Tag: martyred soldier

  • ಹುತಾತ್ಮ ಯೋಧನ ಪತ್ನಿಯನ್ನು ಚುನಾವಣಾ ಕಣಕ್ಕಿಳಿಸಲು ಒತ್ತಾಯ!

    ಹುತಾತ್ಮ ಯೋಧನ ಪತ್ನಿಯನ್ನು ಚುನಾವಣಾ ಕಣಕ್ಕಿಳಿಸಲು ಒತ್ತಾಯ!

    ಮಂಡ್ಯ: ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರಯೋಧ ಗುರು ಪತ್ನಿ ಕಲಾವತಿ ಅವರನ್ನ ಮಂಡ್ಯ ಲೋಕಸಭೆ ಚುನಾವಣೆಯ ಅಭ್ಯರ್ಥಿಯನ್ನಾಗಿ ಮಾಡಲು ರಾಜ್ಯದ ಮೂರು ಪಕ್ಷಗಳ ಅಧ್ಯಕ್ಷರಿಗೆ ಪತ್ರ ಬರೆದು ಒತ್ತಾಯಿಸಲಾಗುತ್ತಿದೆ.

    ಹೌದು, ಬೆಂಗಳೂರು ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಅವರು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಮೂರು ಪಕ್ಷಗಳ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಕಾಲೋನಿಯ ಹುತಾತ್ಮ ಯೋಧ ಗುರು ನಿವಾಸದಲ್ಲಿ ಪತ್ರ ಬಿಡುಗಡೆ ಮಾಡಿದ ವೆಂಕಟೇಶ್ ಅವರು ಕಲಾವತಿಯವರನ್ನು ಚುನಾವಣಾ ಅಭ್ಯರ್ಥಿಯನ್ನಾಗಿ ಮಂಡ್ಯದಿಂದ ಸ್ಪರ್ಧಿಸಲು ಅವಕಾಶ ನೀಡಿ ಎಂದು ರಾಜಕೀಯ ಪಕ್ಷಗಳ ನಾಯಕರಿಗೆ ಮನವಿ ಮಾಡಿಕೊಂಡಿದ್ದಾರೆ.

    ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್, ಹಾಗೂ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್‍ಗೆ ವೆಂಕಟೇಶ್ ಅವರು ಪತ್ರ ಬರೆದಿದ್ದಾರೆ. ಈಗಾಗಲೇ ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಕಣಕ್ಕಿಳಿಯಲು ನಟಿ ಸುಮಲತಾ, ನಟ ನಿಖಿಲ್ ಕುಮಾರಸ್ವಾಮಿ, ಲಕ್ಷ್ಮಿ ಅಶ್ವಿನ್ ಗೌಡ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ. ಆದ್ರೆ ಯೋಧನ ಪತ್ನಿ ಕಲಾವತಿ ಅವರನ್ನ ಸಂಸತ್‍ಗೆ ಅವಿರೋಧವಾಗಿ ಆಯ್ಕೆ ಮಾಡಿ ಕಳುಹಿಸಿಕೊಡುವ ಬಗ್ಗೆ ಎಲ್ಲಾ ಪಕ್ಷಗಳು ಮುಂದಾಗುವಂತೆ ಈ ಪತ್ರದಲ್ಲಿ ಉಲ್ಲೇಖಿಸಿಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತಿಗೆ ಗೌರವ ಸಲ್ಲಿಸಲು ಸೈನ್ಯ ಸೇರಲು ಪಣತೊಟ್ಟ ವೀರಯೋಧನ ಪತ್ನಿ

    ಪತಿಗೆ ಗೌರವ ಸಲ್ಲಿಸಲು ಸೈನ್ಯ ಸೇರಲು ಪಣತೊಟ್ಟ ವೀರಯೋಧನ ಪತ್ನಿ

    ಮುಂಬೈ: 2017ರಲ್ಲಿ ಇಂಡೋ- ಚೀನಾ ಗಡಿಯಲ್ಲಿ ನಡೆದ ಗುಂಡಿನ ದಾಳಿಗೆ ವೀರಮರಣ ಹೊಂದಿದ್ದ ಮೇಜರ್ ಪ್ರಸಾದ್ ಮಹದಿಕ್ ಪತ್ನಿ ಗೌರಿ ಮಹದಿಕ್ ಅವರು ಪತಿಗೆ ಗೌರವ ಸಲ್ಲಿಸಲು ಸದ್ಯದಲ್ಲೇ ಭಾರತೀಯ ಸೇನೆ ಸೇರಲಿದ್ದಾರೆ.

    ಮುಂಬೈ ವಿರಾರ್ ನಿವಾಸಿಯಾದ ಗೌರಿ ಮಹದಿಕ್(32) ಸದ್ಯದಲ್ಲಿಯೇ ಸೈನ್ಯ ಸೇರಲಿದ್ದಾರೆ. ಹೌದು, ಪತಿಯ ಸಾವಿನಿಂದ ಕಂಗೆಡದೇ ದೇಶಕ್ಕಾಗಿ ಪ್ರಾಣಬಿಟ್ಟ ಪತಿಗೆ ಗೌರವ ಸಲ್ಲಿಸಲು ಭಾರತೀಯ ಸೇನೆಗೆ ಸೇರಲು ಗೌರಿ ಪಣತೊಟ್ಟಿದ್ದರು. ಪತಿ ಕರ್ತವ್ಯವನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಅದನ್ನು ಪೂರ್ಣಗೊಳಿಸಿ ಅವರಿಗೆ ನಾನು ನಿಜವಾದ ಗೌರವ ಸಲ್ಲಿಸಬೇಕು ಅಂತ ದಿಟ್ಟತನದಿಂದ ಬಂದ ಕಷ್ಟಗಳನ್ನು ಎದುರಿಸಿಕೊಂಡು, ಸೇವೆ ಆಯ್ಕೆ ಮಂಡಳಿ(ಎಸ್‍ಎಸ್‍ಬಿ) ಪರೀಕ್ಷೆ ಬರೆದು ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿ(ಓಟಿಎ)ಗೆ ಆಯ್ಕೆಯಾಗಿದ್ದಾರೆ. ತರಬೇತಿ ನಂತರ ಮುಂದಿನ ವರ್ಷ ಗೌರಿ ಅವರು ಹುತಾತ್ಮ ಯೋಧರ ಪತ್ನಿಯರಿಗಾಗಿ ಮೀಸಲಾಗಿರುವ ತಾಂತ್ರಿಕೇತರ ಲಿಫ್ಟಿನೆಂಟ್ ಆಗಿ ಭಾರತೀಯ ಸೈನ್ಯಕ್ಕೆ ಸೇರಲಿದ್ದಾರೆ.

    2018ರ ನವೆಂಬರ್- ಡಿಸೆಂಬರ್‍ನಲ್ಲಿ ನಡೆದ ಎಸ್‍ಎಸ್‍ಬಿ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳಿಂದ ಉತ್ತೀರ್ಣರಾಗಿರುವ ಗೌರಿ ಅವರು ಓಟಿಎದಲ್ಲಿ ತರಬೇತಿ ಪಡೆಯಲು ಅರ್ಹರಾಗಿದ್ದಾರೆ. ಏಪ್ರಿಲ್ ತಿಂಗಳಿಂದ ಆರಂಭವಾಗುವ 49 ವಾರಗಳ ತರಬೇತಿ ಮುಗಿಸಿದ ಬಳಿಕ 2020ರ ಮಾರ್ಚ್ ವೇಳೆ ಅವರು ಸೈನ್ಯಕ್ಕೆ ಸೇರ್ಪಡೆಯಾಗಲಿದ್ದಾರೆ.

    ಸೈನ್ಯ ಸೇರಲು ಬಯಸುವ ಹುತಾತ್ಮ ಯೋಧರ ಪತ್ನಿಯರಿಗೆ ಎಸ್‍ಎಸ್‍ಬಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ವ್ಯಕ್ತಿತ್ವ, ಬುದ್ಧಿಮತ್ತೆ ಪರೀಕ್ಷೆ ಮತ್ತು ಸಂದರ್ಶನಗಳನ್ನು ಒಳಗೊಂಡ ಒಟ್ಟು ಮೂರು ಹಂತದಲ್ಲಿ ಈ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈಗಾಗಲೇ ಬೆಂಗಳೂರು, ಭೋಪಾಲ್, ಅಲಹಾಬಾದ್ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಿದ್ದು ಅದರಲ್ಲಿ ಅರ್ಹತೆ ಪಡೆದ 16 ಅಭ್ಯರ್ಥಿಗಳನ್ನು ಮುಂದಿನ ತರಬೇತಿಗೆ ಆಯ್ಕೆ ಮಾಡಲಾಗಿದೆ.

    ಕಂಬೈನ್ಡ್ ಡಿಫೆನ್ಸ್ ಸರ್ವಿಸ್ (ಸಿಡಿಎಸ್) ಲಿಖಿತ ಪರೀಕ್ಷೆಯಿಂದ ನಮಗೆ ವಿನಾಯಿತಿ ನೀಡಲಾಗುತ್ತದೆ ಮತ್ತು ಭೋಪಾಲ್‍ನಲ್ಲಿ ನಡೆಯುವ ಮೌಖಿಕ ಪರೀಕ್ಷೆಗೆ ನೇರ ಅರ್ಹತೆಯನ್ನು ನೀಡಲಾಗುತ್ತದೆ. ಅಲ್ಲದೆ ಓಟಿಎದಲ್ಲಿ ನನ್ನ ಪತಿಗೆ ಸಿಕ್ಕ ಚೆಸ್ಟ್ ನಂಬರ್(28) ನನಗೂ ಸಿಕ್ಕಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ ಎಂದು ಗೌರಿ ಮಹದಿಕ್ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬರೀ ಮಾತಿನಿಂದ ಏನು ಆಗಲ್ಲ, ಮೋದಿ ಮಾಡಿ ತೋರಿಸಬೇಕು: ದಿನೇಶ್ ಗುಂಡೂರಾವ್

    ಬರೀ ಮಾತಿನಿಂದ ಏನು ಆಗಲ್ಲ, ಮೋದಿ ಮಾಡಿ ತೋರಿಸಬೇಕು: ದಿನೇಶ್ ಗುಂಡೂರಾವ್

    ಮಂಡ್ಯ: ನಾವು ಮೋದಿಯವರ ಜೊತೆಗಿದ್ದೇವೆ. ಮಾತಿನಿಂದ ಏನು ಆಗಲ್ಲ, ಮೋದಿ ಅವರು ಮಾತನ್ನು ಕಾರ್ಯ ರೂಪಕ್ಕೆ ತಂದು ತೋರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಸ್ವಗ್ರಾಮ ಗುಡಿಗೆರೆಗೆ ಕಾಂಗ್ರೆಸ್ ನಾಯಕರು ಭೇಟಿ ಪತ್ನಿ ಕಲಾವತಿ, ತಾಯಿ ಚಿಕ್ಕತಾಯಮ್ಮ, ತಂದೆ ಹೊನ್ನಯ್ಯ ಸೇರಿದಂತೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

    ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ 5 ಲಕ್ಷ, ಮನ್ಮುಲ್‍ನಿಂದ 3ಲಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿಂದ 2 ಲಕ್ಷ ಸೇರಿ ಒಟ್ಟಾರೆ 10 ಲಕ್ಷ ರೂ. ಹಣವನ್ನು ಯೋಧ ಗುರು ಕುಟುಂಬಕ್ಕೆ ನೀಡಲಾಯಿತು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗುಂಡೂರಾವ್, ಮೋದಿಯವರು ಉಗ್ರರ ದಾಳಿಗೆ ಸರಿಯಾದ ಪ್ರತ್ಯುತ್ತರ ನೀಡಲಿದ್ದಾರೆ. ನಾವು ಮೋದಿಯವರ ಜೊತೆಗಿದ್ದೇವೆ. ಕಳೆದ 5 ವರ್ಷದಲ್ಲಿ ಈ ರೀತಿಯ ದಾಳಿಗಳು ಆಗುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಯೋಧರ ಹತ್ಯೆಯಾಗುತ್ತಿದೆ. ಮಾತಿನಿಂದ ಏನು ಆಗಲ್ಲ, ಮೋದಿ ಮಾಡಿ ತೋರಿಸಬೇಕು. ಪಾಕಿಸ್ತಾನವನ್ನ ಉಗ್ರ ರಾಷ್ಟ್ರ ಎಂದು ಘೋಷಿಸಿ ಸರಿಯಾದ ಪಾಠ ಕಲಿಸಬೇಕು ಎಂದು ಹೇಳಿದರು.

    ಮೈತ್ರಿ ಪಕ್ಷದಲ್ಲಿ ಸೀಟು ಹಂಚಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಲೋಕಸಭೆ ಚುನಾವಣೆ ಸಂಬಂಧ ನಮ್ಮ ಸೀಟು ಅವರು ಕೇಳೋದು, ಅವರ ಸೀಟು ನಾವು ಕೇಳೋದು ಸಹಜ. ಸೀಟು ಹಂಚಿಕೆ ಬಗ್ಗೆ ಕುಳಿತು ಮಾತನಾಡಿ ತೀರ್ಮಾನಿಸಬೇಕಿದೆ. ಪರ್ಯಾಯ ವ್ಯವಸ್ಥೆ ಏನೂ ಇಲ್ಲ. ನಾನೂ ಕುಮಾರಸ್ವಾಮಿ ಅವರ ಹತ್ತಿರ ಮಾತನಾಡಿದ್ದೇನೆ. ಅವರು ಚೆನ್ನಾಗಿಯೇ ಮಾತಾಡಿದ್ದಾರೆ. ಮೈತ್ರಿಯಾಗಿಯೇ ಚುನಾವಣೆ ಎದುರಿಸುತ್ತೇವೆ ಎಂದರು. ನಂತರ ಮೈತ್ರಿ ಕುರಿತು ಬಿಜೆಪಿ ಹೇಳಿಕೆ ವಿಚಾರ ಪ್ರಸ್ತಾಪಿಸಿ ಅವರು ಹಾಗೆ ಹೇಳಲೇ ಬೇಕು. ನಾವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv