Tag: mass marraige

  • ರಾಯಚೂರಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ – 20 ವರ್ಷದಲ್ಲಿ 2600 ಜೋಡಿ ಮದುವೆ

    ರಾಯಚೂರಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ – 20 ವರ್ಷದಲ್ಲಿ 2600 ಜೋಡಿ ಮದುವೆ

    ರಾಯಚೂರು: ಜಿಲ್ಲೆಯ ಬೂದಿ ಬಸವೇಶ್ವರರ (Budi Basaveshwar) ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದ್ದು, ಗುರುವಾರ ನಡೆದ ಸಾಮೂಹಿಕ ವಿವಾಹ ಸಂಭ್ರಮದಲ್ಲಿ 136 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಕಳೆದ 20 ವರ್ಷದಲ್ಲಿ ಒಟ್ಟು 2600 ಜೋಡಿಗಳ ಮದುವೆ ಮಾಡಿಸಲಾಗಿದೆ.

    ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ಗಬ್ಬೂರಿನ ಐತಿಹಾಸಿಕ ಬೂದಿ ಬಸವೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಫೆಬ್ರವರಿ 5 ರಿಂದ 13ರವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವದಲ್ಲಿ ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದ್ದು, ಇಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿಸಲಾಯಿತು.

    ಬೂದಿ ಬಸವೇಶ್ವರ ಮಠದಲ್ಲಿ ಸತತ 20 ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯುತ್ತಿದ್ದು, ಇದುವರೆಗೆ 2600 ಜೋಡಿಗಳ ಮದುವೆಯಾಗಿದೆ. ಈ ಬಾರಿ 175 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ 136 ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟಿವೆ.

    ಕಾರ್ಯಕ್ರಮದಲ್ಲಿ ಮಠದ ಪೀಠಾಧಿಪತಿಗಳಾದ ಬೂದಿಬಸವ ಶಿವಾಚಾರ್ಯ ಸ್ವಾಮಿಗಳ ತುಲಾಭಾರ ನೆರವೇರಿಸಲಾಯಿತು. ಇದಕ್ಕೂ ಮುನ್ನ ವಟುಗಳಿಗೆ ಅಯ್ಯಾಚಾರ ದೀಕ್ಷೆ ನೀಡಲಾಯಿತು. ಫೆಬ್ರವರಿ 9 ರಂದು ಮಠದ ಆವರಣದಲ್ಲಿ ಮಹಾರಥೋತ್ಸವ ನಡೆಯಲಿದೆ. ಮಹಾರಥೋತ್ಸವಕ್ಕೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ.

     

  • ಸಾಮೂಹಿಕ ಮದುವೆಯಲ್ಲಿ ವಧುವಿಗೆ ಸೀಮೆ ಹಸು, ವರನಿಗೆ ಕೊಳವೆ ಬಾವಿ ಆಫರ್

    ಸಾಮೂಹಿಕ ಮದುವೆಯಲ್ಲಿ ವಧುವಿಗೆ ಸೀಮೆ ಹಸು, ವರನಿಗೆ ಕೊಳವೆ ಬಾವಿ ಆಫರ್

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಚುನಾವಣಾ ರಣಕಣ ರಂಗೇರಿದೆ. ಮತದಾರರ ಓಲೈಕೆಗಾಗಿ ರಾಜಕೀಯ ಪಕ್ಷಗಳ ಮುಖಂಡರು ಹೊಸ ಹೊಸ ಆಮಿಷ ನೀಡಲು ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುವ ಮೂಲಕ ವಧುವಿಗೆ ಸೀಮೆಹಸು, ಫ್ರೀ ಸ್ಕೀಂ, ವರನಿಗೆ ಕೊಳವೆ ಬಾವಿಯ ಆಫರ್. ಅಷ್ಟೇ ಅಲ್ಲದೇ ಮದುವೆಗೆ ಬಂದವರಿಗೆ ಭರ್ಜರಿ ಬಾಡೂಟ ಬಡಿಸಲಾಗಿದೆ.

    ಹೌದು, ಬಾಗೇಪಲ್ಲಿ ಕಾಂಗ್ರೇಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ (Congress MLA S N Subba Reddy), ಪ್ರತಿವರ್ಷದಂತೆ ಈ ವರ್ಷವೂ 501 ಉಚಿತ ಸಾಮೂಹಿಕ ಮದುವೆ (Mass Marriage) ಸಮಾರಂಭವನ್ನು ಹಮ್ಮಿಕೊಂಡಿದ್ರು. ಶಾಸಕರ ಪುತ್ರ ಅಭಿಷೇಕ ಸೇರಿದಂತೆ 212 ಜೋಡಿಗಳು ನವಜೀವನಕ್ಕೆ ಕಾಲಿಟ್ರು. ನವ ವಿವಾಹಿತರಿಗೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಶುಭ ಹಾರೈಸಿದ್ರು.

    ಸಾಮೂಹಿಕ ಕಲ್ಯಾಣಕ್ಕೆ ಯುವಕ-ಯುವತಿಯರನ್ನು ಸೆಳೆಯಲು ಶಾಸಕ ಸುಬ್ಬಾರೆಡ್ಡಿ ಮಾಸ್ಟರ್ ಪ್ಲಾನ್ ರೂಪಿಸಿದ್ರು. ವಧುವಿಗೆ 50 ಸಾವಿರ ರೂಪಾಯಿ ಮೌಲ್ಯದ ಒಂದು ಸೀಮೆಹಸು ಗಿಫ್ಟ್ ಆಗಿ ಕೊಟ್ರು. ವರನಿಗೆ ಗಂಗಾಕಲ್ಯಾಣ ಯೋಜನೆಯಡಿ ಬೋರ್ ವೆಲ್ (Borewell), ಜಮೀನು ಮಂಜೂರು ಆಫರ್ ನೀಡಿದ್ರು. ಇದರಿಂದ ನೂರಾರು ಜನ ಮದುವೆಗೆ ಅರ್ಜಿ ಸಲ್ಲಿಸಿದ್ರು. 212 ಜೋಡಿಗಳಿಗೆ ಮಾತ್ರ ಮದುವೆಗೆ ಅವಕಾಶ ನೀಡಲಾಯಿತು. ಇದನ್ನೂ ಓದಿ: ಹೆಚ್‌ಡಿಕೆ ಸಿಎಂ ಆಗಲು ಕಾಂಗ್ರೆಸ್ ತ್ಯಾಗ ಮಾಡಿತ್ತು – ಡಿಕೆಶಿ

    ಸಾಮೂಹಿಕ ಮದುವೆಯಲ್ಲಿ ಬಾಲ್ಯ ವಿವಾಹ ನಡೆಯಬಹುದು ಅಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಸ್ಥಳದಲ್ಲೇ ಬೀಡುಬಿಟ್ಟಿದ್ದರು. ಪ್ರತಿಯೊಂದು ಜೋಡಿಯ ದಾಖಲೆ ಹಾಗೂ ಮದುವೆ ನೋಂದಣಿ ಪರಿಶೀಲಿಸಿ, ಕಂಕಣ ಭಾಗ್ಯಕ್ಕೆ ಅವಕಾಶ ನೀಡಲಾಯ್ತು. ಸಾಮೂಹಿಕ ವಿವಾಹಗಳಿಗೆ ಬಂದ ಜನರಿಗೆ ದಾರಿಯುದ್ದಕ್ಕೂ ಉಚಿತ ಎಳನೀರು, ಜ್ಯೂಸ್, ಐಸ್ ಕ್ರೀಂ, ಬಾಳೆಹಣ್ಣು ವಿತರಿಸಿ ಭರ್ಜರಿ ಬಾಡೂಟ ಉಣಬಡಿಸಿದ್ರು.

    ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರ ಓಲೈಕೆಗಾಗಿ ರಾಜಕೀಯ ನಾಯಕರು ಮುಂದಾಗಿದ್ದು, ಜನರಿಗೆ ಉಚಿತ ಉಡುಗೊರೆಗಳ ಮಹಾಪೂರವನ್ನೇ ನೀಡಿ ರಣತಂತ್ರ ರೂಪಿಸ್ತಿದ್ದಾರೆ.