Tag: Mass Prayer

  • ರಂಜಾನ್ ವೇಳೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡದಂತೆ ಶ್ರೀರಾಮ ಸೇನಾ ಮನವಿ

    ರಂಜಾನ್ ವೇಳೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡದಂತೆ ಶ್ರೀರಾಮ ಸೇನಾ ಮನವಿ

    ಹುಬ್ಬಳ್ಳಿ: ಕೊರೊನಾ ವೈರಸ್ ಹರಡುವಿಕೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನಲೆ ಮುಸ್ಲಿಂ ಬಾಂಧವರ ರಂಜಾನ್ ಹಬ್ಬದ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಬಾರದು ಎಂದು ಶ್ರೀರಾಮ ಸೇನಾ ಮುಖಂಡರು ತಹಶಿಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

    ರಾಜ್ಯದಲ್ಲಿ ಹಾಗೂ ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಚಿಂತಾಜನಕ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಯಾವುದೇ ಸಾಮೂಹಿಕ ಪ್ರಾರ್ಥನೆ, ಸಭೆ ಸಮಾರಂಭ ನಡೆಸದಂತೆ ದೇವಸ್ಥಾನ, ಚರ್ಚ್, ಮಸೀದಿ ಬಂದ್ ಮಾಡಿಸಿದೆ. ಈ ಹಿನ್ನೆಲೆಯಲ್ಲಿ ರಂಜಾನ್ ಹಬ್ಬದ ಸಂದರ್ಭದಲ್ಲಿ ಸಹ ಯಾವುದೇ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸದೇ ಸಾರ್ವಜನಿಕ ಹಿತಾಸಕ್ತಿ ಕಾಪಾಡಬೇಕು ಎಂದು ಆಗ್ರಹಿಸಿದರು.

    ಈ ಹಿಂದೆ ಮುಸ್ಲಿಂ ಸಮುದಾಯದವರು ರಂಜಾನ್ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದರು. ಇದೀಗ ಶ್ರೀರಾಮ ಸೇನಾದಿಂದ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸಬಾರದು ಎಂದು ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ರಾಜು ಗಾಡಗೋಳಿ, ಅಣ್ಣಪ್ಪ ದಿವಟಿಗಿ, ಮಂಜು ಕಾಟಕರ, ಸಿದ್ದು ರಾಯನಾಳ, ಅಭಿಷೇಕ ಕಾಂಬಳೆ ಸೇರಿದಂತೆ ಇತರರು ಇದ್ದರು.

  • ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ವಿಸ್ತರಣೆ- ವಕ್ಫ್ ಬೋರ್ಡ್

    ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ವಿಸ್ತರಣೆ- ವಕ್ಫ್ ಬೋರ್ಡ್

    ಬೆಂಗಳೂರು: ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬಕ್ಕೆ ನಾಲ್ಕು ದಿನ ಮಾತ್ರ ಬಾಕಿ ಇದೆ. ಈ ಹಿನ್ನೆಲೆ ರಾಜ್ಯ ವಕ್ಫ್ ಮಂಡಳಿಯು ಮುಸ್ಲಿಂ ಸಮುದಾಯಕ್ಕೆ ಮಹತ್ವದ ಆದೇಶ ನೀಡಿದೆ.

    ಕೊರೊನಾ ಲಾಕ್‍ಡೌನ್ ವಿಸ್ತರಣೆ ಹಿನ್ನೆಲೆ ಮೇ 31ರವರೆಗೆ ಮಸೀದಿ, ಈದ್ಗಾ ಮತ್ತು ದರ್ಗಾಗಳಲ್ಲಿ ವಿಶೇಷ ಸಾಮೂಹಿಕ ನಮಾಜ್‍ಗೆ  ನಿರ್ಬಂಧ ಮುಂದುವರಿಸಿ ರಾಜ್ಯ ವಕ್ಫ್ ಮಂಡಳಿಯು ಆದೇಶ ಹೊರಡಿಸಿದೆ. ಈ ಆದೇಶವು ಇಂದು ರಾತ್ರಿಯ ವಿಶೇಷ ಷಬ್ ಎ ಬರಾತ್ ನಮಾಜ್, ರಂಜಾನ್ ಹಬ್ಬದ ವಿಶೇಷ ನಮಾಜ್ ಮತ್ತು ಶುಕ್ರವಾರದ ವಿಶೇಷ ನಮಾಜ್‍ಗಳಿಗೆ ಅನ್ವಯವಾಗಲಿದೆ ಎಂದು ಬೋರ್ಡ್ ನ ಸಿಇಒ ಇಸ್ಲಾವುದ್ದೀನ್ ಗದ್ಯಾಳ ಅವರು ತಿಳಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ಈ ಮೂಲಕ ಕೊರೊನಾ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ಮುಂದುವರಿಸಲಾಗಿದೆ. ಜೊತೆಗೆ ರಂಜಾನ್ ಹಬ್ಬದಂದು ವಿಶೇಷ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.

    ಹಬ್ಬದ ದಿನ ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಮುಸ್ಲಿಂ ಬಾಂಧವರು ಪರಸ್ಪರ ಕೈಕುಲುಕಿ, ತಬ್ಬಿಕೊಂಡು ಶುಭಾಶಯ ಕೋರುವುದಕ್ಕೂ ನಿರ್ಬಂಧ ಹೇರಲಾಗಿದೆ. ಗೆಳೆಯರನ್ನು ಮನೆಗೆ ಕರೆಯುವುದು, ಗೆಳೆಯರು ಅಥವಾ ಬಂಧುಗಳ ಮನೆಗೆ ಹೋಗುವಂತಿಲ್ಲ. ಅಷ್ಟೇ ಅಲ್ಲದೆ ಅಂದು ಕುಟುಂಬ ಸಮೇತ ಸುತ್ತಾಡಲು ಹೊರಗೆ ಹೋಗದಂತೆ ಆದೇಶದಲ್ಲಿ ಸೂಚನೆ ನೀಡಲಾಗಿದೆ.

  • ಸಾಮೂಹಿಕ ವಿಶೇಷ ಪ್ರಾರ್ಥನೆಗೆ ಬಿಎಸ್‍ವೈಗೆ ಪತ್ರ ಬರೆದ ಶಾಸಕ ಹ್ಯಾರಿಸ್

    ಸಾಮೂಹಿಕ ವಿಶೇಷ ಪ್ರಾರ್ಥನೆಗೆ ಬಿಎಸ್‍ವೈಗೆ ಪತ್ರ ಬರೆದ ಶಾಸಕ ಹ್ಯಾರಿಸ್

    ಬೆಂಗಳೂರು: ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಬೆನ್ನಲ್ಲೇ ಶಾಸಕ ಎನ್.ಎ.ಹ್ಯಾರಿಸ್ ರಂಜಾನ್ ನಿಮಿತ್ತ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

    ಸಿಎಂ ಇಬ್ರಾಹಿಂ ಅವರ ಪತ್ರಕ್ಕೆ ಕಾಂಗ್ರೆಸ್‍ನ ಮುಸ್ಲಿಂ ಮುಖಂಡರೇ ವಿರೋಧ ವ್ಯಕ್ತಪಡಿಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಿದ್ದರೂ ಶಾಸಕ ಹ್ಯಾರಿಸ್ ಅವರು ಸಾಮೂಹಿಕ ಪ್ರಾರ್ಥನೆಗೆ ಪತ್ರ ಬರೆದಿರುವುದು ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಕೊರೊನಾ ಮಧ್ಯೆ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರ ಲೆಟರ್ ಫೈಟ್

    ಪತ್ರದಲ್ಲಿ ಏನಿದೆ?:
    ಮುಸ್ಲಿಂ ಬಾಂಧವರು ಚಂದ್ರ ದರ್ಶನ ನಂತರ ಮೇ 24 ಅಥವಾ 25ರಂದು ಈದುರ್ ಫಿತರ್/ ರಂಜಾನ್ ಹಬ್ಬವನ್ನು ಆಚರಿಸುತ್ತಿದ್ದಾರೆ. ರಂಜಾನ್ ಹಬ್ಬದ ದಿನದಂದು ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಮಾಡುತ್ತಾರೆ. ಹೀಗಾಗಿ ಈದ್ಗಾ ಮೈದಾನಗಳಲ್ಲಿ ಅಥವಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಮಾಡಿಕೊಡಬೇಕು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾದರೆ ನಮ್ಮ ಮುಸ್ಲಿಂ ಸಮುದಾಯವನ್ನು ನಿಂದಿಸುವುದು ಸೂಕ್ತವಲ್ಲ. ತಜ್ಞರು ಮತ್ತು ವೈದ್ಯರ ಸಲಹೆಯನ್ನು ಪಡೆದು ಪರಿಸ್ಥಿತಿ ಅನುಕೂಲಕರವಾಗಿದ್ದರೆ ಮಾತ್ರ ರಂಜಾನ್ ದಿನದಂದು ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡುವ ಬಗ್ಗೆ ನಿರ್ಧರಿಸಬಹುದಾಗಿದೆ.

    ಸರ್ಕಾರದ ಆದೇಶದಂತೆ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಮಾಸದಲ್ಲಿ ಪ್ರತಿ ದಿನ ಕಡ್ಡಾಯ ನಮಾಜ್ ಅನ್ನು ಮಸೀದಿಯ ಬದಲು ಮನೆಯಲ್ಲೇ ಮಾಡುತ್ತಿದ್ದಾರೆ. ಅಲ್ಲದೆ ರಾಜ್ಯದ ಮುಸ್ಲಿಮರು ಸರ್ಕಾರದ ಈ ನಿರ್ಧಾರಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.

  • ಲಾಕ್‍ಡೌನ್ ಮೀರಿ ಸಾಮೂಹಿಕ ಪ್ರಾರ್ಥನೆ- 15 ಜನರ ಬಂಧನ

    ಲಾಕ್‍ಡೌನ್ ಮೀರಿ ಸಾಮೂಹಿಕ ಪ್ರಾರ್ಥನೆ- 15 ಜನರ ಬಂಧನ

    ಕಲಬುರಗಿ: ಲಾಕ್‍ಡೌನ್ ನಿಯಮ ಮೀರಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದ್ದವರಿಗೆ ಕಲಬುರಗಿಯ ಪೊಲೀಸರು ಬಿಸಿಮುಟ್ಟಿಸಿದ್ದಾರೆ.

    ಸೇಡಂ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಮಸೀದಿಯಲ್ಲಿ ಸುಮಾರು 15 ಜನರು ನಮಾಜ್ ಮಾಡುತ್ತಿದ್ದರು. ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಲಾಠಿ ರುಚಿ ತೋರಿಸಿ, ಎಲ್ಲ 15 ಮಂದಿಯನ್ನೂ ಬಂಧಿಸಿದ್ದಾರೆ.

    ಈ ಸಂಬಂಧ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸಾಮೂಹಿಕ ಪ್ರಾರ್ಥನೆ ನಡೆಸಿದ್ದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮಂಗಳವಾರದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 44 ಜನರಿಗೆ ಸೋಂಕು ತಗುಲಿದ್ದು, ಈ ಪೈಕಿ 7 ಮಂದಿ ಗುಣಮುಖರಾಗಿದ್ದಾರೆ. ಇನ್ನೂ 32 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈವರೆಗೂ ಐವರು ಕೊರೊನಾಗೆ ಬಲಿಯಾಗಿದ್ದಾರೆ. ಹೀಗಿದ್ದರೂ ಜಿಲ್ಲೆಯ ಜನರು ಎಚ್ಚೆತ್ತುಕೊಳ್ಳದೇ ಇರುವುದು ಬೇಸರದ ಸಂಗತಿಯಾಗಿದೆ.

    ಕಲಬುರಗಿಯ ಕಮರ್ ಕಾಲೋನಿ ನಿವಾಸಿ ರೋಗಿ-425 ಮಹಿಳೆಯ ನಾಲ್ಕು ತಿಂಗಳ ಹೆಣ್ಣು ಮಗುವಿಗೆ ಈ ಮೊದಲು ಸೋಂಕು ದೃಢಪಟ್ಟಿತ್ತು. ಇದರಿಂದಾಗಿ ಮಗುವಿನಿಂದ ತಾಯಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಆಕೆಗೂ ಕೊರೊನಾ ಪಾಸಿಟಿವ್ ಬಂದಿತ್ತು. ಮಹಿಳೆಯಿಂದ ಕಲಬುರಗಿಯ ಆರು ಜನರಿಗೆ ಸೋಂಕು ಹರಡಿರುವುದು ಮಂಗಳವಾರ ದೃಢಪಟ್ಟಿದ್ದು, ಎಲ್ಲರನ್ನೂ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

  • ಸಾಮೂಹಿಕ ಪ್ರಾರ್ಥನೆಗಾಗಿ ಮಸೀದಿಗೆ ತೆರಳಿದ್ದವರಿಗೆ ಬಿತ್ತು ಲಾಠಿ ಏಟು

    ಸಾಮೂಹಿಕ ಪ್ರಾರ್ಥನೆಗಾಗಿ ಮಸೀದಿಗೆ ತೆರಳಿದ್ದವರಿಗೆ ಬಿತ್ತು ಲಾಠಿ ಏಟು

    ಹಾವೇರಿ: ಲಾಕ್‍ಡೌನ್ ನಿಯಮವನ್ನ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದವರಿಗೆ ಪೊಲೀಸರು ಹಾಗೂ ಅಧಿಕಾರಿಗಳು ಲಾಠಿ ರುಚಿ ತೋರಿಸಿದ ಘಟನೆ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಎರಡು ಮಸೀದಿಗಳಲ್ಲಿ 30ಕ್ಕೂ ಅಧಿಕ ಮಂದಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದರು. ಹೊರಗಡೆಯಿಂದ ಮಸೀದಿಯ ಗೇಟ್ ಹಾಕಿಕೊಂಡು ಒಳಗಡೆ ಪ್ರಾರ್ಥನೆ ಮಾಡಲು ಸಜ್ಜಾಗಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸವಣೂರು ತಹಶೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗಣ್ಣವರ ಹಾಗೂ ಸಿಪಿಐ ಶಶಿಧರ್ ನೇತೃತ್ವದ ತಂಡ ಮಸೀದಿಯಲ್ಲಿದ್ದವರನ್ನ ಹೊರಹಾಕಿ ಲಾಠಿ ರುಚಿ ತೋರಿಸಿದ್ದಾರೆ. ಅಲ್ಲದೇ ಪ್ರಾರ್ಥನೆಗೆ ಬಂದಿದ್ದವರು ತಂದಿದ್ದ 10ಕ್ಕೂ ಅಧಿಕ ಬೈಕ್‍ಗಳನ್ನ ಜಪ್ತಿ ಮಾಡಿದ್ದಾರೆ.

    5ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ತಹಶೀಲ್ದಾರ್ ಹಾಗೂ ಪೊಲೀಸರು ಸಭೆಗಳ ಮೇಲೆ ಸಭೆಗಳನ್ನ ನಡೆಸಿ ತಿಳಿಸಿ ಹೇಳಿದ್ದಾರೆ. ಆದರೂ ಹಠಕ್ಕೆ ಬಿದ್ದವರಂತೆ 30ಕ್ಕೂ ಅಧಿಕ ಮಂದಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದರು. ಹೀಗಾಗಿ ಪೊಲೀಸರು ಒಬ್ಬೊಬ್ಬರನ್ನ ಹೊರಹಾಕಿ ಲಾಠಿ ರುಚಿ ತೋರಿಸಿ ಅಲ್ಲಿಂದ ಜಾಗ ಖಾಲಿ ಮಾಡಿಸಿದ್ದಾರೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ಪೈಲಟ್ ಅಭಿನಂದನ್‍ಗಾಗಿ ಪುಟ್ಟ ಶಾಲಾ ಮಕ್ಕಳಿಂದ ಸಾಮೂಹಿಕ ಪ್ರಾರ್ಥನೆ

    ಪೈಲಟ್ ಅಭಿನಂದನ್‍ಗಾಗಿ ಪುಟ್ಟ ಶಾಲಾ ಮಕ್ಕಳಿಂದ ಸಾಮೂಹಿಕ ಪ್ರಾರ್ಥನೆ

    ಬೆಳಗಾವಿ: ಪಾಕ್ ವಶದಲ್ಲಿರುವ ಪೈಲಟ್ ಅಭಿನಂದನ್ ಅವರಿಗಾಗಿ ಪುಟ್ಟ ಶಾಲಾ ಮಕ್ಕಳು ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ವಿಶೇಷವಾ ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ.

    ಹುಕ್ಕೇರಿ ಪಟ್ಟಣದ ಮಹಾವೀರ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದ ವಿಶೇಷ ಪ್ರಾರ್ಥನೆ ನಡೆಸಲಾಯಿತು. ನಮ್ಮ ದೇಶದ ವೀರ ಯೋಧ ಪೈಲಟ್ ಅಭಿನಂದನ್ ಸುರಕ್ಷಿತವಾಗಿ ನಮ್ಮ ತಾಯ್ನಾಡಿಗೆ ವಾಪಸ್ ಬರಬೇಕು ಎಂದು ಮಕ್ಕಳು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

    ಯೋಧ ಅಭಿನಂದನ್ ಹೆಸರಲ್ಲಿ ವಿಶೇಷ ಪ್ರಾರ್ಥನೆ ಮಾಡಿದ ನೂರಾರು ಮಕ್ಕಳು ವೀರ ಯೋಧ ಸುರಕ್ಷಿತವಾಗಿರಲಿ ಹಾಗೂ ಆದಷ್ಟು ಬೇಗ ನಮ್ಮ ದೇಶಕ್ಕೆ ಮರಳುವಂತಾಗಲಿ ಎಂದು ಪ್ರಾರ್ಥಿಸಿದರು. ಶಾಲಾ ಮಕ್ಕಳ ಜೊತೆಗೆ ಶಾಲೆಯ ಚೇರ್ಮನ್ ಮಹಾವೀರ ನಿಲಜಗಿ, ಆಡಳಿತ ಮಂಡಳಿ ಹಾಗೂ ಶಿಕ್ಷಕರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

    ಅಭಿನಂದನ್ ಪಾಕ್ ವಶವಾಗಿದ್ದು ಹೇಗೆ..?
    ಪಾಕಿಸ್ತಾನ ಮಂಗಳವಾರ ಭಾರತದ ಗಡಿಯೊಳಗೆ ಯುದ್ಧ ವಿಮಾನಗಳನ್ನು ನುಗ್ಗಿಸಿ ದುಸ್ಸಾಹಸ ಮಾಡಿತ್ತು. ಭಾರತದ ಗಡಿ ದಾಟಿದ 3 ವಿಮಾನಗಳ ಪೈಕಿ, ಪಾಕಿಸ್ತಾನದ ಎಫ್-16 ಒಂದು ಯುದ್ಧ ವಿಮಾನವನ್ನು ಭಾರತ ಹೊಡೆದುರುಳಿಸಿದೆ. ಇನ್ನೆರಡು ವಿಮಾನಗಳನ್ನು ಮಿಗ್-21 ವಿಮಾನವನ್ನು ಅಟ್ಟಾಡಿಸಿಕೊಂಡು ಹೋಗಿದೆ. ಈ ವೇಳೆ ಪಾಕ್ ನೆಲದಲ್ಲಿ ಮಿಗ್ 22 ನೆಲಕ್ಕುರುಳಿದೆ. ಈ ವೇಳೆ ಅಭಿನಂದನೆ ಪ್ಯಾರಾಚೂಟ್‍ನಿಂದ ಜಿಗಿದು ನೆಲಕ್ಕೆ ಬಿದ್ದಿದ್ದಾರೆ. ತಮ್ಮ ನೆಲದಲ್ಲಿ ಅಭಿನಂದನ್ ಇರುವುದನ್ನು ಗಮನಿಸಿದ ಸ್ಥಳಿಯರು ಪಾಕಿಸ್ತಾನ ಸೇನೆಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪಾಕ್ ಸೈನಿಕರು ಅಭಿನಂದನ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv