾಗೂ ಹಿರಣ್ಣಯ್ಯ ಅವರ ಕೆಲ ಆಪ್ತರ ಉಪಸ್ಥಿತಿಯಲ್ಲಿ ಅಂತಿಮ ವಿಧಿವಿಧಾನ ನಡೆಯಿತು.

    ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಹಿರಣ್ಣಯ್ಯನವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಬನಶಂಕರಿಯ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ಸುಮಾರು 9.30ರ ಹೊತ್ತಿಗೆ ಕೊನೆಯುಸಿರೆಳೆದರು.

    ಹಿರಣಯ್ಯ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ರಂಗಭೂಮಿ, ಸಿನಿಮಾ, ರಾಜಕೀಯ ನಾಯಕರು, ಹಿರಣ್ಣಯ್ಯ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು. ಅವರ ನಿಧನಕ್ಕೆ ಕುಟುಂಬಸ್ಥರು, ಗಣ್ಯರು, ಆಪ್ತರು ಹಾಗೂ ಕನ್ನಡ ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ.

    ಕರ್ನಾಟಕದ ರಾಜಕಾರಣಿಗಳನ್ನು ಮಾತಿನ ಮೂಲಕವೇ ಹಿರಣಯ್ಯ ಅವರು ತಿವಿಯುತ್ತಿದ್ದರು. ರಾಜ್ಯೋತ್ಸವ, ನಾಟಕ ಅಕಾಡೆಮಿ, ರಂಗಭೂಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ನವರತ್ನ ರಾಂ ಪ್ರಶಸ್ತಿ ಜೊತೆಗೆ ಕಲಾಗಜ ಸಿಂಹ ಬಿರುದು ಜೊತೆಗೆ ನಟ ರತ್ನಾಕರ ಬಿರುದು ಹಿರಣ್ಣಯ್ಯನವರಿಗೆ ಲಭಿಸಿತ್ತು.

    ಹಿರಣ್ಣಯ್ಯ ಅಗಲಿಕೆ ರಾಜಕಾರಣಿಗಳು ಸಹ ಕಂಬನಿ ಮಿಡಿದಿದ್ದಾರೆ. ರಂಗಭೂಮಿಗೆ ತುಂಬಲಾರದ ನಷ್ಟ ಎಂದ ರಾಜಕಾರಣಿಗಳು, ರಾಜಕಾರಣದ ಹುಳುಕುಗಳನ್ನು ವಿಡಂಬಿಸಿ ಹೇಳುತ್ತಿದ್ದ ಅವರ ಶೈಲಿ ಮನಮುಟ್ಟುವಂತ್ತಿತ್ತು ಅಂತ ನಾಯಕರು ಸ್ಮರಿಸಿಕೊಂಡಿದ್ದಾರೆ. ಪ್ರಕೃತಿ ಚಿಕಿತ್ಸೆಯಲ್ಲಿರುವ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪಿಎಂ ದೇವೇಗೌಡರು ಟ್ವಿಟ್ಟರ್‍ನಲ್ಲಿ ಸಂತಾಪ ಸೂಚಿಸಿದರು.

    ಕನ್ನಡ ಸಿನಿಮಾದಲ್ಲಿ ಡಾ.ರಾಜ್‍ಕುಮಾರ್ ಎಷ್ಟು ಜನಪ್ರಿಯರೋ ರಂಗಭೂಮಿಯಲ್ಲಿ ಅಷ್ಟೇ ಹೆಸರು ಮಾಡಿದ್ದವರು ಮಾಸ್ಟರ್ ಹಿರಣ್ಣಯ್ಯ. ರಂಗಭೂಮಿಯ ದೈತ್ಯ ಅಂತಲೇ ಹೆಸರಾಗಿದ್ದ ಹಿರಣ್ಣಯ್ಯ, ಸಮಾಜದ ಹುಳುಕನ್ನು ವಿಡಂಬನಾತ್ಮಕವಾಗಿ ವಿಶ್ಲೇಷಿಸುವ ಮೂಲಕ ಟೀಕೆ-ಟಿಪ್ಪಣಿ ಮೂಲಕವೇ ಬದುಕನ್ನು ಕಟ್ಟಿಕೊಂಡವರು. ಸರ್ಕಾರವೇ ಆಗಲಿ, ರಾಜಕಾರಣಿಯೇ ಆಗಲಿ, ವ್ಯಕ್ತಿಯೇ ಆಗಲಿ, ವೇದಿಕೆಯಲ್ಲೇ ಟೀಕಿಸುತ್ತಿದ್ದರು.

    https://www.youtube.com/watch?v=ac2yUL65-10

  • ವೇದಿಕೆಯ ಮೇಲೆ ಸಿದ್ದು ಅಭಿಮಾನಿಗಳಿಂದ ಗಲಾಟೆ – ಪೊಲೀಸ್ ಭದ್ರತೆಯೊಂದಿಗೆ ಹಿರಣ್ಣಯ್ಯರನ್ನು ಕಳುಹಿಸಿಕೊಟ್ಟ ಮಾಜಿ ಸಿಎಂ

    ವೇದಿಕೆಯ ಮೇಲೆ ಸಿದ್ದು ಅಭಿಮಾನಿಗಳಿಂದ ಗಲಾಟೆ – ಪೊಲೀಸ್ ಭದ್ರತೆಯೊಂದಿಗೆ ಹಿರಣ್ಣಯ್ಯರನ್ನು ಕಳುಹಿಸಿಕೊಟ್ಟ ಮಾಜಿ ಸಿಎಂ

    ಕೆಪಿ ನಾಗರಾಜ್
    ಮೈಸೂರಿನ ಗಾನಭಾರತಿ ಸಭಾಂಗಣದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಅತ್ಯಂತ ಕೀಳು ಮಟ್ಟದ ಪದ ಪ್ರಯೋಗಿಸಿ ಲೇವಡಿ ಮಾಡಿದ್ದರು.

    ಈ ವಿಚಾರ ತಿಳಿದು ಸಿದ್ದರಾಮಯ್ಯ ಅವರ ಅಭಿಮಾನಿಗಳು ಅದೇ ವೇದಿಕೆ ಏರಿ ದೊಡ್ಡ ಗಲಾಟೆ ಮಾಡಿದ್ದರು. ಈ ಗಲಾಟೆ ಕಂಡು ಹಿರಣ್ಣಯ್ಯ ಅವರು ಅಕ್ಷರಶಃ ಗಾಬರಿ ಆಗಿದ್ದರು. ತಾವು ಸುರಕ್ಷಿತವಾಗಿ ಬೆಂಗಳೂರು ತಲುಪುವುದು ಕಷ್ಟ ಎಂಬಷ್ಟರ ಮಟ್ಟಿಗೆ ಆತಂಕಕ್ಕೆ ಒಳಗಾಗಿದ್ದರು. ಕಾಕಾತಾಳೀಯ ಎಂಬಂತೆ ಅವತ್ತು ಸಿದ್ದರಾಮಯ್ಯ ಮೈಸೂರಿನ ಶಾರದದೇವಿ ನಗರದಲ್ಲಿನ ತಮ್ಮ ಮನೆಯಲ್ಲಿದ್ದರು. ಅವರಿಗೂ ಈ ವಿಚಾರ ತಿಳಿಯಿತು.

    ಸಿದ್ದರಾಮಯ್ಯ ಅವರು ಮನೆಯಲ್ಲಿದ್ದಾರೆ ಎಂಬ ವಿಚಾರ ತಿಳಿದ ಹಿರಣ್ಣಯ್ಯ ನೇರವಾಗಿ ಸಿದ್ದರಾಮಯ್ಯ ಬಳಿ ಬಂದು ಏನೋ ಬಾಯಿ ತಪ್ಪಿ ನಿಮ್ಮ ಬಗ್ಗೆ ‘ಆ’ ಪದ ಬಳಸಿ ಬಿಟ್ಟೆ. ನಿಮ್ಮವರಿಗೆ ಶಾಂತವಾಗಿರೋಕೆ ಹೇಳಿ. ನನ್ನನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕಳುಹಿಸಿ ಎಂದು ಕೇಳಿ ಕೊಂಡರು. ಆಗ ಸಿದ್ದರಾಮಯ್ಯ “ಇರಲಿ ಬಿಡಿ ನೀವು ಹಿರಿಯರಿದ್ದೀರಿ. ಏನೋ ಒಂದು ಮಾತು ಅಂದಿದ್ದೀರಿ. ಬೇಸರವಿಲ್ಲ. ನಮ್ಮವರಿಗೆ ನಿಮ್ಮ ವಿರುದ್ಧ ಗಲಾಟೆ ಮಾಡಬೇಡಿ ಅಂತಾ ಹೇಳ್ತೀನಿ” ಎಂದು ಹೇಳಿ ತಮ್ಮ ಪರವಾಗಿ ಗಲಾಟೆ ಮಾಡಿದವರನ್ನು ಮನೆಗೆ ಕರೆಸಿ ಏನೋ ಆಗಿದ್ದು ಆಗಿದೆ ಅವರು ಹಿರಿಯರು ಅವರ ಮೇಲೆ ಗಲಾಟೆ ಮಾಡಕೂಡದು ಅಂತಾ ಸೂಚನೆ ಕೊಟ್ಟರು.

