Tag: Maruthi Car

  • ಇನ್ನು ಮುಂದೆ ಜಿಪ್ಸಿ ಕಾರು ರಸ್ತೆಗೆ ಇಳಿಯಲ್ಲ!

    ಇನ್ನು ಮುಂದೆ ಜಿಪ್ಸಿ ಕಾರು ರಸ್ತೆಗೆ ಇಳಿಯಲ್ಲ!

    ನವದೆಹಲಿ: ಮಿಲಿಟರಿ, ಪೊಲೀಸ್ ಇಲಾಖೆ, ಮಣ್ಣಿನ ರೇಸ್ ಟ್ರ್ಯಾಕ್ ಗಳಲ್ಲಿ ಗುರುತಿಸಿಕೊಂಡಿದ್ದ ಜಿಪ್ಸಿ ಕಾರಿನ ಉತ್ಪಾದನೆಯನ್ನು ನಿಲ್ಲಿಸಲು ಮಾರುತಿ ಸುಜುಕಿ ಕಂಪನಿ ಮುಂದಾಗಿದೆ.

    ಪ್ರಸ್ತುತ ಜಿಪ್ಸಿ ಕಾರನ್ನು ಮುಂಗಡ ಬುಕ್ಕಿಂಗ್ ಆಧಾರದ ಮೇಲೆ ಗ್ರಾಹಕರಿಗೆ ವಿತರಣೆ ಮಾಡಲಾಗುತಿತ್ತು. ಈಗ ಮಾರುತಿ ಸುಜುಕಿ ಕಂಪನಿ ಶೋ ರೂಮ್ ಡೀಲರ್ ಗಳಿಗೆ ಮುಂಗಡ ಬುಕ್ಕಿಂಗ್ ಆರ್ಡರ್ ಸ್ವೀಕರಿಸಬೇಡಿ ಎಂದು ಸೂಚಿಸಿದೆ.

    ಅಪಘಾತಗಳಿಂದ ಪ್ರಾಣ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲ ವಾಹನಗಳು ಕನಿಷ್ಠ ಸುರಕ್ಷತಾ ಮಾನದಂಡವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಕಾರು ಉತ್ಪಾದಕಾ ಕಂಪನಿಗಳಿಗೆ ಸೂಚಿಸಿದೆ. ಏಪ್ರಿಲ್ 2019 ರಿಂದ ರಸ್ತೆಗೆ ಇಳಿಯಲಿರುವ ಕಾರುಗಳು ಈ ಮಾನದಂಡವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಸರ್ಕಾರ ಆದೇಶಿಸಿದೆ. ಇದನ್ನೂ ಓದಿ: 2020ರಿಂದ ಮಾರುತಿ ಓಮ್ನಿ ಕಾರು ಉತ್ಪಾದನೆ ಸ್ಥಗಿತ

    ಕನಿಷ್ಠ ಸುರಕ್ಷತಾ ಮಾನದಂಡ ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಜಿಪ್ಸಿ ಕಾರನ್ನು ಮಾರುತಿ ಕಂಪನಿ ಕೆಲವೊಂದು ಬದಲಾವಣೆ ಮಾಡಿ ರಸ್ತೆಗೆ ಇಳಿಸಲು ಪ್ರಯತ್ನ ನಡೆಸಿತ್ತು. ಆದರೆ ಹೊಸ ರಕ್ಷಣೆ ಮತ್ತು ಕ್ರ್ಯಾಶ್ ಟೆಸ್ಟ್ ತೇರ್ಗಡೆಯಾಗಲು ವಿಫಲವಾದ ಹಿನ್ನೆಲೆಯಲ್ಲಿ ಜಿಪ್ಸಿ ಕಾರಿನ ಉತ್ಪಾದನೆಯನ್ನೇ ನಿಲ್ಲಿಸಲು ಮುಂದಾಗಿದೆ.

