Tag: Masculinity

  • ಪುರುಷತ್ವಕ್ಕೆ ಕುತ್ತಾಗುವ ಸ್ಟಿರಾಯ್ಡ್ ಮಾರಾಟ – ಬೆಂಗ್ಳೂರಿನ ಜಿಮ್ ಟ್ರೈನರ್ ಬಂಧನ

    ಪುರುಷತ್ವಕ್ಕೆ ಕುತ್ತಾಗುವ ಸ್ಟಿರಾಯ್ಡ್ ಮಾರಾಟ – ಬೆಂಗ್ಳೂರಿನ ಜಿಮ್ ಟ್ರೈನರ್ ಬಂಧನ

    ಬೆಂಗಳೂರು: ಹಲವರು ಫಿಟ್‍ನೆಸ್ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಹಾಗೂ ದಪ್ಪ ಆಗಬೇಕು ಎಂಬ ಉದ್ದೇಶದಿಂದ ಜಿಮ್‍ಗೆ ಹೋಗುತ್ತಾರೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ಜಿಮ್‍ಗಳು ಹಾನಿಕಾರಕ ಔಷಧಿಗಳನ್ನು ನೀಡಿ ಜಿಮ್‍ಗೆ ತೆರಳುವವರ ಜೀವನವನ್ನೇ ಹಾಳು ಮಾಡುತ್ತಿವೆ. ಇಂತಹ ಹಾನಿಕಾರಕ ಔಷಧಿ ನೀಡುತ್ತಿದ್ದ ಜಿಮ್ ಮೇಲೆ ಪೊಲೀಸರು ದಾಳಿ ನಡೆಸಿ ತರಬೇತುದಾರನನ್ನು ಬಂಧಿಸಿದ್ದಾರೆ.

    ನಗರದ ಚಾಮರಾಜಪೇಟೆಯ ನಾಲ್ಕನೇ ಮುಖ್ಯ ರಸ್ತೆಯಲ್ಲಿರುವ ಅಲ್ಟಿಮೇಟ್ ಫಿಟ್ನೆಸ್ ಹೆಸರಿನ ಜಿಮ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಜಿಮ್ ತರಬೇತುದಾರ ಶಿವಕುಮಾರ್ ನನ್ನು ಬಂಧಿಸಿದ್ದಾರೆ. ಈತ ಜಿಮ್‍ಗೆ ಬರುವವರಿಗೆಲ್ಲ ಹಾನಿಕಾರಕ ಔಷಧಿ ಸ್ಟಿರಾಯ್ಡ್ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಆಗಸ್ಟ್ 21ರಂದು ಜಿಮ್ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಜಿಮ್‍ನಲ್ಲಿ ಹಲವು ಸ್ಟಿರಾಯ್ಡ್ ಔಷಧಿಯ ಬಾಕ್ಸ್ ಗಳು ಪತ್ತೆಯಾಗಿದ್ದವು.

    ದಾಳಿ ವೇಳೆ ದೇಹವನ್ನು ಹುರಿಗೊಳಿಸುವ ಮಾತ್ರೆಗಳು ಮತ್ತು ಇಂಜೆಕ್ಷನ್‍ಗಳು ಜೊತೆಗೆ ಕೆಲವು ಪ್ರೊಟೀನ್ ಬಾಟಲ್‍ಗಳು ಸಹ ಪತ್ತೆಯಾಗಿವೆ. ಆನ್‍ಲೈನ್ ಮೂಲಕ ಸ್ಟಿರಾಯ್ಡ್ ತರಿಸಿಕೊಳ್ತಿದ್ದ ಆರೋಪಿ ಗ್ರಾಹಕರ ಇಚ್ಛೆಗೆ ಅನುಗುಣವಾಗಿ ಸ್ಟಿರಾಯ್ಡ್ ನೀಡುತ್ತಿದ್ದ. ಈ ಭಯಾನಕ ಔಷಧಿಯಿಂದ ಪುರುಷತ್ವಕ್ಕೆ ಕುತ್ತು ಉಂಟಾಗಲಿದೆ. ಆರೋಪಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 406 ಮತ್ತು 420ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಔಷಧ ನಿಯಂತ್ರಣ ಇಲಾಖೆಗೆ ಪತ್ರ ಬರೆದು ಜಪ್ತಿಯಾದ ಔಷಧಗಳ ತಪಾಸಣೆ ನಡೆಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.