    ಇಷ್ಟಾದರೂ ಹಿರಣ್ಣಯ್ಯ ಅವರಿಗೆ ಗಾಬರಿ ಕಡಿಮೆ ಆಗಿರಲಿಲ್ಲ. ಇನ್ನೂ ಆತಂಕದಲ್ಲೆ ಇದ್ದರು. ಇದನ್ನು ಗಮನಿಸಿದ ಸಿದ್ದರಾಮಯ್ಯ ಅವರು ಖುದ್ದಾಗಿ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಕರೆ ಮಾಡಿ, ಹಿರಣ್ಣಯ್ಯ ಅವರ ಕಾರನ್ನು ಎಸ್ಕಾರ್ಟ್ ಮಾಡಿಕೊಂಡು ಸುರಕ್ಷಿತವಾಗಿ ಮೈಸೂರಿನಿಂದ ಬೆಂಗಳೂರಿಗೆ ಕಳುಹಿಸಿ ಎಂದು ಸೂಚಿಸಿದರು. ಅದರಂತೆ ಅವರು ಬಹಳ ಸುರಕ್ಷಿತವಾಗಿ ಮೈಸೂರಿನಿಂದ ಬೆಂಗಳೂರಿಗೆ ಹೋದರು. ಅವತ್ತು ಹಿರಣ್ಣಯ್ಯ ಅವರು ಸಿದ್ದರಾಮಯ್ಯ ಅವರ ಮೇಲೆ ಬಳಸಿದ ಪದಗಳು ಅತ್ಯಂತ ಹೀನ ಮತ್ತು ತೀರಾ ಕೆಳಮಟ್ಟದ ಪದಗಳು. ಇದನ್ನು ಸಿದ್ದರಾಮಯ್ಯ ವೀಡೀಯೋದಲ್ಲಿ ನೋಡಿದ್ದರು. ಆದರೂ ಅವರು ಅತ್ಯಂತ ಸಮಚಿತ್ತದಿಂದ ವರ್ತಿಸಿದ್ದರು.

  • ‘ಗಜ’ ಚಿತ್ರದಲ್ಲಿ ಅಭಿನಯಿಸಿದ ನೆನಪುಗಳು ಸದಾ ನನ್ನೊಂದಿಗಿದೆ – ದರ್ಶನ್

    ‘ಗಜ’ ಚಿತ್ರದಲ್ಲಿ ಅಭಿನಯಿಸಿದ ನೆನಪುಗಳು ಸದಾ ನನ್ನೊಂದಿಗಿದೆ – ದರ್ಶನ್

    ಬೆಂಗಳೂರು: ಹಿರಿಯ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರು ವಯೋಸಹಜ ಕಾಯಿಲೆಯಿಂದ ಇಂದು ವಿಧಿವಶರಾಗಿದ್ದು, ಸ್ಯಾಂಡಲ್‍ವುಡ್ ನಟ-ನಟಿಯವರು ಅವರ ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ.

    ನಟ ದರ್ಶನ್ ಅವರು ಹಿರಣ್ಣಯ್ಯ ಅವರ ಅಂತಿಮ ದರ್ಶನ ಮುಗಿಸಿ ವಾಪಸ್ ತೆರಳುವಾಗ ಗರಂ ಆಗಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಡಿ ಬಾಸ್ ಎಂದು ಹೊಗಳಲು ಮುಂದಾಗಿದ್ದಾನೆ. ಇದರಿಂದ ಕೋಪಗೊಂಡ ದರ್ಶನ್ ಸುಮ್ಮನಿರು ಎಂದು ಅಭಿಮಾನಿ ವಿರುದ್ಧ ಗರಂ ಆಗಿದ್ದರು.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ದರ್ಶನ್, ಅವರ ಬಗ್ಗೆ ಮಾತನಾಡಲು ನಾನು ಚಿಕ್ಕವನು. ಸಮಾಜದ ಆಗು ಹೋಗುಗಳ ಬಗ್ಗೆ ನಾಟಕೀಯ ಶೈಲಿಯಲ್ಲಿ ಎಲ್ಲರಿಗೂ ತಿಳಿಸುತ್ತಿದ್ದರು. ಈ ಸಮಯದ ಅವರ ಬಗ್ಗೆ ಮಾತನಾಡುವ ಶಕ್ತಿಯಿಲ್ಲ ಎಂದು ದುಃಖದಿಂದ ಹೇಳಿದರು.

    “ಕನ್ನಡ ರಂಗಭೂಮಿಯ ಹಿರಿಯ, ಪ್ರಸಿದ್ಧ ಕಲಾವಿದರಾದ ಮಾಸ್ಟರ್ ಹಿರಣ್ಣಯ್ಯ ಅವರು ಇಂದು ವಿಧಿವಶರಾಗಿದ್ದಾರೆ. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅವರೊಡನೆ ‘ಗಜ’ ಚಿತ್ರದಲ್ಲಿ ಅಭಿನಯಿಸಿದ ನೆನಪುಗಳು ಸದಾ ನನ್ನೊಂದಿಗಿರುತ್ತದೆ” ಎಂದು ಟ್ವೀಟ್ ಮಾಡುವ ಮೂಲಕ ಹಿರಣ್ಣಯ್ಯ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

    https://www.youtube.com/watch?v=xN_gkfktoqY

  • ‘ರಂಗಭೂಮಿಯ ಅಪೂರ್ವ ರತ್ನ’ – ಹಿರಣ್ಣಯ್ಯ ನಿಧನಕ್ಕೆ ಗಣ್ಯರ ಸಂತಾಪ

    ‘ರಂಗಭೂಮಿಯ ಅಪೂರ್ವ ರತ್ನ’ – ಹಿರಣ್ಣಯ್ಯ ನಿಧನಕ್ಕೆ ಗಣ್ಯರ ಸಂತಾಪ

    ಬೆಂಗಳೂರು: ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಸೇರಿದಂತೆ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಮಾಸ್ಟರ್ ಹಿರಣ್ಣಯ್ಯ ಅವರ ಲಂಚಾವತಾರ, ನಡುಬೀದಿ ನಾರಾಯಣ ಮೊದಲಾದ ನಾಟಕಗಳು ಜನಮಾನಸದಲ್ಲಿ ಹಚ್ಚ ಹಸಿರಾಗಿ ಉಳಿಯುವಂತವು. ಸಮಾಜದ ಪಿಡುಗುಗಳಿಗೆ ವಿಡಂಬನೆಯ ಚುಚ್ಚುಮದ್ದು ನೀಡುವುದು ಅವರ ವೈಶಿಷ್ಟ್ಯವಾಗಿತ್ತು ಎಂದು ಮುಖ್ಯಮಂತ್ರಿಗಳು ಸ್ಮರಿಸಿಕೊಂಡಿದ್ದಾರೆ.

    ಅವರ ನಿಧನದಿಂದ ರಂಗಭೂಮಿ ಒಂದು ಅಪೂರ್ವ ರತ್ನವನ್ನು ಕಳೆದುಕೊಂಡಂತಾಗಿದೆ ಎಂದು ಬಣ್ಣಿಸಿದ್ದು, ಮೃತರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಅವರ ಕುಟುಂಬ ಅಪಾರ ಅಭಿಮಾನಿ ಬಳಗಕ್ಕೆ ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

    ಸಿದ್ದರಾಮಯ್ಯ: ದಶಕಗಳ ಕಾಲ ವೃತ್ತಿ ರಂಗಭೂಮಿಯ ಕಾಯಕ ಮಾಡಿದ್ದ ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರ ಅಗಲಿಕೆಯ ಸುದ್ದಿ ನೋವುಂಟು ಮಾಡಿದೆ. ಹಾಸ್ಯ, ಅಭಿನಯ, ಹರಿತ ಸಂಭಾಷಣೆ ಅವರ ವೈಶಿಷ್ಟ್ಯ. ಅವರ ಕುಟುಂಬ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಎಚ್‍ಡಿಡಿ: ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯನವರು ವಿಧಿವಶರಾದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಥಾವಸ್ತುವೇ ಪ್ರಮುಖವಾಗಿರುವ ಅವರ ನಾಟಕಗಳು ಜನಮಾನಸದಲ್ಲಿ ಸದಾ ಸ್ಮರಣೀಯವಾಗಿವೆ. ಹಿರಣ್ಣಯ್ಯ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬವರ್ಗಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

    ಡಿಸಿಎಂ ಪರಮೇಶ್ವರ್: ರಂಗಕರ್ಮಿ ಹಿರಿಯ ರಂಗ ಕಲಾವಿದ, ಮಾಸ್ಟರ್ ಹಿರಣ್ಣಯ್ಯ ಅವರು ಇಂದು ನಿಧನರಾದ ಸುದ್ದಿ ತಿಳಿದು ಅತ್ಯಂತ ಬೇಸರವಾಗಿದೆ. ರಾಜ್ಯೋತ್ಸವ, ಗುಬ್ಬಿ ವೀರಣ್ಣಸೇರಿ ಅನೇಕ ಪ್ರಶಸ್ತಿ ಗರಿ ಅವರ ಮುಡಿಗೇರಿತ್ತು. ಲಂಚಾವತಾರದಂಥಹ ರಾಜಕೀಯ ವಿಡಂಬನಾತ್ಮಕ ನಾಟಕವು ಅವರಿಗೆ ಹೆಚ್ಚು ಹೆಸರು ತಂದುಕೊಟ್ಟಿದೆ. ಇವರ ನಿಧನದಿಂದ ರಂಗಭೂಮಿಯು ಓರ್ವ ಹಿರಿಯ ಕಲಾವಿದರನ್ನು ಕಳೆದುಕೊಂಡು ಅನಾಥ ಭಾವದಲ್ಲಿ ಮುಳುಗುವಂತಾಗಿದೆ. ಇವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುವೆ.

    ಕಿಚ್ಚ ಸುದೀಪ್: ಮಾಸ್ಟರ್ ಹಿರಣಯ್ಯ ಅವರು ನನ್ನ ಹೃದಯಕ್ಕೆ ಹತ್ತಿರವಾದ ವ್ಯಕ್ತಿಯಾಗಿದ್ದವರು. 73 ಶಾಂತಿನಿವಾಸ ಸಿನಿಮಾದಲ್ಲಿ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದು ಸ್ಮರಣೀಯ. ಇವರ ಕಲೆಗೆ ಇವರು ನೀಡಿರುವ ಕೊಡುಗೆಯ ಬಗ್ಗೆ ಎಷ್ಟೇ ಹೇಳಿದರೂ ಕಡಿಮೆಯೇ ಆಗುತ್ತದೆ. ಅವರ ಪ್ರತಿಭೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ.

  • ಮನೆ ಮನೆಗೆ ಪತ್ರಿಕೆ ಹಂಚಿ ಪರೀಕ್ಷೆ ಶುಲ್ಕ ಕಟ್ಟಿದ್ದ ಮಾಸ್ಟರ್ ಹಿರಣ್ಣಯ್ಯ

    ಮನೆ ಮನೆಗೆ ಪತ್ರಿಕೆ ಹಂಚಿ ಪರೀಕ್ಷೆ ಶುಲ್ಕ ಕಟ್ಟಿದ್ದ ಮಾಸ್ಟರ್ ಹಿರಣ್ಣಯ್ಯ

    ಬೆಂಗಳೂರು: ರಂಗಭೂಮಿ ಕಲಾವಿದ 84 ವರ್ಷದ ಮಾಸ್ಟರ್ ಹಿರಣ್ಣಯ್ಯ ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಇಂದು ವಿಧಿವಶರಾಗಿದ್ದಾರೆ.

    ಬಾಲ್ಯ:
    ಮಾಸ್ಟರ್ ಹಿರಣ್ಣಯ್ಯ ಅವರು ಫೆಬ್ರವರಿ 15, 1934 ರಂದು ಮೈಸೂರಿನಲ್ಲಿ ಜನಿಸಿದರು. ಇವರ ಮೂಲ ಹೆಸರು ನರಸಿಂಹಮೂರ್ತಿ. ಕಲ್ಚರ್ಡ್ ಕಮೆಡಿಯನ್ ಎಂದು ಪ್ರಖ್ಯಾತರಾಗಿದ್ದ ಕೆ. ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಯ ಒಬ್ಬನೇ ಮಗನಾಗಿದ್ದರು. ಹಿರಣ್ಣಯ್ಯ ಅವರು ಇಂಟರ್ ಮೀಡಿಯೆಟ್‍ವರೆಗೆ(ಪಿಯುಸಿ) ವ್ಯಾಸಂಗ ಮಾಡಿದ್ದಾರೆ. 1952ರಲ್ಲಿ ತಂದೆಯೊಂದಿಗೆ ಕೂಡಿಕೊಂಡು ಅವರಿಂದಲೇ ರಂಗ ಶಿಕ್ಷಣ ಪಡೆದರು. ಮಾಸ್ಟರ್ ಹಿರಣ್ಣಯ್ಯನವರು ಬಾಲ್ಯದಲ್ಲಿರುವಾಗ ಅವರ ತಂದೆ ಮದರಾಸಿನಲ್ಲಿ ಬದುಕನ್ನರಸಿ ತಮ್ಮ ಕುಟುಂಬವನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಹೀಗಾಗಿ ಅವರು ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳನ್ನು ಕಲಿತ್ತಿದ್ದರು.

    ಜೊತೆಗೆ ಮನೆಯಲ್ಲಿ ಕನ್ನಡದ ಬಾಯಿಪಾಠ ಮತ್ತು ಸಂಸ್ಕೃತದ ಸ್ತೋತ್ರ ಪಾಠ ಕೂಡ ಮಾಡಿದ್ದರು. ನಂತರದಲ್ಲಿ ಮೈಸೂರಿಗೆ ಬಂದು ಬನುಮಯ್ಯ ಮಾಧ್ಯಮಿಕ ಶಾಲೆಗೆ ಸೇರಿದ್ದರು. ನಂತರ `ಸಾಧ್ವಿ’, `ಮೈಸೂರು ಪತ್ರಿಕೆ’ಯನ್ನು ಮನೆ ಮನೆಗೆ ಹಂಚಿ ಆ ಸಂಪಾದನೆಯಿಂದ ಶಾಲಾ ಪರೀಕ್ಷೆಗಳ ಶುಲ್ಕಕ್ಕೆ ದಾರಿ ಮಾಡಿಕೊಂಡಿದ್ದರು. ಮುಂದೆ ಇಂಟರ್ ಮೀಡಿಯೆಟ್ ಓದಿಗಾಗಿ ಶಾರದಾವಿಲಾಸ ಕಾಲೇಜು ಸೇರಿದ್ದರು.

    ರಂಗಭೂಮಿ:
    ಇವರ ತಂದೆ ಕೆ. ಹಿರಣ್ಣಯ್ಯನವರು 1940ರಲ್ಲಿ ರಚಿಸಿ, ನಿರ್ದೇಶಿಸಿದ ಚಲನಚಿತ್ರ `ವಾಣಿ’ಯಲ್ಲಿ ಹಿರಣ್ಣಯ್ಯನವರು ನಟಿಸುವ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದ್ದರು. 1948ರಲ್ಲಿ ರಂಗಭೂಮಿಯಲ್ಲಿ ಚಿಕ್ಕ ಪಾತ್ರಮಾಡಲು ಹೋಗಿ ಸೋತಿದ್ದರು. ಆದರೂ ಛಲದಿಂದ ಕಾಲೇಜಿನಲ್ಲಿ ಸಂಘ ಕಟ್ಟಿ `ಆಗ್ರಹ’ ಎಂಬ ನಾಟಕವನ್ನು ಪ್ರದರ್ಶಿಸಿ ಅದ್ಭುತ ಅಭಿನಯದಿಂದ ನಾಟಕ ಗೆದ್ದಿತ್ತು. 1953ರಲ್ಲಿ ತಂದೆ ಕೆ. ಹಿರಣ್ಣಯ್ಯ ಅವರು ನಿಧನರಾದ್ದು, ತಂದೆಯ ನಿಧನದ ನಂತರ ಅ.ನ.ಕೃ. ಮತ್ತು ಮಿತ್ರರ ಸಹಾಯದಿಂದ ನಾಟಕ ಕಂಪನಿ ಕಟ್ಟಿದ್ದರು. ಆದರೆ ಅದರಲ್ಲೂ ನಷ್ಟ ಅನುಭವಿಸಿದರು. ಬಳಿಕ ತಂದೆ ನಡೆಸುತ್ತಿದ್ದ `ಹಿರಣ್ಣಯ್ಯ ಮಿತ್ರ ಮಂಡಳಿ’ ಯನ್ನು ಪುನಃ ಆರಂಭಿಸಿ `ಲಂಚಾವತಾರ’ ನಾಟಕವನ್ನು ರಚಿಸಿ ರಂಗ ಪ್ರಯೋಗ ಮಾಡಿದರು. ಜನಪ್ರಿಯತೆಯ ಜೊತೆಗೆ ಮಹಾರಾಜರಿಂದ ಸನ್ಮಾನ ಮತ್ತು `ನಟರತ್ನಾಕರ’ ಎಂದು ಬಿರುದನ್ನು ಪಡೆದುಕೊಂಡರು.

    `ನಡುಬೀದಿ ನಾರಾಯಣ’ದಲ್ಲಿ ತೀರ್ಥರೂಪುವಾಗಿ, `ಭ್ರಷ್ಟಾಚಾರ’ದಲ್ಲಿ ಧಫೇದಾರ್ ಮುರಾರಿಯಾಗಿ, `ಸದಾರಮೆ’ಯಲ್ಲಿ ಕಳ್ಳನಾಗಿ, ಆದಿಮೂರ್ತಿಯಾಗಿ, `ಕಪಿಮುಷ್ಠಿ’ಯಲ್ಲಿ ಜಾರ್ಜ್ ಆಗಿ, ಕಸ್ತೂರಿಯಾಗಿ, `ಮಕ್ಮಲ್ ಟೋಪಿ’ಯಲ್ಲಿ ನಾಣಿಯಾಗಿ ಹಿರಣ್ಣಯ್ಯನವರು ಜನರನ್ನು ಆಕರ್ಷಿಸಿದರು. ಈ ನಾಟಕಗಳೇ ಅಲ್ಲದೆ `ದೇವದಾಸಿ’, `ಅನಾಚಾರ’, `ಅತ್ಯಾಚಾರ’, `ಕಲ್ಕ್ಯಾವತಾರ’, `ಅಮ್ಮಾವ್ರ ಅವಾಂತರ’, `ಪುರುಷಾಮೃಗ’ ಹೀಗೆ 25ಕ್ಕೂ ಹೆಚ್ಚು ನಾಟಕಗಳನ್ನು ರಂಗಕ್ಕೆ ತಂದು ಅಪಾರ ಕೀರ್ತಿಗಳಿಸಿದರು. ಅವರ `ಲಂಚಾವತಾರ’ ನಾಟಕವೊಂದೇ 10,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡ ದಾಖಲೆಯನ್ನು ನಿರ್ಮಿಸಿದೆ.

    ಪ್ರಶಸ್ತಿ ಗೌರವಗಳು:
    ಮಾಸ್ಟರ್ ಹಿರಣ್ಣಯ್ಯನವರಿಗೆ ಹಲವಾರು ಬಿರುದುಗಳೂ ಅತ್ಯುನ್ನತ ರಂಗ ಪ್ರಶಸ್ತಿಯಾದ ಡಾ. ಗುಬ್ಬೀ ವೀರಣ್ಣ ಪ್ರಶಸ್ತಿಯೂ ಸೇರಿದಂತೆ ಪ್ರಶಸ್ತಿಗಳು ಲಭ್ಯವಾಗಿವೆ. ಇವೆಲ್ಲಕ್ಕೂ ಮಿಗಿಲಾಗಿ ದೇಶ ವಿದೇಶಗಳಲ್ಲಿರುವ ಕನ್ನಡಿಗರು ಅವರನ್ನು ಗೌರವಿಸಿದ್ದಾರೆ.

    ಪ್ರಮುಖ ನಾಟಕಗಳು: ಮಕ್ಮಲ್ ಟೋಪಿ, ಕಪಿಮುಷ್ಟಿ, ದೇವದಾಸಿ, ನಡುಬೀದಿ ನಾರಾಯಣ, ಲಂಚಾವತಾರಮ ಪಶ್ಚಾತ್ತಾಪ, ಭ್ರಷ್ಟಾಚಾರ, ಚಪಲಾವತಾರ, ಡಬ್ಬಲ್ ತಾಳಿ, ಲಾಟರಿ ಸರ್ಕಾರ, ಸನ್ಯಾಸಿ ಸಂಸಾರ, ಸದಾರಮೆ, ಎಚ್ಚಮ ನಾಯಕ ಪ್ರಮುಖ ನಾಟಕಗಳಾಗಿವೆ.

    ಚಲನಚಿತ್ರಗಳಲ್ಲಿ ಹಿರಣ್ಣಯ್ಯ:
    ಹಿರಣ್ಣಯ್ಯ ಮಿತ್ರ ಮಂಡಳಿ ಪ್ರಮುಖ ನಾಟಕಗಳಲ್ಲೊಂದಾದ ‘ದೇವದಾಸಿ’ ಚಲನಚಿತ್ರವಾಗಿದ್ದು, ಅದರಲ್ಲಿ ಹಿರಣ್ಣಯ್ಯನವರು ಅಭಿನಯಿಸಿದ್ದರು. ಸಂಪ್ರದಾಯ, ಆನಂದ ಸಾಗರ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪುಣ್ಯಕೋಟಿ’, ‘ಅಮೃತ ವಾಹಿನಿ’ ಧಾರಾವಾಹಿಗಳಲ್ಲಿಯೂ ಮಾಸ್ಟರ್ ಹಿರಣ್ಣಯ್ಯನವರು ಅಭಿನಯಿಸಿದ್ದಾರೆ.

    ಪ್ರಶಸ್ತಿ-ಪುರಸ್ಕಾರಗಳ:
    ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ ಮತ್ತು ನವರತ್ನ ರಾಂ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಕಲಾಗಜ ಸಿಂಹ ಮತ್ತು ನಟ ರತ್ನಾಕರ ಎಂದ ಬಿರುವುದನ್ನು ಪಡೆದುಕೊಂಡಿದ್ದಾರೆ.

  • ಮಾಸ್ಟರ್ ಹಿರಣ್ಣಯ್ಯ ಬರೆದ ರಂಗ ಗೀತೆ ಈಗ ಚಿತ್ರಗೀತೆ!

    ಮಾಸ್ಟರ್ ಹಿರಣ್ಣಯ್ಯ ಬರೆದ ರಂಗ ಗೀತೆ ಈಗ ಚಿತ್ರಗೀತೆ!

    ಬೆಂಗಳೂರು: ಹಿಂದಿಯಲ್ಲಿ ಕಂಗನಾ ರಣಾವತ್ ನಟಿಸಿ ಸೂಪರ್ ಹಿಟ್ ಆಗಿದ್ದ ಕ್ವೀನ್ ಚಿತ್ರ ಕನ್ನಡದಲ್ಲಿ ‘ಬಟರ್ ಫ್ಲೈ’ ಆಗಿ ಅವತಾರವೆತ್ತುತ್ತಿದೆ. ಯಾವ ಕಥೆಯನ್ನಾದರೂ ಇಲ್ಲಿನ ನೇಟಿವಿಟಿಗೆ ತಕ್ಕುದಾಗಿ ಒಗ್ಗಿಸಿಕೊಳ್ಳುವ ಕಲೆ ಕರಗತ ಮಾಡಿಕೊಂಡಿರೋ ರಮೇಶ್ ಅರವಿಂದ್ ನಿರ್ದೇಶನದಲ್ಲಿ ಈ ಚಿತ್ರ ರೆಡಿಯಾಗುತ್ತಿದೆ.

    ಚಿತ್ರೀಕರಣವನ್ನು ಅಂದುಕೊಂಡಂತೆಯೇ ಸುಸೂತ್ರವಾಗಿ ನಡೆಸುತ್ತಿದ್ದರೂ ರಮೇಶ್ ಅವರವಿಂದ್ ಅವರನ್ನು ಭಾರೀ ಚಿಂತೆಗೀಡು ಮಾಡಿದ್ದದ್ದು ವಿಶೇಷವಾದ ಒಂದು ಹಾಡು. ಮೂಲ ಚಿತ್ರ ಕ್ವೀನ್‍ನಲ್ಲಿ ಹಿಂದಿಯ ಹಳೆಯ ಹಾಡೊಂದನ್ನು ವಿಶೇಷವಾಗಿ ಬಳಸಿಕೊಳ್ಳಲಾಗಿತ್ತು. ಆ ಹಾಡು ಸೂಪರ್ ಹಿಟ್ ಆಗಿತ್ತು. ಕನ್ನಡದಲ್ಲಿಯೂ ಕೂಡಾ ಈ ಹಾಡನ್ನು ಅದೇ ರೀತಿ ರೂಪಿಸೋ ಕನಸು ಹೊಂದಿದ್ದ ರಮೇಶ್ ಅವರನ್ನು ಬಹು ದಿನದಿಂದಲೂ ಯಾವ ಗೀತೆಯನ್ನು ಆಯ್ಕೆ ಮಾಡಿಕೊಳ್ಳೋದೆಂಬ ಗೊಂದಲ ಕಾಡುತ್ತಿತ್ತಂತೆ. ಕಡೆಗೂ ಅವರು ಇದಕ್ಕಾಗಿ ಪ್ರಸಿದ್ಧ ರಂಗಗೀತೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ.

    ಅದು ದೇವದಾಸಿ ನಾಟಕಕ್ಕಾಗಿ ಮಾಸ್ಟರ್ ಹಿರಣ್ಣಯ್ಯನವರು ಬರೆದಿದ್ದ ಪ್ರಸಿದ್ಧ ರಂಗಗೀತೆ. ಸುಖವೀವ ಸುರಪಾನವಿದೇ ಸ್ವರ್ಗಸಮಾನನಂ ಎಂಬ ರಂಗಗೀತೆಯನ್ನು ರಮೇಶ್ ಅರವಿಂದ್ ಈ ಚಿತ್ರಕ್ಕೆ ಹೊಸಾ ಥರದಲ್ಲಿ ಬಳಸಿಕೊಂಡಿದ್ದಾರೆ. ಇದಕ್ಕೆ ಕೇವಲ ಅರ್ಧ ದಿನದಲ್ಲಿಯೇ ಕೊರಿಯೋಗ್ರಫಿ ಮಾಡಿರೋ ಗಣೇಶ್ ಆಚಾರ್ಯ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರಂತೆ. ಈ ವಿಶೇಷವಾದ ಹಾಡಿಗೆ ಕುಣಿದಿರುವ ಪಾರುಲ್ ಕೂಡಾ ಇದನ್ನೊಂದು ಗ್ರೇಟ್ ಎಕ್ಸ್ ಪೀರಿಯನ್ಸ್ ಅಂತ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.

    ಸದಾ ಹೊಸತೇನನ್ನೋ ಸೃಷ್ಟಿಸಲು ಹಂಬಲಿಸುವ ರಮೇಶ್ ಅರವಿಂದ್ ಅವರು ತಮ್ಮ ಚಿತ್ರಕ್ಕೆ ರಂಗಗೀತೆಯೊಂದನ್ನು ಆರಿಸಿಕೊಂಡಿರುವುದು ಸಕಾರಾತ್ಮಕ ಬೆಳವಣಿಗೆ.