Tag: Masjid

  • ದೆಹಲಿ ಜಮಾತ್‍ನಿಂದಲೇ 3,000 ಸಮೀಪ ಸೋಂಕಿತರು- 24 ಗಂಟೆಯಲ್ಲಿ 336 ಸೋಂಕು, 12 ಸಾವು

    ದೆಹಲಿ ಜಮಾತ್‍ನಿಂದಲೇ 3,000 ಸಮೀಪ ಸೋಂಕಿತರು- 24 ಗಂಟೆಯಲ್ಲಿ 336 ಸೋಂಕು, 12 ಸಾವು

    ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,640ಕ್ಕೆ ಏರಿದೆ. 75 ಜನ ಸಾವನ್ನಪ್ಪಿದ್ದಾರೆ. ಇವತ್ತು ಒಂದೇ ದಿನ 12 ಸಾವಾಗಿದ್ದು, 336 ಹೊಸ ಕೇಸ್‍ಗಳು ಸಾಭೀತಾಗಿವೆ.

    ದೆಹಲಿಯ ತಬ್ಲಿಘಿಯಿಂದಲೇ 14 ರಾಜ್ಯಗಳಿಗೆ ವೈರಸ್ ಹರಡಿದ್ದು, 647 ಮಂದಿಗೆ ಸೋಂಕು ಅಂಟಿದೆ. ನೆರೆಯ ತಮಿಳುನಾಡಿನಲ್ಲಿ ಇವತ್ತು ಒಂದೇ ದಿನ 102 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 411ಕ್ಕೆ ಏರಿದೆ. ದೆಹಲಿಯಲ್ಲಿಯೂ ಇದೇ ಪರಿಸ್ಥಿತಿ ಇದ್ದು, 91 ಹೊಸ ಕೇಸ್ ಪತ್ತೆಯಾಗಿ 384ಕ್ಕೆ ಜಿಗಿದಿದೆ.

    ಮುಂಬೈನ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ 11 ಯೋಧರಿಗೆ ಸೋಂಕು ತಗಲಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‍ನ ಆಸ್ಪತ್ರೆಯಲ್ಲಿ ಕ್ವಾರಂಟೈನ್‍ನಲ್ಲಿರುವ ತಬ್ಲಿಘಿ ಸದಸ್ಯರು ನರ್ಸ್ ಗಳ ಮೇಲೆ ಹಲ್ಲೆ, ದುರ್ವರ್ತನೆ ತೋರುತ್ತಿರುವುದಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಕಿಡಿಕಾರಿದ್ದಾರೆ. ಅವರು ಮಾನವೀಯತೆ ಶತ್ರುಗಳು ಅಂತ ಕಿಡಿಕಾರಿದ್ದು, ಎನ್‍ಎಸ್‍ಎ ಕಾಯಿದೆ ಅಡಿ ಕೇಸ್ ದಾಖಲಿಸುವಂತೆ ಆದೇಶಿಸಿದ್ದಾರೆ. ಎನ್‍ಎಸ್‍ಎ ಪ್ರಕಾರ ಒಂದು ವರ್ಷ ಜೈಲಿನಲ್ಲಿಡುವ ಅವಕಾಶ ಇದೆ.

    ಟಾಪ್ 5 ರಾಜ್ಯಗಳಲ್ಲಿ ಕೊರೊನಾ:
    ಮಹಾರಾಷ್ಟ್ರ – 423
    ತಮಿಳುನಾಡು- 411 (102 ಇವತ್ತು)
    ದೆಹಲಿ – 384 (91 ಇವತ್ತು)
    ಕೇರಳ – 295 (9 ಇವತ್ತು)
    ಉತ್ತರ ಪ್ರದೇಶ- 172 (44 ಇವತ್ತು)

  • ‘ಮುಸ್ಲಿಮರ ಕೈ-ಬಾಯಿಂದ ಮತ್ತೊಬ್ಬರಿಗೆ ತೊಂದರೆ ಆಗಬಾರದು, ಪರೀಕ್ಷಿಸಿಕೊಳ್ಳಿ’

    ‘ಮುಸ್ಲಿಮರ ಕೈ-ಬಾಯಿಂದ ಮತ್ತೊಬ್ಬರಿಗೆ ತೊಂದರೆ ಆಗಬಾರದು, ಪರೀಕ್ಷಿಸಿಕೊಳ್ಳಿ’

    ಚಿಕ್ಕಮಗಳೂರು: ಮುಸ್ಲಿಮರ ಕೈ-ಬಾಯಿಂದ ಮತ್ತೊಬ್ಬರಿಗೆ ತೊಂದರೆ ಆಗಬಾರದು, ಪರೀಕ್ಷಿಸಿಕೊಳ್ಳಿ ಎಂದು ನಗರದ ಅಲ್ ಹುದಾ ಎಜುಕೇಶನ್ ಅಂಡ್ ಚಾರಿಟಬಲ್ ಟ್ರಸ್ಟ್‌ನ ಚೇರ್ಮನ್ ಮೊಹಮ್ಮದ್ ಅಹ್ಮದ್ ಮನವಿ ಮಾಡಿಕೊಂಡಿದ್ದಾರೆ.

    ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಪ್ರವಾದಿಯವರ ವಚನವೇ ಇದೆ, ಮುಸ್ಲಿಂ ಅಂದರೆ ಅವನ ಕೈ ಹಾಗೂ ಬಾಯಿಂದ ಬೇರೆಯವರಿಗೆ ತೊಂದರೆಯಾಗಬಾರದು. ಹಾಗಾಗಿ ಯಾರದಾದರು ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಹೋಗಿದ್ದರೆ ನಿಮ್ಮಲ್ಲಿ ವಿನಮ್ರವಾಗಿ ಪ್ರಾರ್ಥಿಸಿಕೊಳ್ಳುತ್ತೇನೆ ದಯವಿಟ್ಟು ಪರೀಕ್ಷೆಗೆ ಒಳಪಡಿಸಿಕೊಳ್ಳಿ. ಇದರಿಂದ ನಿಮಗೂ, ನಿಮ್ಮ ಕುಟುಂಬಕ್ಕೂ ಹಾಗೂ ದೇಶಕ್ಕೂ ಒಳ್ಳೆದಾಗುತ್ತೆ ಎಂದು ಕೇಳಿಕೊಂಡರು.

    ನಮ್ಮಿಂದ ಸಮಾಜಕ್ಕೆ ಒಳ್ಳೆಯದ್ದಾಗಬೇಕೆ ವಿನಃ ಹಾನಿಯಾಗಬಾರದು. ಕೊರೊನಾ ವೈರಸ್ ಹರಡುವುದಕ್ಕೆ ನಾವು ಕಾರಣವಾಗಬಾರದು. ನಮ್ಮಿಂದ ಕೊರೊನಾ ಹರಡಿ ಬೇರೆಯವಿಗೆ ತೊಂದರೆಯಾಗಬಾರದು ಎಂದು ತಿಳಿಸಿದರು.

    ನನ್ನ ಗಮನಕ್ಕೆ ಬಂದಂತೆ ನಮ್ಮ ಜಿಲ್ಲೆಯಿಂದ ಯಾರೂ ತಬ್ಲಿಘಿ ಜಮಾತ್ ಸಭೆಗೆ ಹೋಗಿಲ್ಲ. ಒಂದು ವೇಳೆ ನನ್ನ ಗಮನಕ್ಕೆ ಬಾರದೆ ಯಾರಾದರೂ ಹೋಗಿದ್ದರೆ ಅಥವಾ ಬೇರೆಯವರು ಹೋದವರು ಇದ್ದರೆ ದಯವಿಟ್ಟು ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ. ನಿಮ್ಮನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿಕೊಳ್ಳಿ ಎಂದು ಮುಸ್ಲಿಂ ಸಮುದಾಯದವರಿಗೆ ಮನವಿ ಮಾಡಿಕೊಂಡರು.

  • ಪ್ರತಿ ಮಸೀದಿಯಿಂದ 200 ಮಂದಿ ಪ್ರತಿಭಟನೆಯಲ್ಲಿ ಭಾಗಿ

    ಪ್ರತಿ ಮಸೀದಿಯಿಂದ 200 ಮಂದಿ ಪ್ರತಿಭಟನೆಯಲ್ಲಿ ಭಾಗಿ

    ಚಾಮರಾಜನಗರ: ಪೌರತ್ವ ಕಾಯ್ದೆ ವಿರುದ್ಧ ಇಂದು ನಗರದಲ್ಲಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ 2 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಪ್ರತಿ ಮಸೀದಿಯಿಂದ 200 ಜನರು ಭಾಗವಹಿಸುತ್ತಿದ್ದಾರೆ.

    ಚಾಮರಾಜನಗರ ತಾಲೂಕಿನಲ್ಲಿರುವ 20ಕ್ಕೂ ಹೆಚ್ಚು ಮಸೀದಿಗಳಿಂದ 200 ಜನರನ್ನು ಪ್ರತಿಭಟನೆಗೆ ಕರೆ ತರುವಂತೆ ಈಗಾಗಲೇ ಎಸ್‍ಡಿಪಿಐ ಮುಸ್ಲಿಂ ಮುಖಂಡರಿಗೆ ಸೂಚನೆ ನೀಡಿದೆ. ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಡಳಿತ ಭವನದ ಮರೆಗೆ ನಡೆಯುವ ಮೆರವಣಿಗೆಯಲ್ಲಿ ಎಲ್ಲರೂ ಪಾಲ್ಗೊಳ್ಳಲಿದ್ದಾರೆ.

    ದೊಡ್ಡಂಗಡಿ ಬೀದಿ ಪ್ರವೇಶವಿಲ್ಲ ನಗರದ ದೊಡ್ಡಂಗಡಿ ಬೀದಿಗೆ ಪ್ರತಿಭಟನಾಕಾರರು ತೆರಳದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಮೆರವಣಿಗೆ ವೇಳೆ ಅಂಗಡಿ-ಮುಂಗಟ್ಟುಗಳಿಗೆ ಹಾನಿಯಾಗಬಾರದು. ಅಲ್ಲದೆ ಈ ರಸ್ತೆಯಲ್ಲಿ ಸದಾ ಕಾಲ ಜನ ಜಂಗುಳಿ ಇರಲಿದೆ ಎಂದು ಇಲ್ಲಿ ಮೆರವಣಿಗೆ ನಡೆಸಲು ಅವಕಾಶ ನೀಡಿಲ್ಲ.

    ಪ್ರವಾಸಿ ಮಂದಿರದಿಂದ ಬೆಳಗ್ಗೆ 10.30ಕ್ಕೆ ಹೊರಡುವ ಪ್ರತಿಭಟನಾಕಾರರು ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣ ರಸ್ತೆ, ಪಚ್ಚಪ್ಪ ವೃತ್ತ ನಂತರ ಜಿಲ್ಲಾಡಳಿತ ಭವನಕ್ಕೆ ತೆರಳಲು ಅವಕಾಶ ದೊರೆತಿದೆ. ಭಾನುವಾರ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಪೊಲೀಸರು ಮುಸ್ಲಿಂ ಮುಖಂಡರಿಗೆ ದೊಡ್ಡಂಗಡಿ ಬೀದಿಗೆ ತೆರಳದಂತೆ ಸೂಚನೆ ನೀಡಿದ್ದಾರೆ.

    ಕ್ಯಾಮರಾ ಕಣ್ಗಾವಲು ಬಂದೂಕು, ಲಾಠಿ ಹಿಡಿದು ಕಾನೂನು ಸುವ್ಯವಸ್ಥೆ ಕಾಪಾಡಲು ಸಜ್ಜಾಗಿರುವ ಪೊಲೀಸರು ಗುಂಪಿನ ನಡುವೆ ಕಿಡಿಗೇಡಿಗಳ ಕೃತ್ಯವನ್ನು ಸುಲಭವಾಗಿ ಪತ್ತೆ ಹಚ್ಚಲು ಹ್ಯಾಂಡಿ ಕ್ಯಾಂ(ಕ್ಯಾಮರಾ) ಬಳಸುತ್ತಿದ್ದಾರೆ.

  • ಅಯೋಧ್ಯೆಯಲ್ಲಿ ಮಸೀದಿಯಾದ್ರೆ ಭಾರತ ಮತ್ತೊಂದು ಮೆಕ್ಕಾ ಆಗುತ್ತೆ – ಪುರಿಶ್ರೀ ನಿಶ್ಚಲಾನಂದ ಶ್ರೀ ಆಕ್ರೋಶ

    ಅಯೋಧ್ಯೆಯಲ್ಲಿ ಮಸೀದಿಯಾದ್ರೆ ಭಾರತ ಮತ್ತೊಂದು ಮೆಕ್ಕಾ ಆಗುತ್ತೆ – ಪುರಿಶ್ರೀ ನಿಶ್ಚಲಾನಂದ ಶ್ರೀ ಆಕ್ರೋಶ

    ಉಡುಪಿ: ಅಯೋಧ್ಯೆ ರಾಮಜನ್ಮಭೂಮಿ ತೀರ್ಪಿನ ನಂತರ ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಪುರಿ ಶಂಕರಾಚಾರ್ಯ ಪೀಠ ನಿಶ್ಚಲಾನಂದ ಸ್ವಾಮೀಜಿ ಮೊತ್ತ ಮೊದಲಬಾರಿಗೆ ಭೇಟಿಯಾಗಿ ಬಿಸಿ ಬಿಸಿ ಚರ್ಚೆ ನಡೆಸಿದ್ದಾರೆ. ಉಡುಪಿ ಪೇಜಾವರ ಮಠದಲ್ಲಿ ಇಬ್ಬರ ಯತಿಗಳ ಮುಖಾಮುಖಿಯಾಗಿದೆ.

    ಪುರಿ ಶ್ರೀ ನಿಶ್ಚಲಾನಂದ ಸ್ವಾಮೀಜಿ ಅಯೋಧ್ಯೆ ತೀರ್ಪಿನ ಬಗ್ಗೆ ಅಸಮಾಧಾನ ಹೊರ ಹಾಕಿದರು. ಅಯೋಧ್ಯೆಯಲ್ಲಿ ಮುಸ್ಲೀಮರಿಗೆ ಒಂದಿಂಚೂ ಭೂಮಿ ನೀಡಬಾರದು. ಅಯೋಧ್ಯೆಯನ್ನು ಮುಸಲ್ಮಾನರು ಮತ್ತೊಂದು ಮೆಕ್ಕಾ ಮಾಡಲು ತಯಾರಿ ನಡೆಸುತ್ತಾರೆ ನೋಡುತ್ತಿರಿ ಎಂದು ಪೇಜಾವರಶ್ರೀ ಮುಂದೆ ಕೋಪ ಹೊರಹಾಕಿದರು. ಸುಪ್ರೀಂ ಕೋರ್ಟಿಗಿಂತ ಪಾರ್ಲಿಮೆಂಟ್ ದೊಡ್ಡದು. ಪಾರ್ಲಿಮೆಂಟಲ್ಲಿ ಬಿಜೆಪಿಗೆ ಬಹುಮತ ಇದೆ. ಸುಪ್ರೀಂ ಕೋರ್ಟ್ ತೀರ್ಪನ್ನು ರದ್ದು ಮಾಡಲಿ ಎಂದರು.

    ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣವಾಗದಂತೆ ಬಿಜೆಪಿ ಸರ್ಕಾರ ನೋಡಿಕೊಳ್ಳಬೇಕು ಎಂದು ಪುರಿ ಶ್ರೀಗಳು ತಾಕೀತು ಮಾಡಿದರು. ಧಾರ್ಮಿಕ ವಿಚಾರದಲ್ಲಿ ಸಂತರೇ ಸುಪ್ರೀಂ. ಸುಪ್ರೀಂ ಕೋರ್ಟ್ ಯಾಕೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿ ಸೆಕ್ಯೂಲರ್ ಸಂವಿಧಾನವನ್ನು ನಾನು ಒಪ್ಪೋದಿಲ್ಲ ಎಂದು ಗರಂ ಆಗಿ ನುಡಿದರು.

    ರಾಮನಿಗೆ ಅಧಿಕಾರವಿಲ್ವಾ..?
    ವಿಭಜಿತ ಭಾರತದಲ್ಲಿ ರಾಮ ಜನ್ಮಭೂಮಿಯ ಮೇಲಾದರೂ ನಮಗೆ ಪೂರ್ಣ ಅಧಿಕಾರ ಸಿಗಲಿ. ರಾಮ ಹುಟ್ಟಿದ ಭಾರತದಲ್ಲೇ ರಾಮಮಂದಿರಕ್ಕಾಗಿ ಇಷ್ಟು ವರ್ಷ ಕಾಯಬೇಕೇ? ನಮ್ಮ ಮಂದಿರಕ್ಕಾಗಿ ನಮ್ಮ ದೇಶದಲ್ಲಿ ಇಷ್ಟೊಂದು ಕ್ಲಿಷ್ಟಕರ ವಾತಾವರಣವೇ ಎಂದು ಅಸಮಾಧಾನ ವ್ಯಕ್ತ ಮಾಡಿದರು. ಇದು ಭಾರತವನ್ನು ಇನ್ನೊಂದು ಮೆಕ್ಕಾ ಮಾಡುವ ಷಡ್ಯಂತ್ರ. ನಮ್ಮ ಉದಾರತೆ ದೌರ್ಬಲ್ಯ ಆಗಬಾರದು ಎಂದು ಸಲಹೆ ನೀಡಿದರು.

    ಬಿಜೆಪಿಗೆ ಚಾಟಿ
    ಆಡಳಿತ ದುರಾಸೆ ಇಲ್ಲದ ಯಾವುದೇ ರಾಜಕೀಯ ಪಕ್ಷ ಈ ದೇಶದಲ್ಲಿ ಇಲ್ಲ ಎಂದು ಬಿಜೆಪಿಗೆ ಚಾಟಿ ಬೀಸಿ, ಮಹಾರಾಷ್ಟ್ರ, ಗೋವಾ, ಜಮ್ಮು ಕಾಶ್ಮೀರದಲ್ಲಿ ಬಿಜೆಪಿಯ ಅಧಿಕಾರದ ಲಾಲಸೆಯ ಉದಾಹರಣೆ ನೀಡಿದರು. ಸಂತರು ಕೂಡಾ ರಾಜಕಾರಣಿಗಳನ್ನು ಅನುಸರಿಸುತ್ತರುವುದು ಶೋಚನೀಯ ಎಂದು ಮಠಾಧೀಶರ ರಾಜಕೀಯ ಆಸಕ್ತಿ ಬಗ್ಗೆ ಪ್ರಸ್ತಾಪಿಸಿ ವಿರೋಧಿಸಿದರು. ಅಯೋಧ್ಯೆಯಲ್ಲಿ ಒಂದಿಂಚು ಭೂಮಿ ಮುಸ್ಲಿಂರಿಗೆ ನೀಡೋದಕ್ಕೆ ನನ್ನ ಸಹಮತ ಇಲ್ಲ ಎಂದರು.

    ಮುಸ್ಲಿಂ ನಾಯಕರಿಗೆ ರಾಷ್ಟ್ರದ ಉನ್ನತ ಹುದ್ದೆಗಳನ್ನು ನೀಡಿದ್ದೇವೆ. ರಾಷ್ಟ್ರಪತಿ, ಗೃಹ ಸಚಿವ, ಸುಪ್ರೀಂ ಕೋರ್ಟಿನ ನ್ಯಾಯಾಧೀಶ ಪಟ್ಟ ಸಿಕ್ಕಿದೆ. ಅಯೋಧ್ಯೆಯ ಭೂಮಿಯನ್ನೂ ಕೊಟ್ಟಿರುವುದು ಎಷ್ಟು ಸರಿ ಎಂದು ಪೇಜಾವರ ಶ್ರೀಗಳನ್ನು ಪ್ರಶ್ನೆ ಮಾಡಿದರು. ಮಸೀದಿ ಅಲ್ಲಿ ಆಗಬೇಕು ಎಂದು ಎಲ್ಲಾ ರಾಜಕೀಯ ಪಕ್ಷಗಳು ಹೇಳುತ್ತವೆ. ನಿಮ್ಮಂತಹಾ ವೀರ ಸಂತರು ಹಿಂದೂ ಧರ್ಮ ದುರ್ಬಲವಾಗದಂತೆ ನೊಡಿಕೊಳ್ಳಬೇಕು ಎಂದು ಪುರಿ ನಿಶ್ಚಲಾನಂದ ಶ್ರೀ ಕೋರಿಕೆ ವ್ಯಕ್ತಪಡಿಸಿದರು. ಸಮಾಲೋಚನೆ ಉದ್ದಕ್ಕೂ ಪೇಜಾವರಶ್ರೀ ಸಮಾನತೆ, ಸಂವಿಧಾನ ಸಹಬಾಳ್ವೆ ಮತ್ತು ಏಕತೆಯ ಮಂತ್ರ ಜಪಿಸಿದರೂ ಪುರಿಶ್ರೀ ಅದಕ್ಕೆ ಧನಿಗೂಡಿಸದೆ ತನ್ನದೇ ವಾದ ಮಂಡಿಸಿ ತೆರಳಿದರು.

  • ಅಯೋಧ್ಯೆಯಲ್ಲಿ ರಾಮ ಮಂದಿರ, ಮಸೀದಿ ಎರಡು ಆಗಬೇಕು: ಪೇಜಾವರ ಶ್ರೀ

    ಅಯೋಧ್ಯೆಯಲ್ಲಿ ರಾಮ ಮಂದಿರ, ಮಸೀದಿ ಎರಡು ಆಗಬೇಕು: ಪೇಜಾವರ ಶ್ರೀ

    ಬೆಳಗಾವಿ: ಅಯೋಧ್ಯೆಯಲ್ಲಿ ರಾಮ ಮಂದಿರ, ಮಸೀದಿ ಎರಡು ಆಗಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂದಿರದಿಂದ ಸ್ವಲ್ಪ ದೂರದಲ್ಲಿ ಮಸೀದಿ ನಿರ್ಮಾಣವಾಗಬೇಕು. ಸಂಧಾನ ಮೂಲಕದ ವಿವಾದ ಇತ್ಯರ್ಥವಾದರೆ ಉತ್ತಮ. ಇಲ್ಲವಾದಲ್ಲಿ ಕೇಂದ್ರ ಸರ್ಕಾರ ಉತ್ತಮ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದರು.

    ಪ್ರಯಾಗ್‍ರಾಜ್‍ನಲ್ಲಿ ನಡೆದ ಹಿಂದೂಗಳ ಸಮ್ಮೇಳನದಲ್ಲಿ ರಾಮಮಂದಿರದ ಬಗ್ಗೆ ಚರ್ಚೆ ನಡೆದಿದೆ. 4 ತಿಂಗಳು ಚುನಾವಣೆ ಸಂದರ್ಭದಲ್ಲಿ ಈ ಬಗ್ಗೆ ಚರ್ಚೆ ಬೇಡ ಎಂದು ನಿರ್ಧರಿಸಲಾಗಿದೆ ಎಂದು ಹೇಳಿದರು.

    ಬಿಜೆಪಿಗೆ ಲೋಕಸಭೆಯಲ್ಲಿ ಬಹುಮತ ಇದ್ದರೂ ರಾಜ್ಯಸಭೆಯಲ್ಲಿ ಇಲ್ಲ. ಸುಪ್ರೀಂ ಕೋರ್ಟ್ ನಲ್ಲೂ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರಾಮ ಮಂದಿರದ ಬಗ್ಗೆ ಏನು ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದರು.

  • ಬಿಜೆಪಿಯ ಟೆಂಪಲ್ ರನ್ ಟೀಕೆಗೆ ಖಡಕ್ ಪ್ರತಿಕ್ರಿಯೆ ಕೊಟ್ಟ ರಾಹುಲ್ ಗಾಂಧಿ!

    ಬಿಜೆಪಿಯ ಟೆಂಪಲ್ ರನ್ ಟೀಕೆಗೆ ಖಡಕ್ ಪ್ರತಿಕ್ರಿಯೆ ಕೊಟ್ಟ ರಾಹುಲ್ ಗಾಂಧಿ!

    ಬೆಂಗಳೂರು: ಈ ಚುನಾವಣೆ ನನ್ನ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಚುನಾವಣೆಯಲ್ಲ. ರಾಜ್ಯದ ಜನರ ಸ್ಫೂರ್ತಿಯ ಚುನಾವಣೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

    ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕಡೆಯ ದಿನವಾದ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ನಂಬಿಕೆಗಳ ಮೇಲೆ ನಾವು ಜೀವನ ಮಾಡುತ್ತಿದ್ದೇವೆ. ಕಳೆದ 15 ವರ್ಷದಿಂದ ನಾನು ಹಲವು ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದೇನೆ. ಮಂದಿರ, ಮಸೀದಿ, ಚರ್ಚ್ ಗಳಿಗೆ ಭೇಟಿ ನೀಡಿದ್ದೇನೆ. ನಮಗೆ ಎಲ್ಲ ಸಮುದಾಯಗಳೂ ಮುಖ್ಯ. ಅವರು ಬೇಡ, ಇವರು ಬೇಡ ಅನ್ನುವ ಪಕ್ಷ ನಮ್ಮದಲ್ಲ. ಆದರೆ ಹೀಗೆ ಭೇಟಿ ಕೊಟ್ಟಾಗ ಬಿಜೆಪಿಯವರಿಗೆ ಅದನ್ನ ಸಹಿಸಿಕೊಳ್ಳಲು ಆಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಮಠ ಮಾನ್ಯಗಳು ನೆನಪಾಗುತ್ತದೆ ಎಂದು ಟೀಕಿಸುತ್ತಾರೆ. ಹಿಂದಿನ ಅನೇಕ ಚುನಾವಣೆಗಳಲ್ಲಿ ಇದೇ ರೀತಿಯ ಟೀಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯದ ಜನರ ಮೇಲೆ ನಂಬಿಕೆಯಿಟ್ಟಿದ್ದೇವೆ. ಯುವಜನತೆಗೆ ಉದ್ಯೋಗ ಸೃಷ್ಠಿ ನಮ್ಮ ಗುರಿ. ಐಟಿ ಸಿಟಿ, ಗಾರ್ಡನ್ ಸಿಟಿ ಹೆಸರು ನಾವು ಉಳಿಸುತ್ತೇವೆ. ಮಹದಾಯಿ ನದಿ ನೀರು ಹಂಚಿಕೆ ಕುರಿತು ಕಾಂಗ್ರೆಸ್ ನಿಲುವೇನು ಎಂಬುದನ್ನು ಶೀಘ್ರದಲ್ಲಿಯೇ ಸ್ಪಷ್ಟಪಡಿಸುತ್ತೇವೆ ಎಂದು ಹೇಳಿದರು.

    ಮಾತನಾಡಿದ ಅವರು ಈ ಚುನಾವಣೆ ನನ್ನ ಭವಿಷ್ಯಕ್ಕಾಗಿ ಅಲ್ಲ. ಮುಂದೆ ಪ್ರಧಾನಿ ಆಗಲು ಸಹಕಾರಿಯೂ ಅಲ್ಲ. ಬೆಂಗಳೂರು ರಾಷ್ಟ್ರದ ಹೆಮ್ಮೆ. ದೇಶಕ್ಕೆ ಕರ್ನಾಟಕದ ಕೊಡುಗೆ ಅಪಾರ. ಈ ಚುನಾವಣೆಯಿಂದ ಕರ್ನಾಟಕ ಇನ್ನೂ ಹೆಚ್ಚಿನ ಅಭಿವೃದ್ಧಿಯ ಕಡೆಗೆ ನಡೆಯಬೇಕಿದೆ ಎಂದು ಹೇಳಿದರು.

    ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಓಡಾಡಿದ್ದೇನೆ. ನಾವು ಯಾರ ವಿರುದ್ಧವೂ ಟೀಕೆ ಮಾಡಿಲ್ಲ. ಸಂವಿಧಾನದ ಆಶಯಗಳನ್ನಿಟ್ಟುಕೊಂಡು ಚುನಾವಣೆಗೆ ಹೊರಟಿದ್ದೇವೆ. ರಾಜ್ಯದ ಜನರನ್ನ ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ರಚಿಸಿದ್ದೇವೆ. ಜನರ ಆಶಯಗಳಿಗೆ ಅನುಗುಣವಾಗಿ ಪ್ರಣಾಳಿಕೆ ತಯಾರಾಗಿದೆ. ವೀರಪ್ಪ ಮೊಯ್ಲಿ ಉತ್ತಮ ಪ್ರಣಾಳಿಕೆ ರಚಿಸಿದ್ದಾರೆ. ಕರ್ನಾಟಕದ ಜನರ ಧ್ವನಿಯಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಕೊಟ್ಟ ಭರವಸೆ ಈಡೇರಿಸುವ ಗುರಿ ನಮ್ಮದು. ರಾಜ್ಯದ ಜನ ಚುನಾವಣೆಯಲ್ಲಿ ನಮ್ಮ ಪರ ನಿಲ್ಲಲಿದ್ದಾರೆ, ಆ ಭರವಸೆ ನಮಗಿದೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಗೆ ಬಹುಮತ ಬರುತ್ತದೆ. ಅತಂತ್ರ ವಿಧಾನಸಭೆಗೆ ಆಸ್ಪದವೇ ಇಲ್ಲ. ಈ ಚುನಾವಣೆ ಕನ್ನಡದ ಅಸ್ಮಿತೆ ಮೇಲೆ ನಡೆಯುತ್ತಿದೆ. ಕರ್ನಾಟಕದ ಜನ ಕಾಂಗ್ರೆಸ್ಸನ್ನು ಆರಿಸುತ್ತಾರೆ. ಬಸವ ತತ್ವವೇ ನಮ್ಮ ತತ್ವ. ಅದೇ ನಮಗೆ ಸ್ಪೂರ್ತಿ. ಆರ್‍ಎಸ್‍ಎಸ್ ಕರ್ನಾಟಕವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು. ಜಾಗ್ರತೆಯಿಂದ ಇರಿ ಎಂದು ಎಚ್ಚರಿಕೆ ನೀಡಿದರು.

    ಭಾಷೆ, ಸಂಸ್ಕ್ರತಿ ಮತ್ತು ಬಸವ ತತ್ವದ ಮೇಲೆ ಸವಾರಿ ಮಾಡಲು ಆರ್‍ಎಸ್‍ಎಸ್ ಹೊರಟಿದೆ. ಆರ್‍ಎಸ್‍ಎಸ್ ಸಿದ್ಧಾಂತ ಮತ್ತು ಕರ್ನಾಟಕದ ಅಸ್ಮಿತೆಯ ಮಧ್ಯೆ ನಡೆಯುವ ಹೋರಾಟ ಈ ಚುನಾವಣೆ. ಕರ್ನಾಟಕದ ಅಸ್ಮಿತೆಯನ್ನ ಉಳಿಸಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

    ಈ ಬಾರಿ ಬಿಜೆಪಿಯವರು ನನ್ನ ಹಾಗೂ ನಮ್ಮ ನಾಯಕರುಗಳ ಮೇಲೆ ವೈಯುಕ್ತಿಕವಾಗಿ ವಾಗ್ದಾಳಿ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ. ಆದರೆ ಮಹಿಳೆ, ಯುವತಿಯರ ಮೇಲಿನ ಅತ್ಯಾಚಾರ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿಲ್ಲ. ಇದು ದೇಶದಲ್ಲೇ ಚರ್ಚೆಯಾಗಬೇಕಾದ ವಿಚಾರ. ದೇಶದ ಜನರ ಹಕ್ಕು, ರಕ್ಷಣೆಯ ವಿಚಾರ. ಕಚ್ಛಾ ತೈಲ ಬ್ಯಾರಲ್ ಬೆಲೆ 140 ಡಾಲರ್ ನಿಂದ 70 ಡಾಲರ್ ಗೆ ಇಳಿದಿದೆ. ಆದರೂ ಪೆಟ್ರೋಲ್ ಬೆಲೆ ಕಡಿಮೆ ಮಾಡಿಲ್ಲ ಇದರಿಂದ ದೇಶದ ಜನರಿಗೆ ಮತ್ತಷ್ಟು ಹೊರೆಯಾಗಿದೆ ಎಂದು ಕಿಡಿಕಾರಿದರು.

    ರೆಡ್ಡಿ ಬ್ರದರ್ಸ್ ರಾಜ್ಯವನ್ನೇ ಲೂಟಿ ಹೊಡೆದಿದ್ದಾರೆ. 35 ಸಾವಿರ ಕೋಟಿ ರಾಜ್ಯದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ. ಇದರ ಬಗ್ಗೆ ಯಾಕೆ ಯಾರು ಮಾತನಾಡುವುದಿಲ್ಲ ಎಂದು ಪ್ರಶ್ನೆ ಮಾಡಿದರು.

    ದಲಿತರಿಗೆ ದೇಶದಲ್ಲಿ ರಕ್ಷಣೆಯಿಲ್ಲದಂತಾಗಿದೆ. ಉತ್ತರ ಪ್ರದೇಶದಲ್ಲಿ ದಲಿತರ ಮೇಲಿನ ಹಲ್ಲೆ ನಿಂತಿಲ್ಲ. ತಡೆಯುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ. ರೋಹಿತ್ ವೇಮುಲ ಸಾವು ಏನಾಯ್ತು?. ಉನ್ನಾವ್, ಕತುವಾ ಅತ್ಯಾಚಾರದಲ್ಲಿ ಹೇಗೆ ನಡೆದುಕೊಂಡರು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ನಮ್ಮ ನಂಬಿಕೆಗಳ ಮೇಲೆ ನಾವು ಜೀವನ ಮಾಡುತ್ತಿದ್ದೇವೆ. ಕಳೆದ 15 ವರ್ಷದಿಂದ ನಾನು ಹಲವು ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದೇನೆ. ಮಂದಿರ, ಮಸೀದಿ, ಚರ್ಚ್ ಗಳಿಗೆ ಭೇಟಿ ನೀಡಿದ್ದೇನೆ. ನಮಗೆ ಎಲ್ಲ ಸಮುದಾಯಗಳೂ ಮುಖ್ಯ. ಅವರು ಬೇಡ, ಇವರು ಬೇಡ ಅನ್ನುವ ಪಕ್ಷ ನಮ್ಮದಲ್ಲ. ಆದರೆ ಹೀಗೆ ಭೇಟಿ ಕೊಟ್ಟಾಗ ಬಿಜೆಪಿಯವರಿಗೆ ಅದನ್ನ ಸಹಿಸಿಕೊಳ್ಳಲು ಆಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಮಠ ಮಾನ್ಯಗಳು ನೆನಪಾಗುತ್ತದೆ ಎಂದು ಟೀಕಿಸುತ್ತಾರೆ. ಹಿಂದಿನ ಅನೇಕ ಚುನಾವಣೆಗಳಲ್ಲಿ ಇದೇ ರೀತಿಯ ಟೀಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.