    1985ರಲ್ಲಿ ಮೊದಲ ಜಿಪ್ಸಿ ಕಾರು ರಸ್ತೆಗೆ ಇಳಿದಿದ್ದು, ಅಲ್ಲಿಂದ ಇಲ್ಲಿಯವರೆಗೆ ಅದೇ ವಿನ್ಯಾಸದಲ್ಲೇ ಉತ್ಪಾದನೆಯಾಗುತಿತ್ತು. 1998ರಲ್ಲಿ ಮೂರನೇ ತಲೆಮಾರಿನ ಜಿಪ್ಸಿ ತಯಾರಾಗಿದ್ದರೆ ಕಳೆದ ವರ್ಷ ನಾಲ್ಕನೇ ತಲೆಮಾರಿನ ಕಾರನ್ನು ಮಾರುತಿ ಅಭಿವೃದ್ಧಿ ಪಡಿಸಿತ್ತು. ಇದನ್ನೂ ಓದಿ: ಬಿಎಸ್4 ಕಾರಿಗೆ ಬಿಎಸ್6 ಇಂಧನ ಹಾಕಿದ್ರೆ ಏನಾಗುತ್ತೆ?

    ಆಫ್ ರೋಡ್ ನಲ್ಲಿ 4*4 ಜಿಪ್ಸಿ ಕಾರು ಬಹಳ ಚೆನ್ನಾಗಿ ಕಾರ್ಯನಿರ್ವಹಿಸುತಿತ್ತು. ಹೀಗಾಗಿ ಮಿಲಿಟರಿ ಮತ್ತು ಗ್ರಾಮೀಣ ಭಾಗದಲ್ಲಿ ಜಿಪ್ಸಿ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ವಿದೇಶದಲ್ಲೂ ಜಿಪ್ಸಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಭಾರತದಲ್ಲಿ ಜಿಪ್ಸಿ ಎಂದು ಕರೆಯುತ್ತಿದ್ದರೆ ವಿದೇಶದಲ್ಲಿ ಸಮರಾಯ್ ಅಥವಾ ಎಸ್‍ಜೆ410 ಹೆಸರಿನಲ್ಲಿ ಮಾರಾಟವಾಗುತಿತ್ತು. ಇದನ್ನೂ ಓದಿ:  ಏನಿದು ಕ್ರ್ಯಾಶ್ ಟೆಸ್ಟ್? ಹೇಗೆ ಅಂಕ ನೀಡಲಾಗುತ್ತದೆ?

    ಆರಂಭದಲ್ಲಿ 1.0 ಲೀಟರ್ ಎಂಜಿನ್ ನಲ್ಲಿ ಬಿಡುಗಡೆಯಾಗಿದ್ದ ಜಿಪ್ಸಿ ನಂತರ 1.3 ಲೀಟರ್ ಎಂಜಿನ್, 5 ಗೇರ್ ಗಳಲ್ಲಿ ಬಿಡುಗಡೆಯಾಗುತಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಕೇರಳ ಪ್ರವಾಹ – ಮಾರುತಿ ಸುಜುಕಿಯ 357 ಹೊಸ ಕಾರುಗಳು ಗುಜುರಿಗೆ!

    ಕೇರಳ ಪ್ರವಾಹ – ಮಾರುತಿ ಸುಜುಕಿಯ 357 ಹೊಸ ಕಾರುಗಳು ಗುಜುರಿಗೆ!

    ತಿರುವನಂತಪುರ: ಕೇರಳ ಪ್ರವಾಹಕ್ಕೆ ಒಂದೇ ಕಾರ್ ಶೋರೂಂನ 357 ಹೊಸ ಕಾರುಗಳು ಸಂಪೂರ್ಣ ಹಾಳಾಗಿದ್ದು, ಎಲ್ಲಾ ಕಾರುಗಳನ್ನು ಗುಜುರಿಗೆ ಹಾಕಲು ಶೋರೂಂ ಮಾಲೀಕರು ನಿರ್ಧರಿಸಿದ್ದಾರೆ.

    ಪ್ರವಾಹದಿಂದಾಗಿ ತ್ರಿಶೂರ್ ನ ಮಾರುತಿ ಸುಜುಕಿ ಕಾರು ಡೀಲರ್ ಬಿಆರ್‌ಡಿ ಕಾರ್ ವರ್ಲ್ಡ್ ಶೋರಂನ ಒಟ್ಟು 357 ಹೊಸ ಕಾರುಗಳೂ ನೀರಿನಿಂದ ತುಂಬಿಕೊಂಡು ಸಂಪೂರ್ಣ ಹಾಳಾಗಿ ಹೋಗಿದೆ. ಇದಲ್ಲದೇ 147 ಬಳಸಿದ ಕಾರುಗಳು ಹಾಗೂ 110 ಗ್ರಾಹಕರ ವಾಹನಗಳಿಗಾಗಿರುವ ಹಾನಿಯ ಬಗ್ಗೆಯೂ ಸಹ ವಿಮೆ ಸಮೀಕ್ಷಕರು ಮೌಲ್ಯಮಾಪನ ನಡೆಸುತ್ತಿದ್ದಾರೆ.

    ನಷ್ಟವಾದ 357 ಹೊಸ ಕಾರುಗಳ ಮಾರುಕಟ್ಟೆ ಮೌಲ್ಯ ಜಿಎಸ್‍ಟಿ ಸೇರಿದಂತೆ ಒಟ್ಟು 28.75 ಕೋಟಿ ರೂಪಾಯಿಯಾಗಿದೆ. ಅಲ್ಲದೇ ಶೋರೂಮಿನಲ್ಲಿ ಸುಮಾರು 500 ಹೊಸ ಕಾರುಗಳನ್ನು ಶೇಖರಿಸಿ ಇಡಲಾಗಿತ್ತು, ನೀರಿನ ಪ್ರಮಾಣ ಹೆಚ್ಚಾದ ಕಾರಣ ಕೆಲವು ಕಾರುಗಳನ್ನು ಮಾತ್ರ ಸುರಕ್ಷತಾ ಸ್ಥಳಕ್ಕೆ ರವಾನೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

    ಈ ಎಲ್ಲಾ ಕಾರುಗಳಲ್ಲಿ ಡ್ಯಾಶ್‍ಬೋರ್ಡ್‍ನವರೆಗೂ ನೀರು ತುಂಬಿದ್ದ ಕಾರಣ ವಿಮಾ ಸಂಸ್ಥೆಯವರು `ಸಿ’ ವಿಭಾಗದಡಿ ಸೇರಿಸಿ ಸಂಪೂರ್ಣ ನಷ್ಟ ಎಂದು ವರದಿ ನೀಡಿದ್ದಾರೆ. ಹೀಗಾಗಿ ವಾಹನಗಳನ್ನು ಕಡಿಮೆ ಬೆಲೆಗೆ ಪುಣೆ, ಜೈಪುರ ಹಾಗೂ ಅಹಮದಾಬಾದಿನ ಗುಜುರಿದಾರರಿಗೆ ಮಾರಲು ಕಂಪೆನಿ ನಿರ್ಧರಿಸಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಶೋರೂಂ ಅಧಿಕಾರಿಗಳು, ಪ್ರವಾಹದಿಂದ ಸಂಪೂರ್ಣ ಹಾಳಾಗಿರುವ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ. ಅಲ್ಲದೇ ಆ ಕಾರುಗಳ ಮಾರಾಟವನ್ನು ಸಹ ನಿಷೇಧಿಸಲಾಗುತ್ತದೆ. ಅಂತಹ ವಾಹನಗಳು ನಮ್ಮ ಶೋರೂಂಗಳಲ್ಲಿ ಕಾಣಿಸುವುದಿಲ್ಲ ಎಂದು ತಿಳಿಸಿದ್ದಾರೆ.

    ಕೇರಳ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಮನೋಜ್ ಕುರುಪ್ ಮಾತನಾಡಿ, ಪ್ರವಾಹದಲ್ಲಿ ಹಾನಿಯಾಗಿರುವ ವಾಹನಗಳನ್ನು ಮತ್ತೆ ಶೋರೂಂಗಳಲ್ಲಿ ಮಾರಾಟಕ್ಕೆ ಇಡುವುದಿಲ್ಲ. ವಾಹನಗಳು ವಿಮೆಯ ವಿಧಿಗಳ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಯಾವ ಡೀಲರ್ ಸಹ ಅಂತಹ ವಾಹನಗಳನ್ನು ಮಾರಾಟ ಮಾಡುವುದಿಲ್ಲ. ಕೇರಳದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಲವು ಆಟೋಮೊಬೈಲ್ ಕಂಪನಿಗಳ ಸುಮಾರು 1,000 ಹೊಸ ಕಾರುಗಳು ಹಾಗೂ 7,000 ದಿಂದ 8,000 ಗ್ರಾಹಕರ ಕಾರುಗಳು ಹಾನಿಗೀಡಾಗಿವೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv