Tag: Martyrdom

  • ಜಿಲ್ಲಾದ್ಯಂತ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

    ಜಿಲ್ಲಾದ್ಯಂತ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

    ಬೆಂಗಳೂರು: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ತುಚ್ಛಕೃತ್ಯಕ್ಕೆ ಬಲಿಯಾದ ಭಾರತ ಮಾತೆಯ ಮಕ್ಕಳಿಗೆ ಜಿಲ್ಲೆಯಾದ್ಯಂತ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಜೊತೆಗೆ ದಾಳಿ ಮಾಡಿದ ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.

    ಕೊಪ್ಪಳ ಅಶೋಕ ವೃತ್ತದಲ್ಲಿ ಮೇಣದ ಬತ್ತಿ ಹಿಡಿದು ಎ.ಬಿ.ವಿ.ಪಿ.ವಿದ್ಯಾರ್ಥಿ ಸಂಘಟನೆಯಿಂದ ಯುವಕರು ಶ್ರದ್ಧಾಂಜಲಿ ಸಮರ್ಪಿಸಿದ್ದು, ಸೋಲ್ಜರ್ ಅಮರ್ ರಹೇ ಎಂದು ಘೋಷಣೆ ಕೂಗಿದ್ದಾರೆ. ಕೋಟೆನಾಡು ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ವಂದೇ ಮಾತರಂ ಜಾಗೃತಿ ವೇದಿಕೆಯಿಂದ ಹುತಾತ್ಮ ಯೋಧರಿಗೆ ಕ್ಯಾಂಡಲ್ ಹಚ್ಚಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    ಇತ್ತ ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಕೋರ್ಟ್ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ಮೊಂಬತ್ತಿ ಹಿಡಿದು ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ. ಮೈಸೂರಿನ ನ್ಯಾಯಾಲಯದ ಮುಂಭಾಗದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ್ದು, ಮೊಂಬತ್ತಿ ಹಿಡಿದು ರಣಹೇಡಿ ಉಗ್ರರಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಲೆನಾಡು ಭಾಗದ ಚಿಕ್ಕಮಗಳೂರಿನಲ್ಲಿ ಹುತಾತ್ಮ ಯೋಧರಿಗೆ ವೀರ ಜವಾನ್ ಅಮರ್ ರಹೇ ಎಂದು ಘೋಷಣೆ ಕೂಗಿ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ವಿಜಯಪುರದಲ್ಲಿ ದೇಶ ರಕ್ಷಕರ ಪಡೆ ಮತ್ತು ಸಾರ್ವಜನಿಕರಿಂದ ಪುಲ್ವಾಮಾ ವೀರ ಯೋಧರಿಗೆ ಸನ್ಮಾನಿಸಲಾಗಿದೆ.

    ಹುಬ್ಬಳ್ಳಿಯಲ್ಲಿ ಜ್ಞಾನಗಂಗಾ ಉಚಿತ ಮನೆ ಪಾಠ ಕೇಂದ್ರದ ಸದಸ್ಯರು ಹಾಗೂ ಸಾರ್ವಜನಿಕರಿಂದ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ನಗರದ ದುರ್ಗದ ಬೈಲ್ ವೃತ್ತದಲ್ಲಿ ಸಾರ್ವಜನಿಕರಿಂದ ಮೊಂಬತ್ತಿ ಹಚ್ಚಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಭಯೋತ್ಪಾದನೆ ತೊಲಗಲಿ ಎಂಬ ಘೋಷಣೆ ಮೂಲಕ ಉಗ್ರರ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ.

    ದಾವಣಗೆರೆ ಗಡಿಯಾರ ಕಂಬದ ಬಳಿ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದು, ಯೋಧರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಂಗೆ ಅವರು ಬೇಕು ಅಮ್ಮಾ..- ಮುಗಿಲು ಮುಟ್ಟಿದೆ ಹುತಾತ್ಮ ಗುರು ಪತ್ನಿಯ ಆಕ್ರಂದನ

    ನಂಗೆ ಅವರು ಬೇಕು ಅಮ್ಮಾ..- ಮುಗಿಲು ಮುಟ್ಟಿದೆ ಹುತಾತ್ಮ ಗುರು ಪತ್ನಿಯ ಆಕ್ರಂದನ

    ಮಂಡ್ಯ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪುರದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಸಮೀಪದ ಗುಡಿಗೆರೆ ಕಾಲೋನಿಯ ಗುರು.ಎಚ್. (33) ವೀರಮರಣವನ್ನಪ್ಪಿದ್ದಾರೆ. ಅವರ ಅಗಲಿಕೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪತ್ನಿ ಕಲಾವತಿ ಅವರ ಅಳಲು ಮುಗಿಲುಮುಟ್ಟಿದ್ದು, ಮನಕಲಕುವಂತಿದೆ.

    ನಾನು ಪ್ರತಿದಿನ ಅವರ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದೆ. ಅವರು ಬೆಳಗ್ಗೆ 11 ಗಂಟೆಗೆ ಫೋನ್ ಮಾಡಿದ್ದರು. ನಾನು ಕೆಲಸ ಮಾಡುತ್ತಿದ್ದರಿಂದ ಅವರ ಜೊತೆ ಮಾತನಾಡಲು ಸಾಧ್ಯವಾಗಿಲ್ಲ. ಅವರು ಊರಿಂದ ಹೋಗಿ ನಾಲ್ಕು ದಿನಗಳು ಆಗಿರಲಿಲ್ಲ. ತುಂಬಾ ನೋವಾಗುತ್ತಿದೆ ಎಂದು ಕಲಾವತಿ ಅವರು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ಮಂಡ್ಯದ ಯೋಧ ಹುತಾತ್ಮ – ಫೆ.10ಕ್ಕೆ ರಜೆ ಮುಗಿಸಿ ಊರಿಂದ ಹೊರಟಿದ್ದರು

    ನನ್ನಿಂದ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುರುವಾರ ಒಂದು ದಿನ ಅವರ ಜೊತೆ ಮಾತನಾಡಿದ್ರೆ ಆಗುತ್ತಿತ್ತು. ನಾನು 6 ಗಂಟೆಯಿಂದ ಫೋನ್ ಮಾಡಿ ಮಾಡಿ ಸಾಕಾಯ್ತು. ನನಗೆ ಅವರು ಬೇಕು ಅಮ್ಮಾ ಎಂದು ತಾಯಿ ಮಡಿಲಲ್ಲಿ ಮಲಗಿಕೊಂಡು ಅಳುತ್ತಿದ್ದಾರೆ.

    ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಅದಿಲ್ ದರ್ ಎಂಬ ಉಗ್ರ ಸ್ಕಾರ್ಪಿಯೋ ಕಾರಿನಲ್ಲಿ ಸ್ಫೋಟಕ ತುಂಬಿ ಆತ್ಮಾಹುತಿ ದಾಳಿ ಮಾಡಿದ್ದನು. ಈ ದಾಳಿಯಲ್ಲಿ ಇದೂವರೆಗೆ 44 ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದರು.

    ಒಂದು ವರ್ಷ ಹಿಂದೆ ಗೃಹ ಪ್ರವೇಶ ಮಾಡಿಕೊಂಡಿದ್ದ ಗುರು ಅವರಿಗೆ 10 ತಿಂಗಳ ಹಿಂದೆ ಮದುವೆಯಾಗಿತ್ತು. ಸ್ವಂತ ಮಾವನ ಮಗಳಾದ, ಹಲಗೂರು ಬಳಿಯ ಸಾಸಲಾಪುರ ಗ್ರಾಮದವರಾದ ಕಲಾವತಿಯನ್ನು ವಿವಾಹವಾಗಿದ್ದರು. 15 ದಿನದ ಹಿಂದೆ ರಜೆಗೆಂದು ಬಂದಿದ್ದ ಗುರು ಅವರು ಫೆಬ್ರವರಿ 10ರಂದು ಗುಡಿಗೆರೆ ಕಾಲೋನಿಯಿಂದ ರಜೆ ಮುಗಿಸಿಕೊಂಡು ಹೊರಟಿದ್ದರು. ಹೀಗೆ ಹೊರಟಿದ್ದ ಗುರು ಗುರುವಾರವಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ಕರ್ತವ್ಯಕ್ಕೆ ವಾಪಸ್ ಬರುತ್ತಿದ್ದಂತೆಯೇ ಮಾರಣಹೋಮದಲ್ಲಿ ಸಾವನ್ನಪ್ಪಿದ್ದು ವಿಧಿ ವಿಪರ್ಯಾಸ. ಗುರು ಸಾವಿನ ಸುದ್ದಿ ಕೇಳಿ ಗುಡಿಗೆರೆ ಕಾಲೋನಿಯ ನಿವಾಸದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

    https://www.youtube.com/watch?v=5JqTWRx0JWA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv